2019 ಸಂಕ್ರಾಂತಿ ಮುಗಿದ ನಂತರದ ಸಂದರ್ಭ. ಎತ್ತಿನ ಬಂಡಿಯೊಂದು ಗೌರಿಬಿದನೂರು ಹತ್ತಿರದ ಚಿಂಚನಹಳ್ಳಿಗೆ ತಲುಪಿತು. ಇನ್ನೇನು ಸೂರ್ಯ ಕಂತುವ ಹೊತ್ತು. ಬಂಡಿಯ ಹಿಂದೆ ಪುಟಾಣಿ ಮಕ್ಕಳು. ಜತೆಗೆ ಒಂದಿಷ್ಟು ದೊಡ್ಡವರು. ಕೆಲವರದ್ದು ಚಪ್ಪಲಿಗಳೇ ಇಲ್ಲದ ಪಾದಗಳು. ಆ ಊರನ್ನು ದಾಟಿಕೊಂಡು ಬಂಡಿ ಮುಂದಿನ ಹಳ್ಳಿ ಸೇರಬೇಕಿತ್ತು.
ಚಿಂಚನಹಳ್ಳಿಯ ಹೊರವಲಯದಿಂದ 50 ಅಡಿಗಳಷ್ಟು ದಾಟಿರಬಹುದಷ್ಟೆ. ಅಲ್ಲಿ ಇದ್ದ ಮಹಿಳೆಯರಲ್ಲಿ ಒಬ್ಬರು ಬಂಡಿಯ ಬಳಿಗೆ ಧಾವಿಸಿ ಬಂದರು. ‘ಹೊರಟಿದ್ದೆಲ್ಲಿಗೆ’ ಎಂಬ ಪ್ರಶ್ನೆ. ‘ಇವರೆಲ್ಲ ಶಾಲೆಯ ಮಕ್ಕಳು. ಪಾದಯಾತ್ರೆ ಹೊರಟಿದ್ದೇವೆ. ಮುಂದಿನ ಹಳ್ಳಿಯಲ್ಲಿ ಇಳಿದುಕೊಳ್ಳಬೇಕು. ಕತ್ತಲಾಗುವಷ್ಟರಲ್ಲಿ ತಲುಪಿಕೊಳ್ಳುತ್ತೇವೆ’ ಎಂದರು ಆ ಮಕ್ಕಳನ್ನೆಲ್ಲ ಸಾಹಸಕ್ಕೆ ಹಚ್ಚಿದ್ದ ದಿವಾಕರ್. ‘ಆ ಊರಲ್ಲಿಯೇ ಉಳಿಯಬೇಕೆ? ನಮ್ಮೂರಲ್ಲಿ ಉಳಿದರೆ ಆಗದೆ?’ ಎಂದು ಕೇಳಿದ ಮಹಿಳೆಗೆ ಏನು ಉತ್ತರ ಹೇಳಬೇಕೆಂದು ದಿವಾಕರ್ ಅವರಿಗೆ ತೋಚಲಿಲ್ಲ. ಬಂಡಿ ಮುಂದೆ ಸಾಗಿತು. ಹತ್ತು ಅಡಿಗಳಷ್ಟು ದಾಟಿರಬಹುದಷ್ಟೆ. ಆ ಊರಲ್ಲಿಯೇ ಯಾಕೆ ಇಳಿದುಕೊಳ್ಳಬಾರದು ಎಂದು ಒಳಮನಸ್ಸು ತಡೆಯಿತು. ಆಮೇಲೆ ಚಿಂಚಾನಹಳ್ಳಿಯ ದೇವಸ್ಥಾನದ ಆವರಣದಲ್ಲಿ ಊಟದ ವ್ಯವಸ್ಥೆ ಆಯಿತು. ಮಕ್ಕಳು ತಂಗಲು ತಾಣವೂ ಸಿಕ್ಕಿತು. ಮರುದಿನ ಈ ಅನಿಶ್ಚಿತ ಪಯಣದ ಮುಂದುವರಿಕೆ. ಇನ್ನೊಂದು ಹಳ್ಳಿ, ಮತ್ತೊಂದು ಅನಿರೀಕ್ಷಿತ ಅನುಭವ. ಅಭ್ಯಾಗತರಿಗೆ ಯಾರೋ ಸಹೃದಯರಿಂದ ಆತಿಥ್ಯ.
