ADVERTISEMENT

ಭಟ್ಟಿಯಲ್ಲಿ ಬೇಯುವ ಬಳೆಗಾರರ ಬದುಕು

ಇಮಾಮ್‌ಹುಸೇನ್‌ ಗೂಡುನವರ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
<div class="paragraphs"><p>ಬಳೆ ತಯಾರಿಕೆಗೆ ಆಣ ಮಾಡಲು ಒಲೆಯೊಳಗೆ ಬಳೆಚೂರು ಹಾಕುತ್ತಿರುವುದು &nbsp; ಚಿತ್ರಗಳು: ಇಮಾಮ್‌ಹುಸೇನ್‌ ಗೂಡುನವರ, ದೀಪಕ ಹಳದಿ </p></div>

ಬಳೆ ತಯಾರಿಕೆಗೆ ಆಣ ಮಾಡಲು ಒಲೆಯೊಳಗೆ ಬಳೆಚೂರು ಹಾಕುತ್ತಿರುವುದು   ಚಿತ್ರಗಳು: ಇಮಾಮ್‌ಹುಸೇನ್‌ ಗೂಡುನವರ, ದೀಪಕ ಹಳದಿ

   
ಮಹಿಳೆಯರ ಕೈಗಳಿಗೆ ಅಂದ ತಂದುಕೊಡುವ ಹಸಿರು ಗಾಜಿನ ಬಳೆಗಳನ್ನು ತಯಾರಿಸುವ ಬಳೆಗಾರರ ಬದುಕು ಮಾತ್ರ ಅಂದಗೆಟ್ಟಿದೆ. ಬಳೆ ಭಟ್ಟಿಯ ಕುಲುಮೆಯಲ್ಲಿ ಬೇಯುತ್ತಿರುವ ಬಳೆಗಾರರ ಬದುಕಿಗೆ ಸರ್ಕಾರ ತಂಪನೆರೆಯಬಹುದು ಎನ್ನುವ ನಿರೀಕ್ಷೆ...

ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇತ್ತು. ನಾವು ಬೆಳಗಾವಿಯಿಂದ ನೆನೆಯುತ್ತಲೇ ಮುರಗೋಡಕ್ಕೆ ತಲುಪಿ, ಬಳೆ ತಯಾರಿಕಾ ಭಟ್ಟಿಯೊಳಗೆ ಕಾಲಿಟ್ಟೆವು. ಒಂದೈದು ನಿಮಿಷಗಳಲ್ಲಿ ಬಟ್ಟೆ ಒಣಗಿ ಮೈ ಬೆಚ್ಚಗಾಯಿತು. ಸ್ವಲ್ಪ ಹೊತ್ತಿನಲ್ಲೇ ಬೆಂಕಿಯ ಝಳಕ್ಕೆ ಕಣ್ಣುಗಳು ಉರಿಯಲಾರಂಭಿಸಿದವು. ಅಲ್ಲಿ ಬಹಳ ಹೊತ್ತು ನಿಲ್ಲಲಾಗದಂಥ ಅನುಭವ. ಆದರೆ, ಇಂಥ ಭಟ್ಟಿಗಳಲ್ಲೇ ಹಲವು ದಶಕಗಳಿಂದ ದುಡಿಯುತ್ತ, ನಿತ್ಯ ಬೆವರು ಹರಿಸುತ್ತ ‘ಅನ್ನ’ದ ದಾರಿ ಕಂಡುಕೊಂಡ ನೂರಾರು ಕುಟುಂಬಗಳಿವೆ. ಒಂದೆಡೆ ಕಾರ್ಮಿಕರು ಮತ್ತು ಮಾರುಕಟ್ಟೆ ಕೊರತೆ, ಇನ್ನೊಂದೆಡೆ ಬೆಂಕಿಯ ಝಳಕ್ಕೆ ಆರೋಗ್ಯ ಸಮಸ್ಯೆ–ಹೀಗೆ ಸಾಲು ಸಾಲು ಸಮಸ್ಯೆ ಸವಾಲುಗಳಿದ್ದರೂ, ಬಳೆಗಾರರು ಕುಲಕಸುಬಿನಿಂದ ಹಿಂದೆ ಸರಿದಿಲ್ಲ.

