ಎಂ.ಕೆ.ಶ್ರೀಧರ್ (ಮಾಕಮ್ ಕೃಷ್ಣಮೂರ್ತಿ ಶ್ರೀಧರ್) ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಭಾರತದ ಬಹುತೇಕ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ಇವರ ಪರಿಚಯವಿದೆ. ಇವರು 2020ರಲ್ಲಿ ಅಂಗೀಕರಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯ ರೂವಾರಿ. ಶಿಕ್ಷಣ ಕ್ಷೇತ್ರದಲ್ಲಿ ಇವರದು ದೊಡ್ಡ ಹೆಸರು. ಪ್ರತಿಯೊಬ್ಬರ ಜೀವನದ ಬಗ್ಗೆ ಕಾಳಜಿ, ಅವರ ಬಗ್ಗೆ ಮೆಚ್ಚುಗೆ ಮತ್ತು ಭರವಸೆಯ ನುಡಿಗಳು ಎಲ್ಲರಲ್ಲೂ ಒಂದು ರೀತಿ ಸ್ಫೂರ್ತಿ ತುಂಬುತ್ತದೆ. ಕುಲಪತಿಗಳಿಂದ ಹಿಡಿದು ಶಿಕ್ಷಕ ವರ್ಗ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮನವನ್ನು ಆಯಸ್ಕಾಂತದಂತೆ ಸೆಳೆಯುವ ಶಕ್ತಿ ಇವರದು. ಪ್ರತಿ ವ್ಯಕ್ತಿಯ ಜೊತೆ ಒಂದು ರೀತಿಯ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡು ಅವರ ಜೊತೆ ಮತ್ತೆ ಒಡನಾಡುವ ವಿರಳ ವ್ಯಕ್ತಿತ್ವ. ಗಾಲಿ ಕುರ್ಚಿಯೇ ಇವರ ಓಡಾಟದ ಸಾಧನವಾದರೂ ಇವರಲ್ಲಿ ಸದಾ ಚಿಮ್ಮುವ ಉತ್ಸಾಹ, ನಿರಂತರ ಚಟುವಟಿಕೆ, ಹೊಸತನ್ನು ಹುಟ್ಟುಹಾಕುವ ಮನೋಭಾವ ಎಲ್ಲರ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿದ ಅನೇಕ ಅಂಶಗಳು ಶ್ರೀಧರ್ ಅವರು ತಮ್ಮ ನಿತ್ಯ ತರಗತಿಗಳಲ್ಲಿ ಮಾಡಿದ ಪ್ರಯೋಗಗಳು. ಉದಾಹರಣೆಗೆ ಅನುಭವಾತ್ಮಕ ಶಿಕ್ಷಣ. ಶ್ರೀಧರ್ ಯಾವತ್ತೂ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ಪ್ರವಚನ ನೀಡಿದವರಲ್ಲ. ‘ನೋಡಿ ತಿಳಿ ಮಾಡಿ ಕಲಿ’ ಎಂಬ ಸೂತ್ರವನ್ನು ಅನೇಕ ವರ್ಷಗಳಿಂದ ಅನುಸರಿಸಿದವರು.
ಅವರ ಕಲಿಕೆಯ ವಿಧಾನದಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಸಮಸ್ಯೆಗಳನ್ನು ಆಯ್ಕೆ ಮಾಡಿ, ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡಿ, ಅದಕ್ಕೆ ಸೂಕ್ತ ಪರಿಹಾರ ಸೂಚಿಸಬೇಕಿತ್ತು. ಪರಿಹಾರದಲ್ಲಿ ಹೊಸತನ, ಕಾರ್ಯಗತಗೊಳಿಸಲು ಮಾಡಬೇಕಾದ ಪ್ರಯತ್ನ, ಒದಗಬಹುದಾದ ಸವಾಲು ಮತ್ತು ಆ ನಿಟ್ಟಿನಲ್ಲಿ ಹಾಕಬೇಕಾದ ಮುಂದಿನ ಹೆಜ್ಜೆಗಳನ್ನು ಆಲೋಚಿಸುವಂತೆ ವಿದ್ಯಾರ್ಥಿಗಳನ್ನು ಅವರು ಪ್ರೇರೇಪಿಸುತ್ತಿದ್ದರು. ವಿದ್ಯಾರ್ಥಿಗಳು ಯಾವ ಯೋಜನೆಯನ್ನು ತೆಗೆದುಕೊಂಡರೂ ಅದನ್ನು ಪೂರ್ಣಗೊಳಿಸಲು ಬೇಕಾದ ಎಲ್ಲಾ ಸಲಹೆಗಳನ್ನು ನೀಡುತ್ತಿದ್ದರು. ಇದಕ್ಕೆ ಬೇಕಾದ ಸಮಯವನ್ನು ಕೊಟ್ಟು ವೈಯಕ್ತಿಕವಾಗಿ ಮಾರ್ಗದರ್ಶನ ಮಾಡುತ್ತಿದ್ದರು.
