ADVERTISEMENT

ಅಜ್ಜನ ಜಾತ್ರೆ ಮಹಾದಾಸೋಹ

ಪ್ರಮೋದ
Published 27 ಜನವರಿ 2024, 23:30 IST
Last Updated 27 ಜನವರಿ 2024, 23:30 IST
<div class="paragraphs"><p>ದಾಸೋಹದ ಮನೆಯಲ್ಲಿ ಸಾಂಬಾರು ತಯಾರಿ ಕಾರ್ಯ ಪರಿಶೀಲಿಸಿದ ಅಭಿನವ<br>ಗವಿಸಿದ್ಧೇಶ್ವರ ಸ್ವಾಮೀಜಿ</p></div>

ದಾಸೋಹದ ಮನೆಯಲ್ಲಿ ಸಾಂಬಾರು ತಯಾರಿ ಕಾರ್ಯ ಪರಿಶೀಲಿಸಿದ ಅಭಿನವ
ಗವಿಸಿದ್ಧೇಶ್ವರ ಸ್ವಾಮೀಜಿ

   

ಚಿತ್ರಗಳು: ಭರತ್ ಕಂದಕೂರ

ಮೊದಲು ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಕೊಪ್ಪಳದ ಗವಿಮಠದ ಜಾತ್ರೆ ಹಿಂದಿನ ಎರಡು ದಶಕಗಳಿಂದೀಚೆಗೆ ನಾವೀನ್ಯತೆ ಪಡೆದುಕೊಂಡಿದೆ. ಜಾತ್ರೆ ಪೂರ್ವದಲ್ಲಿಯೇ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಕಂಡುಬರುತ್ತದೆ. ‘ಅಜ್ಜನ ಸೇವೆ’ ಎನ್ನುವ ಸಾರ್ಥಕ ಭಾವ ಭಕ್ತರಲ್ಲಿರುವ ಪರಿಣಾಮವೇ ದಾಸೋಹ ಮಹಾದಾಸೋಹವಾಗಿ ಬದಲಾಗಿದ್ದು, ಇದು ಫೆಬ್ರುವರಿ 9 ರವರೆಗೆ ಕನಿಷ್ಠ 30 ಲಕ್ಷ ಭಕ್ತರಿಗೆ ಸಮರ್ಪಣೆಯಾಗುತ್ತದೆ...

ADVERTISEMENT

***

ಸೂರ್ಯೋದಯಕ್ಕೂ ಮೊದಲು ಎದ್ದು ಮೈ ಹಣ್ಣಾಗುವಂತೆ ದಿನಪೂರ್ತಿ ದುಡಿದು ದಣಿಯುವ ರೈತಾಪಿ ವರ್ಗದ ಹಳ್ಳಿ ಜನರಿಗೆ ಅದಾಗಲೇ ಮಲಗುವ ಹೊತ್ತಾಗಿದ್ದರೂ ಯಾರೂ ಮಲಗಿರಲಿಲ್ಲ. ಹೊತ್ತು ಏರುತ್ತಿದ್ದಂತೆ ಜೋಳದ ರೊಟ್ಟಿ ತಟ್ಟುವ ಸದ್ದು ಜೋರಾಗಿ ಕೇಳುತ್ತಿತ್ತು. ನಿಗಿನಿಗಿ ಕೆಂಡವಾಗಿದ್ದ ಕಟ್ಟಿಗೆಯ ಒಲೆಯ ಮುಂದೆ ಕುಳಿತಿದ್ದ ಮಹಿಳೆಯರಿಗೆ ಅದರ ಶಾಖ ತಟ್ಟಿದರೂ ಅದರತ್ತ ಗಮನ ಕೊಡದೆ ರೊಟ್ಟಿ ತಟ್ಟುತ್ತಿದ್ದರು.

