ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ತ್ರಿವರ್ಣ ರಾಷ್ಟ್ರಧ್ವಜ ಈ ದೇಶದ ಅಸ್ಮಿತೆ. ಹಳ್ಳಿಯಿಂದ ದಿಲ್ಲಿಯವರೆಗೆ ಹಾರಾಡುವ ಧ್ವಜದ ಎದುರು ನಿಂತರೆ, ಎಂತಹವರಿಗೂ ದೇಶಪ್ರೇಮ ಎದೆ ತುಂಬಿ ಬರುತ್ತದೆ. ಭಾರತೀಯತೆಯ ಸಂಕೇತವಾಗಿರುವ ಈ ರಾಷ್ಟ್ರಧ್ವಜ ತಯಾರಾಗುವುದು ಕರ್ನಾಟಕದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ. ಬ್ಯುರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ನಿಂದ (ಐಬಿಎಸ್) ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಈ ಸಂಘದ್ದು.
ಸ್ವಾತಂತ್ರ್ಯ ಹೋರಾಟದ ಜತೆ ಜತೆಗೆ ಬೆಳೆದ ಖಾದಿ ಚಳವಳಿಯ ಭಾಗವಾಗಿ, 1957 ರ ನವೆಂಬರ್ 1 ರಂದು ಬೆಂಗೇರಿಯಲ್ಲಿ ಸಂಘ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ವಿ.ಟಿ. ಮಾಗಡಿ ಸಂಘದ ಮೊದಲ ಅಧ್ಯಕ್ಷರಾದರೆ, ಶ್ರೀರಂಗ ಕಾಮತ್ ಮೊದಲ ಉಪಾಧ್ಯಕ್ಷ. ಸದಸ್ಯರಾಗಿದ್ದ ಅಂಕೋಲಾದ ಎಚ್.ಎ. ಪೈ, ಬಿಜಾಪುರದ ಪಿ.ಎಚ್. ಅನಂತ ಭಟ್, ಬೆಳಗಾವಿಯ ಜಯದೇವರಾವ್ ಕುಲಕರ್ಣಿ, ಧಾರವಾಡದ ಬಿ.ಜೆ. ಗೋಖಲೆ, ಚಿತ್ರದುರ್ಗದ ವಾಸುದೇವ ರಾವ್ ಹಾಗೂ ರಾಯಚೂರಿನ ಬಿ.ಎಚ್. ಇನಾಂದಾರ್ ಅವರ ಕನಸಿನ ಕೂಸು ಈ ಸಂಘ.
ಅಪ್ಪಟ ಗಾಂಧಿವಾದಿಗಳಾದ ಎಲ್ಲರೂ ಖಾದಿ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ, ತಲಾ ₹ 10,500 ಕೊಡುಗೆಯೊಂದಿಗೆ ಸಂಘಟವನ್ನು ಕಟ್ಟಿ ಬೆಳೆಸಿದರು. ಅವರ ದೂರದೃಷ್ಟಿಯಿಂದಾಗಿ ರಾಜ್ಯದಾದ್ಯಂತ 54 ಸಂಸ್ಥೆಗಳು ಸಂಘದ ನೆರಳಿನಲ್ಲಿ ರಾಷ್ಟ್ರಧ್ವಜ ಹಾಗೂ ಖಾದಿ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುತ್ತಿವೆ. 12 ಎಕರೆ ವಿಶಾಲವಾದ ಜಾಗದಲ್ಲಿರುವ ಸಂಘವು, 64 ವರ್ಷಗಳಿಂದ ನೂರಾರು ಕುಟುಂಬಗಳನ್ನು ಸಲಹಿಕೊಂಡು ಬಂದಿದೆ.
