ADVERTISEMENT

ಲೇಖನ: ಆಧ್ಯಾತ್ಮಿಕ ಗ್ರಂಥಾಲಯಕ್ಕೆ ಡಿಜಿಟಲ್ ಸ್ಪರ್ಶ

ಕಿಶನರಾವ್‌ ಕುಲಕರ್ಣಿ
Published 18 ನವೆಂಬರ್ 2023, 23:31 IST
Last Updated 18 ನವೆಂಬರ್ 2023, 23:31 IST
ಶಿವಯೋಗಮಂದಿರದ ಕಲಿಕಾನಿತರ ವಟುಗಳು
ಶಿವಯೋಗಮಂದಿರದ ಕಲಿಕಾನಿತರ ವಟುಗಳು   

ಬಾಗಲಕೋಟೆ ಜಿಲ್ಲೆ ಬದಾಮಿ ತಾಲ್ಲೂಕಿನ ಶಿವಯೋಗಮಂದಿರ ಕ್ಷೇತ್ರ ಮಲಪ್ರಭಾ ನದಿಯ ದಂಡೆಯ ಮೇಲಿರುವ ನಿಸರ್ಗ ರಮಣೀಯ ಸ್ಥಳ. ಈ ದೇವಾಲಯದ ಸಮುಚ್ಚಯದಲ್ಲಿರುವ ವಿಜಯಮಹಾಂತೇಶ್ವರ ಪ್ರಾಚೀನ ಗ್ರಂಥಾಲಯಕ್ಕೆ ಬರೋಬ್ಬರಿ ನೂರಾ ಹನ್ನೆರಡು ವರ್ಷಗಳ ಇತಿಹಾಸವಿದೆ. ಅದರಲ್ಲಿರುವ ಪುಸ್ತಕಗಳ ಭಂಡಾರ ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದ ಗ್ರಂಥಗಳನ್ನು ಹೊಂದಿರುವ ನಾಡಿನ ಅಪರೂಪದ ಗ್ರಂಥಾಲಯವಾಗಿದೆ. ಅನೇಕ ವಿಶ್ವವಿದ್ಯಾಲಯಗಳ ಸಂಶೋಧಕರು, ವಿದ್ಯಾರ್ಥಿಗಳು, ಉಪನ್ಯಾಸಕರು ಭೇಟಿ ನೀಡಿ ತಮ್ಮ ಸಾಹಿತ್ಯ ರಚನೆಗೆ ಪೂರಕ ಮಾಹಿತಿ ಪಡೆದುಕೊಂಡು ಹೋಗುತ್ತಾರೆ.

2019ರಲ್ಲಿ ಅತಿವೃಷ್ಟಿ ಸಂಭವಿಸಿ ಶಿವಯೋಗಮಂದಿರದ ಬಳಿಯ ಮಲಪ್ರಭೆ ಉಕ್ಕಿ ಹರಿದ ಕಾರಣವಾಗಿ, ಶಿವಯೋಗ ಮಂದಿರ ಜಲಾವೃತವಾಗಿತ್ತು. ನದಿಯ ದಂಡೆಯ ಮೇಲಿರುವ ದೇವಾಲಯಗಳೂ ಸೇರಿ ಆವರಣದಲ್ಲಿರುವ ಈ ಹಳೆಯ ಗ್ರಂಥಾಲಯ ನೀರಿನಲ್ಲಿ ತೇಲುವಂತಾಗಿತ್ತು. ಇಂತಹ ಸಂದರ್ಭದಲ್ಲಿ ಗ್ರಂಥಾಲಯದಲ್ಲಿನ ಅಪರೂಪದ ಗ್ರಂಥಗಳು, ತಾಳೆಗರಿಯ ಸಾಹಿತ್ಯ, ಕೋರೆಕಾಗದಗಳು ಬಹುತೇಕ ಪ್ರಮಾಣದಲ್ಲಿ ನೀರಿಗೆ ಆಪೋಶನವಾಗುವ ಹಂತದಲ್ಲಿದ್ದವು. ಇಂತಹ ಪರಿಸ್ಥಿತಿಯಲ್ಲಿಯೇ ಅಲ್ಲಿನ ಸಿಬ್ಬಂದಿ ಹಾಗೂ ಭಕ್ತರು ನೀರಿನಲ್ಲಿಯೇ ಗ್ರಂಥಾಲಯ ಪ್ರವೇಶಿಸಿ ಅಲ್ಲಿನ ಅಮೂಲ್ಯ ಗ್ರಂಥ ರಾಶಿಯನ್ನು ರಕ್ಷಿಸಿದ್ದು ಒಂದು ಸಾಹಸವೇ ಸರಿ.

