ಪರಿಸರ ಕಾಳಜಿಯನ್ನು ಕಲಾ ಚಳವಳಿಯ ಮಾದರಿಗೆ ಏರಿಸಿರುವುದು ಹೊಸನಗರದಲ್ಲಿ ಇರುವ ‘ಸಾರ’. ಇಲ್ಲಿನ ಭಿತ್ತಿಗಳು, ವಾತಾವರಣ ತೋರುವ ಪರಿಸರ ಲೋಕ ಅರಿವಿನ ಗುರುವೇ ಹೌದು.
ಪ್ರಪಂಚದ ನೈಸರ್ಗಿಕ ಸಂಪತ್ತು ಮಾನವ ಆಕ್ರಮಣಕ್ಕೆ ನಲುಗಿ ನಶಿಸುತ್ತಿದೆ. ನಿಸರ್ಗ ಸಂಪನ್ಮೂಲ ಬಗೆದು ಮಾರುವ ಬೃಹತ್ ಬಹುರಾಷ್ಟ್ರೀಯ ಉದ್ಯಮಗಳು, ನೈಸರ್ಗಿಕ ಅಸಮತೋಲನದಿಂದ ಜಾಗತಿಕ ತಾಪಮಾನದಲ್ಲಿ ಹುಟ್ಟಿಕೊಂಡ ಏರಪೇರು, ಋತುಗಳಲ್ಲಿ ಕಾಲ ಪಲ್ಲಟಗಳು, ಬೆಳೆ ಬೆಳೆದು ನಿಂತಾಗ ಅಕಾಲ ಅಪ್ಪಳಿಸುವ ಚಂಡಮಾರುತಗಳ ವರ್ಷಾ ಅಬ್ಬರ... ಹೀಗೆಷ್ಟೋ ಎಣಿಕೆಗೆ ದಕ್ಕದಷ್ಟು ಪ್ರಾಕೃತಿಕ ವಿಕೋಪಗಳು ಭೂತಾಯಿ ಮೇಲೆ ಸಂಭವಿಸುತ್ತಲೇ ಇವೆ. ಸಕಲ ಜೀವರಾಶಿಗಳಿಗೆ ನೆಲದ ನೆತ್ತಿಯ ಮೇಲೆ ಬದುಕುವ ಹಕ್ಕನ್ನು ಆ ನಿಸರ್ಗವೇ ನೀಡಿದೆ. ಹಕ್ಕಿ ಪಕ್ಕಿ, ಕ್ರಿಮಿ–ಕೀಟ, ಕಾಡು ನಾಡಿನ ಪ್ರಾಣಿ ವರ್ಗ... ಹೀಗೆ ಎಲ್ಲರೂ, ಎಲ್ಲವೂ ಸಮತೋಲನ ಕಾಯ್ದುಕೊಂಡು ಬಾಳಿದಾಗ ಮಾತ್ರ ಸಕಲರ ಬದುಕು ಚೆಂದ ಕಾಣಲಿದೆ. ಇಂಥ ತಾರ್ಕಿಕತೆ ಮೂಲಕ ನೈಜ ಪ್ರಕೃತಿಯನ್ನು ಕಾಪಿಡುವ ಪಣ ತೊಟ್ಟಿದ್ದೆ ‘ಸಾರ’ ಸೆಂಟರ್ (ಸಸ್ಟೇನೆಬಲ್ ಅಲ್ಟರ್‌ನೆಟಿವ್ಸ್ ಫಾರ್ ರೂರಲ್ ಅಕಾರ್ಡ್). ಇಂಥ ‘ಸಾರ’ತ್ವದ ಕನಸನ್ನು ನನಸಾಗಿಸಲು ಒಂದು ಚಳವಳಿ ಮಾದರಿಯಲ್ಲಿ ಹೊರಟವರು ಅಂತರರಾಷ್ಟ್ರೀಯ ಖ್ಯಾತಿಯ ಆಧುನಿಕ ಶಿಲ್ಪ ಕಲಾವಿದ ಅರುಣಕುಮಾರ್ ಎಚ್.ಜಿ. ಅವರ ಹೆಗಲಿಗೆ ಹೆಗಲಾಗಿ ನಿಂತವರು ಹೆಗ್ಗೋಡಿನ ರಂಗಕರ್ಮಿ ಏಸು ಪ್ರಕಾಶ, ಧನುಷ್‌ಕುಮಾರ, ಶಿವಕುಮಾರ್, ಕುಮಾರ್ ಅವರುಗಳು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಡೊಂಬೆಕೊಪ್ಪದ ಕಾಡಿನ ಮಧ್ಯೆ ಈ ಕೇಂದ್ರವಿದೆ.
