ಬೆಂಗಳೂರು ಮಹಾನಗರ ಏನಿಲ್ಲದೇ ಬದುಕಲಾರದು ಎಂದರೆ, ಅದು ತಳ್ಳುಗಾಡಿಗಳಿಲ್ಲದೆ. ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಮೆಟ್ರೋ, ವಿಮಾನ ನಿಲ್ದಾಣ, ಪಬ್‌ಗಳು, ಕಾರ್ಖಾನೆಗಳು ಏನೆಲ್ಲಾ ಇರಬಹುದು. ಅವೆಲ್ಲವೂ ಬೆಂಗಳೂರಿಗೆ ಅವಶ್ಯವಿರಬಹುದು. ಆದರೆ ತಳ್ಳುಗಾಡಿಗಳಿಲ್ಲದೇ ಬೆಂಗಳೂರಿಗರ ಜೀವನ ಸಾಗುವುದಿಲ್ಲ. ಅವುಗಳು ಇಲ್ಲಿನ ಜನರ ಹೊಟ್ಟೆ ತುಂಬಿಸುವ ಜೊತೆಗೆ ಅವರ ಜೀವನದ ಅವಿಭಾಜ್ಯ ಅಂಗವಾಗಿವೆ.
ಹೌದು, ಬಹುತೇಕ ಬೆಂಗಳೂರಿಗರಿಗೆ ರಸ್ತೆ ಬದಿಯ ತಳ್ಳುಗಾಡಿಗಳಲ್ಲಿ ಮಾರುವ ಚಿತ್ರಾನ್ನ, ಇಡ್ಲಿ-ವಡೆ, ಎಗ್ ರೈಸ್, ದಮ್ ಬಿರಿಯಾನಿ, ರೊಟ್ಟಿ - ಚಟ್ನಿ, ವೈರೈಟಿ ದೋಸೆಗಳ ರುಚಿಯ ಮುಂದೆ ಬೇರೆ ಯಾವುದೇ ಊಟ ಕೂಡ ಸಪ್ಪೆ ಎನಿಸುತ್ತದೆ. ದುಡಿಯುವವರ ಪಾಲಿಗೆ ತಳ್ಳುಗಾಡಿಗಳೆಂದರೆ ಸಾಕ್ಷತ್ 'ಅನ್ನಪೂರ್ಣೇಶ್ವರಿ'ಯ ವಾಹನವಿದ್ದಂತೆ.
ಕೆಲವು ಕಡೆ ಬೆಳಂಬೆಳಗ್ಗೆ ಟೀ ಸೋಸುತ್ತಾ ನಿಂತ ತಳ್ಳು ಗಾಡಿಗಳಲ್ಲಿ, ಏಳು ಗಂಟೆಗಾಗಲೇ ಪಲಾವ್, ಚಿತ್ರಾನ್ನ, ಇಡ್ಲಿ–ವಡೆ ರೆಡಿಯಾಗಿರುತ್ತವೆ. ಮಧ್ಯಾಹ್ನ ಹೊಟ್ಟೆ ತುಂಬಿಸುವ ಬಿಸಿ ಬಿಸಿ ಅನ್ನ ಸಾರಿನ ಊಟ, ಜನಸಂಚಾರವಿದ್ದೆಡೆ ರಾತ್ರಿ ಹನ್ನೊಂದು–ಹನ್ನೆರಡು ಗಂಟೆಯವರೆಗೆ ತಳ್ಳುಗಾಡಿಗಳು ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತವೆ.
ಪ್ರತಿ ದಿನವೂ ಸಾಮಾನ್ಯವಾಗಿ ಇನ್ನೂರೈವತ್ತು–ಮುನ್ನೂರು ಜನರಿಗಾಗುವಷ್ಟು ಆಹಾರ ತುಂಬಿಸಿಕೊಂಡು ಮನೆಯಿಂದ ಹೊರಡುವ ತಳ್ಳುಗಾಡಿಗಳು ಅದೆಲ್ಲಾ ಖಾಲಿ ಮಾಡಿಯೇ ಮನೆಗೆ ಹಿಂತಿರುಗುತ್ತಾರೆ. ಪುಡ್‌ಸ್ಟ್ರೀಟ್‌ಗಳಲ್ಲಿ ಮತ್ತು ಇನ್ನೂ ಕೆಲವೆಡೆ ತಳ್ಳುಗಾಡಿಯಲ್ಲೇ ತಯಾರಿಸಿ ಬಿಸಿಬಿಸಿ ಆಹಾರ ಬಡಿಸುತ್ತಾರೆ.
