ADVERTISEMENT

ಫೋನಿ: ವಿಕೋಪಕ್ಕೆ ಎದುರಾದ ಮಾನವೀಯ ಕಥನ

ಗಣಪತಿ ಶರ್ಮಾ
Published 12 ಮೇ 2019, 2:10 IST
Last Updated 12 ಮೇ 2019, 2:10 IST
   

ಮನುಷ್ಯ ಇತಿಹಾಸದಿಂದ ಪಾಠ ಕಲಿಯುವುದಿಲ್ಲ ಎನ್ನುವುದು ಬಹು ಜನಪ್ರಿಯ ಮಾತು. ಆದರೆ ಪ್ರಕೃತಿ ಕೊಟ್ಟ ತಪರಾಕಿಯನ್ನು ಎಚ್ಚರದ ಸೂಚನೆಯಾಗಿ ತಿಳಿದುಕೊಂಡರೆ ವಿಕೋಪವನ್ನು ಎದುರಿಸಲು ಸಮರ್ಥವಾಗಿ ಸಜ್ಜಾಗಬಹುದು ಎಂಬುದಕ್ಕೆ ‘ಫೋನಿ’ ಚಂಡಮಾರುತವನ್ನು ಒಡಿಶಾ ಎದುರಿಸಿದ ರೀತಿಯೇ ನಿದರ್ಶನ

***

ಮೇ 4, ಶನಿವಾರ. ಮಾಧ್ಯಮಗಳ ಎದುರು ಕೂತಿದ್ದ ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಕಣ್ಣುಗಳಲ್ಲಿ ದೊಡ್ಡದೊಂದು ದುರಂತದಿಂದ ಕ್ಷಣಕಾಲದ ಅಂತರದಲ್ಲಿ ತಪ್ಪಿಸಿಕೊಂಡ ನಿರಾಳತೆಯಿತ್ತು.

ADVERTISEMENT

‘24 ಗಂಟೆಗಳಲ್ಲಿ 12 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಇದು ಮಾನವ ಇತಿಹಾಸದಲ್ಲಿಯೇ ಬಹುದೊಡ್ಡ ಸ್ಥಳಾಂತರ’ ಎನ್ನುವಾಗ ಅವರ ಮಾತುಗಳಲ್ಲಿ ಧನ್ಯತೆ ಭಾವ ಎದ್ದು ಕಾಣುತ್ತಿತ್ತು. ಈ ಮಹಾನ್‌ ಕೆಲಸದ ಶ್ರೇಯಸ್ಸನ್ನು ಅವರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸುಮಾರು 4.5 ಕೋಟಿ ಜನರಿಗೆ ಅರ್ಪಿಸಿದರು.

ಅವರು ಈ ಮಾತು ಹೇಳುವ ಒಂದು ದಿನ ಮುಂಚೆ ‘ಫೋನಿ’ ಎಂಬ ಪ್ರಚಂಡ ರಾಕ್ಷಸ200 ಕಿ.ಮೀ. ವೇಗದಲ್ಲಿ ಒಡಿಶಾ ಸಮುದ್ರ ತಡಿಯುದ್ದಕ್ಕೂ ಗುದ್ದಿತ್ತು. ಸಹಸ್ರ ಸಂಖ್ಯೆಯಲ್ಲಿ ಅಮಾಯಕರನ್ನು ಆಪೋಶನ ತೆಗೆದುಕೊಳ್ಳಲು ಹೊಂಚುಹಾಕಿದ್ದ ಅದಕ್ಕೆ ದಡದಲ್ಲಿ ಸಿಕ್ಕಿದ್ದು ಖಾಲಿ ಖಾಲಿ ಮನೆಗಳು, ಬೀದಿಗಳು, ಊರುಗಳು... ಮನುಷ್ಯರ ಸುಳಿವು ಕಾಣದ ಆಕ್ರೋಶದಿಂದ ಮನೆ, ಮರಗಳನ್ನೇ ಸುಳಿದೆತ್ತಿ ಬಿಸಾಡಿ ಬಾಂಗ್ಲಾದೇಶದತ್ತ ಮುಖಮಾಡಿತು. ಆದರೂ, ಊರಿಗೆ ಬಂದು ಬರಿಗೈಯಲ್ಲಿ ಹೋಗಲಾರೆ ಎಂಬಂತೆ ಸುಮಾರು ನಲ್ವತ್ತು ಜನರ ಪ್ರಾಣವನ್ನು ಸೆಳೆದುಕೊಂಡು ಹೋಯಿತು.

