ಪಿ.ಲಂಕೇಶ್ ಅವರ ನೆನಪಿಗಾಗಿ ಭಾಗವತರು ಸಾಂಸ್ಕೃತಿಕ ಸಂಘಟನೆಯು ಮಾರ್ಚ್ 10ರ ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಇಡೀ ದಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಲಂಕೇಶ್ ಕನ್ನಡ ಸಾಹಿತ್ಯ ಲೋಕ ಕಂಡ ಅಸಾಮಾನ್ಯ ಸೃಷ್ಟಿಕರ್ತ ಎಂಬುದು ಹಳೆಯ ಸಂಗತಿ. ಇದೇ ಮಾರ್ಚ್ 8, 2023ಕ್ಕೆ ಅವರಿಗೆ 90 ವರ್ಷ. ತಮ್ಮ 65ನೇ ವಯಸ್ಸಿನಲ್ಲಿ ನಿರ್ಗಮಿಸಿದ ಅವರು, ಜ.25, 2000 ರಂದು ಬರವಣಿಗೆ ನಿಲ್ಲಿಸಿದರು. ಅಂದು ಪತ್ರಿಕೆ ಕೆಲಸ ಮುಗಿಸಿ, ಅದು ಪ್ರಿಂಟಿಗೆ ಹೋದ ನಂತರ ಮನೆಗೆ ಹೋಗಿ ಮಲಗಿದವರು ಯಾವಾಗಲೊ ಹೊರಟುಹೋಗಿದ್ದರು. ಅದಕ್ಕೂ ಮೊದಲು ತಮ್ಮ ಸಂಪಾದಕೀಯ ಬರವಣಿಗೆಯನ್ನು ತಾವೇ ಟೀಕಿಸಿದ್ದರು. ತಮ್ಮ ತೀವ್ರ ಅನಾರೋಗ್ಯವನ್ನು ಗ್ರಹಿಸಿದ ಅವರು ಶಿವಮೊಗ್ಗದಲ್ಲಿ ನಡೆಸಿದ ಕಡೆಯ ಸಭೆಗೆ ಬಂದಾಗ, ಇನ್ನೊಂದೆರಡು ವರ್ಷ ಇರ್ತೀನಿ ಎಂದು ತಮಗೆ ತಾವೇ ಆಯಸ್ಸು ಕೊಟ್ಟುಕೊಂಡಿದ್ದರು. ಆದರೆ ನಮಗೆ ನಾವೇ ಆಯಸ್ಸು ಕೊಟ್ಟುಕೊಳ್ಳುವುದು ಭ್ರಮೆ ಎಂದೂ ಹೇಳಿದ್ದರು. ಅವರು ತೀರಿಕೊಂಡು 25 ವರ್ಷವಾದರೂ ಕನ್ನಡ ಸಾಹಿತ್ಯ ಮತ್ತು ರಾಜಕಾರಣ ಅವರನ್ನು ನೆನೆಸಿಕೊಂಡು ‘ಈಗ ಲಂಕೇಶ್ ಇದ್ದಿದ್ದರೆ’ ಎಂದು ಉದ್ಗಾರಕ್ಕೆ ಕಾರಣವಾಗಿರುವುದು ವಿಶೇಷ.
ಲಂಕೇಶ್ ಶಿವಮೊಗ್ಗ ಸಮೀಪದ ಕೊನಗವಳ್ಳಿಯಲ್ಲಿ ಜನಿಸಿದರು. ಬೆಂಗಳೂರಿನಲ್ಲಿ 20 ವರ್ಷ ಇಂಗ್ಲಿಷ್ ಉಪನ್ಯಾಸಕರಾಗಿದ್ದರೂ ಹಳ್ಳಿಗರಾಗಿಯೇ ಉಳಿದಿದ್ದರು. ಅವರು ತಮ್ಮ ಬಾಲ್ಯದ ದಿಗ್ಭ್ರಮೆಗಳನ್ನು ‘ಮುಸ್ಸಂಜೆ ಕಥಾಪ್ರಸಂಗ’ವೆಂಬ ಕಾದಂಬರಿ ಮತ್ತು ‘ಹುಳಿಮಾವು’ ಎಂಬ ಜೀವನ ವೃತ್ತಾಂತದಲ್ಲಿ ದಾಖಲಿಸಿದ್ದಾರೆ. ಆಕೃತಿಗಳನ್ನು ಈಗ ಓದಿದರೂ ತನ್ನ ತಾಜಾತನ ಉಳಿಸಿಕೊಂಡಿವೆ. ಹಳ್ಳಿಗಳ ಬದುಕನ್ನು ಅಲ್ಲಿಯ ಜನರ ನಾಡಿಮಿಡಿತವನ್ನು ಲಂಕೇಶರಷ್ಟು ಕರಾರುವಾಕ್ಕಾಗಿ ದಾಖಲಿಸಿದವರು ವಿರಳ.
