ಬಹಳ ವರ್ಷಗಳ ಹಿಂದಿನ ಮಾತು. ಶ್ರೀನಿವಾಸಪುರದ ಮಾವಿನ ತೋಪುಗಳಲ್ಲಿ ನಾನು ವಿಶ್ವನ ಜೊತೆ ಓಡಾಡುವಾಗ ಒಂದು ಆಶ್ಚರ್ಯ ಕಂಡಿದ್ದೆ. ಶ್ರೀನಿವಾಸಪುರ ಮಾವಿನಹಣ್ಣುಗಳಿಗೆ ಬಹಳ ಹೆಸರುವಾಸಿ. ಗೊಂಚಲು ಗೊಂಚಲು ಫಸಲು ಪ್ರತೀ ಮರದಿಂದಲೂ ಜೋತು ಬಿದ್ದಿರುತ್ತಿತ್ತು. ಆದರೆ, ಒಂದು ಮರದಲ್ಲಿ ಬರೀ ಮೂರು ಕಾಯಿಗಳು ಮಾತ್ರ ಇದ್ದವು. ಯಾಕಿದು ಎಂದು ಸಂಶೋಧನೆ ಶುರುವಾಯಿತು. ಕಡೆಗೂ ಫಲಿತಾಂಶ ಪ್ರಕಟವಾಯಿತು. ಎಲ್ಲಾ ಮರಗಳೂ ಸಾವಿರಾರು ಕಾಯಿ ಬಿಟ್ಟಿವೆ. ಒಂದು ಮರದಲ್ಲಿ ಮಾತ್ರ ಬರೀ ಮೂರು ಕಾಯಿ! ಕಾರಣ ಫ್ಯಾಮಿಲಿ ಪ್ಲಾನಿಂಗ್ ಸ್ಲೋಗನ್‍ನ ಬೋರ್ಡನ್ನು ಮರಕ್ಕೆ ಹೊಡೆದಿದ್ದಾರೆ. ‘ಒಂದು ಎರಡು ಬೇಕು, ಮೂರು ಸಾಕು!’
‘ಮರಕ್ಕೆ ಅರ್ಥ ಆಗಿದೆ, ಮನುಷ್ಯರಿಗೆ ಯಾಕೆ ಅರ್ಥ ಆಗ್ತಿಲ್ಲ’ ಎಂದು ವಿಶ್ವನನ್ನು ಪ್ರಶ್ನೆ ಮಾಡಿದ್ದೆ.
‘ನಮ್ಗೂ ಅರ್ಥ ಆಗುತ್ತೆ. ಆದ್ರೆ ಓಟು ಬೇಕಾದಾಗ ನಾವು ಜನಗಳ ಪರವಾಗೇ ಮಾತಾಡ್ಬೇಕು.’
‘ಅಲ್ಲ ವಿಶ್ವ, ಎರಡು ಡೆಲಿವರಿಗಳ ನಡುವೆ ಅಂತರ ಇರಲಿ ಅಂತ ಆ ಕಾಲದಲ್ಲಿ ಹೇಳ್ತಾ ಇದ್ರು. ನೆನಪಿದೆಯಾ?’
‘ಹೌದು, ನೆನಪಿದೆ’ ಎಂದ ವಿಶ್ವ, ‘ನನ್ನ ಫ್ರೆಂಡೊಬ್ಬನಿಗೆ ವರ್ಷದಲ್ಲೇ ಎರಡು ಡೆಲಿವರಿಗಳಾದವು’ ಎಂಬ ಆತಂಕಕಾರಿ ಸುದ್ದಿ ಹೇಳಿದ.
‘ಅದ್ಯಾಕೆ ಅಷ್ಟು ಸ್ಪೀಡು?’
ದೇಶ ಬೆಳೆಸೋಕೆ! ಮಕ್ಕಳೆಂದ್ರೆ ಅವನಿಗೆ ಪ್ರಾಣ. ‘ಮಕ್ಕಳಿರಲವ್ವ ಮನೆ ತುಂಬಾ’ ಅಂತ ನಿತ್ಯ ಹಾಡ್ತಾ ಇದ್ದ. ಬೇಡಾಂದ್ರೂ ಮಕ್ಕಳಾದ್ವು. ನಾನು ಆ ಮಹಾ ತಂದೇನ ಕೇಳ್ದೆ,
‘ಅಲ್ಲಪ್ಪಾ, ಎರಡು ಡೆಲಿವರಿ ನಡುವೆ ಅಂತರ ಇರ್ಬೇಕು ಅಂತ ಸರ್ಕಾರ ಹೇಳುತ್ತೆ. ಯಾಕೆ ಹೀಗೆ ಮಾಡ್ದೆ?’
