ಜಗದೋದ್ಧಾರಕ ಶ್ರೀಕೃಷ್ಣ‘ತಾಯಿಗೆ ಬಾಯೊಳು ಮೂಜಗ ತೋರಿದ’. ಜಯನಗರ ಎಂಟನೇ ಬ್ಲಾಕ್‌ನಲ್ಲಿರುವ ಮೈಸೂರು ಶ್ರೀನಿವಾಸನ್ ತಿರುಮಲಾಚಾರ್ ಅವರು ಶ್ರೀಕೃಷ್ಣನ ಎಲ್ಲಾ ಲೀಲೆಗಳ ವಿಶ್ವದರ್ಶನವನ್ನೇ ಮಾಡಿಸುತ್ತಾರೆ. ಅವರ ಮನೆಯನ್ನು ‘ಕೃಷ್ಣಾಲಯ’ವೆಂದೋ, ‘ಶ್ರೀಕೃಷ್ಣ ವಸ್ತು ಸಂಗ್ರಹಾಲಯ’ ಎಂದೋ ಕರೆದರೂ ತಪ್ಪೇನಿಲ್ಲ.
ಎಂಟನೇ ಬ್ಲಾಕ್‌ನ 42ನೇ ಅಡ್ಡರಸ್ತೆಗೆ ತಿರುಗಿಕೊಳ್ಳುವಾಗ ಸಿಗುವ ಮೊದಲ ಮನೆಯೇ ತಿರುಮಲಾಚಾರ್ ಅವರದ್ದು. ತಾರಸಿ ಮೇಲಿನ ಒಂದು ಕೊಠಡಿಯನ್ನು ‘ಕೃಷ್ಣಾಲಯ’ವಾಗಿ ಮಾರ್ಪಡಿಸಿದ್ದಾರೆ. ಸಾಮಾನ್ಯವಾಗಿ ನವರಾತ್ರಿ ವೇಳೆ ಗೊಂಬೆಗಳನ್ನು ಕೂರಿಸುವ ಮಾದರಿಯಲ್ಲಿಯೇ ತಿರುಮಲಾಚಾರ್ ಕೃಷ್ಣನ ಗೊಂಬೆಗಳನ್ನು ಅಟ್ಟಳಿಗೆ ನಿರ್ಮಿಸಿ ಜೋಡಿಸಿದ್ದಾರೆ. 77ರ ಇಳಿವಯಸ್ಸಿನಲ್ಲಿಯೂ ಕೃಷ್ಣೋಪಾಸನೆ ಎಂದರೆ ದಣಿವರಿಯದ ಚೈತನ್ಯ ಅವರಿಗೆ. ಗೋಕುಲಾಷ್ಟಮಿ ಅಥವಾ ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಅವರಿಗೆ ಒಂದು ತಿಂಗಳ ಉಪಾಸನೆ, ಆರಾಧನೆಯ ಹಬ್ಬ.
‘ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ವೈಷ್ಣವರಾದ್ದರಿಂದ ಶ್ರೀಕೃಷ್ಣನ ಆರಾಧನೆ ನಮಗೆ ಶ್ರೇಷ್ಠ. ಸಣ್ಣ ವಯಸ್ಸಿನಿಂದಲೂ ತಂದೆ, ತಾಯಿ ಜನ್ಮಾಷ್ಟಮಿಯನ್ನು ಸಂಪ್ರದಾಯಬದ್ಧವಾಗಿ ಮಾಡುವುದನ್ನು ನೋಡುತ್ತಿದ್ದೆ. ಆದರೆ ಗೊಂಬೆಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿರಲಿಲ್ಲ.ಮದುವೆಯಾದ ಮೇಲೆ ನನ್ನ ಹೆಂಡತಿ ರಾಧಾ ನವರಾತ್ರಿಗೆ ಸಂಪ್ರದಾಯಕ್ಕೆಂದು ಹತ್ತಾರು ಗೊಂಬೆಗಳನ್ನು ಕೂರಿಸುತ್ತಿದ್ದಳು. ಆಗ ನನಗೆ ಶ್ರೀಕೃಷ್ಣನ ಗೊಂಬೆಗಳನ್ನು, ವಿಗ್ರಹಗಳನ್ನು ಸಂಗ್ರಹಿಸುವ ಉಮೇದು ಬಂತು. ಹಾಗೇ ಬೆಳೆಯುತ್ತಾ ಹೋಯಿತು. 