ತಮ್ಮ ಪಾಲಿನ ಕೊನೆಯ ರೊಟ್ಟಿ ಮಾಡಿ ಮುಗಿಸಿ ಕೈಗೆ ಅಂಟಿಕೊಂಡಿದ್ದ ಹಿಟ್ಟನ್ನು ನೀರಿನಿಂದ ತೊಳೆದುಕೊಳ್ಳುತ್ತಿದ್ದ ಕೊಪ್ಪಳ ತಾಲ್ಲೂಕಿನ ಹಟ್ಟಿ ಗ್ರಾಮದ ಹನುಮವ್ವಗೆ ‘ಎಷ್ಟಾದರೂ ಹಿಟ್ಟು ಕೊಡಿ, ರೊಟ್ಟಿ ಮಾಡಿಕೊಡುತ್ತೇನೆ’ ಎನ್ನುವ ಅತ್ಯುತ್ಸಾಹ. ‘ಒಂದು ರೊಟ್ಟಿ ಮಾಡಲು ಎಷ್ಟು ಹಣ ತೆಗೆದುಕೊಳ್ಳಿತ್ತೀರಿ’ ಎನ್ನುವ ಪ್ರಶ್ನೆಗೆ ‘ನಯಾಪೈಸೆಯೂ ಇಲ್ಲ’ ಎನ್ನುವ ಜೊತೆಗೆ ‘ಅಜ್ಜನ ಜಾತ್ರೆಗೆ ಸಣ್ಣ ಸೇವೆ’ ಎಂದು ತಮ್ಮ ಎದುರಿದ್ದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಫೋಟೊಕ್ಕೆ ನಮಸ್ಕರಿಸಿದರು.

ಹಟ್ಟಿ ಗ್ರಾಮದಲ್ಲಿ 300 ಕುಟುಂಬಗಳಿವೆ. ದಶಕದಿಂದಲೂ ಡಿಸೆಂಬರ್‌ ಕೊನೆ ಅಥವಾ ಜನವರಿ ಮೊದಲ ವಾರದಲ್ಲಿ ರಾತ್ರಿ ವೇಳೆಯಲ್ಲಿ ಎಲ್ಲ ಮನೆಗಳಲ್ಲಿಯೂ ರೊಟ್ಟಿ ತಟ್ಟುವ ಸದ್ದು ಮಾರ್ದನಿಸುತ್ತದೆ. 

ಜಿಲ್ಲೆಯಲ್ಲಿ ಈಗ ಬರಗಾಲವಿದೆ. ಬಿತ್ತಿದ ಬೆಳೆ ಹೊಲದಲ್ಲಿಯೇ ಒಣಗಿ ಹೋಗಿದೆ. ಕೂಲಿ ಕೆಲಸವೂ ಸಿಗುತ್ತಿಲ್ಲ. ಒಪ್ಪೊತ್ತಿನ ಊಟ ಹೇಗೆ ಎನ್ನುವ ಚಿಂತೆಯೂ ಇದೆ. ಆದರೂ ಅವರಲ್ಲಿ ವರ್ಷಾಂತ್ಯ ಬಂದರೆ ಭಾರಿ ಸಂಭ್ರಮ. ಇದಕ್ಕೆಲ್ಲ ಕಾರಣ ‘ಅಜ್ಜನ ಜಾತ್ರೆ’ ಹಾಗೂ ‘ರೊಟ್ಟಿ ಜಾತ್ರೆ’ ಎಂದು ಕರೆಯಿಸಿಕೊಳ್ಳುವ ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ. ಇದು ಹಳ್ಳಿ ಜನರ ಬದುಕಿನ ನೋವುಗಳನ್ನು ಮರೆಯಿಸಿ ಸಂಭ್ರಮ ಮೂಡಿಸುತ್ತಿದೆ.

ದಿನ ದೂಡುವುದೇ ಕಷ್ಟವೆನ್ನುವ ಪರಿಸ್ಥಿತಿಯಿದ್ದರೂ ಹನುಮವ್ವಗೆ ‘ಸೇವೆ’ ಮಾಡಲು ಒಂದಿನಿತೂ ಬೇಸರವಿಲ್ಲ. ‘ಅಜ್ಜನ (ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ) ಆಶೀರ್ವಾದವಿದ್ದರೆ ಬರಗಾಲ ಕೂಡ ಸಿರಿಗಾಲವಾಗುತ್ತದೆ’ ಎಂಬ ಅವರ ಮಾತು ಮಠದ ಮೇಲಿನ ಭಕ್ತಿಗೆ ಸಾಕ್ಷಿಯಂತಿತ್ತು. ಮಠಕ್ಕೆ ತಲುಪಬೇಕಾದ ಮೆಕ್ಕೆಜೋಳ, ಸಜ್ಜೆ, ಜೋಳ, ಗೋಧಿ, ತರಕಾರಿ–ಹೀಗೆ ಎಲ್ಲವನ್ನೂ ಸ್ವಚ್ಛಗೊಳಿಸುವ ಕಾಯಕವನ್ನು ಹಟ್ಟಿ ಗ್ರಾಮದ ಮಹಿಳೆಯರು ಮಾಡುತ್ತಿದ್ದರು.