‘ಅಂತರ ಇದೆ’ ಅಂತ ಅವನು ವಾದ ಮಾಡ್ದ.
‘ಎಲ್ಲಿದೆ ಅಂತರ?’
‘ಯಾಕಿಲ್ಲ? ಒಂದು ಡೆಲಿವರಿ ಆಗಿದ್ದು ಕೋಲಾರದಲ್ಲಿ, ಇನ್ನೊಂದು ಡೆಲಿವರಿ ಆಗಿದ್ದು ಬೀದರ್‌ನಲ್ಲಿ. ಎರಡು ಡೆಲಿವರಿ ಕ್ಷೇತ್ರಗಳ ನಡುವೆ 700 ಕಿಲೊಮೀಟರ್ ಅಂತರ ಇದೆ’ ಅಂದ.
‘ಆದರೂ ಕಾರ್ಯಕ್ಷೇತ್ರ ಒಂದೇ ತಾನೇ?’ ಎಂದಾಗ ಅವನು ಸೈಲೆಂಟಾಗಿದ್ದ.
ಕಾಲೇಜು ದಿನಗಳಲ್ಲಿ ನಾನು ಮತ್ತು ವಿಶ್ವ ಒಟ್ಟಿಗೆ ಓದ್ತಾ ಇದ್ವಿ. ನಾನು ಡಿಗ್ರಿ ಪಾಸಾಗಿ ಬ್ಯಾಂಕಲ್ಲಿ ಗುಮಾಸ್ತ ಆದೆ. ವಿಶ್ವ ಡಿಗ್ರಿ ಫೈಲಾಗಿ ಸಹಕಾರಿ ಬ್ಯಾಂಕುಗಳಿಗೆ ಚೇರ್‍ಮನ್ ಆದ.
ಯಾವುದೋ ಒಂದು ಶುಭ ಗಳಿಗೆಯಲ್ಲಿ ಯಾವುದೋ ಒಂದು ತರಲೆ ಕ್ಷೇತ್ರದಿಂದ ತಮಾಷೆಗಾಗಿ ಚುನಾವಣೆಗೆ ನಿಂತ. ಎರಡು ಗೂಳಿಗಳ ನಡುವೆ ಒಂದು ಜಿಂಕೆ ಎಂದು ಜನ ಆಡಿಕೊಂಡರು. ಗೂಳಿಗಳು ಕಾಳಗದಲ್ಲಿ ಸೆಣಸಾಡಿ ಹಣೆ ಬಡಿದುಕೊಂಡು ಸೋತಾಗ ಜಿಂಕೆಗೆ ಸುಲಭ ಗೆಲುವಾಯಿತು. ವಿಶ್ವ ಎಂ.ಎಲ್.ಎ. ಆದ. ಮತ್ತೆ ಹಿಂತಿರುಗಿ ನೋಡಲಿಲ್ಲ. ರಾಜಕಾರಣಿಯಾದವ ಹಿಂತಿರುಗಿ ನೋಡಬಾರದು ಎಂಬ ಶಾಸ್ತ್ರವಿದೆ. ವಿಶ್ವನಿಗೆ ದೇಶಸೇವೆಯೇ ಈಶ ಸೇವೆ ಆಯಿತು. ಸರ್ಕಾರಿ ಕೆಲಸ (ದೇವರೇ ಬಂದು ಮಾಡಬೇಕಾದ) ದೇವರ ಕೆಲಸ ಅಂತ ವಿಧಾನಸೌಧದ ಕೋಟೆ ಬಾಗಿಲ ಬಳಿ ಓದಿದ್ದನ್ನು ಆಚರಣೆಗೆ ತಂದ.
ನಮ್ಮ ದೇಶದ ಬಗ್ಗೆ ಕೇಳಿದೆ. ಜನಸಂಖ್ಯೆಯಲ್ಲಿ ನಮ್ಮದು ಅತ್ಯಂತ ಶ್ರೀಮಂತ ರಾಷ್ಟ್ರ ಎಂದು ಹೆಮ್ಮೆ ಪಟ್ಟ.