25 ವರ್ಷಗಳಿಂದಲೂ ಪ್ರತಿ ವರ್ಷವೂ ಹೊಸ ಸಂಗ್ರಹ ಸೇರ್ಪಡೆಯಾಗುತ್ತಲೇ ಇದೆ. ದಸರಾ ಗೊಂಬೆ ಕೂರಿಸುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಸುಲಭ. ಯಾಕೆಂದರೆ ಗೊಂಬೆಗಳು ಸುಲಭವಾಗಿ ಸಿಗುತ್ತವೆ. ಆದರೆ ಶ್ರೀಕೃಷ್ಣನ ಕಥೆಯನ್ನು ಹೇಳುವ ಗೊಂಬೆಗಳು ವರ್ಷಕ್ಕೆ ಬೆರಳೆಣಿಕೆಯ ಮಾದರಿಗಳು ಮಾತ್ರ ಮಾರುಕಟ್ಟೆಯಲ್ಲಿ ಸಿಗುತ್ತವೆ. ನನ್ನ ಸಂಗ್ರಹದಲ್ಲಿರುವ ವಿಗ್ರಹಗಳ ಸಂಖ್ಯೆ ಸಾವಿರ ದಾಟಬಹುದು. ಸ್ಥಳಾವಕಾಶದ ಕೊರತೆಯಿಂದಾಗಿ ಆಯ್ದವುಗಳನ್ನು ಮಾತ್ರ ಜೋಡಿಸಿಟ್ಟಿದ್ದೇನೆ. ಗೋಕುಲಾಷ್ಟಮಿ ಸಮಯದಲ್ಲಿ ಮಾತ್ರ ಹೊರತೆಗೆದು ಮಗಳು ಪದ್ಮಶ್ರೀ ಮತ್ತು ನಾನು ಜೋಡಿಸುತ್ತೇವೆ’ ಎಂದು ತಮ್ಮ ‘ಮ್ಯೂಸಿಯಂ’ನ ಮಾಹಿತಿ ನೀಡುತ್ತಾರೆ ತಿರುಮಲಾಚಾರ್.
ಕೆಲ ವರ್ಷಗಳ ಹಿಂದೆ ಕೋಣನಕುಂಟೆ ಬಳಿ ಸ್ವಂತ ಮನೆ ಕಟ್ಟಿದಾಗ, ದೊಡ್ಡ ಹಾಲ್‌ನ್ನು ಕೃಷ್ಣ ವಿಗ್ರಹಗಳಿಗಾಗಿಯೇ ಮೀಸಲಿಟ್ಟಿದ್ದರಂತೆ. ಪತ್ನಿ ವಿಯೋಗದ ನಂತರದ ಅಲ್ಲಿ ಇರಲಾರದೆ ಈಗಿನ ಮನೆಗೆ ಸ್ಥಳಾಂತರಗೊಂಡರಂತೆ. ಸ್ವಂತ ಮನೆಯನ್ನು ಬಿಟ್ಟು ಬಂದಿರುವ ನೋವಿಗಿಂತಲೂ ಕೃಷ್ಣ ವಿಗ್ರಹಗಳಿಗೆ ಸ್ಥಳಾವಕಾಶ ಸಾಲುತ್ತಿಲ್ಲ ಎಂಬ ಕೊರಗು ಅವರಿಗೆ!
ತಿರುಮಲಾಚಾರ್ ಅವರಲ್ಲಿರುವ ವಿಗ್ರಹ, ಮೂರ್ತಿ ಮತ್ತು ಗೊಂಬೆಗಳ ಸಂಗ್ರಹದಲ್ಲಿ ಪೌರಾಣಿಕ ನೆಲೆಯ ವಿಶೇಷತೆಗಳೂ ಇವೆ. ಹೆಚ್ಚು ಬೆಳಕು ಕಾಣದ ಕೃಷ್ಣಲೀಲೆಗಳ ಸೂಕ್ಷ್ಮಗಳನ್ನು ಅವರು ವಿವರಿಸುತ್ತಾರೆ. ಪೂತನಿಯ ಅಣ್ಣ ಕಕಟಾಸುರನ ಸಂಹಾರ, ತೃಣಾವರ್ತ, ಪೂತನಿ ಸಂಹಾರ, ಗೋಪಿಕೆಯರ ವಸ್ತ್ರಾಪಹರಣ, ಗೊಲ್ಲರೊಡನೆ ಸಹಭೋಜನ, ಪಾಂಡವರ ಅಕ್ಷಯಪಾತ್ರೆಯ ಸನ್ನಿವೇಶ, ಕನ್ನಿಕೆಯರ ನಾಗ ಶಾಪ ವಿಮೋಚನೆ, ಅರ್ಧ ನಾರೀಶ್ವರರನ್ನು ನೆನಪಿಸುವ ಕೃಷ್ಣ–ರಾಧೆಯರ ಸಮ್ಮೋಹನಕೃಷ್ಣ,ಬಾಲಲೀಲೆಗಳು ಗಮನ ಸೆಳೆಯುತ್ತವೆ. ಶೇಷಶಯನ ರಂಗನಾಥನ ವಿಗ್ರಹ,ವಿಶ್ವರೂಪ ದರ್ಶನ ನೂರಾರು ವಿಗ್ರಹಗಳ ನಡುವೆ ಎದ್ದುಕಾಣುತ್ತವೆ.ಕಂಚಿನಲ್ಲಿ ಕುಸುರಿ ಕೆತ್ತನೆಗಳಿರುವ ‘ಉಯ್ಯಾಲೋತ್ಸವ’ ಆಕರ್ಷಕವಾಗಿದೆ.