ಮಳೆಗಾಲದಲ್ಲಿ ಆಲಮಟ್ಟಿಯ ಹಿನ್ನೀರು ಆವರಿಸುತ್ತಿದ್ದಂತೆಯೇ ಘಟಪ್ರಭೆ ಕೃಷ್ಣೆಯಲ್ಲಿ ಲೀನಗೊಂಡು, ಕದಾಂಪುರದಿಂದ ಬಾಗಲಕೋಟೆಗೆ ಸಂಪರ್ಕ ಕಲ್ಪಿಸುವ ಕಾಲು ಹಾದಿ ಬಂದ್ ಆಗುತ್ತದೆ. ಕದಾಂಪುರ ಮಾತ್ರವಲ್ಲ, ಸುತ್ತಲಿನ ಯಂಕಂಚಿ, ಸಿದ್ನಾಳ, ಸಿಂದಗಿ, ಬೀಳಗಿ ತಾಲ್ಲೂಕಿನ ಯಳಗುತ್ತಿ ಗ್ರಾಮಗಳಿಗೂ ಇದೇ ಪರಿಸ್ಥಿತಿ. ಈ ಹಿನ್ನೀರಿನ ದಿಗ್ಬಂಧನ ಜುಲೈನಿಂದ ಡಿಸೆಂಬರ್‌ವರೆಗೆ ಮುಂದುವರಿಯುತ್ತದೆ.
ನೀರು ಆವರಿಸುತ್ತಿದ್ದಂತೆಯೇಘಟಪ್ರಭೆಯ ಆಚೆ ದಂಡೆಯ ಈ ಗ್ರಾಮಗಳಿಗೆ ಬಾಗಲಕೋಟೆಯಿಂದ ಯಾಂತ್ರಿಕ ದೋಣಿಯ ಸಂಚಾರ ಆರಂಭ. ಈ ಗ್ರಾಮಗಳವರು ವ್ಯಾಪಾರ–ಉದ್ಯೋಗಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ದೋಣಿಯನ್ನೇ ಆಶ್ರಯಿಸಿದ್ದಾರೆ. ನಿತ್ಯ ಹಾಲು–ಮೊಸರು ಹೊತ್ತು ತರುವ ಮಹಿಳೆಯರು, ಕ್ಯಾನ್‌ಗಳನ್ನು ತುಂಬಿಕೊಂಡು ದೋಣಿ ಏರುತ್ತಾರೆ. ಬೆಳೆದ ತರಕಾರಿ ಗಂಟು ಕಟ್ಟಿಕೊಂಡುರೈತರು ದೋಣಿ ಬರುವ ನಿರೀಕ್ಷೆಯಲ್ಲಿ ಕಾದು ನಿಲ್ಲುತ್ತಾರೆ. ಅಂಗಡಿ, ಮಳಿಗೆಗಳಲ್ಲಿ ಕೂಲಿ ಮಾಡಲು ನಗರಕ್ಕೆ ಹೋಗುವವರ ಚಿತ್ತವೂ, ನೀರ ಹಾದಿಯಲ್ಲಿ ದೋಣಿಯ ಹುಟ್ಟು ಹಾಕುವವರತ್ತಲೇ ಇರುತ್ತದೆ.
ಈ ಹಳ್ಳಿಗಳ ಜನರು ಜಿಲ್ಲಾ ಕೇಂದ್ರಕ್ಕೆ ತಲುಪಲು ಇದು ಪರ್ಯಾಯ ದಾರಿ. ಇನ್ನೊಂದು ಮುಖ್ಯ ರಸ್ತೆ ಇದೆ. ಆ ದಾರಿಯಲ್ಲಿ ಹೋದರೆ ಸುಮಾರು 30 ಕಿ.ಮೀ ಸುತ್ತಾಗುತ್ತದೆ. ಖಾಸಗಿ ವಾಹನ ಅಥವಾ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಹೋಗಲು 38 ರೂಪಾಯಿ ಬಸ್‌ಚಾರ್ಜ್ ಕೊಡಬೇಕು. ಹೀಗಾಗಿ, ದೋಣಿಯಲ್ಲಿ ಪಯಣಿಸುವುದರಿಂದ ಕೇವಲ ಎರಡು ಕಿಲೋಮೀಟರ್‌ನಲ್ಲಿ ಬಾಗಲಕೋಟೆ ತಲುಪುತ್ತಾರೆ. ಇದಕ್ಕೆ ಖರ್ಚಾಗುವುದು ₹5 ಮಾತ್ರ. ಹೀಗೆ ದೋಣಿ ಪಯಣದ ಶಾರ್ಟ್‌ಕಟ್ ದಾರಿಯಲ್ಲಿ ಹಣ ಮತ್ತು ಸಮಯ ಎರಡೂ ಉಳಿಯುತ್ತದೆ. ಹಾಗಾಗಿ ಕೆಲವರು ಈ ದಾರಿ ಅವಲಂಬಿಸುತ್ತಾರೆ.
