ಅಮರೇಶ ನುಗಡೋಣಿ
ಯಾವುದಾದರೂ ಒಂದು ಕಥೆ ನೆನೆಸಿಕೊಂಡಾಗ ನಡೆಯೋದು ಇದು. ಒಂದೆರಡು ಪಾತ್ರಗಳು ನಮ್ಮ ಬದುಕಿನಲ್ಲಿ ಯಾವ್ಯಾಗವ್ಯಾಗ ಸಂದಿಸಿರ್ತೀವಲ್ಲ, ಅವು ವಿಶೇಷ ಎನಿಸಿದರೆ ಮತ್ತೆ ಅವರನ್ನು ಭೇಟಿಯಾಗಬೇಕಿಲ್ಲ. ಒಂದು ಬಾರಿ ಮನಸ್ಸಿನಲ್ಲಿ ಬಂದರೆ ಅವುಗಳನ್ನು ಬೆಳೆಸಿಬಿಡ್ತೀನಿ. ಅವುಗಳ ಗುಣಲಕ್ಷಣಗಳು, ಅವುಗಳ ಜಾತಿ, ಹಿನ್ನೆಲೆಯನ್ನು ನನ್ನ ಇಮೇಜಿನಿಂದ ರೂಪಿಸಿಕೊಳ್ಳುತ್ತೇನೆ.
ಒಂದೆರಡು ಪಾತ್ರಗಳು ಮತ್ತೂ ಮಹತ್ವದ್ದಾಗುತ್ತವೆ. ಉಳಿದವು ಪೂರಕ ಪಾತ್ರಗಳು. ಇವುಗಳನ್ನು ಜಾಸ್ತಿ ಯೋಚನೆ ಮಾಡುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಸೃಷ್ಟಿಯಾಗುತ್ತವೆ. ಕಥೆಯ ಸಂದರ್ಭದ ಮೇಲೆ ಓದುಗರಿಗೆ ಆ ಪಾತ್ರಗಳ ಪ್ರಾಮುಖ್ಯ ಅರ್ಥವಾಗುತ್ತದೆ. ಪಾತ್ರಗಳ ಸೃಷ್ಟಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಪರಕಾಯ ಪ್ರವೇಶ ಅನ್ನುವ ಮಾತು ಸ್ವಲ್ಪ ಭಾರ ಅನಿಸುತ್ತದೆ. ಪೂರಕ ಪಾತ್ರಗಳನ್ನು ನಾವೇ ರೂಪಿಸಿಕೊಳ್ತೀವಿ. ನನ್ನ ಕಥೆಯಲ್ಲಿ ಬರುವ ಬಹಳ ಮುಖ್ಯ ಪಾತ್ರಗಳು ಜೀವನದಲ್ಲಿ ಬಂದಿರುತ್ತವೆ. ಕೆಲವು ಪಾತ್ರಗಳನ್ನು ದೀರ್ಘವಾಗಿ ನೋಡಿರ್ತೀವಿ. ಕೆಲವನ್ನು ದೀರ್ಘವಾಗಿ ನೋಡಿರುವುದಿಲ್ಲ.
‘ಕನಸೆಂಬೊ ಕುದುರೆಯನೇರಿ’ ಕಥೆಯ ಮುಖ್ಯ ಪಾತ್ರಧಾರಿಯನ್ನು ಬಹಳ ದಿನದಿಂದ ನೋಡುತ್ತಿದ್ದೆ. ಆ ಪಾತ್ರಧಾರಿ ಸತ್ತು 25 ವರ್ಷಗಳೇ ಕಳೆದವು. ನಾನು ಬಾಲ್ಯದಲ್ಲಿ ಹೇಗೆ ನೋಡಿದ್ದೆನೋ ಅದೇ ಪಾತ್ರಗಳನ್ನು ಯಥಾವತ್ತಾಗಿ ತಂದಿಟ್ಟಿದ್ದೇನೆ. ಜಮೀನ್ದಾರರು ಸಾಮಾನ್ಯವಾಗಿ ಇಂದಿಗೂ ಹಳ್ಳಿಗಳಲ್ಲಿ ಸಿಗುತ್ತಾರೆ. ದಲಿತ ಪಾತ್ರಗಳು ಹಾಗೂ ಮುಸ್ಲಿಂ ಪಾತ್ರಗಳನ್ನು ಸೃಷ್ಟಿಸಲು ಸಮಯ ಸಾಕಷ್ಟು ಬೇಕಾಗುತ್ತದೆ.
