ADVERTISEMENT

ಮೂರು ದಶಕಗಳ ಹಿಂದಿನ ಘಟನೆ: ಕಾಡುವ ಆ ‘ಕರಾಳ’ ನೆನಪು

​ಪ್ರಜಾವಾಣಿ ವಾರ್ತೆ
Published 21 ಮೇ 2022, 19:30 IST
Last Updated 21 ಮೇ 2022, 19:30 IST
ಕಲೆ: ಭಾವು ಪತ್ತಾರ್‌
ಕಲೆ: ಭಾವು ಪತ್ತಾರ್‌   

‘ಒಂದು ಕರಾಳ ನೆನಪು’ ಎಂಬುದು ಒಂದು ಸರ್ವೇಸಾಮಾನ್ಯ ಹೇಳಿಕೆ. ಒಂದು ಕಾಲದಲ್ಲಿ ನಡೆದ ಘಟನೆಯು ಸಾರ್ವಜನಿಕರಿಗೆ ಕಹಿ ಅನುಭವ ನೀಡಿದ್ದರೆ ಅಂತಹ ಘಟನೆಗೆ ಇದನ್ನು ಹಚ್ಚಲಾಗುತ್ತದೆ. ಆ ಕಹಿಯನ್ನು ಕೆದಕಿ ಬೆದಕಿ ಅದು ಎಷ್ಟೊಂದು ಹಿಂಸಾತ್ಮಕವಾಗಿತ್ತು ಎಂದು ವಿವರಿಸುವುದು ಇದರ ಸ್ವರೂಪ. ರಾಷ್ಟ್ರದಲ್ಲೊ, ರಾಜ್ಯದಲ್ಲೊ ನಡೆದ ಪ್ರಸಿದ್ಧ ಘಟನೆಗಳನ್ನು ಹೀಗೆ ವಿವರಿಸಲಾಗುತ್ತದೆ. ಮತ್ತೆ ಅಂತಹ ಘಟನೆಗಳು ನಡೆಯಬಾರದು ಎಂಬ ಒಳಅಪೇಕ್ಷೆಯ ತೀವ್ರತುಡಿತ ಅದರ ಹಿಂದೆ ಕ್ರಿಯಾಶೀಲವಾಗಿರುತ್ತದೆ.

ಮೇ 22, ಇದು ರಾಷ್ಟ್ರದಲ್ಲಾಗಲಿ, ರಾಜ್ಯದಲ್ಲಾಗಲಿ ವಿಶೇಷವಾಗಿ ನೆನಪಿಸಿಕೊಳ್ಳುವ ದಿನವಲ್ಲ. ಆದರೆ ಸುಮಾರು 1970ರಿಂದ 1990ರವರೆಗೆ ಗ್ರಾಮಾಂತರ ಪ್ರದೇಶದ, ಬಡತನದಲ್ಲಿ ವಿದ್ಯಾಭ್ಯಾಸ ಮಾಡಿರುವ ಬಹುತೇಕ ಮಂದಿಗೆ ಮೇ 22 ನೆನಪಿರುವ ದಿನವಾಗಿದೆ. ಅದು ಬೇಸಿಗೆಯ ರಜೆಯ ನಂತರ ಸ್ಕೂಲ್ ಪುನರ್ ಆರಂಭವಾಗುತ್ತಿದ್ದ ದಿನ. ಏಪ್ರಿಲ್ 10 ರಜೆ ಆರಂಭವಾಗುತ್ತಿದ್ದ ದಿನ.

