ಬಂಧಗಳು ಫ್ರೆಂಡ್, ಅನ್ ಫ್ರೆಂಡ್ ಎಂಬ ಒತ್ತುಗುಂಡಿಯೊಳಗೆ ಅವಿತುಕೊಂಡಿರುವಾಗ, ಯಾರು ಯಾರನ್ನೂ ನಂಬದೆ ಕಣ್ಣೊಳಗೆ ಗುಮಾನಿಯಿಟ್ಟುಕೊಂಡು ಬದುಕುತ್ತಿರುವಾಗ, ಯಾವುದೇ ಸಂಬಂಧಗಳು ದೀರ್ಘಕಾಲ ಉಳಿಯದೆ ತುಂಡಾಗುತ್ತಿರುವ ಈ ಹೊತ್ತಿನಲ್ಲಿ ನಾವು ನಮ್ಮ ‘ಬಂಧ’ಗಳನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದೇವೆ. ಒಂದಾದರೂ ಪ್ರಾಮಾಣಿಕ ‘ಬಂಧ’ ವಿಲ್ಲದ ಮನುಷ್ಯ ನಿಜಕ್ಕೂ ಒಂದರ್ಥದಲ್ಲಿ ಅನಾಥನೇ ಸೈ..
ಅವಳು ನಮ್ಮ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ. ಅವರದೇ ಬೀದಿಯಿಂದ ಬರುವ ಎಂಟನೇ ತರಗತಿ ಹುಡುಗನೂ ನಮ್ಮ ಶಾಲೆಯಲ್ಲಿದ್ದಾನೆ. ಒಮ್ಮೆ ಏನಾಯ್ತೊ ಆ ಹುಡುಗಿ ಪ್ರಜ್ಞೆ ತಪ್ಪಿ ಬಿದ್ದಿದಾಳೆ. ಇಡೀ ಶಾಲೆಯಲ್ಲಿ ಎಲ್ಲರಿಗಿಂತ ಆ ಹುಡುಗ ಹೆಚ್ಚು ಕಾಳಜಿಗಿಳಿದ. ನೀರು ಹಿಡಿದು ಓಡಿ ಬಂದ, ಗಾಳಿ ಬೀಸಿದ, ಓಡಿ ಹೋಗಿ ಮನೆಯವರನ್ನು ಕರೆ ತಂದ. ಇವಳು ನಮ್ಮವಳು, ನಮ್ಮ ಬೀದಿಯವಳು ಎಂಬ ಭಾವ ಇತ್ತಲ್ಲ ಅದೇ ಅವನನ್ನು ಹಾಗೆ ಮಾಡಿಸಿದೆ. ಅದೊಂದು ಗೊತ್ತಿಲ್ಲದೆ ಬೆಸೆದ ಬಂಧ; ಅವಳು ಅವನ ಕೈಗೆ ಕಟ್ಟದೆಯೂ ಕಟ್ಟಿರುವ ಒಂದು ಚೆಂದದ ದಾರ. ಇಡೀ ಜಗತ್ತು ಇಂತಹ ಬಂಧದಲ್ಲಿ ಬಂಧಿಸಿಕೊಂಡರೆ ಎಷ್ಟೊಂದು ಚೆಂದ ಅನಿಸಿತು ಅವತ್ತು. ಮುಂದಿನ ವಾರ ರಕ್ಷಾಬಂಧನ ಹಬ್ಬ. ಈ ಕಾರಣಕ್ಕೆ ಇದೆಲ್ಲವೂ ನೆನಪಾಯ್ತು.
