‘ಸರ ಸರ ಕನ್ನಡ ಓದಲು ಬರೆಯಲು ಕಲಿಸಿದ ತಾಯಿಗೆ ನಮೋ ನಮೋ...ಸ್ವರವ್ಯಂಜನಗಳ ಪದ್ಧತಿ ಅರುಹಿದ ಶಾರದಾಂಬೆಗೆ ನಮೋ ನಮೋ ...’ ಎಂದು ನಮ್ಮ ಶಾಲೆಯಲ್ಲಿ ಮಕ್ಕಳು ಪ್ರಾರ್ಥನೆ ಹಾಡಿ ರಾಷ್ಟ್ರ ಗೀತೆ ಹಾಡುವಾಗ, ‘ನಾವೆಲ್ಲಿದ್ದೀವಿ?, ಜರ್ಮನಿಯ ಮ್ಯೂನಿಕ್ ನಗರದಲ್ಲೋ ಅಥವಾ ಕರ್ನಾಟಕದಲ್ಲೋ’ ಎಂದು ನಮಗೇ ಒಮ್ಮೊಮ್ಮೆ ಸಂದೇಹವಾಗುತ್ತದೆ.
ಇಲ್ಲಿ ‘ನಮ್ಮ ಕನ್ನಡ ಶಾಲೆ ಜರ್ಮನಿ’ಯ ಚಟುವಟಿಕೆಯ ಬಗ್ಗೆ ಸವಿಸ್ತಾರವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವ ಆಶಯ. ಜರ್ಮನಿಯ ಮೊಟ್ಟಮೊದಲ ಕನ್ನಡ ಬಳಗದ ರೂಪದಲ್ಲಿ 2011ರಲ್ಲಿ ಮ್ಯೂನಿಕ್ ಕನ್ನಡ ಬಳಗ ಅಸ್ತಿತ್ವಕ್ಕೆ ಬಂತು. 2015ರಲ್ಲಿ ಸಿರಿಗನ್ನಡಕೂಟ ಆಗಿ ಮರುನಾಮಕರಣಗೊಂಡು ಇಂದಿಗೆ 12 ವರ್ಷಗಳಾದವು.
2021ರ ಡಿಸೆಂಬರ್‌ನಲ್ಲಿ ಮಕ್ಕಳಿಗಾಗಿ ಕನ್ನಡ ಕಲಿಸುವ ಕಾರ್ಯಕ್ಕೆ ಬುನಾದಿ ಹಾಕಿದೆವು. ನಮ್ಮ ಸ್ನೇಹಿತರಾದ ಕನ್ನಡ ಸಂಸ್ಕೃತಿ ಇಲಾಖೆಯ ರಮೇಶ್ ಚಂದ್ರಶೇಖರ್ ಅವರನ್ನು ಸಂಪರ್ಕಿಸಿದಾಗ ಕೂಡಲೇ ಅವರು ಆಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಟಿ.ಎಸ್. ನಾಗಾಭರಣ ಅವರನ್ನು ಪರಿಚಯಿಸಿಯೇ ಬಿಟ್ಟರು. ತಕ್ಷಣವೇ ಪ್ರಾಧಿಕಾರದ ಕಾರ್ಯದರ್ಶಿ ಹಾನಗಲ್, ನಲಿ-ಕಲಿ ರವೀಂದ್ರ ಹಾಗೂ ತಂಡದವರ ಜೊತೆ ಒಂದು ಆನ್ಲೈನ್ ಕಾರ್ಯಾಗಾರವನ್ನು ಆಯೋಜಿಸಿ, ಶಿಕ್ಷಕರಾಗಲು ಆಸಕ್ತಿಯಿದ್ದ ಸ್ನೇಹಿತರಿಗೆ ತರಬೇತಿಯನ್ನೂ ಕೊಡಿಸಲಾಯಿತು.
