ADVERTISEMENT

ಪೇಯಿಂಗ್ ಗೆಸ್ಟ್ ಆಶ್ರಯತಾಣ

ಗಂಜಿ ಆದಿಶೇಷ
Published 13 ಸೆಪ್ಟೆಂಬರ್ 2024, 23:57 IST
Last Updated 13 ಸೆಪ್ಟೆಂಬರ್ 2024, 23:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪೇಯಿಂಗ್ ಗೆಸ್ಟ್‌ಗಳು ಶಿಕ್ಷಣ, ಉದ್ಯೋಗ ಸೇರಿದಂತೆ ಅನೇಕ ಕೆಲಸಗಳಿಗೆ ಅರಸಿ ಬೆಂಗಳೂರಿಗೆ ಬರುವ ಅದೆಷ್ಟೋ ಜನರ ಪಾಲಿಗೆ ಆಶ್ರಯ ತಾಣಗಳಾಗಿವೆ. ಕಲಿಕೆಯ ಕೇಂದ್ರಗಳಾಗಿವೆ. ಇಂತಹ ತಾಣಗಳ ಸುರಕ್ಷತೆಗೆ ಈ ಕ್ರಮಗಳು ಜಾರಿಯಾದರೆ ಮಾತ್ರ ಅಲ್ಲಿನವರೆಗೆ ರಕ್ಷಣೆ ಸಾಧ್ಯ. ಸರ್ಕಾರವು ಸಹ ಇದರತ್ತ ಗಮನ ಹರಿಸಬೇಕು. 

ಬೆಂಗಳೂರಲ್ಲಿ ಕೆಲ್ಸ ಸಿಕ್ತು. ಅದುವರೆಗೂ ಒಮ್ಮೆಯೂ ಬೆಂಗಳೂರಿಗೆ ಕಾಲಿಟ್ಟಿದ್ದಿಲ್ಲ. ಬೆಂಗಳೂರು ಹೇಗಿರುತ್ತೋ ನೋಡಿದ್ದಿಲ್ಲ. ಅದಕ್ಕೂ ಮುಂಚೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಬಂದಿದ್ದರೂ, ಬೆಂಗಳೂರನ್ನು ಸುತ್ತಿದ್ದಿಲ್ಲ. ಗೊತ್ತಿದ್ದು ಇಷ್ಟೇ, ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ಕೆಲಸ ಸಿಕ್ಕಿದ್ದ ಕಚೇರಿ. ಆದ್ರೂ ಕೆಲಸಕ್ಕೆ ಜಾಯಿನ್ ಆಗ್ಲೇ ಬೇಕಿತ್ತು, ಎಲ್ಲಿ ಉಳಿದುಕೊಳ್ಳಬೇಕು ಅನ್ನೋದೇ ಗೊತ್ತಿದ್ದಿಲ್ಲ. ಸಂಬಂಧಿಕರು ಇಲ್ಲ. ಆಗ ನೆನಪಾಗಿದ್ದೇ ಹಳೆ ಸಿನಿಮಾಗಳು. ಸಿನಿಮಾಗಳಲ್ಲಿ ಬೆಂಗಳೂರಿಗೆ ಬಂದರೋ ಛತ್ರಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಅಲ್ಲಿ ವಸತಿ, ಊಟ ಸೇರಿದಂತೆ ಎಲ್ಲ ಸೌಕರ್ಯ ಲಭ್ಯ. ಆದರೆ ಇದು ನವಯುಗ ಅಲ್ವಾ, ಛತ್ರಗಳು ಇಲ್ಲ. ಅದರ ಜಾಗದಲ್ಲಿ ಪೇಯಿಂಗ್ ಗೆಸ್ಟ್‌ಗಳು (ಪಿ.ಜಿ) ಬಂದಿವೆ.

