ಇಂಗ್ಲಿಷ್ ಚೆನ್ನಾಗಿ ಗೊತ್ತಿಲ್ಲದವರಿಗೆ ಇಂಗ್ಲಿಷಿನ ಶಬ್ದಗಳು ಪ್ರಿಯವಾಗುವುದಕ್ಕೆ, ಗೊತ್ತಿಲ್ಲದಿರುವುದೇ ಮುಖ್ಯ ಕಾರಣ. ಈ ಕಾಲದ ಕನ್ನಡಿಗರಿಗಂತೂ ಕನ್ನಡ ವಾಕ್ಯದ ನಡುವೆ ಕೆಲವು ಇಂಗ್ಲಿಷ್ ಶಬ್ದಗಳನ್ನು ತೂರಿಸದೆ ಮಾತನಾಡಲು ಬರುವುದಿಲ್ಲ. ‘ಸೆಕ್ಸ್’ ಎನ್ನುವ ಶಬ್ದವನ್ನೇ ನೋಡಿ. ಹಲವರ ಪ್ರಕಾರ ಅದು ಕನ್ನಡದ ಸ್ವಂತ ಶಬ್ದ. ಅರ್ಜಿ ಫಾರಂಗಳಲ್ಲಿ ಸೆಕ್ಸ್ ಎಂದಾಕ್ಷಣ ಸುಲಭವಾಗಿ ಗಂಡು ಅಥವಾ ಹೆಣ್ಣು ಎಂಬ ಲಿಂಗಸೂಚಕ ಎನ್ನುವುದು ಅರ್ಥವಾಗಿಬಿಡುತ್ತದೆ. (ಅರ್ಜಿ ಭರ್ತಿ ಮಾಡುವಾಗ ಯಾರೋ ಒಬ್ಬ ಸೆಕ್ಸ್ ಕಾಲಂನಲ್ಲಿ ‘ಇನ್ನೂ ಮಾಡಿಲ್ಲ’ ಎಂದು ಬರೆದದ್ದೂ ಉಂಟಂತೆ!) ಲೈಂಗಿಕ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವಾಗ ವೈದ್ಯರು ಕೂಡಾ ‘ವಾರಕ್ಕೆ ಎಷ್ಟು ಸಲ ಸೆಕ್ಸ್ ಮಾಡುತ್ತೀರಿ’ ಎಂದು ಕೇಳುವುದುಂಟು. ಇಲ್ಲಿ ಸೆಕ್ಸ್ ಅಂದರೆ ಲಿಂಗ ಎಂದರ್ಥವಲ್ಲ! ಆದರೆ ವೈದ್ಯರು ಏನು ಕೇಳುತ್ತಿದ್ದಾರೆ ಎನ್ನುವುದು ರೋಗಿಗೆ ಕ್ಷಣಮಾತ್ರದಲ್ಲಿ ಅರ್ಥವಾಗುತ್ತದೆ. ವೈದ್ಯರು ‘ಸೆಕ್ಸುವಲ್ ಇಂಟರ್‌ಕೋರ್ಸ್’ ಎಂಬ ಉದ್ದನೆಯ ಶಬ್ದ ಹೇಳುವ ಅಗತ್ಯವೇ ಇಲ್ಲ.