ಪ್ರತಿಯೊಬ್ಬ ಮನುಷ್ಯನ ಪ್ರಾಣವೂ ಅಷ್ಟೇ ಅಮೂಲ್ಯ. ಆದರೆ, ಈ ಸಲ ಚಂಡಮಾರುತವನ್ನು ಒಡಿಶಾ ರಾಜ್ಯ ಎದುರಿಸಿದ ಸಮರ್ಥ ರೀತಿಯಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆ ಅತ್ಯಂತ ಕಡಿಮೆ ಇರುವುದಂತೂ ಸತ್ಯ. ನವೀನ್‌ ಪಟ್ನಾಯಕ್‌ ಅವರೇ ಹೇಳಿದಂತೆ, ಎಷ್ಟು ವೇಗದಲ್ಲಿ, ಯಾವಾಗ ಅಪ್ಪಳಿಸುತ್ತದೆ ಎಂಬ ನಿಖರ ಮಾಹಿತಿ ದೊರೆತಾಗ, ಫೋನಿ ಚಂಡಮಾರುತ ಒಡಿಶಾ ಕರಾವಳಿಯಿಂದ ಕೇವಲ 24 ಗಂಟೆಗಳ ಅಂತರದಲ್ಲಿತ್ತು. ಆ ಕಿರು ಅವಧಿಯಲ್ಲಿಯೇ ಹನ್ನೆರಡು ಲಕ್ಷ ಜನರನ್ನು ಸುರಕ್ಷತೆಯ ದಡ ಮುಟ್ಟಿಸಿದ್ದು ನಿಜಕ್ಕೂ ಬಹುದೊಡ್ಡ ಮಾನವೀಯ ಕಾರ್ಯಾಚರಣೆಯೇ ಸರಿ.

ಚಂಡಮಾರುತವೆಂಬ ಮಹಾಮಾರಿಯನ್ನು ಎದುರಿಸುವ ಸ್ಥೈರ್ಯ ಒಡಿಶಾಗೆ ಸಿದ್ಧಿಸಿದ್ದು ರಾತ್ರೋರಾತ್ರಿಯಲ್ಲ. ಈ ವಿವೇಕದ ಹಿಂದೆ ಹಲವು ಪೆಟ್ಟುಗಳ ಗಾಯದ ನೆನಪಿದೆ.ಬಹುಶಃ ಎರಡು ದಶಕದ ಹಿಂದಿನ ಸ್ಥಿತಿ ಈಗಲೂ ಇದ್ದಿದ್ದರೆ ಒಡಿಶಾದಲ್ಲಿ ಮತ್ತೊಂದು ಮೃತ್ಯಕೂಪ ನಿರ್ಮಾಣವಾಗುತ್ತಿತ್ತೇನೋ. ಅದೃಷ್ಟವಶಾತ್ ಹಾಗಾಗಲಿಲ್ಲ.

