ADVERTISEMENT

ಸೆಕ್ಸ್‌ ಮತ್ತು ಬದುಕು | ಮಡಿವಂತಿಕೆಯ ಮನಃಸ್ಥಿತಿ

ಅನಿಸಿಕೆ

ದೀಪಾ ಫಡ್ಕೆ
Published 26 ಜುಲೈ 2020, 4:28 IST
Last Updated 26 ಜುಲೈ 2020, 4:28 IST
ಸೆಕ್ಸ್‌  ಮತ್ತು ಜೀವನ
ಸೆಕ್ಸ್‌  ಮತ್ತು ಜೀವನ   

ಜುಲೈ 19ರ ಭಾನುವಾರದ ಪುರವಣಿಯ ಲೇಖನ ‘ಸೆಕ್ಸ್ ಮತ್ತು ಬದುಕು’ ಓದಿದಾಗ ನಾನು ಖಾಸಗಿ ಟಿವಿಯೊಂದರ ನಿರೂಪಕಿಯಾಗಿ ಪ್ರಸ್ತುತಿ ಮಾಡುತ್ತಿದ್ದ ಕಾರ್ಯಕ್ರಮ ‘ಸ್ತ್ರೀ ಆರೋಗ್ಯ’ದ ಒಂದಷ್ಟು ಅನುಭವಗಳನ್ನು ಹಂಚಿಕೊಳ್ಳಬೇಕೆನಿಸಿತು.

ಸುಮಾರು ಒಂದೂವರೆ ದಶಕದ ಹಿಂದಿನ ಕಾರ್ಯಕ್ರಮವಿದು ಸ್ತ್ರೀ ಆರೋಗ್ಯ. ಋತುಚಕ್ರದಿಂದ ಆರಂಭವಾಗಿ ವಿವಾಹ, ಪ್ರಥಮರಾತ್ರಿ, ಸಮಾಗಮ, ಬಸಿರು, ಬಾಣಂತನ ಅಲ್ಲದೇ ಋತುಬಂಧದವರೆಗಿನ ಜೊತೆಯಲ್ಲಿ ಗರ್ಭಧಾರಣೆಯ ಸಮಸ್ಯೆಗಳು, ಗಂಡು ಹೆಣ್ಣು ಇಬ್ಬರ ಶಾರೀರಿಕ ಸಮಸ್ಯೆಗಳು.. ಒಟ್ಟಿನಲ್ಲಿ ಹೆಣ್ಣೊಬ್ಬಳ ಬದುಕಿನ ಪ್ರತೀ ಹಂತಗಳು ಸಂವಾದದಲ್ಲಿ ಚರ್ಚೆಯಾಗಿತ್ತು. ನಾಡಿನ ಖ್ಯಾತ ಸ್ತ್ರೀರೋಗ ಮತ್ತು ಲೈಂಗಿಕ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರು ತಜ್ಞರಾಗಿ ಭಾಗಿಯಾಗಿದ್ದರು.

ಸುಮಾರು 75–80 ಕಂತುಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಪ್ರಸಾರವಾಗಿತ್ತು. ಕಾರ್ಯಕ್ರಮಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿತ್ತು. ಅಷ್ಟೇ ವಿಭಿನ್ನ ಧಾಟಿಯ ಪ್ರತಿಕ್ರಿಯೆಗಳನ್ನು ನಾನು ವೈಯಕ್ತಿಕವಾಗಿ ಎದುರಿಸಬೇಕಾಯಿತು. ಸಹೋದ್ಯೋಗಿಗಳಿಂದ ಹಿಡಿದು ಪತ್ರಗಳ ಮೂಲಕ ಗೇಲಿ, ಉಡಾಫೆ, ಕುಹಕ, ಕೊಂಕು, ಅಸಹ್ಯ, ವೈಯಕ್ತಿಕ ದಾಳಿ ಮತ್ತು ಗೌರವಪೂರಿತ ಧಾಟಿಯ ಪತ್ರಗಳು ನನ್ನನ್ನು ಮುಟ್ಟಲಾರಂಭಿಸಿದವು. ಸಹೋದ್ಯೋಗಿಗಳಲ್ಲಿ ವಿವಾಹಿತರ ಪ್ರತಿಕ್ರಿಯೆ ಉಡಾಫೆಯಲ್ಲಿದ್ದರೆ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದ ಕ್ಯಾಮೆರಾಮ್ಯಾನ್, ಸೌಂಡ್ ರೆಕಾರ್ಡಿಂಗ್ ಮಾಡುತ್ತಿದ್ದ ಅವಿವಾಹಿತ ಹುಡುಗರು ಶ್ರದ್ಧೆಯಿಂದ, ಕುತೂಹಲದಿಂದ ಪಾಠ ಕೇಳುವಂತೆ ಸಭ್ಯತೆಯಿಂದ ಕೇಳುತ್ತಿದ್ದುದು ಇನ್ನೂ ಮನದಲ್ಲಿ ಹಸಿರಾಗಿದೆ.