ನಮಗೆ ಇಳಿವಯಸ್ಸಿನ ಇಂಗ್ಲಿಷ್ ಅಧ್ಯಾಪಕರೊಬ್ಬರಿದ್ದರು. ಬಿಎ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸರಿಯಾಗಿ ಬರದಿದ್ದ ಕಾಲವದು. ಹಾಗಾಗಿ ಕನ್ನಡದಲ್ಲಿ ಅನುವಾದ ಮಾಡಿಯೇ ಪಾಠವನ್ನು ವಿವರಿಸುತ್ತಿದ್ದರು. ಅವರು ಪಾಠವೊಂದನ್ನು ಮಾಡುವಾಗ ‘ಅವನು ಅವಳನ್ನು ಸಂಭೋಗ ಮಾಡಲು ಕೈಸನ್ನೆ ಮಾಡಿ ಕರೆದ’ ಎಂದು ಪದೇ ಪದೇ ವಿವರಿಸುವುದನ್ನು ಕೇಳಿ ಇಡೀ ಕ್ಲಾಸ್ ನಾಚಿ ನೀರಾಗಿತ್ತು. ಅದನ್ನು ಗಮನಿಸಿದ ವಿದ್ಯಾರ್ಥಿಯೊಬ್ಬ ಸಂಜೆ ಅವರ ಬಳಿ ಹೋಗಿ, ‘ಸಾರ್. ನೀವು ಆ ಶಬ್ದದ ಬದಲಿಗೆ ಸೆಕ್ಸ್ ಅಂತ ಬಳಸಿ. ತರಗತಿಯಲ್ಲಿ ಹೆಣ್ಣುಮಕ್ಕಳು ಬಹಳ ಮುಜುಗರ ಪಟ್ಕೋತಿದ್ದಾರೆ’ ಎಂದ. ಅವರು ಬಿಲ್‌ಕುಲ್ ಒಪ್ಪಲಿಲ್ಲ. ‘ಯಾವ ಭಾಷೆಯಲ್ಲಿ ಮಾಡಿದರೂ ಅದು ಅದೇ ತಾನೆ? ಕನ್ನಡದಲ್ಲಿ ಅದು ಹೆಚ್ಚು ಮುಜುಗರ ಉಂಟು ಮಾಡುವುದೇಕೆ? ಇಂಗ್ಲಿಷಿನಲ್ಲಿ ಹೇಳಿದರೂ ಅದು ಅಷ್ಟೇ ಮುಜುಗರ ಉಂಟು ಮಾಡಬೇಕಲ್ಲ?’ ಎಂದು ವಾದಿಸಿದರು. ಹುಡುಗನಿಗೂ ಉತ್ತರ ಗೊತ್ತಾಗದೆ ಬರಿಗೈಲಿ ಮರಳಿದ.
ಇದ್ಯಾಕೆ ಈಗ ಸೆಕ್ಸಿನ ವಿಷಯ ಬಂತೆಂದರೆ, ರಷ್ಯಾದಲ್ಲಿ ಜನರು ಬಹಿರಂಗವಾಗಿ ಸೆಕ್ಸ್ ಬಗ್ಗೆ ಮಾತನಾಡಲು ಹಿಂದೇಟು ಹೊಡೆಯುತ್ತಿದ್ದಾರಂತೆ. ಹಾಗೆಂದು ಪತ್ರಿಕೆಗಳಲ್ಲಿ ಬಂದಿದೆ. ಜನರು ಲೈಂಗಿಕ ವಿಷಯಗಳ ಮುಕ್ತ ಮಾತುಕತೆಗೆ ಹಿಂಜರಿಯದಂತೆ ಮಾಡಲು ಮಾಸ್ಕೋದಲ್ಲೀಗ ಸೆಕ್ಸಾಲಜಿಸ್ಟ್ ಟ್ರೈನಿಂಗ್ ಕೋರ್ಸ್‌ಗಳು ಆರಂಭವಾಗಿವೆ. ಮನಃಶಾಸ್ತ್ರಜ್ಞರು ಮತ್ತು ಸೆಕ್ಸ್ ತರಬೇತಿದಾರರ ಸಂಖ್ಯೆ ಹೆಚ್ಚಿಸಲು ಸರಕಾರವೇ ಉತ್ತೇಜನ ನೀಡುತ್ತಿದೆ. ಈ ಕುರಿತ ಟಿವಿ ಷೋಗಳೂ ಹೆಚ್ಚುತ್ತಿವೆ.
