ADVERTISEMENT

ಒಲಿಂಪಿಕ್ಸ್ ಪದಕ ಪಥ..ಮನುಕುಲದ ಮಹಾ ಕ್ರೀಡಾ ಮೇಳ; ಸೌಹಾರ್ದತೆ, ಮನೋಲ್ಲಾಸದ ಜಾತ್ರೆ

ಜಗತ್ತಿನ ಅತ್ಯಂತ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವುದೆಂದರೆ ಉತ್ತುಂಗ ಸಾಧನೆಯೇ ಸರಿ

ಗಿರೀಶ ದೊಡ್ಡಮನಿ
Published 21 ಜುಲೈ 2024, 0:47 IST
Last Updated 21 ಜುಲೈ 2024, 0:47 IST
<div class="paragraphs"><p>2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ಸ್‌ ಪದಕ ವಿಜೇತರಿಗೆ ಗ್ರೀಕ್‌ ಪರಂಪರೆಯ ಪ್ರತೀಕವಾದ ಆಲಿವ್‌ ಎಲೆಯ ಕಿರೀಟ ತೊಡಿಸಿರುವುದು</p></div>

2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ಸ್‌ ಪದಕ ವಿಜೇತರಿಗೆ ಗ್ರೀಕ್‌ ಪರಂಪರೆಯ ಪ್ರತೀಕವಾದ ಆಲಿವ್‌ ಎಲೆಯ ಕಿರೀಟ ತೊಡಿಸಿರುವುದು

   

 –ಸಂಗ್ರಹ ಚಿತ್ರ

ಜಗತ್ತಿನ ಅತ್ಯಂತ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವುದೆಂದರೆ ಉತ್ತುಂಗ ಸಾಧನೆಯೇ ಸರಿ. ಆಧುನಿಕ ಒಲಿಂಪಿಕ್ಸ್‌ಗೆ ಇರುವಷ್ಟೇ ದೀರ್ಘ ಇತಿಹಾಸವು ಪದಕ ನೀಡುವ ಸಂಪ್ರದಾಯಕ್ಕೂ ಇದೆ. ಪ್ರತಿಯೊಂದು ಒಲಿಂಪಿಕ್ಸ್‌ನಲ್ಲಿಯೂ ಪದಕಗಳ ವಿನ್ಯಾಸ ಹಾಗೂ ಪ್ರದರ್ಶನ ಮೌಲ್ಯ ಬದಲಾಗುತ್ತಲೇ ಬಂದಿದೆ. ಅದರಲ್ಲಿಯ ಕೆಲವು ವೈಶಿಷ್ಟ್ಯಗಳು ಇಲ್ಲಿವೆ. ಜುಲೈ 26ರಿಂದ ಆಗಸ್ಟ್‌ 11ರವರೆಗೆ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಗೆದ್ದವರು ಪದಕ ಧರಿಸಿ ಬೀಗಲಿದ್ದಾರೆ.

ADVERTISEMENT

*****

‘ಬೆಳಕಿನ ನಗರಿ’ ಪ್ಯಾರಿಸ್‌ ಈಗ ಕ್ರೀಡಾ ಮಹಾಮೇಳ ಒಲಿಂಪಿಕ್ಸ್‌ಗೆ ಸಿದ್ಧವಾಗಿದೆ. ಇನ್ನಾರು ದಿನಗಳು ಕಳೆದರೆ ಇಲ್ಲಿ ಒಲಿಂಪಿಕ್ಸ್ ಜ್ಯೋತಿಯು ಪ್ರಜ್ವಲಿಸಲಿದೆ. ವಿಶ್ವದ ಎಲ್ಲ ಭಾಷೆ, ಬಣ್ಣ ಮತ್ತು ಧರ್ಮಗಳ ಜನರು ಒಂದೇ ಸೂರಿನಡಿ ಸೇರಲಿದ್ದಾರೆ. ಆಡಿ, ಓಡಿ, ಕುಣಿದು, ಹಾಡಿ ಸಂಭ್ರಮಿಸಲಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಜಯಿಸಿದ ವಿಜೇತರ ಕೊರಳು ಅಲಂಕರಿಸಲಿರುವ ಪದಕಗಳೂ ಫಳಫಳ ಹೊಳೆಯಲಿವೆ.

