ADVERTISEMENT

ಶಿಲ್ಪವನದಲ್ಲಿ ಕ್ರಾಂತಿಯ ಮರುಸೃಷ್ಟಿ

ಇಮಾಮ್‌ಹುಸೇನ್‌ ಗೂಡುನವರ
Published 21 ಜನವರಿ 2024, 0:00 IST
Last Updated 21 ಜನವರಿ 2024, 0:00 IST
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ನಿರ್ಮಿಸಿದ ಶಿಲ್ಪವನ -ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ನಿರ್ಮಿಸಿದ ಶಿಲ್ಪವನ -ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಂಘರ್ಷಮಯ ಜೀವನದ ಕುರಿತು ಅಧ್ಯಯನ ಮಾಡುವ ಹಂಬಲ ಇದ್ದರೆ, ಮಾಡಬೇಕಾದದ್ದು ಇಷ್ಟೇ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮಕ್ಕೆ ಭೇಟಿ ನೀಡಿ. ಅಲ್ಲಿರುವ ಶಿಲ್ಪವನ(ಶೌರ್ಯಭೂಮಿ)ದಲ್ಲಿ ಇಡೀ ದಿನ ಸುತ್ತಾಡಿದರೆ, ಹೋರಾಟಗಾರನ ಪರಿಚಯ ಆಗುತ್ತದೆ.

ಕಿತ್ತೂರು ರಾಣಿ ಚನ್ನಮ್ಮನ ಮಹಾಸೇನಾನಿ ಸಂಗೊಳ್ಳಿ ರಾಯಣ್ಣನ ಜೀವನ ಎಷ್ಟು ಸವಾಲುಗಳಿಂದ ಕೂಡಿದೆಯೋ, ಅಷ್ಟೇ ನಿಗೂಢವಾಗಿಯೂ ಇದೆ. ಸಂಗೊಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ‘ಶಿಲ್ಪವನ’ವು ಆ ದಿನಗಳ ಘಟನಾವಳಿಗಳನ್ನು ಸುಂದರವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ.

ಬಾಲ್ಯದ ದಿನಗಳಿಂದ ಆರಂಭಗೊಂಡು ವೀರಮರಣದವರೆಗಿನ ಸಂಗೊಳ್ಳಿ ರಾಯಣ್ಣನ ಸಾಹಸಗಾಥೆಗಳನ್ನು ಕಲಾಕೃತಿಗಳ ಮೂಲಕ ಹೇಳುವ ಈ ವನದಲ್ಲಿ ನಡೆದಾಡಿದಷ್ಟೂ ಅಭಿಮಾನ ಹೆಚ್ಚುತ್ತದೆ. ‘ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನಾವು ಪಾಲ್ಗೊಳ್ಳಬೇಕಿತ್ತು. ರಾಯಣ್ಣನಿಗೆ ಜೊತೆ ಆಗಬೇಕಿತ್ತು’ ಎಂಬ ಭಾವ ಮೂಡುತ್ತದೆ.

ADVERTISEMENT

ಶಿಲ್ಪವನದ ಒಳಗಡೆ ಹೆಜ್ಜೆಯಿಟ್ಟ ಕೂಡಲೇ ರಾಯಣ್ಣನ ಮೂರ್ತಿ ಸ್ವಾಗತಿಸುತ್ತದೆ. ಕಿತ್ತೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದ ಹೋರಾಟದ ಕಲಿಗಳ ಜೀವನ, ಸಾಹಸ, ಧೈರ್ಯ ಎಲ್ಲವೂ ಹಂತಹಂತವಾಗಿ ಅನಾವರಣಗೊಳ್ಳುತ್ತದೆ. ಮತ್ತಷ್ಟು, ಇನ್ನಷ್ಟು ತಿಳಿದುಕೊಳ್ಳಬೇಕು ಎಂಬ ಉಮೇದು ಹೆಚ್ಚುತ್ತದೆ.