ತಳ್ಳುಗಾಡಿಗಳು ಕೇವಲ ಇಲ್ಲಿನ ಜನರ ಹೊಟ್ಟೆಯನ್ನಷ್ಟೇ ತುಂಬಿಸಿಲ್ಲ. ಜೇಬಿನಲ್ಲಿ ಐನೂರು ರೂಪಾಯಿ ಇಟ್ಟುಕೊಂಡು, ಸಾವಿರ ಕನಸುಗಳನ್ನು ಹೊತ್ತುಕೊಂಡು ಮೊದಲ ಬಾರಿಗೆ ಬೆಂಗಳೂರು ಸೇರಿದವರಿಗೆ ಹೊಟ್ಟೆ ತುಂಬಿಸಿದ್ದು ಇದೇ ತಳ್ಳುಗಾಡಿಗಳು. ಮನೆಯಿಂದ ಓಡಿ ಬಂದ ಎಷ್ಟೋ ಜನರಿಗೆ ಕೈಯಲ್ಲಿ ಕಾಸಿಲ್ಲದೇ ಇದ್ದಾಗಲೂ ಒಂದ್ಹೊತ್ತಿನ ಊಟ ಕೊಟ್ಟು ಈ ಮಹಾನಗರದ ಭಾಗವಾಗಿಸಿದ್ದೂ ಇದೇ ತಳ್ಳುಗಾಡಿಗಳು. ಉದ್ಯೋಗದ ಕನಸಿಟ್ಟುಕೊಂಡು ಈ ಮಹಾನಗರಿಗೆ ಕಾಲಿಟ್ಟ ಸಾವಿರಾರು ಜನರಿಗೆ ಉದ್ಯೋಗದ ದಾರಿ ತೋರಿಸಿದ್ದು ಕೂಡ ಇದೇ ತಳ್ಳುಗಾಡಿಗಳು. ಇವತ್ತಿಗೂ ಮಹಾನಗರಕ್ಕೆ ಮೊದಲಿಗೆ ಕಾಲಿಟ್ಟವರಿಗೆ ಹೊಟ್ಟೆ ತುಂಬಿಸಿ, ತಾಯಿಯಂತೆ ಕಾಪಾಡಿದ್ದು ಇದೇ ತಳ್ಳುಗಾಡಿಯ ಚಿತ್ನಾನ್ನ.
ತಳ್ಳುಗಾಡಿಯಲ್ಲಿ ಕೊಡುವ ಬಿಸಿ ಬಿಸಿ ಚಿತ್ರಾನ್ನದ ಜೊತೆಗೆ ಅವರ ಕತೆಯನ್ನೊಮ್ಮೆ ಕೇಳಿ ನೋಡಿ. ಜಗತ್ತಿನಲ್ಲಿ ನಮ್ಮದೇ ದೊಡ್ಡ ಕಷ್ಟ ಎಂದುಕೊಂಡವರ ಯಾವ ಕಷ್ಟಗಳೂ ಅವರ ಜೀವನದ ಮುಂದೆ ಖಾಲಿ ಪ್ಲೇಟಿನಂತೆ ಕಾಣುತ್ತವೆ. ಮತ್ತೇನಾದ್ರೂ ಬೇಕೆನಣ್ಣಾ ಎನ್ನುವ ಅವರ ಮಾತಿನಲ್ಲಿರುವ ಉತ್ಸಾಹ, ಕೆಲಸ ಮಾಡುವಾಗಿನ ಅವರ ಜೀವನೋತ್ಸಾಹ ನಿಮಗೂ ಜೀವನ ಪಾಠ ಕಲಿಸಿಕೊಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.