ADVERTISEMENT

PV Web Exclusive| ಕಲಬುರ್ಗಿಯಲ್ಲಿ ಸಹಕಾರಿ ತತ್ವದಡಿ ಸಾಹಿತ್ಯ ಕೃಷಿ

‘ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ’ದಿಂದ ವಿವಿಧ ಚಟುವಟಿಕೆ

ರಾಹುಲ ಬೆಳಗಲಿ
Published 24 ಅಕ್ಟೋಬರ್ 2020, 9:28 IST
Last Updated 24 ಅಕ್ಟೋಬರ್ 2020, 9:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಸಹಕಾರಿ ತತ್ವದಡಿ ಹೈನುಗಾರಿಕೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಷ್ಟೇ ಅಲ್ಲ, ಸಾಹಿತ್ಯ ಮತ್ತು ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದು. ಅತಿಯಾದ ಲಾಭದ ನಿರೀಕ್ಷೆಯಿಲ್ಲದೇ ಮತ್ತು ನಷ್ಟದ ಆತಂಕವಿಲ್ಲದೇ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬಹುದು. 12 ವರ್ಷಗಳ ಹಿಂದೆ ನಡೆದ ಪ್ರಯೋಗವೇ ಇದಕ್ಕೆ ಸಾಕ್ಷಿ’.

ಹೀಗೆ ಹೆಮ್ಮೆಯಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಕಲ್ಯಾಣ ಕರ್ನಾಟಕ ಪ್ರದೇಶದ ಸಾಹಿತ್ಯಾಸಕ್ತರು. 2008ರಲ್ಲಿ ಸ್ಥಾಪನೆಗೊಂಡ ‘ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ’ವು ಈ ಭಾಗದ ಪ್ರಮುಖ ಮತ್ತು ಮೆಚ್ಚಿನ ಸಂಘಟನೆಗಳಲ್ಲಿ ಒಂದು. ಇದರಲ್ಲಿ ಲೇಖಕರು, ಓದುಗರು ಮತ್ತು ಪ್ರಕಾಶಕರು ಒಳಗೊಂಡಿದ್ದಾರೆ.

ಅಪ್ಪಾರಾವ ಅಕ್ಕೋಣೆ

ಕೇರಳದ ರೈಟರ್ಸ್‌ ಗಿಲ್ಡ್‌ (ಬರಹಗಾರರ ಸಂಘ) ಮಾದರಿಯಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘವು ಸಹಕಾರಿ ತತ್ವದಡಿ ಸಾಹಿತ್ಯ ಚಟುವಟಿಕೆ ಅಚ್ಚುಕಟ್ಟಾಗಿ ಮುಂದುವರೆಸಿದೆ. ಸಾಹಿತ್ಯದ ಕುರಿತು ಆಸಕ್ತಿ ಎಲ್ಲರಲ್ಲೂ ಮೂಡಬೇಕು ಮತ್ತು ಪುಸ್ತಕ ಸಂಸ್ಕೃತಿ ಎಲ್ಲರಿಗೂ ತಲುಪಬೇಕು ಎಂಬ ಗುರಿಗೆ ಸಂಘವು ಬದ್ಧವಾಗಿದೆ.

ADVERTISEMENT

ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಮತ್ತು 18 ಮಂದಿ ಆಡಳಿತ ಮಂಡಳಿ ಸದಸ್ಯರು ಸಂಘದ ವೈವಿಧ್ಯಮಯ ಚಟುವಟಿಗಳಿಗೆ ಒತ್ತು ನೀಡುತ್ತಿದ್ದು, ಅದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹಿರಿಯರು ಮತ್ತು ಉದಯೋನ್ಮುಖ ಬರಹಗಾರರು ಇದಕ್ಕೆ ಕೈಜೋಡಿಸಿದ್ದಾರೆ.

ಸಂಘವು ಅಸ್ತಿತ್ವಕ್ಕೆ ಬಂದದ್ದು ಹೇಗೆ?