ಬೆಂಗಳೂರಲ್ಲಿ ಗೊತ್ತಿದ್ದ ಕೆಲವರಿಗೆ ಫೋನ್‌ ಮಾಡಿ, ಇಂತಹ ಜಾಗದಲ್ಲಿ ಕೆಲಸ ಸಿಕ್ಕಿದೆ. ಉಳಿದುಕೊಳ್ಳೋಕೆ ಮನೆ ಇಲ್ಲವೇ ಪಿ.ಜಿ ಏನಾದರೂ ಇದೆಯೇ ಎಂದು ಕೇಳಿದೆ. ಗೊತ್ತಿದ್ದೋರೋ ಹೇಳಿದ್ರು. ಅದು ಕಚೇರಿಗೂ ಮತ್ತು ಅವರು ಹೇಳಿದ ಸ್ಥಳಕ್ಕೆ ಬಹು ದೂರವಿತ್ತು. ಏಕೋ ಬೇಡವೆನಿಸಿತು. ಗೂಗಲ್‌ ಮ್ಯಾಪ್‌ನಲ್ಲಿ ಕಚೇರಿ ಬಳಿ ಯಾವುದಾದರೂ ಪಿ.ಜಿ ಇದೆಯೇನು ಎಂದು ನೋಡಿದೆ, ಕಚೇರಿಗೆ 400 ಮೀಟರ್ ಹತ್ತಿರದಲ್ಲೇ ಪೇಯಿಂಗ್‌ ಗೆಸ್ಟ್‌ ಸಿಕ್ತು. ಇದರಿಂದ ಬಸ್‌ ಚಾರ್ಜ್‌ ಉಳಿತು, ಜೊತೆಗೆ ಸಮಯವೂ ಉಳಿತು ಎಂದುಕೊಂಡು ಖುಷಿಯಾದೆ.

ADVERTISEMENT

ಕೆಲಸ ಹಾಜರಾಗಬೇಕಿದ್ದ ದಿನವೇ ಪಿ.ಜಿಗೆ ಹಾಜರಾದೆ. ನಂತರ ಕಚೇರಿಗೂ ಹಾಜರಾದೆ. ಅದುವರೆಗೆ ಒಮ್ಮೆಯೂ ಪಿ.ಜಿಯಲ್ಲಿ ನಾನು ಇರುತ್ತೇನೆಂದು ಎಂದಿಗೂ ಭಾವಿಸಿದ್ದಿಲ್ಲ. ನಾನಿದ್ದ ಕೊಠಡಿಯ ಅಳತೆ 15x15 ಅಡಿ. ಇದರಲ್ಲಿ ಇದ್ದದ್ದು 6 ಜನ. ನಮ್ಮ ಪಿ.ಜಿ ವಿಧಾನಸೌಧ, ರಾಜಭವನ್‌, ಹೈಕೋರ್ಟ್‌, ಮೆಜೆಸ್ಟಿಕ್‌ಗೆ ಹತ್ತಿರವಿರೋದರಿಂದ ಇಲ್ಲಿ ಹೆಚ್ಚಾಗಿ ಪೊಲೀಸ್‌ನವರೇ ಇದ್ದರು. ಅದರಲ್ಲೂ ಉತ್ತರ ಕರ್ನಾಟಕ ಮತ್ತು ಮಧ್ಯಕರ್ನಾಟಕದವರೇ ಹೆಚ್ಚಾಗಿದ್ದರು. ಒಂದರ್ಥದಲ್ಲಿ ನಮ್ಮ ಪಿ.ಜಿಗೆ ಪೊಲೀಸ್‌ ಪಿ.ಜಿ ಅಂತಾನೇ ಹೆಸರು ಇಟ್ಟಿದ್ದು ಉಂಟು. ಪೊಲೀಸ್‌ ಮಾತ್ರವಲ್ಲದೇ, ಲಾಯರ್, ಹೋಟೆಲ್ ಮ್ಯಾನೇಜ್‍ಮೆಂಟ್, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುವವರು ಇದ್ದರು. ದಿನದಿನೇ ಅವರ ನಡುವೆ ಆತ್ಮೀಯ ಸಂಪರ್ಕ ಏರ್ಪ‍ಟ್ಟಿತ್ತು. ಒಟ್ಟಿಗೆ ಹೊರಗಡೆ ಸುತ್ತಾಡಲು ಹೋಗುತ್ತಿದ್ದೆವು. ಪಿ.ಜಿಯಲ್ಲಿ ಯಾವುದೇ ಜಾತಿ, ಧರ್ಮ, ಮತಗಳಿಲ್ಲ. ಎಲ್ಲರೂ ಇಲ್ಲಿ ಒಟ್ಟಿಗೆ ವಾಸಿಸುತ್ತಿದ್ದೇವೆ. 

