ನವದೆಹಲಿ: ‘ಪ್ರತಿ ಯುಗದಲ್ಲೂ ರಾಮಾಯಣ ಮತ್ತು ಮಹಾಭಾರತವನ್ನು ಹೊಸದಾಗಿ ಬರೆಯಲಾಗಿದೆ, ಹೊಸ ಆಯಾಮದಲ್ಲಿ ಕಥೆ ಹೇಳಲಾಗಿದೆ. ಹೀಗೆ ನೂರಾರು ಶತಮಾನದ ಹಿಂದಿನ ಕಥೆಗಳನ್ನು ಹೊಸದಾಗಿ ಹೇಳುವುದು ಅಥವಾ ಬರೆಯುವುದು ಈ ಹಿಂದೆ ‘ದೈವನಿಂದನೆ’ ಆಗಿರಲಿಲ್ಲ’ ಎಂದು ಪ್ರಸಿದ್ಧ ಕಥೆಗಾರ ಆನಂದ್ ನೀಲಕಂಠನ್ ಅವರು ಅಭಿಪ್ರಾಯಪಡುತ್ತಾರೆ.
ನಳ–ದಮಯಂತಿ ಪ್ರೇಮಕಥೆಯನ್ನು ದಮಯಂತಿ ಮೂಲಕ ಹೇಳುವ ‘ನಳ–ದಮಯಂತಿ’ ಎನ್ನುವ ಹೊಸ ಪುಸ್ತಕವನ್ನು ಬರೆದಿರುವ ಅವರನ್ನು ಪಿಟಿಐ ಸುದ್ದಿ ಸಂಸ್ಥೆ ಸಂದರ್ಶನ ಮಾಡಿದೆ. ಇತ್ತೀಚೆಗೆ ನಡೆದ ಸಿಕ್ಕಿಂ ಕಲಾ ಮತ್ತು ಸಾಹಿತ್ಯ ಉತ್ಸವದಲ್ಲಿ ಈ ಪುಸ್ತಕ ಬಿಡುಗಡೆಯಾಯಿತು. ರಾಮಯಾಣ, ಮಹಾಭಾರತದಂಥ ಮಹಾಕಾವ್ಯಗಳನ್ನು, ಪೌರಾಣಿಕ ಕಥೆಗಳನ್ನು ಪ್ರತಿನಾಯಕನ ದೃಷ್ಟಿಕೋನದಲ್ಲಿ ಪುನಃ ಬರೆಯುವುದಕ್ಕೆ ಆನಂದ್ ಪ್ರಸಿದ್ಧರು.
ಸಂದರ್ಶನದಲ್ಲಿ ಅವರು ಹಂಚಿಕೊಂಡ ಅಭಿಪ್ರಾಯಗಳ ಸಂಗ್ರಹ ರೂಪ ಇಲ್ಲಿದೆ.
ರಾಮಾಯಣವನ್ನು ಅಥವಾ ಮಹಾಭಾರತವನ್ನು ಹೊಸ ಆಯಾಮದಲ್ಲಿ ಪುನಃ ಬರೆಯುತ್ತಿರುವುದು ಇದೇ ಮೊದಲೇನಲ್ಲ. ಸುಮಾರು 1,000ದಿಂದ 2,000ಕ್ಕೂ ಹೆಚ್ಚು ಮಹಾಭಾರತ ಹಾಗೂ 300–340ಕ್ಕೂ ಹೆಚ್ಚು ರಾಮಾಯಣಗಳಿವೆ. ಹೀಗೆ ಪುನಃ ಬರೆಯುವ ಪ್ರಕ್ರಿಯೆಯು ಸುಮಾರು 2,000ದಿಂದ 3,000 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಜೊತೆಗೆ ಈ ಎಲ್ಲವೂ ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ.