ಖಾದಿ ಉತ್ಪನ್ನಗಳಿಗಷ್ಟೇ ಸೀಮಿತಗೊಂಡಿದ್ದ ಸಂಘದಲ್ಲಿ ರಾಷ್ಟ್ರಧ್ವಜ ತಯಾರಿಸುವ ಕನಸು ಮೊಳಕೆಯೊಡೆದಿದ್ದು 2004 ರಲ್ಲಿ ಬಿ.ಎಸ್. ಪಾಟೀಲ ಅವರು ಅಧ್ಯಕ್ಷರಾಗಿದ್ದಾಗ. ಅಂತಿಮವಾಗಿ ಬಿಐಎಸ್‌ನಿಂದ 2006 ರ ಫೆ. 18 ರಂದು ಅನುಮತಿ ಸಿಕ್ಕಿತು. ಅಂದಿನಿಂದ ಆರಂಭಗೊಂಡ ಧ್ವಜಗಳ ತಯಾರಿಕೆ ಇಂದಿನವರೆಗೆ ನಡೆದುಕೊಂಡು ಬಂದಿದೆ. ಅದಕ್ಕೂ ಮುಂಚೆ ಮುಂಬೈ ಮೂಲದ ಖಾಸಗಿ ಸಂಸ್ಥೆಯೊಂದು ಧಾರವಾಡ ತಾಲ್ಲೂಕಿನ ಗರಗ ಖಾದಿ ಕೇಂದ್ರದಿಂದ ಬಟ್ಟೆಯನ್ನು ಪಡೆದುಕೊಂಡು ರಾಷ್ಟ್ರಧ್ವಜವನ್ನು ತಯಾರಿಸುತ್ತಿತ್ತು.
ಎಲ್ಲವೂ ಒಂದೇ ಕಡೆ
‘ಧ್ವಜ ತಯಾರಿಸಲು ಬೇಕಾದ ಬಟ್ಟೆಗೆ ಗುಣಮಟ್ಟದ ಅರಳೆ ಖರೀದಿಯಿಂದಿಡಿದು, ರಾಷ್ಟ್ರಧ್ವಜದ ಪ್ಯಾಕಿಂಗ್‌ವರೆಗಿನ ಕೆಲಸಗಳು ನಡೆಯುವ ದೇಶದ ಏಕೈಕ ಸಂಘ ನಮ್ಮದು. ಚರಕದಿಂದ ನೂಲು ತೆಗೆದು, ಕೈಮಗ್ಗದಿಂದ ತಯಾರಾದ ಬಟ್ಟೆಗಳು ಇಲ್ಲಿಗೆ ಬರುತ್ತವೆ. ಇಲ್ಲಿ ಬ್ಲೀಚಿಂಗ್, ಡೈಯಿಂಗ್, ಪ್ರಿಂಟಿಂಗ್, ಕಟ್ಟಿಂಗ್, ಸ್ಟಿಚ್ಚಿಂಗ್, ಐರನಿಂಗ್, ಟ್ಯಾಗಲ್ (ಅಡ್ಡಬೆಣೆ) ಪೋಣಿಸಿ ಅಂತಿಮವಾಗಿ ವಿವಿಧ 9 ಅಳತೆಯ ರಾಷ್ಟ್ರಧ್ವಜಗಳನ್ನು ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ’ ಎಂದು ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು, ಧ್ವಜ ತಯಾರಿಕೆಯ ಹಂತಗಳ ಬಗ್ಗೆ ತಿಳಿಸಿದರು.