ಒಲಿಂಪಿಕ್ ಕೂಟದಲ್ಲಿ ಯಾರು ಎಷ್ಟು ಪದಕ ಜಯಿಸುವರು ಎಂಬ ಚರ್ಚೆ ಈಗ ಬಿಸಿಯೇರಿದೆ. ಈ ಬಾರಿ ವಿಜೇತರಿಗೆ ನೀಡಲಾಗುವ ಪದಕದ ಕುರಿತೂ ಚರ್ಚೆ ಜೋರಾಗಿದೆ. ಈ ಸಲದ ವಿಜೇತರು ಪ್ಯಾರಿಸ್‌ನ ಹೆಗ್ಗುರುತು ಐಫೆಲ್ ಟವರ್‌ನ ‘ಅಂಶ’ವನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗಲಿದ್ದಾರೆ!

ಹೌದು; ಈ ಕೂಟದಲ್ಲಿ ಪ್ರದಾನ ಮಾಡಲಾಗುತ್ತಿರುವ ಪದಕಗಳಲ್ಲಿ ಐಫೆಲ್ ಟವರ್‌ ನವೀಕರಣದ ವೇಳೆ ತೆಗೆದ ಲೋಹದ ತುಣುಕುಗಳನ್ನು ಬಳಸಲಾಗಿದೆ. ಚಿನ್ನ, ಬೆಳ್ಳಿ ಮತ್ತು ಕಂಚಿನೊಂದಿಗೆ ಈ ಲೋಹವನ್ನೂ  ಬಳಕೆ  ಮಾಡಿರುವುದು ವಿಶೇಷ. ಪದಕದ ವಿನ್ಯಾಸವೂ ವಿಭಿನ್ನವಾಗಿದೆ. ಎಲ್‌ವಿಎಂಎಚ್‌ ಜ್ಯುಯೆಲರ್ ಶಾಮೆಟ್ ಕಂಪನಿಯು ಈ ಪದಕಗಳನ್ನು ವಿನ್ಯಾಸ ಮಾಡಿದೆ. 

ಈ ಪದಕಗಳಲ್ಲಿ ಮೂರು ವಿಶೇಷಗಳಿವೆ. ಮೊದಲನೇಯದ್ದು ದುಂಡನೆಯ ಆಕಾರದ ಪದಕದ ಒಂದು ಬದಿಯ ನಟ್ಟನಡುವೆ ಷಟ್ಕೋನಾಕೃತಿಯಲ್ಲಿ ಜೋಡಿಸಲಾಗಿರುವ ಲೋಹ. ಅದುವೇ ಐಫೆಲ್ ಟವರ್‌ ನವೀಕರಣದ ವೇಳೆ ತೆಗೆದ ಲೋಹದ್ದಾಗಿದೆ. 1887 ರಿಂದ 1889ರ ಅವಧಿಯಲ್ಲಿ ಐಫೆಲ್ ಟವರ್‌ ನಿರ್ಮಾಣವಾಯಿತು. ಅಲ್ಲಿಂದ ಇಲ್ಲಿಯವರೆಗೆ ಟವರ್‌ನ ನಿರ್ವಹಣೆ ನಿಯಮಿತವಾಗಿ ನಡೆದಿದೆ. ಆ ಸಂದರ್ಭಗಳಲ್ಲಿ ಟವರ್‌ನಿಂದ ತೆಗೆದ ಅಳಿದುಳಿದ ಲೋಹದ ತುಣುಕುಗಳನ್ನು ನಿರ್ಮಾಣ ಸಂಸ್ಥೆಯು ಜತನದಿಂದ ಕಾಪಾಡಿಕೊಂಡು ಬಂದಿದೆ.