ಬೇರೆ ಕೆಲಸಗಳತ್ತ ಆಕರ್ಷಿತರಾಗದ ಅವರು ಹಲವು ಸಂಕಷ್ಟಗಳ ನಡುವೆಯೇ ಕಾಯಕದಲ್ಲಿ ಮುನ್ನಡೆದಿದ್ದಾರೆ. ಇಡೀ ದಿನ ಬೆಂಕಿಯ ಝಳದಲ್ಲೇ ಕುಳಿತು ಬಳೆ ತಯಾರಿಸಿದರೂ, ತಮ್ಮ ಬೆವರಿಗೆ ಪ್ರತಿಫಲ ಸಿಗದೇ ಇರುವುದರಿಂದ ಬಳೆಗಾರರ ಬದುಕು ಕುಲುಮೆಯಲ್ಲಿ ಬೆಂದುಹೋಗುತ್ತಿದೆ.

ADVERTISEMENT

ಮೊದಲು ಬಳೆ ಭಟ್ಟಿಗಳು ಕಡಿಮೆ ಇದ್ದವು. ಇದರಲ್ಲಿ ಉತ್ತಮ ಸಂಪಾದನೆ ಇದೆ ಎಂದು ಗೊತ್ತಾದ ಮೇಲೆ ಸಂಖ್ಯೆ ಹೆಚ್ಚಾಯಿತು. ಕಿತ್ತೂರಲ್ಲಿ ಮೊದಲು ಎರಡೇ ಭಟ್ಟಿಗಳಿದ್ದವು, ಈಗ ಆರಕ್ಕೇರಿವೆ. ಹೀಗೆ ಭಟ್ಟಿಗಳು ಹೆಚ್ಚಾಗುತ್ತಲೇ ಬಳೆಗಳ ಉತ್ಪಾದನೆ ಪ್ರಮಾಣವೂ ಅಧಿಕಗೊಳ್ಳುತ್ತಾ ಹೋಯಿತು. ಆದರೆ, ಖರೀದಿಸುವವರೇ ಇಲ್ಲದ್ದರಿಂದ ಕೆಲವೊಮ್ಮೆ ತಿಂಗಳುಗಟ್ಟಲೇ ಬಳೆ ಮನೆಯಲ್ಲೇ ಉಳಿಯುತ್ತವೆ. ‘ಬಳೆ ತಯಾರಿಸುವ ಕೌಶಲ ಹೊಂದಿದ ಕಾರ್ಮಿಕರು ಸಿಗುತ್ತಿಲ್ಲ. ಆದರೂ, ಎಷ್ಟು ದಿನ ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೆ ಮಾಡೋಣವೆಂದು ಮುನ್ನಡೆದಿದ್ದೇವೆ’ ಎಂದು ಚನ್ನಮ್ಮನ ಕಿತ್ತೂರಿನ ಮೆಹಬೂಬ್‌ ಅತ್ತಾರ್‌ ಹೇಳುವಾಗ, ಅವರ ಮುಖದಲ್ಲಿ ಬೇಸರದ ಭಾವ ಎದ್ದುಕಾಣುತ್ತಿತ್ತು.

