ಕಲಬುರಗಿಯ ಐತಿಹಾಸಿ ಮತ್ತು ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಖಾಜಾ ಬಂದಾನವಾಜ್ ದರ್ಗಾದ 23ನೇ ಸಜ್ಜಾದ ನಶೀನ್ (ಆಧ್ಯಾತ್ಮಿಕ ಮುಖ್ಯಸ್ಥ) ಸೈಯದ್ ಶಾಹಾ ಖುಸ್ರೊ ಹುಸೇನಿ ಅವರು ಸೂಫಿ ಆಧ್ಯಾತ್ಮಿಕ ನಾಯಕ ಮತ್ತು ಸಂಶೋಧನಾ ವಿದ್ವಾಂಸರಾಗಿದ್ದರು. ಭಾರತ ಮತ್ತು ಇತರೆ ದೇಶಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಸೂಫಿ ಪರಂಪರೆ ಕುರಿತಾದ ಹಲವಾರು ಅರ್ಥಪೂರ್ಣ ಉಪನ್ಯಾಸಗಳನ್ನು ನೀಡಿದ್ದರು.
ಇವರಿಗೆ ತಂದೆ ಸೈಯದ್ ಶಾಹಾ ಮೊಹಮ್ಮದ್ ಅಲ್ ಹುಸೇನಿ ಅವರೇ ಪ್ರೇರಣೆ. ಅವರು 1958 ರಲ್ಲಿ ಖಾಜಾ ಎಜುಕೇಷನ್ ಸೊಸೈಟಿಯನ್ನು ಸ್ಥಾಪಿಸಿದರು. ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ, ಪದವಿ ಕಾಲೇಜು, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿದರು.
ಚಿಕ್ಕ ವಯಸ್ಸಿನಿಂದಲೇ ಖುಸ್ರೊ ಹುಸೇನಿ ಅವರು ತಂದೆಯೊಂದಿಗೆ ಕೈಜೋಡಿಸಿದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದರು. ತಂದೆಯ ನಿಧನದ ನಂತರ, 2007 ರಿಂದ ಸಂಘಟನೆ, ಆಡಳಿತ ಮತ್ತು ಕಾರ್ಯಾತ್ಮಕ ಮಟ್ಟದಲ್ಲಿ ಹಲವಾರು ಬದಲಾವಣೆಗಳನ್ನು ತಂದರು. ಇರುವ ಸಂಸ್ಥೆಗಳನ್ನು ವಿಸ್ತರಿಸಿದರು. 2000 ರಲ್ಲಿ ಖಾಜಾ ಬಂದಾನವಾಜ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ‘ಕೆಬಿಎನ್ ಟೈಮ್ಸ್’ ಎನ್ನುವ ಉರ್ದು ದಿನಪತ್ರಿಕೆ ಪ್ರಾರಂಭಿಸಿದರು. ಕ್ರೀಡೆ ಮೇಲಿನ ಅಪಾರ ಆಸಕ್ತಿಯಿಂದ ಕೆಬಿಎನ್ ಹೌಸ್ ಆಫ್ ಸ್ಪೋರ್ಟ್ಸ್ ಅನ್ನು ಸ್ಥಾಪಿಸಲು ಪ್ರೇರಣೆ ನೀಡಿತು. ಇದು ಇದೀಗ ಕಲಬುರಗಿಯಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ನಡೆಸುತ್ತದೆ. ಮಾಜಿ ಕ್ರಿಕೆಟರ್ ಅಜರುದ್ದೀನ್ ಹೌಸ್ ಆಫ್ ಸ್ಪೋರ್ಟ್ಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
2018ರಲ್ಲಿ ಸ್ಥಾಪನೆಯಾದ ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿದ್ದರು. ಇಸ್ಲಾಮಿಕ್ ವಾಸ್ತುಶಿಲ್ಪವನ್ನು ವಿಶ್ವವಿದ್ಯಾಲಯದ ಕಟ್ಟಡ ವಿನ್ಯಾಸದಲ್ಲಿ ಮಾದರಿಯಾಗಿ ಬಳಸಿದ್ದರು ಆದರ್ಶವಾಗಿ ಒದಗಿಸಿದರು.
ಸೈಯದ್ ಶಾಹಾ ಖುಸ್ರೊ ಹುಸೇನಿ ಅವರು ಹೈದರಾಬಾದ್‌ನ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅರೆಬಿಕ್, ಸಮಾಜಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಅದೇ ವಿಶ್ವವಿದ್ಯಾಲಯದಲ್ಲಿ ಅರೆಬಿಕ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. 1971 ರಿಂದ 1972 ರವರೆಗೆ ಉಪನ್ಯಾಸಕರಾಗಿ ಕೆಲಸ ಮಾಡಿದರು. ಆ ವರ್ಷವೇ ಅವರು ಕೆನಡಾಗೆ ತೆರಳಿದರು. ಮೊಂಟ್ರಿಯಾಲ್‌ನ ಮೆಕ್‌ಗಿಲ್ ವಿಶ್ವವಿದ್ಯಾಲಯದಿಂದ ಇಸ್ಲಾಮಿಕ್ ಸ್ಟಡೀಸ್‌ನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಗಳಿಸಿದರು.
ಸೂಫಿಸಂನ ಮೇಲಿನ ಆಸಕ್ತಿ ಅವರನ್ನು ಆ ವಿಷಯದಲ್ಲಿ ಆಳವಾದ ಅಧ್ಯಯನಕ್ಕೆ ನೂಕಿತು. ಅದರಲ್ಲಿ ಗೆಸುದರಾಜ್ ಅವರ ಬರಹಗಳನ್ನು ಅನುವಾದಿಸಿದರು ಮತ್ತು ವಿಶ್ಲೇಷಿಸಿದರು. ಸ್ನಾತಕೋತ್ತರ ಪದವಿ ಪೂರ್ಣಗೊಂಡ ನಂತರ, ಅವರಿಗೆ ಮೊಂಟ್ರಿಯಾಲಿನಲ್ಲಿ ವಾಸಿಸಲು ಮನಸ್ಸಾಯಿತು. ಸೂಫಿಸಂ ಅಧ್ಯಯನದಲ್ಲಿ ನಿಷ್ಠೆ ಅವರು ಮೆಕ್‌ಗಿಲ್ ವಿಶ್ವವಿದ್ಯಾಲಯದ ಪಾಶ್ಚಾತ್ಯ ಸೂಫಿ ಪಂಡಿತರೊಂದಿಗೆ ಸಂವಹನ ಮಾಡಲು ಸಹಾಯ ಮಾಡಿತು.
‘ಹಜಾಇರ್ ಅಲ್ ಕುಡ್ಸ್’ ಎಂಬ ಶೀರ್ಷಿಕೆಯಡಿ, ಅವರು ತಮ್ಮ ಡಾಕ್ಟರೇಟ್ ಪ್ರಬಂಧಕ್ಕಾಗಿ ವಿಭಿನ್ನ ಸೂಫಿ ಪರಿಕಲ್ಪನೆಗಳನ್ನೂ ಅಧ್ಯಯನ ಮಾಡಿದರು. ಇದು ಖಾಜಾ ಬಂದಾನವಾಜ್ ಗೆಸುದರಾಜ್ 550ನೇ ವಾರ್ಷಿಕ ಉರ್ಸ್ ಸಂದರ್ಭದಲ್ಲಿ ಪ್ರಕಟಿಸಲಾಯಿತು.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 2017 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ದೊರೆತಿದೆ. ಇವರು ನವೆಂಬರ್ 6 ರಂದು ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.