ಆಧುನಿಕ ಒಲಿಂಪಿಕ್ಸ್‌ನ ಪಿತಾಮಹ ಪಿಯರೆ ಡಿ ಕೊಬರ್ತಿ ಅವರ ತವರಿನಲ್ಲಿ ಒಂದು ಶತಮಾನದ ನಂತರ ನಡೆಯುತ್ತಿರುವ ಈ ಕೂಟದಲ್ಲಿ ಫ್ರೆಂಚ್ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸಲು ಐಫೆಲ್ ಟವರ್‌ನ ಲೋಹದ ಬಳಕೆಯಾಗಿರುವುದು ವಿಶೇಷ. 

ಎರಡನೇಯದಾಗಿ; ಪದಕದ ಹೊಳಪು. ಚಿನ್ನ, ಬೆಳ್ಳಿ ಮತ್ತು ಕಂಚಿನ ಲೋಹಗಳ ಹೊಳಪು ಕಣ್ಸೆಳೆಯುತ್ತದೆ. ಉಬ್ಬುಶಿಲ್ಪದ ಮಾದರಿಯ ವಿನ್ಯಾಸ ಮಾಡಲಾಗಿದ್ದು ಆಕರ್ಷಕವಾಗಿದೆ.  ಮೂರನೇಯದು; ಜೆಮ್ ಸೆಟ್ಟಿಂಗ್. ಷಟ್ಕೋನಾಕೃತಿಯ ಲೋಹ ಮತ್ತು ಪದಕವನ್ನು ಬೆಸೆಯಲು ಆರು ಮೂಲೆಗಳಿಗೂ ರತ್ನದ ಮಾದರಿಯ ಚಿನ್ನದ ಪುಟ್ಟ ಅಚ್ಚುಗಳನ್ನು ಜೋಡಿಸಲಾಗಿದೆ.  

ಪದಕದ ಇನ್ನೊಂದು ಬದಿಯು ಒಲಿಂಪಿಕ್ ಕೂಟದ ಮರುಜನ್ಮದ ಕತೆಯನ್ನು ಹೇಳುತ್ತದೆ. 1896ರಲ್ಲಿ ಆಧುನಿಕ ಒಲಿಂಪಿಕ್ಸ್‌ನ ಮೊದಲ ಕೂಟವು ಅಥೆನ್ಸ್‌ನಲ್ಲಿ ನಡೆಯಿತು. ಅಲ್ಲಿಯ ಪ್ಯಾನಾಥೆನೈಕ್ ಕ್ರೀಡಾಂಗಣದಿಂದ ಹೊರಹೊಮ್ಮುವ ‘ವಿಜಯ ಸಂದೇಶ ತರುವ ದೇವತೆ’ ಅಥೆನಾ ನೈಕಿಯ ಕಲಾಕೃತಿಯಿದೆ. 2004ರಲ್ಲಿ ಅಥೆನ್ಸ್‌ನಲ್ಲಿ ಒಲಿಂಪಿಕ್ಸ್ ನಡೆದಾಗಿನಿಂದಲೂ ಪದಕದಲ್ಲಿ ಈ ಕಲಾಕೃತಿಯ ಬಳಕೆಯು ಕಡ್ಡಾಯವಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿ ಐಫೆಲ್ ಟವರ್‌ನ ವಿನ್ಯಾಸವನ್ನೂ ಇಲ್ಲಿ ಬಳಸಲಾಗಿದೆ. ಪ್ರಾಚೀನ ಮತ್ತು ಆಧುನಿಕ ಒಲಿಂಪಿಕ್ಸ್‌ ಜನನಕ್ಕೆ ಕಾರಣವಾದ ಗ್ರೀಸ್ ಮತ್ತು ಫ್ರಾನ್ಸ್‌ನ ಹೆಗ್ಗುರುತುಗಳು ಇಲ್ಲಿ ಸಂಗಮವಾಗಿವೆ.  

ಪದಕ ಪರಂಪರೆಯ ಸೊಬಗು

ಒಲಿಂಪಿಕ್ಸ್ ಪದಕಗಳನ್ನು ಈ ರೀತಿ ವಿಶೇಷವಾಗಿ ವಿನ್ಯಾಸಗೊಳಿಸುವುದು ಇದೇ ಮೊದಲೇನಲ್ಲ. ಪ್ರತಿ ಬಾರಿ ಕೂಟದ ಆತಿಥ್ಯ ವಹಿಸುವ ದೇಶಗಳು ತಮ್ಮ ನೆಲದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಪರಿಸರದ ಸೊಗಡನ್ನು ಈ ಪದಕಗಳೊಂದಿಗೆ ಅಡಕಗೊಳಿಸುವ ಕಾರ್ಯ ಮಾಡಿವೆ.

