ADVERTISEMENT

ಪ್ರತಿಕ್ರಿಯೆ | ಅನಂತಮೂರ್ತಿ ವಿರುದ್ಧ ಆರೋಪವಿಲ್ಲ: ನಟರಾಜ್‌ ಹುಳಿಯಾರ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 23:01 IST
Last Updated 23 ನವೆಂಬರ್ 2024, 23:01 IST
ಯು. ಆರ್‌. ಅನಂತಮೂರ್ತಿ
ಯು. ಆರ್‌. ಅನಂತಮೂರ್ತಿ   

ಅನುರಾಧ ಅನಂತಮೂರ್ತಿಯವರ ಪತ್ರ (17.11.2024) ಹೇಳುವಂತೆ ನನ್ನ ಬರಹದಲ್ಲಿ ಅನಂತಮೂರ್ತಿಯವರ ವಿರುದ್ಧ ಯಾವ ಆರೋಪವೂ ಇಲ್ಲ. ಅನಂತಮೂರ್ತಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಸ್ವೀಡನ್ ಲೇಖಕರ ನಿಯೋಗವನ್ನು ಭಾರತಕ್ಕೆ ಆಹ್ವಾನಿಸಿದ್ದರು. ಆ ಕಾಲಕ್ಕಾಗಲೇ ಲೋಕಪ್ರಸಿದ್ಧ ಸಾಹಿತಿಗಳನ್ನು ಸೃಷ್ಟಿಸಿದ್ದ ಆಫ್ರಿಕಾ, ಲ್ಯಾಟಿನ್ ಅಮೆರಿಕಾ, ಆಫ್ರೋ ಅಮೆರಿಕನ್ ಲೇಖಕರ ನಿಯೋಗದ ಬದಲು, ಸ್ವೀಡನ್ನಿನ ಸಾಧಾರಣ ಲೇಖಕರ ನಿಯೋಗವನ್ನು ಅಕಾಡೆಮಿ ಕರೆಸಿಕೊಂಡಾಗಲೇ ತಮಾಷೆಯ ತರಂಗಗಳೆದ್ದಿದ್ದವು. ಆ ನಿಯೋಗದ ಜೊತೆಗೆ ಮೂರು ದಿನ ಪ್ರವಾಸ-ಸಂವಾದ ಮಾಡುವ ಜವಾಬ್ದಾರಿಯನ್ನೂ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ನನಗೆ ವಹಿಸಿದ್ದರಿಂದ ಈ ವಿವರಗಳ ಪರಿಚಯ ನನಗಿದೆ.
    ಇದಾದ ನಂತರ ಸ್ವೀಡನ್ ಹಾಗೂ ಭಾರತೀಯ ಕೃತಿಗಳ ಪರಸ್ಪರ ಅನುವಾದ ಯೋಜನೆಯಲ್ಲಿ ಕನ್ನಡದ ಇತರ ಶ್ರೇಷ್ಠ ಕೃತಿಗಳನ್ನು ಬದಿಗಿಟ್ಟು ತಮ್ಮ ಕಾದಂಬರಿಯನ್ನೇ ಆರಿಸಿದ್ದು ಕನಿಷ್ಠ ನೈತಿಕತೆಯುಳ್ಳ ಅಕಾಡೆಮಿಯ ಅಧ್ಯಕ್ಷರೊಬ್ಬರು ಮಾಡುವ ಕೆಲಸವಲ್ಲ. ಅನುರಾಧ ಆರೋಪಿಸುವಂತೆ ನಾನು ಸಾಹಿತ್ಯ ವಿಮರ್ಶಕನಲ್ಲ. ಆದರೂ ನೊಬೆಲ್ ಬಹುಮಾನ ಪಡೆಯಲು ಕೃತಿಯೊಂದು ಸ್ವೀಡಿಶ್‌ಗೆ ಅನುವಾದವಾಗಬೇಕಿಲ್ಲ ಎಂಬ ಅರಿವಿದೆ. ಸ್ವೀಡಿಶ್ ಅಕಾಡೆಮಿಯಿರುವ ಸ್ವೀಡನ್‌ಗೆ ಹತ್ತಿರವಾಗುವ ಅನಂತಮೂರ್ತಿಯವರ ಒಳಕಾತರ ಸಾಧಾರಣ ಸ್ವೀಡಿಶ್ ಲೇಖಕರ ನಿಯೋಗವನ್ನು ಭಾರತಕ್ಕೆ ಕರೆಸಿಕೊಳ್ಳುವುದರಿಂದ ಹಿಡಿದು, ಸ್ವೀಡಿಷ್ ಭಾಷೆಗೆ 'ಸಂಸ್ಕಾರ' ಅನುವಾದವಾಗುವುದರವರೆಗೂ ಹಬ್ಬಿರುವುದರ ಅರಿವೂ ಇದೆ. ಸಾರ್ವಜನಿಕ ಉತ್ತರದಾಯಿತ್ವವಿರುವ ಸಾಹಿತ್ಯ ಅಕಾಡೆಮಿಯ ಅಸಾಹಿತ್ಯಕ ನಡವಳಿಕೆಗಳ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಅನುರಾಧರಿಗಿದ್ದಂತಿಲ್ಲ.

ಕೆ.ಎಂ. ಶ್ರೀನಿವಾಸಗೌಡರ ’ಮಲೆಗಳಲ್ಲಿ ಮದುಮಗಳು’ ಅನುವಾದ ಪ್ರಕಟವಾದ ಮಾಹಿತಿ ಕೊಟ್ಟ ಎಲ್ಲರಿಗೂ ಧನ್ಯವಾದಗಳು.

ನಟರಾಜ್‌ ಹುಳಿಯಾರ್‌ ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.