ADVERTISEMENT

ಗಂಗಾವತಿ ಬಳಿಯಲ್ಲೊಂದು ಜಲ ಸುರಂಗ

ಮಲ್ಲಿಕಾರ್ಜುನ ಹೊಸಪಾಳ್ಯ
Published 25 ಫೆಬ್ರುವರಿ 2023, 19:31 IST
Last Updated 25 ಫೆಬ್ರುವರಿ 2023, 19:31 IST
ಪಾಪಯ್ಯ ಟನಲ್‌ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆ
ಪಾಪಯ್ಯ ಟನಲ್‌ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆ   

ಗಂಗಾವತಿಯ ಬಳಿಯ ಮಲ್ಲಾಪುರ ಗುಡ್ಡ ಕೊರೆದು ನಿರ್ಮಿಸಿರುವ ಈ ಸುರಂಗ ಕಾಲುವೆ 70 ವರ್ಷಗಳ ಹಿಂದೆ ನಮ್ಮ ಎಂಜಿನಿಯರ್‌ ಕೌಶಲಕ್ಕೆ ಸಾಕ್ಷಿ. ಆದರೆ, ಈ ಜಲ ಸುರಂಗದ ಕುರಿತು ಹೆಚ್ಚಿನವರಿಗೆ ಗೊತ್ತಿರದಿರುವುದು ಆಶ್ಚರ್ಯ.

**

ಗಂಗಾವತಿ ಬಳಿಯ ಮಲ್ಲಾಪುರದ ಗುಡ್ಡವನ್ನು ಅರ್ಧ ಹತ್ತಿದ್ದೆವು. ಮರ್ರೋ ಎಂಬ ಶಬ್ದ. ಜೋರಾದ ಗಾಳಿಯೂ ಇಲ್ಲ, ಹತ್ತಿರದಲ್ಲಿ ದೊಡ್ಡ ಮರಗಳೂ ಇಲ್ಲ. ಸುಮ್ಮನೆ ಆಲಿಸಿದಾಗ ಶಬ್ದ ಬರುತ್ತಿದ್ದ ದಿಕ್ಕು ತಿಳಿಯಿತು. ಆ ಕಡೆ ನಡೆದಂತೆಲ್ಲಾ ತುಸುವೇ ದೂರದಲ್ಲಿ ಒಂದು ಚೌಕಾಕಾರದ ಕಲ್ಲಿನ ರಚನೆ. ಬಾವಿ ಇರಬಹುದಾ, ಈ ನಟ್ಟ ನಡುವಿನ ಗುಡ್ಡದಲ್ಲಿ ಬಾವಿ ಯಾಕೆ ತೋಡುತ್ತಾರೆ ಇತ್ಯಾದಿ ಹತ್ತಾರು ಪ್ರಶ್ನೆಗಳು. ಅದರೊಳಗಿಂದ ಸದ್ದು ಬರುತ್ತಿತ್ತು. ನೀರು ರಭಸವಾಗಿ ಹರಿಯುವ ಸದ್ದು. ಕಬ್ಬಿಣದ ಸರಳುಗಳಿಂದ ಮುಚ್ಚಿದ್ದರು. ಗಿಡ-ಗಂಟಿ ಬೆಳೆದಿದ್ದವು. ಇದೇನು ಸೋಜಿಗ ಎಂದು ನೋಡುತ್ತಾ ನಿಂತೆವು.

ADVERTISEMENT

ಸ್ವಲ್ಪ ಹೊತ್ತಿಗೆ ಆ ದಾರಿಯಲ್ಲಿ ಬಂದ ಸ್ಥಳೀಯರೊಬ್ಬರು ಗುಡ್ಡದ ಆಳದಲ್ಲಿ ಸುರಂಗ ತೋಡಿ ನೀರಿನ ಕಾಲುವೆ ಮಾಡಿದ್ದಾರೆ ಎಂಬ ಮಾಹಿತಿ ನೀಡಿದರು. ಅರೆರೆ ಈ ಗುಡ್ಡದ ಅಡಿಯಲ್ಲಿ ಕಾಲುವೆ ಇದೆಯೇ ಎಂಬ ಆಶ್ಚರ್ಯ ನಮ್ಮದು. ಕಾಲುವೆಯು ಗುಡ್ಡದ ದಕ್ಷಿಣ ದಿಕ್ಕಿನಲ್ಲಿ ಆರಂಭವಾಗಿ ಉತ್ತರದಲ್ಲಿ ತೆರೆದುಕೊಳ್ಳುತ್ತದೆ ಎಂದು ಹೇಳಿದ ಅವರು ಹತ್ತಿರದಲ್ಲೇ ಇರುವ ವಾನಭದ್ರೇಶ್ವರ ದೇವಸ್ಥಾನಕ್ಕೆ ಹೋದರು.

