ADVERTISEMENT

ಸೃಜನಶೀಲ ಸಾಧ್ಯತೆಗಳಿಗೆ ಕೊನೆಯುಂಟೇನಯ್ಯ?!

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ–2023: ತೀರ್ಪುಗಾರರ ಟಿಪ್ಪಣಿ

ಲಕ್ಷ್ಮೀಪತಿ ಕೋಲಾರ
Published 11 ನವೆಂಬರ್ 2023, 9:19 IST
Last Updated 11 ನವೆಂಬರ್ 2023, 9:19 IST
<div class="paragraphs"><p>ಲಕ್ಷ್ಮೀಪತಿ ಕೋಲಾರ</p></div>

ಲಕ್ಷ್ಮೀಪತಿ ಕೋಲಾರ

   

‘ಕಾವ್ಯದ ಮೂಲಗುಣ ಅನ್ನುವುದೇನಾದರೂ ಇದ್ದಲ್ಲಿ, ಅದು ತನ್ನ ಬಗೆಗಿನ ಎಲ್ಲ ವ್ಯಾಖ್ಯಾನಗಳನ್ನೂ ತಿರಸ್ಕರಿಸುವಂಥದ್ದಾಗಿರುತ್ತದೆ’ ಎಂಬ ಪೂರ್ವಗ್ರಹಗಳಿಗೆ ಹೊರತಾದ ಮಾತೊಂದಿದೆ. ಈ ಮಾತಿನ ಹಿಂದಿರುವ ವಿವೇಕವನ್ನು ತಾವಾಗಿ ಅರಿತುಬಲ್ಲ ಕವಿಗಳು ಕಾವ್ಯ ಪ್ರಕಾರದ ವಿಶಿಷ್ಟತೆ ಮತ್ತು ಅನನ್ಯತೆಗೆ ಭಂಗ ಬರದಂತೆ ಪ್ರಯೋಗಾತ್ಮಕ ನೆಲೆಗಳಲ್ಲೂ ಅತ್ಯುತ್ತಮ ಕಾವ್ಯಾಭಿವ್ಯಕ್ತಿಯನ್ನು ಸಾಧಿಸಬಲ್ಲ ಸಮರ್ಥರಾಗಿರುತ್ತಾರೆ. ‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ’ದ ಕಾವ್ಯ ಸ್ಪರ್ಧೆಗೆ ಬಂದಿದ್ದ ಅಂತಿಮ ಹಂತದ ಐವತ್ತೊಂದು ಕವಿತೆಗಳನ್ನು ಓದಿ ತೀವ್ರವಾಗಿ ನಿರಾಸೆಗೊಂಡ ಮೇಲೆ ಈ ಮಾತನ್ನು ಹೇಳಲೇಬೇಕೆನಿಸಿದ್ದರಿಂದಲಷ್ಟೇ ಇಲ್ಲಿ ಉಲ್ಲೇಖಿಸಿದ್ದೇನೆ. 

ಈಗಿನ ತಲೆಮಾರಿನವರಲ್ಲಿ ಸಾಕಷ್ಟು ಮಂದಿ ಉತ್ತಮ ಕವಿತೆಗಳನ್ನು ಬರೆಯುತ್ತಿರುವುದನ್ನು ಆಗೀಗ ನಾನೇ ಗಮನಿಸಿದ್ದೇನೆ. ಆದರೆ, ದೀಪಾವಳಿ ಕಾವ್ಯ ಸ್ಪರ್ಧೆಗೆ ಯಾಕೆ ಅಂತಹ ರಚನೆಗಳು ಬರಲಿಲ್ಲವೆಂಬುದು ಖಂಡಿತ ಸೋಜಿಗದ ಸಂಗತಿಯೆನಿಸಿತು.

