ADVERTISEMENT

ಅಣ್ಣನ ಕಾಣಿಕೆ; ಅದಕ್ಕಿಲ್ಲ ಹೋಲಿಕೆ

ರಾಖಿ ಹಬ್ಬದೊಂದಿಗೆ ಬಿಚ್ಚಿಕೊಳ್ಳುವ ಗರಿಗರಿ ನೆನಪುಗಳು...

ಸುಶೀಲಾ ಡೋಣೂರ
Published 10 ಆಗಸ್ಟ್ 2019, 19:30 IST
Last Updated 10 ಆಗಸ್ಟ್ 2019, 19:30 IST
ರಕ್ಷಾಬಂಧನ
ರಕ್ಷಾಬಂಧನ   

ಹೌದು, ರಾಖಿ ಹಬ್ಬ ಅಂದರೇನೇ ಅದು ಅಣ್ಣ ಕೊಡುವ ಕಾಣ್ಕೆಗಾಗಿ ಹಂಬಲಿಸುವ, ಕಾಯುವ, ತುಡಿಯುವ ಕ್ಷಣ. ಹಾಗೆಯೇ ಆ ಕಾಣ್ಕೆಗೆ ಸಮಾನವಾದುದು ಈ ಪರಪಂಚದಲ್ಲಿ ಮತ್ತೊಂದಿಲ್ಲ. ಬೇರೆ ಯಾರೋ ಎಂಥೆಂಥದೊ ಉಡುಗೊರೆ ಕೊಟ್ಟರೂ ಅವ್ಯಾವೂ ಅಣ್ಣ ಕೊಟ್ಟ ಕೊಡುಗೆಗೆ ಸಮನಾಗುವುದಿಲ್ಲ. ಅವನವೇ ಮತ್ತೊಂದು–ಮಗದೊಂದು ಕಾಣಿಕೆಯಷ್ಟೆ ಅದನ್ನು ಮೀರಿಸುಬಹುದೇನೊ.

ಒಂದೊಂದು ಕಾಣಿಕೆಯ ಹಿಂದೆಯೂ ಒಂದೊಂದು ಕಾರಣವಿರುತ್ತದೆ. ಈಗ ಉಪಯೋಗಕ್ಕೆ ಬಾರದೆಂದು ತೆಗೆದಿಟ್ಟ ಆ ಕಾಣಿಕೆ ಕಣ್ಣಿಗೆ ಬಿದ್ದಾಗೊಮ್ಮೆ ಅಣ್ಣನ ನೆನಪಿನ ಮೆರವಣಿಗೆ ಮನದಿಂದೆದ್ದು ನಿಲ್ಲುತ್ತದೆ.

ಎಂದೊ ಕೊಡಿಸಿದ ಒಂದು ಚೂಡಿದಾರ್‌... ಬಣ್ಣ ಮಾಸಿದರೂ ನೆನಪು ಮಾಸುವುದಿಲ್ಲ. ಅವಳು ದೊಡ್ಡವಳಾಗಿ, ಆ ಡ್ರೆಸ್ಸು ಅವಳಿಗೆ ಆಗುವುದಿಲ್ಲವೆನ್ನುವುದು ಖಾತ್ರಿಯಾದ ಮೇಲೂ ಅದನ್ನು ಮಡಿಸಿ ಬಿರುವಿನ ಕೆಳಗಿರುವ ಲಾಕರ್‌ನಲ್ಲಿ ಎತ್ತಿಡುತ್ತಾಳೆ, ಬಂಗಾರ ಇಡುವಷ್ಟೆ ಜತನದಿಂದ; ಅವನು ಕೊಡಿಸಿದ ವಾಚಿನ ಬೆಲ್ಟ್‌ ತುಕ್ಕು ಹಿಡಿದರೂ ಬದಲಿಸಲು ಮನಸ್ಸಾಗುವುದಿಲ್ಲ ಅವಳಿಗೆ... ಅದನ್ನೊಂದು ಕಾಟನ್‌ ಬಟ್ಟೆಯಲ್ಲಿ ಸುತ್ತಿ ಜೋಪಾನವಾಗಿಡುತ್ತಾಳೆ; ಹರಳುಗಳೆಲ್ಲಾ ಉದುರಿ ಹೋದರೂ ಆ ಕಿವಿಯೋಲೆಯ ಮೇಲಿನ ಒಲುಮೆ ಒಂದಿನಿತೂ ಕರಗುವುದಿಲ್ಲ... ಅಂದದ ಡಬ್ಬದಲ್ಲಿ ಹಾಕಿ ಹೊಸತೇ ಎನ್ನುವಂತೆ ತೆಗೆದಿಡುತ್ತಾಳೆ. ಅದು ಕಣ್ಣಿಗೆ ಬಿದ್ದಾಗೊಮ್ಮೆ ಗೊಣಗಿಕೊಳ್ಳುತ್ತಾಳೆ ‘ಅಣ್ಣ ಕೊಡಿಸಿದ್ದು...’ ಅವಳೆಷ್ಟೇ ಮರಗುಳಿಯಾದರೂ ಆ ಕಾಣಿಕೆ ಕೈಸೇರಿದ ಖುಷಿಯ ಕ್ಷಣ ಅವಳ ನೆನಪಿನ ಬುತ್ತಿಯಲ್ಲಿ ಸದಾ ಹಸಿರು. ಬೇಕೆನಿಸಿದಾಗೊಮ್ಮೆ ಹೊರಗೆಳೆಯುತ್ತಾಳೆ ಆಗಷ್ಟೇ ಅರಳಿದ ಮಲ್ಲಿಗೆಯಂತೆ ನಳನಳಿಸುವ ನೆನಪುಗಳ.

