ಪ್ರೊಫೆಸರ್ ಎಂ.ಎಸ್. ವೇಣುಗೋಪಾಲ್, ನಮಗೆಲ್ಲ ವೇಣೂಜಿ ಎಂದೇ ಪರಿಚಿತ. ಮೈಸೂರಿನ ಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ಪಾಠ ಮಾಡಿ ನಿವೃತ್ತರಾದವರು. ಫೆಬ್ರುವರಿ 16 ರಂದು ತಮ್ಮ 79 ವಯಸ್ಸಿನಲ್ಲಿ ನಿಧನರಾದರು.
ವಿದ್ಯಾರ್ಥಿ ದಿಸೆಯಿಂದಲೂ ಅವರಿಗೆ ಕಣ್ಣಿನ ತೊಂದರೆ ಬಾಧಿಸುತ್ತಿತ್ತು. ಅದನ್ನವರು ಮೀರಿ ಬದುಕಿದರು. ಸಾಲು ಸಾಲು ಸ್ನಾತಕೋತ್ತರ ಪದವಿಗಳನ್ನು ತಮ್ಮದಾಗಿಸಿಕೊಂಡರು. ಮನೆಗೆ ತರಿಸುತ್ತಿದ್ದ ದಿನಪತ್ರಿಕೆಗೆಳನ್ನು ಓದಿ ಹೇಳಲು ವಿದ್ಯಾರ್ಥಿಯೊಬ್ಬನನ್ನು ಗೌರವಧನ ಕೊಟ್ಟು ಗೊತ್ತು ಮಾಡಿಕೊಂಡಿದ್ದರು. ಆ ಕಾಲದಲ್ಲಿ ಚಿಕ್ಕ ರೇಡಿಯೊ ಒಂದು ಸದಾ ಅವರೊಂದಿಗೆ ಇರುತ್ತಿತ್ತು. ಅವರು ಜಗತ್ತಿನ ವಿದ್ಯಮಾನಗಳನ್ನು ತಡಕುತ್ತಿದ್ದರು. ಕಾನೂನು ಕಾಲೇಜಿನಲ್ಲಿ ಅವರೇ ಮಾಡಿದ ಪಾಠಗಳ ನೂರಾರು ಧ್ವನಿಮುದ್ರಿತ ಕ್ಯಾಸೆಟ್ಟುಗಳು. ಅದಕ್ಕೆಲ್ಲ ಅನುಕ್ರಮಣಿಕೆ. ನಾಳೆ ಯಾವ ತರಗತಿಗೆ ಯಾವ ಪಾಠ? ಆ ಧ್ವನಿ ಮುದ್ರಿಕೆಯನ್ನು ಕೇಳಿ, ಮನನ ಮಾಡಿಕೊಂಡು ಸಿದ್ಧಗೊಳ್ಳುವ ಅವರ ಪರಿಶ್ರಮ ಅನನ್ಯ.
ಮೂಲದಲ್ಲಿ ಅವರೊಬ್ಬ ಆಶುಕವಿ, ನಾಟಕಕಾರ, ಬರೆದ ಕವಿತೆಗಳನ್ನೂ, ಆಡಿಸಿದ ಬೀದಿ ನಾಟಕಗಳನ್ನೂ ಅವರು ಲೆಕ್ಕವಿಡಲಿಲ್ಲ. ಪರಿಚಯದವರ ಮಾತಿಗೆ ಕಟ್ಟುಬಿದ್ದು ನಾವೊಮ್ಮೆ ಅವರ ಕವನಗಳನ್ನು ಸಂಕಲಿಸಲು ಹೊರಟೆವು. ಅವರು ಸುತಾರಾಂ ಒಪ್ಪಲಿಲ್ಲ. ಕವಿತೆಯೊಳಗೆ ಸತ್ವವಿದ್ದರೆ ಅವು ಬಾಯಿಂದ ಬಾಯಿಗೆ ಹರಡಿ ಉಳಿಯುತ್ತವೆ. ಮುದ್ರಿಸಿ ಉಳಿಸುವ ಜರೂರತ್ತು ಕವಿತೆಗಳಿಗೆ ಬರಬಾರದು. ಮುದ್ರಣವಿಲ್ಲದೇ ನಮ್ಮ ಜನಪದರ ಕಾವ್ಯ ಉಳಿದಿಲ್ಲವೇ? - ಅವರದು ನೇರ ಪ್ರಶ್ನೆ .