ಕುತೂಹಲದಿಂದ ದಕ್ಷಿಣಕ್ಕೆ ಹೋಗಿ ಗುಡ್ಡದ ಮೇಲಿಂದ ನೋಡಿದರೆ ವಿಶಾಲವಾದ ತುಂಗಭದ್ರಾ ಎಡದಂಡೆ ಕಾಲುವೆಯ ನೋಟ. ಸಾವಧಾನದಿಂದ ಹರಿದು ಬರುವ ನೀರು. ಗುಡ್ಡ ಇಳಿಯುತ್ತಾ ಹೋದರೆ ಕಂಡಿದ್ದೇ ‘ಪಾಪಯ್ಯ ಟನಲ್’ ಎಂಬ ದೊಡ್ಡ ನಾಮಫಲಕ. ಅಲ್ಲಿಂದಲೇ ಜಲ ಸುರಂಗ ಆರಂಭ. ಸಾವಧಾನದಿಂದ ಹರಿದು ಬರುವ ಕಾಲುವೆ ನೀರು ಸುರಂಗಕ್ಕೆ ತುಸು ದೂರದಲ್ಲಿ ವೇಗ ಪಡೆದುಕೊಂಡು ಗುಡ್ಡದ ಒಡಲಿಗೆ ರಭಸವಾಗಿ ನುಗ್ಗುತ್ತಿತ್ತು. ಇಲ್ಲಿ ಮಾಯವಾದ ನೀರಿನ ರಾಶಿ 1.08 ಕಿಲೋ ಮೀಟರ್‌ ದೂರ ಗುಡ್ಡದೊಳಗೆ ಸಾಗಿ ಅಷ್ಟೇ ರಭಸವಾಗಿ ಹೊರ ಹೊಮ್ಮುತ್ತಿತ್ತು. ಒಂದು ಎಲೆಯನ್ನು ಹರಿಯುವ ನೀರಿನ ಮೇಲೆ ಎಸೆದರೆ ಕೆಲವೇ ಕ್ಷಣಗಳಲ್ಲಿ ತೇಲಿಕೊಂಡು ಮುಂದೆ ಹೋಗುತ್ತಿತ್ತು.

ಅಂದಹಾಗೆ ಈ ಜಲ ಸುರಂಗಕ್ಕೆ ಎಪ್ಪತ್ತು ವರ್ಷಗಳ ಇತಿಹಾಸವಿದೆ. 1956-60ರ ಅವಧಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ತುಂಗಭದ್ರಾ ಜಲಾಶಯಕ್ಕೆ ನಿರ್ಮಿಸಿರುವ ಎಡದಂಡೆ ಮುಖ್ಯ ಕಾಲುವೆಯ 19ನೇ ಮೈಲಿಯ ಬಳಿ ಈ ಸುರಂಗ ತೋಡಲಾಗಿದ್ದು, ಒಟ್ಟು 226 ಕಿಲೋಮೀಟರ್‌ ಉದ್ದದ ಎಡದಂಡೆ ಕಾಲುವೆ ಹರಿವಿನಲ್ಲಿ ಬರುವ ಏಕೈಕ ಸುರಂಗ ಜಲ ಮಾರ್ಗ ಇದು. ಈಗಾಗಲೇ ಹೇಳಿದಂತೆ ಸುರಂಗದ ಉದ್ದ 1.08 ಕಿಲೋ ಮೀಟರ್‌, ಅಗಲ 22 ಅಡಿ ಹಾಗೂ ಆಳ 19 ಅಡಿಗಳಷ್ಟಿದೆ.