‘ಸಾರ’ ಕೇಂದ್ರದ ಉದ್ದೇಶ ಸ್ಪಷ್ಟವಾಗಿದೆ. ಭೂಮಿ ಲಕ್ಷಾಂತರ ವರ್ಷಗಳಿಂದ ವಿಕಸಿತಗೊಂಡು ವರ್ತಮಾನದ ಹಂತಕ್ಕೆ ಬಂದು ನಿಂತಿದೆ ಮತ್ತು ಭವಿಷ್ಯದಲ್ಲಿ ವಿಕಸಿತವಾಗುತ್ತಲೇ ಇರುತ್ತದೆ. ಈ ವಿಸ್ಮಯಕಾರಿ ಬುವಿಯಲ್ಲಿ ಅಸಂಖ್ಯಾತ ಜೀವ ಸಂಕುಲಗಳು, ಕೀಟಗಳು, ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಮಾನವ ಬದುಕಿಗೆ ಸಂಬಂಧಿಸಿದಂತೆ ಬಹು ಅನುಕೂಲಕರ ವಾತಾವರಣವನ್ನು ನಿರ್ಮಿಸಿವೆ. ಪ್ರತಿ ಜೀವ ತನ್ನ ಉಳಿವಿಗೆ ಅವಲಂಬಿತವೂ ಹೌದು. ಪ್ರಕೃತಿ ಸಂತುಲನದ ಸೂಕ್ಷ್ಮದಲ್ಲೂ ಈ ಅವಲಂಬನೆಯ ಪಾತ್ರವಿದೆ. ಹೀಗೆ ಒಟ್ಟು ಜೀವಸಂಕುಲಗಳ ಉಳಿವು ಮತ್ತು ಸುಸ್ಥಿರತೆಗೆ ಮಾನವನ ಹೊಣೆಗಾರಿಕೆ ಬಹು ಮುಖ್ಯವಾದುದು. ಮನುಷ್ಯ ಪ್ರಬಲ ಚಿಂತನಾ ಶಕ್ತಿ ಹೊಂದಿದ ಪ್ರಾಣಿ. ಮನುಷ್ಯನ ಕುತೂಹಲಕರ ಮನಸ್ಸು ಜೀವ ದ್ರವ್ಯ
ಗಳ ಬೆಳವಣಿಗೆಯನ್ನು ಅರ್ಥೈಸಲು ನೆರವಾಗಿರುತ್ತದೆ. ಮಾನವನ ಆಮೂಲಾಗ್ರ ಕಾರ್ಯವೈಖರಿಗಳು ಪರಿಸರದ ಸರ್ವ ಜೀವಗಳ ಒಳಿತಿನ ಮೇಲೆ ಗಾಢ ಪರಿಣಾಮ ಬೀರುತ್ತವೆ. ಜೀವ ಸಂಕುಲಗಳ ಅವಲಂಬನೆಯ ವ್ಯವಸ್ಥೆ ಬಗ್ಗೆ ಎಲ್ಲ ಮಗ್ಗುಲಗಳ ಸಮಗ್ರ ಅಧ್ಯಯನವನ್ನು ಮಾಡುವುದು ಅನಿವಾರ್ಯವಾಗಿದೆ.
ಮಾನವ ಸಾವಿರಾರು ವರ್ಷಗಳಿಂದ ಅಸಂಖ್ಯಾತ ಬಗೆಯ ಉಪಯುಕ್ತ ಆಹಾರ ಮತ್ತು ಔಷಧೀಯ ಗುಣಗಳ ಸಸ್ಯಗಳನ್ನು ಗುರುತಿಸಿ ಸಂರಕ್ಷಿಸಿದ್ದಾನೆ. ನಮ್ಮ ಪೂರ್ವಜರ ಜ್ಞಾನ ಭಂಡಾರವು ಈ ಅಮೂಲ್ಯ ಪರಂಪರೆಯನ್ನು ಜೀವಂತವಾಗಿ ಇಟ್ಟಿದೆ. ಈ ಬಹು ದೊಡ್ಡ ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಿದೆ. ಇದು ನಮ್ಮ ಕರ್ತವ್ಯವೆನಿಸಿದರೂ ಕಳೆದ ಕೆಲವು ದಶಕಗಳಿಂದ ಹಲವು ಕಾರಣಗಳನ್ನು ಮುಂದಿಟ್ಟು ಈ ಮೌಲಿಕ ಪರಂಪರೆಯನ್ನು ರಕ್ಷಿಸುವಲ್ಲಿ ನಾವು ವಿಫಲರಾಗಿದ್ದೇವೆ. ಅದಕ್ಕಾಗಿ ಒಂದು ಸಾಂಸ್ಕೃತಿಕ, ಸಾಮಾಜಿಕ ಹೊಣೆಗಾರಿಕೆಯಿಂದ ಜಾಗರವನ್ನು ಹುಟ್ಟು ಹಾಕಬೇಕಿದೆ. ಅದನ್ನು ನೆರವೇರಿಸಲು ‘ಸಾರ’ ಕೇಂದ್ರ ಸನ್ನದ್ಧವಾಗಿದೆ. ಇದಕ್ಕೆ ಸಮಾಜದ ಎಲ್ಲ ವರ್ಗದವರು ಸ್ಪಂದಿಸಿ ಕೈಜೋಡಿಸಬೇಕಿದೆ ಎಂದು ಅದರ ಪ್ರಧಾನ ಸಂಚಾಲಕ ಕಲಾವಿದ ಅರುಣಕುಮಾರ್ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.