ಸದಾ ಅಮ್ಮ ಮಾಡಿ ಕೊಡುತ್ತಿದ್ದ ಊಟ ಮಾಡುತ್ತಿದ್ದ ನಮಗೆ ಪಿ.ಜಿ ಊಟ ಮಾಡೋದು ಶುರುವಾಯಿತು. ಪಿ.ಜಿ ಅಡುಗೆ ಹೇಗಿತ್ತು ಎಂದರೆ, ಅಮ್ಮ ಮಾಡಿದಷ್ಟು ರುಚಿ–ಶುಚಿ ಇಲ್ಲದ್ದಿದ್ದರೂ, ಹೋಟೆಲ್‌ನಷ್ಟು ಆಯಿಲ್‌ ಫುಡ್‌ ಆಗಿದ್ದಿಲ್ಲ. ಅದು ಅಲ್ಲದೇ ಅನ್ನಕ್ಕೆ (ಆಹಾರಕ್ಕೆ) ಅಡುಗೆ ಸೋಡಾ ಬಳಸುತ್ತಿದ್ದಿಲ್ಲ. ನಾವಿದ್ದದ್ದು ಪಿ.ಜಿಯಲ್ಲಿ 65 ಜನ. ಪಿ.ಜಿ. ಮಾಲೀಕರ ಪತ್ನಿಯೇ ಅಡುಗೆ ಮಾಡುತ್ತಿದ್ದರು. ಯಾರಿಗಾದರೂ ಜ್ವರ ಇಲ್ಲವೇ ಆರಾಮ ಇಲ್ಲದಿದ್ದರೆ ಆರೈಕೆ ಮಾಡುವ ಮೂಲಕ ಕುಟುಂಬದ ಸದಸ್ಯರಂತೆ ಕಾಣುತ್ತಿದ್ದರು. 

ಇಡ್ಲಿ, ದೋಸೆ, ಚಿತ್ರನ್ನ, ಪಲಾವ್‌ ಹೆಚ್ಚಾಗಿ ರೈಸ್‌ ಐಟಂ ಅಡುಗೆಯೇ ಹೆಚ್ಚು. ಇಡ್ಲಿ–ದೋಸೆ ಜೊತೆ ಕೊಡುತ್ತಿದ್ದ ಚಟ್ನಿ ಮಾತ್ರ ಹುಸೇನ್‌ ಬೋಲ್ಟ್‌ ಮತ್ತು ಪಿ.ಟಿ ಉಷಾಗಿಂತಲೂ ವೇಗವಾಗಿ ಓಡುತ್ತಿತ್ತು. ಅಂದರೆ, ಚಟ್ನಿ ಅಷ್ಟು ನೀರಾಗಿತ್ತು. ರುಚಿ ಅಷ್ಟಕಷ್ಟೇ. ಗುರುವಾರ ಫ್ರೈಡ್‌ ರೈಸ್‌ ಮತ್ತು ಎಗ್‌ರೈಸ್‌. ಭಾನುವಾರವಂತೂ ರಾತ್ರಿ ಊಟಕ್ಕೆ ಚಿಕನ್‌ ಫಿಕ್ಸ್‌. ಮೊದಲ ಸಾಲಲ್ಲೇ ಕ್ಯೂ. 6–8 ಚಿಕನ್‌ ಪೀಸ್‌, ಜೊತೆಗೆ ಪಲಾವ್‌. ಹೊಟ್ಟೆ ತುಂಬಾ ಊಟ ಮಾಡಿ, ಇನ್ನೊಮ್ಮೆ ಏನಾದ್ರೂ ಚಿಕನ್‌ ಪೀಸ್‌ ಸಿಗುತ್ತವೇನೋ ಎಂದು ನೋಡುತ್ತಿದ್ದೆವು. ಪಿ.ಜಿ. ಮಾಲೀಕರ ಪತ್ನಿ ಇಲ್ಲ ಎನ್ನದಂತೆ ಮತ್ತೆ ಒಂದೆರೆಡು ನೀಡುತ್ತಿದ್ದರು.

