ADVERTISEMENT

ಮೊದಲ ಬರಹದ ಬೆಚ್ಚನೆಯ ನೆನಪು

ಪ್ರಜಾವಾಣಿ ವಿಶೇಷ
Published 14 ಜುಲೈ 2018, 19:30 IST
Last Updated 14 ಜುಲೈ 2018, 19:30 IST
ಡಾ.ಎಂ.ಎಸ್‌.ಆಶಾದೇವಿ
ಡಾ.ಎಂ.ಎಸ್‌.ಆಶಾದೇವಿ   

‘ಅಸ್ಮಿತೆ’ ನನಗೆ ಏಳನೇ ತರಗತಿಯಲ್ಲಿ ಇರುವಾಗಲೇ ಕಾಡಲು ಶುರುವಾಗಿತ್ತು. ಶಿಕ್ಷಣದ ಮೂಲಕವೇ ನನ್ನನ್ನು ನಾನು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಆಗ ಮಾತ್ರ ಸಾಮಾಜಿಕ ಮನ್ನಣೆ ದೊರಕುತ್ತದೆ ಎನ್ನುವುದು ಬಾಲ್ಯದಲ್ಲೇ ಚೆನ್ನಾಗಿ ಅರ್ಥವಾಗಿತ್ತು. ನಮ್ಮನ್ನು ಬರವಣಿಗೆಯ ಕಡಲಲ್ಲಿ ಈಜುವಂತೆ ಪ್ರೇರಣೆ ನೀಡಿದ್ದು ಆಗರ್ಭ ಬಡತನ!

ರವೀಂದ್ರನಾಥ ಟ್ಯಾಗೋರ್‌ ಆತ್ಮಕಥೆಯ ಒಂದು ಅಧ್ಯಾಯ ‘ನನ್ನ ಬಾಲ್ಯ’ ನಮಗೆ ಪಠ್ಯದಲ್ಲಿ ಇತ್ತು. ಅವರು ಶಾಲಾ ದಿನಗಳಲ್ಲೇ ಸಾಹಿತ್ಯ, ಚಿತ್ರ ಬಿಡಿಸುವುದರಲ್ಲಿ ಅವರು ತೊಡಗಿಕೊಂಡಿದ್ದರು. ಅವರು ಹುಟ್ಟು ಶ್ರೀಮಂತರಾಗಿದ್ದರು ಎನ್ನುವುದನ್ನು ಓದಿದ ಮೇಲೆ, ಅದು ನಮ್ಮ ಮೇಲೆ ಬಹಳ ಪ್ರಭಾವ ಬೀರಿತು. ಮೊದಲೇ ಹೇಳಿದಂತೆ ನಾನು ಹುಟ್ಟು ಬಡವ! ನಮ್ಮಿಬ್ಬರ ನಡುವೆ ಇಷ್ಟೇ ವ್ಯತ್ಯಾಸ ಎಂದುಕೊಂಡೆ. ನಮ್ಮ ಊರಿನ ಸಮೀಪದ ಹಾರೊಗೆರೆಯಲ್ಲಿ ಮೂರು ನಾಲ್ಕು ತಿಂಗಳ ಕಾಲ ಇರುತ್ತಿದ್ದ ಟೆಂಟ್‌ನಲ್ಲಿ ನೋಡಿದ್ದ ರಾಜ್‌ಕುಮಾರ್ ಅಭಿನಯದ ‘ಓಹಿಲೇಶ್ವರ’ ಸಿನಿಮಾದ ಒಂದು ಹಾಡು ‘ಈ ದೇಹದಿಂದ ದೂರವಾದೆ ಏಕೆ ಆತ್ಮನೆ’ ಮತ್ತು ಟ್ಯಾಗೋರ್‌ ಅವರ ‘ನನ್ನ ಬಾಲ್ಯ’ ನನ್ನಲ್ಲಿ ಬರವಣಿಗೆಯ ಬೀಜ ಬಿತ್ತಿದವು.

ಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದ ಗೆಳೆಯನೊಬ್ಬ ಇದ್ದಕ್ಕಿದ್ದಂತೆ ಶಾಲೆ ತೊರೆದ. ಆಗ ನನ್ನ ಗೆಳೆಯನ ಕುರಿತು ‘ಈ ಶಾಲೆಯಿಂದ ದೂರವಾದೆ ಏಕೆ ಗೆಳೆಯನೇ’ ಎನ್ನುವ ಪದ್ಯ ಬರೆದೆ. ಇದೇ ನಾನು ಬರೆದ ಮೊದಲ ಪದ್ಯ. ನಮ್ಮ ಕನ್ನಡ ಮೇಷ್ಟ್ರು ಟಿ.ವೈ. ನಾಗಭೂಷಣ ರಾವ್ ಅವರಿಗೆ ತೋರಿಸಿದೆ. ಅವರು ಮೆಚ್ಚುಗೆ ವ್ಯಕ್ತಪಡಿಸಿ, ಬರವಣಿಗೆ ಮುಂದುವರಿಸಲು ಪ್ರೋತ್ಸಾಹ ನೀಡಿದರು.

ADVERTISEMENT

ಎನ್. ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿಗಳನ್ನು ಚಿಕ್ಕಂದಿನಲ್ಲಿ ತಪ್ಪದೆ ಓದುತ್ತಿದ್ದೆ. ಪಾಕೆಟ್ ಬುಕ್ ಸರಣಿಯ ಪುಸ್ತಕಗಳಂತೆ ನೋಟ್ ಬುಕ್‌ ಕತ್ತರಿಸಿಟ್ಟುಕೊಂಡು, ಕಾದಂಬರಿ ಬರೆಯುವ ಪ್ರಯತ್ನ ನಡೆಸುತ್ತಿದ್ದೆ.