‘ಹತ್ತಿಪ್ಪತ್ತು ವರ್ಷಗಳ ಹಿಂದಕ್ಕ ತಿರುಗಿನೋಡಿದ್ರ ನಮ್ಮ ಬಳಿಗೆ ಈಗ ಅಷ್ಟೊಂದ ಹೊಳಪ ಇಲ್ಲದಿರಬಹುದ. ಆದ್ರ ಹೊಟ್ಟಿ–ಬಟ್ಟಿಗೇನ ಕೊರತಿ ಇಲ್ಲ. ಎಷ್ಟ ಆದಾಯ ಬರ್ಲಿ. ಆದ್ರ ಬಳಿಸಾಲಿಗೋಳ ನಮ್ಮ ಪಾಲಿಗಿ ದೇವ್ರು’ ಎಂದು ಮತ್ತೊಬ್ಬ ಬಳೆ ತಯಾರಕ ಶೇಖಪ್ಪ ಬಳಿಗಾರ ಹೇಳಿದಾಗ ತಮ್ಮ ಕಾಯಕದ ಬಗೆಗಿರುವ ನಿಷ್ಠೆ ಅನಾವರಣಗೊಂಡಿತು.

ಅಖಂಡ ಬಳೆಗಳು

ಮಾರುಕಟ್ಟೆಗೆ ಫ್ಯಾನ್ಸಿ ಬಳೆಗಳು ಲಗ್ಗೆ ಇಟ್ಟಿವೆ. ಆದರೆ, ಮದುವೆ ಮತ್ತು ಧಾರ್ಮಿಕ ಸಮಾರಂಭಗಳಿಗೆ ಹಸಿರು ಬಳೆಗಳೇ ಬೇಕು. ಯಾವುದೇ ತುಣುಕು (ಜೋಡಣೆ) ಹೊಂದಿರದ ಈ ಅಖಂಡ ಬಳೆಗಳಿಗೆ ಅಲ್ಲಿ ಅಗ್ರಸ್ಥಾನ.

ಬೆಳಗಾವಿ–ಬಾಗಲಕೋಟೆ ಮಾರ್ಗದಲ್ಲಿ ಹಲಕಿ ಕ್ರಾಸ್‌ಗೆ ಹೋಗಿ, ಬಲಕ್ಕೆ ತಿರುಗಿ ಎರಡು ಮೈಲು ದೂರ ಸಾಗಿದರೆ ಒಂದೂರು ಸಿಗುತ್ತದೆ. ಕಡತಗಳಲ್ಲಿ ಇದು ಮುರಗೋಡ. ಆದರೆ, ಜನರೂಢಿಯಲ್ಲಿ ‘ಬಳೆಗಳ ಊರು’! ಇಲ್ಲಿ ಅಖಂಡ ಬಳೆಗಳನ್ನೇ ತಯಾರಿಸುವಂಥ ಒಂದಲ್ಲ, ಎರಡಲ್ಲ... ಹದಿನೈದು ಭಟ್ಟಿಗಳಿವೆ. ನೂರಾರು ಕುಟುಂಬಗಳಿಗೆ ಆದಾಯ ಮೂಲವಾಗಿರುವ ಇವು, ಫ್ಯಾನ್ಸಿ ಬಳೆಗಳ ಅಬ್ಬರದ ಮಧ್ಯೆಯೂ ತಮ್ಮ ಜೀವಂತಿಕೆ ಉಳಿಸಿಕೊಂಡು ಹೊರಟಿವೆ. ಇದಾದ ನಂತರ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಭಟ್ಟಿಗಳಿರುವುದು ಚನ್ನಮ್ಮನ ಕಿತ್ತೂರಿನಲ್ಲಿ. ಇಲ್ಲಷ್ಟೇ ಅಲ್ಲ; ಸವದತ್ತಿ, ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಅರವಟಗಿ, ಕುಂಬಾರಕೊಪ್ಪದಲ್ಲೂ ಹಸಿರು ಬಳೆಗಳು ತಯಾರಾಗುತ್ತವೆ.