ಮಹಿಳೆಯರು ಊರಲ್ಲಿದ್ದುಕೊಂಡು ಈ ಕೆಲಸಗಳನ್ನು ಮಾಡಿದರೆ, ಯುವಕರು ಹಾಗೂ ಊರಿನ ಹಿರಿಯರು ದವಸ, ಧಾನ್ಯಗಳನ್ನು ಟ್ರ್ಯಾಕ್ಟರ್‌ಗಳಲ್ಲಿ, ಚಕ್ಕಡಿಗಳಲ್ಲಿ ಹಾಕಿಕೊಂಡು ಅದಕ್ಕೊಂದಷ್ಟು ಅಲಂಕಾರ ಮಾಡಿ ಮೆರವಣಿಗೆ ಮೂಲಕ ಮಠಕ್ಕೆ ಒಪ್ಪಿಸುತ್ತಾರೆ. ಹಟ್ಟಿ ಗ್ರಾಮದ ಊರ ದೇವಿಯ ಜಾತ್ರೆಯ ಸಮಯದಲ್ಲಿ ಜನರಿಂದ ಸಂಗ್ರಹಿಸುವ ಹಣದಲ್ಲಿ ಉಳಿದದ್ದನ್ನು ಕೆಲವರಿಗೆ ಹಂಚುತ್ತಾರೆ. ಆಗ ಹಣ ಪಡೆದವರು ಗವಿಮಠದ ಜಾತ್ರೆ ವೇಳೆಗೆ ದುಪ್ಟಟ್ಟು ಕೊಡಬೇಕು. ಹೀಗೆ ದಶಕದ ಹಿಂದೆ ನೂರು ರೂಪಾಯಿಯಿಂದ ಆರಂಭವಾದ ‘ಧನ ಸೇವೆ’ ಈಗ ಲಕ್ಷಾಂತರ ರೂಪಾಯಿ ಲೆಕ್ಕಕ್ಕೆ ಬಂದಿದೆ. ಇದೇ ಹಣದಿಂದ ದಿನಸಿ ಖರೀದಿಸಿ ರೊಟ್ಟಿಗಳನ್ನು ತಯಾರಿಸಲಾಗುತ್ತಿದೆ.

ಇದು ಹಟ್ಟಿ ಗ್ರಾಮದ ಕಥೆಯಷ್ಟೇ ಅಲ್ಲ. ಗವಿಮಠದ ಜಾತ್ರೆಗೂ ಮೊದಲೇ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಬಹುತೇಕ ಹಳ್ಳಿಗಳಲ್ಲಿ ಇದೇ ರೀತಿಯ ಸಂಭ್ರಮ ಮನೆ ಮಾಡುತ್ತದೆ. ಜಾತ್ರೆ ಮೂರು ದಿನ ನಡೆದರೆ ಹಳ್ಳಿಗಳಲ್ಲಿ ದಿನಸಿ ತಯಾರಿಯಿಂದ ಹಿಡಿದು ಜಾತ್ರೆಯ ಮಹಾ ರಥೋತ್ಸವ ಮುಗಿಯುವ ತನಕ ಸುಮಾರು ಎರಡು ತಿಂಗಳು ಸಡಗರ ಕಂಡು ಬರುತ್ತದೆ. 

