ADVERTISEMENT

ಕೊಪ್ಪಳದ ಗವಿಸಿದ್ದಪ್ಪಜ್ಜನ ಜನಮುಖಿ ಜಾತ್ರೆ: ಗತಕಾಲದ ಸಡಗರದ ಮೆಲುಕು

ಪ್ರಜಾವಾಣಿ ಭಾನುವಾರ ಪುರವಣಿಯಲ್ಲಿ ಆನಂದ ತೀರ್ಥ ಪ್ಯಾಟಿ ಲೇಖನ

ಆನಂದತೀರ್ಥ ಪ್ಯಾಟಿ
Published 15 ಜನವರಿ 2022, 23:58 IST
Last Updated 15 ಜನವರಿ 2022, 23:58 IST
ಚಿತ್ರ: ಭರತ್‌ ಕಂದಕೂರ
ಚಿತ್ರ: ಭರತ್‌ ಕಂದಕೂರ   

ಪ್ರತಿವರ್ಷ ಜನವರಿಯಲ್ಲಿ ಉತ್ತರ ಕರ್ನಾಟಕದ ತುಂಬಾ ಕೊಪ್ಪಳದ ಗವಿಸಿದ್ದಪ್ಪಜ್ಜನ ಜಾತ್ರೆಯ ಸಂಭ್ರಮ. ಎರಡು ವರ್ಷಗಳಿಂದ ಕೊರೊನಾ ಜಾತ್ರೆಯ ಸಂಭ್ರಮಕ್ಕೆ ಬ್ರೇಕ್‌ ಹಾಕಿದೆ. ಈ ಸಲವೂ ರಥೋತ್ಸವ ಸರಳವಾಗಿ (ಜ. 19) ನಡೆಯಲಿದೆ. ಆದರೆ, ಗತಕಾಲದ ಸಡಗರವನ್ನು ಮೆಲುಕು ಹಾಕಲು ಕೊರೊನಾ ಏನೂ ಅಡ್ಡಗಾಲು ಹಾಕಲು ಸಾಧ್ಯವಿಲ್ಲವಲ್ಲ?!

ದೀಪಾವಳಿ ಹಬ್ಬ ಮುಗಿಯುತ್ತಲೇ ದೂರದೂರಿನಿಂದ ಚಕ್ಕಡಿ, ಟ್ರಾಕ್ಟರುಗಳಲ್ಲಿ ಅಕ್ಕಿ, ಬೇಳೆಕಾಳು, ಜೋಳದಂಥ ಧಾನ್ಯಗಳು ಕೊಪ್ಪಳದತ್ತ ಹೊರಡಲು ಶುರು. ಮುಂಗಾರು ಕೊಯ್ಲು ಸಂಭ್ರಮ ಮುಗಿಸಿ, ‘…ಗವಿಸಿದ್ದಪ್ಪಜ್ಜಂಗ ಇದು’ ಎಂದು ಧಾನ್ಯದ ಒಂದು ಭಾಗವನ್ನು ಅದಾಗಲೇ ತೆಗೆದಿಟ್ಟವರು, ತಮ್ಮೂರಿನಿಂದ ಗವಿಮಠದ ಜಾತ್ರೆಗೆ ಹೊರಡುವ ಟ್ರಾಕ್ಟರುಗಳಿಗೆ ಹೇರುತ್ತಾರೆ. ವಾರಗಟ್ಟಲೇ ಅವಧಿಯುದ್ದಕ್ಕೂ ಜತನದಿಂದ ಕಡೆದ ಬೆಣ್ಣೆಯನ್ನು ತುಪ್ಪವನ್ನಾಗಿಸಿ, ದೊಡ್ಡ ದೊಡ್ಡ ಕ್ಯಾನುಗಳಲ್ಲಿ ತುಂಬಿ ಗಾಡಿಯಲ್ಲಿ ಒಟ್ಟುವವರು ಹಲವರು. ತರಹೇವಾರಿ ಆಹಾರ ಪದಾರ್ಥ ಹೊತ್ತ ಚಕ್ಕಡಿ, ವ್ಯಾನು, ಟ್ರಾಕ್ಟರು, ಟಂಟಂ ಇತರೆ ಗಾಡಿಗಳು ಕೊಪ್ಪಳದ ಗವಿಮಠದ ಎದುರಿಗೆ ಬಂದಾಗ ಪದಾರ್ಥ ಇಳಿಸಿ ಹಗುರಾಗುವ ಜನರ ಹೃದಯದಲ್ಲಿ ತುಂಬುವುದು ಧನ್ಯತಾಭಾವ. ಗವಿಸಿದ್ದಪ್ಪಜ್ಜನ ಜಾತ್ರೆಯ ಆಸುಪಾಸು ಇಂಥ ನೋಟ ಸಾಮಾನ್ಯ.