‘ಆರಂಭದಲ್ಲಿ ಸಂಘದಲ್ಲಿ 1500 ಜನ ಕೆಲಸ ಮಾಡುತ್ತಿದ್ದರು. ಈಗ ಅದು 800 ಕ್ಕೆ ಇಳಿಕೆಯಾಗಿದೆ. ಈ ಪೈಕಿ ಶೇ 95 ರಷ್ಟು ಮಹಿಳೆಯರೇ ಎಂಬುದು ವಿಶೇಷ. ಸಂಘದ ಕ್ಯಾಂಪಸ್‌ನಲ್ಲಷ್ಟೇ ಅಲ್ಲದೆ ಬಾಗಲಕೋಟೆಯ ಗದ್ದಿನಕೇರಿ, ಬಾದಾಮಿ, ಬೀಳಗಿ ತಾಲ್ಲೂಕಿನ ಹಳ್ಳಿಗಳಲ್ಲೂ ಸಂಘಕ್ಕಾಗಿ ದುಡಿಯುವ ಕಾರ್ಮಿಕರಿದ್ದಾರೆ. ಅವರ ಬ್ಯಾಂಕ್ ಖಾತೆಗಳಿಗೆ ಸಂಘವು ವಾರಕ್ಕೊಮ್ಮೆ ಸಂಬಳ ಪಾವತಿಸುತ್ತದೆ’ ಎಂದು ಹೇಳಿದರು.
ವ್ಯವಹಾರದಲ್ಲಿ ಏರಿಳಿತ
‘ಕೊರೊನಾ ಹಾಗೂ ಲಾಕ್‌ಡೌನ್ ಸಂಘದ ವ್ಯವಹಾರದ ಮೇಲೂ ಪರಿಣಾಮ ಬೀರಿದೆ. ಇದರಿಂದಾಗಿ ರಾಷ್ಟ್ರಧ್ವಜದಿಂದಿಡಿದು ಸಂಘದಲ್ಲಿರುವ ಇತರ ಖಾದಿ ಉತ್ಪನ್ನಗಳ ಮಾರಾಟವೂ ಗಣನೀಯವಾಗಿ ಕುಸಿದಿದೆ. 2020 ರಲ್ಲಿ ಗಣ್ಯರಾಜ್ಯೋತ್ಸವದ ಹೊತ್ತಿಗೆ ಸಂಘವು ₹ 1.85 ಕೋಟಿ ಮೊತ್ತದ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಿತ್ತು. ಈ ಬಾರಿ ಮಾರಾಟ ಶೇ. 60 ರಷ್ಟು ಕುಸಿತ ಕಂಡಿದ್ದು, ₹ 87 ಲಕ್ಷ ಮೊತ್ತದ ಧ್ವಜಗಳು ಮಾತ್ರ ಮಾರಾಟವಾಗಿವೆ’ ಎನ್ನುತ್ತಾರೆ ಮಠಪತಿ.
‘ಶಾಲಾ–ಕಾಲೇಜುಗಳು ಮುಚ್ಚಿದ್ದರಿಂದ, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಹಬ್ಬಗಳ ಸರಳ ಆಚರಣೆಗೆ ಒತ್ತು ನೀಡಿದ್ದರಿಂದ ಹಾಗೂ ಸಂಘ–ಸಂಸ್ಥೆಗಳು ಕೊರೊನಾ ಕಾರಣದಿಂದಾಗಿ, ಹಬ್ಬಗಳ ಆಚರಣೆಯನ್ನು ನಿಲ್ಲಿಸಿದ್ದರಿಂದ ಧ್ವಜಗಳಿಗೆ ಬೇಡಿಕೆ ಕುಸಿಯಿತು. ಹೊರ ರಾಜ್ಯಗಳಿಂದಲೂ ಬೇಡಿಕೆ ಬರಲಿಲ್ಲ. ಅದರ, ಬಿಸಿ ಎಷ್ಟರ ಮಟ್ಟಿಗೆ ತಟ್ಟಿತು ಎಂದರೆ, ಸಂಘದಲ್ಲಿ ಕೆಲಸ ಮಾಡುವವರಿಗೆ ನಾಲ್ಕೈದು ವಾರ ಸಂಬಳ ಕೊಡಲು ಸಹ ಪರದಾಡಬೇಕಾಯಿತು. ಧ್ವಜ ಮಾರಾಟದಿಂದ ಬರುವ ಆದಾಯವೇ ಎಲ್ಲರ ಹೊಟ್ಟೆ ತುಂಬಿಸಬೇಕು. ಸಂಘಕ್ಕೆ ಹಿಂದೆಂದೂ ಇಂತಹ ಸ್ಥಿತಿ ಬಂದಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಅಂದಹಾಗೆ, ಒಮ್ಮೆ ಖರೀದಿಸಿದ ಧ್ವಜವನ್ನು ಹೆಚ್ಚೆಂದರೆ ಮೂರ್ನಾಲ್ಕು ಬಾರಿ ಬಳಸಬಹುದು. ಹಾಗಾಗಿ, ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳು ಹಾಗೂ ಸಂಘ–ಸಂಸ್ಥೆಗಳಿಂದ ಆಗಾಗ ಧ್ವಜ ಖರೀದಿಸುವುದು ಸಾಮಾನ್ಯ. ಧ್ವಜ ತಯಾರಿಕೆಗೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಪರಿಗಣಿಸಿ, ಧ್ವಜಗಳ ಮಾರಾಟ ದರವನ್ನು ಪರಿಷ್ಕರಿಸಲಾಗುತ್ತದೆ.