ಲಂಕೇಶ್ ಹಳ್ಳಿಗಳ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ ಕಂಡು ಯಾವಾಗಲೂ ಪ್ರಕ್ಷುಬ್ದವಾಗಿರುತ್ತಿದ್ದರು. ಹಣದ ಮದ, ಅಹಂಕಾರದ ಮದ, ಅಂತಸ್ತಿನ ಮದವೇರಿದ ಜನಗಳ ಭೂತ ಬಿಡಿಸಬೇಕು ಎನ್ನುತ್ತಿದ್ದರು. ಹೀಗಾಗಿ ಅಂಥವರು ಲಂಕೇಶ್ ಕಂಡರೆ ಹಾಯುವ ದನ ಕಂಡಂತೆ ಅರುಗಾಸಿ ಹೋಗುತ್ತಿದ್ದರು. ಮತೀಯವಾದಿಗಳಂತೂ ಅವರನ್ನು ಕಂಡಕೂಡಲೇ ಹಾವು ನೋಡಿದಂತಾಗುತ್ತಿದ್ದರು. ಲಂಕೇಶರು ಭ್ರಷ್ಟರು, ನೀಚರು, ವ್ಯಭಿಚಾರಿಗಳನ್ನು ಕ್ಷಮಿಸಿದರೂ ಮತಾಂಧರನ್ನು ಕ್ಷಮಿಸುತ್ತಿರಲಿಲ್ಲ. ಮತಾಂಧರ ಮನಸ್ಸನ್ನು ಪೂರ್ಣ ಗ್ರಹಿಸಿದ್ದ ಅವರು, ವಾಸಿಯಾಗದ ಯಾವುದೋ ಕಾಯಿಲೆಗೆ ತುತ್ತಾದವರನ್ನು ಕಂಡಂತೆ ಸಿಡುಕುತ್ತಿದ್ದರು.
ಲಂಕೇಶ್ ಪತ್ರಿಕೆ ತೆರೆಯುವಷ್ಟರಲ್ಲಿ ಕನ್ನಡಕ್ಕೆ ಮಹತ್ವದ ಕೃತಿಗಳನ್ನು ಕೊಟ್ಟಿದ್ದರು. ಅವರ ಬರವಣಿಗೆ ಕುರಿತು ದೇವನೂರ ಹೇಳುವಂತೆ ತೆಂಗಿನಮಟ್ಟೆ ತಾನು ಮೂಡಿದ ಜಾಗದ ಗುರುತನ್ನು ಮರದಲ್ಲಿ ದಾಖಲಿಸಿ ಹೋಗುವಂತೆ, ಲಂಕೇಶ್ ಕೈಹಾಕಿದ ಪ್ರಕಾರದಲ್ಲಿ ತಮ್ಮ ಪ್ರತಿಭೆಯ ಗುರುತನ್ನು ಮೂಡಿಸಿದ್ದಾರೆ. ಕತೆ, ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ–ಹೀಗೆ ಎಲ್ಲ ಪ್ರಕಾರದಲ್ಲೂ ಅವರು ತಮ್ಮ ಪ್ರತಿಭೆ ದಾಖಲಿಸಿದ್ದಾರೆ. ಅವರು ಪತ್ರಿಕೆ ತೆರೆದು ನಿರಂತರವಾಗಿ ಬರೆಯುತ್ತ ಹೊರಟ ಮೇಲೆ, ಇನ್ನು ಲಂಕೇಶರಿಂದ ಮಹತ್ವದ ಕೃತಿಗಳು ಸಾಧ್ಯವಿಲ್ಲ ಎಂದು ಹಗುರವಾಗಿ ಮಾತನಾಡಿದವರಿಗೆ ಉತ್ತರವೆಂಬಂತೆ ‘ಅಕ್ಕ’ ಕಾದಂಬರಿ ಬರೆದರು. ‘ಗುಣಮುಖ’ ನಾಟಕ ಬರೆದರು. ಹಲವಾರು ಕತೆಗಳನ್ನು ಬರೆದರು. ಅದೂ ಪ್ರಗತಿರಂಗವೆಂಬ ಪಾರ್ಟಿ ಸ್ಥಾಪಿಸಿ ಕರ್ನಾಟಕದಲ್ಲೆಲ್ಲಾ 20 ಸಾವಿರ ಕಿ.ಮೀ ತಿರುಗುತ್ತಲೇ ಬರೆದ ಕಥೆಗಳು. ‘ಕಲ್ಲು ಕರಗುವ ಸಮಯ’ ಎಂಬ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಇದಕ್ಕೆ ಕಾರಣಕರ್ತರಾದ ಅನಂತಮೂರ್ತಿ ಅವರನ್ನು ಬಿಡದೆ ಟೀಕಿಸಿದರು. ಅವರಿಬ್ಬರ ಜಗಳ ನೋಡಿದರೆ ಸಂಸ್ಕಾರದ ನಾರಣಪ್ಪ ಮತ್ತು ಪ್ರಾಣೇಶಾಚಾರಿಯ ಜಗಳದಂತೆಯೂ, ಶೂದ್ರ–ಬ್ರಾಹ್ಮಣ ಜಗಳದಂತೆಯೂ ಕಾಣುತ್ತಿತ್ತು. ಲಂಕೇಶ್ ಮೂಲತಃ ಜಗಳಗಂಟರು. ಜಗಳಗಳೇ ಸೃಜನಶೀಲತೆಯ ಜೀವಾಳವೆಂದು ನಂಬಿದ ಅವರ ಜೊತೆ ಜಗಳಕಾದವರೇಯಿಲ್ಲ. ಅವರದ್ದು ಸಿಟ್ಟಿನ ಜಗಳ. ದ್ವೇಷದ ಜಗಳವಲ್ಲ. ಇದನ್ನು ಗ್ರಹಿಸದವರು ಮತ್ತೆಂದೂ ಅವರ ಸನಿಹಕ್ಕೆ ಹೋಗಲಿಲ್ಲ. ಒಂದಲ್ಲಾ ಒಂದು ದಿನ ತೇಜಸ್ವಿಯವರಿಂದ ಫೋನು ಬರುತ್ತದೆ ಅಥವಾ ನಾನೇ ಮಾಡುತ್ತೇನೆ ಎನ್ನುತ್ತಿದ್ದರು. ಅದಾಗಲಿಲ್ಲ.
ಲಂಕೇಶ್ ಇಂಗ್ಲಿಷ್ ಉಪನ್ಯಾಸಕ ವೃತ್ತಿಯಲ್ಲಿ ಆಸಕ್ತಿ ಕಳೆದುಕೊಂಡು ಸಿನಿಮಾ ತೆಗೆಯಲು ಹೊರಟಾಗ ಮೊದಲ ಸಿನಿಮಾ ‘ಪಲ್ಲವಿ’ಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಬಂತು. ಇಂತಹ ಉತ್ಸಾಹದ ಸಮಯದಲ್ಲೇ ‘ಅನುರೂಪ’, ‘ಖಂಡವಿದೆಕೊ ಮಾಂಸವಿದೆಕೊ’, ‘ಎಲ್ಲಿಂದಲೋ ಬಂದವರು’ ತೆಗೆದರು. ಅಷ್ಟರಲ್ಲಿ ಕೆಲಸವೂ ಹೋಯ್ತು. ನಿರ್ದೇಶಕನ ಸಂಭಾವನೆಯೂ ಖರ್ಚಾಯಿತು. ಅಂತೂ ಬೀದಿಗೆ ಬಿದ್ದ ಆ ಸಮಯದಲ್ಲಿ ಮನೆ ಎದುರಿಗಿನ ಅಂಗಡಿಯವನು ಸಿಗರೇಟ್ ಸಾಲ ಕೊಡಲಿಲ್ಲ. ಹಾಗಂದ ಕೆಲವೇ ತಿಂಗಳಲ್ಲಿ ಲಂಕೇಶ್ ಕಾರಿನಲ್ಲಿ ಮನೆಗೆ ಬಂದರು. ಕಿಡಿ ಶೇಷಪ್ಪನ ಸ್ಫೂರ್ತಿಯಿಂದ ಪತ್ರಿಕೆ ತೆರೆದ ನಂತರ ಹಿಂತಿರುಗಿ ನೋಡಲಿಲ್ಲ. ಅದಕ್ಕೂ ಮೊದಲು ‘ಪ್ರಜಾವಾಣಿ’ಯಲ್ಲಿ ಕಾಲಂ ಬರೆಯಲು ಅವಕಾಶ ದೊರೆಕಿಸಿಕೊಂಡು ಜನಪ್ರಿಯತೆ ಗಳಿಸಿದ್ದರು.