‘ಮೂಡುತಿಹುದು ಹಿಂದುಯುಗವು ಬೆಳಗುತಿಹುದು ಸಕಲ ಜಗವು ...’ - ವೇಣೂಜಿ ಬರೆದ ಹಲವು ಜನಪ್ರಿಯ ಹಾಡುಗಳಲ್ಲಿ ಇದೂ ಒಂದು. ಈ ಹಾಡನ್ನವರು ಒಂಟಿಕೊಪ್ಪಲಿನ ಪುಟ್ಟಮನೆಯ ಕಪ್ಪುನೆಲೆದ ಮೇಲೆ ಚಾಕ್‌ಪೀಸ್‌ನಿಂದ ದೊಡ್ಡ ಅಕ್ಷರಗಳಲ್ಲಿ ಬರೆದು ಬಿಟ್ಟಿದ್ದು ಕಣ್ಣಿಗೆ ಕಟ್ಟಿದಂತಿದೆ.
ಎಷ್ಟೋ ವರ್ಷಗಳ ತರುವಾಯ ಬೆಂಗಳೂರಿನ ಮಾಗಡಿ ರಸ್ತೆಯಲ್ಲೊಂದು ಗೋಡೆ ಬರಹ. ಅದು ದಲಿತ ಸಂಘರ್ಷ ಸಮಿತಿಯದು.
‘ಮೂಡುತಿಹುದು ಭೀಮಯುಗವು ಬೆಳಗುತಿಹುದು ಬುದ್ಧ ಜಗವು ...’ ಅರೇ, ಇದು ನಮ್ಮ ವೇಣೂಜಿ ಅವರ ಪದ್ಯ, ಆದರೆ ಸ್ವಲ್ಪ ಟ್ವಿಸ್ಟು. ಮತ್ತೆ ಯಾವಾಗಲೊ ವೇಣೂಜಿ ಸಿಕ್ಕಾಗ ಮಾಗಡಿ ರಸ್ತೆಯಲ್ಲಿ ಕಂಡ ಗೋಡೆ ಬರಹವನ್ನು ವಿವರಿಸಿದೆ. ವೇಣೂಜಿಗೆ ಸಖತ್ ಖುಷಿ ಆಯಿತು. ನನಗವರು ಸಿಹಿ ತಿನ್ನಿಸಿ ಸಂಭ್ರಮಪಟ್ಟರು. ‘ಕವಿತೆ ಉಳಿಯುವುದೇ ಹೀಗೆ. ನಮ್ಮನ್ನು ಒಪ್ಪದವರ ಮಡಿಲಲ್ಲೂ ಕವಿತೆ ಮರುಹುಟ್ಟು ಪಡೆಯುತ್ತದೆ’ ಎಂದಿದ್ದರು.
ನಿಜ ಅವರ ಯೋಚನೆಗಳು ಸದಾ ತುಸು ಭಿನ್ನ.
ಆಗೊಮ್ಮೆ ರಾಷ್ಟ್ರೀಯ ಟಿವಿ ಚಾನಲ್‌ನಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ‘ಏರಿಯಲ್ ಗೋಲ್ಡ್ ಕಾಯಿನ್’ ಎಂಬ ವಿಶಿಷ್ಟ ವ್ಯಕ್ತಿಗಳನ್ನು ಪರಿಚಯಿಸುವ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿದ್ದರು. ಆ ಸರಣಿಯಲ್ಲಿ ಖೇರ್, ವೇಣೂಜಿ ಅವರನ್ನು ಸಂದರ್ಶಿಸಿ ಸಾಧನೆಗಳನ್ನು ಪರಿಚಯಿಸಿದರು. ಕೊನೆಗೆ ‘ಗೋಲ್ಡ್ ಕಾಯಿನ್’ ಒಂದನ್ನು ವೇಣೂಜಿಗೆ ಕೊಟ್ಟು ಅಭಿಪ್ರಾಯಕ್ಕಾಗಿ ಮೈಕು ಮುಂದೆ ಮಾಡಿದರು. ವೇಣೂಜಿ ‘ಈವರೆಗೂ ನನ್ನ ಮೈಮೇಲೆ ಒಂದು ಗ್ರಾಮ್ ಚಿನ್ನವನ್ನೂ ನಾನು ತೊಟ್ಟವನಲ್ಲ, ಇದು ನನಗಿರುವ ನಿರಾಸಕ್ತಿ, ಆದರೆ ಈ ಬಿಲ್ಲೆಯನ್ನು ಕೊಟ್ಟವರು ನೀವಾದ್ದರಿಂದ, ನಿಮ್ಮ ನೆನಪಿಗಾಗಿ ಉಳಿಸಿಕೊಳ್ಳುವೆ’ ಎಂದಿದ್ದರು. ಎಷ್ಟೊ ದಿನ ಆ ಬಿಲ್ಲೆ ಮನೆಯ ಕಪಾಟಿನ ಮೊಳೆಯಲ್ಲಿ ತೂಗುತ್ತಿತ್ತು. ಮತ್ತ್ಯಾವಾಗಲೋ ಆ ಬಿಲ್ಲೆ ಕಾಣುತ್ತಿಲ್ಲವೆಂದು ಮನೆಯವರು ಹೇಳಿದಾಗ ‘ನಮಗದರ ಉಪಯೋಗ ಆಗುತ್ತಿದ್ದದ್ದು ಅಷ್ಟರಲ್ಲೇ ಇದೆ. ಇನ್ಯಾರಿಗೋ ಅದರ ಉಪಯೋಗ ಆಗುತ್ತಿದೆಯಾದರೆ ಅವರಲ್ಲೇ ಇರಲಿ’ ಎಂದಿದ್ದರು ವೇಣೂಜಿ.
