ಖ್ಯಾತ ವಿದ್ವಾಂಸ, ಸಂಶೋಧಕ, ಕನ್ನಡ ಹೋರಾಟಗಾರ ಡಾ. ಪಿ.ವಿ. ನಾರಾಯಣ ಅವರಿಗೆ ಇದೀಗ ಭರ್ತಿ ಎಂಬತ್ತು ವರ್ಷಗಳು. ಆ ನೆಪದಲ್ಲಿ, ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ಭಾನುವಾರ (ಜ. 29) ‘ಕನ್ನಡ ಪ್ರಧಾನ’ ಎಂಬ ಅಭಿನಂದನ ಗ್ರಂಥವನ್ನು ಹೊರತರಲಾಗುತ್ತಿದೆ...
ಪಿ.ವಿ. ನಾರಾಯಣ ಎಂದರೆ ‘ಪಾಂಡಿತ್ಯ, ಪ್ರತಿಭೆ, ವಿದ್ವತ್ತು ವಿನಯಗಳ ನಾರಾಯಣ’ ಎಂದು ತಮ್ಮ ಹೆಸರಿನ ಆದ್ಯಕ್ಷರಗಳಿಗೆ ಅನ್ವರ್ಥವಾಗಿ ಕನ್ನಡ ವಿದ್ವತ್ತು ಮತ್ತು ವಿಮರ್ಶೆಯ ಕ್ಷೇತ್ರದಲ್ಲಿ ಸಾರ್ಥಕ ಕೃಷಿ ಮಾಡುತ್ತಲೇ ಕನ್ನಡದ ಸ್ಥಾನಮಾನಗಳಿಗೆ ಸಂಬಂಧಿಸಿದ ಹೋರಾಟಗಳಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಪೂರ್ವ ವ್ಯಕ್ತಿ ಎಂಬುದು ವೇದ್ಯ ಸಂಗತಿ. ಶ್ರೇಷ್ಠ ವಿದ್ವಾಂಸರಾಗಿ, ವಿದ್ಯಾರ್ಥಿಗಳ ಮನಸೂರೆಗೊಂಡ ಅಧ್ಯಾಪಕರಾಗಿ, ವಾಗ್ಮಿಯಾಗಿ, ಸಂಶೋಧಕರಾಗಿ, ವಿಮರ್ಶಕರಾಗಿ, ಕಾದಂಬರಿಕಾರರಾಗಿ ಕನ್ನಡವನ್ನು ಕಟ್ಟುವ ಕಾಯಕದಲ್ಲಿ ಅರ್ಧಶತಮಾನದಿಂದ ತಮ್ಮನ್ನು ತಾವು ಅರ್ಪಿಸಿಕೊಂಡವರು ಅವರು. ಸಂಶೋಧನೆ, ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಸೃಜನಶೀಲ ಕೃತಿಗಳೂ ಸೇರಿದಂತೆ ಎಪ್ಪತ್ತೈದು ಕೃತಿಗಳನ್ನೂ ನೀಡಿದ್ದಾರೆ.
ದೂರದಿಂದ ನೋಡಿದಾಗ ಶ್ರೀಮದ್ಗಾಂಭೀರ್ಯದ ವ್ಯಕ್ತಿಯಂತೆ ಕಾಣುವ ಪಿ.ವಿ. ನಾರಾಯಣ ತಮ್ಮ ಪಾಂಡಿತ್ಯ, ವಿದ್ವತ್ತನ್ನು ಕಿಂಚಿತ್ತೂ ತೋರಿಸಿಕೊಳ್ಳದೆ ಹಿರಿಯರು, ಕಿರಿಯರು, ಸಮವಯಸ್ಸಿನ ಮಿತ್ರರು, ವಿದ್ವಾಂಸರು, ಜನಸಾಮಾನ್ಯರು ಹೀಗೆ ಎಲ್ಲರೊಂದಿಗೆ ನಗುನಗತ್ತಾ, ಲಘು ಹಾಸ್ಯದ ಚಟಾಕಿಗಳನ್ನು ಹಾರಿಸುತ್ತಲೇ ಜೊತೆಗೂಡಿ ಕೆಲಸಮಾಡುವ ಸ್ನೇಹಜೀವಿ.