ಪಾಪಯ್ಯ ಟನಲ್‌ ಹೊರ ಭಾಗ

ಈ ಕಾಲುವೆ ಹಾಗೂ ಸುರಂಗ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿದ್ದವರು ಆಗಿನ ಮುಖ್ಯ ಎಂಜಿನಿಯರ್ ಪಿ. ಪಾಪಯ್ಯ. ಯಾವುದೇ ಬೃಹತ್‌ ಯಂತ್ರಗಳು ಇಲ್ಲದಿದ್ದ 1950ರ ದಶಕದಲ್ಲಿ ಇದನ್ನು ನಿರ್ಮಿಸಿರುವುದು ಸಾಹಸವೇ ಸರಿ. ಗಟ್ಟಿ ಗ್ರಾನೈಟ್‌ ಹಾಗೂ ಸಿಸ್ಟ್‌ ಶಿಲಾವಲಯದಲ್ಲಿ ಕೊರೆಯಲಾಗಿರುವ ಈ ಜಲ ಸುರಂಗವನ್ನು ಕಾಲುವೆ ನೀರಾವರಿಯ ಅಚ್ಚರಿ ಎನ್ನಬಹುದು.

ಎಡದಂಡೆ ಕಾಲುವೆಯ ಶುರುವಿನಲ್ಲೇ ಎದುರಾದ ಈ ಗುಡ್ಡವನ್ನು ಹಾಯ್ದು ನೀರನ್ನು ರಾಯಚೂರುವರೆಗೂ ಸಾಗಿಸಬೇಕಿತ್ತು. ಸುರಂಗಕ್ಕೆ ಬದಲಾಗಿ ಗುಡ್ಡವನ್ನು ಬಳಸಿಕೊಂಡು ಭೂಮಿಯ ಮೇಲ್ಮೈನಲ್ಲೇ ಕಾಲುವೆ ಮಾಡಿದ್ದರೆ ಸೂಕ್ತ ಎಲಿವೇಶನ್‌ ದೊರೆಯುತ್ತಿರಲಿಲ್ಲ. ಅದಕ್ಕಾಗಿಯೇ ಪಾಪಯ್ಯ ಮತ್ತು ಅವರ ತಂಡವು ಸುರಂಗ ತೋಡುವ ತೀರ್ಮಾನಕ್ಕೆ ಬಂದಿರುವುದು ಸ್ಪಷ್ಟ. ಇಂತಹ ಕಠಿಣ ತೀರ್ಮಾನ ತೆಗೆದುಕೊಂಡಿರುವುದರಿಂದಲೇ ತುಂಗಭದ್ರಾ ಎಡದಂಡೆ ಕಾಲುವೆಯು ಕೊಪ್ಪಳ, ರಾಯಚೂರು ಜಿಲ್ಲೆಗಳ ಸುಮಾರು ಆರು ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುವಂತಾಗಿದೆ. ಪಾಪಯ್ಯನವರ ಸೇವೆಯನ್ನು ಪರಿಗಣಿಸಿ ಜಲ ಸುರಂಗ ಮಾರ್ಗಕ್ಕೆ ಅವರ ಹೆಸರನ್ನೇ ಇಟ್ಟಿರುವುದು ಅರ್ಥಪೂರ್ಣ.

ಸುರಂಗ ಮಾರ್ಗದ ಅರ್ಧ ದಾರಿಯಲ್ಲಿ ಗಾಳಿಯ ಒತ್ತಡ ಹೊರ ಹೋಗಲು ನಿರ್ಮಾಣದ ಸಮಯದಲ್ಲಿ ಬೃಹತ್‌ ಗವಾಕ್ಷಿ ತೆಗೆಯಲಾಗಿದೆ. ಲೇಖನದ ಶುರುವಿನಲ್ಲಿ ಪ್ರಸ್ತಾಪವಾಗಿರುವುದು ಇದೇ. ಸುರಂಗವನ್ನು ಕೊರೆದಿರುವ ವಾನಭದ್ರೇಶ್ವರ ಗುಡ್ಡವು ಪ್ರಾಗೈತಿಹಾಸ ಕಾಲದಿಂದಲೂ ಪ್ರಾಮುಖ್ಯ ಪಡೆದಿದೆ ಎಂದು ಇತಿಹಾಸದ ದಾಖಲೆಗಳಿಂದ ತಿಳಿದುಬರುತ್ತದೆ. ನವಶಿಲಾಯುಗದ ಹಲವು ಕುರುಹುಗಳು ಇಲ್ಲಿ ಉತ್ಖನನಗೊಂಡಿವೆ. ಆಧುನಿಕ ಯುಗದಲ್ಲಿ ಜಲಸುರಂಗವೂ ಜತೆಯಾಗಿ ಗುಡ್ಡದ ಪ್ರಾಮುಖ್ಯವನ್ನು ಹೆಚ್ಚಿಸಿದೆ.