ADVERTISEMENT

ಓದುಗರನ್ನು ಚಕಿತಗೊಳಿಸಬಲ್ಲಂತಹ ಒಂದಾದರೂ ಕವಿತೆ ಇರಲಿಲ್ಲವೆನ್ನುವುದು, ಇಂದಿನ ಕವಿಗಳು ಕಾವ್ಯ ಬೆರಗಿನ ಆನಂದಗಳಿಗೆ ಬೆನ್ನು ಮಾಡಿದ್ದಾರೆಂಬ ಅನಪೇಕ್ಷಣೀಯವಾದಂತಹ ಮಾಹಿತಿಯನ್ನೇ ನೀಡುವಂತಿತ್ತು. ವಸ್ತುವಿನ ದೃಷ್ಟಿಯಿಂದಲೋ ಅಥವಾ ಭಾಷಿಕ ಕೌತುಕದಿಂದಲೋ ಒಂದಷ್ಟು ಗಮನ ಸೆಳೆದ ಹಲವಾರು ಕವಿತೆಗಳನ್ನು ಹಲವಾರು ಬಾರಿ ಗಮನವಿಟ್ಟು ಓದಿದ ಮೇಲೂ ನನ್ನ ಅಭಿಪ್ರಾಯವೇನೂ ಬದಲಾಗಲೇ ಇಲ್ಲ. ಅಂದರೆ ಧ್ಯಾನಸ್ಥ ಸ್ಥಿತಿಯಲ್ಲಿ ಒಡಮೂಡಿರಬಹುದಾದ ಒಂದಾದರೂ ಕವಿತೆಗಾಗಿ ಹತಾಶೆಯಿಂದ ತಡಕಾಡುವಂತಾಯಿತು. ವಸ್ತು ಪ್ರಸ್ತುತವೆಂತಲೋ ಅಥವಾ ಮಹತ್ವದ್ದೆಂದೋ ಅನಿಸಿದ ಕವಿತೆಗಳು ಕೂಡ ಶ್ರೇಷ್ಠ ಕಾವ್ಯವಾಗುವಲ್ಲಿ ಭಾಷಿಕ ಪ್ರಯೋಗದಲ್ಲೋ, ಅಜ್ಞಾತವೂ ಹಾಗೂ ಬೆರಗುಗೊಳಿಸಬಲ್ಲ ಆಯಾಮಗಳನ್ನು ತಾಕುವಲ್ಲಿಯೋ ವಿಫಲಗೊಂಡಿರುತ್ತಿದ್ದವು.

ಕಾವ್ಯ ಪ್ರಕಾರದ ಮೂಲ ಹಾಗೂ ಅನನ್ಯ ಲಕ್ಷಣಗಳನ್ನೇ ಉಡಾಫೆಯಿಂದೆಂಬಂತೆ ಗಾಳಿಗೆ ತೂರಿ ಬಹುತೇಕರು ಗದ್ಯಮಯವಾದ ಸರಳ ತಂತ್ರಗಳಿಗೆ ಮೊರೆಹೋಗಿರುವುದಂತೂ ಕಾವ್ಯ ಪರಿಶ್ರಮಕ್ಕೆ ಇರಲೇಬೇಕಾದ ಸಂಯಮದ ಕೊರತೆ ಎಂದೇ ನನಗೆ ಅನಿಸಿತು. ಕಾವ್ಯದಲ್ಲಿ ವಸ್ತುವೇ ಪ್ರಧಾನವಾಗಿದ್ದಾಗ, ಓದುಗ ಮನಸ್ಸಿಗೆ ಆಘಾತ ನೀಡಿ, ಗಮನ ಸೆಳೆವ ತಂತ್ರದಂಗವಾಗಿಯಷ್ಟೇ ಗದ್ಯಗಂಧಿಯ ಶೈಲಿಗೆ ಹೊರಳುವುದುಂಟು. ಇಂಥಲ್ಲಿ ಪರಿಣಾಮಕಾರಿಯಾದ ಸಂವಹನ ಸಾಧಿಸಬೇಕೆಂಬ ಉದ್ದೇಶವೂ ಇದ್ದೀತು. ಇಂತಹ ಪ್ರಯೋಗಶೀಲ ಪ್ರಯತ್ನಗಳಲ್ಲಿ ಶ್ರೇಷ್ಠ ಕವಿತೆಗಳು ಬಂದಿರುವುದನ್ನು ಕೂಡ ನಾವು ಬಲ್ಲೆವು. ಆದರೆ ಅದೇ ಕಾವ್ಯ ಲಕ್ಷಣವಾಗಲಾರದು; ಪ್ರಯೋಗಾತ್ಮಕ ಶೈಲಿ ಮಾತ್ರ ಆಗಿರಬಲ್ಲದು. ಇಲ್ಲದಿದ್ದಲ್ಲಿ, ನೇರವಾಗಿ ಗದ್ಯದಲ್ಲೇ ಅಭಿವ್ಯಕ್ತಿಸದೆ ಕಾವ್ಯ ಪ್ರಕಾರದಲ್ಲೇ ಬರೆಯಬೇಕೆಂಬ ವಿಲಕ್ಷಣ ಹಠಕ್ಕೆ ಉತ್ತರವೇ ಇಲ್ಲದಂತಾಗುತ್ತದೆಯಲ್ಲವೇ?