ಪ್ರಧಾನ್ ವೆಂಕಪ್ಪಯ್ಯ ನಾರಾಯಣ ಅವರು (ಜನನ: 18-12- 1942) ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರದವರು. ಪಿ.ವಿ.ಎನ್. ಎಂದೇ ಹೆಸರಾದ ಅವರು, ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮತ್ತು ಕಾಲೇಜಿನ ವಿದ್ಯಾರ್ಥಿ. ಪದವಿ ವ್ಯಾಸಂಗಕ್ಕೆ ತುಮಕೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಸೇರಿದರು. ಅಲ್ಲಿ ಸಿ. ಮಹಾದೇವಪ್ಪ, ಜಿ.ಎಸ್. ಸಿದ್ಧಲಿಂಗಯ್ಯ, ಸಾ.ಶಿ. ಮರುಳಯ್ಯ, ಎಚ್.ಜಿ. ಸಣ್ಣಗುಡ್ಡಯ್ಯ ಮುಂತಾದ ನುರಿತ ಕನ್ನಡ ಪ್ರಾಧ್ಯಾಪಕರ ವಿದ್ಯಾರ್ಥಿಯಾಗಿ ಬಿ.ಎ. ಮುಗಿಸಿ ಮಾನಸ ಗಂಗೋತ್ರಿಯಲ್ಲಿ (1962-64) ಎಸ್.ವಿ.ಪಿ., ದೇಜಗೌ, ಹಾಮಾನಾ, ಎಲ್. ಬಸವರಾಜು ಮುಂತಾದ ವಿದ್ವಾಂಸರ ಗರಡಿಯಲ್ಲಿ ಕನ್ನಡದಲ್ಲಿ ನಿಷ್ಣಾತಿಯನ್ನು ಗಳಿಸಿದರು.
ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ 32 ವರ್ಷಗಳಷ್ಟು ಸುದೀರ್ಘ ಕಾಲ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ 2000ದಲ್ಲಿ ನಿವೃತ್ತರಾದರು. 1968ರಿಂದ ಈ ದಿನದವರೆಗೆ ಸುಮಾರು ಐವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆನಿಂತು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡವರು.
ನಾರಾಯಣ ಅವರದು ವಿದ್ಯೆ, ಪಾಂಡಿತ್ಯಗಳಿಗೆ ಹೆಸರಾದ ಮನೆತನ. ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಹತ್ತುಸಾವಿರ ವಾರ್ಧಕ ಷಟ್ಪದಿಗಳನ್ನೊಳಗೊಂಡ ‘ಶ್ರೀರಾಮಕಥಾಮೃತ’ ಎಂಬ ರಾಮಾಯಣ ಕಾವ್ಯವೇ ಅಲ್ಲದೆ ಇನ್ನೂ ಹಲವಾರು ಕನ್ನಡ, ಸಂಸ್ಕೃತ ಕೃತಿಗಳ ಕರ್ತೃವೆಂದು ಖ್ಯಾತರಾದ, ಅದ್ವಿತೀಯ ವಿದ್ವಾಂಸ, ಕವಿ ವೆಂಕಾಮಾತ್ಯ ಈ ವಂಶದ ಪ್ರಸಿದ್ಧ ವ್ಯಕ್ತಿ. ಹೈದರಾಲಿಯ ಆಸ್ಥಾನದಲ್ಲಿ ಮಂತ್ರಿಯಾಗಿದ್ದ (ಪ್ರಧಾನ್) ಕಾರಣದಿಂದ ‘ಅಮಾತ್ಯ’ ಎಂಬುದು ಅವರ ಹೆಸರಿನ ಜೊತೆ ಅವಿಭಾಜ್ಯವಾಗಿ ಸೇರಿಕೊಂಡಿತು. ಆ ಕಾರಣಕ್ಕಾಗಿಯೇ ಆ ಮನೆತನಕ್ಕೆ ಸೇರಿದವರೆಲ್ಲ ತಮ್ಮ ಹೆಸರಿನ ಮೊದಲಿಗೆ ಪ್ರಧಾನ್ ಅಥವಾ ಪಿ. ಅಕ್ಷರವನ್ನು ಸೇರಿಸಿಕೊಳ್ಳುವುದು ರೂಢಿ. ವೆಂಕಾಮಾತ್ಯರ ಪ್ರಧಾನಿ (=ಅಮಾತ್ಯ) ಪದವಿ ತಮ್ಮದಾಗದಿದ್ದರೂ ಅವರ ಪಾಂಡಿತ್ಯ ಪ್ರತಿಭೆಗಳ ಸಮರ್ಥ ಉತ್ತರಾಧಿಕಾರಿಯೆಂಬಂತೆ ನಾರಾಯಣ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಕೃತಿಗಳ ಮೂಲಕ ವಿಶಿಷ್ಟವಾದ ಛಾಪನ್ನು ನಿಚ್ಚಳವಾಗಿ ಮೂಡಿಸಿರುವುದು ಕನ್ನಡಿಗರಿಗೆಲ್ಲ ತಿಳಿದೇ ಇದೆ.
