ADVERTISEMENT

ಸೈರಣೆ–ವಿವೇಕದ ‘ಗೋಪಾಲ’ಮಾರ್ಗ

ಚ.ಹ.ರಘುನಾಥ
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
ಎಚ್‌.ಎಸ್‌. ಗೋಪಾಲ ರಾವ್‌
ಎಚ್‌.ಎಸ್‌. ಗೋಪಾಲ ರಾವ್‌   
ಚರಿತ್ರೆ–ಶಾಸನಶಾಸ್ತ್ರದ ಅಧ್ಯಯನವನ್ನು ಮಾನವೀಯಗೊಳಿಸಿದ, ಸಂಶೋಧನೆಯ ಮೂಲಕ ‘ಸೈರಣೆ–ವಿವೇಕ’ದ ಉತ್ಖನನ ನಡೆಸಿದ ವಿಶಿಷ್ಟ ಬರಹಗಾರರಾಗಿದ್ದರು.

‘ಮುಟ್ಟಿದರೆ ಮುನಿ’ ಮಾತಿನ ಮೂರ್ತರೂಪದಂತಿದ್ದವರು ಎಚ್‌.ಎಸ್‌. ಗೋಪಾಲ ರಾವ್‌. ಸುಲಭಕ್ಕೆ ಓದಲಾಗದ ಮುಖ, ಆ ಮುಖಕ್ಕೆ ಹೊಂದುವ ಗಡುಸು ಮಾತುಗಳಿಂದಾಗಿ ‘ಮುನಿ’ಯಂತೆ ಕಂಡರೂ, ಗೋಪಾಲ ರಾವ್‌ ಅವರೊಳಗಿದ್ದುದು ಒಂದು ಮಗು. ಚರಿತ್ರೆ, ಶಾಸನಶಾಸ್ತ್ರದ ಅಧ್ಯಯನಗಳಲ್ಲಿ ಹೊಸ ಎತ್ತರಕ್ಕೆ ಏರಿದಂತೆಲ್ಲ ಅವರೊಳಗಿನ ‘ಮಗುತನ’ ಹೊಸಹುಟ್ಟು ಪಡೆದಂತೆ ಕಾಣಿಸುತ್ತಿತ್ತು.

ಪೂರ್ವಸೂರಿಗಳು ಹಾಗೂ ಸಮಕಾಲೀನ ಸಂಶೋಧಕರ ಬಗ್ಗೆ ಗೌರವ ಇರಿಸಿಕೊಂಡೇ ಅವರಿಗಿಂತಲೂ ಭಿನ್ನವಾಗುವುದಕ್ಕಾಗಿ ಗೋಪಾಲ ರಾವ್‌ ನಿರಂತರ ಪ್ರಯತ್ನ ನಡೆಸುತ್ತಿದ್ದರು. ಚರಿತ್ರೆ–ಶಾಸನಗಳ ಜೊತೆಗೆ ವಿಮರ್ಶೆಯಲ್ಲೂ ಅವರಿಗೆ ಆಸಕ್ತಿಯಿತ್ತು; ಕಥೆ–ಕಾದಂಬರಿಗಳ ಸೃಜನಶೀಲ ಹುಡುಕಾಟದಲ್ಲೂ ಒಲವಿತ್ತು. ಆ ಕಾರಣದಿಂದಾಗಿಯೇ ‘ಮಣ್ಣೆ’ಯಂಥ ಸಂಶೋಧನಾ ಕೃತಿ ರಚಿಸಿದ ನಂತರವೂ, ಕಾದಂಬರಿಯ ಸೃಜನಶೀಲ ಬರವಣಿಗೆಗಾಗಿ ಹಂಬಲಿಸುವುದು ಅವರಿಗೆ ಸಾಧ್ಯವಾಗಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲಕ್ಕೆ ಸಮೀಪದ ಹುಲ್ಲೇಗೌಡನಹಳ್ಳಿ ಗೋಪಾಲ ರಾವ್‌ ಹುಟ್ಟೂರು. ಎಲೆಕ್ಟ್ರಿಕಲ್‌ ಡಿಪ್ಲೊಮಾ ಸಾಲದೆನ್ನುವಂತೆ, ಎರಡು ಚಿನ್ನದ ಪದಕಗಳೊಂದಿಗೆ ಕನ್ನಡ ಎಂ.ಎ. ಪಡೆದವರು. ‘ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು – ಒಂದು ಸಾಂಸ್ಕೃತಿಕ ಅಧ್ಯಯನ’ ಅವರ ಪಿಎಚ್‌.ಡಿ. ಪ್ರೌಢಪ್ರಬಂಧ. ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಸಂಜೆ ತರಗತಿಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಶಾಸನಗಳ ಬಗ್ಗೆ ಪ್ರೀತಿ ಮೂಡಿಸಿದವರು. ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ADVERTISEMENT

