ಆಗಸ್ಟ್ 14,1913ರಂದು ಬಳ್ಳಾರಿಯಲ್ಲಿ ರಂಜಾನಸಾಬ ಹುಟ್ಟಿದ್ದು. ತಂದೆ ಹುಸೇನಸಾಬ, ತಾಯಿ ಜಂಗಲಮ್ಮ ಅವರ ಏಕಮೇವ ಪುತ್ರ. ಹದಿನೆಂಟನೆಯ ಶತಮಾನದಲ್ಲಿನ ಕ್ಷಾಮದ ಕಾರಣದಿಂದಾಗಿ ಈ ಮನೆತನ ಬಳ್ಳಾರಿ ತಾಲೂಕಿನ ಹಲಕುಂದಿಯಿಂದ ಪಿಂಜಾರ ಗಲ್ಲಿಗೆ ವಲಸೆ ಬಂದಿತು.
ಹತ್ತಿ ಸಂಗ್ರಹಿಸಿ ಗಾದಿ, ತಡಿಗಳನ್ನು ಸಿದ್ಧಗೊಳಿಸುವ ವೃತ್ತಿ ಹುಸೇನಸಾಬರದು. ತಾಯಿ ಜಂಗಲಮ್ಮ ಅವರಿಗೆ ಮನೆಯ ಹೊಣೆ. ಕನ್ನಡವನ್ನು ಓದಲು–ಬರೆಯಲು ಬಲ್ಲ ಜಂಗಲಮ್ಮ ರಂಜಾನಸಾಬರ ಮೇಲೆ ಪ್ರಭಾವ ಬೀರಿದವರು. ರಂಜಾನಸಾಬರ ಮನೆಯ ಮಾತೂ ಕನ್ನಡವೇ. ಕಾಯಕ ಸಂದರ್ಭದಲ್ಲಿ ಜನಪದ ಗೀತೆ, ಗೀಗೀ ಪದ ಹಾಡುತ್ತ, ಒಡಪುಗಳಲ್ಲಿ ದಣಿವು ಕಳೆದವರು. ಆತ್ಮಶುದ್ಧಿಯ ಪ್ರತೀಕವಾದ ರಂಜಾನ್ ಹೆಸರನ್ನು ಮೊಮ್ಮಗನಿಗೆ ಸೂಚಿಸಿ ಇಟ್ಟವರು ಅಜ್ಜಿ ಹೊನ್ನೂರಬೀ.
ರಂಜಾನ್ ‘ಸರ್ವೆಶಾವಲಿ’(ಮಸೀದಿ)ಯಲ್ಲಿ ನಾಲ್ಕನೆಯ ಇಯತ್ತೆಯಲ್ಲಿ ಅನುತ್ತೀರ್ಣ ಹೊಂದಿ ಶಾಲೆಗೆ ವಿದಾಯ ಹೇಳಿದರು. ಇಲ್ಲಿ ಕನ್ನಡ, ಉರ್ದು ಎರಡನ್ನೂ ಕಲಿಸುತ್ತಿದ್ದರು. ಬಳಿಕ ಗಾದಿ, ತಡಿಗಳ ಕಾಯಕದಲ್ಲಿ ತಂದೆಯವರಿಗೆ ನೆರವಾದರು.