ಸಿಂಧನೂರು, ಕಾರಟಗಿ ಹಾಗೂ ಮಸ್ಕಿ ತಾಲ್ಲೂಕುಗಳ ಸುತ್ತಮತ್ತಲಿನ 50 ಗ್ರಾಮಗಳ ಭಕ್ತರು 15 ದಿನ ಖುಷಿಯಿಂದಲೇ ಎಂಟು ಲಕ್ಷ ಹೋಳಿಗೆ ತಯಾರಿಸಿದ್ದಾರೆ. ಹೋಳಿಗೆ ತಯಾರಿಸಲು ಬೇಕಾದ ಸಾಮಗ್ರಿಗಳನ್ನು ಪ್ಯಾಕೇಟ್‌ ಮಾಡಿ ಹಳ್ಳಿಗಳ ಪ್ರತಿ ಮನೆ ಮನೆಗೂ ಹಂಚಲಾಗುತ್ತದೆ. ಮನೆಯಲ್ಲಿ ತಯಾರಾಗುವ ಹೋಳಿಗೆಗಳನ್ನು ಗ್ರಾಮದ ದೇವಸ್ಥಾನ ಅಥವಾ ಸಮುದಾಯ ಭವನದಲ್ಲಿ ಸಂಗ್ರಹಿಸಿಟ್ಟು ಗವಿಮಠಕ್ಕೆ ತರಲಾಗುತ್ತದೆ. ಹಲವು ಸಿರಿವಂತರು ಈ ಕಾರ್ಯಕ್ಕೆ ನೆರವು ನೀಡುತ್ತಾರೆ. ಹಲವು ಗ್ರಾಮಗಳ ಸಾವಿರಾರು ಕುಟುಂಬಗಳಿಗೆ ಕೆಲಸ ಹಂಚಿಕೆಯಾಗುವುದರಿಂದ ಸೇವೆ ಯಾರಿಗೂ ಹೊರೆ ಎನಿಸುವುದಿಲ್ಲ.

ಮಹಾದಾಸೋಹಕ್ಕೆ ಅಡುಗೆ ಮಾಡುವವರು, ತರಕಾರಿ ಹೆಚ್ಚುವವರ ಕೊರತೆಯಾಗುವುದಿಲ್ಲ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಜನ ಸ್ವಯಂಪ್ರೇರಿತರಾಗಿ ಬಂದು ಹಗಲಿರುಳು ಸೇವೆ ಮಾಡುತ್ತಾರೆ. 15 ದಿನ ನಡೆಯುವ ಮಹಾದಾಸೋಹಕ್ಕೆ ಸೇವೆ ಸಲ್ಲಿಸಲು ಎರಡ್ಮೂರು ತಿಂಗಳು ಮೊದಲೇ ಹೆಸರು ನೋಂದಣಿ ಮಾಡಿಸುವ ಸಂಘಗಳು ಹಾಗೂ ಊರುಗಳು ಇವೆ. ಮಠ ಅವರಿಗೆ ಜವಾಬ್ದಾರಿ ಹಂಚುತ್ತದೆ.

ಅಜ್ಜನ ಜಾತ್ರೆಗೆ ನಮ್ಮದೂ ಒಂದಷ್ಟು ಸೇವೆ ಇರಲಿ ಎನ್ನುವ ಭಕ್ತಿಯೇ ಯುವಕರ, ಮಹಿಳೆಯರ, ಹಿರಿಯರನ್ನು ‘ಮಹಾದಾಸೋಹ’ದ ಮನೆಯಲ್ಲಿ ಒಂದುಗೂಡಿಸುತ್ತದೆ. ಮಹಿಳಾ ಸ್ವಸಹಾಯ ಸಂಘದವರು, ಪತ್ರಕರ್ತರು, ವಿದ್ಯಾರ್ಥಿಗಳು, ಸ್ನೇಹಿತರು– ಹೀಗೆ ಪ್ರತಿಯೊಬ್ಬರೂ ಸೇವೆ ಮಾಡುತ್ತಾರೆ.

ನಾಲ್ಕೂವರೆ ಲಕ್ಷ ಮಿರ್ಚಿ

ಆರೇಳು ವರ್ಷಗಳ ಹಿಂದಿನಿಂದಲೂ ಜಾತ್ರೆಯಲ್ಲಿ ಮಿರ್ಚಿ ಮಾಡಲಾಗುತ್ತಿದೆ. ಇದಕ್ಕಾಗಿ ‘ಮಿರ್ಚಿ ಬಳಗ’ ಮಾಡಿಕೊಂಡಿರುವ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಈ ಬಾರಿ ನಾಲ್ಕೂವರೆ ಲಕ್ಷ ಮಿರ್ಚಿ ತಯಾರಿಸಲು ಸಿದ್ಧತೆ ಮಾಡಿಕೊಂಡಿದ್ದು, 400 ಜನ ಬಾಣಸಿಗರು ಏಕಕಾಲಕ್ಕೆ ಮಿರ್ಚಿ ತಯಾರು ಮಾಡುವರು.