ಜಾತ್ರೆ ಎಂದರೆ ಬಾಲ್ಯಕ್ಕೆ ಮರಳುವ ಸಂಭ್ರಮ. ಅದನ್ನು ಹೊರತುಪಡಿಸಿಯೂ ಭಕ್ತಿ-ಭಾವ, ಮನರಂಜನೆ, ಭರಪೂರ ತಿನಿಸು, ಅಲೆದಾಟ, ವಿರಾಮಕ್ಕೊಂದು ಪ್ರಶಸ್ತ ತಾಣವೆಂದರೆ ಅದು ಜಾತ್ರೆಯಲ್ಲದೇ ಮತ್ತೇನು? ಧಾರ್ಮಿಕ ಕಾರ್ಯಕ್ರಮದ ನೆಪದಲ್ಲಿ ಆಸಕ್ತರು ಸೇರಲೊಂದು ಸಕಾರಣವನ್ನು ಜಾತ್ರೆ-ರಥೋತ್ಸವಗಳು ಸೃಷ್ಟಿಸಿಕೊಡುತ್ತವೆ. ಊರು ಬಿಟ್ಟು ದೂರ ಹೋದವರನ್ನು ತವರೂರಿನ ಜಾತ್ರೆಗಳು ವರ್ಷವರ್ಷ ಕರೆಯುತ್ತವೆ. ಹಳೆಯ ಸ್ನೇಹಿತರು, ಬಂಧುಬಾಂಧವರ ಜತೆ ನಲಿಯಲು ಜಾತ್ರೆಯೂ ಒಂದು ನೆಪ.

ADVERTISEMENT

ಪೂಜೆ ಪುನಸ್ಕಾರಗಳ ರೀತಿ ಬೇರೆಯಾದರೂ ಜಾತ್ರೆಗಳ ಒಟ್ಟಾರೆ ಸ್ವರೂಪ ಬಹುತೇಕ ಒಂದೇ ಥರ. ಆದರೆ ಆ ‘ಮೆಗಾ ಇವೆಂಟ್‍’ ನಡೆಯುವ ಬಗೆಯೇ ನಮ್ಮಲ್ಲಿ ಸೋಜಿಗ ಮೂಡಿಸುತ್ತದೆ. ಆರೆಂಟು ಜನರು ದಿಢೀರ್ ಬಂದಿಳಿದಾಗ ಕುಟುಂಬದ ಹಿರಿಯರು ತುಸು ದಿಕ್ಕೆಡುತ್ತಾರೆ. ಮತ್ತೇನಿಲ್ಲ- ಅವರ ಊಟೋಪಚಾರಕ್ಕೆ, ಅಷ್ಟೆ. ಹಾಗಿದ್ದ ಮೇಲೆ, ಲಕ್ಷಾಂತರ ಜನ ಸೇರುವ ಜಾತ್ರಾ ಮಹೋತ್ಸವದ ಆಯೋಜಕರ ಸ್ಥೈರ್ಯ ಹೇಗಿದ್ದೀತು?

