ಒಲಿಂಪಿಕ್ಸ್ ಅಂಚೆಚೀಟಿ ಸಂಗ್ರಹಿಸುವ ವಿಶಿಷ್ಟ ಹವ್ಯಾಸ ಹೊಂದಿರುವ ಉದ್ಯಮಿ ಜಗನ್ನಾಥ ಮಣಿ ಅವರ ಜಗತ್ತಿನೊಳಗೊಂದು ಸುತ್ತು...
‘ಇದೋ ನೋಡಿ, ಇವು ಅಥೆನ್ಸ್‌ನಲ್ಲಿ ನಡೆದ 1896ರ ಮೊದಲ ಆಧುನಿಕ ಒಲಿಂಪಿಕ್ಸ್ ವೇಳೆ ಬಿಡುಗಡೆ ಮಾಡಿದ್ದ ಹನ್ನೆರಡು ಅಂಚೆ ಚೀಟಿಗಳು. ಇವುಗಳಲ್ಲಿ ಎಂಟು ಬೇಗನೇ ಸಿಕ್ಕವು. ಉಳಿದ ನಾಲ್ಕನ್ನು ಪಡೆಯಲು ಕೆಲವು ವರ್ಷಗಳೇ ಬೇಕಾದವು. ಕುತೂಹಲದ ವಿಷಯವೆಂದರೆ ಒಲಿಂಪಿಕ್ಸ್ ವೇಳೆ ಸಂಪನ್ಮೂಲದ ಕ್ರೋಡೀಕರಣದ ಭಾಗವಾಗಿ ಸ್ಟ್ಯಾಂಪ್‌ಗಳನ್ನು ಹೊರತರಲಾಗಿತ್ತು’
‘ಅಥೆನ್ಸ್ ನಂತರದ ನಾಲ್ಕು ಒಲಿಂಪಿಕ್ಸ್‌ಗಳ ವೇಳೆ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿರಲಿಲ್ಲ. ಈ ಪುಟ ನೋಡಿ....1920ರ ಆ್ಯಂಟ್‌ವರ್ಪ್ (ಬೆಲ್ಜಿಯಂ) ಒಲಿಂಪಿಕ್ಸ್ ವೇಳೆ ಬಿಡುಗಡೆಯಾದ ಅಂಚೆ ಚೀಟಿಗಳಿವು. ಆ ಸಲ ಮೂರು ಪುಟ್ಟ ಅಂಚೆಚೀಟಿಗಳು ಬಿಡುಗಡೆಯಾಗಿದ್ದವು....’
– ಹೀಗೆ ಅಂಚೆಚೀಟಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಪುಟ್ಟ ಟಿಪ್ಪಣಿ ಹೊಂದಿರುವ ಆಲ್ಬಮ್ಮಿನ ಒಂದೊಂದೇ ಪುಟಗಳನ್ನು ತೆರೆಯುತ್ತ ಹೋದರು ಜಗನ್ನಾಥ ಮಣಿ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಉದ್ಯಮಿ ಜಗನ್ನಾಥ ಮಣಿ ಅವರು ಒಲಿಂಪಿಕ್ಸ್‌ಗೆ ಸಂಬಂಧಪಟ್ಟ ಅಂಚೆಚೀಟಿಗಳ ಅತ್ಯುತ್ತಮ ಸಂಗ್ರಹ ಹೊಂದಿದ್ದಾರೆ. ಇದುವರೆಗೆ ನಡೆದಿರುವ ಒಲಿಂಪಿಕ್ಸ್‌ಗಳ ಆತಿಥ್ಯ ವಹಿಸಿದ ದೇಶಗಳು ಮತ್ತು ಜಗತ್ತಿನ ಇತರೆ ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳು, ವಿಂಟೇಜ್ ಲೇಬಲ್ಸ್, ವಿಶೇಷ ಕವರ್‌ಗಳು ಅವರ ಅಮೂಲ್ಯ ಸಂಗ್ರಹದಲ್ಲಿವೆ.
1896ರಲ್ಲಿ ಬಿಡುಗಡೆ ಮಾಡಿದ 12 ಅಂಚೆ ಚೀಟಿಗಳಲ್ಲಿ ಪ್ರಾಚೀನ ಮಲ್ಲಯುದ್ಧ, ಗ್ರೀಕ್ ದೇವತೆಗಳು, ರಥಗಳ ಸ್ಪರ್ಧೆ, ನಾಲ್ಕು ಅಶ್ವಗಳನ್ನು ಒಳಗೊಂಡ ರಥಗಳ ಚಿತ್ರಗಳು ಇದ್ದವು.
