ADVERTISEMENT

ಶಾಲೆ: ವ್ಯಕ್ತಿತ್ವ ರೂಪಿಸುವ ವರ್ಕ್‌ಶಾಪ್‌

ಸತ್ಯಬೋಧ, ಬೆಂಗಳೂರು
Published 4 ಆಗಸ್ಟ್ 2018, 19:30 IST
Last Updated 4 ಆಗಸ್ಟ್ 2018, 19:30 IST
ಚಿತ್ರ: ವಿಜಯ ಕುಮಾರಿ ಆರ್‌.
ಚಿತ್ರ: ವಿಜಯ ಕುಮಾರಿ ಆರ್‌.   

ರಿಸರ್ವ್ ಬ್ಯಾಂಕಿನಲ್ಲಿ ಫಿಲ್ಡ್ ಇನ್‌ವೆಸ್ಟಿಗೇಟರ್ ಆಗಿ ನೇಮಕಗೊಂಡಿದ್ದೆ. ರಾಜ್ಯದ ಕೆಲವು ಜಿಲ್ಲೆಗಳನ್ನು ಆಯ್ದು, ಆ ಪ್ರತಿ ಜಿಲ್ಲೆಯಲ್ಲಿ ಎರಡು ಹಳ್ಳಿಗಳನ್ನು ಆಗಿ ಆಯ್ದು, ಅವುಗಳಲ್ಲಿ ನಲವತ್ತು ಮನೆಗಳನ್ನು ಆಯ್ದು ಪ್ರತಿ ಮನೆಗೂ ಮೂವತ್ತು ಪುಟದ ಅಚ್ಚಾದ ಫಾರಂಗಳಲ್ಲಿ ಮಾಹಿತಿ ಸಂಗ್ರಹಿಸುವ ಗ್ರಾಮೀಣ ಸ್ಥಿತಿ ಗತಿ ಅಧ್ಯಯನ ಮಾಡುವುದು ರಿಸರ್ವ್ ಬ್ಯಾಂಕ್ ಯೋಜನೆ ಆಗಿತ್ತು... ಪ್ರತಿ ಗ್ರಾಮದಲ್ಲಿ ಈ ಮಾಹಿತಿ ಸಂಗ್ರಹ ಕರ್ತವ್ಯ ನಿರ್ವಹಣೆಗೆ ಹದಿನೈದು ದಿನ ನಿಗದಿ ಆಗಿತ್ತು.

ನಾನು ಹೋಗಿದ್ದು ಕುಷ್ಟಗಿ ತಾಲೂಕಿನ ಕೋನಾಪುರ ಗ್ರಾಮ. ಕುಷ್ಟಗಿಯಲ್ಲಿ ವಾಸ್ತವ್ಯ ಹೂಡಿ ದಿನವೂ ಆ ಹಳ್ಳಿಗೆ ಹೋಗಿ ಬರುಲು ಬಸ್ ಸಂಚಾರ ಇರಲಿಲ್ಲ. ವಾಸ್ತವ್ಯ ಊಟ ವಸತಿ ಹೇಗೆ ಎಂದು ಯೋಚಿಸುತ್ತಿರುವಾಗ ಆ ಹಳ್ಳಿಯ ಗೌಡರು ತುಂಬ ಸಹಕಾರ ನೀಡಿದರು. ಗುಡಿಯಲ್ಲಿಯೇ ವಾಸ್ತವ್ಯಕ್ಕೆ ಮತ್ತು ತಮ್ಮ ಮನೆಯಿಂದಲೇ ಕಾಫಿ ತಿಂಡಿ ಊಟಕ್ಕೆ ವ್ಯವಸ್ಥೆ ಮಾಡಿದರು. ಅದಕ್ಕೇನಾದರೂ ಹಣ ಕೊಡುವುದು ಅನಾಗರಿಕವಾಗಿ ಕಂಡಿತು. ಆದರೆ ನಿಯಮದಂತೆ ಹದಿನೈದು ದಿನ ಅವರ ಹಂಗಿನಲ್ಲಿ ಇರಲು ಸಂಕೋಚವಾಗಿ ಇಡೀ ಗ್ರಾಮ ಮಾಹಿತಿ ಸಂಗ್ರಹವನ್ನು ಒಂದು ವಾರದಲ್ಲಿ ಮುಗಿಸಿ ನನ್ನ ಊರಿಗೆ ಹೋಗಿ ಒಂದು ವಾರದ ನಂತರ ಮೇಲಧಿಕಾರಿಗೆ ಮಾಹಿತಿಯ ರೆಕಾರ್ಡ್ ತಲುಪಿಸಲು ಗುಲ್ಬರ್ಗಾಕ್ಕೆ ಹೋದೆ. ನನ್ನ ಮೇಲಧಿಕಾರಿ ‘ಬೆಂಗಳೂರಿನಿಂದ ವಲಯಾಧಿಕಾರಿ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ.ಅವರು ಕೋನಾಪುರ ಹಳ್ಳಿಗೆ ಸರ್ಪೈಸ್‌ ಇನ್‌ಸ್ಪೆಕ್ಷನ್‌ಗೆ ಹೋಗಿದ್ದರು. ಶೆಡ್ಯೂಲ್ ಪ್ರಕಾರ ನೀವು ಅಲ್ಲಿ ಇರದಿದ್ದರಿಂದ ಅಪ್‌ಸೆಟ್‌ ಆಗಿದ್ದಾರೆ. ಅವರನ್ನು ತಕ್ಷಣವೇ ಭೇಟಿ ಅಗಿ ವಿವರಣೆ ಕೊಡಿ’ ಎಂದು ನನ್ನ ಮೇಲಧಿಕಾರಿ ಹೇಳಿದರು.

