ADVERTISEMENT

ಹಿನ್ನೋಟ-2020: ಹವ್ಯಾಸಗಳ ಹುಡುಕುತ್ತ...

ಸುಧಾ ಹೆಗಡೆ
Published 29 ಡಿಸೆಂಬರ್ 2020, 19:31 IST
Last Updated 29 ಡಿಸೆಂಬರ್ 2020, 19:31 IST
Beautiful woman in casual dress knitting a woolen wear.Beautiful Woman Knitting a Woolen Wear
Beautiful woman in casual dress knitting a woolen wear.Beautiful Woman Knitting a Woolen Wear   

ಈ ವರ್ಷ ಕೊರೊನಾದಿಂದಾಗಿ ಒಂದಿಷ್ಟು ಹಳೆಯ ಹಾಗೂ ಹೊಸ ಹವ್ಯಾಸಗಳು ಮುಂಚೂಣಿಗೆ ಬಂದವು. ಜನ ದುಗುಡ ಮರೆಯಲು, ಸಮಯ ಕಳೆಯಲು ಹವ್ಯಾಸಗಳ ಮೊರೆ ಹೊಕ್ಕರು.

2020 ಮುಗಿಯುತ್ತ ಬಂದಿದೆ. ಹಿಂದೊಮ್ಮೆ ತಿರುಗಿ ನೋಡಿದರೆ ಕಳೆದ ವರ್ಷದ ಕ್ಯಾನ್‌ವಾಸ್‌ ಮೇಲೆ ನೆನಪುಗಳ ಬಣ್ಣ ಕಲೆಸಿಕೊಂಡು ಅಮೂರ್ತ ಚಿತ್ರಣ ಮೂಡಿಬಿಡುತ್ತದೆ. ಗಾಢ ಮೌನ ಹೊದ್ದ ಬೀದಿಗಳು, ಮನೆಯೊಳಗೆ ಕುಟುಂಬ ಸದಸ್ಯರ ಮಾತಿನ ಕಲರವವಿದ್ದರೂ ಕಣ್ಣುಗಳಲ್ಲಿ ಹೊರಳುವ ಆತಂಕ, ಮುಗಿಯದ ದೀರ್ಘ ಹಗಲು, ರಾತ್ರಿ ಫಳಕ್ಕನೆ ಮಿಂಚಿನಂತೆ ಎರಗುವ ಭವಿಷ್ಯದ ಅನಿಶ್ಚಿತತೆ ಹಲವರನ್ನು ಕಾಡಿಸಿದ್ದು ಅದೇ ಲಾಕ್‌ಡೌನ್‌. ಲಾಕ್‌ಡೌನ್‌ ಸಡಿಲವಾದ ನಂತರ ಮೈಮನ ಕೊಂಚ ಹಗುರವಾದರೂ ಕೊನೆಯೇ ಇಲ್ಲದಂತಹ ಹಗಲಿಗೆ ಸಾಥ್‌ ಕೊಡಲು ಹಲವರು ಹವ್ಯಾಸಗಳನ್ನು ಕೈಗೆತ್ತಿಕೊಂಡರು. ಹೊಸತೋ, ನೆನಪಿನ ಗಂಟಿನಿಂದ ಹೊರ ತೆಗೆದ ಹಳೆಯದೋ.. ಒಟ್ಟಿನಲ್ಲಿ ಅಲೆಯುವ ಮನಸ್ಸನ್ನು ಕಟ್ಟಿಹಾಕಿ ತಮ್ಮಷ್ಟಕ್ಕೇ ಸಾಂತ್ವನವನ್ನು ಪಿಸುನುಡಿಯಲ್ಲಿ ಹೇಳುವ ಹವ್ಯಾಸಗಳು ಚಿಗಿತುಗೊಂಡವು.