ಕೆಂಗೇರಿ ದಾಟಿಕೊಂಡು ತಾವರೆಕೆರೆ ರಸ್ತೆಯಲ್ಲಿ ಸಾಗಿದರೆ ಸಿಗುವ ಮುದ್ದಯ್ಯನಪಾಳ್ಯದಲ್ಲಿ ‘ಉದ್ಭವಃ’ ಎನ್ನುವ ಮುಕ್ತ ಕಲಿಕೆಯ ಶಾಲೆಯಿದೆ. ಅಲ್ಲಿನ ಮಕ್ಕಳನ್ನು ಪ್ರತಿವರ್ಷ ಒಮ್ಮೆ ಹೀಗೆ ಐದು ದಿನಗಳ ಅನಿಶ್ಚಿತ ಪಾದಯಾತ್ರೆ ಹೊರಡಿಸುವುದು ರೂಢಿ. ಕೋವಿಡ್ ಬಂದಾಗ ಯಾತ್ರೆ ಸಾಧ್ಯವಾಗಿರಲಿಲ್ಲ. ಹೋದವರ್ಷ ಮತ್ತೆ ಪಾದಗಳು ಹೊರಟಿದ್ದು 2019ರಲ್ಲಿ ಸಾಗಿದ್ದ ಅದೇ ಹಾದಿಯಲ್ಲಿ. ಆದರೆ ಕಾಲ ಬೇರೆ; ಮಳೆಗಾಲ. ಅನುಭವವೂ ಬೇರೆ. ಮೊದಲ ಯಾತ್ರೆಯಲ್ಲಿ ಮಕ್ಕಳ ಮುಗ್ಧ ನಗು ಕಂಡುಂಡಿದ್ದ ಹಳ್ಳಿಗರು ಈ ಸಲ ಆತಿಥ್ಯಕ್ಕೆ ಸ್ವಪ್ರೇರಣೆಯಿಂದ ಒಪ್ಪಿದ್ದರೆನ್ನುವುದು ವಿಶೇಷ.
ಗೌರಿಬಿದನೂರಿನಲ್ಲಿ ‘ಮರಳಿ ಮಣ್ಣಿಗೆ’ ಎನ್ನುವ ತೋಟದಲ್ಲಿ ಶಾಲೆಯ ಮಕ್ಕಳು ತಾವೇ ಬೆಳೆ ಬೆಳೆಯುವ ಚಟುವಟಿಕೆಯೊಂದಿದೆ. ಹೀಗಾಗಿ ಆಗೀಗ ಅಲ್ಲಿಗೆ ಹೋಗಿ ಬರುವ ಮಕ್ಕಳಿಗೆ ಅಲ್ಲಿನ ಮಣ್ಣು ಚಿರಪರಿಚಿತ. ಅದರ ಮುಂದುವರಿದ ಕಲಿಕೆಯ ಭಾಗ ಈ ಪಾದಯಾತ್ರೆ. ಎಲ್ಲಿಗೋ ಪಯಣ, ಯಾವುದೋ ದಾರಿ. ಯಾರೂ ಏಕಾಂಗಿ ಸಂಚಾರಿ ಅಲ್ಲ. ಮೊದಲ ವರ್ಷ 13–14 ಮಕ್ಕಳು ಪಾದಯಾತ್ರೆ ಹೊರಟಿದ್ದು. ಈಗ ಸಂಖ್ಯೆ 46ಕ್ಕೆ ಏರಿದೆ. ಪುಟ್ಟ ಮಕ್ಕಳು ಮನಸ್ಸು ಮಾಡಿದರೆ, ಅವರೊಟ್ಟಿಗೆ ಪೋಷಕರೂ ಈ ಅನಿರೀಕ್ಷಿತ ಅನುಭವ ದಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಹಾದಿಯಲ್ಲಿ ಅಲ್ಲಲ್ಲಿ ಬೆಟ್ಟಗಳು. ಅವನ್ನು ಏರಬಹುದು, ಅವುಗಳ ಮೇಲೆ ಅಂಗಾತವಾಗಬಹುದು. ನೀರಿನ ತೊರೆಯಲ್ಲಿ ಕಾಲಿಳಿಸಿಕೊಂಡು ಕೂರಬಹುದು. ಕುರಿಮಂದೆಯ ಒಡೆಯನ ಜತೆ ಲೋಕಾಭಿರಾಮ ಹರಟಬಹುದು. ದಿಢೀರನೆ ಮಳೆ ಬಂದರೆ ಬಂಡಿಯೊಳಗಿನಿಂದ ತಾಡಪಾಲು ತೆಗೆದು ಎಲ್ಲರೂ ಅದರಡಿ ಮಳೆ ನೋಡುತ್ತಲೇ ಸಾಗಬಹುದು. ಇವೆಲ್ಲವನ್ನೂ ಮಕ್ಕಳು ಮಾಡಿದ್ದಾರೆ. ಅವರೊಟ್ಟಿಗೆ ಇದ್ದ ದೊಡ್ಡವರೂ ಮಕ್ಕಳೇ ಆಗಿದ್ದಾರೆ.
ಸುಮಾರು 50 ಕಿ.ಮೀ.ಗಿಂತ ಹೆಚ್ಚು ದೂರದ ಪಾದಯಾತ್ರೆಯಲ್ಲಿ ಮಕ್ಕಳು ಕಟ್ಟಿಕೊಂಡ ಅನುಭವಗಳು ಭಿನ್ನ. ನಲುಗುಮನಹಳ್ಳಿ ಎನ್ನುವಲ್ಲಿ ಸಂಜೆ ಮಕ್ಕಳು ‘ಕಿವುಡು ಸಾರ್ ಕಿವುಡು’ ಎಂಬ ನಾಟಕ ಪ್ರದರ್ಶಿಸಿದರು. ಎಂ.ಎಸ್. ನರಸಿಂಹಮೂರ್ತಿ ಅವರ ಈ ನಾಟಕವನ್ನು ಮಕ್ಕಳಿಗೆ ಕಲಿಸಿಕೊಟ್ಟವರು ಮಂಜುನಾಥ್ ಹಾಗೂ ಹರೀಶ್. ರಸ್ತೆ ಮಧ್ಯೆಯೇ ಮಕ್ಕಳ ನಾಟಕ. ಅದು ಜನಪ್ರಿಯ ಧಾರಾವಾಹಿ ಬರುವ ಹೊತ್ತು. ಪ್ರೇಕ್ಷಕರು ಅಲ್ಲೊಬ್ಬರು ಇಲ್ಲೊಬ್ಬರು ಕಂಡರಷ್ಟೆ. ಮಕ್ಕಳೇ ಮನೆಮನೆಗೆ ಹೋಗಿ ಟೀವಿ ಮುಂದೆ ಕುಳಿತಿದ್ದವರನ್ನು ಎಬ್ಬಿಸಿಕೊಂಡು ಬಂದರು. ಮನರಂಜನೆಯ ಇನ್ನೊಂದು ನಮೂನೆ ಜನರಿಗೆ. ರಸ್ತೆ ಮಧ್ಯೆ ನಾಟಕ ನಡೆದಿದ್ದರಿಂದ, ನಡುವೆ ದ್ವಿಚಕ್ರವಾಹನ ಸವಾರನ ಹಾರ್ನ್ ಸದ್ದನ್ನು ಮೀರಿ ಜನರಿಗೆ ವಿಷಯ ದಾಟಿಸುವ ಜರೂರು ಮಕ್ಕಳಿಗೆ ಆದ ರಿಯಲ್ ಟೈಮ್ ಅನುಭವ.
