ADVERTISEMENT

Father's Day 2024: ಅಪ್ಪನ ನೆರಳಲ್ಲಿ...

ರೂಪಾ .ಕೆ.ಎಂ.
Published 14 ಜೂನ್ 2024, 23:30 IST
Last Updated 14 ಜೂನ್ 2024, 23:30 IST
   
ಹೆಣ್ಣುಮಕ್ಕಳ ಪಾಲಿಗೆ ಮೊದಲ ಹೀರೊ ಎಂದರೆ ಅಪ್ಪನೇ. ಬದುಕಿನ ಓರೆ ಕೋರೆಗಳನ್ನು ದಾಟಿ ಮುನ್ನಡೆಯುವಾಗ ಅಪ್ಪನ ಕಿರುಬೆರಳೇ ಕಲ್ಪವೃಕ್ಷ. ಹೆಗಲ ಮೇಲೆ ಕೂರಿಸಿ ಜಗವ ತೋರಿಸುವ ಅಪ್ಪನ ಪ್ರತಿ ನಡೆಯೂ ಮಕ್ಕಳ ಪಾಲಿನ ಪಠ್ಯ. ಕಾಠಿಣ್ಯ ಮತ್ತು ಮೃದುತ್ವ ಎರಡನ್ನೂ ಒಡಲಲ್ಲಿಟ್ಟುಕೊಂಡೇ ಶಿಸ್ತು, ಸಂಯಮ ಕಲಿಸುವ, ಪ್ರೀತಿಯಿಂದ ಗದರುತ್ತಲೇ ದಿಕ್ಕು ತೋರುವ ಅಪ್ಪನ ಅಸೀಮ ಪ್ರೀತಿಗೆ ಶರಣೆನ್ನೋಣ.

ಹಾಸ್ಯಪ್ರಜ್ಞೆಯಿರುವ ಧೀಮಂತ

ಬದುಕಿನಲ್ಲಿ ಕುಗ್ಗಿದಾಗ ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅಣ್ಣ (ಅಪ್ಪ) ಖುದ್ದು ಹೇಳಿಕೊಡಲಿಲ್ಲ. ಆದರೆ ಸ್ವತಃ ಹಾಗೆ ಬದುಕಿ ತೋರಿಸಿದ್ದಾರೆ. ಕುಗ್ಗಿದಾಗ, ಸೋತಾಗ, ಅವಮಾನಗೊಂಡಾಗ ನಮ್ಮ ಸ್ಥಿತಿಯನ್ನು ನಾವೇ ನೋಡಿ ನಗುವ ಬಗೆಯನ್ನು ಕಲಿಸಿಕೊಟ್ಟಿದ್ದಾರೆ.  ಹಾಗೆ ಮಾಡುವುದರಿಂದ ಸಮಸ್ಯೆ ಎಂಥದ್ದೇ ಆಗಿರಲಿ; ಎಷ್ಟೇ ಬಿಗುವಿನ ಸ್ಥಿತಿ ಇರಲಿ ಅದಕ್ಕೊಂದು ತಿಳಿಯಾದ ಚೌಕಟ್ಟು ದಕ್ಕಿಬಿಡುತ್ತದೆ. ಕಠಿಣ ಪರಿಸ್ಥಿತಿಯಲ್ಲಿ ಮನಸ್ಸನ್ನು ತಿಳಿಯಾಗಿಟ್ಟುಕೊಂಡಷ್ಟು ನಮ್ಮ ತಪ್ಪನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ವಿಚಾರದಲ್ಲಿ ಅಣ್ಣ ನಂಬಿಕೆ ಇಟ್ಟವರು. ನಮ್ಮ ಜೀವನದಲ್ಲಿ ಸೋಲು, ನೋವು, ದುಃಖ ಹೀಗೆ ಎಂಥ ಪರಿಸ್ಥಿತಿಯೇ ಬರಲಿ; ಅದನ್ನು ನಮಗಿಂತ ಚಂದಕ್ಕೆ ಅರ್ಥಮಾಡಿಕೊಳ್ಳುವ ಜೀವವೊಂದಿದ್ದರೆ ಅದು ನನ್ನ ಅಣ್ಣ. ಏರಿಳಿತಗಳೆಲ್ಲಲ್ಲ ಅಣ್ಣ ಹೆಗಲು ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಂತೂ ನಿಚ್ಚಳವಾಗಿದೆ. 