ಪ್ರಶ್ನೆ ಕೇಳುವುದು, ಅನುಭವ ಹಂಚಿಕೊಳ್ಳುವುದು, ವಿಷಯವನ್ನು ಚರ್ಚಿಸುವುದು, ತರ್ಕ ಮಂಡಿಸುವುದು, ಆಟಗಳು–ಹೀಗೆ ಹಲವಾರು ರೀತಿಯ ಕಲಿಕಾ ಕ್ರಮವನ್ನು ತರಗತಿಗಳಲ್ಲಿ ಪ್ರಯೋಗಿಸುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ ಮತ್ತು ಕಲ್ಪನಾಶಕ್ತಿ ಹೆಚ್ಚಿಸುವ ಪ್ರಯೋಗಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು. ಸಾವಿರಾರು ವಿದ್ಯಾರ್ಥಿಗಳು ಅವರ ಜೊತೆ ಇಂತಹ ಅನುಭವಾತ್ಮಕ ಕಲಿಕೆಯಲ್ಲಿ ಪಾಲ್ಗೊಂಡು ಯಶಸ್ಸು ಕಂಡಿದ್ದಾರೆ.
ಈ ಕಲಿಕಾಕ್ರಮಗಳ ಬಗ್ಗೆ ವಿಸ್ತೃತವಾಗಿ ಶಿಕ್ಷಣ ನೀತಿಯಲ್ಲಿ ಕಾಣಬಹುದು. ಶಿಕ್ಷಕರನ್ನು ಒಗ್ಗೂಡಿಸಿ ಪಾಠ ಮಾಡುವ ಕ್ರಮದಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಚರ್ಚೆಗಳು, ಗೋಷ್ಠಿಗಳು, ಕಾರ್ಯಾಗಾರಗಳನ್ನು ಕಳೆದ ನಾಲ್ಕೈದು ದಶಕಗಳಿಂದಲೂ ಇವರು ನಡೆಸಿಕೊಂಡು ಬಂದಿದ್ದಾರೆ. ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ, ಮೌಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ಶಿಕ್ಷಕರ ಸಾಮರ್ಥ್ಯವನ್ನು ಬೆಳೆಸುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸಂಶೋಧನಾ ಮಾರ್ಗದರ್ಶಕರಾಗಿ ಗುಣಮಟ್ಟ ಮತ್ತು ಸಾಮಾಜಿಕ ದೃಷ್ಟಿಕೋನಕ್ಕೆ ಇವರ ವಿಶೇಷ ಆದ್ಯತೆ ಇರುತ್ತದೆ. ದೇಶ ಮತ್ತು ಸಮಾಜಕ್ಕೆ ಸಂಶೋಧನೆಯಿಂದಾಗುವ ಪ್ರಯೋಜನ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ದಿಕ್ಕಿನಲ್ಲಿ ಸಂಶೋಧನಾ ಪ್ರಬಂಧಗಳನ್ನು ರೂಪಿಸುವ ಯತ್ನ ಇವರದು. ಸಂಶೋಧನೆ ಹೊಸತನ್ನು ಹುಟ್ಟುಹಾಕಬೇಕು ಮತ್ತು ನಮ್ಮ ಸಮಾಜದಲ್ಲಿ ಇದರಿಂದ ಬದಲಾವಣೆ ತರುವಂತಾಗಬೇಕೆಂಬ ಆಗ್ರಹ ಅವರದು. ಕರ್ನಾಟಕ ಜ್ಞಾನ ಆಯೋಗದ ನಿರ್ದೇಶಕರಾಗಿದ್ದಾಗ ತಮ್ಮ ಸಾಮಾಜಿಕ ಫಲಿತಗಳ ಕಲ್ಪನೆಯನ್ನು ‘ಜ್ಞಾನ ಫೆಲೋಷಿಪ್’ ಕಾರ್ಯಕ್ರಮದ ಮೂಲಕ ಇವರು ಅನುಷ್ಠಾನಗೊಳಿಸಿದರು.