ಇದರ ಪರಿಣಾಮವಾಗಿ ಮುಂದೆ ಎಂತಹದ್ದೇ ತೊಂದರೆ ಎದುರಾದರೂ ಗ್ರಂಥಾಲಯದಲ್ಲಿನ ಸಾಹಿತ್ಯ ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ಗ್ರಂಥಾಲಯದ ವಿನ್ಯಾಸವನ್ನೇ ಬದಲಾಯಿಸಲಾಯಿತು. ಅಷ್ಟೆ ಅಲ್ಲ, ಈ ಗ್ರಂಥಾಲಯಕ್ಕೆ ಆಧುನಿಕತೆಯ ಸ್ಪರ್ಶವನ್ನೂ ನೀಡಲಾಗಿದೆ. ಡಿಜಿಟಲೀಕರಣವನ್ನೂ ಹೊಂದಿದೆ. ಕೈಬೆರಳ ತುದಿಯಲ್ಲಿ ಇಲ್ಲಿನ ಪುಸ್ತಕಗಳ ಪ್ರತಿ ಪುಟ ದೊರೆಯುವಂತೆ ಮಾಡುವ ಕೆಲಸ ನಡೆದಿದೆ. ಈಗಾಗಲೇ ಬಹುತೇಕ ಪುಸ್ತಕಗಳು ಸ್ಕ್ಯಾನ್ ಆಗಿದ್ದು, ಇನ್ನು ಕೆಲ ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಶಿವಯೋಗಮಂದಿರದ ಕ್ಷೇತ್ರದ ಮೇಲ್ವಿಚಾರಕರಾದ ರೇಣುಕಾಮಠ. ಸದ್ಯ ಗ್ರಂಥಾಲಯದ ಪೂರ್ಣ ನೋಟ ಬದಲಾಗಿದ್ದು, ಕುಳಿತು ಓದಲು ಕುರ್ಚಿ, ಸುಲಭವಾಗಿ ದೊರಕುವ ಪುಸ್ತಕಗಳ ಮಾಹಿತಿ, ಗಾಳಿ, ಬೆಳಕಿನ ವ್ಯವಸ್ಥೆ, ಗಣಕಯಂತ್ರ ಹೀಗೆಲ್ಲ ಆಧುನಿಕತೆಯನ್ನು ಅಳವಡಿಸಲಾಗಿದೆ. ಇದರ ಪರಿಣಾಮವಾಗಿಯೇ ಶತಮಾನ ಕಂಡ ಈ ಗ್ರಂಥಾಲಯ ಮತ್ತಷ್ಟು ಚೈತನ್ಯ ಹೊಂದಲು ಕಾರಣವಾಗಿದೆ.

