ADVERTISEMENT

ತಮಟೆಯ ಸದ್ದು ಬೆಳಕಿನ ಸುದ್ದಿ

ಪ್ರಜಾವಾಣಿ ವಿಶೇಷ
Published 16 ಜುಲೈ 2023, 1:39 IST
Last Updated 16 ಜುಲೈ 2023, 1:39 IST
   

– ಗುರು ಪಿ.ಎಸ್.

‘ಯುವತಿಯರು ತಮಟೆಯಂಥ ವಾದ್ಯಗಳನ್ನೆಲ್ಲ ಮುಟ್ಟಿದರೆ ಮಳೆ ಬರಲ್ಲ, ಬೆಳೆ ಇರಲ್ಲ. ಅವರು ಚರ್ಮವಾದ್ಯಗಳನ್ನೆಲ್ಲ ಬಾರಿಸಿದರೆ ಅವರ ಕುಟುಂಬಕ್ಕೂ ಕೇಡು, ನಾಡಿಗೂ ಕೇಡು ಎನ್ನುವ ಕಟ್ಟುಪಾಡುಗಳೆಲ್ಲ ಇದ್ದವು ಸರ್. ಇವೆಲ್ಲ, ಮಹಿಳೆಯರು ಮನೆಯಿಂದ ಹೊರಬಾರದಂತೆ ತಡೆಯುವ ಪ್ರಯತ್ನಗಳಾಗಿದ್ದವಷ್ಟೇ ...’

ಹೀಗೆ, ಮಾತನಾಡುತ್ತಲೇ ಇದ್ದರು ಕೆ. ನಾಗರಾಜ. ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲ್ಲೂಕಿನ ಕೂತಗಾನಹಳ್ಳಿಯ ನಾಗರಾಜ ಸದ್ಯ ರಾಜ್ಯ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ. ಬೆಂಗಳೂರಿನ ಚೋಳನಾಯಕನಹಳ್ಳಿಯಲ್ಲಿ ತಮ್ಮ ತಮಟೆ ತಂಡದೊಂದಿಗೆ ಮಾತಿಗೆ ಸಿಕ್ಕ ಅವರು, ತಮ್ಮ ಕಲಾಪಯಣದ ಬಗ್ಗೆ ಹೇಳುತ್ತಾ ಸಾಗಿದರು.

ಜೀತದಾಳು ಕುಟುಂಬದಲ್ಲಿ ಜನಿಸಿದ ನಾಗರಾಜ, ತಂದೆಯೊಂದಿಗೆ ಚಿಕ್ಕಂದಿನಲ್ಲಿ ಜೀತ ಮಾಡಿದವರು. ‘ಜೀತದ ಬದುಕು ನಮ್ಮ ಕಾಲಕ್ಕೇ ಮುಗೀಲಿ. ನನ್ನ ಮಗ ಓದಲಿ’ ಎಂದು ತಾಯಿ ಹಿಡಿದ ಹಟದ ಪರಿಣಾಮ, ಶಾಲೆ ಮೆಟ್ಟಿಲು ಹತ್ತಿದ ನಾಗರಾಜ, ದುಡಿಯುತ್ತಲೇ ಓದಿದರು. ಮುತ್ತುಗದ ಎಲೆ ಹೊಲಿಯುವ ಕೆಲಸ ಮಾಡಿದರು. ದ್ರಾಕ್ಷಿ ತೋಟದಲ್ಲಿ ಹಂಬು ಕಟ್ಟಿದರು. ನಂತರ, ಬಿಎ ಮಾಡಿದರು, ಎಂ.ಎ ಕೂಡ ಪಾಸು ಮಾಡಿಕೊಂಡರು. ಆದರೆ, ಸ್ನಾತಕೋತ್ತರ ಪದವಿವರೆಗಿನ ಈ ಹಾದಿ ಮಾತ್ರ ಎಲ್ಲರಂತಿರಲಿಲ್ಲ.