ಸಂಬಂಧಗಳು ಕೈಗೆ ಕಟ್ಟಿದ ದಾರ ಮೇಲೆ ನಡೆಯುವುದಿಲ್ಲ, ಕೊಡುವ ಉಡುಗೊರೆಗಳ ಮೇಲೆ ನಡೆಯುವುದಿಲ್ಲ, ಗೆಳೆತನದ ಹೆಸರಲ್ಲಿ ಕಟ್ಟುವ ಬ್ಯಾಂಡು ಯಾವ ಮೋಡಿ ಮಾಡೀತು ? ಎನ್ನುವ ಮಾತುಗಳನ್ನು ನಾನು ಕೇಳಿಸಿಕೊಳ್ಳುವುದಿಲ್ಲ. ಡಾಕ್ಟರ್ ಮೂರು ಮಾತ್ರೆ ಕೊಟ್ಟು ‘ಡೋಂಟ್ ವರಿ ಇದನ್ನ ತೆಗೊಳಿ ಸರಿ ಹೋಗುತ್ತೆ’ ಅಂದಾಗ ನಾವು ಆ ಮಾತು ಕೇಳಿಸಿಕೊಂಡು ಅರ್ಧ ಹುಷಾರಾಗುತ್ತೇವೆ. ಆ ಮಾತ್ರ ವರ್ಕ್ ಆಗುತ್ತೆ ಅಂತ ನಂಬಿ ನುಂಗುತ್ತೇವೆ. ಆ ನಂಬಿಕೆಯಲ್ಲೇ ನಾವು ಇನ್ನರ್ಧ ಹುಷಾರಾಗುತ್ತೇವೆ. ಕೈಗೊಂದು ದಾರಿ ಕಟ್ಟಿ ನೀನು ನನ್ನ ಸಹೋದರ ಕಣೋ ಅನ್ನುವ ಹೇಳಿಯೂ ಹೇಳದ ಮಾತಿದೆಯಲ್ಲ ಅದು ಬಂಧವನ್ನು ರಕ್ಷಿಸುತ್ತದೆ. ಒಂದು ಹಬ್ಬದ ನೆಪದಲ್ಲಿ ಕೈಗೆ ಕಟ್ಟುವ ತುಂಡು ದಾರ ಯಾವ ಮ್ಯಾಜಿಕ್ ಮಾಡಲು ಸಾಧ್ಯ? ಅನ್ನುವ ಪ್ರಶ್ನೆ ಇದ್ದದ್ದೆ. ಆದರೆ ಅದೇ ಕಟ್ಟುವ ದಾರ ನಿಜಕ್ಕೂ ಒಂದು ಮ್ಯಾಜಿಕ್ ಮಾಡುತ್ತೆ ಅನ್ನುವ ನಂಬಿಕೆ ಇದೆಯಲ್ಲ ಅದು ಎಲ್ಲದಕ್ಕೂ ಸಜ್ಜುಗೊಳಿಸುತ್ತದೆ.
‘ಪ್ರಪಂಚದಲ್ಲಿ ನಾವು ನಂಬಿರುವ ದೇವರುಗಳು ಕಲ್ಲಾಗಿರಬಹುದು. ಆದರೆ ಅವುಗಳನ್ನು ಪೂಜಿಸುವ ನಮ್ಮ ಮನಸುಗಳು ಕಲ್ಲಲ್ಲ ಬದುಕು ನಂಬಿಕೆಯ ಕೈ ಗನ್ನಡಿ’
ಮನೆಯಿಂದ ಹೊರಡಲು ಅಂಜುವ ಹೆಣ್ಣು, ಕೆಲಸ ಮಾಡುವ ಜಾಗದಲ್ಲಿ ಕಾಡುವ ಅಭದ್ರತೆ, ತಾನು ಇಲ್ಲಿ ಸುರಕ್ಷಣಳಲ್ಲ ಎನ್ನಿಸುವ ಅವಳ ಆತಂಕ, ಹೆಣ್ಣನ್ನು ಸದಾ ಹಸಿದ ಕಣ್ಣಲ್ಲಿ ನೋಡುವ ಜನರ ವಕ್ರ ಮನಸು ಇವುಗಳ ಮಧ್ಯೆ ನಾನು ನಡೆಯುವಾಗ ಮಹಾಭಾರತ ಆ ಒಂದು ತುಂಡು ಕಥೆ ನೆನಪಾಗುತ್ತದೆ. ಶಿಶುಪಾಲನನ್ನು ಕೊಲ್ಲುವುದಕ್ಕೆ ಸುದರ್ಶನ ಚಕ್ರ ಎತ್ತಿದ ಕೃಷ್ಣನ ಬೆರಳ ರಕ್ತ ಕಂಡು ದ್ರೌಪದಿ ಕಟ್ಟಿದ ತನ್ನ ಸೀರೆಯ ತುಣುಕು ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ರಕ್ಷಿಸಲ್ಪಟ್ಟ ಕಥೆಗೆ ಶ್ರೀಕೃಷ್ಣ ಮತ್ತು ದ್ರೌಪದಿ ಸಹೋದರ-ಸಹೋದರಿ. ಸದ್ಯದ ಜಗತ್ತಿಗೆ ತುರ್ತಾಗಿ ಬೇಕಾದ ಬಂಧ ಇದು. ಭ್ರಾತೃತ್ವದ ವಿಟಮಿನ್ ಕೊರತೆಯಿಂದ ಜಗತ್ತು ಎಷ್ಟೊಂದು ಬಡವಾಗಿ ಹೋಗಿದೆ.