ಕ್ರಿಸ್ತಪೂರ್ವ 776ರಲ್ಲಿ ಗ್ರೀಕ್ ದೇಶದ ಪವಿತ್ರ ನಗರಿ ಒಲಿಂಪಿಯಾದಲ್ಲಿ ಈ  ಮಹಾಕ್ರೀಡಾ ಮೇಳ ಹುಟ್ಟಿದಾಗಿನಿಂದಲೂ ಇದೇ ಪರಂಪರೆ ಇದೆ. ಆದರೆ ಪ್ರಾಚೀನ ಒಲಿಂಪಿಕ್ಸ್‌ನಲ್ಲಿ ಗೆದ್ದವರಿಗೆ ಪದಕಗಳನ್ನು ಕೊಡುತ್ತಿರಲಿಲ್ಲ. ಗ್ರೀಸ್‌ನಲ್ಲಿ ಯಥೇಚ್ಛವಾಗಿದ್ದ ಮತ್ತು ಪೂಜ್ಯನೀಯ ಆಲಿವ್ ಮರದ ಎಲೆಗಳಿಂದ ಸಿದ್ಧವಾದ ಕಿರೀಟವನ್ನು ವಿಜೇತರಿಗೆ ತೊಡಿಸಲಾಗುತ್ತಿತ್ತು. ಲವಂಗ, ದಾಲ್ಚಿನಿ ಗಿಡಗಳ ಕಾಂಡ ನೀಡಲಾಗುತ್ತಿತ್ತು. 

ಒಲಿಂಪಿಯಾ ಅಷ್ಟೇ ಅಲ್ಲ, ಒಲಿಂಪಿಕ್ ಉತ್ಸವ ಬೇರೆ ಬೇರೆ ತಾಣಗಳಲ್ಲಿ ನಡೆದಾಗಲೂ ಇದೇ ರೀತಿಯ ಲವಂಗ, ಪೈನ್ ಮರಗಳ ಎಲೆ, ಕಾಂಡಗಳಿಂದ ಸಿದ್ಧಗೊಳಿಸಿದ ಕಿರೀಟವನ್ನೇ ತೊಡಿಸಲಾಗುತ್ತಿತ್ತು. ಜೊತೆಗೆ ಉಣ್ಣೆಯ ರಿಬ್ಬನ್ ಅನ್ನು ತಲೆಗೆ ಕಟ್ಟಲಾಗುತ್ತಿತ್ತು ಎಂಬ ಉಲ್ಲೇಖವು ಹಲವು ಕೃತಿಗಳಲ್ಲಿದೆ. 

ಕ್ರಿಸ್ತಶಕ 1896ರಲ್ಲಿ ಅಥೆನ್ಸ್‌ನಲ್ಲಿ ಆಧುನಿಕ ಒಲಿಂಪಿಕ್ ಕೂಟ ಆರಂಭವಾಯಿತು. ಕ್ರೀಡೆಗಳಲ್ಲಿ ಮೊದಲ ಎರಡು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ಅಪ್ಪಟ ಬೆಳ್ಳಿ ಹಾಗೂ ಕಂಚು ಅಥವಾ ತಾಮ್ರದ ಪದಕ ನೀಡಲಾಯಿತು. ಆದರೆ, ಅದರೊಂದಿಗೆ ಆಲಿವ್ ಎಲೆಯ ಕಿರೀಟವನ್ನೂ ನೀಡಲಾಗಿತ್ತು. 2004ರಲ್ಲಿ ಅಥೆನ್ಸ್‌ನಲ್ಲಿ ಒಲಿಂಪಿಕ್‌ ಕೂಟದಲ್ಲಿ ಪದಕಗಳೊಂದಿಗೆ ಆಲಿವ್ ಕಿರೀಟಗಳನ್ನೂ ಪ್ರದಾನ ಮಾಡಲಾಗಿತ್ತು. 