ADVERTISEMENT

‘ತಮಟೆ ತಯಾರಿಸುವುದು, ಬಾರಿಸುವುದೇ ನಮ್ಮ ಕುಲಕಸುಬು. ನಮ್ಮ ದೊಡ್ಡಪ್ಪನವರು ಹಸು ಚರ್ಮ ತಂದು ತಮಟೆ ಮಾಡುತ್ತಿದ್ದರು. ಚರ್ಮವನ್ನು ಒಣ ಹಾಕೋದು, ಗ್ಲಾಸ್‌ಪೀಸ್‌ನಿಂದ ಅದನ್ನು ಉಜ್ಜಿ ಸ್ವಚ್ಛಗೊಳಿಸಿ ಹದ ಮಾಡೋದು, ಚರ್ಮವನ್ನೇ ದಾರದಂತೆ ಎಳೆದು ಕಟ್ಟುವ ಕೆಲಸವನ್ನು ನಾನೇ ಮಾಡುತ್ತಿದ್ದೆ. ಆದರೆ, ಅದೇಕೋ ತಮಟೆ ಬಾರಿಸೋದು ನನಗೆ ಇಷ್ಟವೇ ಆಗುತ್ತಿರಲಿಲ್ಲ. ತಮಟೆ ಬಾರಿಸಿದರೆ ನಾವು ದಲಿತರು ಎಂದು ಎಲ್ಲರಿಗೂ ಗೊತ್ತಾಗುತ್ತೆ, ನಮ್ಮನ್ನು ಕೀಳಾಗಿ ನೋಡ್ತಾರೆ. ಅದು ಕೀಳು ವೃತ್ತಿ ಎಂದುಕೊಂಡು ಅದರಿಂದ ದೂರವೇ ಉಳಿದಿದ್ದೆ’ ಎಂದು ನೆನಪಿಸಿಕೊಳ್ಳುವ ನಾಗರಾಜ, ಈಗ ತಮಟೆಯೇ ತಮಗೆ ಸರ್ವಸ್ವವಾಗಿರುವ ಅಚ್ಚರಿಯನ್ನೂ ಹೇಳಿಕೊಳ್ಳುತ್ತಾರೆ.

‘ಅದು 1994ರ ಸಮಯ. ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದ ಜೀತದಾಳು ಒಬ್ಬನನ್ನು ಮಾಲೀಕರು ಸಾಯಿಸಿ, ಅವರೇ ಹೋಗಿ ಹೂತು ಹಾಕಿ ಬಂದಿದ್ದರು. ಆಗ, ಜೀತದಾಳುಗಳ ಬಗ್ಗೆ ಕೆಲಸ ಮಾಡುವ ‘ಜೀವಿಕಾ’ ಎನ್ನುವ ಸಂಘಟನೆಯವರು ನಮ್ಮ ಊರಿಗೆ ಬಂದಿದ್ದರು. ಅವರಿಗೆ ನಡೆದಿದ್ದೆಲ್ಲ ವಿವರಿಸಿದೆ. ನನ್ನ ಕಳಕಳಿ ಮತ್ತು ಆಸಕ್ತಿ ಗಮನಿಸಿದ ಅವರು, ಅವರ ತಂಡಕ್ಕೆ ನನ್ನನ್ನು ಸೇರಿಸಿಕೊಂಡರು. ಜೀತದಾಳುಗಳ ಬಗ್ಗೆ, ಬಾಲಕಾರ್ಮಿಕರ ಬಗ್ಗೆ ಬೀದಿ ನಾಟಕ ಮಾಡಿಸುತ್ತಿದ್ದ ಸಂಸ್ಥೆ ಅದು. ಮುಂದೆ, ನಿರ್ದೇಶಕ ಬಸವಲಿಂಗಯ್ಯ ನಿರ್ದೇಶನದ ‘ಹಟ್ಟಿ ರಂಗ’ ನಾಟಕದಲ್ಲಿ ಜೀತದಾಳು ಪಾತ್ರವನ್ನೇ ಮಾಡಿದೆ’ ಎಂದು ಕಲಾಪ್ರಪಂಚಕ್ಕೆ ತಮ್ಮ ಪ್ರವೇಶದ ಕ್ಷಣವನ್ನು ನೆನಪಿಸಿಕೊಂಡರು.

