ಕನ್ನಡದ ಪ್ರಮುಖ ಕೃತಿಗಳು ಇತರ ಭಾಷೆಗಳಿಗೆ ಹಾಗೂ ಇತರ ಭಾಷೆಗಳಲ್ಲಿನ ಪ್ರಮುಖ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಅನುವಾದವಾಗಬೇಕು ಎಂಬುದು ಬಹುತೇಕ ಕನ್ನಡಿಗರ ಬಯಕೆ. ಇತ್ತೀಚಿನ ದಿನಗಳಲ್ಲಿ ಈ ಕುರಿತು ಹಲವು ಕಾರ್ಯಗಳಾಗಿವೆಯಾದರೂ ಆಗಬೇಕಾದದ್ದು ಬೆಟ್ಟದಷ್ಟಿವೆ. ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅನುವಾದಕರ ಕೊರತೆಯಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಶಬ್ದನ’ ಅನುವಾದ ವಿಭಾಗ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸೇರಿದಂತೆ ಕೆಲ ಸಂಸ್ಥೆಗಳು ಹಾಗೂ ಕೆಲ ಪುಸ್ತಕ ಪ್ರಕಾಶನ ಗಳು ಅನುವಾದ ಕಾರ್ಯಗಳಲ್ಲಿ ತೊಡಗಿಕೊಂಡಿವೆ.
ಅನುವಾದ ಮತ್ತು ಭಾಷಾಂತರ ಕಾರ್ಯಗಳು ನಿರಂತರವಾಗಿ ನಡೆಯುತ್ತಿರಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಅನುವಾದಕರು ಸೃಷ್ಟಿಯಾಗಬೇಕು ಎಂಬ ಕಾರಣಕ್ಕೆ ‘ಶಬ್ದನ’ ಅನುವಾದ ವಿಭಾಗವು ‘ತಿಂಗಳಿಗೊಂದು ಸಂವಾದ’ ಎಂಬ ಹೊಸ ಕಾರ್ಯಕ್ರಮ ರೂಪಿಸಿದೆ. ಅದಕ್ಕೆ ಶುಕ್ರವಾರವೇ (ಆಗಸ್ಟ್ 31) ಚಾಲನೆ ದೊರೆಯಲಿದೆ.
ತಿಂಗಳ ಕೊನೆ ಶುಕ್ರವಾರ: ‘ಕಾಸ್ಮೊಪಾಲಿಟನ್’ ನಗರವಾದ ಬೆಂಗಳೂರಿನಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ, ಮರಾಠಿ ಭಾಷೆಯ ಸಾಹಿತಿಗಳು ಇದ್ದಾರೆ. ಅವರೆಲ್ಲ ತಮ್ಮ ಭಾಷೆಗೆ ಸಂಬಂಧಿಸಿದ ಸಂಘ, ಸಂಸ್ಥೆಗಳೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದಾರೆ. ಅವರುಗಳನ್ನು ಒಂದೇ ವೇದಿಕೆಯಡಿ ತರುವ ಉದ್ದೇಶದಿಂದ ‘ಶಬ್ದನ’ ವಿಭಾಗ ಈ ಹೊಸ ಕಾರ್ಯಕ್ರಮ ರೂಪಿಸಿದೆ. ಇದು ಪ್ರತಿ ತಿಂಗಳ ಕೊನೆಯ ಶುಕ್ರವಾರ ನಡೆಯಲಿದೆ.
‘ಕನ್ನಡ ಹಾಗೂ ಇತರ ಭಾಷಾ ಸಾಹಿತಿಗಳನ್ನು ಒಂದೆಡೆ ಸೇರಿಸಿ ಅವರೊಂದಿಗೆ ವಿಚಾರ ವಿನಿಮಯ ಮಾಡಿ ಅನುವಾದ ಕಾರ್ಯಗಳಿಗೆ ಇನ್ನಷ್ಟು ಚುರುಕು ಮೂಡಿಸುವ ಹಾಗೂ ಅನುವಾದ ಸಂಸ್ಕೃತಿಯನ್ನು ಬೆಳೆಸಿ, ಪ್ರೋತ್ಸಾಹಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ’ ಎನ್ನುತ್ತಾರೆ ‘ಶಬ್ದನ’ ಅನುವಾದ ವಿಭಾಗದ ಗೌರವ ನಿರ್ದೇಶಕ ಎಸ್.ಆರ್. ವಿಜಯಶಂಕರ್.
