ರಾಯಚೂರು ಜಿಲ್ಲೆಯು ಕೃಷ್ಣೆ-ತುಂಗೆಯ ಮಧ್ಯೆ ನಿಂತಿರುವ ದೋಅಬ್ ಪ್ರದೇಶ. ಇದು ಭೌಗೋಳಿಕವಾಗಿ ಫಲವತ್ತಾಗಿದೆ, ಅಷ್ಟೇ ಸಂಪದ್ಭರಿತವಾಗಿದೆ. ಈ ಕಾರಣಕ್ಕಾಗಿಯೇ ರಾಯಚೂರನ್ನು ವಶಪಡಿಸಿಕೊಳ್ಳಲು ಅನೇಕ ಅರಸು ಮನೆತನಗಳು ಕದನಗಳನ್ನು ನಡೆಸಿದ್ದವು. ಇಂದಿಗೂ ರಾಯಚೂರಿನ ಸುತ್ತಮುತ್ತ ಕೋಟೆ-ಕೊತ್ತಲಗಳು, ಶಾಸನಗಳು, ಸ್ಮಾರಕಗಳನ್ನು ಕಾಣಬಹುದು. ಒಂದು ಕಾಲದಲ್ಲಿ ರಾಯಚೂರು ನಗರದ ಹೆಮ್ಮೆಯ ಸ್ಮಾರಕ ನವರಂಗ ದರವಾಜ ಹೊಲಸಿನಿಂದ ಕೂಡಿ, ಗಬ್ಬು ನಾರುತ್ತಿತ್ತು, ಶಿಥಿಲಾವಸ್ಥೆಯಲ್ಲಿತ್ತು. ಈಗ ಜೀರ್ಣೋದ್ಧಾರದಿಂದ ನವರಂಗ ದರವಾಜ ಇತಿಹಾಸದ ಮಾಹಿತಿ ಒದಗಿಸುವ ತಾಣವಾಗಿದೆ. ಅಂದರೆ ಇಲ್ಲಿ ವಸ್ತುಸಂಗ್ರಹಾಲಯ ತಲೆ ಎತ್ತಿ ನಿಂತಿದೆ.
ಈ ವಸ್ತುಸಂಗ್ರಹಾಲಯವು ಶಿಲ್ಪಕಲಾಕೃತಿಗಳ ಸಂಗ್ರಹವಾಗಿರದೇ ಇತಿಹಾಸ, ವೈಜ್ಞಾನಿಕ ಸಂಶೋಧನೆ, ಶೈಕ್ಷಣಿಕ ಮಾಹಿತಿಯನ್ನು ಒದಗಿಸುತ್ತದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಇತಿಹಾಸ ಸಂಶೋಧಕರಿಗೆ, ಇತಿಹಾಸ ಅಧ್ಯಯನಕಾರರಿಗೆ ಅಲ್ಲದೆ ಜನಸಾಮಾನ್ಯರಿಗೂ ಉಪಯುಕ್ತವಾಗಿದೆ. ಇಲ್ಲಿ ರಾಯಚೂರು, ಲಿಂಗಸೂಗೂರು, ದೇವದುರ್ಗ, ಮಾನ್ವಿ, ಮಸ್ಕಿ, ಸಿಂಧನೂರು, ಗಬ್ಬೂರು, ಕರಡಕಲ್, ಜಾವೂರು, ಕೊಪ್ಪಳ, ಕುಷ್ಟಗಿ, ಯಲಬುರ್ಗ, ಗಂಗಾವತಿ, ಆನೆಗುಂದಿ ಇಲ್ಲೆಲ್ಲಾ ದೊರೆತ, ಅನಾಥವಾಗಿ ಬಿದ್ದ ಶಿಲ್ಪಗಳನ್ನು, ಶಾಸಗಳನ್ನು ನವರಂಗ ದರವಾಜದಲ್ಲಿ ಸಂಗ್ರಹಿಸಿ ಇಡಲಾಗಿದೆ. ಈ ವಸ್ತುಸಂಗ್ರಹಾಲಯವು ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸುಪರ್ದಿಯಲ್ಲಿದೆ.