‘ಅದೆಲ್ಲ ಏನೂ ಇಲ್ಲ. ನಮ್ಮ ಜಾತ್ರೆಯಲ್ಲಿ ಕಾಣುವುದೆಲ್ಲ ಭಕ್ತಿಭಾವದ ಪ್ರತಿಫಲನ’ ಎನ್ನುತ್ತಾರೆ, ಕೊಪ್ಪಳದ ಗವಿಮಠದ ಜಾತ್ರಾ ಸಂಘಟಕರು. ಹೌದು. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಗವಿಮಠದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ದೇಶದ ಇತರ ಭಾಗದವರ ಗಮನ ಸೆಳೆಯುತ್ತಿದೆ. ಲಕ್ಷಗಟ್ಟಲೇ ಭಕ್ತರು ಶ್ರದ್ಧಾಭಕ್ತಿಯಿಂದ ಇಲ್ಲಿಗೆ ಬಂದರೆ, ಅವರ ಸೇವೆಗೆ ನಿಸ್ವಾರ್ಥ ಮನೋಭಾವದಿಂದ ಸಾವಿರಾರು ಜನ ಸಾಲುಗಟ್ಟಿ ನಿಂತಿರುತ್ತಾರೆ. ಮೂರು ವರುಷಗಳ ಹಿಂದೆ ಸುಮಾರು ಆರು ಲಕ್ಷಕ್ಕೂ ಹೆಚ್ಚು ಜನ ಗವಿಮಠದ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದರು. ಜನಸಮೂಹದ ಚಿತ್ರಣವನ್ನು ಕ್ಯಾಮೆರಾದ ಒಂದೇ ಫ್ರೇಮಿನಲ್ಲಿ ಸೆರೆಹಿಡಿಯಲು ಡ್ರೋನ್‌ಗಳು ಎಷ್ಟೊಂದು ಸೆಣಸಾಡಿದ್ದವು!

ಅಸಲಿಗೆ ಗವಿಸಿದ್ದಪ್ಪಜ್ಜನ ಜಾತ್ರೆಗೆ ಪರೋಕ್ಷ ತಯಾರಿ ಶುರುವಾಗುವುದೇ ದೀಪಾವಳಿ ಆಸುಪಾಸು. ಮುಂಗಾರು ಕಟಾವಿನ ಬೆಳೆಯ ಮೊದಲ ಚೀಲವನ್ನು ‘ಅಜ್ಜನಿಗೆ ಇದು’ ಎಂದು ತೆಗೆದಿಟ್ಟ ಬಳಿಕವೇ ಉಳಿದ ಉತ್ಪನ್ನ ಮಾರುಕಟ್ಟೆಗೆ ಹೋಗುತ್ತದೆ. ಆ ಧಾನ್ಯದ ಬಗೆಯಾದರೂ ಏನೇನು? ಬೇಳೆ, ಅಕ್ಕಿ, ಈರುಳ್ಳಿ, ಜೋಳ, ಗೋಧಿ, ಮಡಿಕೆ, ಹೆಸರು… ಒಂದೊಂದು ಊರಿನ ನೂರಾರು ಮನೆಗಳಲ್ಲಿ ಹೀಗೆ ಮೀಸಲಿಟ್ಟ ದವಸ ಧಾನ್ಯಗಳು, ಗಾಡಿಗಳನ್ನೇರಿ ಜಾತ್ರೆಗೆ ವಾರದ ಹಿಂದೆ ಬಂದು ಸೇರುತ್ತವೆ. ಇದರ ಜತೆಗೆಯೇ ಕ್ವಿಂಟಲ್‌ಗಟ್ಟಲೇ ತುಪ್ಪ, ಒಣದ್ರಾಕ್ಷಿ, ಬೆಲ್ಲವೂ ಬರುತ್ತದೆ. ರಥೋತ್ಸವದ ದಿನದಂದು ಶುರುವಾಗುವ ದಾಸೋಹ ಅಖಂಡ ಹದಿನೈದು ದಿನಗಳ ಕಾಲ ನಡೆಯುತ್ತಲೇ ಇರುವುದರಿಂದ, ತರಕಾರಿ-ಸೊಪ್ಪುಗಳು ನಿತ್ಯವೂ ರಾಶಿರಾಶಿಯಾಗಿ ಬರುತ್ತಲೇ ಇರುತ್ತದೆ. ಉತ್ತರ ಕರ್ನಾಟಕದ ಊಟ ಅಂದಮೇಲೆ ರೊಟ್ಟಿ ಇರದೇ ಹೋದರೆ ಹೇಗೆ? ನೂರಾರು ಹಳ್ಳಿಗಳಲ್ಲಿ ಮನೆಮನೆಯಲ್ಲೂ ರೊಟ್ಟಿ ತಯಾರಾಗಿ ಒಂದೆಡೆ ಸಂಗ್ರಹವಾಗಿ ಬಳಿಕ ಲಾರಿ, ಟ್ರಾಕ್ಟರುಗಳಲ್ಲಿ ಬರುತ್ತವೆ. ತೀರಾ ಅಚ್ಚುಕಟ್ಟಾಗಿ ನಿರ್ವಹಿಸುವ ಪಾಕಶಾಲೆಯಲ್ಲಿ ಒಂದೆಡೆ ರೊಟ್ಟಿಯ ಪರ್ವತ ಕಂಡರೆ, ಇನ್ನೊಂದೆಡೆ ಅನ್ನದ ಬೆಟ್ಟ. ಸಾಂಬರ್? ಅದು ತಯಾರಾಗುವ ಕಡಾಯಿಗಳನ್ನು ನೋಡಿಯೇ ತಿಳಿಯಬೇಕು! ದಿನಕ್ಕೊಂದು ಹಳ್ಳಿಯವರಂತೆ ಸರದಿಯಲ್ಲಿ ಬಾಣಸಿಗರು ಸೇವೆ ಸಲ್ಲಿಸುತ್ತಾರೆ. ದಾಸೋಹಕ್ಕೆ ಭಕ್ತರ ಕೊಡುಗೆ ಎಷ್ಟೆಂದು ಹೇಳಲು ಅಸಾಧ್ಯವಾದರೂ ಈ ಪಟ್ಟಿಯನ್ನು ಸುಮ್ಮನೇ ಗಮನಿಸಬಹುದು: 15 ಲಕ್ಷ ರೊಟ್ಟಿ, 600 ಕ್ವಿಂಟಲ್ ಅಕ್ಕಿ, 700 ಕ್ವಿಂಟಲ್‌ ಸಿಹಿತಿನಿಸು, 10 ಕ್ವಿಂಟಲ್‌ ತುಪ್ಪ, 50 ಕ್ವಿಂಟಲ್‌ ಉಪ್ಪಿನಕಾಯಿ, 200 ಕ್ವಿಂಟಲ್‌ ತರಕಾರಿ…