ಸಾಮಾಜಿಕ ಸಮಸ್ಯೆಗಳಿಗೆ ವಿಶಿಷ್ಟ ರೀತಿಯ ಪರಿಹಾರಗಳನ್ನು ಜನರ ಮೂಲಕವೇ ಹೊರತರುವ ಯತ್ನ ಅವರದು. ಸಮಾಜದ ಏರುಪೇರುಗಳು, ಸಮಸ್ಯೆಗಳು ಅವರನ್ನು ಸದಾ ಭಾವುಕರನ್ನಾಗಿಸುತ್ತವೆ. ಒಮ್ಮೆ ಅಂಗವಿಕಲರ ಸಮಾವೇಶಕ್ಕೆ ಹೋದಾಗ ಅವರಿಗೆ ಎದುರಾದ ಪರಿಸ್ಥಿತಿ ಅವರ ಮನಸ್ಸನ್ನು ಕಲಕಿತು. ಕಾರ್ಯಕ್ರಮ ಮುಗಿದು ಎಲ್ಲರೂ ತೆರಳಿದ ನಂತರ ಒಬ್ಬ ವಿದ್ಯಾರ್ಥಿ ಶ್ರೀಧರ್ ಅವರಿಗೆ ಕಾಯುತ್ತಾ ಕುಳಿತಿದ್ದ. ತನಗಿರುವ ಆಸೆ ಆಕಾಂಕ್ಷೆಗಳು, ತನ್ನ ಕುಟುಂಬದ ಬಡತನ, ಅವನ ಜೀವನದ ಕಷ್ಟಗಳನ್ನು ಹಂಚಿಕೊಂಡು ‘ಈಗ ಹೇಳಿ ನಾನು ಹೇಗೆ ಬದುಕಲಿ?’ ಎಂದಾಗ ಶ್ರೀಧರ್, ತಾವು ಏನನ್ನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿರುವದನ್ನು ಅರಿತು ದಿನವಿಡೀ ಕಣ್ಣೀರಿಟ್ಟರು.
ವ್ಯಕ್ತಿ ನಿರ್ಮಾಣದ ಗುರಿ: ವಿದ್ಯಾರ್ಥಿಗಳು, ಯುವಕರು ಶ್ರೀಧರ್ ಅವರ ಸಂಪರ್ಕಕ್ಕೆ ಬಂದರೆಂದರೆ ಅವರ ಜೀವನದೃಷ್ಟಿಯೇ ಬದಲಾಗುತ್ತದೆ. ಸಾಮಾಜಿಕ ಕಾಳಜಿಯ ಬೀಜ ಹುಟ್ಟಿಕೊಳ್ಳುತ್ತದೆ. ಸ್ವಾಮಿ ವಿವೇಕಾನಂದರ ಜೀವನ ಮತ್ತು ಅವರ ಜೀವನ ದರ್ಶನದಿಂದ ಪ್ರೇರಿತರಾಗಿರುವ ಶ್ರೀಧರ್ ಅವರ ಮುಖ್ಯ ಗುರಿ ವ್ಯಕ್ತಿ ನಿರ್ಮಾಣ. ಯುವಪೀಳಿಗೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಅವರ ಚಿಂತನೆಯನ್ನು ಗೌರವಿಸುವುದು ಮತ್ತು ಅವರ ಭಾವನೆಗಳಿಗೆ ಸ್ಪಂದಿಸುತ್ತಾ ಅವರ ಬೆಳವಣಿಗೆಯಲ್ಲಿ ನೆರವಾಗುವುದು ಶ್ರೀಧರ್ ನಡೆದುಕೊಂಡು ಬಂದ ದಾರಿ. ತಾವೇನಾದರೂ ಇನ್ನೊಬ್ಬರಿಗೆ ನೋವುಂಟು ಮಾಡಿದ್ದೇನೆ ಎನಿಸಿದರೆ ಮುಕ್ತ ಮನಸ್ಸಿನಿಂದ ಮಾತನಾಡಿ ತಮ್ಮ ಮನಸ್ಸಿನಲ್ಲಿ ಯಾವುದೇ ಕಲ್ಮಶವಿಲ್ಲದೆ ಸಮಾಧಾನ ಹೇಳುವುದು, ಅವರಲ್ಲಿ ಸ್ಥೈರ್ಯ ತುಂಬುವುದು ಮತ್ತು ಗುರಿಯತ್ತ ಸಾಗಲು ಪ್ರೇರೇಪಿಸುವುದು ಇವರ ವಿಶೇಷ ಗುಣ. ಹಿಂದೆ ಗುರುವಿರಲಿ ಮುಂದೆ ಗುರಿಯಿರಲಿ ಎನ್ನುವ ಮಾತು ಇವರ ಶಿಷ್ಯರಿಗೆ ಹೇಳಿ ಮಾಡಿಸಿದಂತಿದೆ.