1985ರಲ್ಲಿ ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಡಾ.ಆರ್.ಸುಂದರ್, 1994ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂಜಯದಾಸ ಗುಪ್ತ ಅವರಿಗೂ ನವರಂಗ ದರವಾಜ ಜೀರ್ಣೋದ್ಧಾರ ಮಾಡುವ ಉದ್ದೇಶವಿತ್ತು, ಜೀರ್ಣೋದ್ಧಾರದ ಪ್ರಕಿಯೆ ಜಾರಿಯ ಮೊದಲ ಹಂತದಲ್ಲಿ ಇರುವಾಗಲೇ ಜಿಲ್ಲೆಯಿಂದ ವರ್ಗವಾದರು. 1997ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಅಶೋಕ ದಳವಾಯಿ ಅವರು ಮೆಕ್ಕ ದರವಾಜ ಹಾಗೂ ನವರಂಗ ದರವಾಜಗಳನ್ನು ಸ್ವಚ್ಛಗೊಳಿಸಿದರು. ಈ ಕಾರ್ಯದಲ್ಲಿ ನೂರಾರು ಕೈಗಳು ಸೇರಿದ್ದವು. ಇದರ ಪರಿಣಾಮವಾಗಿ ನಿರ್ಲಕ್ಷ್ಯಕ್ಕೆ ಒಳಪಟ್ಟ ನವರಂಗ ದರವಾಜವು ಸುಂದರ ಸ್ಮಾರಕವಾಗಿ, ವಸ್ತು ಸಂಗ್ರಹಾಲಯವಾಗಿ ಮಾರ್ಪಟ್ಟಿದೆ.
ನವರಂಗ ದರವಾಜದ ಇತಿಹಾಸವನ್ನು ನೋಡುವುದಾದರೆ ಕ್ರಿ.ಶ. 1520, ಮೇ 14ರಲ್ಲಿ ಯೂಸಫ್ ಆದಿಲ್ ಶಾಹನೊಂದಿಗೆ ಶ್ರೀಕೃಷ್ಣದೇವರಾಯ ಕದನ ನಡೆಸಿ ಜಯ ಸಾಧಿಸಿದಾಗ ರಾಯಚೂರು ವಶವಾಗುತ್ತದೆ. ಕೃಷ್ಣದೇವರಾಯ ಉತ್ತರ ದಿಕ್ಕಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದಾನೆ. ಉತ್ತರ ದಿಕ್ಕಿನಿಂದ ಬರುವ ವೈರಿಗಳನ್ನು ತಡೆಗಟ್ಟಲು ಗೋಡೆಗೆ ನಾಲ್ಕು ಹೊಸ ಕೊತ್ತಲುಗಳನ್ನು ನಿರ್ಮಿಸಿದನು. ಇದೇ ಹಂತದಲ್ಲಿ ಉತ್ತರ ದ್ವಾರವನ್ನು ಮುಂದುವರೆಸಿ ನವರಂಗ ದರವಾಜವನ್ನು ನಿರ್ಮಿಸಿದನು. ಇಸ್ಲಾಮಿಕ್ ಮತ್ತು ಹಿಂದು ಕಲಾಶೈಲಿಯ ಮಿಶ್ರಣವಾಗಿದೆ. ಹೊರನೋಟಕ್ಕೆ ಇಸ್ಲಾಮಿಕ್ ಸ್ಮಾರಕದಂತೆ ಕಂಡರೂ ಕೋಟೆಯ ಒಳಗೆ ಅನೇಕ ಹಿಂದು ಶಿಲ್ಪಗಳು ಇದ್ದು ಇದೊಂದು ಇಂಡೋಸಾರ್ಸೆನಿಕ್ ಶೈಲಿಯಾಗಿದೆ ಎಂಬುದು ವಾಸ್ತುಶಿಲ್ಪಿಗಳ ಅಭಿಪ್ರಾಯ. ಸಭೆಗಳು ಜರುಗಲು, ದೇವಾಲಯದಲ್ಲಿ ಭಕ್ತರು ಕುಳಿತುಕೊಳ್ಳಲು ಅನುವು ಮಾಡಿಕೊಡುವ ಕಟ್ಟಡ ವಿನ್ಯಾಸಕ್ಕೆ ನವರಂಗ ಎಂದು ಕರೆಯಲಾಗುತ್ತದೆ. ಆದ ಕಾರಣ ಉತ್ತರ ದಿಕ್ಕಿನ ಈ ಅಗಸಿಗೆ ಅಂದರೆ ಎರಡನೇ ಸುತ್ತಿನ ಕೋಟೆಯ ಈ ಅಗಸಿಗೆ ನವರಂಗ ದರವಾಜ ಎಂದು ಕರೆಯುತ್ತಾರೆ.
