ಸೂಕ್ಷ್ಮ ಸಂವೇದನೆ ಇರುವವರು ನಿಜವಾಗಿಯೂ ಆಕ್ಷೇಪಾರ್ಹವೆನಿಸುವ ಜಾಹೀರಾತು, ಕಂಟೆಂಟ್, ಸಿನಿಮಾ ಪಾತ್ರ, ಸಂಭಾಷಣೆಗಳ ವಿರುದ್ಧವೂ ಧ್ವನಿ ಎತ್ತಬೇಕು. ನಾವೆಲ್ಲರೂ ಸಹ್ಯ ಮತ್ತು ಅಸಹ್ಯದ ಗೆರೆ ಕೇವಲ ನೋಟದಲ್ಲಿ ಎಳೆಯುತ್ತಿದ್ದೇವೆ. ಯೋಚನೆಯಲ್ಲಿ ವೈರಾಗ್ಯವನ್ನು ತಾಳುತ್ತೇವೆ.
ಅರೆರೆ.. ಮಿಂಟ್ರಾ ತನ್ನ ಲೋಗೊ ಬದಲಿಸುವುದಾದರೆ ಜಿ.ಮೇಲ್ ಸಹ ಬದಲಿಸಬೇಕು. ರೆನೊ ಹಾಗೂ ಆಡಿದಾಸ್‌ಗಳ ಲೋಗೊ ಸಹ ಬದಲಿಸಬೇಕು..
ಇವುಗಳ ಲೋಗೊದಲ್ಲಿಯೂ ಅಸಹ್ಯಕರ ಅಂಶಗಳು ಇಣುಕುತ್ತವೆ. ಹೀಗೊಂದು ವಾದವನ್ನು ನೆಟ್ಟಿಗರು ಕಳೆದೆರಡು ದಿನಗಳಿಂದ ಚರ್ಚಿಸುತ್ತಲೇ ಇದ್ದಾರೆ.
ಮಿಂಟ್ರಾ ಇ–ಕಾಮರ್ಸ್ ವೇದಿಕೆ ಫ್ಯಾಷನ್ ವಸ್ತ್ರ ಹಾಗೂ ಆ್ಯಕ್ಸಸರಿಗಳ ಮಾರಾಟದ ಜಾಲವಾಗಿದೆ. 2007ರಿಂದಲೂ ಮಿಂಟ್ರಾ ಫ್ಯಾಷನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. 2014ರಲ್ಲಿ ಫ್ಲಿಪ್‌ಕಾರ್ಟ್‌ನೊಂದಿಗೆ ಒಗ್ಗೂಡಿತು. ಆದರೆ ಈ ವರೆಗೂ ಅದರ ಲೋಗೊ ಬಗ್ಗೆ ಎಲ್ಲಿಯೂ ಅಪಸ್ವರ ಎದ್ದಿರಲಿಲ್ಲ.
ಡಿಸೆಂಬರ್ 2020ರಲ್ಲಿ ಮಿಂಟ್ರಾ ಲೋಗೊ ಬಗ್ಗೆ ಮುಂಬೈನ ಅವೆಸ್ತಾ ಫೌಂಡೇಶನ್‌ನ ಸಂಸ್ಥಾಪಕಿ ನಾಜ್ ಪಟೇಲ್ ದೂರು ದಾಖಲಿಸಿದರು.
ಮುಂಬೈನ ಸೈಬರ್ ಕ್ರೈಂ ಠಾಣೆಯಲ್ಲಿ, ಈ ಲೋಗೊ, ಮಹಿಳೆಯನ್ನು ಅವಹೇಳನಕಾರಿಯಾಗಿ ತೋರಿಸುತ್ತದೆ. ಅವಮಾನಿಸುವಂತಿದೆ ಎಂದು ದೂರು ದಾಖಲಿಸಿದ್ದರು. ಸೈಬರ್ ಕ್ರೈಮ್ ವಿಭಾಗದವರು ಮಿಂಟ್ರಾದ ಆಡಳಿತ ಮಂಡಳಿಗೆ ಮೇಲ್ ಕಳುಹಿಸಿತು. ಆಡಳಿತ ಮಂಡಳಿಯು ಫೆ.2ರಂದು ತನ್ನ ಲೋಗೊವನ್ನು ಸ್ವಲ್ಪ ಪ್ರಮಾಣದಲ್ಲಿ ಬದಲಿಸಿಕೊಂಡಿತು.
ಮೇಲ್ನೋಟಕ್ಕೆ ಇಂಗ್ಲಿಷ್‌ನ ಎಂ ಅಕ್ಷರವನ್ನು ಹೋಲುವ ಈ ಲೋಗೊದಲ್ಲಿ ಎಂ ಅಕ್ಷರದ ಕಿತ್ತಲೆ ಬಣ್ಣದ ಎರಡು ಗೆರೆಗಳು ಸಂಧಿಸುವಲ್ಲಿ ಕಡುಕಿತ್ತಲೆ ಬಣ್ಣವನ್ನು ತೋರುತ್ತಿತ್ತು. ಇದು ಯೋನಿಯನ್ನು ಹೋಲುತ್ತದೆ ಎಂಬುದು ನಾಜ್ ಅವರ ವಾದವಾಗಿತ್ತು.