ADVERTISEMENT

ಇವ್ಯಾವುದರ ಅರಿವೇ ಇಲ್ಲದ ನಾನು ವಾರದ ಇತರ ಕಾರ್ಯಕ್ರಮಗಳೊಂದಿಗೆ ಡಾಕ್ಟರ್ ಅವರ ಸಮಯ ಹೊಂದಿಸಿ ಕಾರ್ಯಕ್ರಮ ಮಾಡಿ ಟೇಪ್ ಲೈಬ್ರೆರಿಗೆ ಕೊಟ್ಟರೆ ಸಾಕೆಂದು ನನ್ನದೇ ಗುಂಗಿನಲ್ಲಿದ್ದರೆ ನನ್ನ ಸುತ್ತಲೂ ನನ್ನ ಗಮನಕ್ಕೇ ಬಾರದೇ ನನ್ನ ಅಸ್ತಿತ್ವ ಬೇರೇ ರೀತಿ ನೋಡಲಾರಂಭಿಸಿದ್ದರು.`ಓಹ್, ಇವಳು ಭಾರೀ ಮುಂದುವರೆದವಳು’ ಎನ್ನುವಂಥ ಕಮೆಂಟ್‌ಗಳಿಗೂ ಕೊರತೆಯಿರಲಿಲ್ಲ. ನನ್ನ ಸೋದರ ಸಂಬಂಧಿಯೊಬ್ಬರು ನನ್ನ ಸಹೋದರಿಯಲ್ಲಿ`ನಾವು ನಮ್ಮ ಹುಡುಗಿ ಟಿವಿಯಲ್ಲಿ ಕಾರ್ಯಕ್ರಮ ನೀಡುತ್ತಾಳೆಂದು ಅಭಿಮಾನದಲ್ಲಿ ನೋಡಿದರೆ ಅವಳೋ ಏನೇನೋ ಮಾತಾಡುತ್ತಾಳೆ, ಪ್ರಥಮ ರಾತ್ರಿ, ಗರ್ಭಧಾರಣೆ ಹೀಗೆ’ ಎಂದೂ ಹೇಳಿದ್ದರಂತೆ. ಇಷ್ಟೆಲ್ಲಗಳ ನಡುವೆ ಒಂದು ದಿನ ಆಗ ಕುಮಾರವ್ಯಾಸ ಭಾರತದ ವ್ಯಾಖ್ಯಾನ ಮಾಡುತ್ತಿದ್ದ ವಿದ್ವಾಂಸ ಭಾರತೀಯ ವಿದ್ಯಾಭವನದ ರೂವಾರಿ ಮತ್ತೂರು ಕೃಷ್ಣಮೂರ್ತಿ ಅವರು ಸಂಸ್ಥೆಯ ಮುಖ್ಯಸ್ಥರೊಡನೆ 'ಆ ಹುಡುಗಿ, ಅತ್ಯಂತ ನಾಜೂಕಿಂದ ಯಾರಿಗೂ ಮುಜುಗರವಾಗದಂತೆ ಅಂಥ ವಿಷಯವನ್ನು ಪ್ರಬುದ್ಧತೆಯಿಂದ ಹ್ಯಾಂಡಲ್ ಮಾಡುತ್ತಿದ್ದಾಳೆ. ಅವಳನ್ನು ಅಭಿನಂದಿಸಬೇಕು’ ಎಂದು ಹೇಳಿ ನನ್ನ ಬೆನ್ನು ತಟ್ಟಿದಾಗ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಿದಂತಾಗಿತ್ತು. ಅಷ್ಟೇ ಅಲ್ಲದೇ ನನ್ನ ಕಾಲೇಜು ದಿನಗಳ ಮನಶ್ಶಾಸ್ತ್ರದ ಪ್ರಾಧ್ಯಾಪಕರಾದ ಗಣೇಶ್ ರಾವ್ ಅವರು ಅದೇ ಕಾರ್ಯಕ್ರಮದ ಇನ್ನೋರ್ವ ಅತಿಥಿ ಆಹಾರತಜ್ಞೆ ಡಾ.ಎಚ್.ಎಸ್. ಪ್ರೇಮಾ ಅವರಲ್ಲಿ ‘ಮಾತೇ ಇಲ್ಲದ ಆ ಹುಡುಗಿ ಅಂಥ ವಿಷಯವನ್ನು ಮಾತಾಡುತ್ತಾಳೆ ಎನ್ನುವುದೇ ಹೆಮ್ಮೆಯ ವಿಷಯ’ವೆಂದಿದ್ದೂ ಕಿವಿಗೆ ಬಿದ್ದು ಆಕಾಶಕ್ಕೆ ರೆಕ್ಕೆ ಕಟ್ಟಿ ಬಿಟ್ಟಂತೆ ಆಗಿತ್ತು.

