ನೀವು ಉಡುಪಿಗೆ ಹೋದಾಗ ಅದರ ಪಕ್ಕದಲ್ಲೇ ಮಣಿಪಾಲದ ವಿಜಯನಾಥ್ ಶೆಣೈ ಆರು ಎಕರೆಯಲ್ಲಿ ನಿರ್ಮಿಸಿದ ಹಸ್ತಶಿಲ್ಪ ಟ್ರಸ್ಟಿನ ‘ಹೆರಿಟೇಜ್ ವಿಲೇಜ್’ಗೆ ಭೇಟಿ ನೀಡಿ. ಅಪರೂಪದ ವಸ್ತುಗಳೊಂದಿಗೆ ರಂಗಕರ್ಮಿ ಬಿ.ವಿ.ಕಾರಂತರು ಸಂಗ್ರಹಿಸಿದ ವಾದ್ಯ ಸಂಗೀತ ಪರಿಕರಗಳ ಮ್ಯೂಸಿಯಂ ಗಮನ ಸೆಳೆಯುತ್ತಿದೆ.
‘ನಾನು ಸಂಗೀತ ಸಂಯೋಜಿಸುವುದಿಲ್ಲ, ಧ್ವನಿಯನ್ನು ವಿನ್ಯಾಸಗೊಳಿಸುವೆ’ ಎನ್ನುತ್ತಿದ್ದ ಬಿ.ವಿ.ಕಾರಂತರು ನಾಟಕಗಳಿಗೆ ಯಾವುದೇ ವಸ್ತುವಿನಿಂದಲೂ ಸಂಗೀತ ನೀಡಬಲ್ಲವರಾಗಿದ್ದರು. ಹೀಗಾಗಿ ಜಾಗಟೆಯಿಂದ ಹಿಡಿದು ಸ್ಟೀಲ್ ಲೋಟದವರೆಗೆ, ಬಿದಿರಿನಿಂದ ಹಿಡಿದು ಹಾರ್ಮೋನಿಯಂವರೆಗೆ ಅವರು ಸಂಗೀತ ಹೊರಡಿಸಬಲ್ಲವರಾಗಿದ್ದರು.
ಇದಕ್ಕೆ ಅವರಿಗೆ ಯಕ್ಷಗಾನ ಹಿನ್ನೆಲೆ, ಗುಬ್ಬಿ ಕಂಪನಿಯಲ್ಲಿನ ಅನುಭವ, ಎನ್‌ಎಸ್‌ಡಿ ಪದವಿ, ದೇಶ– ವಿದೇಶದ ತಿರುಗಾಟ... ಹೀಗೆ ಎಲ್ಲ ಅನುಭವಗಳ ಜತೆಗೆ, ಸದಾ ಪ್ರಯೋಗಶೀಲತೆಗೆ ಒಡ್ಡಿಕೊಳ್ಳುತ್ತಿದ್ದ ಪರಿಣಾಮ ವಿಶಿಷ್ಟ ಸಂಗೀತ ನೀಡಬಲ್ಲವರಾಗಿದ್ದರು. ಇದರಿಂದ ರಂಗ ಸಂಗೀತಕ್ಕೊಂದು ಹೊಸ ಆಯಾಮ ನೀಡಿದರು.
ಜಡಭರತ ಅವರ ‘ಸತ್ತವರ ನೆರಳು’ ನಾಟಕಕ್ಕೆ ದಾಸರ ಪದಗಳನ್ನು ಅಳವಡಿಸಿದ ಪರಿಣಾಮ ಆ ನಾಟಕ ಇಂದಿಗೂ ಪ್ರಯೋಗಗಳನ್ನು ಕಾಣುತ್ತಲೇ ಇದೆ. ‘ಮಾತು ಹಾಡಾಗಬೇಕು, ಹಾಡು ಮಾತಾಗಬೇಕು’ ಎನ್ನುತ್ತ ನಾಟಕಗಳ ಮಾತಿಗೆ ಸಂಗೀತ ಸ್ಪರ್ಶ ನೀಡಿದರು. ಹಾಗೆಯೇ ಹಾಡುಗಳಿಗೆ ಮಾತಿನ ಮಾಂತ್ರಿಕತೆ ನೀಡಿದರು. ಜತೆಗೆ, ಸಿದ್ಧಮಾದರಿಯ ಸಂಗೀತದ ಬದಲು ಮುರಿದು ಕಟ್ಟುವ ಕ್ರಮದ ಸಂಗೀತದಿಂದ ಅವರು ನಿರ್ದೇಶಿಸಿದ ನಾಟಕಗಳು ಯಶಸ್ವಿಯಾದವು.