ರಜೆಬಿಟ್ಟ ಮಾರನೇ ದಿನದಿಂದಲೇ ನಮಗೆ ಮುಕ್ತ ಸ್ವಾತಂತ್ರ್ಯ ಸಿಗುತ್ತಿತ್ತು. ಏಪ್ರಿಲ್–ಮೇ ತಿಂಗಳಲ್ಲಿ ಮಲೆನಾಡು ಭಾಗದಲ್ಲಿ ಹಬ್ಬಗಳು, ಮದುವೆಗಳು ನಡೆಯುತ್ತವೆ. ಈಗಿನಂತೆ ಆಗ ರಜೆಯಲ್ಲೂ ಆ ಕ್ಲಾಸು, ಈ ಕ್ಲಾಸು, ಹೋಮ್‍ವರ್ಕ್ ಇತ್ಯಾದಿ ಇರಲಿಲ್ಲ. ಏಪ್ರಿಲ್ 10ನೇ ತಾರೀಖಿನಂದು ನಾವು ಪುಸ್ತಕದ ಬ್ಯಾಗಿಗೆ ಸಂತಸ ಸಂಭ್ರಮದಿಂದ ವಿದಾಯ ಹೇಳಿದರೆ, ಮತ್ತೆ ಅದು ಮೇ 22ರಂದು ಅತ್ಯಂತ ಭಯಾನಕವಾಗಿ ಎದುರಾಗುತ್ತಿತ್ತು. ಈ ನಡುವೆ ಪುಸ್ತಕಗಳಿಗೂ ನಮಗೂ ಯಾವುದೇ ಸಂಬಂಧವಿರುತ್ತಿರಲಿಲ್ಲ.

ADVERTISEMENT

ಸ್ಕೂಲು ಇದ್ದಾಗ ಹಬ್ಬ, ಮದುವೆ ಮುಂತಾದವುಗಳಿಗೆ ಹೋಗಲು ಮೇಷ್ಟ್ರ ಹತ್ತಿರ ಮುಂಚಿತವಾಗಿಯೇ ರಜೆ ಕೇಳಬೇಕಿತ್ತು. ಕೇಳಿದ ರಜೆಗಳೆಲ್ಲಾ ಮಂಜೂರು ಆಗುತ್ತಿರಲಿಲ್ಲ. ಈಗ ಇರುವಂತೆ ಆಗ ಯಾವ ಮನರಂಜನೆಯೂ ಇರಲಿಲ್ಲ. ಯಾವಾಗ ಬೇಕೆಂದರೆ ಆವಾಗ ವಿಶೇಷ ಊಟವೂ ಸಿಗುತ್ತಿರಲಿಲ್ಲ. ಹಾಗಾಗಿ ಹಬ್ಬ, ಜಾತ್ರೆ, ಮದುವೆಗಳು ನಮ್ಮನ್ನು ವಿಶೇಷವಾಗಿ ಆಕರ್ಷಿಸುತ್ತಿದ್ದವು. ಬೇಸಿಗೆ ರಜೆಯಲ್ಲಿ ಇವು ಬಂದರೆ ಅಲ್ಲಿಗೆ ಹೋಗಲು ಯಾರ ಅಪ್ಪಣೆಯನ್ನೂ ಪಡೆಯುವ ಅಗತ್ಯವಿರಲಿಲ್ಲ. ಸ್ಕೂಲು ಇದ್ದಾಗ ಇವು ಬಂದರೆ ಅಲ್ಲಿಗೆ ಹೋಗಲಾಗದೆ ಹಿಂಸೆ ತಾಳಿಕೊಳ್ಳಲು ಆಗುತ್ತಿರಲಿಲ್ಲ.