ಪತ್ರಿಕೆ ತೆರೆದ ನಂತರ ಪ್ರತಿವಾರವೂ ಅದರ ಪ್ರಸಾರ ಸಂಖ್ಯೆ ಸಾವಿರಗಟ್ಟಲೆ ಏರುತ್ತಾ ಹೋಯ್ತು. ಅದಕ್ಕೆ ಕಾರಣ ಕೇಂದ್ರದಿಂದ ಹೇರಲ್ಪಟ್ಟ ಗುಂಡೂರಾಯರ ಸರಕಾರವಾಗಿತ್ತು. ಲಂಕೇಶರಿಗೆ ಸಿಕ್ಕ ಈ ಆಯುಧದ ಬಗ್ಗೆ ಅಂದು ರಾಜಕಾರಣಿಗಳಲ್ಲದೇ ಸಾಹಿತಿಗಳೂ ಹೆದರತೊಡಗಿದರು. ಪತ್ರಿಕೆಯನ್ನು ಜಾಣಜಾಣೆಯರ ಪತ್ರಿಕೆ ಎಂದು ಕರೆದ ಲಂಕೇಶ್ ಅಂದಿನವರೆಗಿದ್ದ ಪತ್ರಿಕಾ ಮಾಧ್ಯಮದ ಭಾಷೆಯನ್ನೇ ಬದಲಿಸಿದರು ಮತ್ತು ಪತ್ರಿಕೆಯಲ್ಲಿ ಮೊದಲ ಬಾರಿಗೆ ಮುಸ್ಲಿಮರು, ಲಂಬಾಣಿಗರು, ಮಾದಿಗರು, ಹಕ್ಕಿಪಿಕ್ಕಿ ಜನಾಂಗದ ಲೇಖಕರಿಗೆಲ್ಲ ಅವಕಾಶ ಕೊಟ್ಟು ಪ್ರೋತ್ಸಾಹಿಸಿದರು. ಅವರು ಪತ್ರಿಕೆ ತೆರೆದ ಕೂಡಲೇ ದಾಖಲಿಸಿದ ಒಂದು ಟಿಪ್ಪಣಿ ಬಹುಮುಖ್ಯವಾಗಿತ್ತು. ‘‘ನಮ್ಮ ಪತ್ರಿಕೆ ಕೇವಲ ಎರಡು ತಿಂಗಳ ಮಗು. ನಮ್ಮ ಓದುಗರ ವಿಶ್ವಾಸವೇ ಇದಕ್ಕೆ ಆಹಾರ. ನಾವು ಯಾವುದೇ ಒಬ್ಬ ರಾಜಕಾರಣಿ ಅಥವಾ ಶೋಷಕನಿಂದ ಒಂದು ಚಿಕ್ಕಾಸು ಲಂಚ ಪಡೆದಿದ್ದನ್ನು, ಸವಲತ್ತು ಪಡೆದಿದ್ದನ್ನು ತೋರಿಸಿದರೆ ಅವತ್ತು ಪತ್ರಿಕೆಯನ್ನು ನಿಲ್ಲಿಸುತ್ತೇನೆ. ನಾವು ಸರಕಾರದ ಜಾಹೀರಾತನ್ನು ಸ್ವೀಕರಿಸುವುದಿಲ್ಲ. ಪ್ರತಿಯೊಬ್ಬ ಕನ್ನಡಿಗ ಪತ್ರಿಕೆ ಕೊಳ್ಳುವ ಕಾಸಿನಿಂದ ಇದನ್ನು ನಡೆಸುತ್ತೇನೆ’’ ಎಂದು ಬರೆದರು. ನಿಜಕ್ಕೂ ಓದುಗ ಮತ್ತು ಸಂಪಾದಕ ಒಂದಾದ ಸಮಯ ಅದು.