ಅದಕ್ಕೆ ಸ್ಪಂದಿಸಿದ ಮಿಂಟ್ರಾ ತನ್ನ ಲೋಗೊವನ್ನು ಹಿಂಪಡೆಯಿತು. ಕಡು ಕಿತ್ತಲೆ ಬಣ್ಣವನ್ನು ತೆಗೆದುಹಾಕಿತು. ಅಲ್ಲಿಗೆ ಈ ವಾದ ಮುಗೀತು. ಆ ಬಣ್ಣವನ್ನು ತೆಗೆದ ತಕ್ಷಣ, ಹೆಣ್ಣುಮಕ್ಕಳಿಗೆ ಸಿಗಬೇಕಾದ ಮಾನ ಸಿಕ್ಕಂತಾಯಿತೆ?ಮಹಿಳೆಯರ ಲೈಂಗಿಕ ಅಂಗಾಂಗಗಳನ್ನು ಹೋಲುವಂತಿದೆ ಎಂಬಂತೆ ನಾಜ್‌ಗೆ ಭಾಸವಾಯಿತು. ಧ್ವನಿ ಎತ್ತಿದರು, ಮಿಂಟ್ರಾದವರಿಗೂ ವಾದ ಬೇಡವಾಗಿತ್ತು. ಗಾಢ ಬಣ್ಣ ತೆಗೆಯಿತು. ಅಲ್ಲಿಗೆ ಈ ಪ್ರಕರಣ ಮುಗಿಯಿತು.
ಹೆಣ್ಣುಮಕ್ಕಳನ್ನೇ ಮಾರಾಟದ ಉತ್ಪನ್ನದಂತೆ ತೋರುವ ಜಾಹೀರಾತುಗಳು ಅದೆಷ್ಟಿಲ್ಲ? ಇವುಗಳ ಬಗ್ಗೆ ಯಾರೂ ಧ್ವನಿ ಎತ್ತುವುದಿಲ್ಲ. ಅದೊಂದು ಸಿದ್ಧ ಸೂತ್ರದಂತೆ ತಯಾರಾಗುತ್ತಲೇ ಇರುತ್ತವೆ.ಗಂಡುಮಕ್ಕಳ ಒಳ ಉಡುಪುಗಳಿಗೆ, ಸ್ಪ್ರೇಗಳಿಗೆ, ಸೌಂದರ್ಯವರ್ಧಕಗಳಿಗೆ, ಈಚೆಗಂತೂ ಕಾಂಡೊಮ್ ಹಾಗೂ ಐಸ್‌ಕ್ರೀಂ ಜಾಹಿರಾತುಗಳಿಗೆ ವ್ಯತ್ಯಾಸವೇ ಇಲ್ಲದಂತಾಗಿದೆ.ನಾಜ್ ಪಟೇಲ್ ಅಥವಾ ಅವರಂಥ ಚಳವಳಿಕಾರರಿಗೆ ಇವ್ಯಾವವೂ ಕಾಣುವುದಿಲ್ಲ. ಕಾಡುವುದಿಲ್ಲ.
ತನಿಷ್ಕ್‌ನ ಅಂತರ್‌ಧರ್ಮೀಯ ವಿವಾಹದ ಜಾಹೀರಾತು ವಿವಾದಕ್ಕೆ ಒಳಗಾಗುತ್ತದೆ. ಅದು ಕೋಮು ಭಾವನೆಗಳನ್ನು ಕೆರಳಿಸಿತು ಎಂಬ ಕಾರಣಕ್ಕೆ ವಾಪಸ್ ತೆಗೆದುಕೊಳ್ಳಲಾಗುತ್ತದೆ. ಅಂತರ್ ಧರ್ಮೀಯ ಮದುವೆಯೊಂದರಲ್ಲಿ, ಔದಾರ್ಯ ಮತ್ತು ಸ್ವೀಕಾರ್ಹ ನಡವಳಿಕೆಯನ್ನು ಸೂಚಿಸುವ ಜಾಹೀರಾತದು.
ಸೂಕ್ಷ್ಮ ಸಂವೇದನೆ ಎಲ್ಲಿರಬೇಕೊ, ಅಲ್ಲಿ ನಾವು ದಪ್ಪ ಚರ್ಮದವರಾಗುತ್ತಿದ್ದೇವೆ. ಅದೆಲ್ಲಿ ಧಾರಾಳಿಯಾಗಬೇಕೊ, ಔದಾರ್ಯದಿಂದ ನಡೆದುಕೊಳ್ಳಬೇಕೊ ಅಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿದ್ದೇವೆ. ಮಾನವ ಅಂತಃಕರುಣೆಯನ್ನು ಮೀಟುವ ಬದಲು, ಆಕ್ರೋಶವನ್ನು ಕೆರಳಿಸುವ ಕೆಲಸ ಆಗುತ್ತಿದೆ.