‘ಈ ನಡುವೆ, ಆನೇಕಲ್‌ ತಾಲ್ಲೂಕಿನ ಕೋಟಗಾನಹಳ್ಳಿಯಲ್ಲಿ ವೆಂಕಟೇಶ್ ಎಂಬ ಜೀತದಾಳುವಿನ ಹೆಬ್ಬೆರಳನ್ನೇ ಮಾಲೀಕರು ಕತ್ತರಿಸಿದ್ದರು. ನಿಧಾನವಾಗಿ ಕೆಲಸ ಮಾಡುತ್ತಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಈ ಕೃತ್ಯ ಎಸಗಿದ್ದರು. ಈ ಘಟನೆಯ ಬಗ್ಗೆಯೇ ಒಂದು ಸ್ಕಿಟ್‌ ಬರೆದು, ವೆಂಕಟೇಶನ ಪಾತ್ರವನ್ನು ನಾನೇ ಮಾಡಿದೆ. ಈ ನಾಟಕ ರಾಜ್ಯದಾದ್ಯಂತ 200ಕ್ಕೂ ಹೆಚ್ಚು ಪ್ರದರ್ಶನ ಕಂಡಿತು. ಹೀಗೆ, ಬಾಲಕಾರ್ಮಿಕರು, ಜೀತದಾಳುಗಳು ಮತ್ತು ಮಹಿಳೆಯರ ಸಮಸ್ಯೆ ಕುರಿತು ಬೀದಿನಾಟಕ ಮಾಡುತ್ತಿದ್ದಾಗಲೆಲ್ಲ, ತಮಟೆ ಬಾರಿಸುವ ತಂಡದವರೂ ಪ್ರದರ್ಶನ ನೀಡುತ್ತಿದ್ದರು. ಈ ನಡುವೆ, ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿ, ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಕಲಾ ತಂಡಗಳಲ್ಲಿ ಮಾತ್ರವಲ್ಲದೆ, ಪ್ರತಿಭಟನೆಗಳಲ್ಲಿಯೂ ತಮಟೆ ಹೋರಾಟದ ಅಸ್ತ್ರವಾಗಿದ್ದನ್ನು ಕಂಡು ಅದರತ್ತ ಆಕರ್ಷಣೆ ಹೆಚ್ಚಾಯಿತು. ನಮ್ಮ ಕಸುಬನ್ನು ನಾನೇ ಮುಂದುವರಿಸಬೇಕು ಎಂದುಕೊಂಡು ತಮಟೆ ತಂಡ ಕಟ್ಟಲು ನಿರ್ಧರಿಸಿದೆ’ ಎನ್ನುತ್ತಾರೆ ನಾಗರಾಜ.

ತಮಟೆ ಬಾರಿಸುವುದನ್ನು ಕಲಿಸುವುದು ಮಾತ್ರವಲ್ಲ, ತಮಟೆಯಿಂದಲೇ ನೂರಾರು ಜನರ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ನಾಗರಾಜ. ಅವರ ಈ ಪಯಣದಲ್ಲಿ ಜೊತೆಯಾಗಿ ಕೆಲಸ ಮಾಡಿದವರು ಶಿವಮ್ಮ ವೆಂಕಟೇಶ್.