ವಿಶ್ವನದು ಮಲೆನಾಡು. ಸಾಕಷ್ಟು ಅಡಿಕೆ ತೋಟಗಳ ತಲಾಂತರ ಆಸ್ತಿ ಅಲ್ಲಿತ್ತು. ಹತ್ತು ಹನ್ನೆರಡು ಕುಟುಂಬಗಳು ಜಂಟಿಯಾಗಿ ವಾಸ ಮಾಡಿ ಜಾಯಿಂಟ್ ಫ್ಯಾಮಿಲಿಗೆ ಉದಾಹರಣೆಯಾಗಿದ್ದವು. ಅಲ್ಲಿದ್ದ ಮಕ್ಕಳ ಸಂಖ್ಯೆ ಪ್ರಾರಂಭಕ್ಕೆ ಮೂವತ್ತೈದಿತ್ತು. ಅನಂತರ ಮಕ್ಕಳ ಸಂಖ್ಯೆ ಬೆಳೆಯುತ್ತಾ ಹೋಯಿತು. 70 ಮಕ್ಕಳನ್ನು ಸಾಕುವುದು ಅಜ್ಜನಿಗೆ ಕಷ್ಟವಾಯಿತು. ಅನಂತರ ಕುಟುಂಬದಲ್ಲಿ ಮಕ್ಕಳ ಸಂಖ್ಯೆ 110ಕ್ಕೆ ಏರಿತು. ಮಕ್ಕಳಿಗೆ ಮಲಗಲು ಕಷ್ಟವಾಗುತ್ತಿತ್ತು.
ಕಡೆಗೆ ನೂರೈವತ್ತು ಸಂಖ್ಯೆ ದಾಟಿದಾಗ ಆಹಾರಕ್ಕಾಗಿ ಜಗಳ, ಜಾಗಕ್ಕಾಗಿ ಗಲಾಟೆ, ಹಿಂಸಾಚಾರ ಶುರುವಾಯಿತು. ಕೂಡು ಕುಟುಂಬ ನಾಲ್ಕು ಪಟ್ಟು ಬೆಳೆದು ಅಲ್ಲೋಲ ಕಲ್ಲೋಲ ಎಬ್ಬಿಸಿತು. ಯಾಕೆ ಹೀಗೆ ಆಗ್ತಿದೆ ಎಂದು ನಾನು ವಿಶ್ವನನ್ನು ಪ್ರಶ್ನೆ ಮಾಡಿದ್ದೆ.
‘ಮನೆಯ ಸೈಜ್ ಅಷ್ಟೇ ಇದೆ. ಜಮೀನಿನ ವಿಸ್ತೀರ್ಣ ಅಷ್ಟೇ ಇದೆ. ಬರುವ ಆದಾಯಾನ ಎಷ್ಟು ಮಂದಿಗೆ ಹಂಚೋಕೆ ಸಾಧ್ಯ? 35 ಇದ್ದ ಮಕ್ಕಳು 150 ಮಂದಿ ಆದರೆ ತಟ್ಟೆಯಲ್ಲಿ ಊಟ ಬಡಿಸಲಾಗೊಲ್ಲ. ದೊನ್ನೆಯಲ್ಲಿ ಪ್ರಸಾದ ನೀಡಬಹುದು ಅಷ್ಟೆ’ ಎಂದ.
ಇದೇ ಸಂದರ್ಭಕ್ಕೆ ನಾನು ಕಾಯುತ್ತಿದ್ದೆ.
‘ನಿಜ ವಿಶ್ವ, ನಿಮ್ಮ ಮನೆ ಬೇರೆ ಅಲ್ಲ, ನಮ್ಮ ದೇಶ ಬೇರೆ ಅಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಜನಸಂಖ್ಯೆ 35 ಕೋಟಿ ಇತ್ತು. ಇವತ್ತು 150 ಕೋಟಿ ಆಗಿದೆ. ಭಾರತದ ವಿಸ್ತೀರ್ಣ ಅಷ್ಟೇ ಇದೆ. ಕೃಷಿ ಜಮೀನು ಅಷ್ಟೇ ಇದೆ. ಮಕ್ಕಳನ್ನು ಸಾಕೋದು ಭಾರತಾಂಬೆಗೆ ಕಷ್ಟ ಆಗ್ತಿಲ್ವಾ?’ ಎಂದೆ.
‘ಆದ್ರೆ ಜನಶಕ್ತಿ ಬೆಳೀತಿದೆಯಲ್ಲ? ಎಲೆಕ್ಷನ್ ಬೂತುಗಳು ಜಾಸ್ತಿ ಆಗ್ತಿವೆಯಲ್ಲ? ತಾಲ್ಲೂಕುಗಳು, ರಾಜ್ಯಗಳು ಜಾಸ್ತಿ ಆಗ್ತಿವೆಯಲ್ಲ, ಇದು ದೇಶದ ಬೆಳವಣಿಗೆಯ ಸಂಕೇತ ಅಲ್ವಾ?’ ಎಂದ.
