ಸೋಮೇಶ್ವರ ಶ್ಯಾಮಸುಂದರ್ – ಸ್ವಾತಂತ್ರ್ಯೋತ್ತರ ಭಾರತ ಕಂಡ ಅತ್ಯಂತ ವೈಶಿಷ್ಟ್ಯಪೂರ್ಣವಾದ ಹಾಗೂ ಅಷ್ಟೇ ಅಪರೂಪದ ಅರಣ್ಯ ಸಂರಕ್ಷಣಾಧಿಕಾರಿ. ಅರಣ್ಯದ ಮೇಲೆ ಅವರಂತೆ ‘ತಾಯಿ ಮಮತೆ’ಯನ್ನು ತೋರಿ ಕೆಲಸ ಮಾಡಿದವರು ಸಿಗುವುದು ತೀರಾ ವಿರಳ. ಕಾಡಿನ ರಕ್ಷಣೆಗೆ ವ್ಯತಿರಿಕ್ತ ಅಭಿಪ್ರಾಯಗಳು ಬಂದಾಗ ದೊಡ್ಡವರ ಸ್ಥಾನಮಾನವನ್ನೂ ಲೆಕ್ಕಿಸದೆ, ಅವರ ನಿಲುವು ತಪ್ಪು ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದ ಗಟ್ಟಿಗ. ಅರಣ್ಯದ ಬಗೆಗೆ ನನ್ನಲ್ಲಿ ಆಸಕ್ತಿ ಹುಟ್ಟಿಸಿದ ‘ಕಾಡಿನ ದೈತ್ಯ’. ಕಾಡಿನ ಈ ಕಡುಮೋಹಿಯನ್ನೂ ಬಿಡದೆ ನಿರ್ದಯಿ ಕೋವಿಡ್ ಸಾಂಕ್ರಾಮಿಕ ನಮ್ಮಿಂದ ಅವರನ್ನು ಕಿತ್ತುಕೊಂಡಿದೆ.
ದೇಶದ ಅಸಾಮಾನ್ಯ ಅರಣ್ಯ ಸಂರಕ್ಷಣಾಧಿಕಾರಿ ಎನಿಸಿದ್ದ ಶ್ಯಾಮಸುಂದರ್, 1989ರಲ್ಲಿ ಪಿಸಿಸಿಎಫ್ ಆಗಿ ನಿವೃತ್ತರಾದ ನಂತರವೂ ತುಂಬು ಜೀವನವನ್ನು ನಡೆಸಿದವರು. ಅವರು ಮೊನ್ನೆ ತೀರಿಕೊಂಡಾಗ ಅವರಿಗೆ ಭರ್ತಿ ತೊಂಬತ್ತು ವರ್ಷ. ಅರಣ್ಯ ಸಂರಕ್ಷಕರ ಲೆಕ್ಕಾಚಾರದಲ್ಲಿ ತೇಗದ ಮರವೊಂದಕ್ಕೆ ತೊಂಬತ್ತು ವರ್ಷ ತುಂಬಿತೆಂದರೆ ಅದು ತುಂಬು ಜೀವನ ನಡೆಸಿದೆ, ಇನ್ನು ಅದನ್ನು ಕಡಿಯಬಹುದು ಎಂದರ್ಥ!