ಸಮಯಕ್ಕೆ ಬೆಲೆ ಕೊಡುತ್ತಿದ್ದ ಅವರು ಪತ್ರಿಕೆ ನಡೆಸಿದ 20 ವರ್ಷದಲ್ಲಿ 20 ಸಾವಿರ ಪುಟ ಬರೆದು ಹೋಗಿದ್ದಾರೆ. ನಮ್ಮ ನಡುವಿನ ತಾರತಮ್ಯ ನಿವಾರಣೆ, ಹಿಂದೂ–ಮುಸ್ಲಿಂ ಸಾಮರಸ್ಯ, ಸ್ತ್ರೀಯರ ಸಬಲೀಕರಣ ಈ ಆಶಯಗಳು ಪತ್ರಿಕೆಯ ಪ್ರಧಾನ ದನಿಯಾಗಿತ್ತು. ಲಂಕೇಶರು ಪ್ರಗತಿ ರಂಗವೆಂಬ ಭಾಷಣದ ಪಾರ್ಟಿ ಕಟ್ಟಿದರು.
ಲಂಕೇಶರ ಒಡನಾಡಿಯಾಗಿದ್ದು ಅವರ ಮೆಚ್ಚಿನ ಲೇಖಕರಾಗಿದ್ದ ನಟರಾಜ್ ಹುಳಿಯಾರ್ ಲಂಕೇಶ್ ಬಗ್ಗೆ ದಾಖಲಿಸಿರುವ ಟಿಪ್ಪಣಿಯನ್ನು ಇಲ್ಲಿ ಕೊಡುತ್ತಿದ್ದೇನೆ: ಲಂಕೇಶ್ ಎಂದರೆ ನಿಷ್ಠುರತೆ, ಸೆಡವು, ತನ್ನ ಔದಾರ್ಯಕ್ಕೂ ಸಣ್ಣತನಕ್ಕೂ ತಾಳೆಯಾಗದ ವ್ಯಕ್ತಿತ್ವ. ಯಾವ ಶಕ್ತಿಯೇ ಇರಲಿ, ಎದುರಾಗುವ ಛಲ. ವಂಚನೆಯನ್ನು ತಕ್ಷಣ ಪತ್ತೆಮಾಡಿಬಿಡಬಲ್ಲ ಹದ್ದುಗಣ್ಣು. ಆದರೆ ಪ್ರಾಮಾಣಿಕತೆ ಪತ್ತೆಯಲ್ಲಿ ಕೊಂಚಮಬ್ಬುಗಣ್ಣು. ಅನ್ಯರ ನೋವನ್ನು ತನ್ನದಾಗಿಸಿಕೊಂಡು ನವೆಯುವ ಒಳಗು. ಹೊಗಳಿಕೆಯ ಬಗ್ಗೆ ಕಾತುರ, ಹೊಗಳುವವರ ಬಗ್ಗೆ ಸಂದೇಹ...ಮೇಲಿನ ಟಿಪ್ಪಣಿ ಲಂಕೇಶರ ದಶಮುಖ ವ್ಯಕ್ತಿತ್ವವನ್ನು ಕರಾರುವಕ್ಕಾಗಿ ದಾಖಲಿಸಿದೆ ಅನ್ನಿಸುತ್ತಿದೆ. ಆ ಕಾರಣಕ್ಕೆ ಲಂಕೇಶ್ ನಮ್ಮನ್ನು ಯಾವಾಗಲೂ ಕಾಡುವ ಮತ್ತು ಎಚ್ಚರಿಸುವ ಲೇಖಕರಾಗಿ ಉಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.