ಬಿ.ಎ. ಓದುವಷ್ಟರಲ್ಲಿ ನಿಜವಾದ ಸಾಹಿತ್ಯದ ಓದು ಮತ್ತು ಅಭಿರುಚಿ ಬೆಳೆಯಲಾರಂಭಿಸಿತು. ದ್ವಿತೀಯ ಬಿ.ಎ.ನಲ್ಲಿರುವಾಗ ಅಂತರ್ಜಾತಿ ವಿವಾಹ ಕುರಿತು ‘ಮುಳ್ಳು ಹಾದಿ’ ನಾಟಕ ಬರೆದಿದ್ದೆ. ನಾಟಕದ ಕೃತಿ ಬಿಡುಗಡೆ ದಿನವೇ ಆ ನಾಟಕ ಅಭಿನಯಿಸಿದೆವು. ಅದರಲ್ಲಿ ನಾನೇ ನಾಯಕನ ಪಾತ್ರದಲ್ಲಿದ್ದೆ. ಆ ನಾಟಕವನ್ನು ಹಲವು ಕಡೆಗಳಲ್ಲಿ ಹಲವು ಮಂದಿ ಪ್ರದರ್ಶಿಸಿದರು. ಸಮಾಜದಲ್ಲಿ ಬದಲಾವಣೆ ಬಯಸುವ ಮತ್ತು ಊಳಿಗಮಾನ್ಯ ವ್ಯವಸ್ಥೆ ವಿರೋಧಿಸುವ ಸಂದೇಶ ಒಳಗೊಂಡಿದ್ದ ಈ ನಾಟಕವನ್ನು ಆಗಿನ ಕಾಲಕ್ಕೆ ತುಮಕೂರಿನಲ್ಲಿ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಸಿ.ಎನ್. ಭಾಸ್ಕರಪ್ಪ ಅವರು ಸಂಸದರಾಗುವುದಕ್ಕೂ ಮೊದಲು ಅನೇಕ ಕಡೆ ಆಡಿದ್ದರು. ಇದು ಅಷ್ಟೇನೂ ಹೇಳಿಕೊಳ್ಳುವಂತಹ ನಾಟಕವಲ್ಲ ಎನ್ನುವುದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪುತ್ರ, ನಮಗೆ ಉಪನ್ಯಾಸಕರಾಗಿದ್ದ ಸೀತರಾಮ್ ಅದರಲ್ಲಿನ ದೋಷ ತೋರಿಸಿಕೊಟ್ಟ ಮೇಲಷ್ಟೇ ಗೊತ್ತಾಗಿದ್ದು. ಅವರು ಮಾಡಿದ ಪ್ರಾಮಾಣಿಕ ವಿಮರ್ಶೆಯೂ ಬರವಣಿಗೆ ಸುಧಾರಿಸಿಕೊಳ್ಳಲು ದಾರಿ ತೋರಿಸಿತು.

ಪ್ರೊ. ಬರಗೂರು ರಾಮಚಂದ್ರಪ್ಪ

‘ಮರಕುಟಿಗ’ ನನ್ನ ಮೊದಲ ಕವನ ಸಂಕಲ ಎಂದು ಗುರುತಿಸುತ್ತಾರೆ. ನಿಜವಾಗಿಯೂ ನನ್ನ ಮೊದಲ ಕವನ ಸಂಕಲನ 1967ರಲ್ಲಿ ಪ್ರಕಟವಾದ ‘ಕನಸಿನ ಕನ್ನಿಕೆ’. ಇದು ಎಲ್ಲಿ ಹುಡುಕಿದರೂ ಸಿಕ್ಕಿಲ್ಲ. ಹಸ್ತಪ್ರತಿಯೂ ಉಳಿದಿಲ್ಲ. ಮೊದಲ ಕಥಾ ಸಂಕಲನ ‘ಸುಂಟರ ಗಾಳಿ’.

ನಾಡಿಗೇರ್ ಕೃಷ್ಣರಾಯರ ಸಂಪಾದಕತ್ವದ ‘ಮಲ್ಲಿಗೆ’ ವಾರಪತ್ರಿಕೆಯಲ್ಲಿ ಬಂದ ‘ಸ್ಫೂರ್ತಿ ದೇವಿ’ ನನ್ನ ಮೊದಲ ಕಥೆ. ಜನಪ್ರಗತಿ ವಾರಪತ್ರಿಕೆಯಲ್ಲಿ ಬರೆದ ‘ಮೋಜಿನ ಮಹಾತ್ಮೆಗಳು’ ಮೊದಲ ವಿಡಂಬನಾ ಬರಹಗಳು. ಇವುಗಳನ್ನು ಧಾರಾವಾಹಿ ರೂಪದಲ್ಲಿ ಸರಣಿಯಾಗಿ ಪ್ರಕಟಿಸಿದರು. ‘ಪ್ರಜಾವಾಣಿ’, ‘ಸುಧಾ’ಕ್ಕೆ ಆರಂಭದಲ್ಲಿ ಬರೆದ ಅನೇಕ ಕಥೆಗಳು ಸೀದಾ ವಾಪಸ್ ಬರುತ್ತಿದ್ದವು. ಚೆನ್ನಾಗಿಲ್ಲದ ಕಥೆಗಳನ್ನು ಎಂ.ಬಿ.ಸಿಂಗ್ ಒಪ್ಪುತ್ತಿರಲಿಲ್ಲ. ಪ್ರಕಟಿಸುತ್ತಿರಲಿಲ್ಲ. ಹಠಕ್ಕೆ ಬಿದ್ದು ಬರೆದ ಮೇಲೆ ‘ಕಂದರ’ ಕಥೆ ‘ಸುಧಾ’ದಲ್ಲಿ ಪ್ರಕಟವಾಯಿತು. ನಂತರದಲ್ಲಿ ಎರಡು ತಿಂಗಳಿಗೊಮ್ಮೆ ‘ಪ್ರಜಾವಾಣಿ’ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಕಥೆಗಳು ಪ್ರಕಟವಾದವು.

1975ರಲ್ಲಿ ಬರೆದ ‘ಒಂದು ಊರಿನ ಕಥೆ’ ನೀಳ್ಗತೆ ‘ಕಸ್ತೂರಿ’ಯಲ್ಲಿ ಪ್ರಕಟವಾಗಿತ್ತು. ಇದನ್ನೇ ಸ್ವಲ್ಪ ವಿಸ್ತರಿಸಿ ಸಣ್ಣ ಕಾದಂಬರಿ ಮಾಡಿದೆ. 1978ರಲ್ಲಿ ಇದು ಸಿನಿಮಾ ಕೂಡ ಆಗಿ ತೆರೆಗೆ ಬಂತು. ಇದೇ ನನ್ನ ಮೊದಲ ಸಿನಿಮಾ ಕೂಡ. ಗೋಪಾಲಕೃಷ್ಣ ಅಡಿಗರು ಬೆಂಗಳೂರು ಬಿಟ್ಟು, ಶಿಮ್ಲಾಕ್ಕೆ ಹೋಗಿ ನೆಲೆಸಿದಾಗ ಅವರಿಗೆ ‘ಮರ ಕುಟಿಗ’ ಸಂಕಲನದ ಒಂದು ಪ್ರತಿ ಕಳುಹಿಸಿದ್ದೆ. ‘ಬೆಂಗಳೂರಿನಲ್ಲಿದ್ದು ನಿಮ್ಮಂತಹ ಕವಿಯನ್ನು ಪರಿಚಯಿಸಿಕೊಳ್ಳಲಿಲ್ಲವೆಂದು ವ್ಯಥೆಯಾಗುತ್ತಿದೆ’ ಎಂದು ಅಡಿಗರು ಪತ್ರ ಬರೆದರು. ಈಗಲೂ ಅದನ್ನು ಜೋಪಾನವಾಗಿಟ್ಟಿದ್ದೇನೆ.
ಪ್ರೊ. ಬರಗೂರು ರಾಮಚಂದ್ರಪ್ಪ