ನಮ್ಮ ತಂದೆ ಶಿವರಾಮ ಕಾರಂತರ ತಂಗಿಯ ಮಗ ಶ್ಯಾಮಸುಂದರ್; ತಂದೆಯವರನ್ನು ನೋಡಲು ಆಗಾಗ ಪುತ್ತೂರಿಗೆ ಬರುತ್ತಿದ್ದರು. ಅವರನ್ನು ಮೊದಲ ಬಾರಿ ಭೇಟಿ ಆದಾಗ ನಾನಿನ್ನೂ ಏಳು ವರ್ಷದ ಬಾಲಕ. ನನ್ನನ್ನೂ ಅವರ ಜೊತೆ ಕಾಡಿಗೆ ಕರೆದೊಯ್ಯುತ್ತಿದ್ದರು. ಅಲ್ಲಿಂದಲೇ ನಮ್ಮ ಬಾಂಧವ್ಯ ಬೆಳೆದು ಗಾಢವಾಗಿದ್ದು. ಕಾಡು ಉಳಿಸುವ ಕುರಿತು ಅನೇಕ ಬುದ್ಧಿಜೀವಿಗಳ ಮನದಲ್ಲಿ ತುಂಬಿದ್ದ ರಮ್ಯ ಕಲ್ಪನೆಗಳನ್ನೆಲ್ಲ ಕಳಚುವಂತೆ ಮಾಡಿದ ಅವರು, ಕಾಡಿನ ರಕ್ಷಣೆಗೆ ಬೇಕಾದ ಬದ್ಧತೆಯೊಂದಿಗೆ ನನ್ನನ್ನು ಮುಖಾಮುಖಿಯಾಗಿಸಿದರು. ಅವರು ಈ ರೀತಿ ಮುಖಾಮುಖಿ ಆಗುವುದನ್ನು ಜೀವನದುದ್ದಕ್ಕೂ ರೂಢಿಸಿಕೊಂಡು ಬಂದವರು.
ಪ್ರಮುಖ ರಾಜಕೀಯ ನೇತಾರರಾದ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಆರ್. ಗುಂಡೂರಾವ್ ಹಾಗೂ ನಿಸರ್ಗದ ಬಗೆಗೆ ಕಾಳಜಿ ಹೊಂದಿದಂತಹ ಅರಣ್ಯ ಸಚಿವರಾಗಿದ್ದ ಕೆ.ಎಚ್. ಪಾಟೀಲ, ಅವರಷ್ಟೇ ಅಲ್ಲದೆ ತಮ್ಮ ಸಹೋದ್ಯೋಗಿಗಳು, ಹಿರಿ–ಕಿರಿಯರೆಲ್ಲರನ್ನೂ ಶ್ಯಾಮಸುಂದರ್ ದಶಕಗಳ ಕಾಲ ಪರಿಣಾಮಕಾರಿಯಾಗಿ ಹಾಗೂ ನಾಜೂಕಾಗಿ ನಿಭಾಯಿಸಿದರು, ಕಾಡಿನ ರಕ್ಷಣೆಗೆ ಮಾಡಬೇಕಾದ ಕೆಲಸಗಳ ಕುರಿತೂ ಪ್ರೇರೇಪಿಸಿದರು. ಹತ್ತು ಸಾವಿರ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಅವರು, ಅರಣ್ಯ ಸಂರಕ್ಷಣೆಯ ವಿಷಯದಲ್ಲಿ ರಾಜ್ಯವನ್ನು ದೇಶದಲ್ಲೇ ಮುಂಚೂಣಿಯಲ್ಲಿ ತಂದು ನಿಲ್ಲಿಸಿದವರು.
ಶ್ಯಾಮಸುಂದರ್ ಅವರು ಅರಣ್ಯ ಸಂರಕ್ಷಣೆಗೆ ಕೈಗೊಂಡ ಕ್ರಮಗಳನ್ನು ಭಾರತ ಸರ್ಕಾರದ ಆಗಿನ ಪ್ರಭಾವಿ ಕಾರ್ಯದರ್ಶಿಯಾಗಿದ್ದ ಟಿ.ಎನ್. ಶೇಷನ್ ಬಹುವಾಗಿ ಮೆಚ್ಚಿಕೊಂಡಿದ್ದರು. ಅರಣ್ಯ ಸಂಬಂಧಿ ಹೊಸ ಕಾರ್ಯಕ್ರಮಗಳನ್ನು ಮೊದಲು ಕರ್ನಾಟಕದಲ್ಲಿಯೇ ಅನುಷ್ಠಾನಕ್ಕೆ ತರಬೇಕು, ಅಲ್ಲಿನ ಯಶಸ್ಸು ನೋಡಿಕೊಂಡು ಭಾರತದ ಇತರ ಭಾಗಗಳಲ್ಲಿ ಅದನ್ನು ವಿಸ್ತರಿಸಬಹುದು ಎನ್ನುವುದು ಶೇಷನ್ ಅವರ ಅಭಿಪ್ರಾಯವಾಗಿತ್ತು. ಶ್ಯಾಮಸುಂದರ್ ಅವರ ಕಾರ್ಯ ಅವರನ್ನು ಅಷ್ಟೊಂದು ಪ್ರಭಾವಿಸಿತ್ತು.