ಪಾತ್ರ ಸೃಷ್ಟಿಗೂ ಬಹಳ ಸಮಯ ಬೇಕಾಗುತ್ತದೆ. ಕಥೆ ಆಗಲೇ ಸೃಷ್ಟಿಯಾಗಿರುತ್ತದೆ. ಆದರೆ, ಬರೆಯಲು ಕುಳಿತಾಗ ಮಾತ್ರ ಮನಸ್ಸಿನಲ್ಲಿ ಪಡಿಮೂಡುತ್ತದೆ. ನಾನು ಕಥೆಯನ್ನು ಮೂರು ಸರ್ತಿ ಬರೆಯುತ್ತೇನೆ. ಒಂದು ಸಾರಿ ಸುಮ್ಮನೇ ಬರೆದುಕೊಂಡು ಹೋಗುತ್ತೀನಿ. ಎರಡನೇ ಬಾರಿ ಎಷ್ಟು ಬೇಕೆಂದು ಅಂದಾಜು ಮಾಡಿಕೊಂಡು ಬರೆಯುತ್ತೇನೆ. ಮೂರನೇ ಬಾರಿ ಕುಸುರಿ ಕೆಲಸ. ಅದನ್ನೇ ಅಂತಿಮವಾಗಿ ಒಂದು ಹದಕ್ಕೆ ತರುತ್ತೇನೆ.
**
ಬಾಳಾಸಾಹೇಬ ಲೋಕಾಪುರ
ನಾನು ಕಥೆಗಾರ, ಕಾದಂಬರಿಕಾರ. ಪಾತ್ರಗಳನ್ನು ಎಲ್ಲಿಯೋ ನೋಡಿರ್ತೀವಿ. ನೆನಪಿನಲ್ಲಿ ಉಳಿದ ಪಾತ್ರಗಳು ಅಳಿಸಿ ಹೋಗುತ್ತವೆ. ನಾನು ನೋಡಿದ ವ್ಯಕ್ತಿಯ ವೇದನೆಯೇ ನನ್ನ ಸಂವೇದನೆಯಾಗುತ್ತದೆ. ನೆನಪು ಮತ್ತು ಪ್ರಜ್ಞೆಯ ನಡುವಿನ ಸಣ್ಣ ಗೆರೆ ಮಹತ್ವದ್ದು. ವೇದನೆ ಸಂವೇದನೆಗಳಾದಾಗ ಅದು ನಮ್ಮದೇ ಅನುಭವ ಎಂಬಂತೆ ಬರೆಯುತ್ತೇವೆ. ವೇದನೆ ಅನುಭವಿಸುವವರು ಜಗತ್ತಿನಲ್ಲಿ ಹಲವು ಜನರಿದ್ದಾರೆ. ಅಂಥವರನ್ನು ನಾನು ಪ್ರಜ್ಞಾಪೂರ್ವಕವಾಗಿಯೇ ಆಯ್ಕೆ ಮಾಡುತ್ತೇನೆ. ನಾನು ಸುಲಲಿತವಾಗಿ ಬರೆಯುತ್ತೇನೆ ಎಂಬುದು ಸುಳ್ಳು. ನನಗೆ ಸಿದ್ಧತೆ ಬೇಕಾಗುತ್ತದೆ. ಸಮಾಜ, ಅನುಭವಗಳು ಪಾತ್ರಗಳಾಗಿ ಸೃಷ್ಟಿಯಾಗುತ್ತವೆ.