ಇನ್ನೊಂದು ಹಳ್ಳಿಗೆ ಮೊದಲ ಸಲ ಹೋದಾಗ ಮಕ್ಕಳಲ್ಲಿ ಸಹಜವಾಗಿಯೇ ‘ಮಲಗುವುದೆಲ್ಲಿ’ ಎಂಬ ಪ್ರಶ್ನೆ. ‘ನೀವೇ ಹೋಗಿ ಯಾರನ್ನಾದರೂ ಒಪ್ಪಿಸಿ’. ಆರು ಮಕ್ಕಳಿಗೆ ದಿವಾಕರ್ ಹೋಂವರ್ಕ್ ಕೊಟ್ಟರು. ಬಹುಶಃ ಮಕ್ಕಳು ಸಂಕೋಚದಿಂದ ಒಲ್ಲೆ ಎನ್ನಬಹುದೇನೊ ಎಂಬ ಅವರ ಭಾವನೆ ಸುಳ್ಳಾಯಿತು. ‘ಮೂರು ಮನೆಗಳಲ್ಲಿ ಮಲಗುವ ವ್ಯವಸ್ಥೆ ಆಯಿತು’ ಎಂದು ಮಕ್ಕಳು ಮುಖದ ತುಂಬಾ ನಗು ಹೊತ್ತು ಮರಳಿದರು.
ದಿಣ್ಣೇಮೇಲನಹಳ್ಳಿಯಲ್ಲಿ ಇದ್ದಿದ್ದು ಆರು ಮನೆ. ಮೂರು ಶೌಚಾಲಯ. ಇಷ್ಟೂ ಜನರಿಗೆ ಉಳಿದುಕೊಳ್ಳುವ ವ್ಯವಸ್ಥೆ ಆಯಿತು. ಮರುದಿನ ಸ್ನಾನಾದಿಗಳನ್ನು ಮುಗಿಸಿಕೊಂಡ ಮೇಲೆ ತಿಂಡಿ. ಯಾರು ಎಲ್ಲಿ ಶೌಚ ಮುಗಿಸಿಕೊಂಡರೆನ್ನುವುದು ಕೂಡ ಚರ್ಚೆಗೆ ಬರಲಿಲ್ಲ. ಬೊಮ್ಮಸಂದ್ರ ಎನ್ನುವಲ್ಲಿ ನೂರು ವರ್ಷಗಳ ಹಳೆಯ ಶಾಲೆ ಇದೆ. ಅಲ್ಲಿ ತಂಗಲು ಹೊರಟಿದ್ದಾಗ, ಜನರು ರಸ್ತೆ ಸ್ವಚ್ಛಗೊಳಿಸಿ, ಎತ್ತಿನಗಾಡಿಯ ಹಸುಗಳಿಗೆ ಆರತಿ ಎತ್ತಿದರು. ಅವರೆಲ್ಲ ದಲಿತ ಕಾಲೊನಿಯ ಜನ. ಪಾನಮತ್ತರಾಗಿದ್ದ ಮೂವರು ಇಡೀ ಕಾಲೊನಿಯ ಜನರನ್ನು ಒಂದೆಡೆ ಸೇರಿಸಿ ಇಂತಹ ಪ್ರೀತಿ ತೋರಿದ್ದು ದಿವಾಕರ್ ಹಾಗೂ ತಂಡದವರಿಗೆ ಮರೆಯಲಾಗದ ಅನುಭವ.