ಹಲವು ರಾಷ್ಟ್ರೀಯ ಉದ್ಯಾನಗಳು–ಅಭಯಾರಣ್ಯಗಳ ಸ್ಥಾಪನೆಗೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ದಟ್ಟ ಕಾನನದಲ್ಲಿ ಮಾನವ ಹಸ್ತಕ್ಷೇಪ ತಡೆದಿದ್ದು, ಮರದ ದಿಮ್ಮಿಗಳಿಗಾಗಿ ಕಾಡು ಕಡಿಯುವ ಪ್ರಮಾಣವನ್ನು ಶೇ 50ರಷ್ಟು ತಗ್ಗಿಸಿದ್ದು ಹಾಗೂ ಭದ್ರಾ ವನ್ಯಜೀವಿ ಅಭಯಾರಣ್ಯದಿಂದ ನಿರಾಶ್ರಿತವಾಗುವ ಗ್ರಾಮಗಳನ್ನು ಸ್ಥಳಾಂತರಿಸುವ ಸಲುವಾಗಿ ಇಪ್ಪತ್ತೈದು ವರ್ಷಗಳ ಮೊದಲೇ ಫಲವತ್ತಾದ ಭೂಮಿಯನ್ನು ಕಾಯ್ದಿರಿಸಿದ್ದು– ಇವು ಶ್ಯಾಮಸುಂದರ್ ಅವರು ತಮ್ಮ ಅವಧಿಯಲ್ಲಿ ಮಾಡಿದ ಕೆಲವು ಗಮನಾರ್ಹ ಕಾರ್ಯಗಳು.
ದರ್ಪತೋರುವ ಆಡಳಿತಶಾಹಿ ನಡುವೆ ವಿನಮ್ರ ಹಾಗೂ ಹೆಡೆಯಾಡುತ್ತಿದ್ದ ಭ್ರಷ್ಟಾಚಾರದ ನಡುವೆ ಪ್ರಾಮಾಣಿಕ ವ್ಯಕ್ತಿತ್ವವನ್ನು ಉಳಿಸಿಕೊಂಡ ಅಧಿಕಾರಿ ಅವರಾಗಿದ್ದರು. ಸೋದರ ಮಾವ ಶಿವರಾಮ ಕಾರಂತರಂತೆಯೇ ಶ್ಯಾಮಸುಂದರ್ ಅವರೂ ಕಥನ ಕುಶಲಿ. ತಾವು ಕಂಡಿದ್ದನ್ನು, ತಮ್ಮ ಸುತ್ತಲಿನ ಅರಣ್ಯ ಮತ್ತು ಸಮಾಜದ ಆಗುಹೋಗುಗಳನ್ನು ದಾಖಲಿಸುವ ಮೂಲಕ ಸಾಹಿತ್ಯವನ್ನೂ ಶ್ರೀಮಂತಗೊಳಿಸಿದ ‘ಕಥೆಗಾರ’ ಅವರು.
