‘ಲೋಕದ ಕಾಳಜಿ ಮಾಡುತ್ತೀನಂತಿ ನಿನಾಗ್ಯಾರು ಬ್ಯಾಡಂತಾರೂ ಮಾಡಪ್ಪ ಚಿಂತಿ’ ಎಂದು ಸಂತ ಶಿಶುನಾಳ ಶರೀಫರು ಹೇಳಿ ಕಾಲಗಳೇ ಉರಳಿವೆ. ಹಾಗಿದ್ದರೆ ಲೋಕದ ಕಾಳಜಿ ಮಾಡುವವರು ಯಾರು? ಯಾರು ಮಾಡಬೇಕು? ಸರಿಯಾಗದ ಲೋಕದ ಕುರಿತು ನಿಲ್ಲದ ಕಾಳಜಿ ಮಾಡಲು ಸಾಧ್ಯವೇ, ಖಂಡಿತಾ ಇಲ್ಲ. ನಾವು! ನಮ್ಮ ಮನೆ! ಮನೆಯ ಕಾಂಪೌಂಡ್ ಬಿಟ್ಟು ಅದರಾಚೆಗೆ ಯೋಚನೆ ಮಾಡುವುದಿಲ್ಲ. ನಮ್ಮ ಮನೆ ಕಸ ತೆಗೆದು, ಪಕ್ಕದ ಮನೆ ಕಾಂಪೌಂಡ್‌ಗೆ ತಾಗುವಂತೆ ಒರಗಿಸಿ ಬರೋ ಜನ ನಾವು ಬೇರೆಯವರ ಕುರಿತು ಚಿಂತೆ ಮಾಡುತ್ತೇವೆಂದರೆ ನಂಬದ ಮಾತು.
ಹಾಗೆ ಜಗದಲ, ಮುಗಿಲಗಲ ಎಂದು ಚಿಂತೆ ಮಾಡುವವರು ತೀರಾ ವಿರಳ. ಆ ವಿರಳತೆಗೆ ಬಸವಣ್ಣ, ಶರೀಫರು, ಕುವೆಂಪು ಮುಂತಾದ ದಾರ್ಶನಿಕರೇ ಸಾಕ್ಷಿ. ಮನೆ ಮನೆಯ ಕಸಗುಡಿಸಲು ನಾವಿದ್ದೇವೆ. ಜಗದ ಕಸ ತೆಗೆಯಲು ಯಾರು ಬರುತ್ತಾರೆ. ಹಾಗೊಂದು ವೇಳೆ ಬಂದರೆ ಅವರನ್ನು ಸಹಿಸುವ ಮನುಷ್ಯತ್ವ ನಮ್ಮಲ್ಲಿದೆಯೇ? ಅದೂ ಇಲ್ಲೆ!. ಸರ್ವೆ ಜನಾ ಸುಖಿನೋ ಭವಂತು. ಎಂಬ ಮಾತಿನನ್ವಯ ಎಷ್ಟು ಜನರು ಎಲ್ಲರ ಸುಖವನ್ನು ಬಯಸುತ್ತಾರೆ?. ತೀರಾ ಕಡಿಮೆ. ಸ್ವಹಿತ, ಸ್ವಕಾರ್ಯ ಇವುಗಳೇ ತುಂಬ ತುಳುಕಾಡುತ್ತವೆ.
ಸರತಿ ಸಾಲಿನಲ್ಲಿ ನಿಂತಿದ್ದಾಗ ಯಾರಾದರೂ ಸುಸ್ತಾಗಿ ತಲೆತಿರುಗಿ ಬಿದ್ದರೆ; ಬಿದ್ದರೆ ಬೀಳಲಿ ನಮ್ಮ ಸರತಿ ಇನ್ನೂ ಎರಡು ಹೆಜ್ಜೆ ಮುಂದೆ ಹೋಯಿತು ಎನ್ನುವವರೇ ಹೆಚ್ಚು. ಯಾಕೇ ಹೀಗೆ? ಅಯ್ಯೋ ಜಗದ ಬಗ್ಗೆ ಮಾತನಾಡುವುದಿರಲಿ. ನಮ್ಮ ಮನೆಯಲ್ಲಿಯೇ ಅವರವರ ವಸ್ತು ಎತ್ತಿಟ್ಟುಕೊಂಡರೆ, ಬೇರೆಯವರ ಕೆಲಸ ಹಗುರವಾದಂತೆ.