ಬೇಸಿಗೆ ರಜೆಯಲ್ಲಿ ನಮ್ಮೂರುಗಳಲ್ಲಿ ತರಾವರಿ ಆಟ ಆಡುತ್ತಿದ್ದೆವು. ಮಲೆನಾಡಿನಲ್ಲಿ ಸುಗ್ಗಿಹಬ್ಬದ ನಂತರ ಮಕ್ಕಳಾದ ನಮ್ಮ ಸುಗ್ಗಿಹಬ್ಬ ಶುರುವಾಗುತ್ತಿತ್ತು. ದೇವಸ್ಥಾನಗಳಲ್ಲಿ ದೊಡ್ಡವರು ದೇವರುಗಳನ್ನು ಕಟ್ಟಿದಂತೆಯೇ ನಾವೂ ಸಣ್ಣದಾಗಿ ಕಟ್ಟಿಕೊಳ್ಳುತ್ತಿದ್ದೆವು. ಸಣ್ಣದಾಗಿ ಕೆಂಡ ಮಾಡಿಕೊಂಡು ಕೆಂಡ ಹಾರುವ (ಹಾಯುವ) ಆಟ ನಡೆಯುತ್ತಿತ್ತು. ಆ ಅವಧಿಯಲ್ಲಿ ನಮ್ಮಂಥವರ ವಿಶೇಷ ಜವಾಬ್ದಾರಿಯ ಕೆಲಸವೆಂದರೆ ಗದ್ದೆಗಳಲ್ಲಿ ದನ ಮೇಯಿಸುವುದು. ದನ ಮೇಯಿಸುವ ಐದಾರು ಜನ ಹುಡುಗರು ಒಂದು ಕಡೆ ಒಟ್ಟಾದೆವೆಂದರೆ ಸ್ವರ್ಗವೇ ನಮ್ಮ ಅಂಗೈಗೆ ಬರುತ್ತಿತ್ತು.

ದನ ಮೇಯಿಸುವುದು ಅರ್ಧ ಕೆಲಸವಾದರೆ, ಅದರ ನಡುವೆ ಬ್ರೇಕ್ ತಗೊಂಡು ವಿವಿಧ ಆಟಗಳನ್ನು ಆಡುವುದು, ಲಗೋರಿ, ಪಿಳ್‍ಚೆಂಡು, ಕಬಡ್ಡಿ, ಚಿನ್ನಿದಾಂಡು, ಹಬ್ಬ ಮಾಡುವ ಆಟ, ಹಲಗೆ (ತಮಟೆ) ಬಡಿಯುವ ಆಟ, ಮರಕೋತಿ ಆಟ, ಸಣ್ಣ ಹಳ್ಳದಲ್ಲಿ ಈಜುವುದು, ಚಾಟಿ ಬಿಲ್ಲಿನಿಂದ ಹಕ್ಕಿಗಳನ್ನು ಶಿಕಾರಿ ಮಾಡುವುದು, ಹಳ್ಳದಲ್ಲಿ ಏಡಿ ಮೀನು ಹಿಡಿಯುವುದು, ಹಲಸಿನಕಾಯಿ, ಹಲಸಿನಹಣ್ಣು, ಮಾವಿನಹಣ್ಣು ತಿನ್ನುವುದು, ಕಳಲೆ ತರುವುದು... ಹೀಗೆ ಇದರ ಪಟ್ಟಿ ಸಾಗುತ್ತಿತ್ತು. ಇವೆಲ್ಲವೂ ಮನೆ ಹೊರಗಿನ ಸಂಪೂರ್ಣ ಮನರಂಜನೆಯ ಕೆಲಸಗಳಾಗಿದ್ದವು. ಇವಕ್ಕೆ ಯಾರ ನಿಯಂತ್ರಣವೂ ಇರಲಿಲ್ಲ. ಆ ಸ್ವಾತಂತ್ರ್ಯದ ಸುಖ ನಮ್ಮ ಅನುಭವದ ಮುಖ್ಯ ಭಾಗ. ನಮ್ಮ ಇಡೀ ಜೀವನ ಇದರಲ್ಲೇ ಸಾಗಬೇಕು ಎನಿಸುತ್ತಿತ್ತು. ಸುಖ ಸಂತೋಷ ಎಂಬುದಕ್ಕೆ ನಮಗೆ ಆ ದಿನಗಳು ಮಾತ್ರ ಏಕೈಕ ಸಾಕ್ಷಿ. ಆಗ ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗುತ್ತಿರಲಿಲ್ಲ. ಹಲಸಿನಕಾಯಿ ಅಥವಾ ಹಲಸಿನಹಣ್ಣು ಊಟದ ಅಗತ್ಯವನ್ನು ಈಡೇರಿಸುತ್ತಿದ್ದವು. ಇನ್ನೂ ಹೇಳಬೇಕೆಂದರೆ ಕೆಲವರ ಮನೆಯಲ್ಲಿ ಊಟಕ್ಕೂ ಸಮಸ್ಯೆ ಇತ್ತು.