ADVERTISEMENT

ಅಣ್ಣ ಕೊಡಿಸುವ ಉಡುಗೊರೆಗಳ ಮೇಲಿನ ಈ ವ್ಯಾಮೋಹ ವರ್ಷಕ್ಕೊಂದು ಪಟ್ಟು ಹೆಚ್ಚಾಗುತ್ತ ಹೋಗುವುದೇ ಮದುವೆಯಾದ ಮೇಲೆ. ಅವನ ಜೊತೆಗಿದ್ದಾಗ ಅವನು ಕೊಡಿಸಿದ ವಸ್ತುಗಳ ಕಿಮ್ಮತ್ತು ಅಷ್ಟಾಗಿ ಗೊತ್ತಾಗದೇನೊ. ಅವನ ಮನೆಯ ಹೊಸಿಲು ದಾಟಿ ಬಂದ ಮೇಲಂತೂ ಅವನು ಬಳಸಿ ಸಾಕಾಗಿ ಕೊಟ್ಟಿದ್ದ ಒಂದು ಪೆನ್ನಿಗೂ ರಾಜಮರ್ಯಾದೆ. ಜೊತೆಗಿದ್ದಾಗ ಜಗಳ–ದೂರು–ಮುನಿಸು–ಹಟವೇ ಢಾಳಾಗಿ, ಅವನ ಮಮಕಾರ ಮಂಕೆನ್ನಿಸಬಹುದು. ಅವನಿಂದ ನಾಲ್ಕು ಹೆಜ್ಜೆ ದೂರ ಸರಿದು ನಿಂತ ಮೇಲಷ್ಟೆ ಅವನ ಅದಮ್ಯ ಪ್ರೀತಿಯೊಂದಿಗೆ, ಕೊಡಿಸಿದ/ಕೊಟ್ಟ ವಸ್ತುಗಳೂ ಭಾವಕೋಶದೊಳಗಿಂದ ಎದ್ದು ಬಂದು ದಾಂಗುಡಿ ಇಡೋದು.

ರಸ್ತೆಯಲ್ಲಿ ಹೋಗುವಾಗ ಯಾವನೋಕಾಕನೋಟ ಹರಿಸಿದಾಗ, ಕಚೇರಿಯಲ್ಲೊಬ್ಬ ಸುಮ್ಮನೇ ಹತ್ತಿರ ಸುಳಿವಾಗ, ಮನೆ ಪಕ್ಕದವ ಕಿಟಕಿಯಲ್ಲಿ ಹಣಕಿದಾಗ, ಸ್ನೇಹಿತರ ಪಟ್ಟಿಯಲ್ಲೂ ಇಲ್ಲದವನು ಮೆಸೆಂಜರ್‌ನಲ್ಲಿ ಪೋಲಿ ಮೆಸೇಜು ಕಳಿಸಿದಾಗ... ಆಗ... ಈಗ... ಅಣ್ಣ ನೆನಪಾಗುತ್ತಲೇ ಇರುತ್ತಾನೆ. ಇಂಥವನ್ನೆಲ್ಲಾ ಸಮರ್ಥವಾಗಿ ಎದುರಿಸುವುದನ್ನು ಕಲಿತ ಮೇಲೂ, ಅಂಥರನ್ನು ಅಲ್ಲಲ್ಲೇ ಹೊಸೆದು ಹಾಕಿ, ಗೆಲುವಿನ ಹೆಜ್ಜೆ ಇಟ್ಟಾಗಲೂ ಅಣ್ಣಪ್ಪ ಕಾಡುತ್ತಾನೆ. ಅವನೆದೆಗೆ ತಲೆಯಿಟ್ಟು, ದೊಡ್ಡದೊಂದು ನಿಟ್ಟುಸಿರು ಬಿಟ್ಟು, ಬ್ರಹ್ಮಾಂಡದ ಬೇಸರವನ್ನೆಲ್ಲ ತೊಡೆದುಕೊಂಡು ಬಿಡಬೇಕು ಎನ್ನುವ ಹಂಬಲಕ್ಕೆ ಫೇಸ್‌ಬುಕ್‌ನ ಅವನ ಭಾವಚಿತ್ರ ನಕ್ಕಂತಾಗುತ್ತದೆ.