ಯಾವುದೇ ಕವಿತೆಯ ಉತ್ತಮಿಕೆ ಅಥವಾ ಶ್ರೇಷ್ಠ ಅಭಿವ್ಯಕ್ತಿಯನ್ನು ನಿರ್ಧರಿಸಬಲ್ಲ ಸಹಜ ಮಾನದಂಡಗಳ ಪ್ರಕಾರ ಬಹುಮಾನಗಳಿಗೆ ಅರ್ಹವಾದ ಒಂದೂ ಕವಿತೆ ಇರಲಿಲ್ಲವೆಂದೇ ವಿಷಾದದಿಂದ ಹೇಳಬೇಕಾಗಿದೆ! ಇದ್ದ ಕವಿತೆಗಳಲ್ಲೇ ಆಯ್ಕೆ ಮಾಡಲೇಬೇಕಿದ್ದ ಅನಿವಾರ್ಯದೊಂದಿಗೆ, ಕವಿಗಳ ಸೃಜನ ಸೃಜನಶೀಲಾತ್ಮಕವಾದ ಉತ್ಸಾಹ ಮತ್ತು ಉಮೇದನ್ನು ಕುಗ್ಗಿಸಬಾರದೆಂಬ ಸದುದ್ದೇಶದಿಂದಲಷ್ಟೇ ಬಂದಿದ್ದ ಕವಿತೆಗಳಲ್ಲಿ ಮೂರು ಕವಿತೆಗಳನ್ನು ಅಂತಿಮವಾಗಿ ಪರಿಗಣಿಸಲಾಯಿತು. ‘ಬಾಲೆ, ಬೆತ್ತಲೆ ಬೊಂಬೆ ಮತ್ತು ಕಡಲು’ ಕವಿತೆಯ ಹ್ರಸ್ವಗೊಂಡ ಕಾವ್ಯಭಾಷೆಯೊಂದಿಗೆ ಸಾಂದ್ರಗೊಂಡ ತಣ್ಣಗಿನ ತಲ್ಲಣ ಗಮನಾರ್ಹವಾದದ್ದು. ಕಾವ್ಯದ ಬಿಗಿಬಂಧವೂ ಅನುಭವಕ್ಕೆ ದಕ್ಕುವಂತಿದೆ. ಈ ಕವಿತೆಯಲ್ಲಿ ನಿರ್ಜೀವ ಗೊಂಬೆಯೊಂದಿಗೆ ಜೀವಂತ ಗೊಂಬೆಯೊಂದರ ಮೌನ, ಆತಂಕಗಳ ಅನುಸಂಧಾನವೊಂದು ಏರ್ಪಡುವುದು ಈ ವ್ಯವಸ್ಥೆಯ ಕ್ರೌರ್ಯ ಮತ್ತು ಅಸೂಕ್ಷ್ಮತೆಗೆ ಭಾಷ್ಯ ಬರೆದಂತಿದೆ. ರೂಪಕ ಶಕ್ತಿಯ ಅನನ್ಯತೆಯನ್ನು ದುಡಿಸಿಕೊಂಡ ಕಾರಣದಿಂದಾಗಿ ಈ ಕವಿತೆಯನ್ನು ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಲಾಯಿತು.