ಇದು ತುಂಬ ಅನಿರೀಕ್ಷಿತ. ಒಂದು ರೀತಿ ಆತಂಕ. ಅವರು ವಾಸ್ತವ್ಯ ಹೂಡಿದ ಅತಿಥಿಗೃಹಕ್ಕೆ ರೆಕಾರ್ಡ್ ಸಹಿತ ಹೋದೆ. ಅವರು ಫೈಲ್ ಮೇಲೆ ಕಣ್ಣಾಡಿಸುತ್ತಾ ಕುಳಿತಿದ್ದರು. ಅವರು ನೋಡಿದ ರೀತಿಯಿಂದಲೇ ನನ್ನ ವಿಷಯದಲ್ಲಿ ತುಂಬ ಗರಂ ಆಗಿರುವುದು ಸುಲಭವಾಗಿ ಊಹಿಸಿದೆ. ಕುಳಿತುಕೊಳ್ಳಲೂ ಹೇಳಲಿಲ್ಲ. ತುಂಬ ಗಂಭೀರವಾಗಿದ್ದರು.

ADVERTISEMENT

ನನ್ನ ಕಾರ್ಯಕ್ರಮದಂತೆ ಕೋನಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತ ಇರಬೇಕಾದ ದಿನದಲ್ಲಿ ನನ್ನ ಕಾರ್ಯವೈಖರಿಯ ಸ್ಪಾಟ್ ಇನ್‌ಸ್ಪೆಕ್ಷನ್‌ಗೆ ಅವರು ನೇರವಾಗಿ ಆ ಹಳ್ಳಿಗೆ ಹೋಗಿದ್ದರು. ಅಲ್ಲಿ ನಾನು ಇಲ್ಲದ್ದು ಅವರಿಗೆ ಭಯಂಕರ ಕೋಪ ತರಿಸಿತ್ತು.

‘ಇದೇನಾ ನಿಮ್ಮ ಡ್ಯೂಟಿ’ ಎಂದು ರೇಗಿದರು. ‘ಹದಿನೈದು ದಿನ ಅಲ್ಲಿ ಇದ್ದು ಕರ್ತವ್ಯ ನಿರ್ವಹಿಸಬೇಕಾಗಿತ್ತು. ಕೇವಲ ಒಂದು ವಾರ ಡ್ಯೂಟಿ ಮಾಡಿದೀರಿ’ ಒಂದು ವಾರದ ವೇತನ ಕಡಿತ ಮಾಡಿ ಅನಧಿಕೃತ ಗೈರುಹಾಜರಿಗಾಗಿ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದೂ ಹೇಳಿದರು.

ನನ್ನದು ತಪ್ಪಾಗಿತ್ತು. ಆದರೂ ಅವರು ಮಾತಾಡಿದ ರೀತಿ ಕೋಪ ತಾಪ ನನ್ನ ಸ್ವಾಭಿಮಾನಕ್ಕೆ ಚುಚ್ಚಿತ್ತು. ನಾನು ಒಬ್ಬ ಫಸ್ಟ್ ಕ್ಲಾಸ್ ಗ್ರಾಜುಯೇಟ್. ಸ್ವಾಭಿಮಾನ ತುಂಬಿ ತುಳುಕಿತ್ತು. ಈ ಕೆಲಸ ಹೋದರೆ ಮತ್ತೊಂದು. ಏನೇ ಬಂದರೂ ಎದುರಿಸಲು ಸಿದ್ಧನಾಗಿ ಕಠಿಣವಾಗಿ ಉತ್ತರಿಸಬೇಕು.‘ಸ್ವಲ್ಪವೂ ವಿವರಣೆ ಕೇಳದೆ ಈ ರೀತಿ ಜಡ್ಜ್‌ಮೆಂಟ್‌ ಕೋಡೋದು ಸರೀನಾ?’ ಎಂದು ಗಟ್ಟಿಸಿ ಕೇಳಬೇಕೆಂದಿದ್ದೆ. ಆದರೆ...

