ADVERTISEMENT

ದಸರೆಗೆ ಮುನ್ನುಡಿ ‘ಯುವಸಂಭ್ರಮ’

ಬನ್ನಿ... ಸಂಭ್ರಮಿಸಿ.

ಎಚ್‌.ಎಸ್.ಪವನ
Published 17 ಸೆಪ್ಟೆಂಬರ್ 2019, 20:15 IST
Last Updated 17 ಸೆಪ್ಟೆಂಬರ್ 2019, 20:15 IST
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ವೇದಿಕೆ ಸಿದ್ಧತೆ
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ವೇದಿಕೆ ಸಿದ್ಧತೆ   

ಡೇಲಾ... ಓಹೋ... ಮಂಡೇಲಾ’ ಓಹೋ.., ‘ಲಕ್ಕ ಲಕ ಲಕಾ ಲಕಾ ಹೂಹಾ.. ಹೂಹಾ..’ ಎಂದು ಯುವಕರ ಬಾಯಲ್ಲಿ ಬರುವ ಉದ್ಗಾರಗಳು, ಸುತ್ತಮುತ್ತ ಕತ್ತಲು, ವೇದಿಕೆ ಮೇಲೆ ಬಣ್ಣ ಬಣ್ಣದ ವಿದ್ಯುತ್‌ ದೀಪಗಳ ರಂಗು. ಹಾಡಿಗೆ ವೇದಿಕೆ ಮೇಲೆ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದರೆ, ಇತ್ತ ಶಿಳ್ಳೆ, ಕೇಕೆ ಹಾಕಿ ಕುಣಿದು ಕುಪ್ಪಳಿಸುವ ಯುವ ಸಮೂಹ...

ಇಂತಹ ದೃಶ್ಯ ಕಂಡು ಬರುವುದು ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ, ದಸರಾ ನಿಮಿತ್ತ ಯುವಜನರಿಗಾಗಿಯೇ ಆಯೋಜಿಸುವ ‘ಯುವ ಸಂಭ್ರಮ’ದಲ್ಲಿ.

ಯುವಜನರಲ್ಲಿ ಹುರುಪು ತುಂಬುವ, ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಇದು ಕಲ್ಪಿಸುತ್ತದೆ ಮಾತ್ರವಲ್ಲದೇ, ವಿಶ್ವವಿಖ್ಯಾತ ಮೈಸೂರು ದಸರಾದ ಸಂಭ್ರಮಕ್ಕೆ ಪ್ರತಿವರ್ಷವೂ ಮುನ್ನುಡಿ ಬರೆಯುವುದು ಈ ‘ಯುವ ಸಂಭ್ರಮ’ವೇ
ಆಗಿದೆ.

ADVERTISEMENT

ಸುಮಾರು 18 ವರ್ಷಗಳಿಂದಲೂ ಇಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಆರಂಭದಲ್ಲಿ ಇದೇ ‘ಯುವ ದಸರಾ’ ಆಗಿತ್ತು. ಬಳಿಕ, ಅದನ್ನು ಮಹಾರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ದೊಡ್ಡ ಪೆಂಡಾಲ್‌ ಹಾಕಿ, ಆಸನದ ವ್ಯವಸ್ಥೆ ಮಾಡಿದ್ದರೂ ಅದಕ್ಕೆ ಯುವ ಜನರಿಂದ ಅಷ್ಟೊಂದು ಪ್ರತಿಕ್ರಿಯೆ ದೊರೆಯಲಿಲ್ಲ. ಬಂದೋಬಸ್ತ್‌ ಹೆಚ್ಚಿದ್ದ ಕಾರಣ ಯುವಜನರು ಬಯಲು ರಂಗಮಂದಿರದಂತೆ ಮನಸೋಇಚ್ಛೆ ಕುಣಿದು, ಕುಪ್ಪಳಿಸಿ ಸಂಭ್ರಮಿಸಲಾಗಲಿಲ್ಲ. ಜೊತೆಗೆ, ಅಲ್ಲಿ ಸೆಲೆಬ್ರಿಟಿಗಳಿಗೆ ವೇದಿಕೆ ಕಲ್ಪಿಸುವ ಜಾಗವಾಗಿ ಮಾರ್ಪಟ್ಟಿದ್ದರಿಂದ ಕಾಲೇಜು ವಿದ್ಯಾರ್ಥಿ ಗಳಿಂದ ವಿರೋಧ ವ್ಯಕ್ತವಾಯಿತು.