ಇಲ್ಲಿ ನಾನು ಹೇಳಹೊರಟಿದ್ದು ಮಡಿವಂತಿಕೆಯ ಮನಃಸ್ಥಿತಿಯ ಕುರಿತು. ಸುಧಾಂಶು ಮಿತ್ರ ಅವರು ಎಂದಂತೆ ಈ ಮಡಿವಂತಿಕೆಯ ಹಿಂದಿರುವ ಮನೋಭಾವ ಹಾಗಾದರೆ ಯಾವ ರೀತಿಯದು. ವಾತ್ಸಾಯನನ ನಾಡಿನಲ್ಲಿ ಲೈಂಗಿಕತೆಯ ಆರೋಗ್ಯವಂತ ಮಾತುಕತೆಗೆ ಎಂತಹ ಪ್ರತಿಬಂಧವಿದು. ಇಷ್ಟಕ್ಕೂ ಲೈಂಗಿಕ ಮಾತುಕತೆ ಬೇಕಾದಷ್ಟು ಆಗುತ್ತಲೇ ಇರುತ್ತದೆ.

ಆದರೆ ಅದ್ಯಾವುದೂ ಮನಸ್ಸಿಗೆ ಸಾಂತ್ವನ ಮತ್ತು ಜ್ಞಾನ ನೀಡುತ್ತಿಲ್ಲ ಎಂದು ಕಾರ್ಯಕ್ರಮಕ್ಕೆ ಬರುತ್ತಿದ್ದ ಪತ್ರಗಳು ಮತ್ತು ಅದರಲ್ಲಿ ತುಂಬಿಕೊಂಡಿರುತ್ತಿದ್ದ ಸಮಸ್ಯೆಗಳಿಂದ ಅರಿವಾಯಿತು. ವಾರದಿಂದ ವಾರಕ್ಕೆ ಹೆಣ್ಣುಮಕ್ಕಳು ಕೇಳುತ್ತಿದ್ದ ಪ್ರಶ್ನೆಗಳು, ಕಾರ್ಯಕ್ರಮದ ಅವಧಿಯಲ್ಲಿ ಉತ್ತರಿಸಲಾಗದೇ ಇದ್ದ ಬೇಸರಗಳು, ಡಾ. ಪದ್ಮಿನಿಯವರನ್ನೂ ಚಿಂತಿಸುವಂತೆ ಮಾಡುತ್ತಿತ್ತು. ಕೊನೆಗೆ ಪ್ರಶ್ನೋತ್ತರ ಅವಧಿಯನ್ನೇ ಬಿಟ್ಟು ಬಿಡಬೇಕಾಯಿತು.

ಹೈಸ್ಕೂಲ್‌ನಲ್ಲಿದ್ದಾಗ ವಿಜ್ಞಾನ ಬೋಧಿಸುತ್ತಿದ್ದ ಮೇರಿ ಟೀಚರ್ ಮಾನವನ ಅಂಗಾಂಗಗಳ ಪಾಠವನ್ನು ಮಾಡುವಾಗ ಮೊದಲೇ ಹುಡುಗರಿಗೆ ‘ಗಂಭೀರವಾಗಿರಿ, ಇದು ನಿಮ್ಮ ದೇಹದ ವರ್ಣನೆ ಕೂಡ’ ಎಂದು ಎಚ್ಚರಿಕೆ ನೀಡಿ ಪಾಠ ಮಾಡಿದ್ದರು. ಒಬ್ಬನೇ ಒಬ್ಬ ಹುಡುಗ ಕೂಡ ತುಟಿ ಪಿಟಕ್ ಮಾಡದೇ ಗಂಭೀರವಾಗಿ ಕೇಳಿದ್ದ ನೆನಪು, ಅಂದರೆ ಶಿಕ್ಷಕರ ವಿವೇಕ, ಪ್ರಜ್ಞೆ ಎಷ್ಟು ಅಗತ್ಯವೆನ್ನುವುದನ್ನು ಮನಗಾಣಬಹುದು.