ಮೊದಲೆಲ್ಲ ಲಿಂಗಾಯತ ಸಮುದಾಯದವರಷ್ಟೇ ಗಾಜಿನಬಳೆ ತಯಾರಿಸುತ್ತಿದ್ದರು. ಈಗ ಪರಿಶಿಷ್ಟರು, ಮುಸ್ಲಿಮರೂ ಸೇರಿದಂತೆ ಇನ್ನಿತರ ಸಮುದಾಯದವರು ಭಟ್ಟಿ ನಿರ್ಮಿಸಿಕೊಂಡು ಈ ವೃತ್ತಿಯಲ್ಲಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಭಟ್ಟಿಗಳಲ್ಲಿ ದುಡಿಯುವವರಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ.

ಬಳೆ ತಯಾರಾಗೋದು ಹೀಗೆ...

ಬಳೆ ತಯಾರಿಸುವ ಭಟ್ಟಿಗಳಿಗೆ ಸಣ್ಣ ಶೆಡ್‌ಗಳು, ಹೆಂಚಿನ ಮನೆಗಳೇ ಹೆಚ್ಚಾಗಿ ಆಸರೆ. ಇಕ್ಕಟ್ಟಾದ ಜಾಗದಲ್ಲೇ ಚೌಕಾಕಾರದ ಮಣ್ಣಿನಕಟ್ಟೆ ಕಟ್ಟಲಾಗಿರುತ್ತದೆ. ಕಟ್ಟಿಗೆಯನ್ನು ಉರಿಸಿ, ಅದರಲ್ಲೇ ಬೆಂಕಿ ಮಾಡಲಾಗುತ್ತದೆ. ಈ ಕಟ್ಟೆಯಲ್ಲಿ ಆರು ಒಲೆಗಳಿರುತ್ತವೆ (ಕಟ್ಟಿಗೆ ಹಾಕುವುದಕ್ಕಷ್ಟೇ ಪ್ರತ್ಯೇಕ ಒಲೆ ಇರುತ್ತದೆ). ಪ್ರತಿ ಒಲೆಯಲ್ಲಿ ಒಂದೊಂದು ಮಡಿಕೆ ಇಟ್ಟಿರುತ್ತಾರೆ. ಅದರಲ್ಲಿ ಬಳೆ ಚೂರು ಹಾಕಿ ಕರಗಿಸಿ, ಆಣ (ದ್ರವರೂಪ) ಮಾಡಲಾಗುತ್ತದೆ. ವೃತ್ತಾಕಾರದಲ್ಲಿ ಕೂರುವ ಕಾರ್ಮಿಕರು ಕಬ್ಬಿಣದ ಸರಳಿನಿಂದ ಅಳತೆಗೆ ತಕ್ಕಷ್ಟು ಆಣ ಹೊರತೆಗೆದು, ಶಂಖಾಕೃತಿಯ ಸಲಕರಣೆಗೆ ಹಾಕುತ್ತಾರೆ. ಅದನ್ನು ಕೈಯಲ್ಲಿ ತಿರುಗಿಸಿ ಬಳೆ ತಯಾರಿಸಲಾಗುತ್ತದೆ. ಮಕ್ಕಳಿಂದ ಮಹಿಳೆಯರವರೆಗೆ ವಿವಿಧ ಅಳತೆಗಳ ಬಳೆ ಸಿದ್ಧವಾಗುತ್ತವೆ. ಮಾರುಕಟ್ಟೆಯಲ್ಲಿ ಬಳೆಗಳ ದರ ಡಜನ್‌ಗೆ ₹20ರಿಂದ ₹30 ಇದೆ.

‘ನಮ್ಮ ಕಾಯಕಕ್ಕೆ ಒಂದೊಂದು ಸೆಕೆಂಡೂ ಮುಖ್ಯ. ಒಲೆಯಿಂದ ಆಣ ಹೊರತೆಗೆದು, ಶಂಖಾಕೃತಿಯ ಸಲಕರಣೆಗೆ ಹಾಕಿ ಬಳೆ ತಯಾರಿಸುವವರೆಗೆ ಅರೆಕ್ಷಣ ಮೈಮರೆತರೂ ಆಣ ಹಾಳಾಗುತ್ತದೆ. ಕಾರ್ಮಿಕರಿಗೆ ಈ ಚಾಕಚಕ್ಯತೆ ಇದ್ದರಷ್ಟೇ ಈ ಕಾಯಕ ಮಾಡಬಹುದು’ ಎನ್ನುತ್ತಾರೆ ಮೆಹಬೂಬ್‌ ಅತ್ತಾರ್‌.