ಅಲ್ಲಿಯ ಸಮಾಜ ವಿಜ್ಞಾನಿಗಳು ‘ಹೀಗಾಗುವುದಕ್ಕೆ ಐತಿಹಾಸಿಕ ಕಾರಣಗಳೂ ಇವೆ’ ಎನ್ನುತ್ತಿದ್ದಾರೆ. ಹಿಂದೆ ಅಲ್ಲಿ ಕಠಿಣ ಕಮ್ಯುನಿಸಂ ಇದ್ದಾಗ, ‘ಮಕ್ಕಳ ಉತ್ಪಾದನೆಗೆ ಮಾತ್ರ ಸೆಕ್ಸುವಲ್ ಉದ್ದೀಪನ ಇರಬೇಕು’ ಎಂದು ‘ಕಮ್ಯುನಿಸ್ಟ್ ಭಾಷೆ’ಯಲ್ಲೇ ಪ್ರಚಾರ ಮಾಡಿ ಅದೇ ಸಾಮಾಜಿಕ ನಿಯಮವಾಗಿತ್ತು. ಮೂರು ದಶಕಗಳ ಹಿಂದೆ ಸೋವಿಯತ್ ಒಕ್ಕೂಟದ (ಯುಎಸ್‌ಎಸ್‌ಆರ್) ಕಠಿಣ ಕಮ್ಯುನಿಸಂನ ಏಕಚಕ್ರಾಧಿಪತ್ಯ ಕುಸಿದ ಬಳಿಕ, ಒಮ್ಮಿಂದೊಮ್ಮೆಲೆ ಸೆಕ್ಸ್ ಕುರಿತು ಮುಚ್ಚಿಟ್ಟ ಭಾವನೆಗಳೆಲ್ಲ ಹೊರಚಿಮ್ಮಿದವು. ಯರ್ರಾಬಿರ್ರಿ ಸೆಕ್ಸ್ ದೃಶ್ಯಗಳುಳ್ಳ ಸಿನಿಮಾಗಳು, ವಿಡಿಯೊ ಕ್ಯಾಸೆಟ್‌ಗಳು ಲಭ್ಯವಾಗತೊಡಗಿದವು. ಮ್ಯಾಗಸಿನ್‌ಗಳಲ್ಲೂ ಪ್ರಚೋದಕ ಚಿತ್ರಗಳು ಪ್ರಕಟವಾಗತೊಡಗಿದವು. ಅಲ್ಲಿನ ರಾಜಕೀಯ ನಾಯಕತ್ವ ಇದನ್ನು ಸೂಕ್ಷ್ಮವಾಗಿ ಗ್ರಹಿಸಿ, ಮುಕ್ತ ಲೈಂಗಿಕತೆಗೆ ಕಡಿವಾಣ ಹಾಕಿತು. ‘ಪರಂಪರಾಗತ ಕುಟುಂಬ ಮೌಲ್ಯಗಳನ್ನು ಪೋಷಿಸುವ’ ಸರ್ಕಾರದ ಕಾರ್ಯಕ್ರಮಗಳು ಮುಂದೆ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ನಡೆದವು. ಇದರಿಂದಾಗಿ ಜನರು ಕ್ರಮೇಣ ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದನ್ನೇ ನಿಲ್ಲಿಸಿದರು.ಈಗ ಸರ್ಕಾರಕ್ಕೂ ಅದೂ ಚಿಂತೆಯ ವಿಷಯವಾಗಿದೆ. ಹಾಗೆಂದೇ ಅಲ್ಲೀಗ ಸೆಕ್ಸ್ ಸಾಹಿತ್ಯಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸೆಕ್ಸ್ ಬ್ಲಾಗ್‌ಗಳೂ ಸಾಕಷ್ಟು ಸಂಖ್ಯೆಯಲ್ಲಿ ಆರಂಭವಾಗಿವೆ.