ಮಠಕ್ಕೆ ಹೀಗೆ ಹರಿದು ಬರುವ ಆಹಾರ ಪದಾರ್ಥಗಳ ‘ಸಾಗರ’ ಒಂದಡೆಯಾದರೆ, ಅಚ್ಚುಕಟ್ಟಾಗಿ ಭಕ್ತರಿಗೆ ತಲುಪಿಸುವ ವ್ಯವಸ್ಥೆ ಕೂಡ ಅಷ್ಟೇ ಶಿಸ್ತುಬದ್ಧ. ಅಡುಗೆ ತಯಾರಿಸಲು ಬಳಸುವ ಬೃಹತ್‌ ಗಾತ್ರದ ಕೊಪ್ಪರಿಕೆಗಳು ದೊಡ್ಡ ಈಜುಕೊಳಗಳಂತೆ ಭಾಸವಾಗುತ್ತವೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಉದ್ಯಮಿಗಳು, ಸಿರಿವಂತರು ಟನ್‌ ಲೆಕ್ಕದಲ್ಲಿ ನೀಡುವ ಅಕ್ಕಿ ಮಠಕ್ಕೆ ಬರುವ ಪ್ರತಿ ಭಕ್ತರ ಹಸಿವು ನೀಗಿಸುತ್ತವೆ. ಜಾತ್ರೆಯ 15 ದಿನಗಳ ಅವಧಿಯಲ್ಲಿ ಕಟ್ಟಿಗೆಯ ಒಲೆ ನಿರಂತರವಾಗಿ ‘ಮಹಾದಾಸೋಹ ಜ್ಯೋತಿ’ಯಾಗಿ ಉರಿಯುತ್ತಲೇ ಇರುತ್ತದೆ. ಮಠದ ದಾಸೋಹ ವ್ಯವಸ್ಥೆ ಸಮಗ್ರ ಉಸ್ತುವಾರಿಯನ್ನು ಖುದ್ದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ನೋಡಿಕೊಳ್ಳುತ್ತಾರೆ. ಹೀಗಾಗಿ ಮಠಕ್ಕೆ ಬರುವ ಕೊನೆಯ ಭಕ್ತನ ಊಟವಾಗುವ ತನಕ ಕಾಯುವ ಪ್ರಸಾದದ ಕೌಂಟರ್‌ ಸದಾ ಅನ್ನಪೂರ್ಣೆಯಂತೆ ಕಾಣಿಸುತ್ತದೆ. 

ರಬ್ಬುಳಿಗೆಯಿಂದ ಭಕ್ಷ್ಯ ಭೋಜನದವರೆಗೆ

ಅನ್ನ, ಅಕ್ಷರ ಹಾಗೂ ಆಧಾತ್ಮವನ್ನು ಆದರ್ಶವಾಗಿಟ್ಟುಕೊಂಡ ಗವಿಮಠದಲ್ಲಿ 208 ವರ್ಷಗಳಿಂದ ಕಾರ್ಯಕ್ರಮಗಳು ನಡೆಯುತ್ತಿವೆ. ಮಠದ ಸಂಪ್ರದಾಯ ಆಚರಣೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಜಾತ್ರೆ ಸೀಮಿತವಾಗಿತ್ತು. ಮಠದಲ್ಲಿಯೇ ಜೋಳ ಬೀಸಿ ಮಾಡಲಾಗುತ್ತಿದ್ದ ರಬ್ಬುಳಿಗೆ (ಜೋಳದ ಅನ್ನ), ಸಜ್ಜಕ, ಬದನೇಕಾಯಿ ಪಲ್ಲೆ ಎರಡು ದಶಕಗಳ ಹಿಂದಿನ ದಾಸೋಹವಾಗಿತ್ತು. ಮಠಕ್ಕೆ ಭಕ್ತರಿಂದ ಬರುತ್ತಿದ್ದ ದಿನಸಿ ಕಡಿಮೆ ಪ್ರಮಾಣದಲ್ಲಿತ್ತು. 