‘ನಿಮ್ಮ ಕೂಡು ಕುಟುಂಬದಲ್ಲಿ 150 ಮಕ್ಕಳಾದಾಗ ಮಲಗಲು ಜಾಗ ಸಿಗಲಿಲ್ಲ ಅಂತ ನೀನೇ ಹೇಳ್ದೆ. ಆ ಪರಿಸ್ಥಿತಿ ಭಾರತಕ್ಕೆ ಬಂದಿದೆ ಅಂತ ನಿನ್ಗೆ ಅನ್ಸಿಲ್ವಾ? ಎದೆ ಮುಟ್ಕೊಂಡು ಹೇಳು’ ಎಂದೆ.
ವಿಶ್ವ ಪ್ರಾಮಾಣಿಕವಾಗಿ ಒಪ್ಪಿಕೊಂಡ.
‘ಕಿಟಕಿ ಬಾಗಿಲು ಹಾಕು. ಸತ್ಯ ಹೇಳ್ತೀನಿ. ನೀನು ಹೇಳ್ತಾ ಇರೋದು ನಿಜ. ಇಷ್ಟು ಪ್ರಜೆಗಳನ್ನು ನಮ್ಮಿಂದ ಸಾಕೋಕಾಗ್ತಾ ಇಲ್ಲ’.
‘ದೇಶದ ಪ್ರಾಬ್ಲಂ ನಿಂಗೆ ಅರ್ಥ ಆಗಿದೆ. ಹಾಗಿದ್ರೆ ನೀನು ರಾಜಕಾರಣಿ ಆಗಿ ಓಪನ್ ಆಗಿ ಯಾಕೆ ಸ್ಟೇಟ್‍ಮೆಂಟ್ ಕೊಡ್ತಾ ಇಲ್ಲ? ಜನಸಂಖ್ಯೆ ಕಡಿಮೆ ಮಾಡಿ ಅಂತ ಕರೆ ಯಾಕೆ ನೀಡ್ತಿಲ್ಲ?’ ಎಂದು ದಬಾಯಿಸಿದೆ.
‘ಎಮರ್ಜೆನ್ಸಿ ಟೈಮಲ್ಲಿ ಸಂಜಯ್‍ಗಾಂಧಿ ಮಕ್ಕಳ ಸಂಖ್ಯೆ ಕಡಿಮೆ ಮಾಡಿ ಅಂದ್ರು. ಒಳ್ಳೇ ಮಾತದು. ಸಂಜಯ್‍ಗಾಂಧಿ ಇದ್ದಿದ್ರೆ ನಮ್ಮ ಜನಸಂಖ್ಯೆ ಇವತ್ತು ನೂರು ಕೋಟಿ ದಾಟ್ತಾ ಇರ್ಲಿಲ್ಲ. ಆದ್ರೆ ಆವತ್ತು ಪರಿಣಾಮ ಏನಾಯ್ತು? ಅವರು ಮಾತಾಡಿ ಸೋತರು. ಅವರ ಮಾತಿನಿಂದ ಪಾರ್ಟಿಗೆ ತೊಂದ್ರೆ ಆಯ್ತು. ಆದ್ದರಿಂದ ರಾಜಕಾರಣಿಗಳಾದ ನಾವು ಒಂದು ನಿರ್ಧಾರಕ್ಕೆ ಬಂದಿದ್ದೀವಿ. ಮಕ್ಕಳು ಯಾರು ಎಷ್ಟೇ ಮಾಡ್ಕೊಂಡ್ಹೋಗ್ಲಿ, ಅದು ಅವರವರ ತಾಖತ್ತು. ನಮ್ಗೆ ಜಾಸ್ತಿ ಓಟು ಸಿಕ್ರೆ ಸಾಕು’.
‘35 ಕೋಟಿ ಮಕ್ಕಳಿದ್ದಾಗ ಭಾರತಾಂಬೆ ಆರಾಮವಾಗಿ ಎಲ್ಲರನ್ನೂ ಸಾಕುತ್ತಿದ್ದಳು. ಅನಂತರ ಪ್ರತಿ ವರ್ಷ ನಾವು ಆಸ್ಟ್ರೇಲಿಯಾ ದೇಶವನ್ನ ನಮ್ಮಲ್ಲಿ ಹುಟ್ಟು ಹಾಕುತ್ತಿದ್ದೇವೆ’ ಎಂದೆ.