ಈ ಲೋಕದಲ್ಲಿ ಇದ್ದೇವೆ ಅಂದ ಮೇಲೆ ಗಾಳಿ ನೀರು, ಅನ್ನ, ಅವಕಾಶ ಬಳಸಿಕೊಳ್ಳುತ್ತೇವೆ ಎಂದ ಮೇಲೆ ನಾವು ಪ್ರತಿಯಾಗಿ ಲೋಕದ ಬಗ್ಗೆ ಕಾಳಜಿ ತೋರಬೇಕಲ್ಲವೆ. ಈ ನಡುವೆ ಆದ್ಯವಚನಕಾರ ದಾಸಿಮಯ್ಯನ ವಚನದ ಸಾಲುಗಳು ನೆನಪಾಗುತ್ತವೆ. ‘ಇಳೆ ನಿಮ್ಮದಾನ. ಬೆಳೆ ನಿಮ್ಮ ದಾನ. ಸುಳಿದು ಸೂಸುವ ವಾಯು ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯಂ ಹೊಗುಳುವ ಕುನ್ನಿಗಳನೇನೆಂಬೆ ಕಾಣ ರಾಮನಾಥ’ ನಾವು ಮಾಡುವುದೇ ಹಾಗೆ. ಅಟ್ಟಕ್ಕೆ ಹತ್ತಿದ ಮೇಲೆ ಏಣಿ ಒದೆಯುವ, ಹೊಳೆ ದಾಟಿದ ಮೇಲೆ ಅಂಬಿಗನನ್ನು ತಿರಸ್ಕರಿಸುವ ಮನೋಭಾವದವರು.
ಇಲ್ಲಿ ಹುಟ್ಟಿದ್ದೇವೆ, ಇಲ್ಲಿಯೇ ಚಂದದ ಬದುಕು ಸಾಗಿಸುತ್ತಿದ್ದೇವೆ ಎಂದ ಮೇಲಾದರೂ ಬೇರೆಯವರ ಬಗ್ಗೆ ಕಿಂಚಿತ್ ಯೋಚನೆ ಮಾಡಬೇಕು ಅಲ್ಲವೆ!. ಡಾಕ್ಟರ್ ಹತ್ತಿರ ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಹೋಗಿರುತ್ತೇವೆ. ಮೊದಲೇ ಹೋಗಿದ್ದ ರೋಗಿ ಏನಾದರೂ ಹೆಚ್ಚು ಹೊತ್ತು ಇದ್ದುಬಿಟ್ಟರೆ ಸಿಡಿಮಿಡಿಗೊಳ್ಳುತ್ತೇವೆ. ಅದೇ ನಮ್ಮ ಸರತಿ ಬಂದಾಗ ಆರಾಮಾಗಿ ಎಲ್ಲ ವಿವರಗಳನ್ನು ಹೇಳಿ ಕೇಳಿ ಮತ್ತೆ ಮತ್ತೆ ಪ್ರಶ್ನೆ ಮಾಡಿ, ನಿರಾಯಾಸವಾಗಿ ಒಳಗೇ ಕುಳಿತುಕೊಳ್ಳುತ್ತೇವೆ.
ಇನ್ನು ಒಂದು ಉದಾಹರಣೆಯೆಂದರೆ ದೇವಸ್ಥಾನಕ್ಕೆ ಸರತಿಯಲ್ಲಿ ನಿಂತಿದ್ದ ಜನ ದೇವರ ದರ್ಶನಕ್ಕೆ ಹಾತೊರೆಯುವುದು ಸಹಜ. ಹಾಗೆಯೇ ನಮ್ಮ ಸರದಿ ಬಂದು ದೇವರ ದರ್ಶನ ಸಿಕ್ಕಿದ ಮೇಲೂ ಮತ್ತೆ ಮತ್ತೆ ಕೇಳಿದ್ದನ್ನೇ ಕೇಳಿಕೊಂಡು ನಿಂತು ಸಮಯ ವ್ಯರ್ಥ ಮಾಡುತ್ತೇವೆ. ಸ್ವಯಂಸೇವಕರು ತಳ್ಳಿದರೂ ದೇವರನ್ನು ಮತ್ತೆ ಮತ್ತೆ ನೋಡುವ ಹಂಬಲ ನಮ್ಮದು. ಯಾಕೆ ಹೀಗೆ ಬೇರೆಯವರ ಬಗ್ಗೆ ಚಿಂತೆ ಮಾಡುವುದಿರಲಿ ನಮ್ಮಲ್ಲಿ ಶಿಸ್ತು ಎನ್ನುವುದೇ ಇಲ್ಲ. ಶಿಸ್ತನ್ನು ಏಕೆ ಪಾಲಿಸಲಾಗಿಲ್ಲ ಎಂಬುದಕ್ಕೆ ಸಮರ್ಥನೆಯನ್ನು ಭರಪೂರ ನೀಡುತ್ತೇವೆ.