*****
ಸಾಹಿತ್ಯದ ಬರವಣಿಗೆ ಗೀಳು ಹತ್ತಿದ್ದು ಹೈಸ್ಕೂಲಿನಲ್ಲಿ ಇರುವಾಗ. ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ಪ್ರಕೃತಿ ಮತ್ತು ಅಮ್ಮನ ಕುರಿತು ಬರೆದಿದ್ದ ಮೊದಲ ಕವನವನ್ನು ಓದಿದ್ದ ನಮ್ಮ ಕನ್ನಡ ಉಪನ್ಯಾಸಕ ತುಮಕೂರಿನ ಡಾ. ಕವಿತಾಕೃಷ್ಣ ಅವರು ‘ಕನ್ನಡದಾಗಸದಿ ಆಶಾ ಧ್ರುವತಾರೆ’ ಎಂದು ಹಸ್ತಪ್ರತಿ ಮೇಲೆ ಮೆಚ್ಚುಗೆಯ ಮಾತು ಬರೆದುಕೊಟ್ಟಿದ್ದನ್ನು ಇಂದಿಗೂ ಜತನದಿಂದ ಇಟ್ಟುಕೊಂಡಿದ್ದೇನೆ.

ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದಾಗ ನಮ್ಮನ್ನು ‘ಕವಿ ಮನೆ ಭೇಟಿ’ಗಾಗಿ ನಮ್ಮ ಉಪನ್ಯಾಸಕರು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಮಾಸ್ತಿಯವರು ತಮ್ಮನ್ನು ಭೇಟಿ ಮಾಡಲು ಬರುವ ವಿದ್ಯಾರ್ಥಿಗಳು ‘ಸಂಗ್ರಹಾಲಯದಲ್ಲಿರುವ ವಸ್ತು ರೀತಿಯಲ್ಲಿ ನನ್ನನ್ನು ನೋಡಿ ಹೋಗಲು ಬರುವುದು ಬೇಡ. ಬಂದವರು ನನ್ನ ಪದ್ಯ–ಗದ್ಯಗಳ ಕುರಿತು ಮಾತನಾಡಬೇಕು. ಚರ್ಚಿಸಬೇಕು’ ಎಂದಾಗ, ನಾನು ಅವರ ‘ದೇಶಾಚಾರ’ ಪದ್ಯದ ಕುರಿತು ಐದು ನಿಮಿಷ ಮಾತನಾಡಿದ್ದೆ. ಅದನ್ನು ಮೆಚ್ಚಿಕೊಂಡ ಮಾಸ್ತಿಯವರು ‘ಕನ್ನಡ ಸಾಹಿತ್ಯದಲ್ಲಿ ನಿನಗೆ ಒಳ್ಳೆಯ ಭವಿಷ್ಯವಿದೆ’ ಎಂದು ಆಶೀರ್ವಾದ ಮಾಡಿದಂತೆ ಬರೆದು ಒಂದು ಪುಸ್ತಕವನ್ನು ಉಡುಗೊರೆ ನೀಡಿದ್ದರು. ಇದು ನನ್ನ ವಿಮರ್ಶಾತ್ಮಕ ಮಾತಿಗೆ ಸಿಕ್ಕ ಮೊದಲ ಮನ್ನಣೆ.

ಗಂಭೀರ ಬರವಣಿಗೆಯ ಜಾಡು ಹಿಡಿದು ಹೊರಟಿದ್ದು ಶಿವಮೊಗ್ಗದ ‘ನಮ್ಮ ನಾಡು’ ಪತ್ರಿಕೆ ಮೂಲಕ. ಹೆಣ್ಣು ಮತ್ತು ಹಿಂಸೆ ಕುರಿತು ಈ ಪತ್ರಿಕೆಯಲ್ಲಿ ಅಂಕಣ ಬರೆಯಲು ಆರಂಭಿಸಿದೆ. ಸೀತೆ ಮತ್ತು ಯುಗಾದಿ ಕುರಿತ ನನ್ನ ಮೊದಲ ಅಂಕಣ ಬರಹ ಈಗಲೂ ಎತ್ತಿಟ್ಟುಕೊಂಡಿದ್ದೇನೆ. ಹಾಗೆಯೇ ಮಹಿಳಾ ಸಾಹಿತ್ಯ ಮತ್ತು ಸ್ತ್ರೀವಾದ ಕುರಿತು ಬರೆದ ಅಕ್ಕಮಹಾದೇವಿಗೆ ಉತ್ತರಾಧಿಕಾರಿ ಇಲ್ಲ ಎನ್ನುವ ಲೇಖನ ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ರಾಜ್ಯಮಟ್ಟದ ಪತ್ರಿಕೆಯಲ್ಲಿ ಪ್ರಕಟವಾದ ಮೊದಲ ಲೇಖನವದು. ಅದಕ್ಕೆ ಪತ್ರಿಕೆಯಿಂದ ನೂರು ರೂಪಾಯಿ ಗೌರವ ಸಂಭಾವನೆಯೂ ಸಿಕ್ಕಿತ್ತು.