ಜಾತಿ ಮತ್ತು ಧರ್ಮಗಳು ನಮ್ಮ ನರನಾಡಿಗಳನ್ನು ಬಡಿದೆಬ್ಬಿಸುವ ವಿಷಯಗಳೆಂದು ಅವಕ್ಕೆ ಹೆಚ್ಚು ಮಹತ್ವ ನೀಡುತ್ತೇವೆಯೇ? ಹೆಣ್ಣುಮಕ್ಕಳು ಹೇಗಿದ್ದರೂ ಭೋಗದ, ಪ್ರದರ್ಶನದ, ಅನುಭವಿಸುವ, ಸ್ವಾಮ್ಯತ್ವದ ಎಂಬಂಥ ಪ್ರತೀಕಗಳಲ್ಲಿಯೇ ತೋರಿಸಬೇಕಾ? ಮತ್ತದು ಸ್ವೀಕಾರ್ಹವಾಗಿದೆಯಲ್ಲ, ಆ ಬಗ್ಗೆ ನಮಗೆ ಆತಂಕ ಇಲ್ವಲ್ಲ!
ನಾವೀಗ ಚಿಂತಿಸಬೇಕಿರುವುದು ಈ ಮನಃಸ್ಥಿತಿಯ ಬಗ್ಗೆ. ನಾಜ್ ಪಟೇಲ್ ಅವರಂತೆಯೇ ಯೋಚಿಸಿದರೆ ಕನ್ನಡದ ’ಠ’ ನಾಭಿಯನ್ನು ಸೂಚಿಸುತ್ತದೆ. ನಮ್ಮ ವರ್ಣಮಾಲೆಯಲ್ಲಿ ಅರ್ಧಕ್ಕರ್ಧ ವರ್ಗೀಯ ವ್ಯಂಜನಗಳು ನಿತಂಬವನ್ನು ಹೋಲುತ್ತವೆ. ನಮಗೆಲ್ಲ ಈ ಅಕ್ಷರಗಳನ್ನು ಕಲಿಸಬೇಕಾದರೆ ‘ಮು..ಳಿ’ ಸೀಳ್ರಿ ಅಂತನೇ ಹೇಳ್ತಿದ್ರು. ಹೇಳ್ತಾರೆ. ಸದ್ಯ ನಾಜ್ ಪಟೇಲ್‌ಗ ಕನ್ನಡ ಬರೂದಿಲ್ಲ. ಇಲ್ಲಾಂದ್ರ ’ಘ, ಥ, ದ, ಧ, ಡ, ಢ, ಪ, ಫ, ಬ, ಭ, ವ, ಷ’ ಎಲ್ಲ ಅಕ್ಷರಗಳೂ ಅಶ್ಲೀಲವಾಗಿಯೇ ಕಾಣಿಸುತ್ತಿದ್ದವು. ಮರುವಿನ್ಯಾಸಗೊಳಿಸಬೇಕಾದ ಪ್ರಸಂಗವೂ ಎದುರಾಗುತ್ತಿತ್ತು.
ಇಷ್ಟು ಸೂಕ್ಷ್ಮ ಸಂವೇದನೆ ಇರುವವರು ನಿಜವಾಗಿಯೂ ಆಕ್ಷೇಪಾರ್ಹವೆನಿಸುವ ಜಾಹೀರಾತು, ಕಂಟೆಂಟ್, ಸಿನಿಮಾ ಪಾತ್ರ, ಸಂಭಾಷಣೆಗಳ ವಿರುದ್ಧವೂ ಧ್ವನಿ ಎತ್ತಬೇಕು. ನಾವೆಲ್ಲರೂ ಸಹ್ಯ ಮತ್ತು ಅಸಹ್ಯದ ಗೆರೆ ಕೇವಲ ನೋಟದಲ್ಲಿ ಎಳೆಯುತ್ತಿದ್ದೇವೆ. ಯೋಚನೆಯಲ್ಲಿ ವೈರಾಗ್ಯವನ್ನು ತಾಳುತ್ತೇವೆ ಅಥವಾ ಅತ್ಯುತ್ಸಾಹ ತೋರುತ್ತೇವೆ. ಈ ಎರಡು ವೈಪರೀತ್ಯಗಳ ನಡುವೆ ಸೂಕ್ಷ್ಮ ಸಂವೇದನೆ ಎಂಬುದು, ವಿಳಾಸ ತಪ್ಪಿದಂತೆ ಇನ್ನಿತರ ವಿಷಯಗಳಲ್ಲಿ ಕಳೆದು ಹೋಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.