ಸೆಕ್ಸ್ ಕುರಿತ ಮಾತುಕತೆಯನ್ನು ರಷ್ಯನ್ನರು ಮಾತ್ರವಲ್ಲ, ಯಾರೂ ಹಗುರವಾಗಿ ಭಾವಿಸುವಂತಿಲ್ಲ. ಇದೊಂಥರ ‘ಆರಕ್ಕೇರದೆ ಮೂರಕ್ಕಿಳಿಯದೆ’ ಇರಬೇಕಾದ ವಿಷಯ. ಸೆಕ್ಸಿನ ವಿಷಯ ಜಾಸ್ತಿ ಮಾತನಾಡಿದರೆ ಜನ ನಿಮ್ಮನ್ನು ಲಂಪಟ ಎಂದು ಭಾವಿಸುವುದಿದೆ. ಮಾತೇ ಆಡದಿದ್ದರೆ ‘ಇವನಿಗೇನೂ ಆರೋಗ್ಯದ ಐಬು ಇದ್ದಂತಿದೆ’ ಎಂದು ಹಿಂದಿನಿಂದ ಆಡಿಕೊಳ್ಳುವ ಸಾಧ್ಯತೆಯಿದೆ. ಆದರೆ ಈ ವಿಷಯದಲ್ಲಿ ಸರ್ಕಾರ ಮಾಡಬಹುದಾದದ್ದು ಏನಿದೆ? ಅಲ್ಲಿನ ಸರ್ಕಾರ ಸೆಕ್ಸ್‌ನ ವಿಷಯದಲ್ಲೂ ಕಮ್ಯುನಿಸಂ ತುರುಕಲು ಹೋಗಿ ಪದೇ ಪದೇ ‘ಸೆಕ್ಸ್ ನೀತಿ’ಯನ್ನು ತಿದ್ದುಪಡಿ ಮಾಡುವಂತಾಗಿದೆಯೆ?
ರಷ್ಯನ್ನರ ಬಗ್ಗೆ ಮಾತನಾಡುವಾಗ ನೆನಪಾಗದೇ ಇರಲು ಸಾಧ್ಯವೇ ಇಲ್ಲದ ಎರಡು ಮಹತ್ವದ ಕೃತಿಗಳೆಂದರೆ ‘ವಾರ್ ಆ್ಯಂಡ್ ಪೀಸ್’ ಮತ್ತು ‘ಅನ್ನಾ ಕರೆನಿನಾ’. ಈ ಎರಡೂ ಕಾದಂಬರಿಗಳನ್ನು ಬರೆದ ಲಿಯೊ ಟಾಲ್‌ಸ್ಟಾಯ್‌ಗೆ ‘ಹೆಣ್ಣುಬಾಕ’ ಎಂಬ ಬಿರುದು ಕೊಟ್ಟವರಿದ್ದಾರೆ. ಟಾಲ್‌ಸ್ಟಾಯ್ ವ್ಯಕ್ತಿತ್ವವನ್ನು ಬಿಡಿಯಾಗಿ ಗ್ರಹಿಸಿದರೆ ಈ ಆರೋಪಕ್ಕೆ ಸಕಾರಣಗಳೂ ಕಾಣಿಸಬಹುದು. ಆದರೆ ಆದರ್ಶದ ವಿಷಯದಲ್ಲಿ ಟಾಲ್‌ಸ್ಟಾಯ್ ನಿಷ್ಠುರ ಮನುಷ್ಯ. 25ರ ಹರೆಯದಲ್ಲೇ ‘ನೈತಿಕವಾಗಿ ನನ್ನಷ್ಟು ಒಳ್ಳೆಯವನಾಗಿರುವ ಅಥವಾ ಆದರ್ಶಗಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಬಲ್ಲ ನನ್ನಂತಹ ಇನ್ನೊಬ್ಬ ಮನುಷ್ಯನನ್ನು ನಾನು ಕಂಡಿಲ್ಲ’ ಎಂದು ಟಾಲ್‌ಸ್ಟಾಯ್ ತನ್ನ ಬಗ್ಗೆ ಅತೀವ ಧೈರ್ಯದಿಂದ ಬರೆದುಕೊಂಡದ್ದಿದೆ. ಆತ ತನಗೆ ತಾನೇ ಕೆಲವು ‘ಬದುಕಿನ ನಿಯಮಗಳನ್ನು’ ಹಾಕಿಕೊಂಡಿದ್ದು ದಾಖಲಾಗಿದೆ. ಬೆಳಿಗ್ಗೆ 