ಇಲ್ಲಿ ‘ನೈಸರ್ಗಿಕ ಪರಂಪರೆ’ಯಲ್ಲಿ ನಿಸರ್ಗದ ವಿಸ್ಮಯಗಳನ್ನು ಹತ್ತಿರದಿಂದ ಪರಿಶೀಲಿಸುವ ಯತ್ನವಿದೆ. ಕಲ್ಲು, ಮಣ್ಣು, ಮರ–ಗಿಡಗಳು, ಕೀಟ, ಪಕ್ಷಿಗಳು, ಭತ್ತದ ತಳಿಗಳು, ವಿವಿಧ ಆಹಾರ ಧಾನ್ಯಗಳ ಮಾದರಿಗಳ ಅಧ್ಯಯನವಿದೆ. ಅನೇಕ ನೈಸರ್ಗಿಕ ಸಂಪತ್ತಿನ ಪ್ರಪಂಚದ ಸಂಗತಿಗಳನ್ನು ಕುತೂಹಲದಿಂದ ತಿಳಿಯುವ, ಅನ್ವೇಷಣೆಗೆ ಒಳಪಡಿಸುವ ಯತ್ನಗಳೂ ಇವೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮತ್ತು ಸಂಶೋಧನೆಗೆ ಪ್ರೇರಣೆ ದೊರಕಿಸಿಕೊಡಲು ಸಚಿತ್ರ ವಿವರಗಳನ್ನು ಕ್ರೋಡೀಕರಿಸಿ ನೀಡಲಾಗಿದೆ.
ಪಾರಂಪರಿಕ ನೂರಾ ಅರವತ್ತಕ್ಕೂ ಮಿಕ್ಕಿದ ಭತ್ತದ ತಳಿಗಳನ್ನು ಸಂಗ್ರಹಿಸಿ ಇಡಲಾಗಿದೆ. ವಿವಿಧ ಆಹಾರ ಬಗೆಯ ಬೀಜಗಳ ಸಂಗ್ರಹವು ಇಲ್ಲಿದೆ. ಮಾದರಿ ಭತ್ತದ ತೆನೆಗಳು ಕೂಡ ಉಂಟು. ಪ್ರದರ್ಶನಕ್ಕಿಟ್ಟ ಶಿಲೆಯ ಹಲವು ರೂಪಗಳ ಪದರುಗಳು ಕುತೂಹಲವನ್ನು ವೃದ್ಧಿಸುತ್ತವೆ. ಮಣ್ಣಿನ ಸಂಸ್ಕೃತಿ, ಶಿಲಾ ಸಂಸ್ಕೃತಿಯ ರೂಪಗಳ ವಿವರಗಳನ್ನು ಇಡಲಾಗಿದೆ. ಅಂತರ್ಜಲ ಮಾಹಿತಿಯ ಪ್ರಾತ್ಯಕ್ಷಿಕೆಗಳಿವೆ.
‘ಸಾರ’ ಕೇಂದ್ರದಲ್ಲಿ ಸಹ್ಯಾದ್ರಿ ಶ್ರೇಣಿಯ ಪ್ರಾಣಿ ವೈವಿಧ್ಯದ ಗುಣ ಸ್ವಭಾವಗಳ ಚಿತ್ರಣವನ್ನು ನೀಡಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ವಿಶಿಷ್ಟ ಪ್ರಾಣಿ ಪ್ರಭೇದಗಳು, ಅಳಿವಿನಂಚಿನಲ್ಲಿರುವ ಪ್ರಾಣಿ, ಚಿಕ್ಕ ಪ್ರಾಣಿ, ಕೀಟ, ಸಣ್ಣ ಕೀಟ, ಹಾವು, ಪಕ್ಷಿಗಳ ವಿವರಗಳು ಇವೆ. ಎಲ್ಲ ವಿಷಯಗಳಲ್ಲೂ ಮಾನವ ಅದೆಷ್ಟು ಹೊಣೆಗಾರನು ಎಂಬುದನ್ನು ಚಿಂತನೆಗೆ ಒಡ್ಡುವಂತೆ ಇವು ಪ್ರೇರೇಪಿಸುತ್ತವೆ. ಗಣಿಗಾರಿಕೆ, ಹುಸಿ ಅಭಿವೃದ್ಧಿ ನೀತಿಗಳು, ಮಾನವನು ಕೃಷಿ ಚಟುವಟಿಕೆಗಳಿಗೆ ಕಾಡನ್ನು ಬಳಸುವುದು.-ಇವೆಲ್ಲವೂ ಪ್ರಾಕೃತಿಕ ಅಸಮತೋಲನಕ್ಕೆ ಕಾರಣ.