ಅಣ್ಣ ಪ್ರೊ. ಬಿ.ಎಂ.ಕುಮಾರಸ್ವಾಮಿ ರಾಜ್ಯ ಕಂಡ ಪ್ರಸಿದ್ಧ ಪರಿಸರವಾದಿ, ಆರ್ಥಿಕತಜ್ಞರು. ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡವರು. ಆಯಾಯ ಕಾಲಕ್ಕೆ ಸಮಾಜದ ಅಗತ್ಯವನ್ನು ಮನಗಂಡು ಅದಕ್ಕಾಗಿ ಹೋರಾಟ ನಡೆಸಿದವರು. ಆದರೆ ಅವರೆಂದೂ ಬದುಕನ್ನು ವ್ರತದಂತೆ ಅವುಡುಗಚ್ಚಿ ಬದುಕಲಿಲ್ಲ. ಎಲ್ಲರನ್ನೂ ಪ್ರೀತಿಸುತ್ತಾ, ತಮಾಷೆ ಮಾಡುತ್ತಾ, ರೇಗಿಸುತ್ತಾ ತನ್ನ ಸುತ್ತ ಪ್ರಭಾವಳಿಯನ್ನು ಸೃಷ್ಟಿಸಿಕೊಂಡವರು. ನಿರ್ಣಾಯಕ ಸ್ಥಳಗಳಲ್ಲಿ ಖಡಕ್‌ ಧೋರಣೆಯನ್ನು ಅನುಸರಿಸಿಯೂ ಹಾಸ್ಯಪ್ರಜ್ಞೆಯನ್ನು ಮೆರೆದವರು. ಈ ಗುಣವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ADVERTISEMENT

 ಅಧ್ಯಯನಶೀಲ ಗುಣದಿಂದಾಗಿ 80ರ ವಯಸ್ಸಿನಲ್ಲಿಯೂ ಅಣ್ಣ ತಮ್ಮನ್ನು ಪ್ರಸ್ತುತವಾಗಿಟ್ಟುಕೊಂಡಿದ್ದಾರೆ. ನನ್ನ ಒಟ್ಟು ವ್ಯಕ್ತಿತ್ವದಲ್ಲಿ ಒಳಿತು ಕಂಡರೆ ಅವೆಲ್ಲವೂ ಅಣ್ಣ ಮತ್ತು ಅಮ್ಮನ ಕಾಣ್ಕೆಗಳು. 

-ದೀಪಾ ರವಿಶಂಕರ್‌, ಕಿರುತೆರೆ ಕಲಾವಿದೆ

ಬಿ.ಎಂ.ಕುಮಾರಸ್ವಾಮಿ ಜತೆ ದೀಪಾ ರವಿಶಂಕರ್

ಸೃಜನಶೀಲತೆಯ ಸಾಕಾರಮೂರ್ತಿ

ನಾನು ಭಾಗವತ ಕ್ಷೇತ್ರಕ್ಕೆ ಬಂದಿದ್ದೇ ಆಕಸ್ಮಿಕ. ಭಾಗವತಿಕೆ ಕಲಿಯಬೇಕು ಎಂದು ಅಪ್ಪ ತರಗತಿಗೆ ಹೋಗುತ್ತಿದ್ದರು. ಆದರೆ, ಅವರ ಗುರುಗಳು ‘ಮಗಳಿಗೆ ಕಲಿಸುವ’ ಎಂದು ಸಲಹೆ ಕೊಟ್ಟಾಗ ಅಪ್ಪ ಅದಕ್ಕೆ ಪ್ರೋತ್ಸಾಹ ಕೊಟ್ಟರು. ಹಿಮ್ಮೇಳ ಕಲಾವಿದರಾಗಿರುವ ಅಪ್ಪ ಭಾಗವತಿಕೆಯನ್ನು ಮುಂದುವರಿಸಿದ್ದರೆ ಈ ಕ್ಷೇತ್ರದಲ್ಲಿ ಅವರಿಗೆ ದೊಡ್ಡ ಭವಿಷ್ಯವೇ ಇತ್ತು. ಆದರೆ, ಅದನ್ನೆಲ್ಲ ಬದಿಗೊತ್ತಿ ನನ್ನ ಏಳಿಗೆಗಾಗಿ ದುಡಿದರು. ನಾಲ್ಕು ಜನ ಗುರುತಿಸುವ ಮಟ್ಟಿಗೆ ಸಾಧಿಸಲು ಸಾಧ್ಯವಾಗಿದ್ದರೆ ಅದು ಅಪ್ಪನ ಸಮರ್ಪಣಾ ಭಾವದಿಂದಲೇ. 