‘ನಾನು ಬೆಳಿಗ್ಗೆ ಐದಕ್ಕೇ ಎದ್ದು, ಎರಡೂವರೆ ಕ್ವಿಂಟಲ್‌ ಕಟ್ಟಿಗೆಯಲ್ಲಿ ಬೆಂಕಿ ಮಾಡಲು ಆರಂಭಿಸುತ್ತೇನೆ. ಮೂರ್ನಾಲ್ಕು ತಾಸಿನ ನಂತರ ಕಾರ್ಮಿಕರು ಬರತೊಡಗುತ್ತಾರೆ. ಭಟ್ಟಿಯೊಳಗೆ ಇಡೀ ದಿನ ಹೊಗೆಯಾಡುತ್ತದೆ. ಬೆಂಕಿಯ ಝಳದಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. 15 ರಿಂದ 20 ವರ್ಷ ದುಡಿದವರು ವಿವಿಧ ಕಾಯಿಲೆಗಳಿಗೆ ತುತ್ತಾಗುವುದುಂಟು’ ಎನ್ನುತ್ತ ಮುರಗೋಡದ ರಮೇಶ ಕಾಜಗಾರ ಬೆವರು ಒರೆಸಿಕೊಂಡು, ಮತ್ತೆ ಒಲೆಯೊಳಗೆ ಬಳೆಚೂರು ಹಾಕಲು ತೊಡಗಿದರು.

ಬಳೆ ತಯಾರಿಕೆಗೆ ಕಚ್ಚಾ ಸಾಮಗ್ರಿ ಬಳೆ ಚೂರು. ಮಹಾರಾಷ್ಟ್ರದ ಮೀರಜ್, ಪುಣೆ, ಸತಾರಾ, ಕರಾಡದಿಂದ ಇದನ್ನು ತರಿಸಲಾಗುತ್ತದೆ. ಪ್ರತಿ ಕ್ವಿಂಟಲ್‌ ಬಳೆಚೂರಿನ ದರ ₹220. ಇದರಲ್ಲಿ 280 ರಿಂದ 300 ಬಳೆ ತಯಾರಾಗುತ್ತವೆ. ಇಲ್ಲಿ ತಯಾರಾಗುವ ಬಳೆಗಳನ್ನು ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ, ಮತ್ತಿತರ ನಗರಗಳು ಹಾಗೂ ಮಹಾರಾಷ್ಟ್ರದ ವಿವಿಧ ಕಡೆಗೆ ಮಾರಾಟ ಮಾಡಲಾಗುತ್ತದೆ. ಹಸಿರು ಬಳೆಗಳ ಖರೀದಿಗಾಗಿಯೇ ನಿರ್ದಿಷ್ಟ ಗ್ರಾಹಕರಿದ್ದಾರೆ. ‘ನಮ್ಮ ವೃತ್ತಿಗೆ ಗುಡಿ ಕೈಗಾರಿಕೆ ಎನ್ನುತ್ತಾರೆ. ಆದರೆ, ಬಳೆ ತಯಾರಿಕೆಗೆಂದೇ ಸರ್ಕಾರದಿಂದ ವಿಶೇಷ ಸೌಲಭ್ಯ ಸಿಕ್ಕಿಲ್ಲ. ಅಧಿಕಾರಿಗಳು ವಿವಿಧ ದಾಖಲೆ ಕೇಳುತ್ತಾರೆ. ನಾವೆಲ್ಲ ಹೆಚ್ಚು ಓದಿದವರಲ್ಲ. ಅವುಗಳನ್ನೆಲ್ಲ ಎಲ್ಲಿಂದ ನಿರ್ವಹಿಸೋಣ. ಹಾಗಾಗಿ ಸರ್ಕಾರಿ ಸೌಲಭ್ಯವೂ ಬೇಡ. ಅಧಿಕಾರಿಗಳು ನಮ್ಮ ಸಮೀಪ ಬರುವುದೇ ಬೇಡವೆಂದು ನಮ್ಮ ಪಾಡಿಗೆ ದುಡಿಯುತ್ತ ಹೊರಟಿದ್ದೇವೆ’ ಎನ್ನುತ್ತಾರೆ ರಮೇಶ ಕಾಜಗಾರ.