ಬಾರದ ಅನುದಾನ
ದೇಶಿಯ ಉತ್ಪಾದನೆ ಬಗ್ಗೆ ಮಾತನಾಡುವ ಸರ್ಕಾರಗಳು, ನಮ್ಮ ಅಸ್ಮಿತೆಯಾದ ಖಾದಿ ಗ್ರಾಮೋದ್ಯೋಗವನ್ನು ಕಡೆಗಣಿಸುತ್ತಲೇ ಬಂದಿವೆ. ಬೆಂಗೇರಿಯ ಸಂಘವು ಇದಕ್ಕೆ ಹೊರತಾಗಿತಲ್ಲ. ರಾಜ್ಯ ಸರ್ಕಾರವು ಸಂಘಕ್ಕೆ ನೀಡಬೇಕಾದ ₹ 3 ಕೋಟಿ ಡಿಎಂಎ (ಮ್ಯಾಜ್ಯುಫ್ಯಾಕ್ಚರರ್ಸ್ ಡೆವಲಪ್‌ಮೆಂಟ್ ಅಸಿಸ್ಟೆನ್ಸ್) ಅನ್ನು ಮೂರು ವರ್ಷವಾದರೂ ಕೊಟ್ಟಿಲ್ಲ. ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಸೇರುವ ಈ ಹಣವನ್ನು ಇಂತಹ ಸಂಕಷ್ಟ ಕಾಲದಲ್ಲಿ ಬಿಡುಗಡೆ ಮಾಡಿದ್ದರೆ, ಎಲ್ಲರೂ ನಿಟ್ಟುಸಿರು ಬಿಡುತ್ತಿದ್ದರು.
ಸರ್ಕಾರ ರಾಜ್ಯದಾದ್ಯಂತ ಬಾಕಿ ಉಳಿಸಿಕೊಂಡಿರುವ ಡಿಎಂಎ ₹ 110 ಕೋಟಿ. ಈ ಪೈಕಿ, ಧಾರವಾಡ ಜಿಲ್ಲೆಯ ಪಾಲು ₹ 10 ಕೋಟಿ ಇದೆ. ಅಂದಾಜು 25 ಸಾವಿರ ಕಾರ್ಮಿಕರು ಈ ಹಣಕ್ಕಾಗಿ ಎದುರು ನೋಡುತ್ತಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಖಾದಿ ಮತ್ತು ಗ್ರಾಮೋದ್ಯೋಗದ ಕಾರ್ಮಿಕರಿಗೆ ಬಿಡಿಗಾಸು ನೆರವನ್ನೂ ನೀಡಲಿಲ್ಲ. ಕಡೆ ಪಕ್ಷ ಅವರ ಪಾಲಿನ ಡಿಎಂಎ ಕೊಡಲೂ ಮೀನಮೇಷ ಎಣಿಸುತ್ತಿದೆ. ಹೀಗಾದರೆ, ನಮ್ಮ ನೆಲದ ಅಸ್ಮಿತೆಯಾದ ಖಾದಿ ಹಾಗೂ ಈ ಕೆಲಸವನ್ನೇ ನೆಚ್ಚಿಕೊಂಡಿರುವವ ಬದುಕು ಉಳಿಯುವುದಾದರೂ ಹೇಗೆ?