2000ರ ದಶಕದ ಆಸುಪಾಸಿನಲ್ಲಿ ಕಲಬುರ್ಗಿಯಲ್ಲಿ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ತಿಂಗಳಿಗೊಮ್ಮೆ ಒಂದೆಡೆ ಸೇರಿ ಸಾಹಿತ್ಯ ಕ್ಷೇತ್ರದಲ್ಲಿನ ಬೆಳವಣಿಗೆ ಮತ್ತು ಪ್ರಚಲಿತ ವಿದ್ಯಮಾನದ ಕುರಿತು ಚರ್ಚಿಸುತ್ತಿದ್ದರು. ಆ ವೇಳೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಹಾ.ಮಾ.ನಾಯಕ ಸಹ ಇದಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.

ಹಾ.ಮಾ.ನಾಯಕರು ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿ ನಿರ್ಗಮಿಸಿದಾಗ, ಕೊಂಚ ಹಿನ್ನಡೆಯಾಯಿತೇ ಹೊರತು ಕಾರ್ಯಗಳು ಸ್ಥಗಿತಗೊಳ್ಳಲಿಲ್ಲ. ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಯಾಗಿ ನಿವೃತ್ತರಾದ ಅಪ್ಪಾರಾವ ಅಕ್ಕೋಣೆ ಹೆಚ್ಚಿನ ಆಸಕ್ತಿ ತೋರಿ ಎಲ್ಲರ ಸಲಹೆ, ಸೂಚನೆ ಪಡೆಯತೊಡಗಿದರು.

ಧಾರವಾಡದ ಮನೋಹರ ಗ್ರಂಥಮಾಲೆ, ಲೋಹಿಯಾ ಪ್ರಕಾಶನ ಮಾದರಿಯಲ್ಲೇ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಲು ಕೆಲವರು ಸಲಹೆ ನೀಡಿದರು. ಆದರೆ, ಹೀಗೆ ಮಾಡಿದ್ದಲ್ಲಿ ವೈಯಕ್ತಿಕವಾಗುತ್ತದೆ ಹೊರತು ಸಾಂಘಿಕ ರೂಪ ಪಡೆಯುವುದಿಲ್ಲ ಎಂದು ಅಕ್ಕೋಣೆ ಭಾವಿಸಿದರು. ಅದಕ್ಕೆ ಅವರು ಎಲ್ಲರನ್ನೂ ಒಳಗೊಳ್ಳುವಂತಹ ಸಹಕಾರಿ ತತ್ವದಡಿ ‘ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ’ ಹುಟ್ಟುಹಾಕಿದರು.

ಸಂಘದ ವಿವಿಧ ಚಟುವಟಿಕೆ

ಆರಂಭಿಕ ಹಂತದಲ್ಲಿ ಸಂಘಕ್ಕೆ ಇದ್ದ 300 ಸದಸ್ಯರ ಸಂಖ್ಯೆ ಈಗ 443ಕ್ಕೆ ಏರಿಕೆಯಾಗಿದೆ. ಷೇರು ಬಂಡವಾಳವು ₹3 ಲಕ್ಷದಿಂದ ಸದ್ಯಕ್ಕೆ ₹4.79 ಲಕ್ಷಕ್ಕೆ ಏರಿಕೆಯಾಗಿದೆ. ಕಲಬುರ್ಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳದಲ್ಲಿ ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಸದಸ್ಯರನ್ನು ಹೊಂದಿದೆ. ಸಾಹಿತ್ಯಾಸಕ್ತರ ಗಮನ ಸೆಳೆದಿದೆ.