ಪಿ.ಜಿ ಕಟ್ಟಡದ ಅಕ್ಕ–ಪಕ್ಕದಲ್ಲಿ ದೊಡ್ಡ ಕಟ್ಟಡಗಳಿದ್ದರಿಂದ ನಾನಿದ್ದ ಕೊಠಡಿಯಲ್ಲಿ ಗಾಳಿ–ಬೆಳಕು, ಮೊಬೈಲ್‌ ಸಿಗ್ನಲ್‌ ಸಹ ಬರುತ್ತಿದ್ದಿಲ್ಲ. ಪಿ.ಜಿ.ವೈ–ಫೈ ನಮಗೆ ಆಧಾರ. ತಿಗಣೆ–ಜಿರಳೆ, ಹೆಗ್ಗಣಗಳೇ ನಮ್ಮ ಸ್ನೇಹಿತರು. ರೂಂ ಮಾಡಬೇಕೆಂದರೆ ಬೆಂಗಳೂರಂತಹ ಮಹಾನಗರದಲ್ಲಿ ಮನೆ ಬಾಡಿಗೆಗಿಂತ ಮುಂಗಡ ಶುಲ್ಕವೇ (ಅಡ್ವಾನ್ಸ್‌) ಹೆಚ್ಚು. ಅದಕ್ಕೆ ಸುಮ್ಮನಾಗಿ ಬಿಟ್ಟೆವು. ನಮ್ಮ ಪಿ.ಜಿ ಮಾಲೀಕರು ಸಹ ಎಂದಿಗೂ ಬಾಡಿಗೆಗಾಗಿ ನಮಗೆ ಪೀಡಿಸಿದವರಲ್ಲ. ಅವರಿಗಿಂತಲೂ ಮೊದಲೇ ನಾವೇ ಕೊಡುತ್ತಿದ್ದೆವು. ಕೆಲವೊಮ್ಮೆ ತಡವಾದರೂ ಸುಮ್ಮನೇ ಇರುತ್ತಿದ್ದರು.

ಕೊಠಡಿಯಲ್ಲಿದ್ದವರ ಜೊತೆ ಕೆಲವರ ನಡುವೆ ಉತ್ತಮ ಬಾಂಧವ್ಯ ಇದ್ದರೂ, ಇನ್ನೂ ಕೆಲವರ ಜೊತೆ ಸಣ್ಣ–ಪುಟ್ಟ ಭಿನ್ನಾಭಿಪ್ರಾಯಗಳು ಸಹ ಇದ್ದವು. ಆದ್ರೂ ಯಾರು ಸಹ ಹೆಚ್ಚು ದಿನ ಅಲ್ಲಿ ನೆಲೆಸುತ್ತಿದ್ದಿಲ್ಲ. ತುಂಬಾ ಪರಿಚಯವಾದವರಿಗೆ ಪಿ.ಜಿ ಖಾಲಿ ಮಾಡಿ ಹೋಗುವಾಗ ನಾನ್‌ ವೆಜ್‌ ಊಟ ಮಾಡಿ ಕಳಿಸೋದು ನಮ್ಮ ರೂಢಿಯಾಗಿ ಬಿಟ್ಟಿತು. ದಿನೇದಿನೇ ಹೊಸಬರ ಆಗಮನ, ಪರಿಚಯ. ಎಂದಿಗೂ ನಮಗೆ ಪಿ.ಜಿಯಲ್ಲಿ ಅಸುರಕ್ಷತೆಯೇ ಭಾವನೆಯೇ ಕಂಡಿದ್ದಿಲ್ಲ. ಬೇರೆ ಬೇರೆ ಪಿ.ಜಿಗಳು ಹೇಗಿವೆ, ಅಲ್ಲಿನ ಸೌಕರ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಬೇರೆ ಪಿ.ಜಿಗಳಿಗೆ ಹೋಗಿ ನೋಡಿದ ನಮಗೆ ನಮ್ಮ ಪಿ.ಜಿಯೇ ಲೇಸು ಎನಿಸಿತು. ಬೇಸಿಗೆ ಸಮಯದಲ್ಲಿ ಮಾತ್ರ ನೀರಿನ ಸಮಸ್ಯೆ ನಮಗೆ ಕಾಣುವಂತಾಯಿತು. 