ಗಿಜಿಗಿಜಿ ಎನ್ನುವ ಸಿಟಿ ಬಸ್ಸುಗಳಲ್ಲಿ ಅಣ್ಣನ ನೆಚ್ಚಿನ ಹಾಡು ಕಿವಿಗೆ ಬಿದ್ದಾಗ ಮನ ಭಾವುಕತೆಗೆ ಈಡಾಗುತ್ತದೆ. ಅವನಿಷ್ಟದ ಖಾದ್ಯದೆದುರು ಕೂತಾಗ ಗಂಟಲು ಕಟ್ಟಿದಂತಾಗಿ ತುತ್ತು ಅಲ್ಲೇ ಸಿಕ್ಕಿಕೊಳ್ಳುತ್ತದೆ. ಸುಜುಕಿ–ಹೊಂಡಾ–ಪಲ್ಸರ್‌ ಯಾವುದೊ... ಅವನು ಓಡಿಸುತ್ತಿದ್ದ, ಅವಳನ್ನ ಹಿಂದೆ ಕೂರಿಸಿಕೊಂಡು ಊರು ಸುತ್ತಿದ್ದ ಬೈಕ್‌ ಕಣ್ಣಿಗೆ ಬಿದ್ದಾಗ ಎದೆಯಲ್ಲಿ ಎಂಥದೊ ಸೆಳಕು ಮೂಡುತ್ತದೆ. ಅವನಂಥದೇ ಡ್ರೆಸ್ಸು ಹಾಕಿದವನೊ, ಅವನಂಗೇ ಕೂದಲಿರುವವನೊ, ಥೇಟ್‌ ಅವನು ನಡೆವಂತೆಯೇ ಹೆಜ್ಜೆ ಹಾಕುವವನೊ ಕಂಡಾಗಲಂತೂ ಅಂವ ಮರೆಯಾಗೊವರೆಗೂ ಕಣ್ಣು ರೆಪ್ಪೆ ಬಡಿಯುವುದನೂ ಮರೆತು ಆತನನ್ನೇ ಹಿಂಬಾಲಿಸುತ್ತದೆ.

ಇಬ್ಬರ ನಡುವೆ ಅಂತರ ಸೃಷ್ಟಿಸುವ ಅಸುರರು ಒಬ್ಬರೊ ಇಬ್ಬರೊ...ಸಂದರ್ಭಗಳು, ಅನಿವಾರ್ಯತೆಗಳು, ಜವಾಬ್ದಾರಿಗಳು, ಜಂಜಾಟಗಳು... ಇವುಗಳ ನಡುವೆ ಒಂದೊಂದೇ ಹೆಜ್ಜೆ ದೂರ ಸಾಗುತ್ತ... ನೋಡ ನೋಡುತ್ತಿದ್ದಂತೆ ಬಲು ದೂರ ಬಂದು ನಿಂತಂತೆನಿಸುತ್ತದೆ. ಮತ್ತೆಂ‌ದೊ ಅಪರೂಪಕ್ಕೆ ಸಿಕ್ಕಾಗ ಎದೆಯೊಳಗೆ ಅದೇ ಅಕ್ಕರೆ, ಕಣ್ಣೊಳಗೆ ಅದೇ ಮಮಕಾರವಿದ್ದರೂ ಮಾತಿಗೆ ಬರಬೀಳುತ್ತದೆ. ಅಂವ ಬರುವ ಮುಂಚೆ ಮನಸ್ಸು ತುಂಬಿಕೊಂಡ ಮಾತುಗಳು ಎದುರಿಗೆ ಬಂದು ನಿಂತಾಗ ಗಂಟಲಿಂದ ಆಚೆ ಬರುವುದಿಲ್ಲ. ಯಾವುದನ್ನು ಹೇಳುವುದು, ಯಾವುದು ಬೇಡ ಅನ್ನುವ ಜಿಜ್ಞಾಸೆಯಲ್ಲೇ ಆತ ಹೊರಟು ನಿಲ್ಲುತ್ತಾನೆ.ಕೆಲ ತಾಸುಗಳ, ದಿನಗಳ ಭೇಟಿ ಮತ್ತೂ ಅಪೂರ್ಣ. ‘ಮುಂದಿನ ಸಲ ಸಿಕ್ಕಾಗ’ ಅಂತ ಹೇಳಿ ಮನದ ತುದಿಗೆ ಬಂದು ಕೂತ ಮಾತುಗಳನ್ನು ಮತ್ತೆ ಹಿಂದಕ್ಕೆ ತಳ್ಳಿ ಕೀಲಿ ಜಡೆಯುವುದೇ ಕೆಲಸ.