ಮೂರು ಅಂಕಣಗಳನ್ನು ಹೊಂದಿರುವ ನವರಂಗ ದರವಾಜ ನಾಲ್ಕು ದರವಾಜಗಳನ್ನು, ಒಂದು ಚಿಕ್ಕ ದ್ವಾರವನ್ನು ಮತ್ತೊಂದು ದಿಡ್ಡಿ ದ್ವಾರವನ್ನು ಒಳಗೊಂಡಿದೆ. ರಾಯಚೂರಿನ ಕೋಟೆಗಳ ವೈಶಿಷ್ಟ್ಯವೆಂದರೆ ಪಶ್ಚಿಮಕ್ಕೆ ಮುಖ್ಯ ಪ್ರವೇಶ ದ್ವಾರ ಹೊಂದಿರುವುದು. ಇದರಂತೆ ಇಲ್ಲಿಯೂ ಕೂಡ ಕೋಟೆಯ ಹೊರಗೆ ತೆರೆದುಕೊಂಡಿರುವ ದ್ವಾರವು ಪಶ್ಚಿಮಾಭಿಮುಖವಾಗಿದ್ದರೆ, ಕೋಟೆಯ ಒಳಗೆ ತೆರೆದುಕೊಂಡಿರುವ ದ್ವಾರವು ದಕ್ಷಿಣ ದಿಕ್ಕಿಗಿದೆ. ಈ ಮಹಾದ್ವಾರ ಅತಿ ಎತ್ತರವಾಗಿದ್ದು, ಇದರ ಮೇಲೆ ಇರುವ ಶಿಲ್ಪಕಲಾ ಕೌಶಲ್ಯ ದೃಷ್ಟಿಯಿಂದ ಮನೋಹರವಾಗಿದ್ದು, ಉತ್ತರದ ಮಹಾದ್ವಾರವನ್ನು ರಾಯಚೂರು ವಿಜಯದ ಸಂಕೇತವಾಗಿ ಶ್ರೀಕೃಷ್ಣದೇವರಾಯ ನಿರ್ಮಿಸಿದನಂತೆ. ದಕ್ಷಿಣ ದ್ವಾರವು ಬಾವಿ ಹಾಗೂ ಕೆರೆಯ ಮಧ್ಯೆ ನೀರಿನಲ್ಲಿ ನಿಂತುಕೊಂಡಿದೆ. ದೂರದಿಂದ ನೋಡಲು ಇದೊಂದು ಕಮಾನಿನಾಕಾರದ ದ್ವಾರವಾಗಿದ್ದು ಎರಡು ಬದಿಯಲ್ಲಿ ಅದೇ ಆಕಾರದ ಗೂಡುಗಳಿವೆ.
ಭೂಕಂಪ ನಿರೋಧಕ ತಂತ್ರದ ಆಧಾರದ ಮೇಲೆ ನಿರ್ಮಿತವಾದ ಈ ಕೋಟೆಯ ಮಧ್ಯಮ ಅಂಕಣ ವಿವಿಧ ಸುಂದರ ಶಿಲ್ಪಕಲಾಕೃತಿಗಳಿಂದ ಗಮನ ಸೆಳೆಯುತ್ತದೆ. ಸುತ್ತಲೂ ಕಮಲಪುಷ್ಪಗಳ ಸಾಲುಗಳು ಜೊತೆಗೆ ಸಮುದ್ರ ಮಂಥನ, ವಿಷ್ಣುವಿನ ದಶಾವತಾರಗಳು, ಶ್ರೀರಾಮನು ವೃಕ್ಷಗಳನ್ನು ಭೇದಿಸುತ್ತಿರುವುದು, ವಾಲಿ-ಸುಗ್ರೀವರ ಹೋರಾಟ, ಗೋವರ್ಧನ ಗಿರಿಧಾರಿ ಶ್ರೀಕೃಷ್ಣ, ಜಾನಪದ ಕಲಾಶಿಲ್ಪಗಳು, ಶ್ರೀಕೃಷ್ಣದೇವರಾಯನು ಆಸ್ಥಾನ ಸುಭಾಷಿಣಿಯರೊಂದಿಗೆ ಸಂಭಾಷಿಸುವ ಉಬ್ಬುಶಿಲ್ಪ ಮನಮೋಹಕವಾಗಿವೆ. ಇಷ್ಟೆ ಅಲ್ಲದೆ ರಾಮಾಯಣದ ಪ್ರಸಂಗಗಳು, ಆನೆ ಕಲಾತ್ಮಾಕ ಶಿಲ್ಪಗಳು, ಶೇಷಶಯನ ರಂಗನಾಥ, ಭೂದೇವಿ, ಶ್ರೀದೇವಿ, ರಾಮಾನುಜಾಚಾರ್ಯ, ಶಿಲಾ ಫಲಕಗಳು, ಕೋಟೆಗೆ ನರಬಲಿಯಾದ ಬಸರೆಡ್ಡಿ, ಮಲ್ಲಮ್ಮ ದಂಪತಿಯ ಉಬ್ಬುಶಿಲ್ಪಗಳು, ಮಿಥುನ ಶಿಲ್ಪಗಳು ಇನ್ನು ಅನೇಕ ಘಟನೆಗಳ ಉಬ್ಬುಶಿಲ್ಪಗಳನ್ನು ಕಾಣಬಹುದು.
ಈ ವಸ್ತುಸಂಗ್ರಹಾಲಯದ ಮೂಲಕ ರಾಯಚೂರಿನ ಘನತೆ ಮತ್ತಷ್ಟು ಹೆಚ್ಚಿದೆ. ಇತಿಹಾಸವನ್ನು ಹೇಳುವ ನವರಂಗ ದರವಾಜವನ್ನು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವೀಕ್ಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.