‘ಒಲಿಂಪಿಕ್ಸ್‌ಗೆ ಹತ್ತು ವರ್ಷಗಳು ತುಂಬಿದಾಗ (1906) ಗ್ರೀಸ್ ದೇಶ ಕ್ರೀಡೋತ್ಸವ ನಡೆಸಿ ಮತ್ತೊಮ್ಮೆ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತ್ತು. ಅವುಗಳೂ ಇಲ್ಲಿವೆ ನೋಡಿ’ ಎಂದು ಮತ್ತೊಂದು ಪುಟ ತೆರೆದಿಟ್ಟರು.
1924ರ ಪ್ಯಾರಿಸ್ ಒಲಿಂಪಿಕ್ಸ್ ವೇಳೆ ಆತಿಥೇಯ (ಫ್ರಾನ್ಸ್) ದೇಶದ ಜೊತೆಗೆ ಇತರ ದೇಶಗಳೂ ಒಲಿಂಪಿಕ್ಸ್ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವ ಪರಿಪಾಟ ಆರಂಭಿಸಿದ್ದವು. ಆ ವರ್ಷ ಇತರ ಐದು ದೇಶಗಳು (ಸಿರಿಯಾ, ಝೆಕೊಸ್ಲಾವಾಕಿಯಾ, ಲೆಬನಾನ್, ಉರುಗ್ವೆ, ಕೋಸ್ಟರಿಕಾ) ಅಂಚೆಚೀಟಿಗಳನ್ನು ಹೊರತಂದಿದ್ದವು.
ಒಲಿಂಪಿಕ್ಸ್‌ನ ಬಹುಮುಖ್ಯ ಸಂಪ್ರದಾಯಗಳಲ್ಲಿ ಒಂದು ಕ್ರೀಡಾಜ್ಯೋತಿ. ಮೊದಲ ಬಾರಿ ಅದು ಅಂಚೆಚೀಟಿಯಲ್ಲಿ ಕಾಣಿಸಿದ್ದು 1932ರ ಲಾಸ್ ಏಂಜಲೀಸ್ ಕ್ರೀಡೆಗಳಲ್ಲಿ. ಒಲಿಂಪಿಯಾದಲ್ಲಿ ಜ್ಯೋತಿಯಾತ್ರೆ ಆರಂಭವಾಗಿದ್ದು ಬರ್ಲಿನ್ ಒಲಿಂಪಿಕ್ಸ್ ಸಂದರ್ಭದಲ್ಲಿ. ಹೀಗಾಗಿ ಜ್ಯೋತಿ ಹಿಡಿದು ಓಡುವ ಕ್ರೀಡಾಪಟುವಿನ ಚಿತ್ರವಿರುವ ಅಂಚೆಚೀಟಿಯನ್ನು 1936ರಲ್ಲಿ ಜರ್ಮನಿ ಹೊರತಂದಿತು. ಆ ವರ್ಷ ಜರ್ಮನಿ ಮಾತ್ರ ಅಂಚೆ ಚೀಟಿ ಹೊರತಂದಿದ್ದು ವಿಶೇಷ.
‘ಈ ಅಂಚೆಚೀಟಿ ವಿಶೇಷವಾದದ್ದು. 1960ರ ರೋಮ್ ಒಲಿಂಪಿಕ್ಸ್‌ಗೆ ಎರಡು ವರ್ಷ ಮೊದಲು ಅಂದರೆ 1958ರ ಅಕ್ಟೋಬರ್‌ನಲ್ಲಿ ಡೊಮಿನಿಕಾ ರಿಪಬ್ಲಿಕ್ ದೇಶ ಹೊರತಂದ ಅಂಚೆಚೀಟಿ ಇದು. ಎಡಭಾಗದ ಮೇಲೆ ಭಾರತದ ಧ್ವಜವಿದೆ. ಭಾರತದ ಆಟಗಾರರು ಹಾಕಿ ಆಡುತ್ತಿರುವ ಚಿತ್ರವೂ ಇದೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಂಬಂಧಿಸಿದ ಮೊದಲ ಅಂಚೆಚೀಟಿ ಇದು...’ ಎಂದು ವಿವರಿಸಿದರು.
1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಮಿನಿಯೇಚರ್ ಷೀಟ್ (ವಿಷಯದ ಹಿನ್ನೆಲೆ ಹೊಂದಿರುವ ಕಾಗದದ ಮಧ್ಯೆ ಅಂಚೆಚೀಟಿ ಅಡಕವಾಗಿರುವುದು), ವಿಶೇಷ ಕವರ್ ಬಿಡುಗಡೆ ಮಾಡಲಾಯಿತು. 93ಕ್ಕೂ ಹೆಚ್ಚು ದೇಶಗಳು ಒಲಿಂಪಿಕ್ಸ್ ನೆನಪಿನಲ್ಲಿ ಅಂಚೆಚೀಟಿಗಳನ್ನು ಹೊರತಂದವು. 1968ರ ಮೆಕ್ಸಿಕೊ ಒಲಿಂಪಿಕ್ಸ್ ಸಂದರ್ಭದಲ್ಲಿ ಭಾರತ ಮೊದಲ ಬಾರಿ ಒಲಿಂಪಿಕ್ಸ್ ಅಂಚೆಚೀಟಿ ಬಿಡುಗಡೆ ಮಾಡಿತು.