ಈ ನಿಟ್ಟಿನಲ್ಲಿ ಮತ್ತೆ ನಾಲ್ಕೈದು ವರ್ಷಗಳ ಬಳಿಕ ಮತ್ತೊಂದು ಕಾರ್ಯಕ್ರಮವನ್ನು ರೂಪಿಸುವ ಮೂಲಕ ಕೇವಲ ಕಾಲೇಜು ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಲಾಯಿತು. ಅಂದಿನಿಂದ ಮತ್ತೆ ಆರಂಭವಾಗಿದ್ದೇ ‘ಯುವ ಸಂಭ್ರಮ’. ಅಂದಿನಿಂದ ಇಂದಿನವರೆಗೂ ಈ ಕಾರ್ಯಕ್ರಮ ಯುವಜನರು ಮಾತ್ರವಲ್ಲದೆ ಎಲ್ಲ ವಯೋಮಾನದವರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಮಳೆ, ಚಳಿಯನ್ನೂ ಲೆಕ್ಕಿಸದೆ ಕುಣಿದು ಕುಪ್ಪಳಿಸುವಂತೆ ಮಾಡುತ್ತಲೇ ಇದೆ.

ಬಯಲು ರಂಗಮಂದಿರದಲ್ಲಿ ಮಾರ್ದನಿಸುವ ತಮಟೆ ವಾದನ, ಪಟದ ಕುಣಿತ, ಕಂಸಾಳೆ, ವೀರಭದ್ರ ಕುಣಿತಗಳು ರೋಮಾಂಚನ ಮೂಡಿಸುತ್ತವೆ. ಈ ಸಂದರ್ಭದಲ್ಲಿ ಯುವಜನರನ್ನು ಹಿಡಿದು ಕೂರಿಸುವುದೇ ಕಷ್ಟ.

ನೃತ್ಯ ರೂಪಕಗಳಲ್ಲಿ ‘ಮಹಾತ್ಮ ಗಾಂಧಿ’, ‘ನೇತಾಜಿ ಸುಭಾಷ್‌ ಚಂದ್ರಬೋಸ್’, ‘ಭಗತ್‌ ಸಿಂಗ್’ ವೇದಿಕೆ ಮೇಲೆ ಬಂದು ಹೋಗಿದ್ದಾರೆ. ದೇಶವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರೀತಿಯನ್ನು ಮನಮುಟ್ಟುವಂತೆ ನೃತ್ಯದ ಮೂಲಕ ವಿವರಿಸಿದ್ದಾರೆ. ದೇಶಪ್ರೇಮದ ಹೊಳೆ ಹರಿಸಿದ್ದಾರೆ. ಗಡಿಯಲ್ಲಿ ದೇಶ ಕಾಯುವ ಯೋಧರ ಪಾಡು, ಬವಣೆ, ದೇಶಪ್ರೇಮ, ಸಾಹಸ, ಹುತಾತ್ಮ ಯೋಧರ ತ್ಯಾಗ ಬಲಿದಾನ ಅವರ ಕುಟುಂಬದ ಪ್ರೀತಿ, ಭಾವುಕ ಲೋಕದಲ್ಲಿ ತೇಲಿಸಿದರೆ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡ ಮತ್ತು ಸಂಸ್ಕೃತಿ ನೃತ್ಯದ ಸೊಬಗು ದೇಶಭಕ್ತಿ ಸಾರುವ ಗೀತೆಗಳಿಗೆ ಪ್ರದರ್ಶಿಸಿದ ನೃತ್ಯದ ಝಲಕ್‌ ದೇಶಭಕ್ತಿಯನ್ನು ಬಡಿದೆಬ್ಬಿಸುವಂತೆ ಮಾಡಿವೆ.