12 ವರ್ಷಗಳ ಅವಧಿಯಲ್ಲಿ ಸಂಘವು 119 ಪುಸ್ತಕಗಳನ್ನು ಹೊರತಂದಿದೆ. ನಾಡಿನ ವಿವಿಧ ಪ್ರದೇಶದ ಹಿರಿಯ ಸಾಹಿತಿಗಳು ಅಲ್ಲದೇ ಉದಯೋನ್ಮುಖ ಬರಹಗಾರರ ಒಟ್ಟು 10 ಪುಸ್ತಕಗಳನ್ನು ಪ್ರತಿ ವರ್ಷ ಮುದ್ರಿಸಲಾಗುತ್ತದೆ. 4 ಅತ್ಯುತ್ತಮ ಕೃತಿಗಳಿಗೆ ನಗದು ಪ್ರಶಸ್ತಿ ನೀಡಲಾಗುತ್ತದೆ. ಜೀವಮಾನ ಸಾಧನೆಗೂ ಪ್ರಶಸ್ತಿ ಕೊಡಲಾಗುತ್ತದೆ.

ಕಥೆ, ಕಾದಂಬರಿ, ಕವನದ ಕೃತಿಗಳಿಗೆ ಮಾತ್ರವೇ ಸೀಮಿತವಾಗದೇ ಕೃಷಿ, ಆರೋಗ್ಯ, ಜೀವನಶೈಲಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೃತಿಗಳನ್ನು ಹೊರತರಲಾಗಿದೆ. ವಿಶೇಷವೆಂದರೆ, ಪ್ರತಿ ವರ್ಷ ಹೊಸ ಬರಹಗಾರರ ಕೃತಿಗಳಿಗೆ ಆದ್ಯತೆ ಕೊಡಲಾಗುತ್ತದೆ ಹೊರತು ಅದೇ ಬರಹಗಾರರ ಬರಹಗಳನ್ನು ಪುನರಾವರ್ತನೆ ಮಾಡುವುದಿಲ್ಲ.

ಸಂಘದ 18 ಮಂದಿ ಆಡಳಿತ ಮಂಡಳಿ ಸದಸ್ಯರು ಆಗಾಗ್ಗೆ ಸಭೆ ಸೇರಿ, ವರ್ಷಪೂರ್ತಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುತ್ತಾರೆ. 6 ಮಂದಿ ಸಂಪಾದಕೀಯ ಮಂಡಳಿಯು ಪ್ರಮುಖ ಪಾತ್ರವಹಿಸುತ್ತದೆ. ಯಾವ್ಯಾವ ಬರಹಗಾರರ ಕೃತಿಗಳನ್ನು ಮುದ್ರಿಸಬೇಕು, ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಂಡ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಪುಸ್ತಕ ಪ್ರಕಾಶನ ಹೇಗೆ?

‘ಸಂಘದ ವತಿಯಿಂದ ಪ್ರತಿ ವರ್ಷ ಪ್ರಕಟಿಸಲಾಗುವ ಕೃತಿಗಳನ್ನು ಸಂಘದ ಕಚೇರಿಯಲ್ಲದೇ ವಿವಿಧ ಪ್ರಕಾಶನ ಮಳಿಗೆಗಳಲ್ಲಿ ಮಾರಲಾಗುತ್ತದೆ. ಸಾಧ್ಯವಾದಷ್ಟು ಹೊಸ ಬರಹಗಾರರ ಕೃತಿಗಳನ್ನು ಹೊರತರಲು ಆದ್ಯತೆ ನೀಡುತ್ತೇವೆ. ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದು ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಹೇಳಿದರು.

‘ಸಹಕಾರಿ ತತ್ವದಡಿ ಸಂಘವು ಉತ್ತಮ ರೀತಿಯಲ್ಲಿ ಮುನ್ನಡೆದಿದೆ. ಬರಹಗಾರರಿಗೆ ಅವಕಾಶ ನೀಡುವ ತೃಪ್ತಿ ಒಂದೆಡೆಯಿದ್ದರೆ, ಆರ್ಥಿಕ ನಷ್ಟ ಆಗುವುದಿಲ್ಲ ಎಂಬ ಸಮಾಧಾನ ಮತ್ತೊಂದೆಡೆ ಇದೆ. ಸಾಹಿತ್ಯ ಕ್ಷೇತ್ರದಲ್ಲಿ ಸಹಕಾರಿ ರಂಗದ ಪ್ರಯೋಗವು ಯಶಸ್ವಿಯಾಗಿರುವುದು ಹೆಮ್ಮೆ ತಂದಿದೆ’ ಎಂದು ಅವರು ತಿಳಿಸಿದರು.