ವಚನ ಸಾಹಿತ್ಯ ಪಿ.ವಿ.ಎನ್. ಅವರ ವಿಶೇಷ ಅಧ್ಯಯನ ಕ್ಷೇತ್ರವಾದ ಕಾರಣದಿಂದ ಸಹಜವಾಗಿಯೇ ಅವರ ಸಂಶೋಧನೆ ಮತ್ತು ವಿಮರ್ಶೆಯ ಬಹುಭಾಗ ವಚನಸಾಹಿತ್ಯಕ್ಕೆ ಸಂಬಂಧಿಸಿದ್ದಾಗಿದೆ. ಅವರ ಪಿಎಚ್.ಡಿ ನಿಬಂಧವಾದ ‘ವಚನ ಸಾಹಿತ್ಯ- ಒಂದು ಸಾಂಸ್ಕೃತಿಕ ಅಧ್ಯಯನ’, ವಚನ ಸಾಹಿತ್ಯ ಮತ್ತು ಚಳವಳಿಗಳ ಮೂಲಚೂಲಗಳನ್ನು ಸಮಗ್ರವಾಗಿ ವಿಶ್ಲೇಷಿಸುವ ಪ್ರಮಾಣಗ್ರಂಥವಾಗಿದ್ದು ವಿದ್ವಾಂಸರಿಂದ ಒಂದು ‘ತಲಸ್ಪರ್ಶಿಯಾದ’ ಹಾಗೂ ‘ಪರಾಮರ್ಶಿಸಲೇಬೇಕಾದ ಗ್ರಂಥ’ ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಅದೂ ಸೇರಿದಂತೆ, ‘ವಚನ ವ್ಯಾಸಂಗ’, ‘ವಚನ ಪರಿಸರ’, ‘ವಚನ ಸಮಗ್ರ’, ‘ವಚನ ನಿರ್ವಚನ’, ‘ವಚನ ಚಳವಳಿ’, ‘ಕಾಯಕ ತತ್ವ’, ‘ಉರಿಲಿಂಗ ಪೆದ್ದಿ’, ‘ವಚನ ಸಮಸ್ತ’ ಮುಂತಾದ, ಬಹುಮಟ್ಟಿಗೆ ವಿವಿಧ ವಿಚಾರ ಸಂಕಿರಣಗಳಲ್ಲಿ ಮಂಡಿತವಾದ ಪ್ರಬಂಧಗಳನ್ನೊಳಗೊಂಡ ವಿದ್ವತ್ಪೂರ್ಣ ಕೃತಿಗಳನ್ನು ಅವರು ಕೊಟ್ಟಿದ್ದಾರೆ. ಕನ್ನಡದ ವಿದ್ವಾಂಸರು ಮತ್ತು ಪ್ರೌಢ ವಿದ್ಯಾರ್ಥಿಗಳು ಅವರ ಸಾಹಿತ್ಯವನ್ನು ಪರಾಮರ್ಶಿಸದೆ ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಈ ಕ್ಷೇತ್ರದಲ್ಲಿ ಅವರ ಸಾಧನೆ ಇದೆ.
ಗ್ರಂಥ ಸಂಪಾದನೆ ಅವರ ಇನ್ನೊಂದು ಆಸಕ್ತಿಯ ಕ್ಷೇತ್ರ. ‘ಬಸವ ಪುರಾಣ ಸಂಗ್ರಹ’, ‘ಕುಮುದೇಂದು ರಾಮಾಯಣ’, ‘ಶಾಂತಿನಾಥ-ಆಂಡಯ್ಯ ಸಂಪುಟ’, ಪಂಪನ ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯಗಳ’ ಸಂಕ್ಷಿಪ್ತ ಆವೃತ್ತಿ, ‘ಕುಮಾರವ್ಯಾಸ ಭಾರತ ಸಂಗ್ರಹ’, ವೆಂಕಾಮಾತ್ಯ ರಾಮಾಯಣದ ‘ಯುದ್ಧಕಾಂಡ’ ಇವು ಅವರು ಸಂಪಾದಿಸಿರುವ ಪ್ರಮುಖ ಕೃತಿಗಳು.