ಮಹಾತ್ಮ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಅರುಣಕುಮಾರ್ ಅವರಿಗೆ ಸ್ಫೂರ್ತಿ. ಕೆಲವು ಹಳ್ಳಿಗಳನ್ನು ‘ಸಾರ’ ಕೇಂದ್ರ ದತ್ತು ಪಡೆಯಿತು. ಆ ಹಳ್ಳಿಗಳ ಬತ್ತಿದ ಕೆರೆಗಳಿಗೆ ಕಾಯಕಲ್ಪ ನೀಡಿ ನೀರು ಜಿನುಗುವಂತೆ ಮಾಡುವುದು ಅದರ ಮುಖ್ಯ ಧ್ಯೇಯೋದ್ದೇಶ. ನೇರ ಮತ್ತು ನೇರವಲ್ಲದೇ ಇರುವ ಹದಿನೈದು-ಹದಿನಾರು ಕೆರೆಗಳ ಹೂಳೆತ್ತಿ ನೀರು ಹರಿಸಿದ ಶ್ರೇಯ ‘ಸಾರ’ಕ್ಕಿದೆ. ಗ್ರಾಮೀಣರನ್ನು ವಿಶ್ವಾಸಕ್ಕೆ ಪಡೆದು ಗ್ರಾಮ ಸಮಿತಿಗಳನ್ನು ರಚಿಸಿದರು. ಗ್ರಾಮೀಣ ಬದುಕಿನ ನಾಡಿ ಮಿಡಿತವರಿತು ಕೃಷಿ, ಆರೋಗ್ಯ, ಜಲಭದ್ರತೆಯ ಅರಿವು ಮೂಡಿಸಿದರು. 2017-18ರಲ್ಲಿ ‘ಘಟ್ಟದತ್ತ ದಿಟ್ಟ ಹೆಜ್ಜೆ’ ಎನ್ನುವ ಚಳವಳಿಯನ್ನು ‘ಸಾರ’ ಹುಟ್ಟುಹಾಕಿತು.
ಇತ್ತೀಚೆಗೆ ‘ಸಾರ’ದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಕಲಾವಿದರ ಒಂದು ಕಲಾಶಿಬಿರವೂ ನಡೆಯಿತು. ‘ಪಾರಿಸರಿಕ ಗುರುತುಗಳು’ ಪರಿಕಲ್ಪನೆಯ ಶಿಬಿರ ಇದು. ಇದರಲ್ಲಿ ಸುತ್ತಲಿನ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡರು. ಅವರು ‘ನೆಲದ ಕತೆಗಳು’ಎಂಬ ಹೆಸರಿನ ಪರಿಸರ ಸಂಬಂಧಿ ಕತೆಗಳನ್ನು ರಚಿಸಿ ವಾಚಿಸಿದರು. ಅದರ ಆಧಾರಿತ ಚಿತ್ರಗಳು ರಚನೆಗೊಂಡವು. ಈಗ ‘ಸಾರ’ ಕೇಂದ್ರದಿಂದ ಮಲೆನಾಡಿನ ಕಾಲೇಜುಗಳತ್ತ ‘ಸಹ್ಯಾದ್ರಿ ಸಂವಾದ’ ನಾಮದ ಪರಿಸರ ಜಾಗೃತಿಯ ಭಿತ್ತಿಚಿತ್ರಗಳ ಅಭಿಯಾನ ಆರಂಭಗೊಂಡಿದೆ. ಇದು ಪರಿಸರ ಪ್ರಜ್ಞೆಯನ್ನು ಯುವಕರಿಗೆ ತಲುಪಿಸುವ ಒಂದು ಅಭಿಯಾನ. ಜೀವಜಗತ್ತು ಅರಳಲು ಸಕಲರ ಪರಿಸರ ಕಾಳಜಿಯ ಅಗತ್ಯವಿದೆ ಎನ್ನುವುದಕ್ಕೆ ‘ಸಾರ’ ಸಂವಾದರೂಪವವಾಗಿ ಕಾಣುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.