ಪಾಕಶಾಲೆಯಿಂದ ಆಚೆ ಬಂದರೆ ಕಾಣಿಸುವ ಗವಿಸಿದ್ದಪ್ಪಜ್ಜನ ದಾಸೋಹ ತಾಣದ ವೈಭವ ಇನ್ನೊಂದು ಬಗೆ. ಶಿಸ್ತುಬದ್ಧವಾದ ಸಾಲುಗಳಲ್ಲಿ ಬರುವವರಿಗೆ ಅಷ್ಟೇ ಕಾಳಜಿಯಿಂದ ಊಟ ಬಡಿಸುವ ತಂಡ. ಎಲ್ಲೂ ಧಾವಂತವಿಲ್ಲ. ತುರ್ತು ಇಲ್ಲವೇ ಇಲ್ಲ. ರೊಟ್ಟಿ, ಬಗೆಬಗೆಯ ಪಲ್ಯ, ಅನ್ನ, ಸಾಂಬಾರ್, ಮಾದಲಿಯಂಥ ಸಿಹಿ ತಿಂಡಿ, ತುಪ್ಪ, ಚಟ್ನಿ, ಉಪ್ಪಿನಕಾಯಿ- ಪಟ್ಟಿ ಬೆಳೆಯುತ್ತದೆ. ಕೆಲವು ಸಲ ಇಲ್ಲಿಗೆ ಬರುವ ಗವಿಮಠದ ಶ್ರೀಗಳು ಖುದ್ದಾಗಿ ಒಲೆ ಮುಂದೆ ಕೂತು ಮಿರ್ಚಿ ಭಜಿ ಕರಿದು, ಭಕ್ತರ ತಟ್ಟೆಗೆ ಹಾಕುವುದೂ ಇದೆ. ಜಾತ್ರೆಯ ಅಂಗವಾಗಿ ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಶುರುವಾಗುವ ಅನ್ನ ದಾಸೋಹ ಮುಕ್ತಾಯವಾಗುವುದು ಎಷ್ಟಕ್ಕೆ?