ಅನುವಾದ ಅವರ ಮತ್ತೊಂದು ಪ್ರಿಯವಾದ ಮತ್ತು ಆಸಕ್ತಿಯ ಕ್ಷೇತ್ರ. ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಿಂದ ಅವರು ಹಲವಾರು ಕೃತಿಗಳನ್ನು ಅನುವಾದಿಸಿದ್ದಾರೆ. ಈ ಅನುವಾದಗಳ ಸಂಖ್ಯೆಯೇ ಇಪ್ಪತ್ತೆರಡರಷ್ಟಿದೆ. ಬರ್ಟ್ರಂಡ್ ರಸೆಲ್‍ನ ಪಾಶ್ಚಾತ್ಯ ತತ್ವಶಾಸ್ತ್ರದ ಇತಿಹಾಸದ ಬೃಹತ್ ಗ್ರಂಥವೂ ಇವುಗಳಲ್ಲಿ ಸೇರಿದೆ. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣದ ಕಾವ್ಯಾನುವಾದ, ವೆಂಕಾಮಾತ್ಯ ರಾಮಾಯಣದ ಗದ್ಯಕಥನ ಹೆಸರಿಸಲೇಬೇಕಾದವು.
ಹಳಗನ್ನಡ ಸಾಹಿತ್ಯಾಭ್ಯಾಸಿಗಳಿಗೆ ನೆರವಾಗಲು ಅವರು ರಚಿಸಿರುವ ನಾಲ್ಕು ನಿಘಂಟುಗಳಾದ ‘ಪಂಪನ ನುಡಿಗಣಿ’, ‘ಚೆಂಪೂ ನುಡಿಗನ್ನಡಿ’, ‘ಹಳಗನ್ನಡ ಪದಸಂಪದ’ ಮತ್ತು ‘ಪದಸಂಚಯ’ ಹಾಗೂ ಜೈನಪರಿಭಾಷೆ’ ಇವುಗಳು ಹಳಗನ್ನಡದಲ್ಲಿನ ಅವರ ತಲಸ್ಪರ್ಶಿಯಾದ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ.
ಅನುಭವ ಶೋಧನೆಯ ಸಲುವಾಗಿ ಸೃಜನಶೀಲ ಕ್ಷೇತ್ರದಲ್ಲೂ ಸಮದಂಡಿಯಾಗಿ ಕೃತಿ ರಚಿಸಿರುವುದಕ್ಕೆ ಗುರುತಾಗಿ ಅವರ ‘ಸಾಮಾನ್ಯ’, ‘ಶೋಧನೆ’, ‘ನಿರ್ಧಾರ’ ‘ಧರ್ಮಕಾರಣ’ವೇ ಮೊದಲಾದ 9 ಕಾದಂಬರಿಗಳಿವೆ. ಇವು ಒಂದೊಂದೂ ತನ್ನ ವಸ್ತು ವಿಶೇಷ ಮತ್ತು ಅದನ್ನು ನಿರ್ವಹಿಸಿರುವ ರೀತಿಯಿಂದಾಗಿ ಓದುಗರನ್ನು ಹಿಡಿದಿಟ್ಟುಕೊಂಡು ತನ್ನ ಕೇಂದ್ರದತ್ತ ಸೆಳೆದುಕೊಳ್ಳುತ್ತ ಓದಿಸಿಕೊಂಡು ಹೋಗುವ ಗುಣವನ್ನು ಮಿಗಿಲಾಗಿ ಹೊಂದಿವೆ.