ಮೀಸೆ ಮೂಡುತ್ತಿದ್ದಂತೆ ಅಪ್ಪನಾಗಲು ಹಂಬಲಿಸುವ ಅಣ್ಣ, ವಯಸ್ಸಿನಲ್ಲಿ ತುಸು ಅಂತರವಿದ್ದರಂತೂ ಅಪ್ಪನೇ ಸರಿ, ಅಪ್ಪನಿಗಿಂತ ಒಂದು ಕೈ ಮಿಗಿಲೆಂದರೂ ಸರಿಯೇ. ತಂಗಿಯ ಜವಾಬ್ದಾರಿ ತನ್ನದೇ ಹೊಣೆ ಎಂದು ಬಹು ಬೇಗ ಸಿದ್ಧಗೊಳ್ಳುತ್ತಾನೆ ಮತ್ತು ಅಷ್ಟೇ ಪ್ರೀತಿಯಿಂದ ನಿಭಾಯಿಸುತ್ತಾನೆ. ಓದುವ ಕಾಲೇಜಿನಲ್ಲಿ ಜೊತೆಯಾಗುತ್ತಾನೆ, ನಡೆವ ದಾರಿಯಲ್ಲಿಕಾವಲಾಗುತ್ತಾನೆ, ಕಚೇರಿಯ ಮೊದಲ ದಿನಕ್ಕೂ ಹಿಂದಿರುತ್ತಾನೆ. ಗಂಡನ ಮನೆಗೆ ಹೊರಟು ನಿಂತಾಗ ಮಾತ್ರ ಅಪ್ಪನಿಗಿಂತ ತುಸು ಹೆಚ್ಚೇ ಸಂಕಟ ಪಡುತ್ತಾನೆ, ಅಮ್ಮನಂತೆ ಸಂತೈಸುತ್ತಾನೆ.

ಈ ಇಬ್ಬರ ಮನದಲ್ಲೂ ಕಂಡೂ ಕಾಣದಂಥೊಂದು ‘ಕಿಚ್ಚು’ ಇರುತ್ತದೆನ್ನುವುದೂ ಸುಳ್ಳಲ್ಲ. ಅಣ್ಣನ ಬದುಕಲ್ಲಿ ಬರುವ ‘ಅವಳ’ ಬಗ್ಗೆ; ತಂಗಿಯ ಮನ ಕದಿಯುವ ‘ಅವನ’ ಬಗ್ಗೆ ಇಬ್ಬರಿಗೂ ಅಸಮಾಧಾನ, ಅಪನಂಬಿಕೆ. ಅಣ್ಣನ ಮನದಲ್ಲಿ–ಮನೆಯಲ್ಲಿ ತನಗಿದ್ದ ಜಾಗವನ್ನು ಆಕ್ರಮಿಸಿಯಾಳು, ತಾನು ಹುಟ್ಟಿದ ಮನೆಯಲ್ಲೇ ತನ್ನನ್ನು ಪರಕೀಯಳನ್ನಾಗಿ ನೋಡ್ಯಾಳು ಎನ್ನುವ ಕಳವಳ ಅವಳದು. ಮುದ್ದಿನಿಂದ ಸಾಕಿದ ತಂಗಿಯ ನೋಯಿಸ್ಯಾನು, ಆ ಕೋಮಲ ಕಣ್ಣುಗಳಲ್ಲಿ ಕಂಬನಿ ತಂದಾನು ಎನ್ನುವ ಅಳುಕು ಆತನದು. ಗಂಡನ ಮನೆಯಲ್ಲಿ ತಂಗಿ ಹೇಗಿರಬೇಕೆನ್ನುವಾಗಲೂ ಅವನದು ಭಿನ್ನರಾಗ. ತಗ್ಗಿ–ಬಗ್ಗಿ ನಡಿ ಎನ್ನುವ ಅಪ್ಪನೂ ಅಲ್ಲ, ಹೊಂದಿಕೊಂಡು ಹೋಗೆನ್ನುವ ಅಮ್ಮನೂ ಅವನಲ್ಲ. ಎಲ್ಲಿದ್ದರೂ ತನ್ನ ತಂಗಿ ರಾಣಿಯಂತಿರಬೇಕು; ಅಲ್ಲಿದ್ದವರೆಲ್ಲ ಅವಳಿಗೆ ಅಡಿಯಾಳಾಗಬೇಕು ಎನ್ನುವ ಆಜ್ಞೆ ತುಸು ಅತಿಯೆನಿಸಿದರೂ ಅವನಿಗದು ನ್ಯಾಯವೇ.