1,800ಕ್ಕೂ ಅಧಿಕ ಕಲಾಕೃತಿಗಳು

ಒಟ್ಟು ₹ 15 ಕೋಟಿ ವೆಚ್ಚದಲ್ಲಿ 10 ಎಕರೆ ವಿಶಾಲ ಪ್ರದೇಶದಲ್ಲಿ ಈ ವನ ನಿರ್ಮಾಣಗೊಂಡಿದೆ. ರಾಯಣ್ಣನ ಚರಿತ್ರೆ ಬಿಂಬಿಸುವ 64 ಸನ್ನಿವೇಶಗಳು ಮತ್ತು 1,800ಕ್ಕೂ ಹೆಚ್ಚು ಕಲಾಕೃತಿಗಳು ಇಲ್ಲಿವೆ. ಸಿಮೆಂಟ್‌, ಕಬ್ಬಿಣ ಹಾಗೂ ಕೆಂಪು ಇಟ್ಟಿಗೆಯಿಂದ ಸಿದ್ಧಪಡಿಸಿರುವ ಒಂದೊಂದು ಕಲಾಕೃತಿಯೂ ಒಂದೊಂದು ಕಥೆ ಹೇಳುತ್ತದೆ.

ಇಲ್ಲಿನ ಒಟ್ಟಾರೆ ಸೌಂದರ್ಯ ವೃದ್ಧಿಸುವಲ್ಲಿ ಹಾವೇರಿ ಜಿಲ್ಲೆಯ ಗೋಟಗೋಡಿಯ ಶಿಲ್ಪಕಲಾ ಕುಟೀರದ 150ಕ್ಕೂ ಅಧಿಕ ಕಲಾವಿದರ ಶ್ರಮವಿದೆ. ಪರಿಸರವನ್ನು ಸುಂದರಗೊಳಿಸುವ ಕಾಯಕದಲ್ಲಿ ಅವರು ಮೂರು ವರ್ಷಗಳಿಂದ ನಿರತರಾಗಿದ್ದಾರೆ.

ಶಿಲ್ಪವನದಲ್ಲಿ ಏನೇನಿದೆ?

ಕಿತ್ತೂರು ಸಂಸ್ಥಾನದ ದೊರೆ ವೀರಪ್ಪ ದೇಸಾಯಿ ಅವರು ರಾಯಣ್ಣನ ಅಜ್ಜ ರೋಗಪ್ಪ ಅವರಿಗೆ ರಕ್ತಮಾನ್ಯ ಭೂಮಿ ನೀಡಿ ಗೌರವಿಸುವ ಕ್ಷಣ, ರಾಯಣ್ಣನ ತಂದೆ ಭರಮಪ್ಪ ಅವರು ಹುಲಿ ಬೇಟೆಯಾಡಿ ಕಿತ್ತೂರು ಸಂಸ್ಥಾನಕ್ಕೆ ಹೊತ್ತು ತರುವ ಸಂದರ್ಭ, ರಾಯಣ್ಣನ ನಾಮಕರಣ ಮಾಡಿದ ದಿನ, ಗರಡಿಮನೆಯಲ್ಲಿ ಪಳಗುವ ಸನ್ನಿವೇಶ, ಸಾಹಸ ಕಲೆಗಳನ್ನು ಕಲಿತ ಬಗೆ, ಕಿತ್ತೂರು ಸಂಸ್ಥಾನ ಸೇರಿ ರಾಣಿ ಚನ್ನಮ್ಮನ ಕೈಯಿಂದ ಖಡ್ಗ ಸ್ವೀಕರಿಸಿದ್ದು, ಆಗಿನ ಧಾರವಾಡದ ಜಿಲ್ಲಾಧಿಕಾರಿ ಥ್ಯಾಕರೆ ಕಿತ್ತೂರು ಅರಮನೆಗೆ ಬಂದು ಪುತ್ರ ದತ್ತಕ ನಿರಾಕರಿಸಿದ್ದು... ಎಲ್ಲವೂ ಒಂದಕ್ಕಿಂತ ಒಂದು ನೈಜತೆಗೆ ಕನ್ನಡಿ ಹಿಡಿದಿವೆ. 