5 ಗಂಟೆಗೆ ಎದ್ದೇಳುವುದು, ರಾತ್ರಿ 10 ಗಂಟೆಗಿಂತ ಮುಂಚೆ ಮಲಗುವುದು, ಹಗಲಲ್ಲಿ ಬೇಕಿದ್ದರೆ ಎರಡು ಗಂಟೆಗೆ ಹೆಚ್ಚಿಲ್ಲದಂತೆ ನಿದ್ರೆ ಮಾಡುವುದು, ಸ್ವಲ್ಪವೇ ಸ್ವಲ್ಪ ತಿನ್ನುವುದು, ತಿಂಗಳಿಗೆ ಎರಡು ಬಾರಿ ಮಾತ್ರ ವೇಶ್ಯಾಗೃಹಕ್ಕೆ ಭೇಟಿ ನೀಡುವುದು, ಪ್ರತಿದಿನ ಒಂದು ಗಂಟೆ ನಡೆಯುವುದು, ಏಕಕಾಲಕ್ಕೆ ಒಂದು ಕೆಲಸ ಮಾತ್ರ ಮಾಡುವುದು– ಹೀಗೆ ಅದರಲ್ಲಿ ಹಲವು ನಿಯಮಗಳಿದ್ದವು. ಕೆಲವು ವರ್ಷಗಳ ಬಳಿಕ, ಈ ನಿಯಮಗಳಿಗೆ ‘ಮಹಿಳೆಯರಿಂದ ದೂರ ಇರು’ ಮತ್ತು ‘ಕಾಮದಿಂದ ದೂರವಿರಲು ಹೆಚ್ಚು ಹೆಚ್ಚು ದೈಹಿಕ ಶ್ರಮದಲ್ಲಿ ತೊಡಗಿಕೊ’ ಎನ್ನುವ ನಿಯಮಗಳೂ ಸೇರ್ಪಡೆಯಾಗಿದ್ದವು!
ಶ್ರೀಮಂತ ಯುವಕನಾಗಿದ್ದಾಗ ಟಾಲ್‌ಸ್ಟಾಯ್ ಜೂಜು, ಕುಡಿತ ಮತ್ತು ಹೆಣ್ಣುಗಳ ದಾಸನಾಗಿದ್ದ. ವೇಶ್ಯಾಗೃಹಕ್ಕೂ ಆಗಾಗ್ಗೆ ಹೋಗಿಬರುತ್ತಿದ್ದ. ಹೆಣ್ಣಿನ ಮೋಹಎಂದೂ ಮುಗಿಯದ ದಾಹದಂತೆ ಕಾಣಿಸತೊಡಗಿದಾಗ ತನ್ನ ಜೀವನಶೈಲಿಯನ್ನು ಬದಲಾಯಿಸಲು ಯತ್ನಿಸಿದ. ಸೋಫಿಯಾ ಎನ್ನುವ ಸುಂದರ ತರುಣಿಯನ್ನು ಮದುವೆಯಾಗಲು ನಿರ್ಧರಿಸಿದ. ಆದರೆ ಮದುವೆಗೆ ಮುನ್ನ ತನ್ನ ತಾರುಣ್ಯದ ಜೀವನದ ಎಲ್ಲ ವಿವರಗಳನ್ನೂ ಆಕೆಯೆದುರು ಬಿಚ್ಚಿಟ್ಟ. ಯೌವನದಲ್ಲಿ ನಡೆಸಿದ ಎಲ್ಲ ಲೈಂಗಿಕ ಕ್ರಿಯೆಗಳ ವಿವರ ಮತ್ತು ಅಕ್ರಮವಾಗಿ ಒಂದು ಮಗು ಹೊಂದಿರುವ ವಿಷಯವನ್ನೂ ಬರೆದಿಟ್ಟಿದ್ದ ಡೈರಿಯನ್ನು ಆಕೆಗೆ ಓದಲು ಕೊಟ್ಟ. ಆ ಡೈರಿ ಆಕೆಯನ್ನು ಬೆಚ್ಚಿಬೀಳಿಸಿತ್ತು.ಆತನಿಗೆ ರಹಸ್ಯ ಲೈಂಗಿಕ ರೋಗ ಗನೋರಿಯಾ ಇರುವುದೂ ಡೈರಿಯಲ್ಲಿತ್ತು. ಅದೆಲ್ಲವನ್ನು ಓದಿದ ಬಳಿಕವೂ ಸೋಫಿಯಾ ಟಾಲ್‌ಸ್ಟಾಯ್‌ನನ್ನು ಮದುವೆಯಾದಳು.