ಪ್ರತಿ ಭಟ್ಟಿಯಲ್ಲಿ ಸರಾಸರಿ ಹದಿಮೂರು ಮಂದಿ ದುಡಿಯುತ್ತಾರೆ. ಆರು ಒಲೆಗಳಲ್ಲಿ ತಲಾ ಇಬ್ಬರಂತೆ ಹನ್ನೆರಡು ಮಂದಿ ಕೆಲಸ ಮಾಡುತ್ತಾರೆ. ಒಬ್ಬರು ಹೆಚ್ಚುವರಿ ಕಾರ್ಮಿಕ. ಬೆಳಿಗ್ಗೆ ಬಂದರೆ ಸಂಜೆಯವರೆಗೆ ಎಂಟು ತಾಸು ಬಿಡುವಿಲ್ಲದ ಕೆಲಸ. ಪ್ರತಿ ಜೋಡಿ (ಇಬ್ಬರು) ಮೂರು ಸಾವಿರ ಬಳೆ ತಯಾರಿಸುತ್ತಾರೆ. ಒಂದು ಭಟ್ಟಿಯಲ್ಲಿ ದಿನಕ್ಕೆ ಹದಿನೆಂಟು ಸಾವಿರ ಬಳೆ ಸಿದ್ಧವಾಗುತ್ತವೆ. ಬಳೆ ತಯಾರಿಸುವ ಜೋಡಿಗೆ ದಿನಕ್ಕೆ ₹1 ಸಾವಿರ ಕೂಲಿ. ಬಹುತೇಕರು ಹೆಚ್ಚು ಓದಿದವರಲ್ಲ. ಮುರಗೋಡದ ಬಟ್ಟಿಗಳಲ್ಲಂತೂ ಎರಡ್ಮೂರು ದಶಕಗಳಿಂದ ವೃತ್ತಿ ಬದುಕು ಸವೆಸಿದವರೂ ಇದ್ದಾರೆ.

‘ಈ ಭಟ್ಟಿಯೊಳಗ ಭಾಳ್‌ ಬೆಂಕಿಯ ಝಳಾ ಆಗ್ತೇತಿ ಅನ್ನೋದೇನೋ ನಿಜಾ. ಆದ್ರ ಹೊಟ್ಟಿ ನಮ್‌ ಮಾತ ಕೇಳಬೇಕಲ್ರಿ. ಕಷ್ಟ–ನಷ್ಟ ಏನಿದ್ರೂ ಇದ್ದೂರಾಗನ್‌ ಇದ ಕೆಲ್ಸ ಮಾಡ್ಕೊಂತ ಹೊಂಟೇವ್ರಿ. ಇಲ್ಲಿನ ಕೂಳಿಯೊಳಗ ಬಾಳಿನ ಬಂಡಿ ದೂಡಾತೇವ್ರಿ’ ಎಂದು ಮುರಗೋಡದ ಕಾರ್ಮಿಕ ಕಾಶೀಮ್‌ ಪೆಂಡಾರಿ ಹೇಳುತ್ತಾರೆ.