ಉತ್ತರ: ಅವತ್ತಿನ ಕೊನೇ ಭಕ್ತನ ಊಟ ಆಗುವವರೆಗೆ!

ಅರಿವು - ಮನರಂಜನೆ

ಜಾತ್ರೆ ಅಂದರೆ ಮನಕ್ಕೆ ವಿರಾಮ ಕೊಡುವ ತಾಣವೂ ಹೌದಷ್ಟೆ. ಅದಕ್ಕಾಗಿಯೇ ಮನರಂಜನೆಯ ಔತಣವೂ ಇಲ್ಲಿರುತ್ತದೆ. ತರಹೇವಾರಿ ರುಚಿಕಟ್ಟಾದ ಮಿಠಾಯಿ, ಬೆಂಡು- ಬತ್ತಾಸು, ಪೇಢಾ, ಕರದಂಟು, ಮಂಡಕ್ಕಿ ಕಾರ, ಮಿರ್ಚಿ, ಬದನೇಕಾಯಿ ಬೋಂಡಾ ಏನೆಲ್ಲ ತಿಂಡಿಗಳು ಮಿಠಾಯಿ ಮಳಿಗೆಯಲ್ಲಿ ಇದ್ದರೆ, ಪಕ್ಕದಲ್ಲೇ ವ್ಯಾಪಾರಿ ಮಳಿಗೆಗಳ ಸಾಲು. ಗವಿಮಠದ ಜಾತ್ರೆಯ ವಿಶೇಷವೆಂದರೆ, ಕಲಸು ಮೇಲೋಗರದಂತಿಲ್ಲದೇ ಮಳಿಗೆಗಳ ಪ್ರತ್ಯೇಕ ಸಂಯೋಜನೆ.

ಅಂದರೆ, ಬಳೆಗಳ ಅಂಗಡಿಗಳು ಒಂದೆಡೆಯಿದ್ದರೆ, ಆಟಿಕೆ ಸಾಮಗ್ರಿ ಇನ್ನೊಂದೆಡೆ. ಸಿಹಿತಿನಿಸುಗಳು ಮತ್ತೊಂದೆಡೆ. ಮನರಂಜನೆಯ ಆಟಗಳಿಗೆ ವಿಶಾಲ ಆವರಣ. ಅನತಿ ದೂರದಲ್ಲಿ ಕಂಪನಿ ನಾಟಕಗಳ ದರ್ಬಾರು! ಇಷ್ಟೇ ಇದ್ದರೆ ಅದೊಂದು ಸ್ವಾಭಾವಿಕ ಜಾತ್ರೆ. ಆದರೆ, ಇಲ್ಲಿಗೆ ಬರುವ ರೈತಾಪಿ ಜನರಿಗೆ ವ್ಯವಸಾಯದ ಮಾಹಿತಿ ನೀಡುವ ಪ್ರದರ್ಶನಾ ಮಳಿಗೆಯೂ ಸಾಕಷ್ಟು ವಿಶಾಲವೇ ಆಗಿರುತ್ತದೆ. ಕೃಷಿಗೆ ಸಂಬಂಧಿಸಿದಂತೆ ದಿನನಿತ್ಯ ಒಂದಿಲ್ಲೊಂದು ಗೋಷ್ಠಿ, ಮಾತುಕತೆ, ಚರ್ಚೆಗಳು ನಡೆಯುತ್ತವೆ.