ಹೈಸ್ಕೂಲಿನಲ್ಲಿ ನಮ್ಮ ಸುಂದರೇಶ ಭಟ್ ಮೇಷ್ಟ್ರು ಹೇಳುತ್ತಿದ್ದ ಹಿತನುಡಿಗಳು ನೆನಪಿಗೆ ಬಂದು ಸಂಯಮ ತಾಳಿದೆ. ಇಲ್ಲದಿದ್ದರೆ ಏನಾಗಿರುತ್ತಿತ್ತೋ.

ಅಂದು ಶಾಲೆಗಳು ಎಂದರೆ ಅದೊಂದು ವ್ಯಕ್ತಿತ್ವ ರೂಪಿಸುವ ವರ್ಕ್ ಶಾಪ್ ಇದ್ದಂತೆ... ಹೊಸಪೇಟೆಯ ಮುನಿಸಿಪಲ್ ಶಾಲೆಯಲ್ಲಿ ಸುಂದರೇಶ್ ಭಟ್ ಅವರು ವಿಜ್ಞಾನ ಮತ್ತು ಇಂಗ್ಲಿಷ್‌ ಮೇಷ್ಟ್ರು. ಪಾಠದ ಮಧ್ಯ ಹುಡುಗರು ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬ ನಡೆನುಡಿಯನ್ನೂ ಅದೊಂದು ಪಾಠ ಎನ್ನುವಂತೆ ಕಲಿಸಿದವರು. ‘ಹಿರಿಯರ ಜೊತೆ ವಾದಕ್ಕೆ ಇಳಿಯಬೇಡಿ. ಸರಿ ಇದ್ದರೂ ನೀವೇ ತಗ್ಗಿ ಬಗ್ಗಿ ನಡೆಯುವುದರಿಂದ ಹಿರಿಯರ ಪ್ರೀತಿ ವಿಶ್ವಾಸ ಗಳಿಸುತ್ತೀರಿ’ ಎಂದೆಲ್ಲ ಹೇಳುತ್ತಿದ್ದರು. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ ಸುಪ್ತಮನಸ್ಸಿನಲ್ಲಿ ದಾಖಲೆಯಾಗಿತ್ತು.

ಈಗ ಸುಪ್ತಮನಸ್ಸಿನಲ್ಲಿಅಡಗಿದ್ದ ಹಿತೋಪದೇಶದ ಮಾತು ನೆನಪಾಗಿ ಸಹಸಿಕೊಂಡು ನಿಲ್ಲುವಂತೆ ಮಾಡಿತು. ಜಡವಾಗಿ ನಿಂತೆ. ಪ್ರತಿಹೇಳದೆ ವಾದಿಸದೆ ನಾನು ತಂದ ಮಾಹಿತಿ ಸಂಗ್ರಹದ ರಿಪೋರ್ಟ್ ತೆಗೆದು ಅವರ ಮುಂದೆ ಇಟ್ಟು ಕೈ ಕಟ್ಟಿ ನಿಂತೆ. ಕೋಪದಲ್ಲಿಯೇ ಎತ್ತಿಕೊಂಡು ಅವರು ಅದರತ್ತ ದೃಷ್ಟಿ ಹರಿಸಿದರು. ಒಂದೊಂದೇ ಪುಟ ತಿರುವುತ್ತ ಅವಲೋಕಿಸುತ್ತಿದ್ದಂತೆ ಅವರ ಮುಖದ ಬಿಗಿ ತಗ್ಗಿತು, ಪ್ರಸನ್ನತೆ ಕಂಡಿತು. ‘ಪರವಾಗಿಲ್ಲ. ಎಲ್ಲ ವಿಷಯ ಸಂಗ್ರಹಿಸಿದ್ದೀರಿ’ ಎಂದರು.