‘ಕಾಲೇಜುಗಳಿಗೆ ಹೋಗಿ ತಮಟೆಯ ಕಲೆ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದೆವು. ಆಸಕ್ತರಿಗೆ ಉಚಿತವಾಗಿ ತಮಟೆ ತರಬೇತಿ ನೀಡುತ್ತಿದ್ದೆವು. ಶಾಲೆ ಬಿಟ್ಟವರನ್ನು ಗುರುತಿಸಿ ಅವರಿಗೆ ತರಬೇತಿ ಕೊಟ್ಟೆವು. ಅನೇಕರಿಗೆ ಹಾಸ್ಟೆಲ್‌ನಲ್ಲಿ ಉಳಿಯುವ ವ್ಯವಸ್ಥೆ ಮಾಡಿದೆವು. ಮುಖ್ಯವಾಗಿ, ಯುವತಿಯರಿಗೆ ತರಬೇತಿ ಕೊಟ್ಟೆವು. ಸುಮಾರು 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಿವಮ್ಮ.

ನಾಗರಾಜ ಮತ್ತು ಶಿವಮ್ಮ ಅವರು ಈವರೆಗೆ 600ಕ್ಕೂ ಹೆಚ್ಚು ಜನರಿಗೆ ತಮಟೆ, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ನೃತ್ಯದ ತರಬೇತಿ ಕೊಟ್ಟಿದ್ದಾರೆ. ಅವರಲ್ಲಿ, 200ಕ್ಕೂ ಹೆಚ್ಚು ಯುವತಿ–ಯುವಕರು ಇದರಲ್ಲಿಯೇ ಜೀವನ ಕಂಡುಕೊಂಡಿದ್ದಾರೆ. ನಾಗರಾಜ ಅವರ ಅಕ್ಕನ ಮಗಳು ಸವಿತಾ, ಇದೇ ಕಲೆಯಲ್ಲಿ ಮುಂದುವರಿದಿದ್ದಾರೆ. ಶಿವಮ್ಮ ಅವರ ಇಡೀ ಕುಟುಂಬ ಇದೇ ಕಲೆಯನ್ನು ನಂಬಿದೆ. ಅವರ ಮೂವರು ಮಕ್ಕಳೂ ತಮಟೆ ಕಲಿತಿದ್ದರೆ, ದೊಡ್ಡ ಮಗಳು ರಶ್ಮಿ ಎಂಬುವರಿಗೆ 6ನೇ ತರಗತಿಯಿಂದಲೇ ತಮಟೆ ಕಲಿಸಿದ್ದಾರೆ. ರಶ್ಮಿ ಈಗ ಜರ್ಮನಿಯಲ್ಲಿ ಎಂ.ಎಸ್‌. ಮಾಡುತ್ತಿದ್ದು, ಆ ದೇಶದಲ್ಲಿಯೂ ತಮಟೆಯ ಸದ್ದು ಮೊಳಗಿಸಬೇಕು ಎಂಬ ಪ್ರಯತ್ನದಲ್ಲಿದ್ದಾರೆ.

ಈಗ, ನಾಗರಾಜ ಅವರ ತಂಡದಲ್ಲಿರುವ ಯುವತಿಯರಲ್ಲಿಯೂ ಇಂಥದ್ದೇ ಉತ್ಸಾಹ ಕಾಣಿಸುತ್ತದೆ. ಪರಿಶಿಷ್ಟ ಸಮುದಾಯದವರು ಮಾತ್ರವಲ್ಲದೆ ಸಾಮಾನ್ಯ ವರ್ಗದ ಯುವಕ–ಯುವತಿಯರೂ ನಾಗರಾಜ ಅವರ ತಂಡದಲ್ಲಿದ್ದಾರೆ.