ಸಾಹಿತಿಗಳು, ಕೀರ್ತನಕಾರರು, ಗಮಕಿಗಳು, ವಿದ್ವಾಂಸರ ಚಿಂತನೆಗಳು ರಂಜಾನಸಾಬರ ಮೇಲೆ ಬಹುದೊಡ್ಡ ಪ್ರಭಾವ ಬೀರಿದವು. 1925ರಲ್ಲಿ ಪ್ರಥಮ ನಾಡಹಬ್ಬ ನಡೆಯಿತು. ನಾಡಹಬ್ಬಗಳೇ ಬಳ್ಳಾರಿಯಲ್ಲಿ ಏಕೀಕರಣ ಚಳವಳಿಗೆ ಪ್ರೇರಣೆಯಾದವು. ರಂಜಾನಸಾಬ ಒಬ್ಬ ಉತ್ತಮ ಕುಸ್ತಿ ಪಟು. ಆಕರ್ಷಕ ಶರೀರ ಸೌಷ್ಠವ. ಇಪ್ಪತ್ತನೆಯ ವಯಸ್ಸಿಗೆ ಬಳ್ಳಾರಿಯ ಬಾನುಬಿಯ ಸಂಗಡ ಲಗ್ನವಾಯಿತು. ಬಾನುಬಿ ಅವರಿಗೆ ಆಗ ಹನ್ನೆರಡು ವರ್ಷ. ಮದುವೆ ಬಳಿಕವೂ ಕುಸ್ತಿ ಮುಂದುವರೆಯಿತು. ಆಗ ಹುಬ್ಬಳ್ಳಿಯಲ್ಲಿ ಎರಡು ಕುಸ್ತಿಗಳನ್ನು ಗೆದ್ದರು. ತಂದೆ–ತಾಯಿ ನಿಧನರಾದದ್ದು ರಂಜಾನಸಾಬರನ್ನು ಗಾಸಿಗೊಳಿಸಿತ್ತು. ಹೊಣೆಗಾರಿಕೆಯಿಂದ ಆರ್ಥಿಕ ಸಂಕಟ ಹೆಚ್ಚಿತು. ಸಹೋದರಿಯರಿಬ್ಬರ ಲಗ್ನದ ಜವಾಬ್ದಾರಿ ಇತ್ತು. ಜೊತೆಗೆ ನಾಲ್ಕು ಮಕ್ಕಳ ಸಂಸಾರ. ದುಡಿವ ಕೈಗಳೆರಡು. ಉಣ್ಣುವ ಕೈಗಳು ಹತ್ತಾರು. ಅದರ ನಡುವೆಯೇ ಏಕೀಕರಣದ ಹೋರಾಟಗಳಲ್ಲಿ ಭಾಗಿಯಾದರು. ಅವರ ಕನ್ನಡದ ಕೆಚ್ಚಿನ ಬಗೆಗಿನ ಬದ್ಧತೆ, ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಕುದುರೆ ಗಾಳಪ್ಪ, ಅಬ್ದುಲ್ ರಜಾಕ್, ಸಂಗಪ್ಪ ಹಾದಿಮನಿ ಅವರಂಥ ಗೆಳೆಯರಿದ್ದರು.
ಬಳ್ಳಾರಿಯಲ್ಲಿ ಕರ್ನಾಟಕ ಏಕೀಕರಣ ಚಳವಳಿ ತೀವ್ರಗೊಂಡ ಕಾಲದಲ್ಲಿ ಒಂದೇ ಗುಕ್ಕಿಗೆ ನೂರಾರು ಜನರನ್ನು ಸೇರಿಸುವ ಶಕ್ತಿ, ನಾಯಕತ್ವ ಗುಣ ರಂಜಾನ ಸಾಬರಿಗಿತ್ತು. ಇದು ಅವರನ್ನು ದ್ವೇಷಿಸುವ ತೆಲುಗುವಾದಿಗಳಿಗೆ ನುಂಗಲಾರದ ತುತ್ತಾಗಿತ್ತು. 1936ರಲ್ಲಿ ವಿಜಯನಗರ ಸಾಮ್ರಾಜ್ಯದ 600ನೆಯ ಶತಮಾನೋತ್ಸವವನ್ನು ಆಂಧ್ರದವರು ಆಚರಿಸಿದರು. ಇದು ಆಕ್ರಮಣಶೀಲತೆ ಎಂದು ಬಳ್ಳಾರಿಗರು ಭಾವಿಸಿದರು. ಆಂಧ್ರದ ಜನ ಬಳ್ಳಾರಿಯಲ್ಲಿ ಬೇರು ಬಿಡದಂತೆ ಜಾಗೃತಿ ಮೂಡಿಸಲಾಯಿತು. ಏಕೀಕರಣ ಹೋರಾಟ ಬಿರುಸುಗೊಂಡಿತು. ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ಚಳವಳಿ, ಸಂಘರ್ಷದಲ್ಲಿ 1400 ಜನರು ಜೈಲಿಗೆ ಹೋದರು. ಅವರಲ್ಲಿ ಕೋ.ಚೆನ್ನಬಸಪ್ಪ ಜೊತೆಗೆ ರಂಜಾನಸಾಬ ಕೂಡ ಇದ್ದರು.