ಅಪರೂಪಕ್ಕೆ ತಂಗಿ ತವರಿಗೆ ಬರುವುದೆಂದರೆ ಅವನಿಗದುವೇ ಹಬ್ಬ. ಅವಳಿಗೂ ಅಷ್ಟೆ, ಮಾತು–ಹರಟೆಯಲ್ಲಿ ಬಾಲ್ಯದ ನೆನಹುಗಳನ್ನು ಬಾಚಿಕೊಂಡು ಎದೆಗೂಡಿನ ಕಪಾಟಕ್ಕೆ ತುರುಕಿಕೊಳ್ಳುತ್ತಾಳೆ. ಕಳಿಸಲು ಬರುವ ಅಣ್ಣನ ಕೈ ನೋಡುತ್ತಾಳೆ. ತವರಿಗೆ ಬಂದರೆ ಬರಿಗೈಲಿ ಹಿಂತಿರುಗುವ ಮಾತೆಲ್ಲಿ? ಸಣ್ಣದೊ–ದೊಡ್ಡದೊ ಕೊಡುಗೈ ಅಣ್ಣ ಏನಾದರೂ ಕೊಟ್ಟಾನೆನ್ನುವ ಪುಟ್ಟ ಬಯಕೆ. ಲಕ್ಷಲಕ್ಷ ದುಡಿಯುವವಳಾದರೂ ಅಣ್ಣನ ಉಡುಗೊರೆಯ ಮೇಲೆ ತೀರದ ಮೋಹ. ಅಣ್ಣ ಕಾಣ್ಕೆ ಮರೆತರೂ ಈಗವಳು ನೆನಪಿಸುವುದಿಲ್ಲ, ಹಟವೂ ಇಲ್ಲ, ಸಣ್ಣ ನಿರಾಶೆಯೊಂದು ಮನವನ್ನು ಭಾರಗೊಳಿಸುತ್ತದೆಯಷ್ಟೆ.

ಅದೆಷ್ಟೊ ಹೆಸರುಗಳಲ್ಲಿ, ರೂಪಗಳಲ್ಲಿ, ಅದೆಷ್ಟೊ ಸಂಬಂಧಗಳು ನಮ್ಮ ಸುತ್ತುವರೆಯುತ್ತವೆ. ಕೆಲವು ಹುಟ್ಟಿನಿಂದಲೇ ಬರುತ್ತವೆ. ಕೆಲವು ಆನಂತರ ಹುಟ್ಟಿಕೊಳ್ಳುತ್ತವೆ. ಕೆಲವು ಬದಲಾಗದೇ ಉಳಿಯುತ್ತವೆ, ಕೆಲವು ಬದಲಾಗಿ ಹೋಗುತ್ತವೆ. ಬದಲಾಗಿಯೂ ಬೆರತುಕೊಂಡಿರುವುದು ಈ ಸಂಬಂಧ ಮಾತ್ರ. ಬೇರಾವ ಸಂಬಂಧವೂ ಈ ಅನುಬಂಧಕ್ಕೆ ಸಾಟಿಯಾಗದು. ಅವನ ಉಡುಗೊರೆಯಷ್ಟೇ ಅವನ ಮಮಕಾರಕ್ಕೂ ಪೇಟೆಂಟ್‌ ರೀತಿಯ ಹಕ್ಕುಸ್ವಾಮ್ಯವಿರುತ್ತೆ.

ಅಣ್ಣಯ್ಯ,

ಪ್ರೀತಿಯಲ್ಲಿ–ಮಮತೆಯಲ್ಲಿ ನಿನ್ನನ್ನು ಹಿಂದಿಕ್ಕುವವರು,ನಿನ್ನ ಸ್ಥಾನ ತುಂಬುವವರು,ನಿನಗೆ ಸಮನಾಗುವವರು ಈ ಜಗದಲ್ಲಿ ಮತ್ತ್ಯಾರಿದ್ದಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.