ಎರಡನೆಯ ಬಹುಮಾನಕ್ಕೆ ಪಾತ್ರವಾದ ‘ಮತ್ತೊಂದು ನರಕ’ ಕವಿತೆಯು ಗದ್ಯಗಂಧಿಯ ಶೈಲಿಯದ್ದಾದರೂ ಕವಿತೆಯನ್ನಾಗಿಸಲು ತಹತಹಿಸುತ್ತಿರುವ ವಸ್ತುವು ಮನುಕುಲದ ಘನತೆ ಮತ್ತು ಮನಃಸಾಕ್ಷಿಗೇ ಸಡ್ಡು ಹೊಡೆಯಬಲ್ಲಷ್ಟು ಪ್ರಸ್ತುತವೂ ಮತ್ತು ಶಕ್ತವೂ ಆದದ್ದು. ಜನಾಂಗೀಯ ಹಾಗೂ ಕುಲಸಂಬಂಧಿಯಾದ ಸಮಸ್ಯೆಗಳಿಂದ ಉಲ್ಬಣಗೊಳ್ಳುತ್ತಿರುವ ಮಾನವೀಯ ಸಂಬಂಧಗಳ ನರಕಸದೃಶ ಪರಿಣಾಮಗಳನ್ನು ಚಿತ್ರಿಸುವಂತಹದ್ದು. ವ್ಯಾಪಾರೀಕರಣಗೊಂಡಿರುವ ಇಂದಿನ ಸಾಮ್ರಾಜ್ಯಶಾಹಿ ಅಧಿಕಾರದ ನಿರ್ದಯೆಯಿಂದಾಗಿ ತಮ್ಮದೆನ್ನುವ ತವರು ನೆಲಕ್ಕೇ ಎರವಾಗಿ, ಪಲ್ಲಟಗೊಳ್ಳುತ್ತಿರುವ ಬದುಕುಗಳ ಅಸ್ಥಿರತೆಯೊಂದಿಗೆ ಅಸ್ಮಿತೆಗಳನ್ನೇ ನೀಗಿಕೊಳ್ಳುತ್ತಿರುವ ಲಕ್ಷಾಂತರ ತಬ್ಬಲಿ ವಲಸೆಗಾರರು ಹಾಗೂ ರಾಜಕೀಯ ನಿರಾಶ್ರಿತರ ಒಂದು ಪಾರ್ಶ್ವ ನೋಟವನ್ನಾದರೂ ಈ ಕವಿತೆ ನೀಡಬಲ್ಲದಾದ್ದರಿಂದ, ಸಹಜವಾಗಿಯೇ ಎರಡನೆಯ ಬಹುಮಾನವನ್ನು ದಕ್ಕಿಸಿಕೊಂಡಿದೆ.

ಮೂರನೆಯ ಬಹುಮಾನಕ್ಕೆ ಪಾತ್ರವಾದ ಕವಿತೆ ‘ಬೆಟ್ಟದೂರು ಮತ್ತು ನಾನು’. ಗ್ರಾಮ್ಯ ಸೊಗಡಿನ ನೆನಪುಗಳೊಂದಿಗೆ ನಗರಕ್ಕೆ ದೂಡಲ್ಪಟ್ಟ ಹೆಣ್ಣೊಂದು ಐಷಾರಾಮಿ ಬದುಕಿಗೆ ತನ್ನನ್ನೂ ತನ್ನ ನೈತಿಕತೆಯನ್ನೂ ಬಲಿಗೊಟ್ಟು, ಹಿಂದಿರುಗಿ ನೋಡಿದರೆ ತನ್ನ ಬೆಟ್ಟದೂರು ಕೂಡ ಶಹರವಾಗುವ ದುರಂತದ ಹಾದಿ ಹಿಡಿದಿರುತ್ತದೆ! ಗುಡ್ಡ ಕುಸಿದು, ಪ್ರವಾಹ ಹರಿವಷ್ಟರ ಮಟ್ಟಿಗೆ ಪರಿಸರ ವಿಕೃತಗೊಂಡಿರುತ್ತದೆ. ಈ ವಿಕೃತಿ ಇಡೀ ಬೆಟ್ಟದೂರಿನ ಸಹಜ ಸುಂದರ ಬದುಕನ್ನೂ ಆವರಿಸಿಕೊಳ್ಳುವ ದಿನಗಳು ದೂರವಿಲ್ಲವೆಂಬ ಹತಾಶೆಯಲ್ಲಿ ತನ್ನ ಒಡಲಲ್ಲಿ ಹೊಸದೊಂದು ಜೀವ ಉಸಿರಾಡಲಿ ಎಂಬ ಆಶಾವಾದದೊಂದಿಗೆ ಕವಿತೆ ವಿರಮಿಸುತ್ತದೆ. ಈ ಬಗೆಯ ಗ್ರಹಿಕೆಗಳೆಲ್ಲದರ ಆಚೆಗೂ ನಿಜಕ್ಕೂ ಈ ಕವಿತೆಗಳಿಗೆ ಮತ್ತಷ್ಟು ಪರಿಣಾಮಕಾರಿಯಾದ ಅಭಿವ್ಯಕ್ತಿಯನ್ನು ಸಾಧಿಸಬಲ್ಲ ಸಾಧ್ಯತೆಗಳಂತೂ ಖಂಡಿತ ಇದೆಯೆಂಬುದೇ ಈ ಕ್ಷಣದ ನನ್ನ ನಂಬಿಕೆ. ಯಾಕೆಂದರೆ ಸೃಜನಶೀಲ ಸಾಧ್ಯತೆಗಳಿಗೆ ಎಂದೂ, ಕೊನೆಯೆಂಬುದೇ ಇಲ್ಲವಲ್ಲ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.