ಪಾತ್ರದ ಜೊತೆಗೆ ನಾನು ಎಷ್ಟು ಸಮೀಪ ಇದ್ದೀನಿ ಎಂಬುದು ಮುಖ್ಯವಾಗುತ್ತದೆ. ಪಾತ್ರ ಕಲಾತ್ಮಕವಾಗಿರುತ್ತದೆ. ಪ್ರಮುಖ ಕಾದಂಬರಿಕಾರ ಡಾ.ಎಸ್.ಎಲ್. ಬೈರಪ್ಪ ಅವರು ಕಲಾತ್ಮಕ ಉನ್ನತಿಯನ್ನು ಸಾಧಿಸಿದ್ದಾರೆ. ಆ ಪಾತ್ರ ಹಾಗೆಯೇ ಇದೆ ಎಂಬಂತೆ ಸೃಷ್ಟಿಸಬಲ್ಲರು.
ಆದರೆ, ಆ ಪಾತ್ರ ಸೃಷ್ಟಿಯಾದ ಬಗೆ ಅವರಿಗೂ ಗೊತ್ತಿರುವುದಿಲ್ಲ. ನಮಗೂ ಗೊತ್ತಿರುವುದಿಲ್ಲ. ಭೈರಪ್ಪ ಅವರು ಸೃಷ್ಟಿಸುವ ಜಗತ್ತು ನಮ್ಮದಲ್ಲ. ಆದರೂ ಆಪ್ತವಾಗುತ್ತದೆ. ಲೇಖಕ ಕಂಡ ಜಗತ್ತನ್ನೆಲ್ಲ ಬರೆಯಲು ಸಾಧ್ಯವಿಲ್ಲ. ಕಂಡ ಹಾಗೂ ಉಂಡ ಜಗತ್ತಿನ ಅನುಭವಗಳನ್ನು ಆಯ್ದುಕೊಂಡು ಕಲಾತ್ಮಕತೆಯನ್ನು ಸೃಷ್ಟಿ ಮಾಡಿಕೊಳ್ಳಬೇಕು. ನಾವು ಓದುಗರಿಗೆ ನಿಷ್ಠರಾಗಬೇಕೇ ಹೊರತು ವಿಮರ್ಶಕರಿಗಲ್ಲ. ನಮ್ಮನ್ನು ತೂಕ ಮಾಡುವ ದೊಡ್ಡ ವ್ಯಕ್ತಿ ಓದುಗ. ಆತನೇ ಮಹಾನ್ ನಿರ್ಣಾಯಕ, ಅಂತಿಮ. ಓದುಗನ ಸಂವೇದನೆಯ ತಳಸ್ವರೂಪವನ್ನು ಮುಟ್ಟದೇ ಹೋದರೆ ನಮ್ಮ ಬರಹ ನಿಷ್ಫಲವಾಗುತ್ತದೆ.
**
ಎಚ್. ನಾಗವೇಣಿ
ಕಲ್ಪನೆ ಮಾಡಿ ಬರೆಯಲು ಆಗುವುದಿಲ್ಲ. ನಾನು ನೋಡಿದಂತಹ ಗ್ರಹಿಸಿದಂತಹ, ಕೇಳಿದಂತಹ, ಸಂವೇದನೆಯನ್ನು ಮೀಟಿದಂತಹ ಘಟನೆಗಳು ಪಾತ್ರಗಳಾಗಿ ರೂಪ ಪಡೆಯುತ್ತವೆ.