2002ರಲ್ಲಿ ಗವಿಮಠಕ್ಕೆ 18ನೇ ಪೀಠಾಧಿಪತಿಯಾಗಿ ಈಗಿನ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪಟ್ಟಾಧಿಕಾರ ವಹಿಸಿಕೊಂಡ ನಂತರದ ಎರಡ್ಮೂರು ವರ್ಷಗಳಲ್ಲಿ ಜಾತ್ರೆಯ ಸ್ವರೂಪ ಸಂಪೂರ್ಣವಾಗಿ ಬದಲಿಸಿದರು. ಅವರು ಮಠದ ವಿದ್ಯಾರ್ಥಿಯೇ ಆಗಿ ಒಳ–ಹೊರಗನ್ನು ತಿಳಿದಿದ್ದರಿಂದ ಜಾತ್ರೆಯನ್ನು ಸಾಮಾಜಿಕ ಜಾಗೃತಿ ಯಾತ್ರೆಯಾಗಿ ಮಾಡಿದರು. ಜಾತ್ರೆ ಸಮಯದಲ್ಲಿ ಮೂರು ದಿನಕ್ಕೆ ಸೀಮಿತವಾಗಿದ್ದ ದಾಸೋಹವನ್ನು 15 ದಿನಗಳಿಗೆ ವಿಸ್ತರಿಸಿದರು.

ಇಷ್ಟೆಲ್ಲ ರಸದೌತಣ!

ಮಾದಲಿ, ಹೋಳಿಗೆ, ಕರದಂು, ಮೈಸೂರು ಪಾಕ್‌, ರವೆಉಂಡೆ, ಜಾಮೂನು ಪದಾರ್ಥಗಳೇ 800 ಕ್ವಿಂಟಲ್‌ನಷ್ಟು ಸಂಗ್ರಹವಾಗಿದೆ. 19ರಿಂದ 20 ಲಕ್ಷದಷ್ಟು ರೊಟ್ಟಿ ಗುಡ್ಡವೇ ನಿರ್ಮಾಣವಾಗಿದೆ. 700 ಕ್ವಿಂಟಲ್ ಅನ್ನ, 300 ಕ್ವಿಂಟಲ್ ತರಕಾರಿ, 300 ಕ್ವಿಂಟಲ್ ದವಸಧಾನ್ಯ, 15 ಕ್ವಿಂಟಲ್ ತುಪ್ಪ, 15 ಸಾವಿರ ಲೀಟರ್ ಹಾಲು ಹಾಗೂ ಮೊಸರು, ಆರು ಸಾವಿರ ಕೆ.ಜಿ. ಉಪ್ಪಿನಕಾಯಿ, 700 ಕ್ವಿಂಟಲ್ ಕೆಂಪು ಚಟ್ನಿ, ಪುಟಾಣಿ ಪುಡಿ, ಅಗಸಿಪುಡಿ ಹೀಗೆ ತರಹೇವಾರಿ ಆಹಾರ ಜಾತ್ರೆಗೆ ಬರುವ ಭಕ್ತರಿಗೆ ರಸದೌತಣ ಉಣಬಡಿಸುತ್ತದೆ. 

ಕೊಪ್ಪಳ ತಾಲ್ಲೂಕಿನ ಹಟ್ಟಿ ಗ್ರಾಮದಲ್ಲಿ ಗವಿಮಠಕ್ಕೆ ಕಳುಹಿಸಲು ಕಾಳು ಹಸನು ಮಾಡುತ್ತಿರುವ ಮಹಿಳೆಯರು
ಸಿಹಿ ಮಾದಲಿ ತುಂಬುತ್ತಿರುವ ಚಿತ್ರಣ
ಮಠದಲ್ಲಿ ತಯಾರಾದ ಮಿರ್ಚಿ 