ಆರಂಭದಲ್ಲಿ ಭಾಗವತ ತರಗತಿಯಲ್ಲಿ ಹೇಳಿಕೊಟ್ಟಿದ್ದನ್ನು ಮನೆಯಲ್ಲಿ ತಾಲೀಮು ನಡೆಸುತ್ತಿದ್ದೆ. ತಾಲೀಮು ನಡೆಸುವಾಗ ಅಂದುಕೊಂಡ ಹಾಗೆ ಹಾಡಲು ಆಗಲಿಲ್ಲ. ಇದು ನನ್ನನ್ನು ಕುಗ್ಗಿಸಿತು. ‘ಆಗದು‘ ಎಂದು ಕೈಚೆಲ್ಲಿ ಕೂತೆ.  ಆದರೆ, ಛಲ ಬಿಡದ ಅಪ್ಪ, ‘ಏನಾಗ್ತದೆ ನೋಡುವ’ ಎಂದು ರಾತ್ರಿ 10ರವರೆಗೆ ಹಾಡಿಸಿದ್ದರು. ಅಂದು ನಾನು ಹಾಡುತ್ತ ಮಾಡಿದ ಪ್ರಯತ್ನಗಳೆಲ್ಲವೂ ನನ್ನೊಳಗೆ ಇಂಚಿಂಚು ಆತ್ಮವಿಶ್ವಾಸವನ್ನು ಮೊಗೆದು ಕೊಟ್ಟವು. ಮಗಳಿಗೆ ಕಲಿಸಬೇಕೆಂಬ ಅಪ್ಪನ ಈ  ಹಠವೇ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ.

ಅವರು ಶಾಲೆಯ ಶಿಕ್ಷಕ. ಬೈದು ಪಾಠ ಹೇಳುವ ಥರದವರಲ್ಲ. ನಗು ನಗುತ್ತಾ, ಮಕ್ಕಳಿಗೆ ಪಾಠ ಕಲಿಸುವ ‘ಭಾಳ ಒಳ್ಳೆ ನಮ್ಮ ಮೇಷ್ಟ್ರು’ ಪೈಕಿಯವರು. ‘ಯಾರು ಏನೇ ಹೇಳಿದರೂ ಅದರಲ್ಲಿರುವ ಸಕಾರಾತ್ಮಕ ಅಂಶವನ್ನು ಮಾತ್ರ ತೆಗೆದುಕೊಳ್ಳಬೇಕು. ಇಷ್ಟವಿಲ್ಲ ಎಂದರೆ ಸುಮ್ಮನಾಗಿಡಬೇಕೆ ಹೊರತು ನಕಾರಾತ್ಮಕವಾಗಿ ಜವಾಬು ಕೊಡಬಾರದು’  ಎಂಬುದನ್ನು ಯಾವಾಗಲೂ ಹೇಳುತ್ತಾರೆ. ಇದನ್ನು ಸಾಧ್ಯವಾದಷ್ಟು ಪಾಲಿಸಲು ಪ್ರಯತ್ನಿಸುತ್ತಿದ್ದೇನೆ. ಅವರಿಗಿರುವ ತಾಳ್ಮೆ, ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳುವ ಹಾದಿಯಲ್ಲಿದ್ದೇನೆ. ನನ್ನ ಪ್ರತಿ ಹೆಜ್ಜೆಯಲ್ಲಿಯೂ ಅಪ್ಪನ ನೆರಳಿದೆ. 