ಅವರ ಯೋಚನೆ ಯಾವಾಗಲು ತುಸು ಭಿನ್ನ.
‘ಮನುಷ್ಯ ಹೇಗೆಂದರೆ ಅವನು ಭವಿಷ್ಯದ ಒಂದು ದಿನವನ್ನೂ ಚಿತ್ರಿಸಿಕೊಳ್ಳಲಾರ, ಭವಿಷ್ಯದ ಭಯಕ್ಕೆ ಅವನು ಬೆಚ್ಚಿಬೀಳುತ್ತಾನೆ. ಹಾಗೆಂದೇ ಅವನು ಹಿಂದಿನ ದಿನಗಳ ನೆನಪಲ್ಲೇ ಇರುತ್ತಾನೆ. ಎಷ್ಟು ಹಿಂದಕ್ಕೆ ಹೋಗುತ್ತಾನೆಂದರೆ ಬಾಲ್ಯದಲ್ಲಿ ವಿಹರಿಸುತ್ತಾನೆ. ಮತ್ತೂ ಹಿಂದಕ್ಕೆ ಹೋಗುವವರು ಪೂರ್ವಜನ್ಮಕ್ಕೂ ಹೋಗಿಬಿಡುತ್ತಾರೆ.’- ಹೀಗೆ ಅವರ ಯೋಚನೆಗಳು ತುಸು ಭಿನ್ನ.
ಎತ್ತರದ ಆಲೋಚನೆಗಳಿದ್ದರೂ ಮಕ್ಕಳೊಂದಿಗೆ ಬೆರೆತು ಹಾಡಬಲ್ಲವ, ಹಾಡು ಕಟ್ಟುತ್ತಲೆ ಹಾಡಿಸಬಲ್ಲವ, ಹಾಡುತ್ತಲೆ ಕುಣಿಸಬಲ್ಲವ, ಕುಣಿಸುತ್ತಲೇ ಮೈಮರೆಯುವಂತೆ ಮಾಡುವ ಅವರ ಪ್ರತಿಭಾ ಶಕ್ತಿ ಅನನ್ಯ. ‘ಜೀಯಾರೆ, ಜಿಯಲ್ಲಾರೆ’ ಎಂದು ಶುರುವಾಗುತ್ತಿದ್ದ ಆಶುಹಾಡುಗಳು ತಾರಕಕ್ಕೆ ಏರುತ್ತಿದ್ದ ಪರಿ ಅನುಭವಿಸಿದವರಿಗೆ ಗೊತ್ತು. ಹತ್ತಿಪ್ಪತ್ತು ಮಕ್ಕಳನ್ನು ಒಟ್ಟು ಮಾಡಿ ಕೊನೆ ಕ್ಷಣದಲ್ಲಿ ಕರೆದರೂ ಕಾನೂನು ಕಾಲೇಜಿನ ಈ ಪ್ರಾಧ್ಯಾಪಕರು ನಮ್ಮ ಬಡಕಲು ಸೈಕಲ್ಲಿನಲ್ಲಿಯೇ ಹಿಂದೆ ಕುಳಿತು ಬಂದು ಕಥೆ, ಹಾಡು, ಕುಣಿತ, ನಾಟಕಗಳ ಮೂಲಕ ಮನಸ್ಸುಗಳನ್ನು ರೂಪಿಸುತ್ತಿದ್ದರು .
ಅವರ ಪ್ರೀತಿ, ಸಲುಗೆ ಆ ದಿನಗಳಲ್ಲಿ ನನಗೆ ಸಿಕ್ಕಿತೆಂಬುದೆ ಧನ್ಯತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.