ಮೇ ತಿಂಗಳ ಆರಂಭದಲ್ಲೇ ಮುಂಗಾರು ಶುರುವಾಗುತ್ತಿತ್ತು. ಹಗಲು ಗದ್ದೆಗಳಲ್ಲಿ ದನ ಮೇಯಿಸುತ್ತಿರುವಾಗ ಕೆಲವು ತುಡುಗು ದನಗಳು ಕಾಡಿನ ಕಡೆಗೆ ಓಡಿಹೋಗಲು ಟ್ರೈ ಮಾಡುತ್ತಿದ್ದವು. ಅಂಥವನ್ನು ಸಾಂಘಿಕ ಪ್ರಯತ್ನದಿಂದ ನಮ್ಮ ವ್ಯಾಪ್ತಿಗೆ ತಂದುಕೊಳ್ಳುತ್ತಿದ್ದೆವು. ಸಂಜೆ ಅವನ್ನು ಗದ್ದೆಗಳಿಂದ ಹೊಡ್ಕೊಂಡು ಬಂದು ಕೊಟ್ಟಿಗೆಯಲ್ಲಿ ಕಟ್ಟುವಾಗ ಹಗಲಿನ ಸೇಡು ತೀರಿಸಲೆಂಬಂತೆ ಕೆಲವು ಇದ್ದಕ್ಕಿದ್ದಂತೆ ಓಟ ಕೀಳುತ್ತಿದ್ದವು. ಆ ಹಿಂಸೆ ಮಾತ್ರ ಸಹಿಸಲಾರದ್ದು.

ಕೆಲವು ಪ್ರಣಯಪ್ರಿಯ ಅದ್ರಿ ಹತ್ತುವ ಹೋರಿಗಳು ಮತ್ತು ಮಣಕಗಳು ಮಳೆ ಸ್ವಲ್ಪ ಉದುರಾಡಿದರೆ ಸಾಕು, ಉತ್ಸಾಹದಿಂದ ಬಾಲ ಎತ್ತಿಕೊಂಡು ಸಿಕ್ಕಸಿಕ್ಕ ಕಡೆ ಓಡುತ್ತಿದ್ದವು. ಅವನ್ನು ಎಂತಹಾ ರನ್ನರ್‌ಗಳಿಗೂ ತಡೆಯಲು ಆಗುತ್ತಿರಲಿಲ್ಲ. ಅವು ಓಡುವುದನ್ನು ನೋಡಿ, ಸ್ಫೂರ್ತಿಗೊಂಡು ಉಳಿದ ಕೆಲವು ದನಗಳು ‘ನಾವೂ ಅದ್ರಿ ಹತ್ತಬಲ್ಲೆವು’ ಎಂಬಂತೆ ಅವನ್ನು ಹಿಂಬಾಲಿಸಿ ಓಡುತ್ತಿದ್ದವು. ಗದ್ದೆಯ ಬದುಗಳನ್ನು ನೆಗೆಯುತ್ತಾ, ಹಾರುತ್ತಾ ಅವು ಓಡುವುದು ರೋಚಕ ದೃಶ್ಯವಾಗಿತ್ತು. ಆದರೆ ಸಂಜೆ ಅವು ಕೊಟ್ಟಿಗೆಗೆ ಬರಲ್ಲ ಎಂಬ ಚಿಂತೆ ಕಾಡುತ್ತಿತ್ತು.