1980ರ ಮಾಸ್ಕೊ ಒಲಿಂಪಿಕ್ಸ್ ವೇಳೆ ಅಮೆರಿಕವೂ ಅಂಚೆಚೀಟಿಗಳನ್ನು ಬಿಡುಗಡೆಮಾಡಿತ್ತು. ಆದರೆ ಅಫ್ಗಾನಿಸ್ತಾನದ ಮೇಲೆ ರಷ್ಯಾ ಆಕ್ರಮಣ ವಿರೋಧಿಸಿ ಅಮೆರಿಕ ನೇತೃತ್ವದಲ್ಲಿ ಕೆಲವು ರಾಷ್ಟ್ರಗಳು ಮಾಸ್ಕೊ ಒಲಿಂಪಿಕ್ಸ್‌ಗೆ ಬಹಿಷ್ಕಾರ ಹಾಕಿದ್ದವು. ಆ ವರ್ಷ ಅಮೆರಿಕದ ಅಂಚೆಚೀಟಿಗಳಲ್ಲಿ ಒಲಿಂಪಿಕ್ಸ್‌ನ ಐದು ಬಳೆಗಳ ಲಾಂಛನ ಇರಲಿಲ್ಲ. 2008ರ ಬೀಜಿಂಗ್ ಒಲಿಂಪಿಕ್ಸ್ ವೇಳೆ ಪಂಚಕೋನಾಕೃತಿಯ ಅಂಚೆಚೀಟಿ ಬಿಡುಗಡೆ ಆಯಿತು. ಇದರ ಜೊತೆಗೆ ಸ್ಟಿಕ್ಕರ್ ರೀತಿಯ ಅಂಚೆಚೀಟಿಯೂ ಹೊರಬಂತು.
ಅಟ್ಲಾಂಟಾದಲ್ಲಿ (1996) ನಡೆದ ಕ್ರೀಡೆಗಳ ವೇಳೆ ಅಂಚೆಚೀಟಿಗಳ ಹಿಂಭಾಗದಲ್ಲಿ ಅದಕ್ಕೆ ಸಂಬಂಧಿಸಿದ ಪುಟ್ಟಮಾಹಿತಿಯ ವಿವರಣೆಯನ್ನೂ ನೀಡಲಾಗಿತ್ತು. ಹೀಗೆ ಸ್ಟ್ಯಾಂಪ್‌ಗಳ ಹಿಂಬದಿಯಲ್ಲಿ ಬರಹ ಮೂಡಿರುವುದು ವಿಶ್ವದಲ್ಲೇ ಮೊದಲು ಇರಬೇಕು ಎನ್ನುವುದು ಅವರ ಅನಿಸಿಕೆ.
2016ರ ರಿಯೊ ಡಿ ಜನೈರೊ (ಬ್ರೆಜಿಲ್) ಒಲಿಂಪಿಕ್ಸ್ ವೇಳೆ ಮೊದಲ 3ಡಿ ಅಂಚೆಚೀಟಿಗಳು ಕನ್ನಡಕ ಸಹಿತ ಬಿಡುಗಡೆ ಆದವು.
ಈಗ ಪ್ಯಾರಿಸ್ ಒಲಿಂಪಿಕ್ಸ್ ನಡೆಯುತ್ತಿದೆ. ಆದರೆ ಆತಿಥ್ಯ ವಹಿಸಿದ್ದು ಖಚಿತವಾದಾಗಲೇ (2017) ಫ್ರಾನ್ಸ್ ಅಂಚೆ ಇಲಾಖೆ ಎರಡು ಅಂಚೆಚೀಟಿಗಳನ್ನು ಹೊರತಂದಿತ್ತು.
1968ರಿಂದ 2016ರವರೆಗೆ ಭಾರತ ಒಲಿಂಪಿಕ್ಸ್ ಸಂದರ್ಭದಲ್ಲಿ ಅಂಚೆಚೀಟಿಗಳನ್ನು ಬಿಡುಗಡೆ ಮಾಡುತ್ತ ಬಂದಿತ್ತು. ಆದರೆ ಟೋಕಿಯೊ (2021ರಲ್ಲಿ ನಡೆದಿತ್ತು) ಒಲಿಂಪಿಕ್ಸ್ ವೇಳೆ ಭಾರತ ಅಂಚೆಚೀಟಿಗಳನ್ನು ಬಿಡುಗಡೆಯಾಗಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್‌ಗೂ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವ ಮಾಹಿತಿ ಇದುವರೆಗೂ ಹೊರಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.