ಮ್ಯೂನಿಕ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಮಕ್ಕಳಿಗೆ ಆಫ್‌ಲೈನ್ ಶಾಲೆ ಹಾಗೂ ಇತರ ಊರುಗಳ ಮಕ್ಕಳಿಗೆ ಆನ್‌ಲೈನ್ ಶಾಲೆ-ಹೀಗೆ ಎರಡೂ ಮಾದರಿ ಆಯೋಜಿಸಿ, 2022ರ ಜೂನ್ ತಿಂಗಳಲ್ಲಿ ಶಿವಾಲಯಮ್ ದೇವಾಲಯದಲ್ಲಿ ಪ್ರಾರಂಭೋತ್ಸವದ ಮೂಲಕ ನಮ್ಮ ಕನ್ನಡ ಶಾಲೆಗೆ ಚಾಲನೆ ನೀಡಲಾಯಿತು. ಅವತ್ತು ನಮ್ಮ ಮಕ್ಕಳಲ್ಲಿ, ಪೋಷಕರಲ್ಲಿ ಹಾಗೂ ಶಿಕ್ಷಕರ ತಂಡದವರಲ್ಲಿ ಕಂಡ ಉತ್ಸಾಹ, ಒಲುಮೆ, ಉಲ್ಲಾಸ ಇವತ್ತಿಗೂ ಹಾಗೆಯೇ ಮುಂದುವರಿದಿದೆ.
ಮೊದಲನೇ ಶೈಕ್ಷಣಿಕ ವರ್ಷದಲ್ಲಿ 15 ಮಕ್ಕಳು ಆನ್‌ಲೈನ್ ಹಾಗೂ 25 ಮಕ್ಕಳು ಮ್ಯೂನಿಕ್ ಶಾಲೆಗೆ ನೋಂದಾಯಿಸಿದ್ದು ಹೆಮ್ಮೆಯ ವಿಷಯ. ಇನ್ನು ನಮ್ಮ ಮಕ್ಕಳು ಶಾಲೆಗೆ ಬರುವಾಗ, ಪುಸ್ತಕ, ಸ್ಲೇಟು-ಬಳಪ, ಚೀಲದಲ್ಲಿ ಹಾಕಿಕೊಂಡು ತಿಂಡಿ ಡಬ್ಬಿ ಸಮೇತ ಓಡಿ ಬರುವುದನ್ನು ನೋಡೋದೇ ಒಂದು ಖುಷಿ.
ನಾಲ್ಕರಿಂದ 15 ವರ್ಷದ ಮಕ್ಕಳಿದ್ದಾರೆ. ಜರ್ಮನಿಯ ಶಿಶುವಿಹಾರ ಹಾಗೂ ಶಾಲೆಗೆ ಹೋಗುತ್ತಿದ್ದು, ಇವೆರಡೂ ಗುಂಪುಗಳಲ್ಲಿ ಎರಡಕ್ಷರ ಕನ್ನಡವೂ ಗೊತ್ತಿಲ್ಲದವರ ಜೊತೆ ಪಟಪಟನೆ ಕನ್ನಡ ಮಾತಾಡುವ ಮಕ್ಕಳೂ ಇರುವುದು ಸ್ವಾರಸ್ಯಕರ. ಆದರೆ, ನಲಿ-ಕಲಿ ಮಾದರಿಯಲ್ಲಿ ಅಕ್ಷರಗುಂಪುಗಳನ್ನು ಕಲಿಯುವಾಗ, ಎಲ್ಲರೂ ಸಮನಾಗಿ ಅಕ್ಷರಗಳನ್ನು ಕಲಿತು, 2-3-4-5 ಅಕ್ಷರಗಳ ಪದಗಳನ್ನು ಮಾಡುವಾಗ ಎಲ್ಲರದ್ದೂ ಒಂದೇ ಉತ್ಸಾಹ.
