ಭಾರತೀಯ ಮಹಾಕಾವ್ಯ ಪರಂಪರೆಯಲ್ಲಿ ಒಂದಾದ ರಾಮಾಯಣ ಕಥೆ ಹೇಳಲಿವೆ ಗೊಂಬೆಗಳು... ಇದಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಕೆ.ಜಿ.ಸಭಾಂಗಣದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ನಗರದ ಭಾರತೀಯ ವಿದ್ಯಾಭವನ ಅ.1 ರಿಂದ 3ರವರೆಗೆ ದಸರಾ ಉತ್ಸವ ಅಂಗವಾಗಿ ನಾನಾ ಕಾರ್ಯಕ್ರಮ ಆಯೋಜಿಸಿದೆ.
ಈ ಮೂರು ದಿನಗಳ ಕಾಲ ರಾಮಾಯಣಕ್ಕೆ ಸಂಬಂಧಿಸಿದ ಸೂತ್ರದ ಗೊಂಬೆಗಳ ಪ್ರದರ್ಶನ ನಡೆಯಲಿದೆ. ಸೂತ್ರದ ಗೊಂಬೆಗಳ ಮೂಲಕ ನೋಡುಗರ ಕಣ್ಮುಂದೆ ರಾಮಾಯಣದ ಚಿತ್ರಣ ತರುವ ಪ್ರಯತ್ನ ನಡೆಯಲಿದೆ. ರಂಗಪುತ್ಥಳಿ ತಂಡದ ಎಂ.ಆರ್.ಶ್ರೀನಿವಾಸ್ ರಾವ್ ಹಾಗೂ ಸೃಜನಶೀಲ ಕಲಾವಿದೆ ಸೌಮ್ಯಾ ಶ್ರೀಕಾಂತ್ ಅವರು ಗೊಂಬೆಗಳನ್ನು ಪ್ರದರ್ಶಿಸಲಿದ್ದಾರೆ.
ಅ.1 ರಂದು ಬೆಳಿಗ್ಗೆ 11ಕ್ಕೆ ವಕೀಲ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿಮೂರು ದಿನಗಳ ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. 11.30ಕ್ಕೆ ರಾಮಾಯಣದಲ್ಲಿ ಪ್ರಾಣಿ ಪ್ರಪಂಚ ಕುರಿತು ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ.ರಾಘವನ್ ಉಪನ್ಯಾಸ ನೀಡಲಿದ್ದಾರೆ.
ಗಾಂಧೀಜಿ ಕುರಿತ ಪುಸ್ತಕ ಬಿಡುಗಡೆ
ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಅ.2 ರಂದು ಬೆಳಿಗ್ಗೆ 11ಕ್ಕೆ ವಿಶೇಷ ಉಪನ್ಯಾಸ ಹಾಗೂ ಗಾಂಧೀಜಿ ಕುರಿತ ಕನ್ನಡ ಪುಸ್ತಕ ಬಿಡುಗಡೆ ಸಮಾರಂಭ. ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಮಂಡಗದ್ದೆ ಶ್ರೀನಿವಾಸಯ್ಯ ಅವರು ಉಪನ್ಯಾಸ ನೀಡಲಿದ್ದಾರೆ. ಯುನೆಸ್ಕೊ ಫೆಲೋ ಡಾ.ಚೂಡಾಮಣಿ ನಂದಗೋಪಾಲ್ ಮತ್ತು ಸಾಹಿತಿ ರಾಮನಾಥ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ದಿನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ ಇಂದುಶ್ರೀ ರವೀಂದ್ರ ಅವರು ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕಲಾಭಾರತಿಯ ಘಟಿಕೋತ್ಸವ
ಅ.3ರಂದು ಬೆಳಿಗ್ಗೆ 11ಕ್ಕೆ ಡಾ .ಮತ್ತೂರು ಕೃಷ್ಣಮೂರ್ತಿ ಸ್ಮಾರಕ ದತ್ತಿ ಸಂಗೀತ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಭಾರತೀಯ ವಿದ್ಯಾಭವನದಕಲಾಭಾರತಿಯ 20ನೇ ಘಟಿಕೋತ್ಸವ ನಡೆಯಲಿದೆ. ಕಲಾ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಸಂಸ್ಥೆಯ ಕಾರ್ಯದರ್ಶಿ ಡಾ.ಮಾನಂದಿ ಸುರೇಶ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.