ADVERTISEMENT

ಬದಾಮಿಯಿಂದ 14 ಕಿ.ಮೀ ದೂರದಲ್ಲಿರುವ ಈ ಸ್ಥಳ 1909ರ ಸಮಯದಲ್ಲಿ ದಟ್ಟ ಅರಣ್ಯವಾಗಿತ್ತು. ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಕೇಂದ್ರ ತೆರೆಯುವ ಉದ್ದೇಶದಿಂದ ಸ್ಥಳ ಹುಡುಕಾಟದ ಸಮದಲ್ಲಿ ಇಳಕಲ್‍ನ ಶ್ರೀ ವಿಜಯಮಹಾಂತ ಶಿವಯೋಗಿಗಳ ಮಠದಲ್ಲಿದ್ದ ಆಕಳೊಂದು ಈ ಸ್ಥಳ ತೋರಿದ ಕಾರಣ ಈ ತಾಣವನ್ನು ಶಿವಯೋಗ ಮಂದಿರ ಎಂಬ ಹೆಸರಿನಿಂದ ಕರೆಯಲಾಯಿತು ಎನ್ನುವುದು ಪ್ರತೀತಿ. ಸುಮಾರು 84 ಎಕರೆ ಪ್ರದೇಶದಲ್ಲಿರುವ ಈ ಧಾಮ 111 ವರ್ಷಗಳಿಂದಲೂ ಆಧ್ಯಾತ್ಮಿಕ ಕೇಂದ್ರವಾಗಿದ್ದು, ಧರ್ಮ ಸಾಧನೆಗಾಗಿ ಹಾಗೂ ಧ್ಯಾನಾಸಕ್ತರ ನೆಮ್ಮದಿಯ ತಾಣವಾಗಿದೆ.

ಇಲ್ಲಿ ಶ್ರೀ ಕುಮಾರೇಶ್ವರರ ಗದ್ದುಗೆ ಇರುವುದರಿಂದ ನಿತ್ಯ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಜೊತೆಗೆ ವಟುಗಳಿಗೆ ಯೋಗ, ಶಿವಯೋಗ(ಪೂಜೆ), ಧರ್ಮ, ತತ್ವಜ್ಞಾನ, ಸಾಹಿತ್ಯ, ಸಂಸ್ಕೃತ ಭಾಷೆ, ಸಂಸ್ಕೃತಿ, ಸಂಸ್ಕಾರ ಕಲಿಸಿಕೊಡುವ ಗುರುಕುಲವಾಗಿದೆ. ಅದಕ್ಕೆಂದೆ ಇದನ್ನು ಗುರುವಿರಕ್ತ ಪೀಠಗಳಿಗೆ ಯೋಗ್ಯ ಮೂರ್ತಿಗಳನ್ನು ತಯಾರಿಸುವ ಟಂಕಸಾಲೆ ಎಂತಲೂ ಚಿಂತಕರು ಕರೆಯುತ್ತಾರೆ. ವಿಜಯ ಮಹಾಂತೇಶ ಗ್ರಂಥಾಲಯದ ಜೊತೆಗೆ ರೇವಣಸಿದ್ದೇಶ್ವರ ವಾಚನಾಲಯ, ಸದಾಶಿವ ಮುದ್ರಣಾಲಯ, ಹಾಲಕೇರಿ ಅಜ್ಜಿನಗವಿ, ಮೇಲ್ಮಠ, ಹಳೆಗನ್ನಡ ಶಾಲೆ, ಕೊಟ್ಟೂರ ಬಸವೇಶ್ವರ ಮಂದಿರ, ಧ್ಯಾನಮಂದಿರ, ವ್ಯಾಕರಣಾಳ ಗದ್ದುಗೆ, ಕುಮಾರವನ, ಲತಾಮಂಟಪ, ಸಂಗೀತ ಪಾಠಶಾಲೆ, ಗೋಶಾಲೆ ಇಲ್ಲಿ ಓದಿಗೆ ಅನುಕೂಲ ಮಾಡಿಕೊಟ್ಟಿವೆ.