ಪಿ.ಟಿ. ಉಷಾ ಕುರಿತ ‘ಪ್ರೈಡ್‌ ಆಫ್‌ ಇಂಡಿಯಾ’ ಕೃತಿಯನ್ನು ಕನ್ನಡಕ್ಕೆ ‘ಭಾರತದ ಬಂಗಾರ’ ಹೆಸರಿನಲ್ಲಿ ಅನುವಾದಿಸಿದೆ. ಅದು ನನ್ನ ಮೊದಲ ಅನುವಾದಿತ ಕೃತಿ. ಇದರ ಹಸ್ತಪ್ರತಿಯನ್ನು ಇಂದಿಗೂ ಜೋಪಾನ ಮಾಡಿದ್ದೇನೆ. ಈ ಕೃತಿಗೆ ಪ್ರಕಾಶಕರು ₹ 1,500 ಗೌರವ ಸಂಭಾವನೆ ಕೊಟ್ಟಿದ್ದರು. ಅದು ಒಂದೂವರೆ ಕೋಟಿ ರೂಪಾಯಿಗೆ ಸಮ ಎನ್ನುವ ಭಾವನೆ ನನ್ನದು. ಈ ಕೃತಿಯನ್ನು ಲಂಕೇಶ್‌ ಅವರು ತಮ್ಮ ಪತ್ರಿಕೆಯಲ್ಲಿ ಮಾಲಿಕೆಯಾಗಿ ಪ್ರಕಟಿಸಿದರು. 2004ರಲ್ಲಿ ರಚಿಸಿದ ‘ಸ್ತ್ರೀಮತವನುತ್ತರಿಸಲಾಗದೆ’ ಕೃತಿ ಎಂ.ಕೆ. ಇಂದಿರಾ ಪ್ರಶಸ್ತಿ ತಂದುಕೊಟ್ಟಿತು. ಇದು ನಾನು ಪಡೆದ ಮೊದಲ ಪ್ರಶಸ್ತಿ. ಇವೆಲ್ಲವೂ ಬೆಲೆ ಕಟ್ಟಲಾಗದ ಸಂತಸ ತಂದುಕೊಟ್ಟಿವೆ. ಮೊದಲ ಲೇಖನ, ಮೊದಲ ಭಾಷಣ, ಮೊದಲ ಪ್ರಶಸ್ತಿ, ಮೊದಲ ಪ್ರತಿಕ್ರಿಯೆ ಇವು ಬದುಕಿನಲ್ಲಿ ಮರೆಯಲಾಗದ ಸಂಗತಿಗಳು.

ಸಾಹಿತ್ಯದ ಬರವಣಿಗೆ ಗೀಳು ಹತ್ತಿದ್ದು ಹೈಸ್ಕೂಲಿನಲ್ಲಿ ಇರುವಾಗ. ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ಪ್ರಕೃತಿ ಮತ್ತು ಅಮ್ಮನ ಕುರಿತು ಬರೆದಿದ್ದ ಮೊದಲ ಕವನವನ್ನು ಓದಿದ್ದ ನಮ್ಮ ಕನ್ನಡ ಉಪನ್ಯಾಸಕ ತುಮಕೂರಿನ ಡಾ. ಕವಿತಾಕೃಷ್ಣ ಅವರು ‘ಕನ್ನಡದಾಗಸದಿ ಆಶಾ ಧ್ರುವತಾರೆ’ ಎಂದು ಹಸ್ತಪ್ರತಿ ಮೇಲೆ ಮೆಚ್ಚುಗೆಯ ಮಾತು ಬರೆದುಕೊಟ್ಟಿದ್ದನ್ನು ಇಂದಿಗೂ ಜತನದಿಂದ ಇಟ್ಟುಕೊಂಡಿದ್ದೇನೆ.

ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದಾಗ ನಮ್ಮನ್ನು ‘ಕವಿ ಮನೆ ಭೇಟಿ’ಗಾಗಿ ನಮ್ಮ ಉಪನ್ಯಾಸಕರು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಮಾಸ್ತಿಯವರು ತಮ್ಮನ್ನು ಭೇಟಿ ಮಾಡಲು ಬರುವ ವಿದ್ಯಾರ್ಥಿಗಳು ‘ಸಂಗ್ರಹಾಲಯದಲ್ಲಿರುವ ವಸ್ತು ರೀತಿಯಲ್ಲಿ ನನ್ನನ್ನು ನೋಡಿ ಹೋಗಲು ಬರುವುದು ಬೇಡ. ಬಂದವರು ನನ್ನ ಪದ್ಯ–ಗದ್ಯಗಳ ಕುರಿತು ಮಾತನಾಡಬೇಕು. ಚರ್ಚಿಸಬೇಕು’ ಎಂದಾಗ, ನಾನು ಅವರ ‘ದೇಶಾಚಾರ’ ಪದ್ಯದ ಕುರಿತು ಐದು ನಿಮಿಷ ಮಾತನಾಡಿದ್ದೆ. ಅದನ್ನು ಮೆಚ್ಚಿಕೊಂಡ ಮಾಸ್ತಿಯವರು ‘ಕನ್ನಡ ಸಾಹಿತ್ಯದಲ್ಲಿ ನಿನಗೆ ಒಳ್ಳೆಯ ಭವಿಷ್ಯವಿದೆ’ ಎಂದು ಆಶೀರ್ವಾದ ಮಾಡಿದಂತೆ ಬರೆದು ಒಂದು ಪುಸ್ತಕವನ್ನು ಉಡುಗೊರೆ ನೀಡಿದ್ದರು. ಇದು ನನ್ನ ವಿಮರ್ಶಾತ್ಮಕ ಮಾತಿಗೆ ಸಿಕ್ಕ ಮೊದಲ ಮನ್ನಣೆ.

ಗಂಭೀರ ಬರವಣಿಗೆಯ ಜಾಡು ಹಿಡಿದು ಹೊರಟಿದ್ದು ಶಿವಮೊಗ್ಗದ ‘ನಮ್ಮ ನಾಡು’ ಪತ್ರಿಕೆ ಮೂಲಕ. ಹೆಣ್ಣು ಮತ್ತು ಹಿಂಸೆ ಕುರಿತು ಈ ಪತ್ರಿಕೆಯಲ್ಲಿ ಅಂಕಣ ಬರೆಯಲು ಆರಂಭಿಸಿದೆ. ಸೀತೆ ಮತ್ತು ಯುಗಾದಿ ಕುರಿತ ನನ್ನ ಮೊದಲ ಅಂಕಣ ಬರಹ ಈಗಲೂ ಎತ್ತಿಟ್ಟುಕೊಂಡಿದ್ದೇನೆ. ಹಾಗೆಯೇ ಮಹಿಳಾ ಸಾಹಿತ್ಯ ಮತ್ತು ಸ್ತ್ರೀವಾದ ಕುರಿತು ಬರೆದ ಅಕ್ಕಮಹಾದೇವಿಗೆ ಉತ್ತರಾಧಿಕಾರಿ ಇಲ್ಲ ಎನ್ನುವ ಲೇಖನ ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ರಾಜ್ಯಮಟ್ಟದ ಪತ್ರಿಕೆಯಲ್ಲಿ ಪ್ರಕಟವಾದ ಮೊದಲ ಲೇಖನವದು. ಅದಕ್ಕೆ ಪತ್ರಿಕೆಯಿಂದ ನೂರು ರೂಪಾಯಿ ಗೌರವ ಸಂಭಾವನೆಯೂ ಸಿಕ್ಕಿತ್ತು.