‘ನಾನು ಎಸ್ಸೆಸ್ಸೆಲ್ಸಿ ಮುಗಿಸಿ, ಆಗಿನ್ನೂ ಪಿಯುಗೆ ಸೇರಿದ್ದೆ. ನಾಗರಾಜ್‌ ಸರ್‌ ಮತ್ತು ತಂಡದವರು ನಮ್ಮ ಕಾಲೇಜಿಗೆ ಬಂದು, ಈ ಕಲೆಯ ಮಹತ್ವದ ಬಗ್ಗೆ ಹೇಳಿದರು. ತಮಟೆ ಬಾರಿಸುವುದರಿಂದ ಸಂಭಾವನೆಯೂ ಸಿಗುತ್ತೆ ಅಂದರು. ನಮ್ಮ ಮನೆಯಲ್ಲಿ ಬಡತನವಿತ್ತು. ಅಪ್ಪ–ಅಮ್ಮನ ಹತ್ತಿರ ಹೋಗಿ, ತಮಟೆ ಕಲಿಯಲು ಹೋಗುತ್ತೇನೆ ಎಂದೆ. ನಾನು ದುಡಿದುಕೊಂಡೇ ಓದುತ್ತೇನೆ, ಅವಕಾಶ ಕೊಡಿ ಎಂದೂ ಕೇಳಿಕೊಂಡೆ. ಅವರು ಒಪ್ಪಿದರು’ ಎನ್ನುವ ಹೊಸಕೋಟೆ ತಾಲ್ಲೂಕು ನಂದಗುಡಿಯ ಮೇಘನಾ, ಪತ್ರಿಕೋದ್ಯಮದಲ್ಲಿ ಪದವಿ ಪೂರೈಸಿ, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಬೆಂಗಳೂರಿನಲ್ಲಿಯೇ ಬಿ.ಇಡಿ. ಮಾಡುತ್ತಿದ್ದಾರೆ. 2015ರಿಂದ ಈವರೆಗೂ ಓದಿಗಾಗಿ ಅಪ್ಪ–ಅಮ್ಮನಿಂದ ಒಂದು ರೂಪಾಯಿಯನ್ನೂ ಪಡೆದಿಲ್ಲ ಮೇಘನಾ.

ಕಲಾವಿದೆಯರಿಂದ ತಮಟೆ ನೃತ್ಯ ಪ್ರದರ್ಶನ 
ಹಾಡಿನ ಸಮಯ...

‘ನಾನು ತಮಟೆ ತಂಡದೊಂದಿಗೆ ಹೋಗುತ್ತಿದ್ದಾಗ, ಅದು ಕೀಳು ಜಾತಿಯವರ ಕಸುಬು. ಅದರಲ್ಲಿಯೂ, ನೀನು ಹುಡುಗಿಯಾಗಿ ಹುಡುಗರೊಂದಿಗೆ ಹಾಗೆ ಊರೂರು ಸುತ್ತಿದರೆ ಜನ ಏನಂತಾರೆ? ಹೆಣ್ಣುಮಕ್ಕಳಿಗಲ್ಲ ಈ ವೃತ್ತಿ ಎಂದು ಅನೇಕರು ನನ್ನನ್ನು ಅಣಕಿಸುತ್ತಿದ್ದರು. ತಮಟೆ ಡಾನ್ಸ್‌ ಮಾಡಿದ್ದನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಹಾಕಿಕೊಂಡರೆ, ಅದನ್ನು ನೋಡಿ ನನ್ನ ಗೆಳತಿಯರೇ ವ್ಯಂಗ್ಯವಾಗಿ ನಗುತ್ತಿದ್ದರು. 2014ರಿಂದ ನಾನು ಈ ತಂಡದಲ್ಲಿದ್ದೇನೆ. ರಾಜ್ಯದ ವಿವಿಧೆಡೆ ಮಾತ್ರವಲ್ಲದೆ, ದೆಹಲಿ, ಸಿಂಗಪುರಗಳಲ್ಲಿಯೂ ತಮಟೆ ಪ್ರದರ್ಶನ ನೀಡಿ ಬಂದಿದ್ದೇವೆ. ನಾನು ವಿದೇಶಕ್ಕೆ ಹೋಗಿ ಬಂದ ನಂತರ, ಗೆಳತಿಯರಲ್ಲಿ ನನ್ನ ಬಗ್ಗೆ ಇದ್ದ ಅಭಿಪ್ರಾಯ ಬದಲಾಗಿದೆ. ನನಗೆ ಗೌರವ ನೀಡುತ್ತಿದ್ದಾರೆ. ಪ್ರೋತ್ಸಾಹವನ್ನೂ ಕೊಡುತ್ತಿದ್ದಾರೆ’ ಎಂದು ಕಣ್ಣರಳಿಸಿದರು ಬಿ.ಎ. ಪದವೀಧರೆ ಕವಿತಾ.