ಸೆಕ್ಸ್ ಕುರಿತ ತನ್ನ ಅನುಭವಗಳ ಆಂತರಿಕ ತುಮುಲಗಳನ್ನು ಎದುರಿಸಲು ಟಾಲ್‌ಸ್ಟಾಯ್ ಬರೆದ ಕಾದಂಬರಿ ‘ಕ್ರೂಟ್ಸರ್ ಸೊನಾಟಾ’. ಈ ಕಾದಂಬರಿ ಒಂಥರಾ ಆತನ ಆತ್ಮನಿವೇದನೆ ಎನ್ನುವವರಿದ್ದಾರೆ. ವ್ಯಕ್ತಿಯೊಬ್ಬ ತನ್ನ ಹೆಂಡತಿ ತನಗೆ ಲೈಂಗಿಕ ಮೋಸ ಮಾಡುತ್ತಿದ್ದಾಳೆಂದು ಭಾವಿಸಿ ಆಕೆಯನ್ನು ಕೊಲೆಗೈಯುವುದು ಕಾದಂಬರಿಯ ವಸ್ತು. ಈ ವ್ಯಕ್ತಿ ಪ್ರಯಾಣದಲ್ಲಿ ಸಿಕ್ಕ ಇನ್ನೊಬ್ಬ ವ್ಯಕ್ತಿಯೊಡನೆ ತನ್ನ ಕಥೆಯನ್ನು ಹೇಳುತ್ತಿರುವಂತೆ ಕಾದಂಬರಿಯ ನಿರೂಪಣೆಯಿದೆ. ಪುರುಷರನ್ನು ಪ್ರಚೋದಿಸುವ ಮಹಿಳೆಯರ ಬಗ್ಗೆ ದೀರ್ಘ ವಿವರಣೆಗಳನ್ನು ನೀಡುತ್ತಾ ಕಥಾನಾಯಕ ಮಾತನಾಡುತ್ತಾನೆ. ಬಹುತೇಕ ಸಂದರ್ಭದಲ್ಲಿ ಸಹಪ್ರಯಾಣಿಕ ಕೇವಲ ಹೂಂಗುಟ್ಟುವುದಷ್ಟೇ. ಪುರುಷರು ಲೈಂಗಿಕವಾಗಿ ದಾರಿ ತಪ್ಪುವುದಕ್ಕೆ ಮಹಿಳೆಯರೇ ಕಾರಣ ಎನ್ನುವ ಧೋರಣೆಯೊಂದು ಈ ಕಾದಂಬರಿಯಲ್ಲಿದೆ. ಈ ಬಗ್ಗೆ ಕೆಲವರು ಟಾಲ್‌ಸ್ಟಾಯ್‌ಗೆ ಪತ್ರ ಬರೆದು ಸ್ಪಷ್ಟೀಕರಣ ಕೇಳಿದಾಗ, ಕಾದಂಬರಿಯ ಈ ಪಾತ್ರದ ಬಗ್ಗೆ ತನಗೆ ಸಹಮತವಿದೆ ಎಂದಿದ್ದ ಟಾಲ್‌ಸ್ಟಾಯ್. ‘ಮದುವೆಗಳು ಮತ್ತು ಸೆಕ್ಸ್ ಇಲ್ಲದ ಸಮಾಜವೇ ನಿಜವಾದ ಆದರ್ಶ ಸಮಾಜ’ ಎನ್ನುವುದು ಟಾಲ್‌ಸ್ಟಾಯ್ ಉತ್ತರವಾಗಿತ್ತು. ಹಾಗಾದರೆ ಮನುಷ್ಯಕುಲವೇ ನಾಶವಾಗುತ್ತದಲ್ಲ ಎಂಬ ಪ್ರಶ್ನೆ ಎದುರಾದಾಗ, ‘ನಾನು ಹೇಳಿದ್ದು ಸಮಾಜದ ಆದರ್ಶ ಸ್ಥಿತಿ’ ಎಂದು ವಾದ ಮಾಡಿದ್ದ. ಆದರೆ ತನ್ನ ಹೆಂಡತಿಯನ್ನು ಟಾಲ್‌ಸ್ಟಾಯ್ ಎಷ್ಟೊಂದು ಗಾಢವಾಗಿ ಪ್ರೀತಿಸಿದನೆಂದರೆ ದಂಪತಿಗೆ ಒಂದು ಕ್ರಿಕೆಟ್ ಟೀಮ್‌ಗಿಂತ ಹೆಚ್ಚು (ಒಟ್ಟು 13) ಮಕ್ಕಳಾದವು.