ಭಾರತದ ನಾಗರಿಕತೆಯು ಎಂದಿಗೂ ‘ಒಂದು ದೇವರು, ಒಂದು ಧರ್ಮ ಮತ್ತು ಒಂದು ಗ್ರಂಥ’ ಎಂಬುದರ ಬಗ್ಗೆ ನಂಬಿಕೆ ಇರಿಸಿಕೊಂಡಿಲ್ಲ. ಆದ್ದರಿಂದ ನಮ್ಮ ಬಳಿ ಇಷ್ಟೊಂದು ದೊಡ್ಡ ಪ್ರಮಾಣ ಬೇರೆ ಬೇರೆ ಆಯಾಮದ ರಾಮಾಯಣ, ಮಹಾಭಾರತಗಳಿವೆ. ಆದ್ದರಿಂದಲೇ ನಮ್ಮದು ಸಹಿಷ್ಣು ಸಂಸ್ಕೃತಿ. ಆಯಾ ಯುಗದ, ಆಯಾ ಪೀಳಿಗೆಯ ಅವಶ್ಯಕತೆ, ದೃಷ್ಟಿಕೋನ ಹಾಗೂ ಬರಹಗಾರನ ದೃಷ್ಟಿಕೋನಕ್ಕೆ ಅನುಗುಣವಾಗಿ ಕೃತಿಗಳ ದೃಷ್ಟಿಕೋನಗಳು ಬದಲಾಗುತ್ತಲೇ ಬಂದಿವೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಕೂಡ.
‘ನಾನು ಇಂಥ ಮಹಾಕಾವ್ಯಗಳನ್ನು, ಪೌರಾಣಿಕ ಕಥೆಗಳನ್ನು ಪುನಃ ಬರೆಯುವಾಗ ಮೂಲ ಕಥೆಗೆ ಧಕ್ಕೆ ಆಗದಂತೆ ಬರೆಯುತ್ತೇನೆ. ಕಥೆಯ ಕೇಂದ್ರ ಪಾತ್ರದ ದೃಷ್ಟಿಕೋನದ ಮೂಲಕ ಕತೆಯ ಮರುವ್ಯಾಖ್ಯಾನ ಮಾಡುತ್ತೇನೆ ಮತ್ತು ಚಿಂತನಾ ಪ್ರಕ್ರಿಯೆಯನ್ನು ಒರೆಗೆ ಹಚ್ಚುತ್ತೇನೆ. ನನ್ನ ಕಥೆಗಳಲ್ಲಿ ದುರ್ಯೋಧನ ಜಯಶಾಲಿಯಾಗುವುದಿಲ್ಲ. ಪಾತ್ರದ ಮನಸ್ಸನ್ನು ಹೊಕ್ಕು ನಾನು ವ್ಯಾಖ್ಯಾನ ಮಾಡುತ್ತೇನೆ’.
‘ನಾನು ಸತ್ಯದ ಆಳವನ್ನು ನಿನ್ನ ಮುಂದೆ ತೆರೆದಿಟ್ಟಿದ್ದೇನೆ. ನೀನು ನಿನ್ನ ತರ್ಕ ಹಾಗೂ ವಿಚಾರಶಕ್ತಿಯಿಂದ ಸತ್ಯದ ಅನ್ವೇಷಣೆ ಮಾಡಿಕೊಳ್ಳಬೇಕು. ನಂತರ, ಯಾವುದು ಸರಿ ಎನ್ನುವುದನ್ನು ನೀನೇ ಅರಿತುಕೊ’ – ಇದು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಮಾತುಗಳು. ಆದ್ದರಿಂದಲೇ ನಾನು ಕಥೆ ಬರೆಯುವಾಗ, ಪಾತ್ರದ ಆಳಕ್ಕಿಳಿದು, ಆ ಪಾತ್ರದ ದೃಷ್ಟಿಯಿಂದ ಇಡೀ ಕಥೆಯನ್ನು ಹೊಸದಾಗಿ ಕೇಳುವ ಪ್ರಯತ್ನ ಮಾಡುತ್ತೇನೆ’.