ಅದು 1999ರ ಅಕ್ಟೋಬರ್ ತಿಂಗಳು. ಇನ್ನೆರಡು ದಿನಗಳಲ್ಲಿ ಭೀಕರ ‘ಸೂಪರ್ ಸೈಕ್ಲೋನ್’ ರಾಜ್ಯಕ್ಕೆ ಅಪ್ಪಳಿಸುತ್ತದೆ ಎಂಬ ಸುದ್ದಿ ಖಚಿತವಾಗಿಯೇ ಸಿಕ್ಕಿತ್ತು. ಆದರೆ, ಅಷ್ಟು ಕಡಿಮೆ ಅವಧಿಯಲ್ಲಿ ಏನು ಮಾಡಲು ಸಾಧ್ಯ? ಆಗಿನ್ನೂ ತಂತ್ರಜ್ಞಾನ ಈಗಿನಷ್ಟು ಅಭಿವೃದ್ಧಿ ಹೊಂದಿರಲಿಲ್ಲ. ಹವಾಮಾನ ಮುನ್ಸೂಚನೆ ಪಡೆಯುವುದೂ ಸುಲಭವಾಗಿರಲಿಲ್ಲ. ಚಂಡಮಾರುತದ ವೇಗ, ಚಲಿಸುತ್ತಿರುವ ದಿಕ್ಕು, ಹಾನಿ ಸಾಧ್ಯತೆ ಅಂದಾಜಿಸಲು ಸ್ಥಳೀಯ ಮಟ್ಟದಲ್ಲಿ ಸಮರ್ಪಕ ವ್ಯವಸ್ಥೆಯೂ ಇರಲಿಲ್ಲ. ಹೇಗೋ ತುರ್ತಾಗಿ ಒಂದಷ್ಟು ಜನರನ್ನು ಸ್ಥಳಾಂತರಿಸಲಾಯಿತು. 21 ಪರಿಹಾರ ಕೇಂದ್ರಗಳನ್ನು ತೆರೆಯಲಾಯಿತು. ಒಂದೆರಡು ದಿನಗಳಲ್ಲಿ ಇದಕ್ಕಿಂತ ಹೆಚ್ಚು ಇನ್ನೇನು ಮಾಡಲು ಸಾಧ್ಯ? ಅಕ್ಟೋಬರ್ 29ರಂದು ರಾಜ್ಯಕ್ಕೆ ಅಪ್ಪಳಿಸಿದ ಚಂಡಮಾರುತದ ಮುಂದೆ ಈ ಎಲ್ಲ ಪ್ರಯತ್ನಗಳು ನೀರ ಮೇಲಣ ಹೋಮದಂತಾದವು. ‘ಸೂಪರ್ ಸೈಕ್ಲೋನ್’ ಅಬ್ಬರಕ್ಕೆ 10,500ಕ್ಕೂ ಹೆಚ್ಚು ಜನ ಮೃತಪಟ್ಟರು. ಸುಮಾರು 3.5 ಲಕ್ಷ ಮನೆಗಳು ತರಗಲೆಗಳಂತೆ ಹಾರಿಕೊಂಡು ಹೋದವು. 25 ಲಕ್ಷಕ್ಕೂ ಹೆಚ್ಚು ಸೂರು ಕಳೆದುಕೊಂಡು ದಿಕ್ಕೆಟ್ಟರು.

ಈ ವಿಪತ್ತಿನ ಬಳಿಕ ಒಡಿಶಾ ಎಚ್ಚೆತ್ತುಕೊಂಡ ರೀತಿ ಮಾತ್ರ ಶ್ಲಾಘನಾರ್ಹ. ಇದಕ್ಕೆ ಮೊನ್ನೆಯಷ್ಟೇ ಆ ರಾಜ್ಯಕ್ಕೆ ಅಪ್ಪಳಿಸಿದ ‘ಫೋನಿ’ ಚಂಡಮಾರುತ ಮತ್ತು ಅದನ್ನು ಅಲ್ಲಿನ ಆಡಳಿತ ನಿಭಾಯಿಸಿದ ರೀತಿಯೇ ಸಾಕ್ಷಿ.

ಬದಲಾಯ್ತು ಭಾರತ, ಸಶಕ್ತವಾಯ್ತು ಒಡಿಶಾ

1999ರ ಚಂಡಮಾರುತದಿಂದ ಹೈರಾಣಾಗಿದ್ದ ಒಡಿಶಾ ನಂತರ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ವಿಶ್ವವೇ ಮೆಚ್ಚುವ ರೀತಿಯಲ್ಲಿ ತಯಾರಿ ನಡೆಸಿತು. ಮುಂದೆ ಇಂತಹ ಪರಿಸ್ಥಿತಿ ಬಂದೊದಗಿದಲ್ಲಿ ಅದನ್ನು ಎದುರಿಸಲು ವಿಪತ್ತು ನಿರ್ವಹಣಾ ವ್ಯವಸ್ಥೆಯೊಂದನ್ನುಸಿದ್ಧಪಡಿಸಿತು. ಜತೆಗೆ, ಕಳೆದೆರಡು ದಶಕದಲ್ಲಿ ದೇಶದ ತಂತ್ರಜ್ಞಾನ, ಸಂವಹನ ವ್ಯವಸ್ಥೆಯಲ್ಲಿ ಆದ ಸುಧಾರಣೆ ಹಾಗೂ ಅಭಿವೃದ್ಧಿಯೂ ಒಡಿಶಾದ ನೆರವಿಗೆ ಬಂದಿತು. ಹವಾಮಾನ ಬದಲಾವಣೆ ಬಗ್ಗೆ ಕ್ಷಣಕ್ಷಣದ ಮಾಹಿತಿ ತಿಳಿಯುವ ನಿಟ್ಟಿನಲ್ಲಿ ಆದ ತಂತ್ರಜ್ಞಾನ ಅಭಿವೃದ್ಧಿ, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಉಡಾವಣೆ ಮಾಡಿದ ಸಂವಹನ ಉಪಗ್ರಹಗಳು, ಭಾರತೀಯ ಹವಾಮಾನ ಇಲಾಖೆಯ ಕಾರ್ಯವೈಖರಿಯಲ್ಲಿ ಆದ ಬದಲಾವಣೆಗಳು, 2005ರಲ್ಲಿ ಅಸ್ತಿತ್ವಕ್ಕೆ ಬಂದ ‘ವಿಪತ್ತು ನಿರ್ವಹಣಾ ಕಾಯ್ದೆ’ಯು ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ನಿಟ್ಟಿನಲ್ಲಿ ದೇಶವನ್ನು ಸದೃಢಗೊಳಿಸಿದವು. ಕಾಯ್ದೆಯ ಪರಿಣಾಮ ರಾಷ್ಟ್ರ, ರಾಜ್ಯ, ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ವಿಪತ್ತು ನಿರ್ವಹಣಾ ಪ‍್ರಾಧಿಕಾರಗಳು ರಚನೆಯಾದವು.