ಸುರಕ್ಷತೆಯ ಭಾವ ಅನ್ನುವುದಿದೆಯಲ್ಲ ಅದು ಆಹಾರ ನಿದ್ರೆ ಮೈಥುನದ ಅಗತ್ಯಗಳಂತೆಯೇ ಮಾನವ ಮನಸ್ಸಿಗೆ ಅತ್ಯವಶ್ಯಕವಾದ ಸಂಗತಿ. ಸುರಕ್ಷತಾ ಭಾವವಿಲ್ಲದೆ ಬದುಕು ಸುಂದರವಾಗಿರದು. ಅದು ಅಭದ್ರತೆಯಲ್ಲಿ ನಲುಗುತ್ತದೆ. ಕುಟುಂಬ, ಸಮುದಾಯ ಮತ್ತು ಸಮಾಜಗಳು ತಮ್ಮಲ್ಲೇ ಪರಸ್ಪರ ಈ ಸುರಕ್ಷತಾ ಭಾವವನ್ನು ಹುಟ್ಟಿಸಿಕೊಳ್ಳುವ ಹಬ್ಬ ರಕ್ಷಾಬಂಧನವೆಂದರೆ, ಸಹೋದರಿ ಸಹೋದರನಿಗೆ ಕಟ್ಟುವ ರಕ್ಷೆಯಾದರೂ ಇದೇ ಅರ್ಥದ್ದು. ಭ್ರಾತೃಭಾವದ ಜಾಗರಣಕ್ಕಾಗಿ ಈ ಹಬ್ಬವನ್ನೇ ವಿಸ್ತಾರಗೊಳಿಸಿ ಸಹೋದರರೂ ಪರಸ್ಪರ ರಕ್ಷಾವಿನಿಮಯ ಮಾಡಿಕೊಳ್ಳಬೇಕಾದದ್ದು ಈಗಿನ ತುರ್ತು. ಭಯ ಹುಟ್ಟಿಸಲೆಂದೇ ಹೊರಟ ದುಷ್ಟಚಿಂತನೆಗಳ ವಿರುದ್ಧ ರಕ್ಷಾಬಂಧನ ಅನ್ನುವುದೊಂದು ಸಾತ್ವಿಕ ಯುದ್ಧ ಇರುಳ ವಿರುದ್ಧದ ಬೆಳಕಿನ ಯುದ್ಧದಂತೆ.
ಬಂಧಗಳನ್ನು ಒಪ್ಪಂದ ಮಾಡಿ ಭದ್ರವಾಗಿರಿಸುವ ಸಾಂಕೇತಿಕ ಹಬ್ಬ ರಕ್ಷಾ ಬಂಧನ. ಇದು ಅಣ್ಣ-ತಂಗಿಯರ ಎಲ್ಲೊ ಹುಟ್ಟಿದ ಭ್ರಾತೃತ್ವವನ್ನು ಪ್ರತ್ಯಕ್ಷೀಕರಿಸಿ ತೋರಿಸಿಕೊಡುವ ಅತ್ಯಂತ ಮೌಲ್ಯಭರಿತ ಹಬ್ಬವೇ ಸರಿ. ಕಟ್ಟುವ ಒಂದು ತುಣುಕು ದಾರದ ನೆಪದಲ್ಲಾದರೂ ನಮ್ಮ ಸಹೋದರತ್ವದ ಬಂಧಗಳು ಬದುಕಲಿ, ಚೆಂದವಾಗಲಿ ಮತ್ತು ನಮ್ಮನ್ನು ಪೊರೆಯಲಿ. ರಕ್ಷಾಬಂಧನ ನಮ್ಮೆಲ್ಲರ ‘ಬಂಧ’ಗಳನು ರಕ್ಷಿಸುವಂತಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.