ಕೆಲವೊಮ್ಮೆ ಮಳೆ ಬಂದು ಕೆಲವು ಗದ್ದೆಗಳಲ್ಲಿ ಒಂದು ಅಡಿಯಷ್ಟು ನೀರು ನಿಂತಿರುತ್ತಿತ್ತು. ಮಾರನೇ ದಿನದ ಬಿಸಿಲಿಗೆ ಆ ನೀರು ಬಿಸಿಯಾಗಿರುತ್ತಿತ್ತು. ನಾವು ಬಟ್ಟೆ ಬಿಚ್ಚಿ ಯಾವ ಮುಲಾಜೂ ಇಲ್ಲದೆ, ಆ ಬಿಸಿನೀರಿನಲ್ಲಿ ಹಂದಿಗಳು ಕೆಸರಿನಲ್ಲಿ ಬಿದ್ದು ಹೊರಳಾಡುವಂತೆ ಹೊರಳಾಡುತ್ತಿದ್ದೆವು. ಆ ರಜೆಯಲ್ಲಿ ಮಲೆನಾಡಿನ ನೂರಾರು ಸಸ್ಯ, ಬೀಳು, ಬಳ್ಳಿ, ಗಿಡ, ಮರ, ವಿವಿಧ ಜಾತಿಯ ಹಣ್ಣುಗಳು, ವಿವಿಧ ಜಾತಿಯ ಮಾವು ಹಾಗೂ ಹಲಸಿನ ಹಣ್ಣುಗಳು, ವಿವಿಧ ರೀತಿಯ ಹಕ್ಕಿಗಳು, ಅವು ಗೂಡು ಕಟ್ಟುವ ರೀತಿಗಳು, ಮರಿಗಳನ್ನು ಆರೈಕೆ ಮಾಡುವ ಕ್ರಮ, ಏಡಿ, ಮೀನು, ನೂರಾರು ಬಗೆಯ ಹುಳಹುಪ್ಪಟೆಗಳು, ಗದ್ದೆಯಲ್ಲಿ ಹಾಗೂ ಕಾಡಿನಲ್ಲಿ ಬೆಳೆಯುತ್ತಿದ್ದ ಹತ್ತಾರು ರೀತಿಯ ಸೊಪ್ಪುಗಳು ನಮ್ಮ ಅರಿವಿನ ಮತ್ತು ಅನುಭವದ ಭಾಗವಾಗುತ್ತಿದ್ದವು.

ಕೆಲವೊಮ್ಮೆ ಕೋಲುಜೇನು, ಸಿಬ್ಬಲುಜೇನು ಕಂಡರೆ ಅದು ನಮ್ಮ ಹಕ್ಕೆಂಬಂತೆ ಕಿತ್ತು ತಿನ್ನುತ್ತಿದ್ದೆವು. ಕೆಲವು ಹಕ್ಕಿಗಳ ಗೂಡಲ್ಲಿ ನಮಗೆ ಮೊಟ್ಟೆ ಕಂಡರೆ, ಅವನ್ನು ತಗೊಂಡು, ಸೆಗಣಿ ಉಂಡೆ ಮಾಡಿ, ಅದರೊಳಗೆ ಆ ಮೊಟ್ಟೆಯಿಟ್ಟು, ಬೆಂಕಿಯಲ್ಲಿ ಸುಟ್ಟು ಮೊಟ್ಟೆ ತಿನ್ನುತ್ತಿದ್ದೆವು. ಆಹಾ, ಅದೆಂತಹ ರುಚಿ! ಅದೆಂತಹ ಸೊಗಸು! ಆಧುನಿಕ ಮೆನುವಿನಲ್ಲಿ ಇದು ಸಾಧ್ಯವಿಲ್ಲದ ಕೆಲಸ. ಬೆಳಿಗ್ಗೆಯಿಂದ ಸಂಜೆಯವರೆಗೆ ದನ ಮೇಯಿಸುವುದು ಕೆಲಸದ ಕಾಲು ಭಾಗವಾಗಿತ್ತು. ಉಳಿದುದು ನಿಸರ್ಗದೊಂದಿಗೆ ನಮ್ಮ ಭಾವನಾತ್ಮಕ, ಪ್ರೀತಿಯ, ಸಂತೋಷದ
ಒಡನಾಟ. ಅದರಿಂದ ಬಿಡಿಸಿಕೊಳ್ಳುವುದು ಸುಲಭವಾಗಿರಲಿಲ್ಲ.