ಎಲ್ಲರೊಳಗೊಂದಾಗಿ…: ಶ್ರೀಧರ್ ಅವರದು ನೇರ, ಸರಳ ಮತ್ತು ಪ್ರೀತಿಯ ವ್ಯಕ್ತಿತ್ವ. ಸದಾ ಹಸನ್ಮುಖಿಯಾಗಿ, ಒಂದಿಷ್ಟು ಕೀಟಲೆ ಮಾಡಿ ನಗಿಸುವುದು ಶ್ರೀಧರ್ ಅವರನ್ನು ಭೇಟಿ ಮಾಡಿದವರಿಗೆಲ್ಲ ಅನುಭವಕ್ಕೆ ಬರುತ್ತದೆ. ಶ್ರೀಧರ್ ಅವರನ್ನು ಸದಾ ಒಂದು ದೊಡ್ಡ ಗುಂಪಿನ ಮಧ್ಯೆ ಕಾಣಬಹುದು. ಭಾನುವಾರಗಳ ಮುಂಜಾನೆ ಲಾಲ್‌ಬಾಗ್‌ನಲ್ಲಿ ವಾಯವಿಹಾರಕ್ಕೆಂದು ಹೋದಾಗ ಅವರನ್ನು ಮಾತನಾಡಿಸಲು ಅನೇಕ ಮಂದಿ ಕಾಯುತ್ತಾ ನಿಲ್ಲುವುದು ಸಾಮಾನ್ಯ ದೃಶ್ಯ. ಅವರು ವಿಜಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.
ಶ್ರೀಧರ್ ಅವರದು ಸದಾ ಪ್ರತಿಬಿಂಬಕ ಚಿಂತನೆ. ಅವರ ನಡೆ, ನಡವಳಿಕೆ, ಮಾತು ಎಲ್ಲವೂ ಅನುಕರಣೀಯ. ಅವರಲ್ಲಿರುವ ಸರಳತೆ ಎದ್ದು ಕಾಣುವ ಗುಣ. ಅವರನ್ನು ಪ್ರಶಸ್ತಿ ಕುರಿತು ಕೇಳಿದಾಗ ‘ನಾನು ಮಾಡುತ್ತಿರುವ ಕೆಲಸವನ್ನು ಮುಂದುವರಿಸುತ್ತೇನೆ’ ಎಂದರು.
ಚಾಣಕ್ಯ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿಗಳಾಗಿರುವ ಇವರನ್ನು ಭೇಟಿ ಮಾಡುವುದು ಬಹಳ ಸುಲಭ. ವಿಶ್ವವಿದ್ಯಾಲಯದ ಕಾರಿಡಾರ್‌ಗಳಲ್ಲಿ ಕುಳಿತು ಎಲ್ಲರೊಡನೆ ಹಲವಾರು ಕ್ಷಣಗಳನ್ನು ಕಳೆದು ಎಲ್ಲರಲ್ಲೂ ಶಿಕ್ಷಣ, ಸಮಾಜ ಹಾಗೂ ದೇಶದ ಏಳಿಗೆಯ ಕನಸನ್ನು ಬಿತ್ತುತ್ತಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.