ಹಾಲು–ಮೊಸರು ಮಾರಾಟ ಮಾಡುವ ಕದಾಂಪುರದ ಶಾಂತಮ್ಮನಂಥವರಿಗೆ ಈ ಪ್ರಯಾಣ ತುಸು ತ್ರಾಸ್ ಅನ್ನಿಸುತ್ತದೆ.‘ನೋಡ ತಮ್ಮಾ ಈ ಸೀಜನ್ದಾಗ ಬರಾಕ – ಹೋಗಾಕ ಬಾಳ್ ತ್ರಾಸ್ ಆಗತದ. ಎಷ್ಟೊತ್ತಿದ್ದರೂ ಈ ಹಡಗನ್ನ್ ನಂಬಕೊಂಡ ಇರಬೇಕ. ನಾ ದಿನಾ 200 ರೂಪಾಯಿದು ಹಾಲು–ಮೊಸರು ಮಾರಿದರ ಅದರಾಗ 10 ರೂಪಾಯಿ ಈ ಹಡಗಿನವನಿಗೆ ಕೋಡಬೇಕಾಗತೈತಿ. ಮತ್ತ ಹಡಗಿಗಿ ತಾಸ್‌ಗಟ್ಟಲೇ ಕಾಯಕೊಂತ ಕುಂದ್ರಬೇಕಾಗತದ. ಈ ನೀರ ಹೋಗುತನ ಈ ತ್ರಾಸ್ ತಪ್ಪಿದಲ್ಲ’ ಎನ್ನುತ್ತಾರೆ.
ಬೆಳಿಗ್ಗೆ 6 ಗಂಟೆಗೆ ದೋಣಿ ಸಂಚಾರ ಆರಂಭವಾಗುತ್ತದೆ. ಸಂಜೆ 7ಕ್ಕೆ ಸ್ಥಗಿತಗೊಳ್ಳುತ್ತದೆ. ಕೆಲ ಕಾಲೇಜು ಹುಡುಗರಿಗೆ ಇದು ಅನುಕೂಲವಾಗಿರಬಹುದು. ‘ನಮ್ ಕಾಲೇಜು 8 ಗಂಟೆಗೆ ಆರಂಭವಾಗುತ್ತೆ. ನಾನು ಪ್ರತಿದಿನ ಹಡಗಿನಿಂದ ಬಂದು ಕಾಲೇಜಿನಲ್ಲಿ ಮೊದಲೆರಡು ಪಿರೆಯಡ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆದರೂ ಇದೇ ನಮ್ಮ ನಿತ್ಯದ ಸಂಚಾರಕ್ಕೆ ಆಸರೆಯಾಗಿದೆ. ನಾವು ಬಸ್ ಪಾಸ್ ತಗಸಿದರೂ ಅದು ಉಪಯೋಗವಾಗುವುದಿಲ್ಲ’ ಎಂದು ದೋಣಿ ಪಯಣದ ಅನಿವಾರ್ಯತೆಯನ್ನು ವಿದ್ಯಾರ್ಥಿ ಸಂಗಮೇಶ ಹಿಟ್ನಳ್ಳಿ ವಿವರಿಸುತ್ತಾರೆ.
ಈ ವರ್ಷ ಮಳೆಗಾಲ ಮುಗಿದು, ಆಲಮಟ್ಟಿಯಲ್ಲಿ ಹಿನ್ನೀರು ಹೆಚ್ಚಾಗಿದೆ. ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ದೋಣಿ ವ್ಯವಸ್ಥೆ ಮಾಡಿದೆ. ಎಂದಿನಂತೆ ಮಹಿಳೆಯರು, ರೈತರು, ಕೂಲಿ ಕಾರ್ಮಿಕರು, ದೋಣಿಗಾಗಿ ಆಚೆ ಬದಿ ದಡದಲ್ಲಿ ಕಾಯುತ್ತಿದ್ದಾರೆ. ಮೊದಲು ತೆಪ್ಪಗಳಲ್ಲಿ ಓಡಾಡುತ್ತಿದ್ದರು. ಈಗಯಂತ್ರಚಾಲಿತ ದೋಣಿಗಳು ಆರಂಭವಾಗಿವೆ. ಈ ಅವಧಿಯ ನದಿ ನೀರ ಮೇಲಿನ ಸಂಚಾರಕ್ಕೆ ಇವರಿಗೆ ಅಂಬಿಗನೇ ಆಸರೆ.