ರಬ್ಬುಳಿಗೆಯಿಂದ ಭಕ್ಷ್ಯ ಭೋಜನದವರೆಗೆ

ಅನ್ನ ಅಕ್ಷರ ಹಾಗೂ ಆಧಾತ್ಮವನ್ನು ಆದರ್ಶವಾಗಿಟ್ಟುಕೊಂಡ ಗವಿಮಠದಲ್ಲಿ 208 ವರ್ಷಗಳಿಂದ ಕಾರ್ಯಕ್ರಮಗಳು ನಡೆಯುತ್ತಿವೆ. ಮಠದ ಸಂಪ್ರದಾಯ ಆಚರಣೆ ಧಾರ್ಮಿಕ ಕಾರ್ಯಕ್ರಮಗಳಿಗೆ ಜಾತ್ರೆ ಸೀಮಿತವಾಗಿತ್ತು. ಮಠದಲ್ಲಿಯೇ ಜೋಳ ಬೀಸಿ ಮಾಡಲಾಗುತ್ತಿದ್ದ ರಬ್ಬುಳಿಗೆ (ಜೋಳದ ಅನ್ನ) ಸಜ್ಜಕ ಬದನೇಕಾಯಿ ಪಲ್ಲೆ ಎರಡು ದಶಕಗಳ ಹಿಂದಿನ ದಾಸೋಹವಾಗಿತ್ತು. ಮಠಕ್ಕೆ ಭಕ್ತರಿಂದ ಬರುತ್ತಿದ್ದ ದಿನಸಿ ಕಡಿಮೆ ಪ್ರಮಾಣದಲ್ಲಿತ್ತು. 2002ರಲ್ಲಿ ಗವಿಮಠಕ್ಕೆ 18ನೇ ಪೀಠಾಧಿಪತಿಯಾಗಿ ಈಗಿನ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪಟ್ಟಾಧಿಕಾರ ವಹಿಸಿಕೊಂಡ ನಂತರದ ಎರಡ್ಮೂರು ವರ್ಷಗಳಲ್ಲಿ ಜಾತ್ರೆಯ ಸ್ವರೂಪ ಸಂಪೂರ್ಣವಾಗಿ ಬದಲಿಸಿದರು. ಅವರು ಮಠದ ವಿದ್ಯಾರ್ಥಿಯೇ ಆಗಿ ಒಳ–ಹೊರಗನ್ನು ತಿಳಿದಿದ್ದರಿಂದ ಜಾತ್ರೆಯನ್ನು ಸಾಮಾಜಿಕ ಜಾಗೃತಿ ಯಾತ್ರೆಯಾಗಿ ಮಾಡಿದರು. ಜಾತ್ರೆ ಸಮಯದಲ್ಲಿ ಮೂರು ದಿನಕ್ಕೆ ಸೀಮಿತವಾಗಿದ್ದ ದಾಸೋಹವನ್ನು 15 ದಿನಗಳಿಗೆ ವಿಸ್ತರಿಸಿದರು.

‘ಜನರ ಭಕ್ತಿಯ ಸೇವೆಗೆ ನಿರುತ್ತರ’ ಭಕ್ತರ ಮಹಾದಾಸೋಹಕ್ಕಾಗಿ ಕಾಳು ಕಡಿ ತಂದುಕೊಡಿ ಎಂದು ಯಾರನ್ನೂ ಕೇಳಲಿಲ್ಲ. ರೊಟ್ಟಿ ತಯಾರಿಸಿ ಹೋಳಿಗೆ ನೀಡಿ ಎಂದು ಯಾರ ಬಳಿಯೂ ಗೋಗರೆಯಲಿಲ್ಲ. ಆದರೆ ನಮ್ಮೂರ ಮಠ ನಮ್ಮ ಜಾತ್ರೆ ಎನ್ನುವ ಭಕ್ತಿಯಿಂದ ದೊಡ್ಡ ಪ್ರಮಾಣದಲ್ಲಿ ಮಠಕ್ಕೆ ದವಸ ಧಾನ್ಯ ರೊಟ್ಟಿಗಳು ಬರುತ್ತಿವೆ. ಅವರ ಪ್ರೀತಿಗೆ ಭಕ್ತಿಯ ಭಾವಕ್ಕೆ ಅರ್ಪಣಾ ಮನೋಭಾವಕ್ಕೆ ಏನೆಂದು ಹೇಳಬೇಕು? ಏನು ಹೇಳಿದರೂ ಅದು ಕಡಿಮೆಯೇ. ಹೀಗಾಗಿ ಏನನ್ನೂ ಹೇಳದೆ ಅವರು ತೋರುವ ಭಕ್ತಿಗೆ ಪ್ರೀತಿಗೆ ಶರಣಾಗಿ ನಿರುತ್ತರನಾಗಿದ್ದೇನೆ.
–ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಗವಿಮಠ ಕೊಪ್ಪಳ

ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ಉಣಬಡಿಸಲು ಸಿದ್ಧವಾದ ಅನ್ನ

ಮಠದ ದಾಸೋಹ ಭವನದಲ್ಲಿ ಜೋಳದ ರೊಟ್ಟಿಗಳ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.