ಇದಕ್ಕಾಗಿ ಅವರು ಸಂಗೀತಕ್ಕೆ ಬಳಸಿದ ಪರಿಕರಗಳನ್ನು ಬೆಂಗಳೂರಿನ ಗಿರಿನಗರದಲ್ಲಿ ಸಂಗ್ರಹಿಸಿದ್ದರು. ಅವರು ಬದುಕಿದ್ದಾಗಲೇ ‘ಬಿ.ವಿ.ಕಾರಂತ ರಂಗ ಪ್ರತಿಷ್ಠಾನ’ ಆರಂಭಿಸಿದ್ದರು. ಅವರ ನಿಧನದ ನಂತರ ಅವರ ಪತ್ನಿ ಪ್ರೇಮಾ ಅವರು ವಾದ್ಯ ಪರಿಕರಗಳನ್ನು ಜತನವಾಗಿಟ್ಟಿದ್ದರು. ಅವರು ತೀರಿಕೊಂಡ ನಂತರ ಮೈಸೂರಿನ ರಂಗಾಯಣದಲ್ಲಿ ಪ್ರತ್ಯೇಕ ಕಟ್ಟಡದಲ್ಲಿ ವಾದ್ಯ ಸಂಗೀತದ ಮ್ಯೂಸಿಯಂ ರೂಪಿಸಬೇಕು ಎನ್ನುವುದಾಗಿತ್ತು. ಆದರೆ, ಏನೇನೊ ಕಾರಣಗಳಿಗೆ ಕೈಗೂಡದೆ ಕಳೆದ ವರ್ಷದಿಂದ ಮಣಿಪಾಲದ ಹೆರಿಟೇಜ್ ವಿಲೇಜ್‌ನಲ್ಲಿ ಬಿ.ವಿ.ಕಾರಂತ ವಾದ್ಯ ಸಂಗೀತ ಪರಿಕರಗಳ ಮ್ಯೂಸಿಯಂ ಆರಂಭಗೊಂಡಿತು.
ಮಧ್ಯಪ್ರದೇಶದ ನಕ್ಕಾರ, ಛತ್ತೀಸಗಡದ ಡಮರು, ಏಕತಾರ, ಬಾನ್ಸುರಿ, ಮಣಿಪುರದ ಮಂಜಿರ, ಪುಂಗಿ, ಶಹನಾಯ್, ಕಡತಾಲ್, ತಾಳ, ದೊಡ್ಡ ತಾಳ, ಬ್ಯಾಂಬೊ ವಿಂಡ್ ಥೀಮ್ಸ್, ಸಣ್ಣ ಡಮರು, ಹಾರ್ನ್, ಫರ್ಮಂಡಲ್ (ಸಂತೂರಿನ ಹಾಗೆ), ಡಬ್ಲಿ, ಡಬ್ಲಿ ಬ್ಯಾಟ್, ತಂಬೂರ, ದನಕರುಗಳ ಗಂಟೆ, ಛತ್ತೀಸಗಡದ ನಾದ, ಮಾಂದಾರ, ಜಾಗಟೆ, ಫ್ಲ್ಯಾಟ್ ಜಾಗಟೆ, ಶ್ರುತಿಪೆಟ್ಟಿಗೆ, ಹಳೆಯ ಸಾರಂಗಿ, ಹಾರ್ಮೋನಿಯಂ, ವುಡನ್ ಎಗ್ ಇನ್‌ಸ್ಟ್ರುಮೆಂಟ್, ಸಣ್ಣ ಮಂಜಿರಾ, ಸ್ಟೀಲ್ ಲೋಟ, ತೆಂಗಿನಕಾಯಿ ಚಿಪ್ಪು, ವಿವಿಧ ಬಗೆಯ ಗಂಟೆಗಳು, ಸೈಕಲ್ ಬೆಲ್, ಕಚೇರಿ ಬೆಲ್, ವುಡನ್ ಚಿಮಟಾ, ಮಣಿಪುರದ ದೊಡ್ಡ ಗಂಟೆ, ಆಸ್ಟ್ರೇಲಿಯಾ, ಜರ್ಮನಿ ಮೊದಲಾದ ದೇಶಗಳಲ್ಲಿ ನಾಟಕ ಆಡಿಸಲು ಹೋದಾಗ ತಂದ ವಾದ್ಯಗಳೂ ಇವೆ. ಆಸ್ಟ್ರೇಲಿಯಾದಿಂದ ಕಾರಂತರು ತಂದಿದ್ದ ಸಿಂತೇಸೈಸರರ್ ಆಂಡ್ ರಿದಂ ಬಾಕ್ಸ್ ಅನ್ನು ಮೈಸೂರು ರಂಗಾಯಣಕ್ಕೆ ಕಾಣಿಕೆಯಾಗಿ ಕೊಟ್ಟಿದ್ದಾರೆ.