‘ಪ್ರಥಮ ಆಂಗ್ಲೊ – ಕಿತ್ತೂರು ಯುದ್ಧ’ದ ಪ್ರತಿಕೃತಿಗಳು ಕೂಡ ಇವೆ. ಯುದ್ಧದಲ್ಲಿ ಪಾಲ್ಗೊಂಡವರ ಮುಖಭಾವ, ಯುದ್ಧ ನಡೆದ ಸಂದರ್ಭ, ಆಗಿನ ಗ್ರಾಮೀಣ ಪರಿಸರ ಎಲ್ಲವೂ ನೈಜತೆಗೆ ಹತ್ತಿರವಾಗಿವೆ. ರಾಣಿ ಚನ್ನಮ್ಮನ ಬಂಧನ, ರಾಯಣ್ಣನ ಸೆರೆ, ಡೋರಿಹಳ್ಳದಲ್ಲಿ ರಾಯಣ್ಣನನ್ನು ಮೋಸದಿಂದ ಬಲೆಗೆ ಬೀಳಿಸಿದ ರೀತಿ, ನಂದಗಡ ಹೊರವಲಯದ ಆಲದ ಮರಕ್ಕೆ ರಾಯಣ್ಣನೊಂದಿಗೆ ಆರು ಜನರಿಗೆ ಗಲ್ಲುಶಿಕ್ಷೆ ವಿಧಿಸುವ ಚಿತ್ರಣ ಎಲ್ಲವೂ ಕಣ್ಣಿಗೆ ಕಟ್ಟಿದಂತೆ ದೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತದೆ.

‘ಉಪನ್ಯಾಸ, ಭಾಷಣಕ್ಕಿಂತ, ಕಲಾಕೃತಿಗಳ ಮೂಲಕ ರಾಯಣ್ಣನ ಇತಿಹಾಸ ಕಟ್ಟಿಕೊಡಬೇಕೆಂಬ ಕನಸು ಬಹಳ ವರ್ಷಗಳಿಂದ ಇತ್ತು. ಇಂದು ಅದು ಸಾಕಾರವಾಗಿದೆ’ ಎನ್ನುತ್ತಾರೆ ಸಂಶೋಧಕ ಬಸವರಾಜ ಕಮತ್‌.

‘ಸಂಗೊಳ್ಳಿ ರಾಯಣ್ಣನ ಬದುಕಿನ ಕುರಿತು ಇನ್ನಷ್ಟು ಅಧ್ಯಯನ ಆಗಬೇಕು ಎಂಬ ಉದ್ದೇಶದಿಂದ ಶಿಲ್ಪವನ ನಿರ್ಮಾಣಗೊಂಡಿದೆ’ ಎಂಬ ಅಭಿಪ್ರಾಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಅವರದ್ದು. 

ಬರುವುದು ಹೇಗೆ?

ಬೆಳಗಾವಿಯಿಂದ 50 ಕಿ.ಮೀ, ಧಾರವಾಡದಿಂದ 45 ಕಿ.ಮೀ, ಬೈಲಹೊಂಗಲದಿಂದ 16 ಕಿ.ಮೀ ಹಾಗೂ ಚನ್ನಮ್ಮನ ಕಿತ್ತೂರಿನಿಂದ 15 ಕಿ.ಮೀ ದೂರದಲ್ಲಿ ಸಂಗೊಳ್ಳಿ ಗ್ರಾಮವಿದೆ. ಬೈಲಹೊಂಗಲ ಮತ್ತು ಕಿತ್ತೂರಿನಿಂದ ಸಂಗೊಳ್ಳಿಗೆ ಬಸ್‌ ಸೌಕರ್ಯವಿದೆ. ಜನರು ಖಾಸಗಿ ವಾಹನಗಳಲ್ಲೂ ಭೇಟಿ ಕೊಡಬಹುದು. ಸವದತ್ತಿಯ ಯಲ್ಲಮ್ಮ ದೇವಸ್ಥಾನ, ಐತಿಹಾಸಿಕ ಕಿತ್ತೂರು ಕೋಟೆಯ ಅವಶೇಷಗಳು, ಬೈಲಹೊಂಗಲದಲ್ಲಿನ ಚನ್ನಮ್ಮನ ಸಮಾಧಿ, ಎಂ.ಕೆ.ಹುಬ್ಬಳ್ಳಿಯಲ್ಲಿನ ಶರಣೆ ಗಂಗಾಂಬಿಕೆ ಐಕ್ಯಮಂಟಪ ಮತ್ತಿತರ ಪ್ರವಾಸಿ ಸ್ಥಳಗಳು ಸನಿಹದಲ್ಲಿವೆ.

ಶಿಲ್ಪವನದಲ್ಲಿ ಸಿದ್ಧಪಡಿಸಿದ ಆಕರ್ಷಕ ಕಲಾಕೃತಿ
ಶಿಲ್ಪವನದಲ್ಲಿ ಸಿದ್ಧಪಡಿಸಿದ ಆಕರ್ಷಕ ಕಲಾಕೃತಿ
ಬ್ರಿಟಿಷರ ವಿರುದ್ಧದ ಹೋರಾಟದ ಕಲಾಕೃತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.