ಶಿವನ ವಿಷಯಕ್ಕೆ ಬಸವಣ್ಣನ ವೀರನಿಷ್ಠೆಯಂತೆಯೇ ಕನ್ನಡದ ವಿಷಯಕ್ಕೆ ಅವರದು ಅನನ್ಯ ವೀರನಿಷ್ಠೆ ಮತ್ತು ಹುಚ್ಚು ಎನಿಸುವಷ್ಟು ಪ್ರೀತಿ. ಉತ್ತರಮುಖಿಯನ್ನು ಯಾವ ದಿಕ್ಕಿಗಿಟ್ಟರೂ ಅದು ಕೂಡಲೇ ಉತ್ತರದಿಕ್ಕಿಗೇ ತಿರುಗಿಕೊಳ್ಳುವಂತೆ ಪಿ.ವಿ.ಎನ್ ಅವರು ಸದಾ ಕನ್ನಡಮುಖಿ. ಕನ್ನಡದ ಸ್ಥಾನಮಾನಗಳ ವಿಷಯಕ್ಕೆ ಬಂದರೆ ಯಾವ ಬಗೆಯ ಹೋರಾಟಕ್ಕಾದರೂ ಅವರು ಸಿದ್ದ. ಕನ್ನಡ ನಾಡಿಗೊಂದು ಪ್ರಾದೇಶಿಕ ಪಕ್ಷ ಬೇಕೆಂಬ, ಹಲವು ರಾಜ್ಯಗಳ (=ರಾಷ್ಟ್ರಗಳ) ಒಕ್ಕೂಟವಾದ ಭಾರತವನ್ನು ಪ್ರಾದೇಶಿಕ ಪಕ್ಷಗಳ ಒಕ್ಕೂಟವೊಂದು ಆಳಬೇಕೆಂಬ ಹಲವರಿಗೆ ಪಥ್ಯವಲ್ಲದ ಇಂಥ ಹಲವು ವಿಚಾರಗಳ ನಾರಾಯಣರ ಗ್ರಂಥ ‘ಕನ್ನಡತನ ಮತ್ತು ಭಾರತೀಯತೆ’ ಕನ್ನಡ ಚಳವಳಿಗೊಂದು ಅನನ್ಯ ಕಾಣಿಕೆ. ಸಾಹಿತಿ ಕಲಾವಿದರ ಬಳಗದ,ಕನ್ನಡ ಶಕ್ತಿಕೇಂದ್ರದ ಸಕ್ರಿಯ ಸಂಚಾಲಕರಾಗಿ ಗೋಕಾಕ್ ಚಳವಳಿ ಮೊದಲುಗೊಂಡು ಅವರು ಭಾಗವಹಿಸದಿರುವ ಹೋರಾಟವೇ ಇಲ್ಲವೆನ್ನಬಹುದು. ಅಲ್ಲದೆ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರೆಂಬ ಕಾರಣಕ್ಕೆ ಆ ಕ್ಷೇತ್ರದಲ್ಲಿ ಸಹಜವಾಗಿಯೇ ತಾರಾ ವರ್ಚಸ್ಸು ಹೊಂದಿರುವವರು.
ನಾಡಿನ ಪ್ರತಿಷ್ಠಿತ ಸಾಹಿತ್ಯ ಮತ್ತು ಸಂಶೋಧನ ಸಂಸ್ಥೆಯಾದ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾಗಿ ಅವರು ಮಾಡಿದ ಕಾರ್ಯ ಮೇಲಿನ ಅವರ ಬರಹ ಮತ್ತು ಹೋರಾಟಗಳಷ್ಟೇ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮಹತ್ವವುಳ್ಳುದು. ಹಾಗೆಯೇ ಉದಯಭಾನು ಕಲಾಸಂಘದಲ್ಲಿ ಶಾಸ್ತ್ರೀಯ ಕನ್ನಡದ ಅಧ್ಯಯನಾಂಗದ ಡೀನ್ ಆಗಿ ಆ ಸಂಸ್ಥೆಯ ಕನ್ನಡ ಪ್ರಕಟಣೆಗಳ ಪ್ರಧಾನ ಸಂಪಾದಕರಾಗಿ ಅವರು ಮಾಡಿದ ಕಾರ್ಯ ಕೂಡ ತುಂಬ ಮಹತ್ವದ್ದು.
ಪ್ರಶಸ್ತಿಗಳಿಗಾಗಿ ಯಾವ್ಯಾವುದೋ ರೀತಿಯಲ್ಲಿ ಲಾಬಿಗಳನ್ನು ನಡೆಸುವ ಈ ಕಾಲದಲ್ಲಿ ತಮ್ಮನ್ನು ಅರಸಿಬಂದ ಹಲವಾರು ಪ್ರಶಸ್ತಿಗಳನ್ನು ನಯವಾಗಿಯೇ ನಿರಾಕರಿಸುವ ಮೂಲಕ ಪ್ರಶಸ್ತಿ ಒಬ್ಬ ವ್ಯಕ್ತಿಯ ಸಾಧನೆಯ ಅಳತೆಗೋಲಾಗಬೇಕಾಗಿಲ್ಲ ಎಂಬುದಕ್ಕೆ ನಿದರ್ಶನದಂತಿರುವ ಹಾಗೂ ಕನ್ನಡಕ್ಕಾಗಿ ಇಷ್ಟೆಲ್ಲ ಕೆಲಸ ಮಾಡಿರುವ ಈ ಹಿರಿಯ ಸಾಧಕರಿಗೆ ಈಗ ಭರ್ತಿ ಎಂಬತ್ತು ವರ್ಷಗಳು. ಈ ವಿದ್ವತ್ ಪ್ರತಿಭೆ ಕನ್ನಡದ ಅಂಗಳವನ್ನು ದಶಕಗಳಿಂದ ಬೆಳಗುತ್ತಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.