ಯಾರು ಈ ಆರು ಹಳ್ಳಿಗರು..?
ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಈ ಗ್ರಾಮದ ಜನರು ಭೂಮಿ ಕಳೆದುಕೊಂಡಿದ್ದಾರೆ. ಕೆಲವರಿಗೆ ಪರಿಹಾರ ಸಿಕ್ಕಿತು. ಕದಾಂಪುರ, ಸಾಳಗುಂದಿ, ಸಿದ್ನಾಳ, ಸಿಂದಗಿ ಗ್ರಾಮಗಳ ಜನರಿಗೆ ಸರಿಯಾದ ಪರಿಹಾರ ಸಿಗಲಿಲ್ಲ. ಜಲಾಶಯ ನಿರ್ಮಾಣದ ನಂತರ ಈ ಹಳ್ಳಿಗಳ ಅರ್ಧ ಜಮೀನು ಮುಳುಗಡೆಯಾಯಿತು. ಇನ್ನರ್ಧ ಭಾಗ ಹಾಗೇ ಉಳಿದಿದೆ. ಇವರೆಲ್ಲರಿಗೂ ಸಮೀಪದ ಸೀಮಿಕೇರಿಯಲ್ಲಿ ಪುನರ್‌ವಸತಿ ಕಲ್ಪಿಸಲಾಗಿದೆ. ಆದರೂ ಅಲ್ಲಿಗೆ ಸ್ಥಳಾಂತರಗೊಂಡಿಲ್ಲ. ಹಾಗಾಗಿ ಉಳಿದಿರುವ ಅರ್ಧ ಜಮೀನಿನಲ್ಲಿಯೇ ಉಳುಮೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ.
ಪ್ರತಿವರ್ಷ ಡಿಸೆಂಬರ್ ಕೊನೆವಾರ ಇಲ್ಲವೇ ಜನವರಿ ಮೊದಲ ವಾರದಲ್ಲಿ ಹಿನ್ನೀರು ಖಾಲಿಯಾಗುತ್ತದೆ. ಆಗ ದೋಣಿಗಳು ಶೆಡ್‌ಗೆ ಹೋಗುತ್ತವೆ. ಅಂಬಿಗರೂ ವಿಶ್ರಾಂತಿಗೆ ತೆರಳುತ್ತಾರೆ. ದೋಣಿ ಸಂಚರಿಸುತ್ತಿದ್ದ ಜಾಗದಲ್ಲಿ ಜನ ನಡೆದು ಬರುತ್ತಾರೆ. ಕೆಲವರು ಬೈಕ್‌ನಲ್ಲಿ ಬರುತ್ತಾರೆ. ನಡೆಯಲು ಗಟ್ಟಿ ಇರುವವರಿಗೆ ಇದು ಪುಕ್ಕಟ್ಟೆ ಪಯಣ. ಅಂಥವರಿಗೆ ದೋಣಿಪಯಣ ತ್ರಾಸಿನ ಪಯಣವೇ.
ವರ್ಷದಲ್ಲಿ ಆರು ತಿಂಗಳು ಅಂಬಿಗರಿಗೆ, ದೋಣಿಗಳಿಗೆ ವಿಶ್ರಾಂತಿ. ‘ನಮಗ ಹಿನ್ನೀರ ಬಂದ ಮೇಲೇನೆ ಕೆಲಸ ಶುರುವಾಗತದ. ಹಿನ್ನೀರು ಹೋಗುವರೆಗೊ ದೋಣಿ ನಡೆಸಿ ಹೊಟ್ಟಿ ತುಂಬಿಸಿಕೊಳ್ಳತ್ತೀವಿ. ನೀರ ಹೋದಮ್ಯಾಲ ಬ್ಯಾರೆ ಕೆಲಸ ಮಾಡತೀವಿ’ ಎನ್ನುತ್ತಾರೆ ನಾವಿಕ ಮಲ್ಲಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.