ಉನ್ನತ ವ್ಯಾಸಂಗಕ್ಕಾಗಿ ಮದ್ರಾಸ್‌ಗೆ ಹೋಗಿದ್ದಾಗಲೇ ಭಾರತೀಯ ಅರಣ್ಯ ಸೇವೆಗೆ (ಐಎಫ್‌ಎಸ್) ಸೇರಿದ ಶ್ಯಾಮಸುಂದರ್ ಅವರು, 1952ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆಯನ್ನು ಆರಂಭಿಸಿದವರು. ಕಾಲೇಜಿನಲ್ಲಿ ಓದುವಾಗ ಕ್ರಿಕೆಟ್ ಆಟಗಾರನಾಗಿಯೂ ಅವರು ಛಾಪು ಮೂಡಿಸಿದ್ದರು. ಕ್ರಿಕೆಟ್ ಕೌಶಲ ಹೇಗೆ ಅರಣ್ಯ ಸೇವೆಗೆ ಸೇರಲು ನೆರವಾಯಿತು ಎಂಬುದನ್ನೂ ಅವರು ತಮ್ಮ ‘ನೆನಪು’ಗಳಲ್ಲಿ ದಾಖಲಿಸಿದ್ದಾರೆ.
ಆಗಷ್ಟೇ ಸ್ವಾತಂತ್ರ್ಯ ಸಿಕ್ಕ ಸಂದರ್ಭ. ಆಗಿನ ಸೌತ್ ಕೆನರಾ ಜಿಲ್ಲೆ ಎಂದರೆ ಈಗಿನ ಕರ್ನಾಟಕದ ಎರಡು ಹಾಗೂ ಕೇರಳದ ಒಂದು ಜಿಲ್ಲೆಯನ್ನು ಒಳಗೊಂಡ ಪ್ರದೇಶ. ಅಷ್ಟೂ ಭಾಗಗಳ ಅರಣ್ಯದ ಉಸ್ತುವಾರಿಗೆ ಒಬ್ಬರೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ. ಅಷ್ಟೊಂದು ವಿಶಾಲವಾದ ಪಶ್ಚಿಮಘಟ್ಟ ಪ್ರದೇಶದಲ್ಲಿ ಗಸ್ತು–ತಪಾಸಣೆ ರೌಂಡ್‌ಗಳಿಗೆ ಶ್ಯಾಮಸುಂದರ್ ಅವರು ಎಂದೂ ಬೇಸರಿಸಿದವರಲ್ಲ. ಸೋತು ವಿಶ್ರಮಿಸಿದವರಲ್ಲ. ಭಾಷಾವಾರು ರಾಜ್ಯಗಳ ರಚನೆಯಾದ ಬಳಿಕ ಮೈಸೂರು ರಾಜ್ಯವನ್ನು ಆಯ್ಕೆ ಮಾಡಿಕೊಂಡು ಬಂದ ಶ್ಯಾಮಸುಂದರ್, ತವರಿನ ಅಪ್ಪಟ ಅಭಿಮಾನಿ. ಆದರೆ, ದೇಶದ ಎಲ್ಲ ಪ್ರದೇಶಗಳ ಕಾಡುಗಳೂ ಸಮೃದ್ಧವಾಗಿರಬೇಕು ಎಂದು ಬಯಸಿದ ಧೀಮಂತ.
ರಾಜ್ಯದ ಪ್ರತಿಯೊಂದು ಅಭಿವೃದ್ಧಿ ಯೋಜನೆಗೂ ಅರಣ್ಯದ ಮೇಲಿನ ಅವಲಂಬನೆ ಹೆಚ್ಚಾದಾಗ ಅದನ್ನು ತೀವ್ರವಾಗಿ ವಿರೋಧಿಸಿದವರು ಶ್ಯಾಮಸುಂದರ್. ಬೇಡ್ತಿ ಜಲ ವಿದ್ಯುತ್ ಯೋಜನೆಗೆ ಶ್ಯಾಮಸುಂದರ್ ಅವರ ನೇತೃತ್ವದ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡ ವಿರೋಧ ವ್ಯಕ್ತಪಡಿಸಿದಾಗ ಆಗಿನ ಸಚಿವರೊಬ್ಬರಿಂದ ‘ರಾಷ್ಟ್ರವಿರೋಧಿ’ ಎಂದು ಕರೆಸಿಕೊಳ್ಳಬೇಕಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರೂ ಅರಣ್ಯ ಸಂರಕ್ಷಣಾಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ವಿಷಾದ ವ್ಯಕ್ತಪಡಿಸಿದ್ದೂ ಆಯಿತು. ಅವರ ಕಾಡಿನ ಪ್ರೀತಿಗೆ ಇಂತಹ ಹಲವು ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು.