ಪಿ.ಟಿ. ಉಷಾ ಕುರಿತ ‘ಪ್ರೈಡ್‌ ಆಫ್‌ ಇಂಡಿಯಾ’ ಕೃತಿಯನ್ನು ಕನ್ನಡಕ್ಕೆ ‘ಭಾರತದ ಬಂಗಾರ’ ಹೆಸರಿನಲ್ಲಿ ಅನುವಾದಿಸಿದೆ. ಅದು ನನ್ನ ಮೊದಲ ಅನುವಾದಿತ ಕೃತಿ. ಇದರ ಹಸ್ತಪ್ರತಿಯನ್ನು ಇಂದಿಗೂ ಜೋಪಾನ ಮಾಡಿದ್ದೇನೆ. ಈ ಕೃತಿಗೆ ಪ್ರಕಾಶಕರು ₹ 1,500 ಗೌರವ ಸಂಭಾವನೆ ಕೊಟ್ಟಿದ್ದರು. ಅದು ಒಂದೂವರೆ ಕೋಟಿ ರೂಪಾಯಿಗೆ ಸಮ ಎನ್ನುವ ಭಾವನೆ ನನ್ನದು. ಈ ಕೃತಿಯನ್ನು ಲಂಕೇಶ್‌ ಅವರು ತಮ್ಮ ಪತ್ರಿಕೆಯಲ್ಲಿ ಮಾಲಿಕೆಯಾಗಿ ಪ್ರಕಟಿಸಿದರು. 2004ರಲ್ಲಿ ರಚಿಸಿದ ‘ಸ್ತ್ರೀಮತವನುತ್ತರಿಸಲಾಗದೆ’ ಕೃತಿ ಎಂ.ಕೆ. ಇಂದಿರಾ ಪ್ರಶಸ್ತಿ ತಂದುಕೊಟ್ಟಿತು. ಇದು ನಾನು ಪಡೆದ ಮೊದಲ ಪ್ರಶಸ್ತಿ. ಇವೆಲ್ಲವೂ ಬೆಲೆ ಕಟ್ಟಲಾಗದ ಸಂತಸ ತಂದುಕೊಟ್ಟಿವೆ. ಮೊದಲ ಲೇಖನ, ಮೊದಲ ಭಾಷಣ, ಮೊದಲ ಪ್ರಶಸ್ತಿ, ಮೊದಲ ಪ್ರತಿಕ್ರಿಯೆ ಇವು ಬದುಕಿನಲ್ಲಿ ಮರೆಯಲಾಗದ ಸಂಗತಿಗಳು.
ಡಾ.ಎಂ.ಎಸ್‌. ಆಶಾದೇವಿ

******

ಓದು ಮತ್ತು ವೃತ್ತಿಯ ಕಾರಣಕ್ಕೆ ಕನ್ನಡ ಎಂಬುದು ಮರೆತೇ ಹೋಗಿತ್ತು. ಚಿಕ್ಕ ವಯಸಿನಲ್ಲಿ ಓದಿನ ಕಾರಣಕ್ಕೆ ಊರು ತೊರೆದು ನನ್ನ ಓರಗೆಯವರಿಂದ ದೂರ ಉಳಿದಿದ್ದಕ್ಕೆ ಪಿ.ಲಂಕೇಶ್ ಮತ್ತು ‘ಲಂಕೇಶ್ ಪತ್ರಿಕೆ’ಯನ್ನು ಬಹಳ ಮಿಸ್ ಮಾಡಿಕೊಂಡೆ ಎನ್ನುವುದು ವರ್ಷಗಳ ನಂತರ ಅರಿವಾಯಿತು. ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಯ ಕಾರಣಕ್ಕೆ ಕನ್ನಡದಿಂದ ದೂರವಾಗಿದ್ದ ನನ್ನನ್ನು ಕನ್ನಡಕ್ಕೆ ವಾಪಸ್ ಕರೆತಂದು, ಕನ್ನಡವನ್ನು ನನಗೆ ದಕ್ಕುವಂತೆ, ನಾನೂ ಕನ್ನಡಕ್ಕೆ ದಕ್ಕುವಂತೆ ಮಾಡಿದ್ದು ‘ಪ್ರಜಾವಾಣಿ’ ಸಮೂಹ ಎನ್ನುವುದನ್ನು ಎಂದಿಗೂ ಮರೆಯಲಾರೆ.

ನಾನೂ ಸಾಹಿತಿಯಾಗುತ್ತೇನೆ, ಕಥೆಗಾರನಾಗುತ್ತೇನೆ ಎಂದು ಊಹಿಸಿರಲಿಲ್ಲ. ‘ಇನ್ನು ಫಿರ್ಯಾದುಗಳ ಗೋಜಿಲ್ಲ’ ಕಥೆ ಪ್ರಜಾವಾಣಿಯಲ್ಲಿ ಪ್ರಕಟವಾದ ನಂತರ, ನನ್ನಲ್ಲೂ ಬರವಣಿಗೆಯ ಶಕ್ತಿ ಇದೆ ಎನ್ನುವುದು ಕನ್ನಡ ಕಥಾ ಜಗತ್ತಿಗೆ ಗೊತ್ತಾಯಿತು. ಈ ಕಥೆಯ ವಸ್ತು ಇಟ್ಟುಕೊಂಡೇ ಇದರ ಮುಂದುವರಿದ ಭಾಗದಂತೆ 2014ರವರೆಗೆ ಹಲವಾರು ಪತ್ರಿಕೆಗಳಲ್ಲಿ ಸರಣಿ ಕಥೆಗಳು ಪ್ರಕಟವಾದವು. ಇದೇ ಸರಣಿಯ ಕಥೆಗಳನ್ನು ಒಟ್ಟುಗೂಡಿಸಿ ವಸುಧೇಂದ್ರ ಅವರು ತಮ್ಮ ಛಂದ ಪುಸ್ತಕದಿಂದ ನನ್ನ ಕಥೆಗಳ ‘ಹಕೂನ ಮಟಾಟ’ ಕಥಾ ಸಂಕಲ ಹೊರತಂದರು. ಇದೇ ನನ್ನ ಮೊದಲ ಕೃತಿ. ಶಿವಮೊಗ್ಗದ ಕರ್ನಾಟಕ ಸಂಘ ನೀಡಿದ ‘ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ’ಯೇ ನಾನು ಮೊದಲು ಪಡೆದ ಪ್ರಶಸ್ತಿ.