ಪ್ರತಿ ವಾರವೂ ಸುಮಾರು 35 ಕಿ.ಮೀ. ದೂರದಿಂದ ಬರುವ ನಮ್ಮ ವಿದ್ಯಾರ್ಥಿನಿ ಸಮನ್ವಿಯ ತಾಯಿ ಸೌಮ್ಯ ಸಂಜಯ್ ಅವರ ಪ್ರತಿಕ್ರಿಯೆಯನ್ನೇ ಕೇಳಿ: ‘ನಮ್ಮ ಮಗಳು ಸಮನ್ವಯಿ ಒಂದು ವರ್ಷದಿಂದ ಕನ್ನಡ ಶಾಲೆಗೆ ಹೋಗುವುದರಿಂದ, ಅವಳ ಕನ್ನಡ ಭಾಷೆಯ ಬಳಕೆಯಲ್ಲಿ ತುಂಬಾ ಬೆಳವಣಿಗೆಯಾಗಿದೆ. ಈ ಸಲ ನಾವು ಬೇಸಿಗೆ ರಜೆಯಲ್ಲಿ ಭಾರತಕ್ಕೆ ಬಂದಾಗ, ಅವಳು ಎಲ್ಲರೊಂದಿಗೆ ಕನ್ನಡದಲ್ಲೇ ಲವಲವಿಕೆಯಿಂದ ಮಾತನಾಡುವುದು ಕಂಡು ಅಜ್ಜ-ಅಜ್ಜಿಯರಿಗೆಲ್ಲ ಬಹಳ ಸಂತಸವಾಯಿತು.’
ನನ್ನ ಜೊತೆ ಇರುವ ಆಡಳಿತ ಮತ್ತು ಶಿಕ್ಷಕರ ತಂಡದವರೆಲ್ಲರೂ ಸ್ನೇಹಿತರು, ಬಳಗದ ಸದಸ್ಯರು ಹಾಗೂ ಎಲ್ಲಕ್ಕಿಂತ ಹೆಚ್ಚಿನದಾಗಿ ನಾವೆಲ್ಲರೂ ಉದ್ಯೋಗಿಗಳು (ಪ್ರಮುಖವಾಗಿ ಐ.ಟಿ.ಉದ್ಯೋಗಿಗಳು). ವಾರದ ದಿನಗಳಲ್ಲಿ ನಮ್ಮ ಕೆಲಸ ಹಾಗೂ ವಾರಾಂತ್ಯದಲ್ಲಿ ಕನ್ನಡ ಶಾಲೆಯ ಶಿಕ್ಷಕರಾಗಿ ಸ್ವ-ಪ್ರೇರಿತರಾಗಿ ಉಚಿತ ಸೇವೆಯನ್ನು ಸಲ್ಲಿಸುತ್ತಿದ್ದೇವೆ.
ಆನ್‌ಲೈನ್ ತರಗತಿಯ ಮುಖ್ಯ ಉಸ್ತುವಾರಿ ಭೂಮಿಕಾ ಶಾಸ್ತ್ರಿ, ಲೋಹಿತ್ ಬ್ರಹ್ಮಚಾರಿ, ವಿನಾಯಕ್ ಬೆಳವಾಡಿ, ಸಂಹಿತಾ ಜೋಯಿಸ್, ಪ್ರವೀಣ್ ಗುಡಿ, ವೀಣಾ ಅಬ್ಬಿ, ಅನೂಷಾ ಶಾಸ್ತ್ರಿ. ಕರಕುಶಲ ಚಟುವಟಿಕೆಯಲ್ಲಿ ಎತ್ತಿದ ಕೈ-ರೇಷ್ಮಾ ಮೊರ್ಟು, ಪೀ-ಟೀ ಮೇಷ್ಟ್ರು ಸಂಜಯ್ ಕುಮಾರ್ ಹಾಗೂ ನನ್ನ ಜೊತೆಗೂ ಬೆನ್ನೆಲುಬಾಗಿ ನಿಂತು ತಂಡದಲ್ಲಿ ಸೇವೆ ಸಲ್ಲಿಸುತ್ತಿರುವ ಲತಾ ವೆಂಕಟೇಶ್ ಇವರೆಲ್ಲರೂ ಕೈಜೋಡಿಸಿದ್ದಾರೆ.