-ಕಾವ್ಯಶ್ರೀ ನಾಯಕ್‌ ಆಜೇರು, ಭಾಗವತರು

ಶ್ರೀಪತಿ ನಾಯಕ್‌ ಆಜೇರು ಜತೆ ಕಾವ್ಯಶ್ರೀ ನಾಯಕ್‌ ಆಜೇರು

ಧೈರ್ಯದ ನೆರಳು

ನನ್ನ ಕುಟುಂಬಕ್ಕೆ ಶಿಲ್ಪಕಲೆಯೆಂಬುದು ಪಾರಂಪರಿಕವಾಗಿ ಬಂದಿತ್ತು. ನನ್ನನ್ನೂ ಸೇರಿಸಿ ಏಳು ಜನ ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗನಿರುವ ಕುಟುಂಬ ನಮ್ಮದು. ಅಣ್ಣ ಶಿಲ್ಪಕಲೆಯಲ್ಲಿ ಪರಿಣತಿ ಪಡೆದಿದ್ದಾನೆ. ಹೆಣ್ಣುಮಕ್ಕಳಲ್ಲಿ ನಾನು ಒಬ್ಬಳೇ.  ಆರಂಭದಲ್ಲಿ ಅಪ್ಪಾಜಿಗೆ ಅಳುಕಿತ್ತು. ಶಿಲ್ಪಿಯಾಗುವುದು ಹೆಣ್ಣಿಗೆ ತುಸು ಕಷ್ಟ. ಶಿಲೆಗೆ ಉಳಿ ಪೆಟ್ಟು ನೀಡುವಾಗ, ಶಿಲ್ಪಿಯ ಮೈ–ಕೈಗೂ ಪೆಟ್ಟಾಗುವುದು ಸಹಜ. ನಾಜೂಕಿನ ಹೆಣ್ಣುಮಕ್ಕಳಿಗೆ ಇದು ಸಾಧ್ಯವೇ? ಎಂಬ ಪ್ರಶ್ನೆ ಇತ್ತು.  ಆದರೆ, ಇಡೀ ಸೃಷ್ಟಿಯಲ್ಲಿ ಹೆಣ್ಣು ಮಹತ್ತರದ ಪಾತ್ರವನ್ನು ವಹಿಸುವಾಗ, ಶಿಲ್ಪಕಲೆಯಲ್ಲಿ ಯಾಕೆ ಹಿಂದುಳಿಯಬೇಕು ಎನ್ನುವ ಛಲದಿಂದಲೇ ನಾನು ಈ ಕ್ಷೇತ್ರಕ್ಕೆ ಬಂದೆ. ನನ್ನ ಧೈರ್ಯ ನೋಡಿ ಅಪ್ಪಾಜಿ ಹೇಳಿದಿಷ್ಟು, ‘ನಿನ್ನ ದೃಢ ಸಂಕಲ್ಪದಿಂದ ಗೆದ್ದಿದ್ದಿಯಮ್ಮ. ಇನ್ನು ಸ್ವಪ್ರಯತ್ನದಿಂದ ಮುಂದುವರಿ’ ಈ ಮಾತು ಸೋತಾಗೆಲ್ಲ ಕೈಹಿಡಿಯುತ್ತದೆ. 