ನಡೆದ ದಾರಿಯಲ್ಲೇ ಈಗ ನಡೆದರೂ, ಹೊಸದಾಗಿ ಪಾದಯಾತ್ರೆ ಹೊರಡುವ ಮಕ್ಕಳಿಗೆ ಅದು ಹೊಸದಾರಿ. ಹಿಂದೆ ಸಾಗಿದವರಿಗೆ ಕಳೆದ ವರ್ಷದ ಬಾಂಧವ್ಯದ ಸರಿದಾರಿ. ಪ್ರಕೃತಿಯಲ್ಲಾಗುವ ಬದಲಾವಣೆಯ ಅರಿಯುವ ದಾರಿಯೂ ಹೌದು. ‘ಬಡವರ ತರಹ ಕಾಣುವ ಅವರೆಲ್ಲ ಎಷ್ಟೊಂದು ಜನರಿಗೆ ಸಲೀಸಾಗಿ ಇಷ್ಟೆಲ್ಲ ಮಾಡುತ್ತಾರೆ. ನಗರದಲ್ಲಿ ಇರುವ ನಮಗೇಕೆ ಹೀಗೆ ಮಾಡಲು ಆಗುವುದಿಲ್ಲ’ ಎಂದು ಮಗುವೊಂದು ಕೇಳಿದ ತೂಕದ ಪ್ರಶ್ನೆಗೆ ಕಣ್ಣಾಲಿಗಳಲ್ಲಿ ನೀರು ತುಂಬಬೇಕಷ್ಟೆ. ಇಂಥ ಪಾದಯಾತ್ರೆ ಅರ್ಥ ಪಡೆಯುವುದೇ ಈ ಪ್ರಶ್ನೆಯಿಂದ. ಇಷ್ಟಕ್ಕೂ ಬಂಡಿಯೊಳಗೆ ತುರ್ತಿಗೆ ಇರಲಿ ಎಂದು ತೆಗೆದುಕೊಂಡು ಹೋಗಿದ್ದ ದಿನಸಿ, ತರಕಾರಿ ಯಾವುದನ್ನೂ ಇರುವರೆಗೆ ಬಳಸಿಕೊಳ್ಳುವ ಪ್ರಮೇಯ ಶಾಲೆಯ ಉಸ್ತುವಾರಿ ದಿವಾಕರ್ ಹಾಗೂ ಸ್ನೇಹಿತರಿಗೆ ಬಂದಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಇರುವ ಮಾನವೀಯತೆಯ ಒರತೆಗೆ ಇದೇ ಸಾಕ್ಷ್ಯ.
ಪಾದಯಾತ್ರೆಯಲ್ಲಿ ಸೇರಿಕೊಂಡ ನಾಯಿಯೊಂದು ಅಷ್ಟೂ ದಿನ ಎಲ್ಲರೊಳಗೆ ಒಂದಾದ ಕಥೆಯಿದೆ. ಪಾದಯಾತ್ರೆಗೆ ಹೋಗಿದ್ದ ಮಗುವಿನ ತಾಯಿ ಪವಿತ್ರಾ ಎಂಬುವವರ ಚಪ್ಪಲಿ ಕಿತ್ತುಹೋದಾಗ ಯಾರೋ ಹಳ್ಳಿಯವರೇ ಅವರಿಗೆ ಚಪ್ಪಲಿಗಳನ್ನು ಕೊಟ್ಟು ಕಳುಹಿಸಿದ ಬೆಚ್ಚಗಿನ ನೆನಪಿದೆ. ತಿರುಪತಿಗೆ ತಾವು ಪಾದಯಾತ್ರೆ ಹೋದಾಗ ಯಾರೋ ಮಾಡಿದ ಅನ್ನದಾನದ ಋಣವನ್ನು ಹೀಗೆ ಮಕ್ಕಳಿಗೆ ಉಣಬಡಿಸಿ ತೀರಿಸಿಕೊಳ್ಳುವುದಾಗಿ ಹೇಳಿ ಅನ್ನವೀಯುವ ಸುಖದ ಸರಪಳಿ ತೆರೆಯುವ ಯಜಮಾನರ ಮಾನವೀಯತೆಯ ನಡೆ ಇದೆ. ನೀರ ಒರತೆ ಇರುವ ಕಡೆ ಸ್ವಲ್ಪ ಭೂಮಿ ಅಗೆದಾಗ ನೀರು ಉಕ್ಕುವುದನ್ನು ಕಂಡು ಚಿಣ್ಣರು ವಸುಂಧರೆಯ ಒಡಲಾಳ ಅರಿತ ಪಾಠವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.