‘ಬೆಳ್ಳಿಲೋಟ’ ಎಂಬ ಕಥೆಯು ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಆ ಕಥೆಯ ಚಿನ್ನಮ್ಮಳ ಪಾತ್ರ ಇಂದಿಗೂ ಪ್ರಸ್ತುತವಾಗಿದೆ. ಸರ್ಕಾರ ಜಾರಿಗೆ ತಂದ ಭೂ ಮಸೂದೆ ನಾನು ಕಥೆ ಬರೆಯುವಾಗ ಹೇಗಿತ್ತೋ ಈಗಲೂ ಹಾಗೆಯೇ ಉಳಿದಿದೆ. ಚಿನ್ನಮ್ಮ ಈಗಲೂ ನಮ್ಮ ಮಧ್ಯೆ ಬದುಕುತ್ತಿದ್ದಾಳೆ. ಸಂದರ್ಭಕ್ಕೆ ತಕ್ಕ ಹಾಗೆ ನನ್ನ ಮನಸ್ಸಿನಲ್ಲಿ ಪಾತ್ರ ಸೃಷ್ಟಿಯಾಗುತ್ತದೆ.
ಯಾವ ಪಾತ್ರಕ್ಕಾಗಿಯೂ ನಾನು ಕಾಯುವುದಿಲ್ಲ. ನನ್ನ ಪ್ರಕಾರ ನದಿ, ಗಿಡ, ಮರವೂ ಪಾತ್ರಗಳೇ. ನದಿಯ ಪ್ರಕ್ಷುಬ್ಧ ಹರಿವೂ ನನಗೆ ತಾಯಿಯಂತೆ ಕಾಣುತ್ತದೆ. ಎಲ್ಲೋ ಒಂದು ಕಡೆ ನನ್ನಸೂಕ್ಷ್ಮತೆಗೆ ದಕ್ಕಿದ ಘಟನೆ ಪಾತ್ರಗಳಾಗಿ ಒಡಮೂಡುತ್ತದೆ.
**
ವೀಣಾ ಶಾಂತೇಶ್ವರ
ನಾನು ಅಕ್ಷರಾಭ್ಯಾಸ ಶುರುವಾದ ಕೂಡಲೇ ಕಥೆಯನ್ನು ಬರೆಯಲು ಶುರು ಮಾಡಿದೆ. ಏಕೆಂದರೆ ನನ್ನ ತಾಯಿ ಸ್ತ್ರೀ ಶಿಕ್ಷಣದ ಬಗ್ಗೆ ಸಾಕಷ್ಟು ಒಲವುಳ್ಳವರಾಗಿದ್ದರು. ಚಿಕ್ಕವಳಿದ್ದಾಗಿನಿಂದಲೇ ನನಗೆ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿತು.
ನನ್ನ ಮೊಟ್ಟಮೊದಲ ಕಥೆಯ ಪಾತ್ರ ರಾಜಕುಮಾರಿ. ಆರು ವರ್ಷದವಳಿದ್ದಾಗಲೇ ಈ ಕಥೆಯನ್ನು ಬರೆದೆ. ರಾಜಕುಮಾರಿ ಪ್ರೀತಿಸಿದ ರಾಜಕುಮಾರನನ್ನು ರಾಕ್ಷಸನೊಬ್ಬ ಅಪಹರಿಸಿಕೊಂಡು ಹೋಗುತ್ತಾನೆ. ರಾಜಕುಮಾರಿ ಕುದುರೆ ಏರಿ ಏಳು ಕೋಟೆಯನ್ನು ದಾಟಿ ರಾಕ್ಷಸನ ಸಂಹಾರ ಮಾಡಿ ರಾಜಕುಮಾರನನ್ನು ಕರೆದುಕೊಂಡು ಬರುತ್ತಾಳೆ.
ಸಾಮಾನ್ಯ ಜನಪ್ರಿಯ ಕಥೆಗಳ ಪ್ರಕಾರ ರಾಜಕುಮಾರನೇ ರಾಕ್ಷಸನ ಸಂಹಾರ ಮಾಡಿ ರಾಜಕುಮಾರಿಯನ್ನು ಕರೆದುಕೊಂಡು ಬರಬೇಕಿತ್ತು. ಆದರೆ, ನನ್ನ ಕಥೆಯಲ್ಲಿ ರಾಜಕುಮಾರಿಯೇ ಕಥಾನಾಯಕಿಯಾಗಿದ್ದಳು. ಇಂತಹ ಹಲವು ಕಥೆಗಳಿಗೆ ಪಾತ್ರಗಳನ್ನು ನನ್ನ ಸುತ್ತಮುತ್ತಲಿನ ಘಟನೆಗಳಿಂದಲೇ ಪಡೆದುಕೊಳ್ಳುತ್ತಿದ್ದೆ. ನನ್ನ ಬಹುತೇಕ ಕಥೆಗಳ ಪಾತ್ರಗಳು ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವ ಧೈರ್ಯ ಮಾಡುವಂತಿದ್ದವು.