ಮೈಸೂರು ಅರಸರ ಶೌರ್ಯ ಪರಾಕ್ರಮಗಳು, ಸಾಮಾಜಿಕ ಕಾರ್ಯಗಳು, ಅಂದಿನಿಂದ ನಡೆದುಬಂದ ದಸರಾ ವೈಭವವನ್ನು ಸಾರಿದ್ದಾರೆ. ಕನ್ನಡ ಭಾಷೆ, ನೆಲ, ಜಲ, ರಾಜ್ಯ, ದೇಶ ವಿದೇಶದ ಸಂಸ್ಕೃತಿ, ಸಂಪ್ರದಾಯ ಸಂಬಂಧಪಟ್ಟ ನೃತ್ಯ ರೂಪಕಗಳು ವಿಶ್ವ ಪರ್ಯಟನೆ ಮಾಡಿಸುತ್ತವೆ. ಮೈ ಝುಮ್ ಎನ್ನಿಸುವಂತೆ ಸಾಹಸಮಯ ಪಟ್ಟುಗಳು ಚಪ್ಪಾಳೆಗಳ ಮೇಲೆ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತವೆ.

ಪ್ರತಿ ವರ್ಷವೂ ಇಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬಂದು ಪ್ರದರ್ಶನ ನೀಡುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು, ದಕ್ಷಿಣಕನ್ನಡ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ಕಾಲೇಜುಗಳಿಗೂ ವೇದಿಕೆ ಕಲ್ಪಿಸಲಾಗುತ್ತಿದೆ. ಆದರೆ, ಈ ವರ್ಷದ ಕಾರ್ಯಕ್ರಮದ ಪಟ್ಟಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯೇಶ್ವರ ಕಾಲೇಜಿಗೆ ಮಾತ್ರ ಅವಕಾಶ ಸಿಕ್ಕಿದೆ.

‘ಉತ್ತರ ಕರ್ನಾಟಕದಿಂದ ಹೆಚ್ಚಿನ ಕಾಲೇಜುಗಳಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ ಎಂದು ಸಂಸದರು ಹೇಳಿದ್ದರು. ಆದರೆ, ಒಂದು ಕಾಲೇಜಿಗೂ ಅವಕಾಶ ನೀಡದಿರುವುದು ಬೇಸರದ ಸಂಗತಿಯಾಗಿದೆ. ತೀವ್ರ ಪ್ರವಾಹದಿಂದ ಕಂಗೆಟ್ಟಿರುವ ಅಲ್ಲಿನ ಪರಿಸ್ಥಿತಿಯನ್ನು ಜನತೆಗೆ ಮುಟ್ಟಿಸಲು ಆ ಭಾಗದ ಕಾಲೇಜುಗಳಿಗೆ ಅವಕಾಶ ನೀಡಬೇಕಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ, ಮಾನಸ ಗಂಗೋತ್ರಿ ವಿದ್ಯಾರ್ಥಿ, ಹುಬ್ಬಳ್ಳಿಯ ಶಶಿಕಾಂತ್‌ ಪವಾರ.

ಯುವ ಸಂಭ್ರಮ ನಿಜಕ್ಕೂ ವಿದ್ಯಾರ್ಥಿಗಳಿಗೆ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ. ಯುವ ಜನರು ಉತ್ಸಾಹದಿಂದ ಪಾಲ್ಗೊಳ್ಳುವ ಇಲ್ಲಿ (ಬಯಲುರಂಗ ಮಂದಿರದಲ್ಲಿ) ಸಂಚಾರಿ ಶೌಚಾಲಯ ಸೇರಿದಂತೆ ಹೆಚ್ಚು ಮೂಲಸೌಲಭ್ಯ ಒದಗಿಸಬೇಕು ಎನ್ನುತ್ತಾರೆ ಮಹಾರಾಜ ಕಾಲೇಜಿನ ಹರ್ಷಕುಮಾರ್‌.