‘ಪ್ರತಿ ತಿಂಗಳ ಸಂವಾದದಲ್ಲಿ ಒಬ್ಬರು ಹಿರಿಯ ವಿದ್ವಾಂಸರು ಹಾಗೂ ಇಬ್ಬರು ಯುವ ಅನುವಾದಕರಿಂದ ವಿಷಯ ಮಂಡನೆ ಇರುತ್ತದೆ. ಅದಾದ ಬಳಿಕ ವಿವಿಧ ಭಾಷಾ ತಜ್ಞರು, ಅನುವಾದಕರು, ಸಾಹಿತಿಗಳು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ನಡೆಯುವ ಚರ್ಚೆಯು ಅನುವಾದ ವಿಭಾಗದ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗುತ್ತದೆ’ ಎನ್ನುತ್ತಾರೆ ಅವರು.
‘ಶಬ್ದನ’ದ ಅನುವಾದ ಕಾರ್ಯ:
ಶಬ್ದನದಿಂದ ಹಲವು ಅನುವಾದ ಕಾರ್ಯಗಳು ನಡೆದಿವೆ ಹಾಗೂ ನಡೆಯುತ್ತಿವೆ. ಪ್ರಸ್ತುತ ‘ಸರ್ವಜ್ಞನ ವಚನ’ಗಳನ್ನು ಕನ್ನಡದಿಂದ ಇಂಗ್ಲಿಷ್, ತಮಿಳು, ತೆಲುಗು, ಉರ್ದು, ಹಿಂದಿ ಭಾಷೆಗಳಿಗೆ ಅನುವಾದಿಸಿಯಾಗಿದ್ದು, ಈ ಪುಸ್ತಕಗಳು ಮುದ್ರಣಕ್ಕೆ ಹೋಗಿವೆ. ಅದೇ ರೀತಿ ತುಕಾರಾಮ್ ಅವರ ಅಭಂಗ ಮರಾಠಿಯಿಂದ ಕನ್ನಡಕ್ಕೆ, ‘ಲವ್ ಸಾಂಗ್ಸ್ ಆಫ್ ಚಂಡಿದಾಸ್’–ಬೆಂಗಾಳಿಯಿಂದ ತೆಲುಗು, ತಮಿಳು, ಕನ್ನಡಕ್ಕೆ ಹಾಗೂ ‘ಲವ್ ಸಾಂಗ್ಸ್ ಆಫ್ ವಿದ್ಯಾಪತಿ’ ಮೈಥಿಲಿಯಿಂದ ಕನ್ನಡಕ್ಕೆ ಅನುವಾದವಾಗಿವೆ, ಇವೆಲ್ಲ ಪುಸ್ತಕಗಳ ಮುದ್ರಣ ಕಾರ್ಯವಷ್ಟೇ ಬಾಕಿಯಿವೆ. ಕವಿ ಸಿದ್ದಲಿಂಗಯ್ಯ ಅವರ ಜೀವನ ಚರಿತ್ರೆ ‘ಊರುಕೇರಿ’ ಕನ್ನಡದಿಂದ ತೆಲುಗು ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದವಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
**
‘ಆಧುನಿಕ ಭಾಷಾಂತರ; ಹೊಸ ಸವಾಲು’ಗಳು ಕುರಿತು ಸಂವಾದ
ಅತಿಥಿ– ಅನುವಾದಕ ಮತ್ತು ವಿಮರ್ಶಕರಾದ ಜಿ.ಎನ್.ರಂಗನಾಥ್ ರಾವ್. ವಿಷಯ ಮಂಡನೆ– ಎಸ್.ಆರ್. ರಾಮಕೃಷ್ಣ ಮತ್ತು ದೀಪಾ ಗಣೇಶ್. ಅಧ್ಯಕ್ಷತೆ– ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಚಂದ್ರಶೇಖರ್ ಕಂಬಾರ.
ಸ್ಥಳ: ಸಭಾಂಗಣ, ಕೇಂದ್ರ ಸಾಹಿತ್ಯ ಅಕಾಡೆಮಿ, ದಕ್ಷಿಣ ಪ್ರಾದೇಶಿಕ ಕಚೇರಿ, ಸೆಂಟ್ರಲ್ ಕಾಲೇಜು ಆವರಣ, ಡಾ. ಬಿ.ಆರ್.ಅಂಬೇಡ್ಕರ್ ವೀಧಿ. ಸಂಜೆ 6.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.