ಫಿರೋಜಾಬಾದ್‌ನ ಫ್ಯಾನ್ಸಿ ಬಳೆಗಳು

ಈಗ ರಾಜ್ಯದಲ್ಲಿ ಫಿರೋಜಾಬಾದ್‌ನ ಫ್ಯಾನ್ಸಿ ಬಳೆಗಳದ್ದೇ ದರ್ಬಾರು. ದೆಹಲಿಯಿಂದ 250 ಕಿ.ಮೀ ದೂರದಲ್ಲಿರುವ ಈ ಊರಲ್ಲಿ ವೈವಿಧ್ಯಮಯ ವಿನ್ಯಾಸಗಳ ಬಳೆ ತಯಾರಾಗುತ್ತವೆ. ಬಹುತೇಕ ಮಾರುಕಟ್ಟೆಯನ್ನು ಅವು ಆಕ್ರಮಿಸಿಕೊಂಡಿವೆ. ರಾಜ್ಯದಲ್ಲಿ ತಯಾರಿಸುವ ಹಸಿರು ಗಾಜಿನ ಬಳೆಗಳಿಗೆ ‘ಬ್ರ್ಯಾಂಡಿಂಗ್‌’ ಇಲ್ಲದೇ ಸೊರಗಿದೆ.

ಮಾರುಕಟ್ಟೆ ಕೊರತೆ, ಕಾರ್ಮಿಕರ ಅಭಾವ, ಹಣಕಾಸಿನ ಸಂಕಷ್ಟ, ಆರೋಗ್ಯ ಸಮಸ್ಯೆ–ಹೀಗೆ ಅನೇಕ ಸವಾಲುಗಳ ಮಧ್ಯೆ ಕೆಲವರು ಈ ಕಸುಬಿಗೆ ಇತಿಶ್ರೀ ಹಾಡಿದ್ದಾರೆ. ಕೆಲವರಷ್ಟೇ ಹೆಂಗಳೆಯರ ಕೈಗಳ ಅಂದ ಹೆಚ್ಚಿಸುವ ಬಳೆ ಸಿದ್ಧಪಡಿಸುತ್ತ, ತಮ್ಮ ಬದುಕನ್ನೂ ಸಿಂಗರಿಸಿಕೊಳ್ಳಲು ಹೆಣಗುತ್ತಿದ್ದಾರೆ.

ಉಳವಿ ಜಾತ್ರೇಲಿ ಮುರಗೋಡ ಬಳೆಗಳದ್ದೇ ‘ಸದ್ದು’

ಉತ್ತರ ಕನ್ನಡ ಜಿಲ್ಲೆಯ ಉಳವಿಯಲ್ಲಿ ಪ್ರತಿವರ್ಷ ಫೆಬ್ರುವರಿಯಲ್ಲಿ ಚನ್ನಬಸವೇಶ್ವರರ ಬೃಹತ್‌ ಜಾತ್ರೆ ನಡೆಯುತ್ತದೆ. ಹದಿನೈದು ದಿನಗಳ ಜಾತ್ರೆಯಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಇಲ್ಲಿಗೆ ಬಂದವರಲ್ಲಿ ಹೆಚ್ಚಿನ ಮಹಿಳೆಯರು ಬಳೆ ಖರೀದಿಸುತ್ತಾರೆ. ಈ ಜಾತ್ರೆಯ ತುಂಬೆಲ್ಲ ಅಂಗಡಿಗಳನ್ನು ತೆರೆದು, ಭಕ್ತರಿಗೆಲ್ಲ ಬಳೆಗಳನ್ನು ತೊಡಿಸುವವರು ಮುರಗೋಡದ ಬಳೆಗಾರರೇ ಎಂಬುದು ವಿಶೇಷ.