ಪ್ರಸ್ತುತ, ಮುಂದಿನ ಯೋಜನೆ

‘ಓದೋಣ ಪುಸ್ತಕ, ಬೆಳೆಸೋಣ ಮಸ್ತಕ’ ಎಂಬ ಕಾರ್ಯಕ್ರಮದಡಿ ಸಂಘವು ವಿವಿಧ ಪ್ರೌಢಶಾಲೆ, ಕಾಲೇಜುಗಳಲ್ಲಿ ಸಾಹಿತ್ಯ ಸ್ಪರ್ಧೆ ಹಮ್ಮಿಕೊಳ್ಳುತ್ತದೆ. ಕಿರಿಯರಲ್ಲಿ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಪುಸ್ತಕ ಮಳಿಗೆಯನ್ನು ಸ್ಥಾಪಿಸುವ ಉದ್ದೇಶವಿದೆ. ಮಳಿಗೆಯಲ್ಲಿ ಸಂಘದಿಂದ ಪ್ರಕಟಿತ ಪುಸ್ತಕಗಳನ್ನು ಅಲ್ಲದೇ ಇತರೆ ಪ್ರಕಾಶನಗಳ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡುವ ಮತ್ತು ಮಾರಾಟ ಮಾಡುವ ಗುರಿಯಿದೆ. ಈಗಾಗಲೇ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ' ಎಂದು ಅಕ್ಕೋಣೆ ತಿಳಿಸಿದರು.

ಸಂಘದ ಸದಸ್ಯತ್ವ ಮಾಹಿತಿ

ಸಾಹಿತ್ಯದ ಕುರಿತು ಆಸಕ್ತಿಯುಳ್ಳ ಬರಹಗಾರರು ಮತ್ತು ಓದುಗರು ಸಂಘದ ಸದಸ್ಯತ್ವ ಪಡೆಯಬಹುದು. ವಯಸ್ಸು, ಪ್ರದೇಶ, ಜಾತಿ–ಧರ್ಮ ಯಾವುದೇ ಷರತ್ತು ಅಥವಾ ನಿರ್ಬಂಧವಿಲ್ಲ. ಸಾಹಿತ್ಯಾಸಕ್ತರು ₹1 ಸಾವಿರ ಶೇರು ಹಣ ನೀಡಿ ಸದಸ್ಯರಾಗಬಹುದು. ಶಿಕ್ಷಣ ಸಂಸ್ಥೆಗಳು, ಸಾಹಿತ್ಯಿಕ–ಸಾಂಸ್ಕೃತಿಕ ಸಂಘಗಳು ಮತ್ತು ಸಹಕಾರಿ ಸಂಘಗಳು ₹5 ಸಾವಿರ ಶೇರು ಹಣ ಕೊಟ್ಟು ಸದಸ್ಯತ್ವ ಪಡೆಯಬಹುದು. ಪ್ರತಿ ಸದಸ್ಯರಿಗೆ ಒಂದು ಪುಸ್ತಕ ಉಚಿತವಾಗಿ ನೀಡಲಾಗುತ್ತದೆ. ಸಂಘವು ಗಳಿಸುವ ಲಾಭವನ್ನು ಸದಸ್ಯರಿಗೆ ಪುಸ್ತಕ ರೂಪದಲ್ಲಿ ಕೊಡಲಾಗುತ್ತದೆ.

ಮಾಹಿತಿಗೆ ಅಪ್ಪಾರಾವ ಅಕ್ಕೋಣೆಯವರ ದೂರವಾಣಿ ಸಂಖ್ಯೆ: 94485 70985.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.