ಒಟ್ಟಾರೆ, ಯುವಕರಿಗಾಗಿ, ಯುವಕರಿಂದ, ಯುವಕರಿಗೋಸ್ಕರವೇ ನಡೆಯುತ್ತಿರುವ ಯುವ ಸಂಭ್ರಮವನ್ನು ಬನ್ನಿ ಸಂಭ್ರಮಿಸಿ.

ಇಂದಿನಿಂದ ಯುವಸಂಭ್ರಮ ಆರಂಭ
ದಸರಾ ಅಂಗವಾಗಿ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.17 ರಿಂದ 26ರವರೆಗೆ ‘ಯುವ ಸಂಭ್ರಮ’ ನಡೆಯಲಿದ್ದು, ಈ ಬಾರಿ ಸುಮಾರು 260 ಕಾಲೇಜುಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿವೆ.

ಈ ಕಾರ್ಯಕ್ರಮವನ್ನು ನಟ ಗಣೇಶ ಉದ್ಘಾಟಿಸಲಿದ್ದಾರೆ. 9 ದಿನ ನಿತ್ಯ ಸಂಜೆ 5.30ರಿಂದ 10.30ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಯುವ ದಸರೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ.

ವಿಷಯಾಧಾರಿತ ಶೀರ್ಷಿಕೆಯೊಡನೆ ಅರ್ಜಿಯನ್ನು ಯುವ ಸಂಭ್ರಮ ಹಾಗೂ ಯುವ ದಸರಾ ಸಮಿತಿಯು ಪರಿಶೀಲಿಸಿ ಉತ್ತಮ ವಿಷಯವಿರುವ ತಂಡವನ್ನು ಆಯ್ಕೆ ಮಾಡುತ್ತದೆ. ಅಲ್ಲದೇ, ಗರಿಷ್ಠ 50 ಜನರ ತಂಡ ಪಾಲ್ಗೊಳ್ಳಬಹುದಾಗಿದ್ದು, ಭಾಗವಹಿಸುವ ಎಲ್ಲ ತಂಡಗಳಿಗೂ ಗೌರವಧನವನ್ನು ನೀಡಲಾಗುತ್ತದೆ.

ಸಿದ್ಧಗೊಳ್ಳುತ್ತಿದೆ ಬಯಲು ರಂಗಮಂದಿರ: ಯುವ ಸಂಭ್ರಮ 2019ಕ್ಕೆ ವೇದಿಕೆ ಭರದಿಂದ ಸಿದ್ಧಗೊಳ್ಳುತ್ತಿದ್ದು, ಬಯಲು ರಂಗಮಂದಿರಕ್ಕೆ ಸುಣ್ಣಬಣ್ಣ ಬಳಿಯಲಾಗಿದೆ. ಪ್ರಮುಖ ಧ್ವಾರ, ಗಂಗೋತ್ರಿ ಆವರಣ ಸೇರಿದಂತೆ ಎಲ್ಲಡೆ ಝಗಮಗಿಸುವಂತೆ ದೀಪಗಳನ್ನು ಹಾಕಲಾಗುತ್ತಿದೆ.

ಕಿತ್ತುಹೋಗಿರುವ ಕಲ್ಲುಗಳನ್ನು ಸರಿಪಡಿಸಲಾಗುತ್ತಿದ್ದು, ವಿಐಪಿಗಳಿಗೆ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ವೀಕ್ಷಿಸಲು ವೇದಿಕೆಯ ಎರಡೂ ಬದಿ ದೊಡ್ಡ ಪರದೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.