ಕಾಲ ಹೀಗೆ ನಿಸರ್ಗದೊಂದಿಗಿನ ಸಂತೋಷದ ಒಡನಾಟದಲ್ಲಿ ಕಳೆಯುತ್ತಿರುವಾಗ, ಮೇ 22 ನಮಗೆ ಯಾವ ಸೂಚನೆಯನ್ನೂ ಕೊಡದೆ ಬಂದೇಬಿಡುತ್ತಿತ್ತು. ಅಯ್ಯೊ, ಅದರ ಸಮಸ್ಯೆ, ಅದರ ಸಂಕಟ, ಆ ವ್ಯಥೆ, ಆ ದುಃಖ! ಪದಗಳಿಲ್ಲ. ಸ್ಲೇಟು, ಪುಸ್ತಕ, ಎಕ್ಸೈಜ್, ಜಾಮಿಟ್ರಿ ಬಾಕ್ಸ್, ಛತ್ರಿ (ಯೂನಿಫಾರಮ್, ಶೂ, ಸಾಕ್ಸ್, ಟೈ, ಸ್ಕೂಲ್ ಬ್ಯಾಗ್, ಕ್ಯಾರಿಯರ್ ಬ್ಯಾಗ್ ಇವು ಆಗ ಉದಯಿಸಿರಲಿಲ್ಲ) ಇವನ್ನು ತರಲು ಪೋಷಕರು ಕಷ್ಟಪಡುತ್ತಿದ್ದರು. ಆದರೆ, ದುಃಖಪಡುತ್ತಿರಲಿಲ್ಲ. ನಾವು ಕಷ್ಟಪಡುತ್ತಿರಲಿಲ್ಲ. ಆದರೆ, ದುಃಖಪಡುತ್ತಿದ್ದೆವು. ರಜೆಯಲ್ಲಿ ನಾವು ತಿಂದ ಹಲಸಿನಕಾಯಿಯ ಮೇಣ, ಮಾವಿನ ಸೊನಗು, ಇನ್ನಿತರೆ ಪದಾರ್ಥಗಳೊಂದಿಗೆ ಬೆವರು ಸೇರಿ ನಮಗಿದ್ದ ಒಂದೇ ಒಂದು ಜೊತೆ ಬಟ್ಟೆಯನ್ನು ಕಳಾಹೀನ ಮಾಡಿರುತ್ತಿದ್ದವು. ಅವುಗಳ ಮೂತಿಮುಸುಡಿ ಅಡಿಗೆಮನೆಯ ಮಸಿಬಟ್ಟೆಯನ್ನೂ ಮೀರಿಸುವಂತೆ ಆಗಿರುತ್ತಿತ್ತು. ಮಾವಿನ ಸೊನಗು, ಹಲಸಿನ ಮೇಣ ಜೊತೆಗೆ ಹದವಾದ ಸಿಂಬಳ ಹತ್ತಿದ್ದ ಜಾಗವನ್ನು ಬೆರಳಿನಿಂದ ಮಿಡಿದರೆ ಲಟ್ ಲಟ್ ಎಂದು ಶಬ್ದ ಬರುತ್ತಿತ್ತು.