ಐತಿಹಾಸಿಕ ಗ್ರಂಥಾಲಯ

ಶಿವಯೋಗ ಮಂದಿರದಲ್ಲಿನ ವಟುಗಳಿಗೆ ಹದಿನೈದು ವರ್ಷಗಳ ಸಂಪೂರ್ಣ ಶಿಕ್ಷಣ ಒದಗಿಸಲಾಗುತ್ತದೆ. ಶಿಕ್ಷಣ ಪೂರ್ಣಗೊಂಡ ನಂತರ ಕಲಿತವರೇ ವಿರಕ್ತ ಮಠಕ್ಕೆ ಮಠಾಧೀಶರಾಗುತ್ತಾರೆ. ಇಲ್ಲವೇ ಯೋಗ್ಯರೆನಿಸಿದ ಜಂಗಮರಿಂದ ಪ್ರಸಾದಿ ಸ್ಥಳವನ್ನು ಪಡೆದು ದೇಶಿಕರೆನಿಸಿಕೊಳ್ಳುತ್ತಾರೆ. ವಿರಕ್ತಮಠಕ್ಕೆ ಶ್ರೀಗಳಾಗಿ ಶ್ರೀಮದ್ ನಿರಂಜನ ಪ್ರಣವಸ್ವರೂಪಿಯಾಗಿ ಅಥವಾ ಗುರುಮಠಕ್ಕೆ ಅಧಿಕಾರಿಯಾಗಿ ಶ್ರೀಮದ್‍ ಘನಲಿಂಗ ಚಕ್ರವರ್ತಿ ಶಿವಾಚಾರ್ಯರೂ ಆಗುತ್ತಾರೆ.      
ಇಂತಹ ಸ್ಥಳದಲ್ಲಿ ಭಾರತೀಯ ಪರಂಪರೆ ಅರಿಯುವುದಕ್ಕಾಗಿ, ಉಳಿಸುವುದಕ್ಕಾಗಿ ವಟುಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹಾನಗಲ್ಲದ ಕುಮಾರಸ್ವಾಮಿಗಳು 1910ರಲ್ಲಿಯೇ ಪುಸ್ತಕ ಜೋಳಿಗೆ ಮೂಲಕ ಇಲ್ಲಿ ಗ್ರಂಥಾಲಯ ಸ್ಥಾಪಿಸಿದರು. ಅವರು ನಾಡಿನ ವಿವಿಧ ಭಾಗಗಳಲ್ಲಿ ಪುಸ್ತಕ ಜೋಳಿಗೆ ಮಾಡಿದ ಕಾರಣ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಪುಸ್ತಕಗಳು ಇಲ್ಲಿಗೆ ಹರಿದುಬರಲು ಕಾರಣವಾಯಿತು. ಪ್ರಾಚೀನ ಭಾರತದ ಪರಂಪರೆ, ಅಧ್ಯಾತ್ಮ, ಸಾಹಿತ್ಯ, ವಚನಶಾಸ್ತ್ರ, ಧರ್ಮದ ಬಗ್ಗೆ ಮಾಹಿತಿ ದೊರೆಯಲು ಕಾರಣವಾಯಿತು ಎಂದು ಗ್ರಂಥಾಲಯದ ಕಾರ್ಯದರ್ಶಿ ಕುಮಾರಸ್ವಾಮಿ ಹೇಳುತ್ತಾರೆ.  

ಈ ವಿಜಯಮಹಾಂತೇಶ್ವರ ಗ್ರಂಥಾಲಯವನ್ನು ಅವಲೋಕಿಸಿದಾಗ ಅಲ್ಲಿಯ ಸಾಹಿತ್ಯ ಭಂಡಾರದ ಸಾಲು ಸಾಲು ಕಪಾಟುಗಳು ಆಶ್ಚರ್ಯ ಮೂಡಿಸುತ್ತವೆ. ವ್ಯಾಸೋಕ್ತ 18 ಪುರಾಣಗಳು, ವೇದಗಳು, ಉಪನಿಷತ್ತುಗಳು, ಸಂಸ್ಕೃತದ ವಾಚಸ್ಪತ್ಯ, ವಚನಶಾಸ್ತ್ರ, ಮಾತಾಚಾರ್ಯರ ಭಾಷ್ಯಗಳಂತಹ ಹಲವಾರು ಇತಿಹಾಸ ಹಾಗೂ ಧಾರ್ಮಿಕ, ಸಮಾಜಕ್ಕೆ ಸಂಬಂಧಿಸಿದ ಅಖಂಡ ಸಾಹಿತ್ಯ ಅಲ್ಲಿ ಕಂಡುಬರುತ್ತದೆ.  ಸಾವಿರಾರು ತಾಳೆಗರಿ ಹಾಗೂ ಹಸ್ತಪ್ರತಿಗಳ ಕಟ್ಟುಗಳಿವೆ. ಈ ಎಲ್ಲ ಹಳೆಯ ಸಾಹಿತ್ಯದ ಮಾಹಿತಿಯನ್ನು ವಟು, ಸಾಧಕರು ತಮ್ಮ ಬಿಡುವಿನ ವೇಳೆಯಲ್ಲಿ ಅರಿತುಕೊಳ್ಳುತ್ತಾರೆ.