ಕದ್ದ ಬೆಣ್ಣೆಯನ್ನು ತನ್ನ ಸ್ನೇಹಿತರಿಗೆ ಹಂಚುತ್ತಾನೆಂದು ಬಲರಾಮ ದೂರಿತ್ತಾಗ ತಾಯಿ ಮನೆಯಿಂದಾಚೆ ಬಂದು ನೋಡಿದರೆ ಮೂರು ಮಂಗಗಳೊಂದಿಗೆ ಕೃಷ್ಣ ಕುಳಿತಿದ್ದಾನೆ! ಹೀಗೆ, ಬಿಡಿಕತೆಗಳನ್ನು ಹೇಳುವ ‘ಪ್ಯಾಕೇಜ್’ಗಳೂ ಇವೆ. ಶೆಲ್ವಪಿಳ್ಳೆ ಚೆಲುವನಾರಾಯಣ ರೂಪದಲ್ಲಿರಾಮಾನುಜಾಚಾರ್ಯರ ತೋಳಲ್ಲಿ ಕುಳಿತಿರುವ ತರುಣ ಕೃಷ್ಣನ ವಿಗ್ರಹ ಮೇಲುಕೋಟೆ ಚಲುವನಾರಾಯಣ ದೇವಸ್ಥಾನದ ಕತೆಯನ್ನು ನೆನಪಿಸುತ್ತದೆ.
ಕಂಚಿ, ಮಥುರಾ, ಕುಂಭಕೋಣಂ, ಪುದುಚೇರಿ,ಮೈಸೂರು, ಚನ್ನಪಟ್ಟಣ ಸೇರಿದಂತೆ ಹತ್ತಾರು ಊರುಗಳಿಂದ ತಂದಿರುವ ಮರ, ಪಿಒಪಿ, ಆವೆಮಣ್ಣು, ಮರ ಮತ್ತು ಕಂಚಿನ ವಿಗ್ರಹಗಳನ್ನು ಇಲ್ಲಿ ಕಾಣಬಹುದು.ಪ್ರತಿಯೊಂದರ ಮುಂದಿಟ್ಟಿರುವ ಚೀಟಿ, ಕೃಷ್ಣಕಥೆಯ ಸಂದರ್ಭವನ್ನು ಅರ್ಥೈಸಿಕೊಳ್ಳಲು ನೆರವಾಗುತ್ತವೆ.
ಜನ್ಮಾಷ್ಟಮಿ ಸಂಬಂಧ 30 ದಿನಗಳಲ್ಲೂ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಆರತಿ ಬೆಳಗಲಾಗುತ್ತದೆ. ಗೃಹಿಣಿಯರು ಬಂದು ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ, ಹಾಡುಗಾರಿಕೆಯನ್ನು ಸೇವಾರೂಪದಲ್ಲಿ ಸಮರ್ಪಿಸು ತ್ತಾರೆ. ಈ ಬಾರಿ ಸೆ. 2ರ ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಪೂಜೆ ಆರಂಭಿಸಿ ಸೋಮವಾರ ಮಧ್ಯಾಹ್ನ ಮುಕ್ತಾಯವಾಗುತ್ತದೆ. ಮಂಗಳವಾರ ಅಥವಾ ಬುಧವಾರ ಮಹಾ ಮಂಗಳಾರತಿ ಮಾಡಿ ನೈವೇದ್ಯ ಅರ್ಪಿಸುವಲ್ಲಿಗೆ ಈ ವರ್ಷದ ಜನ್ಮಾಷ್ಟಮಿ ಪೂಜೆ ಸಮಾಪ್ತಿಯಾಗುತ್ತದೆ. ‘ಕೃಷ್ಣ ಜಯಂತಿಯ ವಿಶೇಷ ಪೂಜೆಗಳಿಗೆಜಾತಿ ಭೇದವಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶವಿರುತ್ತದೆ’ ಎಂದು ಅವರು ಹೇಳುತ್ತಾರೆ.
ಸಂಪರ್ಕಕ್ಕೆ: 94482 66046.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.