‘ಕರ್ನಾಟಕ ಏಕೀಕರಣ ಇತಿಹಾಸ’ ಗೋಪಾಲ ರಾವ್‌ ಅವರ ಮಹತ್ವಾಕಾಂಕ್ಷೆಯ ಕೃತಿ. ಅವರಿಗೆ ಬಹು ಜನಪ್ರಿಯತೆ ತಂದುಕೊಟ್ಟ ಕೃತಿಯೂ ಹೌದು. ಏಕೀಕರಣ ಚಳವಳಿಯ ಹಿಂದಿನ ತವಕ ತಲ್ಲಣ, ಏಳುಬೀಳಿನ ಕಥನಗಳ ನಿರೂಪಣೆಯ ಈ ಕೃತಿಗಾಗಿ ಅವರು ಇಡೀ ನಾಡನ್ನು ಸುತ್ತಿದ್ದರು. ಏಕೀಕರಣದ ಇತಿಹಾಸಕ್ಕೆ ಸಂಬಂಧಿಸಿದಂತೆ ಗೋಪಾಲ ರಾವ್‌ ಅವರದು ಆಚಾರ್ಯ ಕೃತಿ. ಈ ಕೃತಿಯಲ್ಲಿ ಚಳವಳಿಯ ಇತಿಹಾಸದ ದಾಖಲಾತಿಯ ಜೊತೆಗೆ, ನಾಡಿನ ಜಾತ್ಯತೀತ ಸ್ವರೂಪವನ್ನು ಸೂಕ್ಷ್ಮವಾಗಿ ಪರಿಚಯಿಸುವ ಪ್ರಯತ್ನ ಇರುವುದನ್ನೂ ಗಮನಿಸಬಹುದು.

ಸಮಾಜದಲ್ಲಿ ಅಸಹನೆ ಉಂಟುಮಾಡುವುದಕ್ಕಾಗಿ ಚರಿತ್ರೆಯ ಮೊರೆ ಹೋಗುತ್ತಿರುವವರು ಹಾಗೂ ಚರಿತ್ರೆಯನ್ನು ಹೊಸತಾಗಿ ನಿರೂಪಿಸುವ ಉತ್ಸಾಹಿಗಳು  ಚಾಲ್ತಿಯಲ್ಲಿರುವ ದಿನಗಳಿವು. ಆದರೆ, ಚರಿತ್ರೆ ಹಾಗೂ ಶಾಸನಗಳ ಸಖ್ಯದಲ್ಲಿ ಗೋಪಾಲ ರಾವ್‌ ಅವರ ಮಾನವೀಯ ಸ್ಪಂದನಗಳು ಮುಕ್ಕಾಗಿರಲಿಲ್ಲ. ಸಮಾಜದಲ್ಲಿನ ಕ್ಷೋಭೆ–ಅಸಹನೆಯ ಬಗ್ಗೆ ಮಿಡಿಯಬಲ್ಲ ಭಾವಕೋಶ ಅವರದಾಗಿತ್ತು. ಶಾಸನಗಳ ಹುಡುಕಾಟ ಒಡನಾಟ ಅವರ ಪಾಲಿಗೆ ನಾಡು–ನುಡಿಯ ವಿವೇಕವನ್ನು ಅರ್ಥ ಮಾಡಿಕೊಳ್ಳುವ, ವರ್ತಮಾನಕ್ಕೆ ಪರಿಚಯಿಸುವ ಮಾರ್ಗವಾಗಿತ್ತು.

ವಿಶ್ವವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸಿದವರಿಗೆ ಶಿಷ್ಯ ಬಳಗ ಇರುವುದು ಸಾಮಾನ್ಯ. ಅಕಡೆಮಿಕ್‌ ಪರಿಭಾಷೆಯ ಮೇಷ್ಟ್ರು ಪರಂಪರೆಗೆ ಸೇರದ, ಕೆಪಿಟಿಸಿಎಲ್‌ನಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಹಾಗೂ ಕನ್ನಡ ಘಟಕದ ಸಮನ್ವಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಗೋಪಾಲ ರಾವ್‌ ಅವರಿಗೂ ಶಿಷ್ಯವೃಂದವಿತ್ತು. ಅವರ ಮನೆ ಹಲವರಿಗೆ ಗುರುಮನೆಯೂ ಆಗಿತ್ತು. ಆರ್ಥಿಕವಾಗಿ ದುರ್ಬಲವಾದ ವಿದ್ಯಾರ್ಥಿಗಳನ್ನು ಮನೆಯಲ್ಲಿರಿಸಿಕೊಂಡು ಓದಿಸಿದ, ಮಾರ್ಗದರ್ಶನ ನೀಡಿದ ವಾತ್ಸಲ್ಯ ಅವರದಾಗಿತ್ತು. ಇತಿಹಾಸ, ಶಾಸನಶಾಸ್ತ್ರದ ವಿದ್ಯಾರ್ಥಿಗಳನ್ನಂತೂ ಮಕ್ಕಳಂತೆಯೇ ನಡೆಸಿಕೊಳ್ಳುತ್ತಿದ್ದರು. ಈ ಅನುಬಂಧವೇ ಅವರಿಗೊಂದು ಶಿಷ್ಯಪಡೆ ದೊರಕಿಸಿಕೊಟ್ಟಿತ್ತು. ಎಳೆಯರ ಬಗೆಗಿನ ಪ್ರೀತಿಯೇ, ವಿಮರ್ಶೆ–ವಿದ್ವತ್ತಿನ ಗಾಂಭೀರ್ಯದಿಂದ ಹೊರಬಂದು ಮಕ್ಕಳಿಗಾಗಿ ಬರೆಯುವುದಕ್ಕೆ ಕಾರಣವಾಯಿತು.