ನಾನು ಹಳ್ಳಿಯಲ್ಲಿಯೇ ಹುಟ್ಟು ಬೆಳೆದಿದ್ದರಿಂದ ಹಳ್ಳಿ ಜೀವನದ ವಿವರ ಚೆನ್ನಾಗಿ ತಿಳಿದಿತ್ತು. ಮಾಹಿತಿ ಸಂಗ್ರಹದ ಪ್ರತಿ ಕಾಲಮ್ಮನ್ನು ಅತ್ಯಂತ ಸೂಕ್ತವಾಗಿ ವಿಷಯ ಸಂಗ್ರಹಿಸಿ ತುಂಬಿದ್ದೆ. ನನ್ನದು ಅತಿ ಫರ್ಪೆಕ್ಟ್‌ ಕೆಲಸವಾಗಿತ್ತು. ನನ್ನ ಸಹೋದ್ಯೋಗಿಗಳು ನಗರವಾಸಿಗಳಾಗಿದ್ದರಿಂದ ಹಳ್ಳಿಯ ಬದುಕಿನ ಪರಿಚಯವಿಲ್ಲದೆ ಅನೇಕ ಕಾಲಮ್‌ ಅನ್ನು ತಪ್ಪು ತಪ್ಪಾಗಿ ತುಂಬಿ ಆಭಾಸ ಮಾಡಿದ್ದರು. ಇಂತಹ ಅಸಮರ್ಪಕ ಮಾಹಿತಿಸಂಗ್ರಹ ನೋಡಿ ಬೇಸತ್ತಿದ್ದ ಅವರಿಗೆ ನನ್ನ ಅಪರೂಪದ ಅಚ್ಚುಕಟ್ಟು ಕೆಲಸ ನಿರೀಕ್ಷೆಗೂ ಮೀರಿ ತೃಪ್ತಿ ತಂದಿದ್ದು ಮುಖದಲ್ಲಿ ಎದ್ದು ಕಂಡಿತು. ಈಗ ಮೃದುವಾಗಿ ‘ನಿಮ್ಮ ಊರು ಯಾವುದು?’ ಎಂದು ಯೋಗಕ್ಷೇಮ ವಿಚಾರಿಸಿ ಮೆಚ್ಚುಗೆಯಿಂದ ‘ಅಚ್ಚುಕಟ್ಟಾಗಿ ಕೆಲಸ ಮಾಡಿದ್ದೀರಿ’ ಎಂದು ಪ್ರಶಂಸಿಸಿದರು.

ಈಗ ನನಗೆ ಹೋದ ಧೈರ್ಯ ಬಂದಂತಾಗಿ ಲವಲವಿಕೆ ಮೂಡಿ ವಿನಯದಿಂದ ‘ಸರ್ ಅದೊಂದು ಹಳ್ಳಿ. ನೀವೇ ನೋಡಿದಿರಲ್ಲ. ಗೌಡರು ಎಲ್ಲ ರೀತಿಯ ಅನುಕೂಲ ಮಾಡಿದ್ದರು. ನಾನೇನಾದರೂ ಹಣ ಕೊಡಲು ಹೋಗಿದ್ದರೆ ಏನಾಗಿರುತ್ತಿತ್ತೊ ಊಹಿಸಲಾರೆ. ಅದಕ್ಕೆ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿ ಎಲ್ಲ ಮಾಹಿತಿ ಸಂಗ್ರಹಿಸಿ ಒಂದು ವಾರದಲ್ಲೇ ಅಲ್ಲಿಂದ ಹೊರಟೆ’ ಎಂದೆಲ್ಲ ವಿವರಿಸಿ ‘ಸರ್ ಗೈರು ಹಾಜರಿ ಅಂತ ವೇತನ ಹಿಡಿದರೆ...’ ಎಂದು ಮಾತು ನಿಲ್ಲಿಸಿದೆ. ಅವರು ಪ್ರಸನ್ನರಾಗಿದ್ದರು. ‘ಓಕೆ, ಓಕೆ ಮಾಹಿತಿ ಸರಿಯಾಗಿ ಸಂಗ್ರಹಿಸಿದ್ದೀರಿ. ಗೌಡರೂ ಇದನ್ನೆಲ್ಲ ಹೇಳಿದ್ದರು. ಆದರೂ ರೂಲ್ಸ್ ಅಲಕ್ಷಿಸಬಾರದು. ಮುಂದೆ ಹೀಗೆ ಮಾಡಬೇಡಿ’ ಎಂದು ಹೇಳಿದರು ಈ ಪ್ರಕರಣ ಇಲ್ಲಿಗೆ ಮುಕ್ತಾಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.