ಆನಂದ್ ಅವರ ಪ್ರಸಿದ್ಧ ಪುಸ್ತಕಗಳು: ‘ಅಸುರ: ಟೇಲ್ ಆಫ್ ದಿ ವ್ಯಾಂಗ್‌ವಿಶ್ಡ್’, ‘ಅಜೇಯ’ ಮುಂತಾದವು. ‘ಸಿಯಾ ಕೆ ರಾಮ್’, ‘ಸಂಕಟ್ ಮೊಚಾ ಬಾಹುಬಲಿ ಹನುಮಾನ್’, ‘ಚಕ್ರವರ್ತಿ ಅಶೋಕ್ ಸಾಮ್ರಾಟ್’ ಎಂಬ ಪ್ರಖ್ಯಾತ ಸೀರಿಯಲ್‌ಗಳಿಗೆ ಕಥೆ ಬರೆದಿದ್ದಾರೆ.
ಸೀರಿಯಲ್‌ಗಳ ಕಥಾನಿರೂಪಣೆ: ಸೋತ ವೈವಿಧ್ಯ
ಮಹಾಭಾರತವು ಧರ್ಮದ (ಸತ್ಯ) ಕುರಿತ ಚರ್ಚೆಯಾಗಿದೆ. ಆದರೆ, ಈ ಧರ್ಮವು ಕಾಲಕ್ರಮೇಣ ಬದಲಾಗುವಂಥದ್ದು. ಹೀಗೆ ನೀವು ಮಹಾಭಾರತವನ್ನು ಜಾನಪದ ಕಥೆಯಾಗಿ ಅಥವಾ ಸಾಂಪ್ರದಾಯಿಕ ರೀತಿಯಲ್ಲಿಯೇ ಕೇಳಿದರೂ ಕಥೆಯ ಕುರಿತ ನಮ್ಮ ಅಭಿಪ್ರಾಯವು ಬದಲಾಗುತ್ತಲೇ ಸಾಗುತ್ತದೆ. ದುರ್ಯೋಧನ ಮಾತನಾಡುತ್ತಿದ್ದರೇ, ಆತನೇ ಸರಿ ಎನ್ನಿಸುತ್ತದೆ. ಯುಧಿಷ್ಠಿರ ಮಾತನಾಡಿದರೆ ಆತನೇ ಸರಿ ಎಂದೆನಿಸುತ್ತದೆ. ಇದು ರಾಮಾಯಣಕ್ಕೂ ಸಲ್ಲುವ ಮಾತು ಎಂದು ಆನಂದ್ ಅಭಿಪ್ರಾಯಪಟ್ಟಿದ್ದಾರೆ.
ಟಿ.ವಿಯಲ್ಲಿ ರಾಮಾಯಣ, ಮಹಾಭಾರತ ಧಾರಾವಾಹಿಗಳು ಪ್ರಸಾರವಾಗಿ ಒಂದೇ ರೀತಿಯ ಕಥೆ ಹೇಳುವ ಪ್ರಕ್ರಿಯೆ ಆರಂಭವಾಯಿತು. ನಂತರ ಈ ಧಾರಾವಾಹಿಗಳಲ್ಲಿ ಹೇಳಲಾದ ಕಥೆಗಳನ್ನೇ ನಕಲು ಮಾಡುವುದು ಶುರುವಾಯಿತು. ಹೀಗೆ ಹೇಳಿದ ತಥಾಕಥಿತ ಪಾಶ್ಚಾತ್ಯ ಕಥಾನಿರೂಪಣೆಯು ಈ ಮಹಾಕಾವ್ಯಗಳನ್ನು ಒಳ್ಳೆಯದು–ಕೆಟ್ಟದು, ಸ್ವರ್ಗ–ನರಕ, ದೇವರು–ರಾಕ್ಷಸ ಎಂಬ ಚರ್ಚೆಗೆ ಇಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.