ಪುಸ್ತಕ ದಾನಿಗಳ ಮಹಾಪೂರ

1910ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು, ಪಂಡಿತ ಉಮಾಪತಿಶಾಸ್ತ್ರಿಗಳು ಅನೇಕ ಗ್ರಾಮಗಳನ್ನು ಸುತ್ತಾಡಿ ಹಳೆಯ ಗ್ರಂಥಗಳನ್ನು ಸಂಗ್ರಹಿಸಿದರು. ಅಲ್ಲದೆ ಆಧುನಿಕ ಗ್ರಂಥಗಳನ್ನು ಖರೀದಿಸಿ ಈ ಗ್ರಂಥಾಲಯವನ್ನು ಶ್ರೀಮಂತಗೊಳಿಸಿದ್ದರು. ಸೊಲ್ಲಾಪುರದ ಮಲ್ಲಪ್ಪನವರು, ಸಿರಸಂಗಿಯ ಲಿಂಗರಾಜರು ಹಾಗೂ ಇತರರು ಕೊಡಮಾಡಿದ ಹಳೆಯ ಗ್ರಂಥಗಳ ಜೊತೆಗೆ ತಾಳೆಗರಿಯ ಓಲೆಗಳು ಹಾಗೂ ಕೋರೆ ಕಾಗದಗಳ ಕಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆ ಸಂದರ್ಭದಲ್ಲಿ ಈ ಸ್ಥಳದಲ್ಲಿ ಸದಾಶಿವ ಮುದ್ರಣಾಲಯವೂ ಇದ್ದು, ಇಲ್ಲಿಂದಲೇ ಕೆಲ ಪತ್ರಿಕೆಗಳು ಮುದ್ರಣಗೊಳ್ಳುತ್ತಿದ್ದವು.

ಶಿವಯೋಗಮಂದಿರದ ಗ್ರಂಥಾಲಯದ ಗ್ರಂಥಭಂಡಾರ
ಶಿವಯೋಗಮಂದಿರ ತಾಳೆಗರಿಗಳು

ಪುಸ್ತಕ ದಾನಿಗಳ ಮಹಾಪೂರ

1910ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಪಂಡಿತ ಉಮಾಪತಿಶಾಸ್ತ್ರಿಗಳು ಅನೇಕ ಗ್ರಾಮಗಳನ್ನು ಸುತ್ತಾಡಿ ಹಳೆಯ ಗ್ರಂಥಗಳನ್ನು ಸಂಗ್ರಹಿಸಿದರು. ಅಲ್ಲದೆ ಆಧುನಿಕ ಗ್ರಂಥಗಳನ್ನು ಖರೀದಿಸಿ ಈ ಗ್ರಂಥಾಲಯವನ್ನು ಶ್ರೀಮಂತಗೊಳಿಸಿದ್ದರು. ಸೊಲ್ಲಾಪುರದ ಮಲ್ಲಪ್ಪನವರು ಸಿರಸಂಗಿಯ ಲಿಂಗರಾಜರು ಹಾಗೂ ಇತರರು ಕೊಡಮಾಡಿದ ಹಳೆಯ ಗ್ರಂಥಗಳ ಜೊತೆಗೆ ತಾಳೆಗರಿಯ ಓಲೆಗಳು ಹಾಗೂ ಕೋರೆ ಕಾಗದಗಳ ಕಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆ ಸಂದರ್ಭದಲ್ಲಿ ಈ ಸ್ಥಳದಲ್ಲಿ ಸದಾಶಿವ ಮುದ್ರಣಾಲಯವೂ ಇದ್ದು ಇಲ್ಲಿಂದಲೇ ಕೆಲ ಪತ್ರಿಕೆಗಳು ಮುದ್ರಣಗೊಳ್ಳುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.