ಆದರೆ, ಇತ್ತೀಚೆಗೆ ಬೆಂಗಳೂರಿನ ಪೇಯಿಂಗ್ ಗೆಸ್ಟ್‌ಯೊಂದರಲ್ಲಿ ನಡೆದ ಕೊಲೆ ಪ್ರಕರಣವು ಪಿ.ಜಿಗಳ ಸುರಕ್ಷತೆ ಬಗ್ಗೆ ನನಗೂ ಅನುಮಾನ ಹುಟ್ಟಿಸಿದೆ. ಪಿ.ಜಿ ಯಲ್ಲಿನ ಅವ್ಯವಸ್ಥೆಯ ಬಗ್ಗೆ ವಿಮರ್ಶೆ ಮಾಡಿದ್ದಕ್ಕೆ ಪಿ.ಜಿ ಮಾಲೀಕನೊಬ್ಬ ಯುವತಿಗೆ ಕೊಟ್ಟ ಕಿರುಕುಳದಿಂದ ಆ ಯುವತಿ ಪೊಲೀಸ್ ಠಾಣೆ ಮೇಟ್ಟಿಲೇರುವಂತಾಯಿತು. ಇಂತಹ ಪ್ರಕರಣಗಳಿಂದ ಎಚ್ಚೆತ್ತ ನಗರ ಪೊಲೀಸ್ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಪೇಯಿಂಗ್ ಗೆಸ್ಟ್ ಉದ್ಯಮಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಹೊರಡಿಸಿದೆ. 

ಪೇಯಿಂಗ್ ಗೆಸ್ಟ್‌ಗಳು ಶಿಕ್ಷಣ, ಉದ್ಯೋಗ ಸೇರಿದಂತೆ ಅನೇಕ ಕೆಲಸಗಳಿಗೆ ಅರಸಿ ಬೆಂಗಳೂರಿಗೆ ಬರುವ ಅದೆಷ್ಟೋ ಜನರ ಪಾಲಿಗೆ ಆಶ್ರಯ ತಾಣಗಳಾಗಿವೆ. ಕಲಿಕೆಯ ಕೇಂದ್ರಗಳಾಗಿವೆ. ಇಂತಹ ತಾಣಗಳ ಸುರಕ್ಷತೆಗೆ ಈ ಕ್ರಮಗಳು ಜಾರಿಯಾದರೆ ಮಾತ್ರ ಅಲ್ಲಿನವರೆಗೆ ರಕ್ಷಣೆ ಸಾಧ್ಯ. ಸರ್ಕಾರವು ಸಹ ಇದರತ್ತ ಗಮನ ಹರಿಸಬೇಕು. 

ಪಿ.ಜಿ. ಬಾಡಿಗೆ ಎಷ್ಟು?:


ಪೇಯಿಂಗ್ ಗೆಸ್ಟ್‌ಗಳು ಇರುವ ಪ್ರದೇಶ, ಅವು ನೀಡುವ ಸೌಕರ್ಯ, ಊಟ, ಕೊಠಡಿಯಲ್ಲಿ ಎಷ್ಟು ಜನ ಇರಬೇಕೆಂಬುದು (ಷೇರಿಂಗ್) ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಬಾಡಿಗೆ ದರ ಇರುತ್ತದೆ. ಸಾಮಾನ್ಯವಾಗಿ ಕನಿಷ್ಠ ₹5 ಸಾವಿರದಿಂದ ಆರಂಭವಾಗುತ್ತದೆ. ಊಟ ಬೇಡವೆಂದರೆ ಇನ್ನು ಕಡಿಮೆ ಇದೆ. ಮುಂಗಡ ಶುಲ್ಕವೂ ಇರುತ್ತದೆ. ಗಂಡು-ಹೆಣ್ಣಿಗೆ ಪ್ರತ್ಯೇಕವಾದ ಪೇಯಿಂಗ್ ಗೆಸ್ಟ್‌ಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.