ಕಳೆದ ಕೆಲ ದಶಕಗಳಲ್ಲೇ ಭೀಕರವಾದದ್ದು ಎನ್ನಲಾದ‘ಫೋನಿ’ ಚಂಡಮಾರುತ (ಗಂಟೆಗೆ ಸುಮಾರು 200 ಕಿಲೋಮೀಟರ್ ವೇಗ) ಒಡಿಶಾಕ್ಕೆಅಪ್ಪಳಿಸಿದ್ದು ಮೇ 3ರಂದು. ಈ ಬಗ್ಗೆ ಏಪ್ರಿಲ್ 28ರಂದೇ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿತ್ತು. ಚಂಡಮಾರುತ ಯಾವ ದಿಕ್ಕಿನಿಂದ ಬರುತ್ತಿದೆ. ಅದರ ವೇಗವೆಷ್ಟು, ಅದು ಇನ್ನೆಷ್ಟು ವೃದ್ಧಿಯಾಗಲಿದೆ, ಯಾವಾಗ ಅಪ್ಪಳಿಸಲಿದೆ ಎಂಬ ಕುರಿತು ಇಲಾಖೆ ಅನುದಿನವೂ ಅನುಕ್ಷಣವೂ ಮಾಹಿತಿ ಒದಗಿಸುತ್ತಿತ್ತು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಪಗ್ರಹಗಳಾದ ‘ಅಕ್ವಾ’ ಮತ್ತು ‘ಟೆರ‍್ರಾ’ ಕೂಡ ಫೋನಿ ಚಂಡಮಾರುತದ ಮೇಲೆ ನಿರಂತರ ನಿಗಾವಹಿಸಿ ಮಾಹಿತಿ ನೀಡಿ ನೆರವಾದವು.

ರಾಜ್ಯಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂಬ ಸುಳಿವು ದೊರೆಯುತ್ತಿದ್ದಂತೆ ಒಡಿಶಾ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಯಿತು. ದೃಶ್ಯ, ಮುದ್ರಣ, ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿ ನೀಡಲಾರಂಭಿಸಿತು. ಮತ್ತೊಂದೆಡೆ ಪರಿಹಾರ ಶಿಬಿರಗಳನ್ನು ಆರಂಭಿಸುವ ಪ್ರಕ್ರಿಯೆಯೂ ಶುರುವಾಯಿತು. ತಗ್ಗು ಪ್ರದೇಶಗಳಲ್ಲಿ ವಾಸಿಸುವವರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಯಿತು. ರೈಲು, ವಿಮಾನ ಸಂಚಾರ ಸ್ಥಗಿತಗೊಳಿಸಲಾಯಿತು. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಯಿತು. 45 ಸಾವಿರ ಸ್ವಯಂಸೇವಕರು, 2 ಸಾವಿರ ತುರ್ತು ರಕ್ಷಣಾ ಕಾರ್ಯಕರ್ತರು ಮತ್ತು 1 ಲಕ್ಷ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದರು.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಒಡಿಶಾ ತುರ್ತು ವಿಪತ್ತು ನಿರ್ವಹಣಾ ಪಡೆ, ಪಂಚಾಯತ್‌ರಾಜ್ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳು ಜತೆಗೂಡಿ ಕಾರ್ಯನಿರ್ವಹಿಸಿದವು. 9 ಸಾವಿರ ಪರಿಹಾರ ಕೇಂದ್ರಗಳನ್ನು ತೆರೆದು ಒಂದೇ ದಿನದಲ್ಲಿ ಸುಮಾರು 12 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಯಿತು. ರಕ್ಷಣಾ ಕಾರ್ಯಕರ್ತರಿಗೆ ಅತ್ಯಾಧುನಿಕ ಸಂವಹನ ಸಾಧನಗಳು, ಜೀವರಕ್ಷಕ ಸಾಧನಗಳನ್ನೂ ಒದಗಿಸಲಾಗಿತ್ತು. ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರಿಂದ ಅಪಾರ ಜೀವಹಾನಿ ತಡೆಯುವುದು ಸಾಧ್ಯವಾಯಿತು.