1994ರಲ್ಲಿ ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದಲ್ಲಿ 'ಬಿಡುಗಡೆ' ಎಂಬ ನನ್ನ ಕಥೆ ಪ್ರಕಟವಾಯಿತು. ಸಾಮಾನ್ಯ ಗೃಹಿಣಿಯಾಗಿದ್ದ ಸರೋಜಾ ಎಂಬ ಮಹಿಳೆ ಈ ಕಥೆಯ ನಾಯಕಿ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಆಕೆಯ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿತ್ತು. ಮನೆಯಲ್ಲಿ ಹಾಲು ಕುಡಿಯುವ ಆಕೆಯ ಬಯಕೆಯೂ ಈಡೇರಿರಲಿಲ್ಲ. ಆಕೆಯ ಗಂಡ ತೀರಿಕೊಂಡ ತಕ್ಷಣವೇ ಗಂಡನ ಶವಕ್ಕೆ ಪೂಜೆ ಮಾಡಿ ಅಡುಗೆ ಮಾಡಿ ಒಳಬಂದ ಸರೋಜಾ ಹಾಲು ಕುಡಿದು ತನ್ನ ಆಸೆಯನ್ನು ಈಡೇರಿಸಿಕೊಂಡಳು. ಕಥೆ ಪ್ರಕಟವಾದ ದಿನವೇ ಅಂದು ಹಲವು ಕರೆಗಳು ಬಂದವು. ತನ್ನ ನಿಜ ಹೆಸರನ್ನು ಹೇಳದ ಮಹಿಳೆಯರು ತಮ್ಮ ಹೆಸರು ಸರೋಜಾ ಎಂದು ಕರೆದುಕೊಳ್ಳತೊಡಗಿದರು. ಪಾತ್ರವೊಂದು ಅವರ ಮನಸ್ಸಿಗೆ ನಾಟಿದ್ದು ಹೀಗೆ.
ನನ್ನ ತಂದೆ– ತಾಯಿ ಸ್ತ್ರೀ ವಿಮೋಚನೆ ಹಾಗೂ ಸ್ವಾತಂತ್ರ್ಯದ ಪರವಾಗಿದ್ದುದರಿಂದ ನನಗೂ ಈ ಪುರುಷ ಪ್ರಧಾನ ಸಮಾಜವನ್ನು ಎದುರು ಹಾಕಿಕೊಳ್ಳುವ ಧೈರ್ಯ ಮೂಡಿತ್ತು.
**
ರಾಘವೇಂದ್ರ ಪಾಟೀಲ
ನನ್ನ ಅನುಭವದ ವಿವಿಧ ಆಯಾಮಗಳು, ಅಭಿವ್ಯಕ್ತಿ ಮಾಡಿಕೊಳ್ಳಬಯಸುವ ಅನುಭವ ಸಂಕೀರ್ಣವಾದುದು. ಕ್ರೌರ್ಯ, ಅಂತಃಕರಣ ಇವು ಅನುಭವದ ಮೈಯಾಗಿರುತ್ತವೆ. ಅವುಗಳನ್ನು ಅಭಿವ್ಯಕ್ತಿಸಲು ಸೂಕ್ತವಾದ ಪಾತ್ರಗಳನ್ನು ಸೃಷ್ಟಿ ಮಾಡಿಕೊಳ್ತೀನಿ.