ತುಂಗಭದ್ರೆ ನೀರುಣಿಸಿ ಬೆಳೆಸಿದ ಭತ್ತದ ಗದ್ದೆಗಳ ಹಸಿರು ನೋಟ

ಇದಕ್ಕೆ ಗಂಗಾವತಿಯಿಂದ ಪಶ್ಚಿಮಕ್ಕೆ ಕೇವಲ ಆರು ಕಿಲೋಮೀಟರ್‌ ದೂರದಲ್ಲಿದ್ದರೂ ಹೆಚ್ಚಿನ ಪ್ರಚಾರ ದೊರಕಿಲ್ಲ. ಹಾಗಾಗಿ ಪ್ರವಾಸಿಗರ ಸಂಖ್ಯೆಯೂ ಕಡಿಮೆ. ಅಲ್ಲದೆ ಜಲ ಸುರಂಗದ ಬಳಿ ಅದರ ವಿವರಗಳನ್ನು ತಿಳಿಸುವ ನಾಮಫಲಕವಿಲ್ಲ. ಉತ್ತರ ದಿಕ್ಕಿನಲ್ಲಿ ತುಂಬಾ ಹಳೆಯ ನಾಮಫಲಕವಿದ್ದು ಸಂಪೂರ್ಣ ಶಿಥಿಲವಾಗಿದೆ. ಕಾಲುವೆಯ ನಿರ್ವಹಣೆ ಮಾಡುತ್ತಿರುವ ತುಂಗಭದ್ರಾ ಬೋರ್ಡ್‌ ಅಥವಾ ನೀರಾವರಿ ನಿಗಮ ಇತ್ತ ಗಮನಹರಿಸಬೇಕು.

ಕರ್ನಾಟಕದಲ್ಲಿ ಹಲವು ಜಲಸುರಂಗ ಮಾರ್ಗಗಳಿವೆ. ಮಂಡ್ಯ ಬಳಿಯ ಹುಲಿಕೆರೆ ಜಲ ಸುರಂಗವು 1930ರಲ್ಲಿಯೇ ನಿರ್ಮಾಣವಾಗಿದ್ದು ಮಧ್ಯ ಏಷ್ಯಾದ ಮೊದಲ ಸುರಂಗವೆಂಬ ಹೆಗ್ಗಳಿಕೆ ಪಡೆದಿದೆ. ಆ ಕಾಲದಲ್ಲಿಯೇ ಗುಡ್ಡ ಕೊರೆದು 2.8 ಕಿಲೋಮೀಟರ್‌ ಉದ್ದದ ಕಾಲುವೆ ನಿರ್ಮಾಣ ಮಾಡಿರುವುದು ವಿಶೇಷ. ಹಾಗೆಯೇ 1979-1990ರ ಅವಧಿಯಲ್ಲಿ ಹೇಮಾವತಿ ನಾಲೆಗೆ ನಿರ್ಮಿಸಿರುವ ಬಾಗೂರು-ನವಿಲೆ ಸುರಂಗವು ರಾಜ್ಯದ ಉದ್ದದ ಜಲ ಮಾರ್ಗವಾಗಿದ್ದು 9.7 ಕಿಲೋಮೀಟರ್‌ ಉದ್ದ ಇದೆ. ಭದ್ರಾ ಮೇಲ್ದಂಡೆ ಕಾಲುವೆಗೆ ತರೀಕೆರೆ ಬಳಿ ಏಳು ಕಿಲೋಮೀಟರ್‌ ಉದ್ದದ ಸುರಂಗವನ್ನು ಇತ್ತೀಚೆಗಷ್ಟೇ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.