ವಿಶ್ವಸಂಸ್ಥೆ ಶ್ಲಾಘನೆ

‘ಫೋನಿ’ಯನ್ನು ಒಡಿಶಾ ಎದುರಿಸಿದ ರೀತಿಯನ್ನು ವಿಶ್ವಸಂಸ್ಥೆಯೂ ಶ್ಲಾಘಿಸಿದೆ. ‘ಅತ್ಯಂತ ಕ್ಲಿಷ್ಟಕರ ಪ್ರಕೃತಿ ವಿಕೋಪದ ಸಂದರ್ಭದಲ್ಲಿಯೂ ಯಾವುದೇ ಸಾವು ಸಂಭವಿಸದಂತೆ ನೋಡಿಕೊಳ್ಳಬೇಕೆಂಬ ಭಾರತ ಆಶಯ ಸೆಂಡೈ ಫ್ರೇಮ್‌ವರ್ಕ್‌ (ಪ್ರಾಕೃತಿಕ ವಿಪತ್ತಿನ ವೇಳೆ ಹಾನಿ ಕಡಿಮೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ರೂಪಿಸಿರುವ ಮಾರ್ಗದರ್ಶಿ) ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹತ್ತರ ಕೊಡುಗೆ ನೀಡಿದೆ’ ಎಂದು ವಿಶ್ವಸಂಸ್ಥೆಯ ಪ್ರಕೃತಿ ವಿಕೋಪ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಮ್ಯಾಮಿ ಮಿಜುಟೊರಿ ಹೊಗಳಿದ್ದಾರೆ.

ಎಲ್ಲವೂ ಮುಗಿದಿಲ್ಲ

ಈಗ ಫೋನಿಯ ಅಬ್ಬರವೇನೋ ಕುಗ್ಗಿದೆ. ಹಾಗೆಂದು ಚಂಡಮಾರುತವನ್ನು ಮಣಿಸಿದ ಖುಷಿಯಲ್ಲಿ ಸರ್ಕಾರ ಮೈಮರೆಯುವಂತಿಲ್ಲ. ಫೋನಿ ಬಡಿದು ಧ್ವಂಸಗೊಂಡಿರುವ ಊರುಗಳನ್ನು ಮತ್ತೆ ಕಟ್ಟುವುದು ಸುಲಭದ ಕೆಲಸವೇನೂ ಅಲ್ಲ. ಅಲ್ಲದೆ ಚಂಡಮಾರುತದ ನಂತರ ಬರುವ ಕಾಯಿಲೆ ಕಡೆಗೂ ಗಮನಹರಿಸಬೇಕು. ನಿರಾಶ್ರಿತರಿಗೆ ಸುಸ್ಥಿರ ಬದುಕು ಕಟ್ಟಿಕೊಡುವ ಸವಾಲೂ ಇದೆ. ಈ ಎಲ್ಲವನ್ನೂ ಜನರನ್ನು ಸ್ಥಳಾಂತರಿಸಿದ ಉತ್ಸಾಹ, ಕಾಳಜಿಯಲ್ಲಿಯೇ ಒಡಿಶಾ ಸರ್ಕಾರ ನಿರ್ವಹಿಸಬೇಕಿದೆ. ಆಗಮಾತ್ರ ಬೃಹತ್‌ ಮಾನವೀಯ ಕಥನವೊಂದು ಶುಭಾಂತ್ಯಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.