‘ಜೇನು ನಂಜು’, ‘ಗತಿ’ (ಕಾದಂಬರಿಗಳು), ‘ನಮ್ಮ ನಾಡು ಕರ್ನಾಟಕ’, ‘ಇತಿಹಾಸದ ಅಧ್ಯಯನ: ಅಂದು ಇಂದು’, ‘ಗೋದಾವರಿಯ ಆಸುಪಾಸಿನಲ್ಲಿ’, ‘ಚಂಗಾಳ್ವರು’, ‘ಇದು ನಮ್ಮ ಕರ್ನಾಟಕ’, ‘ಇತಿಹಾಸದ ಇಣುಕುನೋಟ’, ‘ರಾಷ್ಟ್ರಕೂಟ ಶಿಲ್ಪಕಲೆ’, ‘ನಮ್ಮದಿದು ಇತಿಹಾಸ’ ಅವರ ಕೆಲವು ಕೃತಿಗಳು.

ಎಪ್ಪತ್ತೈದು ತುಂಬಿದ ಗೋಪಾಲ ರಾವ್‌ ಅವರಿಗೆ ಎರಡು ವರ್ಷಗಳ ಹಿಂದೆ ಅಭಿನಂದನಾ ಸಮಾರಂಭ ನಡೆದು, ‘ಬಹುಮುಖಿ’ ಹೆಸರಿನ ಅಭಿನಂದನಾ ಗ್ರಂಥ ಅರ್ಪಣೆಗೊಂಡಿತ್ತು. ‘ಬಹುಮುಖಿ’ ಅವರ ವ್ಯಕ್ತಿತ್ವದ ಚೆಲುವು ಸಮೃದ್ಧಿಯ ಸಂಕೇತದಂತಿತ್ತು. ನೂರು ವರ್ಷ ತುಂಬಿದ ಸಂದರ್ಭದಲ್ಲೂ ಇಂತಹುದೇ ಕಾರ್ಯಕ್ರಮ ನಡೆಯಲೆಂದು ಅಭಿಮಾನಿಗಳು ಹಾರೈಸಿದ್ದರು. ಆರೋಗ್ಯ ಅನಾರೋಗ್ಯದ ಜೀಕಾಟದಲ್ಲಿ ನೂರು ವರ್ಷಗಳ ಗುರಿ ದೂರದ್ದೆನ್ನುವುದು ಗೋಪಾಲ ರಾವ್‌ ಅವರಿಗೆ ಗೊತ್ತಿತ್ತು. ಆದರೆ, ನೂರು ವರ್ಷಗಳ ಆಯುಸ್ಸು ಸಾಲದೆನ್ನಿಸುವಷ್ಟು ಯೋಜನೆಗಳನ್ನು ಅವರು ಜೀವಿಸುತ್ತಿದ್ದರು. ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿದ್ದಾಗ, ‘ಮಾಡಬೇಕಾದ ಕೆಲಸ ಸಾಕಷ್ಟಿದೆ. ಮನೆಗೆ ಕರೆದುಕೊಂಡು ಹೋಗಿ’ ಎಂದಿದ್ದರು. ‘ಓದು–ಬರಹ ಸಾಧ್ಯವಾಗದೆ ಬದುಕಿದ್ದೇನು ಪ್ರಯೋಜನ?’ ಎಂದು ಉದ್ಗರಿಸಿದ್ದರು. ಹಂಬಲಿಸಿದ ಬದುಕು ದೊರೆಯದೆ ಹೋದಾಗ, ನಿರ್ಗಮಿಸುವುದೇ ಒಳಿತೆನ್ನುವಂತೆ ಗೋಪಾಲ ರಾವ್‌ ಇತಿಹಾಸದ ಭಾಗವಾಗಿದ್ದಾರೆ. ಈಗ ಅವರು ನಡೆದ ದಾರಿಯಷ್ಟೇ ನಮ್ಮ ಮುಂದಿದೆ. ಅದು, ಎಲ್ಲರನ್ನೂ ಒಳಗೊಳ್ಳುವ ಮಾನವೀಯ ಮಾರ್ಗ; ಸೈರಣೆ, ವಿವೇಕದ ರೂಪದಲ್ಲಿ ಚರಿತ್ರೆಯನ್ನು ಅರಿಯುವ ಮಾರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.