1952ರಲ್ಲಿ ‘ಬಳ್ಳಾರಿ ಜಿಲ್ಲಾ ಕರ್ನಾಟಕ ಕ್ರಿಯಾ ಸಮಿತಿ’ ಹುಟ್ಟಿತು. ಜಂತಕಲ್ ಗಾದಿ ಲಿಂಗಪ್ಪನವರು ಅಧ್ಯಕ್ಷರು. ಕೋ.ಚೆನ್ನಬಸಪ್ಪ ಕಾರ್ಯದರ್ಶಿ, ಅಬ್ದುಲ್ ರಜಾಕ್ ಖಚಾಂಚಿ, ರಂಜಾನಸಾಬ ಪ್ರಧಾನ ಸಂಘಟಕ. ಮಹಿಳೆಯರೂ ಬಹು ಸಂಖ್ಯೆಯಲ್ಲಿ ಸತ್ಯಾಗ್ರಹಕ್ಕೆ ಸಿದ್ಧರಾದರು. ರಂಜಾನಸಾಬ ಪೈಲ್ವಾನರನ್ನು, ಹಮಾಲರನ್ನು, ಜಟಕಾ ಹೊಡೆಯುವವರನ್ನು ಒಗ್ಗೂಡಿಸಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದರು. ರಂಜಾನಸಾಬರ ಮೇಲೆ ತೆಲುಗು ಭಾಷಿಕರು ಕತ್ತಿ ಮಸೆಯುತ್ತಿದ್ದರು. ಒಂದು ಲಕ್ಷ ಸಹಿ ಸಂಗ್ರಹ ಮಾಡಿಸಿ, ಮನವಿ ಜೊತೆಗೆ ಸಂಸದರಾದ ಅಳವಂಡಿ ಶಿವಮೂರ್ತಿ ಸ್ವಾಮೀಜಿ ಮೂಲಕ ಸಂಸತ್ತಿಗೆ ರವಾನಿಸಲಾಯಿತು. ಆಂಧ್ರ ಸ್ಥಾಪನೆ ಬಳಿಕ 1953ರ ಅಕ್ಟೋಬರ್ 1ರಂದು ಏಳು ತಾಲ್ಲೂಕುಗಳೊಟ್ಟಿಗೆ ಬಳ್ಳಾರಿ ಮೈಸೂರು ರಾಜ್ಯಕ್ಕೆ ಸೇರಿತು. ಮರುದಿನ ಸಂಭ್ರಮಾಚರಣೆ. ಸಭಾಮಂಟಪದ ಉಸ್ತುವಾರಿ ರಂಜಾನಸಾಬರದ್ದಾಗಿತ್ತು. ಪರ ಭಾಷಿಕರಿಗೆ ರಂಜಾನಸಾಬ ಶತ್ರುವೇ. ಕನ್ನಡ ಪ್ರೇಮಿ ಹೋರಾಟಗಾರನ ದುರಂತ ಅಂತ್ಯ ಘಟಿಸಿಯೇಹೋಯಿತು. ಅಂದಿನ ಇರುಳು ಕನ್ನಡಿಗರ ಪಾಲಿಗೆ ಕರಾಳ.
ರಂಜಾನಸಾಬ ರಾತ್ರಿ ಪೆಂಡಾಲ್ ಕಾವಲುಗಾರನಾಗಿ ಮಲಗಿದ್ದರು. ಕೋ.ಚೆನ್ನಬಸಪ್ಪನವರು ತಮ್ಮ ‘ರೈತ ಪತ್ರಿಕೆ’ಯಲ್ಲಿ ರಂಜಾನಸಾಬ ಹುತಾತ್ಮನಾದ ಘಟನೆಯನ್ನು ಹೀಗೆ ವಿವರಿದ್ದಾರೆ: ‘ಗಸ್ತಿನಲ್ಲಿದ್ದ ರಂಜಾನಸಾಬ ದಿ:1-10-1953 ರ ರಾತ್ರಿ 2.30ರ ಸುಮಾರಿಗೆ ನಿದ್ರೆಗೆ ಜಾರುತ್ತಾರೆ. ಆಗ ಶತ್ರುಗಳ ಗುಂಪೊಂದು ಮಂಟಪವನ್ನು ಸುಡಲು ಅಸಿಡ್ ತುಂಬಿದ ಬಲ್ಬನ್ನು ತೆಗೆದುಕೊಂಡು ಸಿದ್ಧರಾಗಿದ್ದ ಸಮಯದಲ್ಲಿ ಅವರ ಸಪ್ಪಳಕ್ಕೆ ರಂಜಾನಸಾಬ ಎಚ್ಚರ ಆಗಿ ಅವರನ್ನು ತಡೆಯಲು ಅವರ ಮೇಲೆ ಎಗರಿಬೀಳುತ್ತಾರೆ. ಆದರೆ ಆ ಶತ್ರುಗಳು ಇವರನ್ನು ಕಂಡೊಡನೆ ನಮಗೆ ಇನ್ನು ಉಳಿಗಾಲವಿಲ್ಲ ಎಂದು ಆಸಿಡ್ ಬಲ್ಬುಗಳನ್ನು ಅವರಿಗೆ ಎಸೆಯುತ್ತಾರೆ. ಆಗ ರಂಜಾನಸಾಬ ಅವರ ಮುಖ ಹಾಗೂ ದೇಹದ ಅರ್ಧಭಾಗ ಸಂಪೂರ್ಣ ಸುಟ್ಟು ಬೆಳ್ಳಗಾಗುತ್ತದೆ. ಆದರೂ ಛಲ ಬಿಡದೇ ಓಡಿ ಗಡಗಿ ಚನ್ನಪ್ಪ ವೃತ್ತದಲ್ಲಿ ಶತ್ರು ಗುಂಪಿನ ಇಬ್ಬರನ್ನು ತಮ್ಮ ಭೀಮ ತೋಳಿನಿಂದ ಹಿಡಿಯುತ್ತಾರೆ. ಮೊದಲೇ ಒಂದು ಕಣ್ಣು ಸುಟ್ಟು ರಕ್ತ ಸುರಿಯುತ್ತಿರುತ್ತದೆ. ಆಗ ಎಡ ಭಾಗದಿಂದ ಶತ್ರು ಒಂದು ದೊಡ್ಡ ಕಲ್ಲು ಚಪ್ಪಡಿಯನ್ನು ತಂದು ಅವರ ಬಲಭಾಗದ ಕಾಲಿಗೆ ಎಸೆಯುತ್ತಾರೆ. 50 ಪ್ರತಿಶತ ಸುಟ್ಟು,ಬಹಳ ರಕ್ತ ಹೋಗಿರುತ್ತದೆ. ಬಿದ್ದ ತಕ್ಷಣ ರಂಜಾನಸಾಬ ಅವರು ಪ್ರಜ್ಞೆ ಕಳೆದುಕೊಳ್ಳುತ್ತಾರೆ.
‘ಬಳ್ಳಾರಿಯ ‘ಗೋಶಾ’ ಆಸ್ಪತ್ರೆಗೆ ದಾಖಲಿಸುತ್ತಾರೆ. ರಕ್ತಸ್ರಾವ ಮತ್ತು ಗಾಯದಿಂದ ನರಳುತ್ತಿದ್ದ ರಂಜಾನರನ್ನು ನೋಡಲು ಯಾವ ವೈದ್ಯರೂ ಇರಲಿಲ್ಲ. ನೋವು ಮತ್ತು ಸಾವಿನ ಸಂಗ ಸೆಣಸಾಟ. ಡಾ.ಶರ್ಮಾ ಎಂಬ ವೈದ್ಯರು ಬಂದು ನೋಡುವಷ್ಟರಲ್ಲಿ ರಂಜಾನ ಅವರ ಪ್ರಾಣ ಹೋಗಿತ್ತು. ಕನ್ನಡಕ್ಕಾಗಿ ರಂಜಾನಸಾಬ ಹುತಾತ್ಮರಾಗಿದ್ದರು. ಅಂದು ಸಂಜೆ 4 ಗಂಟೆಗೆ ಸಭಾ ಮಂಟಪದಲ್ಲಿ ಮೈಸೂರು ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು, ‘ಕನ್ನಡ ನಾಡಿಗಾಗಿ, ಭಾಷೆಗಾಗಿ, ಕಲೆಗಾಗಿ ದುಡಿದು ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಏಕೈಕ ವ್ಯಕ್ತಿಯೇ ಧೀರ ರಂಜನಸಾಬ’ ಎಂದು ನಮನ ಸಲ್ಲಿಸಿದರು’.
ವರ್ತಮಾನದಲ್ಲಿ ಕರ್ನಾಟಕ ಸರ್ಕಾರ ‘ಕರ್ನಾಟಕ’ ನಾಮಕರಣವಾಗಿ ಐವತ್ತು ವಸಂತಗಳು ಸರಿದ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಹುತಾತ್ಮ ರಂಜಾನಸಾಬರ ಹೆಸರಿನ ಒಂದು ಪ್ರಶಸ್ತಿಯನ್ನು ಘೋಷಿಸಲಿ. ಅವು ನಿಧನರಾದ ಜಾಗ ಮೈದಾನದಲ್ಲಿ ರಂಜಾನಸಾಬರ ಸ್ಮಾರಕ ನಿರ್ಮಿಸಿ ಗೌರವ ಸಲ್ಲಿಸಲಿ.⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.