‘ನಿಜ, ಪ್ರತಿವರ್ಷ ಆಸ್ಟ್ರೇಲಿಯಾದ ಜನಸಂಖ್ಯೆಯಷ್ಟು ಮಂದಿ ಭಾರತದಲ್ಲಿ ಹುಟ್ತಿದ್ದಾರೆ. ಆಸ್ಟ್ರೇಲಿಯಾ ಜನಸಂಖ್ಯೆ ಇಂದಿಗೂ ಎರಡೂವರೆ ಕೋಟಿ ಮಾತ್ರ’
‘ಆಸ್ಟ್ರೇಲಿಯಾ ಇವತ್ತು ಅತ್ಯಂತ ಶ್ರೀಮಂತ ರಾಷ್ಟ್ರ. ಅಲ್ಯೂಮಿನಿಯಂ ಮತ್ತು ಚಿನ್ನಕ್ಕೆ ಫೇಮಸ್ ಆಗಿದೆ. ಅದು ಎಲ್ಲರಿಗೂ ಗೊತ್ತು. ಆಸ್ಟ್ರೇಲಿಯಾ ವಿಸ್ತೀರ್ಣದಲ್ಲಿ ಭಾರತಕ್ಕಿಂತ ಎರಡೂವರೆ ಪಟ್ಟು ದೊಡ್ಡದಾಗಿದೆ. ಭಾರತದ ಪೂರ್ತಿ ಜನಸಂಖ್ಯೇನ ಆಸ್ಟ್ರೇಲಿಯಾಗೆ ವರ್ಗಾವಣೆ ಮಾಡಿದ್ರೆ ಏನಾಗುತ್ತೆ ಅಂತ ಕಲ್ಪಿಸಿಕೋ’
‘ಕಾಂಗರೂ ನಾಡು ತಬ್ಬಿಬ್ಬಾಗಿ ನಡುಗಿಹೋಗುತ್ತೆ. ಹೊಟ್ಟೆಗೆ ಆಹಾರ ಇಲ್ದೆ ಜನ ಸಾಯ್ತಾರೆ’ ಎಂದ.
‘ಭಾರತದಲ್ಲೂ ಅದೇ ಪರಿಸ್ಥಿತಿ ಆಗ್ತಿದೆಯಲ್ಲ? ಅಪಾಯದ ಗಂಟೆ ಬಾರಿಸ್ತಿದೆ. ಇಂಥ ವಿಷಮ ಪರಿಸ್ಥಿತೀಲಿ ರಾಜಕಾರಣಿಗಳು ದೇಶದ ಹಿತ ಕಾಪಾಡೋ ಮನಸ್ಸು ಮಾಡ್ಬೇಕು. ಚೀನಾ ದೇಶ ಕುಟುಂಬಕ್ಕೆ ಒಂದೇ ಮಗು ಅನ್ನೋ ನಿಯಮಾನ ಪಾಲಿಸ್ತು. ಅಲ್ಲಿನ ಪಾಪುಲೇಷನ್ ಗ್ರೋತು ಜೀರೋಗೆ ಇಳಿದಿತ್ತು. ನಾವ್ಯಾಕೆ ಕೆಲವು ವರ್ಷ ಅದನ್ನು ಮಾಡಬಾರ್ದು?’ ಅಂದೆ.
‘ನಿನಗ್ಗೊತ್ತಾಗೊಲ್ಲ. ಒಂದ್ಸಲ ನೀನು ಎಂ.ಎಲ್.ಎ. ಆಗು. ಅಧಿಕಾರದಲ್ಲಿ ನಾವಿರೋವರೆಗೂ ಆರಾಮವಾಗಿದ್ರೆ ಸಾಕು. ಮುಂದೆ ಬರೋ ಸರ್ಕಾರ ಜನಸಂಖ್ಯೆ ನಿಯಂತ್ರಣ ಮಾಡಲಿ. ನಮಗೇಕೆ ಆ ತಲೆನೋವು?’ ಎಂದು ಮಾತು ಮುಗಿಸಿದ.
ಅನ್ನ ಬೆಂದಿದೆ ಎನ್ನಲು ಒಂದೆರಡು ಅಗುಳು ಹಿಸುಕಿ ನೋಡಿದರೆ ಸಾಕು. ವಿಶ್ವನನ್ನು ಹಿಸುಕಿದೆ. ರಾಜಕಾರಣಿಗಳ ಕೈಗೆ ಸಿಕ್ಕಿ ಬಿದ್ದಿರುವ ಭಾರತಾಂಬೆ ಹೇಗೆ ನಲುಗುತ್ತಿದ್ದಾಳೆಂಬುದು ಅರ್ಥವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.