ಅಪ್ಪಾಜಿ ಜತೆ ಇದ್ದು 10 ವರ್ಷ ತರಬೇತಿ ಪಡೆದೆ. ಈಗ ಹತ್ತು ವರ್ಷಗಳಿಂದೀಚೆಗೆ ನಾನೇ ಶಿಲ್ಪಗಳನ್ನು ತಯಾರಿಸಿ ಮಾರಾಟ ಮಾಡುವಷ್ಟು ಪರಿಣತಿ ಸಾಧಿಸಿದ್ದೇನೆ. ಅಪ್ಪಾಜಿಗೆ 85ವರ್ಷ. ಈ ವಯಸ್ಸಿನಲ್ಲಿಯೂ ಅವರು ಕೆಲಸದಲ್ಲಿ ತೋರಿಸುವ ಬದ್ಧತೆ, ಉತ್ಸಾಹ ನನ್ನನ್ನು ಇನ್ನಷ್ಟು ಕೆಲಸ ಮಾಡುವಂತೆ ಪ್ರೇರಣೆ ನೀಡುತ್ತದೆ. ನಿರಾಸಕ್ತಿ ಎಂಬ ಪದಕ್ಕೆ ಅಪ್ಪನ ಶಬ್ದಕೋಶದಲ್ಲಿ ಅವಕಾಶವೇ ಇಲ್ಲ.  ಅಪ್ಪಾ ಉಳಿ ಪೆಟ್ಟು ಕೊಡುವುದರಲ್ಲಿ ಮಾತ್ರ ಪರಿಣತರಲ್ಲ. ಖುದ್ದು ಉಳಿಯನ್ನು ತಯಾರಿಸುವ ಕಮ್ಮಾರಿಕೆಯನ್ನು ಕಲಿತಿದ್ದಾರೆ. ಹೊಸತನ್ನು ಕಲಿಯಲು ಅವರು ಸದಾ ಮುಂದಿರುತ್ತಾರೆ. 

-ಸುಮಲತಾ ವೀರಭದ್ರಪ್ಪ, ಶಿಲ್ಪಿ

ವೀರಭದ್ರಪ್ಪ ಕಾಳಪ್ಪ ಕವಲೂರ ಅವರೊಂದಿಗೆ ಸುಮಲತಾ

ಸ್ವಾಭಿಮಾನವೇ ಸ್ವತ್ತು

ನನ್ನ ತಂದೆ ಸುಂದರ್‌ರಾಜ್‌ ಎನ್‌. ಬಹಳ ಸರಳ ಹಾಗೂ ಸ್ವಾಭಿಮಾನಿ. ಸ್ವತಃ ಉದ್ಯಮಿಯಾಗಿದ್ದರೂ ನಾನು ಉದ್ಯಮ ಕ್ಷೇತ್ರಕ್ಕೆ ಕಾಲಿಡಲು ನಿರಂತರವಾಗಿ ಅವರು ಕೊಟ್ಟ ಪ್ರೋತ್ಸಾಹವೇ ಕಾರಣ. 

ಎಷ್ಟೇ ಕಷ್ಟ ಬರಲಿ, ಬೇರೆಯವರ ಹತ್ತಿರ ಕೈ ಚಾಚದೇ ಬದುಕು ಕಟ್ಟಿಕೊಳ್ಳಬೇಕು. ಏಕಾಂಗಿಯಾಗಿಯೇ ಹೋರಾಟ ಮಾಡಬೇಕು ಎನ್ನುವುದು ಅಪ್ಪನಿಂದ ಪಡೆದ ಸ್ಫೂರ್ತಿಯ ಮಾತುಗಳು. ಮೊದಲಿನಿಂದಲೂ ಪೇಂಟಿಂಗ್‌ನಲ್ಲಿ ಆಸಕ್ತಿ ಇತ್ತು. ಅದನ್ನೇ ಬಂಡವಾಳವಾಗಿಸಿಕೊಂಡು ಮಣ್ಣಿನ ದೀಪಗಳಿಗೆ ಪೇಂಟಿಂಗ್ ಮಾಡಿದೆ. ರುಡ್‌ಸೆಟ್‌ ಸಂಸ್ಥೆಯಲ್ಲಿ ತರಬೇತಿ ಪಡೆದು, ಕೇವಲ
₹ 150 ಬಂಡವಾಳದಲ್ಲಿ ಮಣ್ಣಿನ ದೀಪಗಳನ್ನು  ತಯಾರಿಸುವ ಕೆಲಸ ಆರಂಭಿಸಿದೆ. ಅದು ಈಗ ಕಿರು ಉದ್ಯಮವಾಗಿ 10 ಮಂದಿ ಮಹಿಳೆಯರಿಗೆ ಕೆಲಸ ನೀಡುತ್ತಿರುವ ಸಂಸ್ಥೆಯಾಗಿ ರೂಪುಗೊಂಡಿದೆ. 