ಪ್ಯಾರಿಸ್‌ನಲ್ಲಿ ನಡೆದ 1900ರ ಒಲಿಂಪಿಕ್ ಕೂಟದಲ್ಲಿ ಮೊದಲ, ಎರಡನೇ ಹಾಗೂ ಮೂರನೇ ಸ್ಥಾನಗಳಿಗೆ ಪದಕ ನೀಡುವ ಪರಂಪರೆ ಆರಂಭವಾಯಿತು. ಆಗ ಪ್ರಥಮ ಸ್ಥಾನ ಪಡೆದವರಿಗೆ ಚಿನ್ನಲೇಪಿತ ಬೆಳ್ಳಿಯ ಪದಕ ನೀಡಲಾಗಿತ್ತು. ನಂತರದ ಎರಡು ಸ್ಥಾನಗಳಿಗೆ ಬೆಳ್ಳಿ ಮತ್ತು ಕಂಚು ನೀಡಲಾಗಿತ್ತು. ಆಗ 42X60 ಮಿ.ಮೀ ಸುತ್ತಳತೆಯ ಪದಕಗಳನ್ನು ಸಿದ್ಧಗೊಳಿಸಲಾಗಿತ್ತು. ಅದರಲ್ಲಿ ರೆಕ್ಕೆಗಳೊಂದಿಗೆ ವಿಹರಿಸುತ್ತಿರುವ ವಿಜಯ ದೇವತೆಯ ಕಲಾಕೃತಿ ಇತ್ತು.

1904ರಲ್ಲಿ ಸೇಂಟ್ ಲೂಯಿಸ್‌ನಲ್ಲಿ ನಡೆದ ಕೂಟದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳ ಮೇಲೆ ಗ್ರೀಕ್ ದೇವಾಲಯ, ನೈಕಿ ದೇವತೆ ಮತ್ತು ಪುರಾತನ ಕ್ರೀಡೆಗಳ ಉಬ್ಬು ಚಿತ್ತಾರಗಳಿದ್ದವು. ನಂತರ ಲಂಡನ್, ಸ್ಟಾಕ್ ಹೋಮ್‌ಗಳಲ್ಲಿ ನಡೆದ ಕೂಟಗಳಲ್ಲಿಯೂ ವಿನ್ಯಾಸಗಳನ್ನು ವಿಭಿನ್ನವಾಗಿ ಮಾಡಲಾಗಿತ್ತು.

1920ರ ಆ್ಯಂಟ್‌ವರ್ಪ್ ಕೂಟದ ಪದಕದಲ್ಲಿ ನಗ್ನ ಅಥ್ಲೀಟ್ ಎಡಗೈನಲ್ಲಿ ತಾಳೆ ಗಿಡದ ಕಾಂಡವನ್ನು ಎತ್ತಿಹಿಡಿದು, ತಲೆಗೆ ಎಲೆಯ ಕಿರೀಟ ಧರಿಸಿದ ಚಿತ್ರವಿತ್ತು. ಆ ಅಥ್ಲೀಟ್ ಹಿಂದೆ ವಿಜಯದ ವಾದ್ಯ ನುಡಿಸುತ್ತಿರುವ ಕಲಾವಿದನ ಚಿತ್ರವೂ ಇತ್ತು. ಪ್ರಾಚೀನ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳು ನಗ್ನವಾಗಿ ಭಾಗವಹಿಸುತ್ತಿದ್ದವರ ಪ್ರತಿಕೃತಿ ಇದಾಗಿತ್ತು. ಪದಕದ ಇನ್ನೊಂದು ಬದಿಯಲ್ಲಿ ಒಲಿಂಪಿಯಾ ದೇವತೆಯ ಚಿತ್ರ ಅಚ್ಚಾಗಿತ್ತು.