ಇವತ್ತಿನ ರಷ್ಯಾ ಕೂಡಾ ಈ ‘ಟಾಲ್‌ಸ್ಟಾಯ್ ತುಮುಲ’ದ ದಾರಿಯಲ್ಲೇ ನಡೆಯುತ್ತಿರುವಂತಿದೆ. ಸೋವಿಯತ್ ಒಕ್ಕೂಟದ ಬಿಗಿಮುಷ್ಠಿಯಿಂದ 1991ರಲ್ಲಿ ಪೆರಸ್ಟ್ರೈಕಾ ಮೂಲಕ ಹೊರ ಬಂದ ರಷ್ಯನ್ ಸಮಾಜ, ಮುಕ್ತ ಲೈಂಗಿಕತೆಯ ಹೇಷಾರವಕ್ಕೆ ತೆರೆದುಕೊಂಡಿತು. ಕೆಲವೇ ವರ್ಷಗಳಲ್ಲಿ ಅದು ‘ಬೋರ್’ ಹೊಡೆಸಿದ್ದರಿಂದ ಸಾಂಪ್ರದಾಯಕ ಸೆಕ್ಸ್ ಧೋರಣೆಗೆ ಅಂಟಿಕೊಂಡಿತು. ಆ ಸಾಂಪ್ರದಾಯಕ ನಿಲುವು ಜನರನ್ನು ಸೆಕ್ಸ್‌ನಿಂದ ವಿಮುಖಗೊಳಿಸುತ್ತಿದೆ ಎನ್ನುವುದು ಅರಿವಾದ ಬಳಿಕ ಈಗ ಸರ್ಕಾರ, ಸೆಕ್ಸ್ ಕುರಿತು ಮಡಿ ಬಿಟ್ಟು ಮಾತನಾಡುವಂತೆ ಜನರನ್ನು ಹುರಿದುಂಬಿಸಲು ಹೊರಟಿದೆ. ಜನರು ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡುತ್ತಿಲ್ಲ ಎಂದು ಸರ್ಕಾರ ತಿಳಿದಿರುವುದು ಸತ್ಯವೇ ಇರಬಹುದು. ಆದರೆ ಅಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚುತ್ತಿದ್ದು, ಮಾನವ ಕಳ್ಳಸಾಗಣೆಯ ಪ್ರಕರಣಗಳೂ ಏರುತ್ತಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕಳೆದ ವರ್ಷ ‘ಬಿಬಿಸಿ’ಯ ರಷ್ಯನ್ ಭಾಷೆಯ ವಿಶೇಷ ವರದಿಯೊಂದರ ಪ್ರಕಾರ, ಅಲ್ಲಿ 10ರಿಂದ 30 ಲಕ್ಷ ಮಂದಿ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ‘ಈ ಹಿಂದಿನಂತೆ ಬೀದಿ ತುದಿಯಲ್ಲಿ ನಿಲ್ಲುವ ಬದಲು, ಬಹುತೇಕ ಲೈಂಗಿಕ ಕಾರ್ಯಕರ್ತೆಯರು ಆನ್‌ಲೈನ್‌ನಲ್ಲಿ ತಮ್ಮ ಚಟುವಟಿಕೆ ನಡೆಸುತ್ತಿದ್ದಾರೆ. ಅಲ್ಲಿನ ಲೈಂಗಿಕ ಕಾರ್ಯಕರ್ತೆಯರ ಸರಾಸರಿ ವಯಸ್ಸು 32. ಇವರಲ್ಲಿ ಶೇಕಡಾ 90ರಷ್ಟು ತಾಯಂದಿರಿದ್ದಾರೆ’ ಎಂದು ವರದಿ ವಿವರಿಸಿದ್ದು, ಹಲವು ಲೈಂಗಿಕ ಕಾರ್ಯಕರ್ತೆಯರ ಸಂದರ್ಶನವನ್ನೂ ಪ್ರಸಾರ ಮಾಡಿದೆ.