‘₹30 ಲಕ್ಷ ವಹಿವಾಟು’

‘ನಾವು ವರ್ಷಕ್ಕೆ ₹30 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುತ್ತೇವೆ. ಕಾರ್ಮಿಕರ ವೇತನ, ಕಚ್ಚಾ ಸಾಮಗ್ರಿ, ಕಟ್ಟಿಗೆ ವೆಚ್ಚವನ್ನೆಲ್ಲ ತೆಗೆದು, ಒಂದಿಷ್ಟು ಆದಾಯ ಕೈಗೆಟುಕುತ್ತದೆ. ಬೇರೆಯವರ ಬಳಿ ದುಡಿಯಲು ಹೋಗುವುದು ಬೇಡವೆಂದು ನಾವೇ ಸ್ವಯಂ ಉದ್ಯೋಗ ಮಾಡುತ್ತಿದ್ದೇವೆ’ ಎನ್ನುತ್ತಾರೆ ಮೆಹಬೂಬ್‌ ಅತ್ತಾರ.

ಉಳವಿ ಜಾತ್ರೇಲಿ ಮುರಗೋಡ ಬಳೆಗಳದ್ದೇ ‘ಸದ್ದು’

ಉತ್ತರ ಕನ್ನಡ ಜಿಲ್ಲೆಯ ಉಳವಿಯಲ್ಲಿ ಪ್ರತಿವರ್ಷ ಫೆಬ್ರುವರಿಯಲ್ಲಿ ಚನ್ನಬಸವೇಶ್ವರರ ಬೃಹತ್‌ ಜಾತ್ರೆ ನಡೆಯುತ್ತದೆ. ಹದಿನೈದು ದಿನಗಳ ಜಾತ್ರೆಯಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಇಲ್ಲಿಗೆ ಬಂದವರಲ್ಲಿ ಹೆಚ್ಚಿನ ಮಹಿಳೆಯರು ಬಳೆ ಖರೀದಿಸುತ್ತಾರೆ. ಈ ಜಾತ್ರೆಯ ತುಂಬೆಲ್ಲ ಅಂಗಡಿಗಳನ್ನು ತೆರೆದು ಭಕ್ತರಿಗೆಲ್ಲ ಬಳೆಗಳನ್ನು ತೊಡಿಸುವವರು ಮುರಗೋಡದ ಬಳೆಗಾರರೇ ಎಂಬುದು ವಿಶೇಷ.

ಚನ್ನಮ್ಮನ ಕಿತ್ತೂರಿನ ಭಟ್ಟಿಯಲ್ಲಿ ತಯಾರಾದ ಹಸಿರು ಬಳೆಗಳನ್ನು ಜೋಡಿಸಿಡುತ್ತಿರುವುದು
ಬೆಂಕಿಯಲ್ಲಿ ಕಾದ ಗಾಜು ಬಳೆಯ ರೂಪ ಪಡೆಯುತ್ತಿರುವುದು
ಚನ್ನಮ್ಮನ ಕಿತ್ತೂರಿನ ಭಟ್ಟಿಯಲ್ಲಿ ಬಳೆ ತಯಾರಿಸುತ್ತಿರುವ ಕಾರ್ಮಿಕ ವರ್ಗ
ಚನ್ನಮ್ಮನ ಕಿತ್ತೂರಿನಲ್ಲಿರುವ ಬಳೆಗಳ ತಯಾರಿಕೆ ಭಟ್ಟಿ
ಚನ್ನಮ್ಮನ ಕಿತ್ತೂರಿನ ಭಟ್ಟಿ ತಯಾರಾಗುತ್ತಿರುವ ಬಳೆ
ಕಿತ್ತೂರಿನ ಭಟ್ಟಿಯಲ್ಲಿ ತಯಾರಾಗುತ್ತಿರುವ ಬಳೆ
ಮುರಗೋಡದ ಭಟ್ಟಿಯಲ್ಲಿ ತಯಾರಾಗುತ್ತಿರುವ ಹಸಿರು ಗಾಜಿನ ಬಳೆ
ಬಳೆಚೂರಿನ ರಾಶಿ
ಮುರಗೋಡದಲ್ಲಿ ತಯಾರಾದ ಬಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.