1924ರಲ್ಲಿ ಇದೇ ಪ್ಯಾರಿಸ್‌ನಲ್ಲಿ ನಡೆದಿದ್ದ ಕೂಟದ ಪದಕದಲ್ಲಿ ಚಳಿಗಾಲದ ಒಲಿಂಪಿಕ್ಸ್‌ನ ಸ್ಕೀಸ್ ಅಥ್ಲೀಟ್ ಒಬ್ಬ ಸ್ಕೇಟ್‌ಗಳನ್ನು ಎತ್ತಿ ಹಿಡಿದು ನಿಂತಿದ್ದ ಚಿತ್ರವಿತ್ತು. ಇನ್ನೊಂದು ಬದಿಯಲ್ಲಿ 14 ಸಾಲುಗಳ ಒಕ್ಕಣೆಯಿತ್ತು. ಅದರಲ್ಲಿ ಒಲಿಂಪಿಕ್ ಮಹತ್ವದ ಕಥೆ ಇತ್ತು.

ಜಪಾನ್ ವೈಶಿಷ್ಟ್

ನಂತರದ ವರ್ಷಗಳಲ್ಲಿ ಪದಕ ವಿನ್ಯಾಸಕ್ಕೆ ಆತಿಥೇಯ ದೇಶಗಳು ವಿಶೇಷ ಆದ್ಯತೆ ನೀಡಿದವು. ಅದಕ್ಕಾಗಿ ಬಹಳಷ್ಟು ಸಂಪನ್ಮೂಲವನ್ನೂ ವಿನಿಯೋಗಿಸಿದವು. ಆದರೆ 2020ರಲ್ಲಿ (ಕೋವಿಡ್ ಕಾರಣದಿಂದ 2021ಕ್ಕೆ ಮುಂದೂಡಲ್ಪಟ್ಟಿತ್ತು) ಜಪಾನ್ ದೇಶವು ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿಟ್ಟು ಗಮನ ಸೆಳೆಯಿತು.

ಈ ಶತಮಾನದ ದೊಡ್ಡ ಸಮಸ್ಯೆಯಾದ ಇ ತ್ಯಾಜ್ಯ ನಿರ್ವಹಣೆಯನ್ನೇ ಜಪಾನ್‌ ಪರಿಕಲ್ಪನೆಯಾಗಿ ಬಳಸಿತು. ಬಳಕೆಯಾಗಿ ಕಸದ ಬುಟ್ಟಿ ಸೇರಿದ ಮೊಬೈಲ್ ಫೋನ್‌ಗಳಲ್ಲಿರುವ ಅಲ್ಪಪ್ರಮಾಣದ ಚಿನ್ನ, ಬೆಳ್ಳಿ ಮತ್ತಿತರ ಲೋಹಗಳನ್ನು ಸಂಗ್ರಹಿಸಿ ಪದಕ ತಯಾರಿಸಿತು. ಇದು ವಿಶ್ವದ ಗಮನ ಸೆಳೆಯಿತು. ಹಲವಾರು ಕಲಾವಿದರೊಂದಿಗೆ ಸುಮಾರು ಐದು ಸಾವಿರ ಪದಕಗಳನ್ನು ತಯಾರಿಸಿದ್ದು ಜಪಾನ್ ಹೆಗ್ಗಳಿಕೆ. ಪರಂಪರೆ, ಕಲಾವೈಭವದ ಪ್ರದರ್ಶನದೊಂದಿಗೆ ಈ ಹೊತ್ತಿನ ಜ್ವಲಂತ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಂಡ ಸಾಮಾಜಿಕ ಕಾಳಜಿಯು ಈ ಪದಕಗಳಲ್ಲಿ ಅಚ್ಚಾಗಿತ್ತು. ಕಸದ ಬುಟ್ಟಿ ಸೇರಬೇಕಿದ್ದ ಲೋಹವು ಪದಕ ವಿಜೇತರ ಕೊರಳು ಅಲಂಕರಿಸಿತು. ಅದರಲ್ಲಿ ಭಾರತದ ನೀರಜ್ ಚೋಪ್ರಾ ಗೆದ್ದ ಚಿನ್ನದ ಪದಕವೂ ಒಂದು. ಇದೀಗ ಸ್ಕ್ರಾಪ್‌ ಯಾರ್ಡ್‌ ಸೇರಿದ್ದ ಐಫೆಲ್ ಟವರ್‌ನ ಲೋಹದ ತುಣುಕುಗಳಿಗೂ ಅಂತಹದೇ ಮೌಲ್ಯ ಬಂದಿದೆ.