ಆಸಕ್ತರು ಸಂಪರ್ಕಿಸಬೇಕಾದ ಇ–ಮೇಲ್ ಸಂದೇಶ: nammakannadashaale.germany@gmail.com
ನಿರೂಪಣೆ: ಕೃಷ್ಣಿ ಶಿರೂರ
ಯು.ಕೆನಲ್ಲಿ ಕೂಡ ಕನ್ನಡ ಕಲಿಕೆ ಜಾರಿಯಲ್ಲಿದೆ. ಅಮೆರಿಕ ಮಂಡಳಿ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ 2012–13ನೇ ಸಾಲಿನಲ್ಲಿ ‘ಕನ್ನಡ ಕಲಿ’ ಮೂಲಕ ವಾರಕ್ಕೊಮ್ಮೆ ಆಫ್‌ಲೈನ್ ತರಗತಿಗಳು ನಡೆಸಲಾಗುತ್ತಿದೆ. ಈಗ ಆನ್‌ಲೈನ್ ಕಲಿಕೆ ನಡೆಸಲಾಗುತ್ತಿದೆ. ಯು.ಕೆ.ನಲ್ಲಿ 100 ಮಕ್ಕಳು ‘ಕನ್ನಡ ಕಲಿ’ ಮೂಲಕ ಕನ್ನಡವನ್ನು ಕಲಿಯುತ್ತಿದ್ದಾರೆ. ‘ಅನಿವಾಸಿ ಕನ್ನಡಿಗರು ಯುಕೆನಲ್ಲಿ ಕನ್ನಡದಲ್ಲಿ ಮಾತನಾಡಿದರೂ ಮಕ್ಕಳು ಪ್ರತಿಕ್ರಿಯಿಸುವುದು ಇಂಗ್ಲಿಷ್‌ನಲ್ಲಿಯೇ. ಈಗ ‘ಕನ್ನಡ ಕಲಿ’ ಆರಂಭಿಸಿದ ಮೇಲೆ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಮಕ್ಕಳ ಜತೆ ನಾವು ಊರಿಗೆ ಬಂದಾಗ ಅಜ್ಜ–ಅಜ್ಜಿ ಜೊತೆ ಕನ್ನಡದಲ್ಲಿ ಮಾತನಾಡುತ್ತಾರೆ. ಅವರು ಲಂಡನ್‌ಗೆ ಬಂದಾಗ ಕನ್ನಡದಲ್ಲೇ ಮಾತನಾಡುತ್ತಾರೆ. ಆಗ ಮೊಮ್ಮಕ್ಕಳು ಕನ್ನಡದಲ್ಲಿ ಮಾತನಾಡುವುದನ್ನು ಕೇಳುವ ಖುಷಿಯೇ ಬೇರೆ ಎನ್ನುತ್ತಾರೆ ನಮ್ಮ ಅಪ್ಪ–ಅಮ್ಮ. 5–6 ವರ್ಷದ ಮಕ್ಕಳು ಮಾತನಾಡುವಲ್ಲಿ ತಪ್ಪುತ್ತಿದ್ದರೂ ಟೀನೇಜ್ ಮಕ್ಕಳು ನಿರರ್ಗಳವಾಗಿ ಮಾತನಾಡುತ್ತಿದ್ದಾರೆ’ ಎನ್ನುತ್ತಾರೆ ಕಹೋ ಯು.ಕೆ.(ಅನಿವಾಸಿ ಕನ್ನಡಿಗರ ಹಿಂದೂ ಸಂಘಟನೆ) ಅಧ್ಯಕ್ಷ ಯೋಗೇಶ ಹುಲಿಗೌಡ. ‘ಕಹೋ ಯು.ಕೆ. ಸಂಘಟನೆ ಮೂಲಕ ಶೇ 70ರಷ್ಟು ಮಕ್ಕಳು ಕರ್ನಾಟಕ ಸಂಗೀತ ಹಾಗೂ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಇದರಿಂದ ಅವರಿಗೆ ಕನ್ನಡ ಮಾತನಾಡುವುದು ಕೂಡ ರೂಢಿಯಾಗುತ್ತಿದೆ. ಪ್ರತಿವರ್ಷ ನಡೆಸುವ ಶಿಬಿರದಲ್ಲಿ ಕರುನಾಡಿನ ಸಂಸ್ಕೃತಿ ರಾಜ ಪರಂಪರೆ ಸಂಪ್ರದಾಯವನ್ನು ಮಕ್ಕಳಿಗೆ ತಿಳಿಸಲಾಗುತ್ತಿದೆ. ಕಳೆದ ವರ್ಷ ಮೈಸೂರಿನ ರಾಜ ಪರಂಪರೆ ಹಾಗೂ ಮೈಸೂರು ದಸರಾ ಸಂಭ್ರಮವನ್ನು ಕಟ್ಟಿಕೊಡಲಾಯಿತು’ ಎಂದು ಯೋಗೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.