ವಿಶ್ವಕುಟುಂಬಿಯ ಕಷ್ಟ ಮಾಸ್ತಿಯವರ ಕವಿತೆ ‘ನಾಗಿ’ ನಾಯಕಿ ಕಡು ಬಡತನವಿದ್ದರೂ ಮಲೆದೇವರ ಕಷ್ಟದ ಬಗ್ಗೆ ಮಿಡಿಯುತ್ತಾಳೆ. ಜಗತ್ತನ್ನು ಅರಿಯದ ಹೆಂಗಸು ಬೇಸಗೆಯ ಬಿಸಿಲಿನ ಝಳಕ್ಕೆ ಏನೇಲ್ಲ ತೊಂದರೆಯಾಗುತ್ತವೆ ಎಂಬುದನ್ನು ಹೇಳಬಲ್ಲಳು. ಮುಗ್ಧೆಗಿರುವ ಲೋಕದ ಕಾಳಜಿ ಎಲ್ಲವನ್ನೂ ತಿಳಿದುಕೊಂಡಿರುವ ನಮಗೆಲ್ಲಿ ಬರಬೇಕು ಅಲ್ಲವೇ?
ಹೆಂಗಸೊಬ್ಬಳು ಇರುವ ಮೂವರ ಬದುಕನ್ನು ನೀಗಲು ಕಷ್ಟವಿರುವಾಗ ಆ ಭಗವಂತನಿಗೆ ಲೋಕದ ಭಾರವನ್ನು ಸರಿದೂಗಿಸಲು ಇನ್ನೇಷ್ಟು ಚಿಂತೆ ಇದೆ, ಅವನಿಗೆ ಅಷ್ಪೊಂದು ಕಷ್ಟವಿರುವಾಗ ನಾನು ಏನು ಕೇಳೊದು? ಎಂದು ಯೋಚಿಸುತ್ತಾಳೆ. ಆದರೆ ನೋಟಿನ ಕಂತೆ ಕಂತೆ ಹಾಕಿ ನಮಗೆ ಒಳ್ಳೆಯದು ಮಾಡು ಎಂದು ಬೇಡಿ ಬರುವವರ ನಡುವೆ ನಾವಿದ್ದೇವೆ.
ಇನ್ನೊಬ್ಬರ ಕಾಳಜಿ ಮಾಡುವುದು, ಇನ್ನೊಬ್ಬರ ಬದುಕಿನಲ್ಲಿ ಮೂಗು ತೂರಿಸುವುದರ ಮಧ್ಯೆ ಸ್ಪಷ್ಟವಾದ ಗೆರೆಗಳಿವೆ. ಅದನ್ನು ಅರಿತುಕೊಳ್ಳದೇ ಕಾಳಜಿಯ ಮಾತನ್ನು ಹಿಂದಕ್ಕೆ ಸರಿಸಿ, ಬೇರೆಯವರ ಬದುಕಿನ ಬಗ್ಗೆ ಯೋಚಿಸಿ, ಅವರನ್ನು ಮಾತಿನ ಕೊರಂಬುಗಳಿಂದ ಚುಚ್ಚುವುದು ಹೇಗೆ ಎಂದು ಚಿಂತಿಸುವುದು ಅಮಾನವೀಯ. ಹಾಗೊಮ್ಮೆ ನಮಗೆ ಯಾರಾದರೂ ಮಾತಿನಿಂದ ಚುಚ್ಚಿದರೆ, ಅದನ್ನು ಸಹಿಸುವ ತಾಳ್ಮೆಯನ್ನು ಕಳೆದುಕೊಂಡಿದ್ದೇವೆ.
ಮುಗಿಲನ್ನು ಮುಟ್ಟಲು ಯಾರಿಗೂ ಸಾಧ್ಯವಿಲ್ಲ. ಹಾಗೆ ಎಲ್ಲರ ಕಷ್ಟಗಳನ್ನು ಪರಿಹರಿಸಲು ಸಾಧ್ಯವಿಲ್ಲ. ನಮ್ಮ ಅನುಕೂಲವನ್ನು ನೋಡಿಕೊಂಡು ಬೇರೆಯವ ಕುರಿತು ಕಾಳಜಿ ಮಾಡಲು ಮನಸ್ಸು ಮಾಡಿದರೆ ಅದೇ ಮಾನವೀಯತೆ.
ಕೇವಲ ಒಂದು ಇಟ್ಟಿಗೆಯಿಂದ ಭವ್ಯ ಬಂಗಲೆಯನ್ನು ನಿರ್ಮಿಸಲು ಸಾಧ್ಯವೇ? ಅಂಥ ನೂರಾರು ಸಾವಿರಾರು ಇಟ್ಟಿಗೆಗಳಿಂದ ಭವ್ಯ ಬಂಗಲೆ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಜಗದ ನೋವಿಗೆ ಸ್ಪಂದಿಸುವ ಮನಸ್ಸು ನಮ್ಮಲ್ಲಿದೆಯಂತಾದರೆ ಅದುವೇ ಜಗದ ಏಳಿಗೆಗೆ ಪ್ರಥಮ ಅಡಿಗಲ್ಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.