ಹೀಗೆ, ಕಲೆಯನ್ನೇ ನಂಬಿ ಬಂದ ಅನೇಕರಿಗೆ ಶಿಕ್ಷಣ ಕೊಡುವ ಜೊತೆಗೆ, ಹಲವು ಯುವತಿಯರ ಮದುವೆಯನ್ನೂ ನೆರವೇರಿಸಿಕೊಟ್ಟಿದ್ದಾರೆ ನಾಗರಾಜ.

ಕಲಾವಿದರಿಂದ ತಮಟೆ ನೃತ್ಯ ಪ್ರದರ್ಶನ 

‘ದೇವರ ಉತ್ಸವದ ಸಂದರ್ಭದಲ್ಲಿ ತಮಟೆ ಬೇಕು. ದೇವರು ಹೊರಬರುವಾಗಲೂ ದಲಿತರು ತಮಟೆ ಬಾ‌ರಿಸಲೇಬೇಕು. ಆದರೆ, ಈಗಲೂ ಎಷ್ಟೋ ಕಡೆ ದಲಿತರಿಗೆ ದೇಗುಲದ ಒಳಗೆ ಪ್ರವೇಶವಿಲ್ಲ. ಇದನ್ನೆಲ್ಲ ನೆನಸಿಕೊಂಡಾಗ ಬೇಸರವಾಗುತ್ತದೆ. ತಮಟೆ ಕಲೆಯನ್ನೇ ನಂಬಿ ಬಂದ ಅನೇಕರ ಜೀವನಕ್ಕೆ ದಾರಿಮಾಡಿಕೊಟ್ಟ ತೃಪ್ತಿಯಂತೂ ಇದೆ. ನನಗೆ ಸರ್ವಸ್ವವೂ ಆದ ತಮಟೆಯ ಬಗ್ಗೆ ಕೃತಜ್ಞತೆಯೂ ಇದೆ’ ಎಂದು ಕೈ ಮುಗಿದರು ನಾಗರಾಜ. ಅವರ ತಂಡದಲ್ಲಿದ್ದ ಎಲ್ಲರ ಮುಖದಲ್ಲೂ ಅದೇ ಕೃತಜ್ಞತಾ ಭಾವವಿತ್ತು.

ಕಲಾ ಪ್ರದರ್ಶನದ ನಿರೀಕ್ಷೆಯಲ್ಲಿ...

ಹೀಗೆ, ಮಾತು ಮುಗಿದ ನಂತರ, ತಮಟೆ ಬಾರಿಸುತ್ತ, ಹಾಡುತ್ತಾ, ಆಡುತ್ತಾ ಸುಸ್ತಾಗಿ ಕುಳಿತರು ಯುವತಿಯರು. ಮಳೆ ಧೋ ಎಂದು ಸುರಿಯತೊಡಗಿತು.

ತಮಟೆ ತಾಳಕ್ಕೆ ಹೆಜ್ಜೆ ಹಾಕುವ ಹುರುಪು 
ಶಿವಮ್ಮ ವೆಂಕಟೇಶ್ 
ತಮಟೆ ನಾದ 
ಕಲಾವಿದರಿಂದ ತಮಟೆ ತಾಳಕ್ಕೆ ಹೆಜ್ಜೆ 
ಸವಿತಾ 
ಶಿವಮ್ಮ ಮತ್ತು ಕೆ.ನಾಗರಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.