ಬೆಂಗಳೂರಲ್ಲಿ ಹುಟ್ಟಿ ಬೆಳೆದಿದ್ದರೂ, ಮದುವೆಯಾಗಿ ಮೈಸೂರಿಗೆ ಹೋದೆ. ಸಾಂಸಾರಿಕ ಜಂಜಾಟಗಳ ನಡುವೆ ಅಪ್ಪನ ಬದುಕನ್ನೇ ಆದರ್ಶವಾಗಿಟ್ಟುಕೊಂಡು ಅವರಂತೆ ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಂಡಿರುವುದಕ್ಕೆ ಹೆಮ್ಮೆ  ಮತ್ತು ಖುಷಿ ಇದೆ.  ಆರಂಭಿಕ ಹಂತದಲ್ಲಿ ಮಣ್ಣಿನ ದೀಪಗಳ ಬಗ್ಗೆ ಮಾರ್ಕೆಟಿಂಗ್‌ ಮಾಡಲು ಹೋಗುವಾಗೆಲ್ಲ ಅಪ್ಪ ನನ್ನ ಜತೆ ಬರುತ್ತಿದ್ದರು. ಅಷ್ಟೇ ಏಕೆ,  ಅಪ್ಪ ಈಚಿನ ದಿನಗಳಲ್ಲಿ ನಮ್ಮನ್ನು ಬಿಟ್ಟು ಅಗಲುವವರೆಗೂ ನನ್ನ ಜತೆ ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದರೂ ಅಪ್ಪ ಅವರ ಪೋಷಕರಿಂದ ಬಿಡಿಗಾಸು ಪಡೆಯದೇ ಬದುಕು ಕಟ್ಟಿಕೊಂಡಿದ್ದರು. ಅವರ ಒಟ್ಟಂದದ ಬದುಕು ನಮಗೂ ಪ್ರೇರಣೆ.  

-ಲತಾ ದುಷ್ಯಂತ್ ಕುಮಾರ್, ಉದ್ಯಮಿ

ಸುಂದರ್‌ರಾಜ್ ಅವರೊಂದಿಗೆ ಲತಾ

ಸ್ನೇಹ ಸಂಪಾದಿಸುವ ಔದಾರ್ಯ

ಪಿಯುಸಿಯಲ್ಲಿದ್ದಾಗೊಮ್ಮೆ ಪಿ.ಬಿ ರಸ್ತೆಯಲ್ಲಿ ರಾಂಗ್ ಸೈಡಲ್ಲಿ ಸ್ಕೂಟಿ ಪೆಪ್ ಪ್ಲಸ್ ಓಡಿಸಿ ಗಾಡಿ ನಜ್ಜುಗುಜ್ಜಾಗಿತ್ತು. ಅವರು ಪ್ರೀತಿಯಿಂದ ಕೊಡಿಸಿದ್ದ ಸ್ಕೂಟಿ ಅದು. ಆದರೆ, ಆ ಸ್ಕೂಟಿಯು ನನ್ನ ಮೈಮೇಲೆ ಒಂದು ಗಾಯವೂ ಗೀಚದೆ, ಎಲ್ಲ ನೋವನ್ನು ತಾನೇ ತೆಗೆದುಕೊಂಡಿತ್ತು. ಓಡಿಸುತ್ತಿದ್ದವರು ಬದುಕುಳಿ‌ಯುವ ಸಾಧ್ಯತೆ ಕಡಿಮೆ ಎಂದು ಹೇಳುವಷ್ಟು ಆ ಸ್ಕೂಟಿ ‘ಅಜ್ಜಪ್ಪಿ’ಯಾಗಿತ್ತು. ಆದರೆ, ಅಪ್ಪಾ ಏನೊಂದು ಮಾತು ಹೇಳದೇ ಆ ಸಂಜೆ ಬಹಳ ಹೊತ್ತಿನ ತನಕ ತನ್ನ ಕಾಲ ಮೇಲೆ ತಲೆ ಇರಿಸಿಕೊಂಡು ನನ್ನ ಹೆಗಲು ತಿಕ್ಕುತ್ತ ಹನಿಗಣ್ಣಾಗಿದ್ದರು. ಇದು ನನ್ನ ಅಪ್ಪ. ಕುಗ್ಗಿದಾಗ ಸಂತೈಸುವ ಪರಿಯೇ ಅಂಥದ್ದು. 