ಪ್ಯಾರಾ ಪದಕದಲ್ಲಿ ಬ್ರೈಲ್ ಲಿಪಿ

ಆಗಸ್ಟ್ 28ರಿಂದ ಪ್ಯಾರಿಸ್‌ನಲ್ಲಿ ನಡೆಯುವ ಪ್ಯಾರಾಲಿಂಪಿಕ್ಸ್ ಪದಕದಲ್ಲಿಯೂ ಐಫೆಲ್ ಟವರ್‌ನ ಲೋಹದ ಬಳಕೆಯಾಗಿದೆ.

ಅಂಧರಿಗಾಗಿ ಬಳಸಲಾಗುವ ಬ್ರೈಲ್ ಲಿಪಿಯ ಅಕ್ಷರಗಳನ್ನು ಒಂದು ಬದಿಯಲ್ಲಿ ಅಚ್ಚು ಹಾಕಲಾಗಿದೆ. ಈ ಲಿಪಿಯನ್ನು ಕಂಡುಹಿಡಿದ ಲೂಯಿಸ್ ಬ್ರೈಲ್ ಅವರು ಫ್ರಾನ್ಸ್‌ನವರು. ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ. ಇನ್ನೊಂದೆಡೆ ಐಫೆಲ್‌ ಟವರ್‌ನ ಗ್ರಾಫಿಕ್ ಚಿತ್ರವೂ ಇದೆ.  

ಒಲಿಂಪಿಕ್ ಪದಕಗಳಿಗೆ ನೀಲಿ ರಿಬ್ಬನ್ ಮತ್ತು ಪ್ಯಾರಾಲಿಂಪಿಕ್ಸ್‌ ಪದಕಗಳಿಗೆ ಕೆಂಪು ರಿಬ್ಬನ್ ಬಳಸಲಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀಡಲಾಗುವ ಪದಕಗಳು –ಎಎಫ್‌ಪಿ ಚಿತ್ರ
ಐಫೆಲ್‌ ಟವರ್‌

ಪ್ಯಾರಾ ಪದಕದಲ್ಲಿ ಬ್ರೈಲ್ ಲಿಪಿ

ಆಗಸ್ಟ್ 28ರಿಂದ ಪ್ಯಾರಿಸ್‌ನಲ್ಲಿ ನಡೆಯುವ ಪ್ಯಾರಾಲಿಂಪಿಕ್ಸ್ ಪದಕದಲ್ಲಿಯೂ ಐಫೆಲ್ ಟವರ್‌ನ ಲೋಹದ ಬಳಕೆಯಾಗಿದೆ. ಅಂಧರಿಗಾಗಿ ಬಳಸಲಾಗುವ ಬ್ರೈಲ್ ಲಿಪಿಯ ಅಕ್ಷರಗಳನ್ನು ಒಂದು ಬದಿಯಲ್ಲಿ ಅಚ್ಚು ಹಾಕಲಾಗಿದೆ. ಈ ಲಿಪಿಯನ್ನು ಕಂಡುಹಿಡಿದ ಲೂಯಿಸ್ ಬ್ರೈಲ್ ಅವರು ಫ್ರಾನ್ಸ್‌ನವರು. ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ. ಇನ್ನೊಂದೆಡೆ ಐಫೆಲ್‌ ಟವರ್‌ನ ಗ್ರಾಫಿಕ್ ಚಿತ್ರವೂ ಇದೆ. ಒಲಿಂಪಿಕ್ ಪದಕಗಳಿಗೆ ನೀಲಿ ರಿಬ್ಬನ್ ಮತ್ತು ಪ್ಯಾರಾಲಿಂಪಿಕ್ಸ್‌ ಪದಕಗಳಿಗೆ ಕೆಂಪು ರಿಬ್ಬನ್ ಬಳಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.