ಬಟ್ಟೆ ಕೆಲವು ಕಡೆ ಹರಿದುಹೋಗಿರುತ್ತಿದ್ದವು. ಸ್ಕೂಲಿಗೆ ಹೋಗಲು ಇಂತಹ ಬಟ್ಟೆಗಳನ್ನು ತೊಳೆದು ಅವಕ್ಕೆ ಮರುಜನ್ಮ ಕೊಡಬೇಕಿತ್ತು. ಈ ಸಂಕಟವನ್ನು ಎದುರಿಸಲಾರದೆ ‘ಬಟ್ಟೆಯೇ ಇಲ್ಲದಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅನಿಸಿದ್ದೂ ಉಂಟು. ಆಗ ತರಾವರಿ ಬಟ್ಟೆ ಸೋಪು, ಮೈಸೋಪು ನಮ್ಮ ಹಳ್ಳಿಗೆ ಬಂದಿರಲಿಲ್ಲ. ಇದ್ದುದು ಒಂದೇ ಒಂದು; ಅದು 501 ಸಾಬೂನು. ಅದೇ ಬಟ್ಟೆಸೋಪೂ, ಮೈಸೋಪೂ ಆಗಿತ್ತು. ಅದನ್ನು ಕೊಳ್ಳಲು ಕೂಡಾ ಸ್ವಲ್ಪ ಆರ್ಥಿಕ ಸಾಮರ್ಥ್ಯ ಬೇಕಿತ್ತು. ಉಳಿದವರಿಗೆ ಸೀಗೇಕಾಯಿ ಮತ್ತು ಅಂಟುವಾಳಕಾಯಿ. ಇವುಗಳಿಂದ ಮಾತ್ರ ನಮ್ಮ ಕೊಳಕು ಬಟ್ಟೆಯನ್ನು ಕ್ಲೀನ್ ಮಾಡಲು ಆಗುತ್ತಿರಲಿಲ್ಲ.

ಮೇ 22 ಬಂದುದು ನಮ್ಮ ಪೋಷಕರಿಗೆ ಕಷ್ಟವೆನಿಸಿದರೆ; ನಮಗೆ ತೀವ್ರ ಸಂಕಟವಾಗುತ್ತಿತ್ತು. ಆರಂಭದ ಕೆಲವು ದಿನಗಳಲ್ಲಿ ಕಣ್ಣೀರು ಹಾಕಿಕೊಂಡು ಸ್ಕೂಲಿಗೆ ಹೋಗಿದ್ದೂ ಉಂಟು. ಸ್ಕೂಲಿಗೆ ಹೋಗಿಬರುವಾಗ ನಾವು ಆಡಿ ಕುಣಿದ ಗದ್ದೆಗಳಲ್ಲೇ ಹೋಗಬೇಕಿತ್ತು. ಆಗ ಗದ್ದೆಗಳು ‘ನಿನ್ನೆ ಮೊನ್ನೆ ಸಂತೋಷದಿಂದ ಕುಣಿದು ಕುಪ್ಪಳಿಸಿದಿರಿ, ಈಗ ಹ್ಯಾಗಾಯ್ತು?’ ಎಂದು ಗೇಲಿಮಾಡಿ ನಗುತ್ತಿರುವಂತೆ ಭಾಸವಾಗುತ್ತಿತ್ತು. ನಾವು ಮೇಯಿಸುತ್ತಿದ್ದ ದನಗಳು ‘ಇನ್ನು ನಮ್ಮನ್ನು ಕಂಟ್ರೋಲ್ ಮಾಡಲು ನೀವು ಒಂದು ವರ್ಷದ ನಂತರ ಬರಬೇಕು, ಗೊತ್ತಾಯ್ತಾ?’ ಎಂದು ಅಣಕಿಸುತ್ತಿರುವಂತೆ ಅನಿಸುತ್ತಿತ್ತು.