ನಾಗರಾಜ ವಸ್ತಾರೆ

ನಾನು ಸಾಹಿತ್ಯಿಕವಾಗಿ ಹೆಚ್ಚು ಓದಿಕೊಂಡವನಲ್ಲ. ಚಿಕ್ಕ ವಯಸಿನಲ್ಲಿಯೇ ಮಹಾನಗರಕ್ಕೆ ಬಂದು ನೆಲೆಸಿದ್ದರಿಂದ ಓದು, ವೃತ್ತಿ ಸಹದ್ಯೋಗಿಗಳ ಕಾರಣದಿಂದ ಕನ್ನಡದ ವಾತಾವರಣದಿಂದ ದೂರವಾಗಿದ್ದೆ. ಈಗ ಕನ್ನಡತನ ಬರವಣಿಗೆಯಿಂದ ಮರಳಿ ಸಿಕ್ಕಿದೆ. ವಿಶ್ವದಾದ್ಯಂತ ಹೊಸ ಆರ್ಥಿಕ ನೀತಿ ಬಂದ ಮೇಲೆ ನಮ್ಮ ತಾಂತ್ರಿಕ ವೃತ್ತಿಯ ಕಾರಣದಿಂದಾಗಿ ಎಲ್ಲೋ ಕಳೆದು ಹೋದ ಮೇಲೆ ಒಳಗೆ ಎಷ್ಟೊಂದು ಟೊಳ್ಳಾಗಿದ್ದೇವೆ, ಬದುಕು ಎಷ್ಟು ಭಂಗುರ ಎನ್ನುವ ವಿಷಾದ ಕಾಡಲಾರಂಭಿಸಿತ್ತು. ಈಗ ಕನ್ನಡದ ಎಷ್ಟೋ ಓದುಗರಿಗೆ ನಾಗರಾಜ ವಸ್ತಾರೆ ಗೊತ್ತಪ್ಪಾ ಎನ್ನುವ ಮಾತನ್ನು ಕೇಳಿದ್ದೇನೆ. ಪತ್ರಿಕಾ ಕಚೇರಿಗಳಿಂದಲೇ ನನ್ನ ದೂರವಾಣಿ ಸಂಖ್ಯೆ ಪಡೆದು ಫೋನು ಮಾಡಿ ವಿಚಾರಿಸುವ, ಅಭಿಪ್ರಾಯ ಹಂಚಿಕೊಳ್ಳುವ ಓದುಗ ಬಳಗ ಸಿಕ್ಕಿದೆ.

ಹಳ್ಳಿಯ ಬೇರು ಕಳೆದುಕೊಂಡು ನಗರದಲ್ಲಿ ನೆಲೆ ಕಂಡುಕೊಂಡು ನಾನು ಒಳಗಿನಿಂದ ಟೊಳ್ಳಾಗುತ್ತಿದ್ದೇನೆ ಎನ್ನುವುದು ಗೊತ್ತಾದ ಮೇಲೆ ನಿರಂತರವಾಗಿ ಬರೆಯಲು ಶುರು ಮಾಡಿದೆ. ನನ್ನ ಬರವಣಿಗೆ ಸಿಟಿಯ ಬದುಕಿನ ಸುತ್ತಲೇ ಗಿರಕಿ ಹೊಡೆಯುವುದಕ್ಕೆ ಇದೂ ಕಾರಣವಿರಬಹುದು. ನನ್ನಂಥವರಿಗೆ ಈ ಕಂಪ್ಯೂಟರ್ ಇರದಿದ್ದರೆ ಕನ್ನಡದಲ್ಲಿ ಬರೆಯುವ ಗೋಜು ತಪ್ಪಿ ಹೋಗಿ ಬಿಡುತ್ತಿತ್ತು ಎನಿಸಿದ್ದು ಉಂಟೂ.
ನಾಗರಾಜ ವಸ್ತಾರೆ
*****


ನಾನು ಸಾಹಿತಿ ಅಲ್ಲ. ನನ್ನನ್ನು ಯಾರಾದರೂ ಸಾಹಿತಿ ಎಂದರೆ ನನಗೆ ತುಂಬಾ ಮುಜುಗರ. ನಾನು ಗೃಹಿಣಿ, ಸಾಹಿತ್ಯವನ್ನು ತಲೆಗೆ ಹಚ್ಚಿಕೊಂಡಿರಲಿಲ್ಲ. ತೇಜಸ್ವಿ ಜೊತೆಗಿನ ಸುಂದರ ಬದುಕಿನ ಕಾರಣದಿಂದಾಗಿ ನನಗೆ ಬರೆಯಲು ಸಾಧ್ಯವಾಯಿತು. ಅವರಿಲ್ಲದಿದ್ದರೆ ನಾನು ಬರೆಯುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ನನ್ನ ಬರವಣಿಗೆಗೆ ಅವರೇ ಮುಖ್ಯ ಕಾರಣ ಮತ್ತು ಪ್ರೇರಣೆ.