ಗವಿಮಠ ಜಾತ್ರೆಯ ವೈಶಿಷ್ಟ್ಯ ಇರುವುದು, ಇಲ್ಲಿ ಇಳಿಸಂಜೆಯಿಂದ ತಡರಾತ್ರಿಯವರೆಗೆ ನಡೆಯುವ ಗೋಷ್ಠಿಗಳಲ್ಲಿ. ವಿಷಯ ವಿಸ್ತಾರದ ಹರಿವು ಅನನ್ಯ. ಧರ್ಮ, ಮಾನವೀಯ ಮೌಲ್ಯ, ಸಮಾಜಸೇವೆ, ಸಾಧಕರ ಜತೆ ಸಂವಾದ, ಹಾಸ್ಯಸಂಜೆ, ಸ್ಫೂರ್ತಿ ನೀಡುವ ಉಪನ್ಯಾಸ, ಶಿಕ್ಷಣ, ಅನ್ನ ಬೆಳೆಯುವ ರೈತನ ಅನುಭವ, ಪರಿಸರ ಸಂರಕ್ಷಣೆ, ಜಲಸಾಕ್ಷರತೆ – ಎಲ್ಲದಕ್ಕೂ ಇಲ್ಲಿ ಆದ್ಯತೆ. ಗವಿಮಠದ ಕೆರೆತಟದಲ್ಲಿನ ನಯನಮನೋಹರ ವೇದಿಕೆಯಲ್ಲಿ ಮೂಡಿಬರುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಎದುರಿನ ಕಲ್ಲುಹಾಸಿನ ಮೇಲೆ ಕುಳಿತು ಸಾವಿರಾರು ಜನರು ವೀಕ್ಷಿಸುತ್ತಾರೆ.

ಗವಿಮಠದ ಶ್ರೀಗಳಿಗೆ ಪರಿಸರ, ಕೃಷಿ ಹಾಗೂ ಜಲಸಂರಕ್ಷಣೆಯತ್ತ ಸಾಕಷ್ಟು ಕಾಳಜಿ. ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಆ ವಿಚಾರಗಳಿಗೂ ಆದ್ಯತೆ ಇರುತ್ತದೆ. ಪದೇ ಪದೇ ನಡೆದ ಚಿಂತನೆಗಳ ಪರಿಣಾಮವಾಗಿ, 26 ಕಿ.ಮೀ ಉದ್ದದ ಹಿರೇಹಳ್ಳ (ಇದು ತುಂಗಭದ್ರೆಯ ಉಪನದಿ) ಪುನಶ್ಚೇತನದ ಕನಸು ಮೂಡಿತು. ಕೊಪ್ಪಳ ಜಿಲ್ಲೆಯಲ್ಲಿ ಹರಿಯುವ ಈ ಕಿರುನದಿಗೆ ಸಿಕ್ಕಾಪಟ್ಟೆ ಅಡ್ಡಿ ಆತಂಕ. ಹಿರೇಹಳ್ಳ ಮತ್ತೆ ಹರಿಯುವಂತೆ ಮಾಡುವ ಕನಸನ್ನು ನನಸು ಮಾಡಲು ಖುದ್ದಾಗಿ ಶ್ರೀಗಳೇ ನಿಂತರು. ನದಿಪಾತ್ರದ ಹಳ್ಳಿಗಳ ಜನರನ್ನು ಒಗ್ಗೂಡಿಸಿ, ಶ್ರಮದಾನ ವ್ಯವಸ್ಥೆ ರೂಪಿಸಿದರು. ದಾನಿಗಳು ಜೆಸಿಬಿ, ಟ್ರಾಕ್ಟರ್, ಟಿಪ್ಪರ್ ನೆರವು ನೀಡಿದರೆ, ಶ್ರಮದಾನ ಮಾಡುವವರಿಗೆ ಮಠದಿಂದ ಊಟ-ಉಪಾಹಾರದ ವ್ಯವಸ್ಥೆ ಮಾಡಲಾಯಿತು.