ನಮ್ಮ ಜೊತೆಯಲ್ಲೆ ಹಾಡಿಕುಣಿದ ಕೆಲವರು ಸ್ಕೂಲಿನಿಂದ ವಿ.ಆರ್.ಎಸ್. ತೆಗೆದುಕೊಂಡಿರುತ್ತಿದ್ದರು. ಅವರ ಮುಕ್ತ ಚಟುವಟಿಕೆಗಳ ಸುಖವನ್ನು ನೋಡಿ ನಮಗೆ ಕಣ್ಣೀರು ಬರುತ್ತಿತ್ತು. ಆ ಸುಖವನ್ನು ಬೆಂಬಲಿಸಿ, ‘ನಿನ್ನ ಜೊತೆಗೆ ನಾವಿದ್ದೀವಿ’ ಎಂದುಕೊಂಡ ಕೆಲವರು ತಾವೂ ವಿ.ಆರ್.ಎಸ್. ತೆಗೆದುಕೊಳ್ಳುತ್ತಿದ್ದುದೂ ಇತ್ತು. ಬೇಸಿಗೆ ರಜೆಯ ಬಯಲಿನ ಮುಕ್ತಬದುಕು ಮತ್ತು ಸ್ಕೂಲೆಂಬ ಆಲಯದ ಬಿಗಿಹಿಡಿತದ ಬದುಕುಗಳ ನಡುವೆ ಮೇ 22ರಂದು ಅತ್ಯಂತ ಉಗ್ರವಾದ, ಕ್ರೂರವಾದ ಯುದ್ಧವೇ ನಡೆಯುತ್ತಿತ್ತು. ಅಂದು ಸ್ಕೂಲಿಗೆ ಹೋಗಲು ಮೈ, ಮನ ಭಾರವೆನಿಸುತ್ತಿತ್ತು. ಒಂದೊಂದು ಹೆಜ್ಜೆ ಇಡುವುದೂ ಕೂಡ ಯಾವುದೋ ಹಿಂಸಾತ್ಮಕ ನರಕಕ್ಕೆ ಹೋಗುತ್ತಿದ್ದೇವೆ ಎನಿಸುತ್ತಿತ್ತು.

ಈಚಿನ ದಿನಗಳಲ್ಲಿ ಮೊದಲ ಬಾರಿಗೆ ಹಾಸ್ಟೆಲ್ ಸೇರುವ ಕೆಲವು ವಿದ್ಯಾರ್ಥಿಗಳು ಮನೆಯನ್ನು ನೆನೆಸಿಕೊಂಡು ಹಿಂಸೆಪಡುತ್ತಾರೆ. ಅದಕ್ಕೆ ‘ಹೋಮ್‍ಸಿಕ್’ ಎಂದು ಕರೆಯುತ್ತಾರೆ. ಆದರೆ ನಮಗಾಗುತ್ತಿದ್ದ ಹಿಂಸೆಯನ್ನು ‘ಹೋಮ್‍ಸಿಕ್’ ಎನ್ನಲು ಬರುವುದಿಲ್ಲ. ಯಾಕೆಂದರೆ ನಾವು ಮನೆಯೊಳಗಿದ್ದು ಸಂತೋಷಪಟ್ಟವರಲ್ಲ. ಮನೆಯ ಹೊರಗಡೆ ದನ ಮೇಯಿಸಿಕೊಂಡು, ಹಣ್ಣು ಹಂಪಲು ತಿಂದುಕೊಂಡು ಬಯಲಲ್ಲಿ ಸಂತೋಷ ಕಂಡವರು. ಹಾಗಾಗಿ ಅದಕ್ಕೆ ‘ಬಯಲು ಸಿಕ್’ ಎನ್ನಬಹುದೇನೋ. ಅಂತೂ ಪ್ರತೀ ವರ್ಷ ಮೇ 22 ಬಂತೆಂದರೆ ಅದೇ ಕರಾಳ ನೆನಪುಗಳು ಬಂದು ಮುತ್ತಿಕೊಳ್ಳುತ್ತವೆ. ಅಥವಾ ನಾವೇ ಆ ನೆನಪುಗಳೊಂದಿಗೆ ಮುತ್ತಿಕೊಳ್ಳುತ್ತೇವೆ. ಕಾಲ ಸಂದು ಎಷ್ಟೋ ವರ್ಷಗಳಾಗಿರಬಹುದು. ಆದರೆ, ಮೇ 22 ಮಾತ್ರ ನಮ್ಮ ನರನಾಡಿಗಳಲ್ಲಿ ನಮ್ಮ ಪ್ರಜ್ಞೆಯನ್ನೂ ಮೀರಿ ಭಯ ಹುಟ್ಟಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.