ಲೈಂಗಿಕ ಶಿಕ್ಷಣದ ಅಗತ್ಯ ಮತ್ತು ಆ ಶಿಕ್ಷಣವನ್ನು ಹೇಗೆ ನೀಡಬೇಕೆನ್ನುವ ಪ್ರಜ್ಞೆ ಎರಡೂ ಅತ್ಯಂತ ಅಗತ್ಯವಾಗಿದೆ. ಮಗಳು ಪ್ರಬುದ್ಧಳಾದಾಗ ಡಾ. ಪದ್ಮಿನಿ ಪ್ರಸಾದ್ ಅವರ ‘ಲೈಂಗಿಕ ಶಿಕ್ಷಣ’ ಪುಟ್ಟ ಹೊತ್ತಿಗೆಯನ್ನು ಅವಳ ಕೈಯಲ್ಲಿಟ್ಟಿದ್ದೆ. ಏಕೆಂದರೆ ಅಂತರ್ಜಾಲದಲ್ಲಿ ಮಕ್ಕಳ ಬೆರಳ ತುದಿಗೆ ಸಿಗುತ್ತಿರುವ ರಮ್ಯ ಲೋಕದ ಮಾಹಿತಿಗಳು ಬೆಚ್ಚಿ ಬೀಳಿಸುತ್ತವೆ.

ಪ್ರಕೃತಿಯನ್ನು ಸಹಜವಾಗಿ ನೋಡುವ ಅಭ್ಯಾಸ ನಮಗಿಲ್ಲವೇ? ಮಾತಾಡಿದರೆ ಒಂದು ರೀತಿ, ಮಾತಾಡದಿದ್ದರೆ ಇನ್ನೊಂದು ರೀತಿ! ಇಷ್ಟಿದ್ದೂ ಇಲ್ಲಿ ಗಂಡಿನ ಲೈಂಗಿಕ ಅನುಭವಗಳಿಗೆ ಸಿಕ್ಕ ವಿಪುಲ ಅಭಿವ್ಯಕ್ತಿಯ ಅವಕಾಶ ಹೆಣ್ಣಿಗೆ ಸ್ವಲ್ಪ ಸ್ವಲ್ಪವೇ ಸಿಗುತ್ತಿದೆ. ಅಕಸ್ಮಾತ್ ಧೈರ್ಯ ಪಡೆದುಕೊಂಡು ಮಾತಾಡಿದರೆ ಅವಳನ್ನು ಕೊನೆಪಕ್ಷ ಹಿಂದಿನಿಂದಾದರೂ ಗೇಲಿ ಮಾಡುವ ಪ್ರವೃತ್ತಿ ಇನ್ನೂ ಇದೆ. ಅವಳ ಆಸೆಗಳನ್ನೂ, ಅವಳ ಅಗತ್ಯಗಳನ್ನೂ ಅರಿತು ಗಂಡು ನಡೆದುಕೊಂಡರೆ ಪ್ರಾಯಶಃ ಲಕ್ಷಾಂತರ ಹೆಣ್ಣುಮಕ್ಕಳು ಅವರಿಗೆ ಸಹಜವಾಗಿ ಸಿಗಬೇಕಾದ ಸುಖದಿಂದ ವಂಚಿತರಾಗಬೇಕಿಲ್ಲ. ಮುಖ್ಯವಾಗಿ ಮನುಷ್ಯತ್ವದ ಪರಿಚಯವಾಗಬೇಕು. ಪ್ರತಿಯೊಂದು ಜೀವ ಅದಕ್ಕೆ ಸಲ್ಲಬೇಕಾದ ಸುಖದಿಂದ ವಂಚಿತವಾಗುವುದು ದುರಂತವೆ. ಲೈಂಗಿಕತೆ ಅನ್ನುವುದು ಮಾನವೀಯತೆಯ ವಿಸ್ತರಿತ ಸತ್ಯ. ಏಕೆಂದರೆ ಸಾಂಗತ್ಯವೆಂದರೆ ಕೇವಲ ಕ್ರಿಯೆಯಲ್ಲ, ಅದು ಒಬ್ಬರಲ್ಲಿ ಇನ್ನೊಬ್ಬರನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಅತ್ಯಂತ ಸುಂದರ ಅನುಭವ. ಪ್ರೀತಿಯಿಂದ ಸಿಗುವ ನಿರ್ವಾಣದ ಅನುಭೂತಿ ಅದೇ ಅಲ್ಲವೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.