ಹಿರೇಹಳ್ಳದ ಪುನಶ್ಚೇತನವು ನಿಡಶೇಸಿ ಕೆರೆ ಪುನರುಜ್ಜೀವನಕ್ಕೆ ದಿಕ್ಕು ತೋರಿದರೆ, ಆ ಕೆರೆಯಿಂದ ಕಲಭಾವಿ, ಇಂದರಗಿ, ಹೊಸಳ್ಳಿ ಕೆರೆ ಸೇರಿದಂತೆ 14 ಕೆರೆಗಳ ಪುನಶ್ಚೇತನ ಸಾಧ್ಯವಾಯಿತು. ಗ್ರಾಮಸ್ಥರು, ಉದ್ಯಮಿಗಳು, ಸರ್ಕಾರದ ಇಲಾಖೆಗಳು ಧನಸಹಾಯ ಒದಗಿಸಿದರೆ, ಇದಕ್ಕೆ ಸ್ಪೂರ್ತಿ ನೀಡಿ, ಬೆಂಬಲ ಕೊಟ್ಟಿದ್ದು ಸ್ವಾಮೀಜಿಯವರೇ. ಕಳೆದ ವರ್ಷದ ಜಾತ್ರೆಯು ಕೊರೊನಾ ದೆಸೆಯಿಂದಾಗಿ ರದ್ದುಗೊಂಡಾಗ, ಶ್ರೀಗಳು ಆ ಮಹೋತ್ಸವದ ನೆನಪಿನಲ್ಲಿ 300 ಎಕರೆ ವಿಸ್ತೀರ್ಣದ ಗಿಣಗೇರಿ ಕೆರೆ ಪುನರುಜ್ಜೀವನ ಮಾಡಿದ್ದಂತೂ ಮಾದರಿ ಕಾರ್ಯ ಎನಿಸಿದೆ. ಅದರ ಜತೆ, ಕುಗ್ರಾಮ ಅಡವಿಹಳ್ಳಿಯನ್ನು ದತ್ತು ಸ್ವೀಕರಿಸಿ ಪ್ರಗತಿಯತ್ತ ಕೊಂಡೊಯ್ಯುವ ಯತ್ನ ನಡೆಯುತ್ತಿದ್ದರೆ, ದಿನದ 24 ತಾಸು ಕಾರ್ಯನಿರ್ವಹಿಸುವ ಸುಸಜ್ಜಿತ ಗ್ರಂಥಾಲಯ ಲೋಕಾರ್ಪಣೆಯಾಗಿದೆ.

ಸಮಾಜಮುಖಿ

ಲಕ್ಷಾಂತರ ಜನ ಸೇರುವ ತಾಣದಲ್ಲಿ ಒಂದಿನಿತೂ ಆಚೀಚೆಯಾಗದಂತೆ ಶಿಸ್ತು ನಿರ್ವಹಿಸುವ ಸ್ವಯಂಸೇವಕರ ಪಡೆ ಇಲ್ಲಿದೆ. ಬಾಣಸಿಗರಿಂದ ಹಿಡಿದು, ಶೌಚಾಲಯಗಳ ಸ್ವಚ್ಛತೆಯವರೆಗಿನ ಎಲ್ಲ ಕೆಲಸವನ್ನೂ ಸ್ವಯಂಸೇವಕರು ಮಾಡುತ್ತಾರೆ. ಜಾತ್ರೆ ಎಂದರೆ ದಿನವೂ ಕಸ, ತ್ಯಾಜ್ಯದ ರಾಶಿ. ಆದರೆ ಗವಿಮಠದ ಜಾತ್ರೆಯ ಆವರಣ ನಿತ್ಯವೂ ಚೊಕ್ಕಟ. ಕೆಲವೊಮ್ಮೆ ಖುದ್ದಾಗಿ ಶ್ರೀಗಳೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ನೋಟ ಕಾಣಿಸುತ್ತದೆ.

