ADVERTISEMENT

ನಟರಾಜ್ ಹುಳಿಯಾರ್ ಲೇಖನಕ್ಕೆ ಪ್ರತಿಕ್ರಿಯೆ: 'ಅನಂತಮೂರ್ತಿ ಕುರಿತ ಆರೋಪ ನಿರಾಧಾರ'

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 23:30 IST
Last Updated 16 ನವೆಂಬರ್ 2024, 23:30 IST
ಯು. ಆರ್‌. ಅನಂತಮೂರ್ತಿ
ಯು. ಆರ್‌. ಅನಂತಮೂರ್ತಿ   
‘ಆರೋಪ ನಿರಾಧಾರ’

ನ.10 ರ ‘ಭಾನುವಾರದ ಪುರವಣಿ’ಯಲ್ಲಿ ಪ್ರಕಟವಾದ ನಟರಾಜ್‌ ಹುಳಿಯಾರ್‌ ಅವರ ಲೇಖನ ‘ಕನ್ನಡ ಸಾಹಿತ್ಯ ಕೃತಿಗಳ ಪರಕಾಯ ಪ್ರವೇಶ’ ದಲ್ಲಿ ನನ್ನ ತಂದೆ ಯು.ಆರ್‌ ಅನಂತಮೂರ್ತಿಯವರ ಬಗ್ಗೆ ಆರೋಪ ಮಾಡಲಾಗಿದೆ.

ನೊಬೆಲ್ ಹಂಬಲದಿಂದ ಸ್ವೀಡಿಶ್ ಭಾಷೆಗೂ ಅವರ ಕಾದಂಬರಿ ಅನುವಾದವಾಯಿತೆಂದು ಬರೆದಿರುವುದರ ಹಿಂದೆ ಯಾವ ಆಧಾರವಿದೆಯೋ ಗೊತ್ತಿಲ್ಲ. ಸಾಹಿತ್ಯ ವಿಮರ್ಶಕರಾದ ಹುಳಿಯಾರ್‌ ಅವರಿಗೆ ನೊಬೆಲ್ ನಂತಹ ಬಹುಮಾನ ಪಡೆಯಲು ಕೃತಿಗಳು ಸ್ವೀಡಿಶ್ ಭಾಷೆಗೆ ಅನುವಾದಗೊಳ್ಳಬೇಕಾಗಿಲ್ಲ ಎಂಬ ಪ್ರಾಥಮಿಕ ತಿಳವಳಿಕೆ ಇದ್ದಂತಿಲ್ಲ. ಹತ್ತು ಭಾರತೀಯ ಭಾಷೆಯ ಕೃತಿಗಳು ಸ್ವೀಡಿಶ್‌ಗೆ ಒಟ್ಟಿಗೆ ಅನುವಾದಗೊಂಡಾಗ ಆ ಯೋಜನೆಯಲ್ಲಿ ಸಂಸ್ಕಾರ ಕೂಡ ಒಂದಾಗಿತ್ತು.

ಹುಳಿಯಾರ್‌ ಅವರ ಪ್ರಕಾರ ಉಳಿದ ಒಂಬತ್ತು ಲೇಖಕರ ಮೇಲೆಯೂ ನೊಬೆಲ್ ಹಂಬಲದ ಆರೋಪವನ್ನು ಹೊರಿಸಬೇಕಾಗುತ್ತದೆ. ಆಧಾರವಿಲ್ಲದ ಇಂತಹ  ಅಭಿಪ್ರಾಯಗಳು ಈ ಲೇಖನದಲ್ಲಿವೆ. ಉದಾಹರಣೆಗೆ, ಶ್ರೀನಿವಾಸಗೌಡರು ಮಾಡಿದ ಕುವೆಂಪು ಕಾದಂಬರಿಯ ಇಂಗ್ಲಿಷ್ ಅನುವಾದ ಪ್ರಕಟವಾಗಿಲ್ಲ ಎನ್ನುವುದು ತಪ್ಪು ಮಾಹಿತಿ. ಅದು ಪ್ರಕಟವಾಗಿದೆ.

ADVERTISEMENT

ಅನುವಾದದ ಅಗತ್ಯವನ್ನು ಸಮರ್ಥಿಸಿ ಬರೆದಿರುವುದರಿಂದ ಕಾರ್ನಾಡ ಹಾಗೂ ಅನಂತಮೂರ್ತಿಯವರ ಕೃತಿಗಳು ಉತ್ತಮವಾಗಿ ಅನುವಾದವಾಗಿರುವುದು ಇವರಿಗೆ ಸಂತೋಷವನ್ನೇ ಉಂಟುಮಾಡಿದೆಯೆಂದು ಭಾವಿಸುತ್ತೇನೆ.

–ಅನುರಾಧ ಅನಂತಮೂರ್ತಿ, ಬೆಂಗಳೂರು

‘ಕಾದಂಬರಿ ಪ್ರಕಟವಾಗಿದೆ’

ನಟರಾಜ್‌ ಹುಳಿಯಾರ್‌ ಅವರು ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಅನುವಾದದ ಬಗ್ಗೆ ಬರೆಯುತ್ತಾ, ಹತ್ತು ವರ್ಷದ ಕೆಳಗೆ ಕೆ.ಎಂ. ಶ್ರೀನಿವಾಸಗೌಡ ಈ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿದರು. ಅದು ಪ್ರಕಟವಾಗಲಿಲ್ಲ ಎಂದು ಬರೆದಿದ್ದಾರೆ.

ಈ ಕಾದಂಬರಿ 2022ರಲ್ಲಿಯೇ ‘The Bride in the Rainy Mountains’ ಹೆರಿಸನಲ್ಲಿ ಪ್ರಕಟವಾಗಿದೆ. ಕುಪ್ಪಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಐಬಿಹೆಚ್‌ ಪ್ರಕಾಶನದ ಸಹಯೋಗದಲ್ಲಿ ಪ್ರಕಟಿಸಿದೆ. ಬೆಂಗಳೂರಿನ ಗಾಂಧಿಭವನದಲ್ಲಿ ಬಿಡುಗಡೆಯೂ ಆಗಿತ್ತು. ಇತ್ತೀಚಿನ ಮಾಹಿತಿಯ ಪ್ರಕಾರ, ಕಾದಂಬರಿಯ ಎರಡನೆಯ ಮುದ್ರಣಕ್ಕೆ ಸಿದ್ಧತೆಗಳು ನಡೆಯುತ್ತಿವೆ.

–ಬಿ.ಆರ್.‌ ಸತ್ಯನಾರಾಯಣ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.