ನನಗೆ ಬರೆಯಬೇಕೆಂದು ಪ್ರೇರಣೆ ಕೊಟ್ಟ ಮೂವರಿಗೆ ತುಂಬಾ ಆಭಾರಿಯಾಗಿದ್ದೇನೆ. ಮೊದಲು ಅಬ್ದುಲ್‌ ರಷೀದ್‌ ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ‘ಕೆಂಡಸಂಪಿಗೆ’ ಅಂತರ್ಜಾಲ ಪತ್ರಿಕೆಯಲ್ಲಿ ‘ಮೂಡಿಗೆರೆ ಹ್ಯಾಂಡ್‌ಪೋಸ್ಟ್‌’ ಶೀರ್ಷಿಕೆಯಡಿ ಲೇಖನ ಬರೆಯಲು ಅವಕಾಶ ನೀಡಿದರು. 15 ದಿನಗಳಿಗೆ ಒಮ್ಮೆ ಲೇಖನ ಬರೆಯುತ್ತಿದ್ದೆ. ನಾನು ನೆತ್ತಿ ಮೇಲಿನ ಮನೆ ಮಾಡು ಮತ್ತು ಆಕಾಶ ನೋಡಿಕೊಂಡು ಬೆಳೆದವಳು, ನನಗೆ ಹೇಗೆ ಬರೆಯಲು ಆಗುತ್ತದೆ ಎಂದು ಅಳುಕು ತೋರಿದ್ದೆ. ಆದರೆ, ಅವರು ನನ್ನನ್ನು ಹುರಿದುಂಬಿಸಿ, ನಿಮ್ಮಿಂದ ಬರೆಯಲು ಸಾಧ್ಯವಿದೆ ಎಂದು ಹೇಳಿ ಬರೆಯುವಂತೆ ಮಾಡಿದರು. ನಮ್ಮ ಬದುಕು, ಹ್ಯಾಂಡ್‌ಪೋಸ್ಟ್‌, ಕಾಫಿ ತೋಟ ಹೀಗೆ ಹಲವಾರು ವಿಷಯಗಳನ್ನು ಇಟ್ಟುಕೊಂಡು ಒಂದು ವರ್ಷ ಅವರ ವೆಬ್‌ಸೈಟ್‌ಗೆ ಬರೆದೆ. ಇದಕ್ಕೆ ಬಹಳಷ್ಟು ಪ್ರತಿಕ್ರಿಯೆ ಬಂತು.

ಮೂಡಿಗೆರೆ ತಾಲ್ಲೂಕಿನ ಮೊದಲ ಕಾರು ಚಾಲಕಿ ನಾನೇ! 1978ರಿಂದಲೇ ಕಾರು ಚಾಲನೆ ಮಾಡುತ್ತಿದ್ದೆ. ಅದಕ್ಕೂ ತೇಜಸ್ವಿ ಅವರೇ ಪ್ರೇರಣೆ. ನಾನು ಕಾರು ಚಾಲನೆ ಮಾಡಲು ಕಲಿತ ಪ್ರಸಂಗ ನೆನಪಿಸಿಕೊಂಡು ನಗುತ್ತಿರುತ್ತೇನೆ. 1960ರಲ್ಲಿ ಎಂ.ಎ ಓದುತ್ತಿದ್ದಾಗ ಕಷ್ಟಪಟ್ಟು ಸೈಕಲ್‌ ಕಲಿತು ಮಹಾರಾಣಿ ಹಾಸ್ಟೆಲ್‌ನಿಂದ ಮಾನಸ ಗಂಗೋತ್ರಿಗೆ ಬರುತ್ತಿದ್ದೆ. ಆದರೆ, ಸ್ಕೂಟರ್‌ ಓಡಿಸುವುದನ್ನು ಕಲಿತಿರಲಿಲ್ಲ. ತೇಜಸ್ವಿ ಅವರನ್ನು ಮದುವೆಯಾದ ನಂತರ, ಮೈಸೂರಿನಲ್ಲಿದ್ದಾಗ ‘ನಿನಗೆ ಹೇಗೂ ಸೈಕಲ್‌ ಓಡಿಸಲು ಬರುತ್ತದೆಯಲ್ಲ? ಸ್ಕೂಟರ್‌ ಕಲಿತುಕೊ’ ಎಂದು ತೇಜಸ್ವಿ ಮೊಪೆಡ್‌ ಮೇಲೆ ಕೂರಿಸಿ ತಳ್ಳಿ ಕೈಬಿಟ್ಟರು. ಸ್ವಲ್ಪ ದೂರ ಹೋಗಿ ದೊಪ್ಪೆಂದು ಬಿದ್ದುಬಿಟ್ಟೆ. ‘ನೀನು ಸ್ಕೂಟರ್‌ ಕಲಿಯುವುದಿಲ್ಲ, ಕಾರು ಓಡಿಸುವುದನ್ನಾದರೂ ಕಲಿ’ ಎಂದು ಅವರೇ ಡ್ರೈವಿಂಗ್‌ ಸ್ಕೂಲ್‌ಗೆ ನನ್ನನ್ನು ಮತ್ತು ನಾದಿನಿ ತಾರಿಣಿಯನ್ನು ಕಳುಹಿಸಿದರು. ಕಾರು ಚಾಲನೆ ಕಲಿತ ಮೇಲೆ ಮೈಸೂರಿನಿಂದ ಮೂಡಿಗೆರೆವರೆಗೂ ನಾನೇ ಚಾಲನೆ ಮಾಡಿಕೊಂಡು ಬರುತ್ತಿದ್ದೆ. ಮಕ್ಕಳನ್ನು ಶಾಲೆಗೆ ಬಿಡಲು, ಗೊಬ್ಬರ, ತರಕಾರಿ ತರಲು… ಹೀಗೆ ದೈನಂದಿನ ಕೆಲಸಕ್ಕೆಂದು ಮೂಡಿಗೆರೆಯಲ್ಲಿ ಪ್ರೀಮಿಯರ್‌ ಪದ್ಮಿನಿ ಕಾರಿನಲ್ಲಿ ಓಡಾಡುತ್ತಿದ್ದೆ.

ತೇಜಸ್ವಿ ಹುಡುಕಿಕೊಂಡು ಹ್ಯಾಂಡ್‌ಪೋಸ್ಟ್‌ಗೆ ಯಾರಾದರೂ ಬಂದು ವಿಳಾಸ ಕೇಳಿದರೆ, ‘ಅದೇ ಬಿಳಿ ಕಾರು ಓಡಿಸುತ್ತದೆಯೆಲ್ಲ? ಹೆಂಗಸು? ಅವರ ಗಂಡನಾ?’ ಎಂದು ಸ್ಥಳೀಯರು ವಿಳಾಸ ಹೇಳುತ್ತಿದ್ದರು.