ಜಾತ್ರೆ ಎಂದರೆ ಬರೀ ಜನರ ಗುಂಪು ಸೇರುವ ಸಮಾರಂಭವಲ್ಲ; ಬದಲಾಗಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಗಳ ಸಂಗಮ ಎಂಬ ಮಾತನ್ನು ಗವಿಮಠವು ಸಾಬೀತುಪಡಿಸುತ್ತಿದೆ. ಜಾತ್ರೆಯ ಅಂಗವಾಗಿ ಪ್ರತಿ ವರ್ಷವೂ ಒಂದೊಂದು ಸಮಾಜಮುಖಿ ಚಟುವಟಿಕೆ ಹಮ್ಮಿಕೊಳ್ಳುತ್ತಿದೆ. ಈವರೆಗೆ ರಕ್ತದಾನ ಶಿಬಿರ, ಜಲದೀಕ್ಷೆ (ನೀರಿನ ಸಂರಕ್ಷಣೆ), ಕೃಪಾದೃಷ್ಟಿ (ನೇತ್ರದಾನ), ಲಕ್ಷ ವೃಕ್ಷೋತ್ಸವ (ಒಂದು ಲಕ್ಷ ಸಸಿ ವಿತರಣೆ) ನಡೆದಿರುವುದು ಜಾತ್ರೆಯ ಹಿನ್ನೆಲೆಯಲ್ಲಿಯೇ.

ಮೊದಲೆಲ್ಲ ಧಾರ್ಮಿಕ ಸಂಭ್ರಮದ ನೆಲೆಯಾಗಿದ್ದ ಗವಿಮಠ ಜಾತ್ರೆ ಈಗ ಬಹುಮುಖಿ, ಸಮಾಜಮುಖಿ. ಜನಪ್ರವಾಹಕ್ಕೆ ಸರಿಯಾದ ದಿಕ್ಕು ತೋರಿಸುವ ಪ್ರಯತ್ನ ಗವಿಮಠದ್ದು. ಅದಕ್ಕೆ ಜಾತ್ರೆಯೊಂದು ನೆಪ. ಕೆಲವು ವರ್ಷಗಳ ಹಿಂದೆ ಜಾತ್ರಾ ಮಹೋತ್ಸವದ ಉದ್ಘಾಟನೆಗೆ ಬಂದಿದ್ದ ವಿಜ್ಞಾನಿ ಡಾ. ಸಿ.ಎನ್‍.ಆರ್‍. ರಾವ್ ‘ಇದು ಮಹಾ ಜನಸಾಗರ; ಮಹಾ ಜನಸಾಗರ; ಜನಜಾತ್ರೆ. ಎಲ್ಲ ಜಾತ್ರೆಗಳನ್ನೂ ಮೀರಿಸುವಂತಿದೆ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ’ ಎಂದು ಉದ್ಗರಿಸಿದ್ದರು.

ಇಂಥ ಜನಸಾಗರದ ಮಹಾಸಂಗಮಕ್ಕೆ ಈಗ ‘ಕೊರೊನಾ’ ಕಾರ್ಮೋಡದ ನೆರಳು ಕವಿದಿದೆ. ಕಳೆದ ವರ್ಷದಂತೆಯೇ ಈ ಸಲದ (ಜ. 19) ಮಹೋತ್ಸವವೂ ಸರಳ ರೀತಿಯಲ್ಲಿಯೇ ನಡೆಯಲಿದೆ. ಎರಡು ವಾರಗಳುದ್ದಕ್ಕೂ ಕಾಣುತ್ತಿದ್ದ ಅಬ್ಬರ, ಭರಾಟೆ, ಸಂಭ್ರಮಕ್ಕೆ ಅವಕಾಶವಿಲ್ಲ. ವ್ಯಾಪಾರ-ವಹಿವಾಟು ಮೂಲಕ ಒಂದಷ್ಟು ಆದಾಯ ಗಳಿಸುವ ಸಾವಿರಾರು ಜನರಿಗೆ ಇದು ತಂದೊಡ್ಡಿದ ಕಷ್ಟ ಲೆಕ್ಕಕ್ಕೆ ಸಿಗದು. ಜಾತ್ರೆಯೊಂದಿಗೆ ಭಕ್ತಿ ಭಾವನಾತ್ಮಕ ನಂಟು ಬೆಸೆದುಕೊಂಡು, ದಿನಗಟ್ಟಲೇ ಜಾತ್ರೆಯ ಸಂಭ್ರಮ ಸವಿದವರ ಎದುರಿಗೆ ಇರುವುದು- ‘ಇದಕ್ಕೆ ಕೊನೆ ಯಾವಾಗ’ ಎಂಬ ಉತ್ತರವಿಲ್ಲದ ಪ್ರಶ್ನೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.