ಸೆಕ್ಸ್ ಬಗ್ಗೆ ಮಾತನಾಡದವರು ಆ ಬಗ್ಗೆ ಪ್ರಾಮಾಣಿಕರಾಗಿದ್ದಾರೆ ಎಂದುಕೊಳ್ಳುವುದೂ ತಪ್ಪು. ಮಹಾತಪಸ್ವಿ ವಿಶ್ವಾಮಿತ್ರರನ್ನೇ ನೋಡಿ: ಪರಮಶಿಷ್ಯ ಗಾವಲ ಗುರುಕಾಣಿಕೆ ನೀಡಲು, ಇಡೀ ದೇಹ ಬಿಳಿಯಾಗಿರುವ ಎಡಗಿವಿ ಮಾತ್ರ ಕಪ್ಪಗಿರುವ ಎಂಟುನೂರು ಕುದುರೆಗಳನ್ನು ಹುಡುಕುತ್ತಾ ವರ್ಷಗಟ್ಟಳೆ ಸುತ್ತಾಡಿ ಕೊನೆಗೆ 600 ಕುದುರೆಗಳನ್ನು ಮಾತ್ರ ತಂದುಕೊಟ್ಟ. ‘ಇನ್ನು 200 ಕುದುರೆಗಳ ಬದಲಿಗೆ ನನ್ನ ಜತೆಗಿರುವ ಯಯಾತಿಯ ಮಗಳು ಮಾಧವಿಯನ್ನೇ ಒಪ್ಪಿಸಿಕೊಳ್ಳಿ’ ಎಂದ. ‘ಅರೆ.. ಈಕೆಯನ್ನೇ ನನಗೆ ಒಪ್ಪಿಸುವುದಾಗಿದ್ದರೆ ಈ ಕುದುರೆಗಳ ಅಗತ್ಯವೇ ಇರಲಿಲ್ಲ ಶಿಷ್ಯಾ..’ ಎಂದು ಆ ಮಹಾತಪಸ್ವಿಯೂ ಬಾಯಿಬಿಟ್ಟು ಹೇಳಿದನಂತೆ. ‘ಯೂ ಟೂ ಬ್ರೂಟಸ್?!’ ಎಂದು ಜೂಲಿಯಸ್ ಸೀಸರ್ ಹೇಳಿದ ಹಾಗೆ, ಗಾವಿಲನೂ ‘ಯೂ ಟೂ ಗುರುಗಳೇ!?’ ಎಂದು ಹೇಳಿದ್ದರೆ, ಭಾರತದ ಮೊತ್ತಮೊದಲ ‘ಮಿ ಟೂ’ ಪ್ರಕರಣ ಅದೇ ಆಗುತ್ತಿತ್ತೇನೋ! ರಷ್ಯಾದಲ್ಲಿ ಸರ್ಕಾರಿ ಕಣ್ಗಾವಲು ಬಲವಾಗಿರುವುದರಿಂದ ರಾಜಕೀಯದ ಬಗ್ಗೆ ಚರ್ಚೆ ಮಾಡಲೂ ಜನ ಹೆದರುತ್ತಿದ್ದಾರೆ. ‘ಸರ್ಕಾರದ ಸಾವಾಸ ಬೇಡ’ ಎಂದು ಅದರ ಜೊತೆಗೆ ಸೆಕ್ಸನ್ನೂ ಸೇರಿಸಿಕೊಂಡಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.