ಸ್ವಾತಂತ್ರ್ಯೋತ್ತರ ಭಾರತದ ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು, ಅರಣ್ಯ ಸಂರಕ್ಷಣಾ ವಿಧಾನಗಳು, ಜೀವವೈವಿಧ್ಯದ ರಕ್ಷಣೆಗೆ ಎದುರಾದ ತೊಡರುಗಳು, ಆಡಳಿತದ ನಿರ್ವಹಣೆಯಲ್ಲಿ ಎದುರಾದ ಸವಾಲುಗಳು... ಅಬ್ಬಬ್ಬಾ, ಶ್ಯಾಮಸುಂದರ್ ಅವರ ನೆನಪುಗಳ ಬುತ್ತಿ ಎಷ್ಟೊಂದು ಶ್ರೀಮಂತವಾಗಿತ್ತು.
ಎಷ್ಟು ಹೇಳಿದರೂ ತೀರದ ಈ ಅರಣ್ಯ ಸಂರಕ್ಷಣಾಧಿಕಾರಿಯ ಒಳಹೊರಗನ್ನು ಇನ್ನೂ ಹೆಚ್ಚು ತಿಳಿದುಕೊಳ್ಳಲು ಬಯಸುವಿರಾದರೆ ಶ್ಯಾಮಸುಂದರ್ ಹಾಗೂ ಅವರ ಆಪ್ತ ಸಹೋದ್ಯೋಗಿ ಎಸ್. ಪರಮೇಶ್ವರಪ್ಪ ಸೇರಿ ಬರೆದ ‘ಫಾರೆಸ್ಟ್ ಕನ್ಸರ್ವೇಶನ್ ಕನ್ಸರ್ನ್ಸ್ ಇನ್ ಇಂಡಿಯಾ’ ಮತ್ತು ಕಳೆದ ವರ್ಷಶ್ಯಾಮಸುಂದರ್ ಅವರ ಮಗ ಶಿವಶರಣ್ ಸೋಮೇಶ್ವರ ಅವರು ಸಂಪಾದಿಸಿದ ‘ರೀಲಿವಿಂಗ್ ದಿ ಮೆಮರೀಸ್ ಆಫ್ ಆ್ಯನ್ ಇಂಡಿಯನ್ ಫಾರೆಸ್ಟರ್’ ಪುಸ್ತಕಗಳನ್ನು ಓದುವಂತೆ ನಾನು ಶಿಫಾರಸು ಮಾಡುವೆ.
ಹಾಗೆಂದು, ನಾನು ಐದು ದಶಕಗಳಲ್ಲಿಶ್ಯಾಮಸುಂದರ್ ಅವರ ಸಾಂಗತ್ಯದಲ್ಲಿ ಪಡೆದಷ್ಟೂ ಅನುಭವಗಳನ್ನು ಈ ಪುಸ್ತಕಗಳು ಓದುಗರಿಗೆ ದಾಟಿಸುತ್ತವೆ ಎಂದು ಖಾತರಿ ನೀಡಲಾರೆ. ಆದರೆ, ಶ್ಯಾಮಸುಂದರ್ ಅವರ ವಿದ್ವತ್ ಪ್ರತಿಭೆ ಮತ್ತು ಮನದಾಳದ ಚಿತ್ರಣವನ್ನು ಅವುಗಳು ನೀಡಬಲ್ಲವು. ಜತೆಗೆ ಓಲ್ಡ್ ಮಾಂಕ್ ರಮ್ ಮೇಲಿನ ಅವರ ಒಲವನ್ನು ಸಹ ಎತ್ತಿ ತೋರಬಲ್ಲವು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.