‘ಸಂಗೀತ ಪರಿಕರ ಮತ್ತು ಪುಸ್ತಕ ಸಂಗ್ರಹಿಸುವುದು ಅವರ ಹವ್ಯಾಸವಾಗಿತ್ತು. ನಾಟಕ ಆಡಿಸಿದ ನಂತರ ವಿಚಾರ ಸಂಕಿರಣ, ಶಿಬಿರಗಳ ನಿರ್ದೇಶನಕ್ಕೆ ಹೋದಾಗ ಕೊಟ್ಟ ಸಂಭಾವನೆಯಲ್ಲಿ ಅಲ್ಲಿನ ಸ್ಥಳೀಯ ವಾದ್ಯಗಳನ್ನು, ರಂಗಭೂಮಿ ಹಾಗೂ ಸಿನಿಮಾಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸುತ್ತಿದ್ದರು’ ಎಂದು ಸ್ಮರಿಸುತ್ತಾರೆ ಬಿ.ವಿ.ಕಾರಂತ ರಂಗಪ್ರತಿಷ್ಠಾನದ ಕಾರ್ಯದರ್ಶಿ ರಘುವೀರ ಹೊಳ್ಳ.
‘ಸಿದ್ಧಮಾದರಿಯ ಸಂಗೀತ ಉಪಕರಣಗಳನ್ನು ಬಿಟ್ಟು ಯಾವುದೇ ಉಪಕರಣದಲ್ಲೂ ಸಂಗೀತ ಹೊಮ್ಮಿಸಬಹುದೆಂದು ಅವರು ಸಾಬೀತುಪಡಿಸಿದರು. ರಂಗಾಸಕ್ತರ ಕುತೂಹಲ ತಣಿಯಲು, ರಂಗಾಭ್ಯಾಸಿಗಳಿಗೆ ಈ ಮ್ಯೂಸಿಯಂ ನೆರವಾಗುವುದು’ ಎನ್ನುತ್ತಾರೆ ಹೊಳ್ಳ. ‘ಬಿ.ವಿ.ಕಾರಂತರು ಬದುಕಿದ್ದಾಗಲೇ ವಿಜಯನಾಥ್ ಶೆಣೈ ಅವರು ವಾದ್ಯ ಪರಿಕರಗಳನ್ನು ನೀಡಿರೆಂದು ಕೇಳಿಕೊಂಡಿದ್ದರು. ಕಾರಂತರೂ ಒಪ್ಪಿಕೊಂಡಿದ್ದರು. ಮೈಸೂರಿನ ರಂಗಾಯಣದಲ್ಲಿರಬೇಕಿದ್ದ ಈ ಮ್ಯೂಸಿಯಂ ಕೊನೆಗೆ ವಿಜಯನಾಥ್ ಶೆಣೈ ಅವರ ಹೆರಿಟೇಜ್ ವಿಲೇಜ್ ಸೇರಿದೆ. ಅಲ್ಲಿ ಹವಾನಿಯಂತ್ರಿತ ಕೋಣೆಗಳಲ್ಲಿ ಸುರಕ್ಷಿತವಾಗಿವೆ’ ಎನ್ನುತ್ತಾರೆ ಬಿ.ವಿ.ಕಾರಂತ ರಂಗ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ, ಮೈಸೂರಿನ ಜಯರಾಮ ಪಾಟೀಲ.
‘ಕಾರಂತರು ಸಂಗ್ರಹಿಸಿದ 250ಕ್ಕೂ ಅಧಿಕ ವಾದ್ಯ ಸಂಗೀತ ಪರಿಕರಗಳು ಮ್ಯೂಸಿಯಂನಲ್ಲಿವೆ. ತೆಂಗಿನ ಕರಟ, ಕೋಲು, ಬಿದಿರು... ಹೀಗೆ ಎಲ್ಲದರಿಂದಲೂ ಸಂಗೀತ ನುಡಿಸಬಹುದು ಎಂದುಕೊಂಡಿದ್ದರು ಕಾರಂತರು. ಅವರ ಇನ್ನೊಂದು ನೆಚ್ಚಿನ ಹವ್ಯಾಸ ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸುವುದು. ಅವರು ಸಂಗ್ರಹಿಸಿದ ಸುಮಾರು 15 ಸಾವಿರ ಪುಸ್ತಕಗಳು ಹೆಗ್ಗೋಡಿನ ನೀನಾಸಂನಲ್ಲಿವೆ’ ಎನ್ನುವ ಮಾಹಿತಿಯನ್ನು ಜಯರಾಮ ಪಾಟೀಲ ನೀಡುತ್ತಾರೆ.
ಕಾರಂತರು ನಿರ್ದೇಶಿಸಿದ ನಾಟಕಗಳು ಈಗಲೂ ಪ್ರದರ್ಶನಗೊಳ್ಳುತ್ತವೆ. ಈ ಮೂಲಕ ಅವರು ನೀಡಿದ ಸಂಗೀತ ಕೇಳಬಹುದು. ಜತೆಗೆ, ಅವರ ವಾದ್ಯ ಪರಿಕರಗಳ ಮ್ಯೂಸಿಯಂ ಕಾಣಬಹುದು. ಇದರೊಂದಿಗೆ ಕಾರಂತರು ಇನ್ನೂ ಜೀವಂತವಾಗಿದ್ದಾರೆ ಎನಿಸದೆ ಇರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.