ನನ್ನ ‘ತೇರು’ ಕಾದಂಬರಿಯಲ್ಲಿ ಬಡ ಗೊಂಬೆರಾಮರ ಭೂಮಿಯನ್ನು ಕಿತ್ತುಕೊಳ್ಳುವ ಗೌಡನ ಪಾತ್ರ ಕ್ರೌರ್ಯವನ್ನು ಬಿಂಬಿಸುತ್ತದೆ. ಹೊಸ ಸಮಾಜವನ್ನು ಸೃಷ್ಟಿಸುವ ದ್ಯಾವಪ್ಪನ ಪಾತ್ರ ಬರುತ್ತದೆ. ‘ನಮ್ಮ ಹಳ್ಳಿಗಳೊಳಗೆ ಹುಡುಗರ ಕೈಗೆ ಉದ್ಯೋಗ ಸಿಗುವಂತೆ ಮಾಡಿರಿ. ಉಳ್ಳವರ ದಬ್ಬಾಳಿಕೆಯನ್ನು ಕಡಿಮೆ ಮಾಡಿರಿ’ ಎನ್ನುತ್ತಾನೆ. ಹೀಗೆ ಒಂದೊಂದು ಕಥನಕ್ಕೆ ಅನುಭವಪೂರಿತ ಪಾತ್ರಗಳು ಸೃಷ್ಟಿಯಾಗುತ್ತವೆ.
ತೇರಿನ ಮೊದಲಿನ ಭಾಗ ಒಂದು ಕಲ್ಪನೆ. ತೇರು ಎಳೆಯಲು ಹೋದರೆ ಮುಂದೆ ಹೋಗುವುದೇ ಇಲ್ಲ. ಅವತ್ತಿನ ನಂಬಿಕೆಗೆ ಅನುಸಾರ ಒಂದು ಬಲಿ ಕೊಡಬೇಕು ಎಂದು ಪಾಳೆಗಾರಿಕೆ ಸಂಸ್ಕೃತಿ ಹೇಳುತ್ತದೆ. ಇದನ್ನು ಸಾಮಾನ್ಯ ನರೇಟಿವ್‌ನಲ್ಲಿ ಹೇಳಲು ಆಗುವುದಿಲ್ಲ. ಇದಕ್ಕಾಗಿ ನಾನು ಮೂರು ವರ್ಷಕ್ಕಿಂತ ಹೆಚ್ಚು ಕಾಯಬೇಕಾಯಿತು. ಇದನ್ನು ಗೊಂದಲಿಗರ ಕಥನದ ರೂಪದಲ್ಲಿ ಹೇಳಿದರೆ ಸರಿ ಹೋಗುತ್ತದೆ ಅನಿಸಿತು.
‘ಕಾಡಜ್ಜ’ ಎಂಬ ಕಥೆಯನ್ನು ಒಂದು ರಾತ್ರಿಯಲ್ಲಿ ಬರೆದು ಮುಗಿಸಿದೆ. ಈಗ ಒಂದು ಕಾದಂಬರಿ ಶುರು ಮಾಡಿದ್ದೇನೆ. 170 ಪುಟ ಮುಗಿದಿದೆ. ಆದರೆ, ಮುಂದೆ ಹೋಗಲು ಕಾಯುತ್ತಿದ್ದೇನೆ. ಲೇಖಕ ಕಾಯಲೇಬೇಕಾಗುತ್ತದೆ. ತಕ್ಕ ಆಕಾರಗಳು ಬಂದಾಗ ಬರೆಯಬೇಕು. ಒಂದು ವಿಮರ್ಶಾ ಲೇಖನ, ಪ್ರಬಂಧ ಬರೆಯುವುದು ಬೇರೆ. ಕಥೆ, ಕಾದಂಬರಿ ಬರೆಯುವುದು ಬೇರೆ. ಲೇಖನವನ್ನು ಪಟ್ಟಾಗಿ ಕುಳಿತು ಬರೆದು ಬಿಡಬಹುದು. ಆದರೆ, ಕಥೆ, ಕಾದಂಬರಿ ಬರೆಯಲು ಮನಸ್ಸು ತಪ್ತಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.