ಅಪ್ಪ ನನಗೆ ಕಾಗುಣಿತ ಹೇಳಿಕೊಟ್ಟವರು. ಕೆಲಸದ ನಿಮಿತ್ತ ದೂರದೂರುಗಳಿಗೆ ಪ್ರಯಾಣ ಮಾಡುತ್ತಿದ್ದ ಅವರಿಗೆ ಭಾನುವಾರ ಮಾತ್ರ ಬಿಡುವಿರುತ್ತಿತ್ತು. ಬೆಳಗಿನ ತಿಂಡಿಯ ನಂತರ ‘ಪಟ್ಟಿ ತಗಂಡ್ ಬಾ’ ಅಂತ ಮುಂದೆ ಕೂರಿಸಿಕೊಂಡು, ‘ಆಶೀರ್ವಾದ ಬರೀ ನೋಡ್ವಾ, ಸುಬ್ರಹ್ಮಣ್ಯ ಬರೀ ನೋಡುವಾ, ಕರತಲಾಮಲಕ ಅಂದ್ರೇನು ಹೇಳು? ಅದನ್ನು ವಾಕ್ಯದಲ್ಲಿ ಬಳಸು’ ಅಂತ ‘ಪ್ರಾಣ’ ತಿಂತಿದ್ದದ್ದು ನೆನಪಿದೆ. ಅವೆಲ್ಲ ಈಗ ನನ್ನ ಬರಹ ಬದುಕಿನ ಅಡಿಪಾಯಗಳಾಗಿವೆ. 

ಅವರ ಸ್ನೇಹವಲಯ ದೊಡ್ಡದು. ನಾನು ಅದಕ್ಕೆ ತದ್ವಿರುದ್ಧ. ನನಗಿರುವುದು ಅತಿ ವಿರಳ ಸ್ನೇಹಿತರು. ಅವರ ಹಾಗೆ ಯಾರನ್ನಾದರೂ ಮಾತನಾಡಿಸಿ, ಸ್ನೇಹ ಸಂಪಾದಿಸುವ ಔದಾರ್ಯವಿದ್ದರೆ ಎಷ್ಟೊಂದು ಚೆನ್ನಾಗಿ ಬರೀಬಹುದಿತ್ತಲ್ಲ ಎಂದು ಆಗಾಗ ಅನಿಸುತ್ತಿರುತ್ತದೆ.

 ಮಕ್ಕಳ ಸಲುವಾಗಿ ಎಲ್ಲ ಖುಷಿಗಳನ್ನು ಕೆಲ ವರ್ಷಗಳ ಕಾಲ ತಡೆ ಹಿಡಿದು, ನಿಸ್ವಾರ್ಥವಾಗಿ ಮಕ್ಕಳ ಸೇವೆಗೆ ನಿಲ್ಲುವವರೇ ಅಪ್ಪ, ಅಮ್ಮ. ಅಂಥವರು ಸಿಗೋದು ಮಕ್ಕಳ ಪುಣ್ಯ. ನನ್ನ ಹೆತ್ತವರೂ ಅದನ್ನೇ ಮಾಡಿದರು. ಅವರಿಲ್ಲದೇ ನಾನಿಲ್ಲ ಅನ್ನುವುದನ್ನು ಮಾತ್ರ ಧನ್ಯತೆಯಿಂದ ವೇದ್ಯ ಮಾಡಿಕೊಂಡಿರುವ ಸತ್ಯ. 

-ಕಾವ್ಯಾ ಕಡಮೆ, ಕಥೆಗಾರ್ತಿ

ಪ್ರಕಾಶ ಕಡಮೆ ಜತೆ ಕಾವ್ಯಾ ಕಡಮೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.