ರಾಷ್ಟ್ರಧಜ್ವ ಮ್ಯೂಸಿಯಂ ಮತ್ತು ಮಾರಾಟ ಎಂಪೋರಿಯಂ ಕಟ್ಟಡ ನಿರ್ಮಾಣಕ್ಕಾಗಿ 2015ರಲ್ಲಿ ₹ 1 ಕೋಟಿ ಘೋಷಿಸಿದ್ದ ಸರ್ಕಾರ, ಆ ಪೈಕಿ ಬಿಡುಗಡೆ ಮಾಡಿದ್ದು ₹ 33 ಲಕ್ಷ ಮಾತ್ರ. ಉಳಿದ ಹಣ ಐದು ವರ್ಷವಾದರೂ ಬಿಡುಗಡೆಯಾಗದಿರುವುದರಿಂದ, ಕಟ್ಟಡಗಳ ನಿರ್ಮಾಣ ಕೆಲಸ ನನೆಗುದಿಗೆ ಬಿದ್ದಿದೆ.
ಖಾದಿಯೇತರ ಧ್ವಜಗಳ ಹಾವಳಿ
ರಾಷ್ಟ್ರಧ್ವಜವನ್ನು ಬಿಐಎಸ್ ಮಾನ್ಯತೆ ಪಡೆದವರು, ನಿರ್ದಿಷ್ಟ ಅಳತೆಯಲ್ಲಿ ತಯಾರಿಸಬೇಕು ಎಂಬ ನಿಯಮವಿದ್ದರೂ ಅದು ಕಾಗದಕ್ಕಷ್ಟೇ ಸೀಮಿತವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಬಂದರೆ, ಪ್ಲಾಸ್ಟಿಕ್ ಹಾಗೂ ಇತರ ಕಳಪೆ ಗುಣಮಟ್ಟದ ಬಟ್ಟೆಗಳಲ್ಲಿ ತಯಾರಿಸಿದ ರಾಷ್ಟ್ರಧ್ವಜಗಳು ಬೀದಿ ಬೀದಿಗಳಲ್ಲಿ ರಾರಾಜಿಸುತ್ತವೆ. ಕಿರಾಣಿ ಅಂಗಡಿಗಳಿಂದಿಡಿದು ದೊಡ್ಡ ಅಂಗಡಿಗಳವರೆಗೆ ಇಂತಹ ಬಾವುಟಗಳ ಮಾರಾಟ ಅಂಕೆ ಇಲ್ಲದೆ ನಡೆಯುತ್ತದೆ.
‘ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಬೀದಿ ಬೀದಿಗಳಲ್ಲಿ ಮಾರಾಟ ಮಾಡುತ್ತಾರೆ. ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಇದನ್ನು ಕೇಳುವವರೇ ಇಲ್ಲ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನ. ಹಾಗಾಗಿ, ಖಾದಿಯೇತರ ಬಾವುಟಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು. ಅಧಿಕೃತವಾಗಿ ತಯಾರಿಸುವ ಸಂಸ್ಥೆಗಳಿಂದಲೇ ಎಲ್ಲರೂ ಧ್ವಜ ಖರೀದಿಸುವಂತೆ ಮಾಡಬೇಕು. ಇದರಿಂದ, ನೂರಾರು ಕುಟುಂಬಗಳಿಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ’ ಎನ್ನುತ್ತಾರೆ ಬೆಂಗೇರಿಯ ಖಾದಿ ಗ್ರಾಮೋದ್ಯೋಗದ ಕಾರ್ಯದರ್ಶಿ ಮಠಪತಿ.
ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.