ಲಾಕ್‌ಡೌನ್‌ ಸಂದರ್ಭದಲ್ಲಿ ಶೇ 35ರಷ್ಟು ಮಂದಿ ಹಳೆಯ ಹವ್ಯಾಸಗಳಿಗೆ ಮರುಜೀವ ನೀಡಿದರೆ, ಶೇ 25ರಷ್ಟು ಜನ ಹೊಸದಕ್ಕೆ ಕೈ ಹಾಕಿದರು ಎನ್ನುತ್ತದೆ ಸಮೀಕ್ಷೆಯೊಂದು. ಮನಸ್ಸಿನೊಳಗೆ ಸಕಾರಾತ್ಮಕ ಭಾವನೆಯ ಬೀಜ ಬಿತ್ತಿ ಒಂದಿಷ್ಟು ನಿರಾಳತೆ ಮೂಡಿಸಿದ್ದು ಇವೇ ಹವ್ಯಾಸಗಳು.

ADVERTISEMENT

ಬ್ರೆಡ್‌ ತಯಾರಿಕೆ

ಈ ಮೊದಲು ಕೆಲಸದಲ್ಲಿ ಕಂಡುಕೊಂಡಿದ್ದ ದೈಹಿಕ ಹಾಗೂ ಮಾನಸಿಕ ಪ್ರೇರಣೆಯು ಸೋಂಕು ಶುರುವಾದಾಗ ಹವ್ಯಾಸದತ್ತ ಮುಖ ಮಾಡಿತು. ಮೊದಲಿಗೆ ಮಹಿಳೆಯರು ಬ್ರೆಡ್‌ ಮಾಡುವುದರಲ್ಲಿ ಒಂದಿಷ್ಟು ಮಾನಸಿಕ ನೆಮ್ಮದಿ ಕಂಡುಕೊಂಡರು. ಬ್ರೆಡ್‌ ಮಾಡುವುದೆಂದರೆ ನಮ್ಮ ಸಮಯವನ್ನು ವಿಪರೀತ ಬೇಡುತ್ತದೆ. ಆದರೆ ಲಾಕ್‌ಡೌನ್‌ ಎನ್ನುವುದು ಸಮಯವನ್ನು ಕಳೆಯುವುದು ಹೇಗೆ ಎಂಬ ಪ್ರಶ್ನೆಯನ್ನು ಜೊತೆಯಲ್ಲೇ ತಂದಿತ್ತಲ್ಲ.. ಹೀಗಾಗಿ ಸಿಕ್ಕ ದಂಡಿ ಸಮಯದಲ್ಲಿ ಯೀಸ್ಟ್‌ ಸೇರಿಸಿ ಹುಳಿ ಬರಿಸಿದ ಬ್ರಡ್‌, ಬನಾನಾ ಬ್ರೆಡ್‌.. ಹೀಗೆ ತರಹೇವಾರಿ ಬ್ರೆಡ್‌ ಓವೆನ್‌ನಲ್ಲಿ ಬೆಂದು ಕಿಚನ್‌ ಕೌಂಟರ್‌ ಮೇಲೆ ಕೂತವು.

ಬೆನ್ನ ಹಿಂದೆಯೇ ಕಿಚನ್‌ ಗಾರ್ಡನ್‌ನತ್ತ ಹೊರಳಿದರು ಜನ. ಬೀಜ, ಸಸಿಗಳನ್ನು ಸ್ನೇಹಿತರಿಂದ, ಬಂಧುಗಳಿಂದ ಸಂಪಾದಿಸಿ ಬಾಲ್ಕನಿಯಲ್ಲಿ, ಕಿಟಕಿಯ ದಂಡಿಗೆ ಮೇಲೆ, ಟೆರೇಸ್‌ ಮೇಲೆ... ಕೊನೆಗೆ ಮೆಟ್ಟಿಲ ಮೇಲೂ ಕುಂಡಗಳನ್ನಿಟ್ಟು ಬೆಳೆದರು. ಬೆಳೆದ ಕೊತ್ತಂಬರಿ ಕಟ್ಟನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಆನಂದಿಸಿದರು.

ಭಾಷೆ ಕಲಿಕೆ

ಇನ್ನೊಂದಿಷ್ಟು ಮಂದಿ ಹೊಸ ಭಾಷೆಯ ಕಲಿಕೆಗೆ ಉತ್ಸಾಹ ತೋರಿದರು. ವಿದೇಶಿ ಪ್ರವಾಸಕ್ಕಂತೂ ಕೊರೊನಾ ತೊಲಗಬೇಕು; ಅಲ್ಲಿಯವರೆಗೆ ಉಳಿದ ತಯಾರಿ ನಡೆಸುವ ಎಂದು ಆನ್‌ಲೈನ್‌ನಲ್ಲಿ ವಿದೇಶಿ ಭಾಷೆಗಳ ಕಲಿಕೆಯ ಸುಗ್ಗಿ ನಡೆಯಿತು. ವಾಟ್ಸ್‌ಆ್ಯಪ್‌ನಲ್ಲಿ ಒಂದಿಷ್ಟು ವಿದೇಶಿ ಭಾಷೆಯ ಶಬ್ದಗಳನ್ನು ಟೈಪಿಸಿ ಸ್ನೇಹಿತರನ್ನು ಗೊಂದಲಕ್ಕೆ ಬೀಳಿಸಿ ಮಜಾ ತಗೊಂಡಿದ್ದಾಯಿತು.

ಜನಪ್ರಿಯವಾದ ನಿಟ್ಟಿಂಗ್‌, ಕ್ರೋಶಾ

ನಿಟ್ಟಿಂಗ್‌ ಅಥವಾ ಹೆಣಿಗೆಯೆಂಬುದು ಹಳೆಯ ಹವ್ಯಾಸ. ಉಣ್ಣೆದಾರವನ್ನು ಆನ್‌ಲೈನ್‌ನಲ್ಲಿ ತರಿಸಿಕೊಂಡು, ಯೂಟ್ಯೂಬ್‌ನಲ್ಲಿ ನೋಡಿಕೊಂಡು ಇಲ್ಲವೇ ಅಮ್ಮನಿಂದ, ಅಜ್ಜಿಯಿಂದ ಹೇಳಿಸಿಕೊಂಡು ಅಂಗೈ ಅಗಲದಷ್ಟು ಹೆಣಿಗೆ ಹಾಕಿ ಖುಷಿಪಟ್ಟರು. ಬಾಗಿಲ ತೋರಣ ಮಾಡಿ ನೇತು ಹಾಕಿದರು. ಇನ್ನು ಕೆಲವರು ಕ್ರೋಶಾ ಕಡ್ಡಿ ತೆಗೆದುಕೊಂಡು ಮಗಳಿಗೋ, ಆಕೆಯ ಬೊಂಬೆಗೋ ಫ್ರಾಕ್‌ ಹೆಣೆದು ತೊಡಿಸಿ ಆನಂದಿಸಿದರು.

ವಾಕಿಂಗ್‌ಗೆ ಹೊರಗೆ ಹೋಗಲು ಅವಕಾಶವಿಲ್ಲ ಎಂದು ವ್ಯಾಯಾಮ ಬಿಡಲಾದೀತೆ? ಯೋಗ, ಡಾನ್ಸ್‌ ಎಂದೆಲ್ಲ ಮನೆಯೊಳಗೇ ಮಾಡಿದ್ದಾಯಿತು. ಫೋಟೊಗ್ರಫಿಯೂ ಮುಂಚೂಣಿಗೆ ಬಂತು. ಬಾಲ್ಕನಿಯಲ್ಲಿ ನಿಂತು ಮೊಬೈಲ್‌ನಲ್ಲೇ ನಿರ್ಜನ ಬೀದಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದವರೆಷ್ಟೋ. ಆನ್‌ಲೈನ್‌ನಲ್ಲಿ ಒಂದಿಷ್ಟು ಸಂಗೀತ ಕಲಿತರು... ಬ್ಲಾಗ್‌ ಬರೆದರು...

ಆದರೆ ಕೊರೊನಾ ಕಡಿಮೆಯಾಗಿದೆ ಎಂಬ ಸುದ್ದಿ ಹರಿದಾಡತೊಡಗಿದಂತೆ ಈ ಹವ್ಯಾಸಗಳೂ ಕ್ರಮೇಣ ಮೂಲೆ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.