ಸುಮಾರು 20 ವರ್ಷಗಳ ಹಿಂದೆ ‘ಪ್ರಜಾವಾಣಿ’ಯವರು ನಮ್ಮ ಮನೆಯ ಹೂದೋಟ ಗಮನಿಸಿ, ‘ಹೂದೋಟದ ಬಗ್ಗೆ ಲೇಖನ ಬರೆಸಬೇಕು ಅಂದುಕೊಂಡಿದ್ದೇವೆ. ನಿಮ್ಮ ಲೇಖನದಿಂದಲೇ ಶುರು ಮಾಡುತ್ತೇವೆ’ ಎಂದಿದ್ದರು. ಆಗ ತೇಜಸ್ವಿ ಅವರ ಬಳಿ ಹೇಳಿದೆ, ‘ನೀನು ಬರೆದೆ, ಅದು ಆಯ್ತು. ನಿನ್ನಿಂದ ಬರೆಯಲು ಆಗವುದಿಲ್ಲ ಬಿಡು’ ಎಂದು ನಕ್ಕಿದ್ದರು. ಕೊನೆಗೆ ಅವರಿಂದಲೇ ನಮ್ಮ ಹೂದೋಟದ ಚಿತ್ರ ತೆಗೆಸಿ ಲೇಖನ ಬರೆದು ಕಳುಹಿಸಿದ್ದೆ. ಅದಕ್ಕೆ ₹ 500 ಗೌರವಧನ ಕಳುಹಿಸಿದ್ದರು. ಅದೇ ನನಗೆ ಸಿಕ್ಕ ಮೊದಲ ಗೌರವ ಧನ!

ರಾಜೇಶ್ವರಿ ತೇಜಸ್ವಿ

ನನ್ನ ಮನೆಯವರು ತೀರಿಕೊಂಡಾಗ ನನ್ನನ್ನು ಮಾತನಾಡಿಸಿಕೊಂಡು ಹೋಗಲು ಕವಯತ್ರಿ ಸವಿತಾ ನಾಗಭೂಷಣ್‌ ಬಂದಿದ್ದರು. ಊಟದ ಮನೆಗೆ ಬಂದು ‘ನೀವು ಬರೆಯಲೇಬೇಕು. ನಿಮ್ಮ ಬದುಕಿನ ಪುಟ, ತೇಜಸ್ವಿಯರ ಬದುಕಿನ ಪುಟ ಗೊತ್ತಾಗಬೇಕೆಂದರೆ ನಿಮ್ಮ ಬರಹ ಬೇಕು’ ಎಂದು ಒತ್ತಾಯಿಸಿದ್ದರು. ಕೆಲವು ದಿನಗಳ ನಂತರ ನಮ್ಮ ಮನೆಗೆ ಬಂದಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ಕೂಡ ಬರೆಯಬೇಕೆಂದು ಒತ್ತಾಯ ಮಾಡಿದರು. ‘ಬರೆಯಲು ಆಗದಿದ್ದರೆ ಯಾರಿಂದಲಾದರೂ ನಿರೂಪಣೆಗೆ ವ್ಯವಸ್ಥೆ ಮಾಡಿಸುತ್ತೇನೆ, ನೀವು ಬರೆಯಿರಿ’ ಎಂದರು. ನಾನೇ ಬರೆಯುತ್ತೇನೆ, ಪ್ರಯತ್ನಪಡುತ್ತೇನೆ, ನಾನು ಬರೆದರೆ ಸರಿ ಹೋಗುತ್ತದೆ ಎಂದು ಬರೆಯಲು ಶುರು ಮಾಡಿದೆ.

‘ನನ್ನ ತೇಜಸ್ವಿ’ ಬರೆಯಲು ಶುರು ಮಾಡಿದಾಗ ಸ್ವಲ್ಪ ಭಯ ಆಯಿತು. ಹೇಗಪ್ಪಾ ಬರೆಯುವುದು ಎಂದು ಅಳುಕುತ್ತಿದ್ದೆ. ಆಗ ಶಿವಾರೆಡ್ಡಿ ಎಂಬುವವರು ನಾಲ್ಕಾರು ಸಾಲು ಬರೆದು ತೋರಿಸಿ ಬರೆಯುವಂತೆ ಮಾಡಿದರು. ‘ನನ್ನ ತೇಜಸ್ವಿ’ ನಾನು ಬರೆದ ಮೊದಲ ಪುಸ್ತಕ. ಮಹಾರಾಜ ಕಾಲೇಜಿನಲ್ಲಿ ತೇಜಸ್ವಿ ಪರಿಚಯವಾದಗಿನಿಂದ ಅವರ ಜೊತೆಗಿನ ಕೊನೆ ದಿನದವರೆಗಿನ ಕ್ಷಣಗಳನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದೇನೆ.

ಈ ಪುಸ್ತಕ ಓದಿ ತುಮಕೂರಿನ ನ್ಯಾಯಾಧೀಶರೊಬ್ಬರು ಪ್ರಶಂಸೆಯ ಪತ್ರ ಬರೆದಿದ್ದಾರೆ. ಇನ್ನೊಬ್ಬ ನ್ಯಾಯಾಧೀಶರು ಮನೆಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮದುವೆ ನಿಶ್ಚಯ ಮಾಡಿಕೊಂಡ ಅನೇಕ ಹುಡುಗ–ಹುಡುಗಿಯರು ಜತೆಯಾಗಿ ಬಂದು ಪುಸ್ತಕದ ಬಗ್ಗೆ ಚರ್ಚೆ ಮಾಡುತ್ತಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಒಂದು ಸಮಾರಂಭಕ್ಕೆ ಹೋಗಿದ್ದಾಗ ಅಲ್ಲಿನ ಹುಡುಗ–ಹುಡುಗಿಯರು ನನ್ನನ್ನು ಮುತ್ತಿಕೊಂಡು ‘ನನ್ನ ತೇಜಸ್ವಿ ಮತ್ತೆ ಮತ್ತೆ ಓದಬೇಕು ಅನಿಸುತ್ತದೆ. ಇನ್ನಷ್ಟು ಬರೆಯಿರಿ’ ಎಂದು ಒತ್ತಾಯಿಸಿದ್ದು ಬರವಣಿಗೆಗೆ ಸಿಕ್ಕ ಅತ್ಯುತ್ತಮ ಮೆಚ್ಚುಗೆ ಎಂದುಕೊಂಡಿದ್ದೇನೆ.

ನನ್ನ ಎರಡನೇ ಪುಸ್ತಕ ‘ನಮ್ಮ ಮನೆಗೂ ಗಾಂಧಿ ಬಂದರು’ ಕೃತಿಗೆ ಲಭಿಸಿದ ‘ಅಮ್ಮ’ ಪ್ರಶಸ್ತಿ ನನಗೆ ಸಿಕ್ಕ ಮೊದಲ ಪ್ರಶಸ್ತಿ.
ರಾಜೇಶ್ವರಿ ತೇಜಸ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.