ADVERTISEMENT

ಜಿಪ್ಸಿಗಳ ಮಹಾವಲಸೆ

ಕನಕರಾಜ್ ಆರನಕಟ್ಟೆ
Published 27 ಜೂನ್ 2020, 19:30 IST
Last Updated 27 ಜೂನ್ 2020, 19:30 IST
ಜಿಪ್ಸಿ ಕುಟುಂಬದ ಕಲಾಕೃತಿ
ಜಿಪ್ಸಿ ಕುಟುಂಬದ ಕಲಾಕೃತಿ   
""
""
""
""

ಸಾವಿರ ವರ್ಷಗಳ ಹಿಂದೆ,ಇಂದಿನ ರಾಜಸ್ಥಾನದಿಂದ ಹೊರಟು ಕಾಲ್ನಡಿಗೆಯಲ್ಲೇ ಪ್ರಪಂಚದೆಲ್ಲೆಡೆ ಅಲೆದು, ಜನಾಂಗೀಯ ದ್ವೇಷದಲ್ಲಿ ಸುಟ್ಟು ಕರಕಲಾಗಿ ಹೇಗೋ ಬದುಕುಳಿದಿರುವ ಅಲೆಮಾರಿಗಳ ದುರಂತ ಕಥನವಿದು!

ಮನುಷ್ಯ ಜಗತ್ತಿನ ದುರಂತ ಕಥೆಗಳಲ್ಲಿ ಎಂದೂ ಅಳಿಯದ ಗುರುತನ್ನು ಪ್ರಪಂಚದೆಲ್ಲೆಡೆ ಸೃಷ್ಟಿಸುತ್ತಿರುವ ಕೊರೊನಾ, ಭಾರತದ ಮಟ್ಟಿಗೆ ಮತ್ತೊಂದು ದುರಂತವನ್ನು ಬರೆದು ಇತಿಹಾಸಕ್ಕೆ ರಕ್ತದ ಕಲೆಯ ಅಂಟಿಸಿದೆ. ಸಾವಿರಾರು ವಲಸೆ ಕಾರ್ಮಿಕರ ಬದುಕು ‘ಬೀದಿಗೆ ಬಿದ್ದು’ ನರಳತೊಡಗಿದ್ದನ್ನು ಕೆಲವರು ಭಾರತದ ವಿಭಜನೆಯ ಸಂದರ್ಭದ ನಡೆಗೆ ಹೋಲಿಸಿದ್ದಾರೆ. ಇಂತಹ ‘ಮಹಾ ದುರಂತ ನಡಿಗೆ’ ಈ ಮಣ್ಣಿನ ಇತಿಹಾಸದಲ್ಲಿ ಆಗಾಗ ಸಂಭವಿಸುತ್ತಲೇ ಇದೆ. ಮಧ್ಯೆ ಏಷ್ಯಾದಿಂದ ಇಲ್ಲಿಗೆ ವಲಸೆ ಬಂದ ಆರ್ಯನ್ನರು, ಅವರ ದಾಳಿಯಿಂದ ತಪ್ಪಿಸಿಕೊಂಡು ದಕ್ಷಿಣಕ್ಕೆ ಜರುಗಿದ ದ್ರಾವಿಡರು– ಹೀಗೆ ಇಲ್ಲಿಯ ಇತಿಹಾಸ ಶುರುವಾಗುವುದು ನಡಿಗೆಯಿಂದಲೇ! ಈ ಆರ್ಯ-ದ್ರಾವಿಡ ನಡಿಗೆಯ ಕುರಿತು ಕೆಲವರಿಗೆ ಭಿನ್ನಾಭಿಪ್ರಾಯಗಳಿದ್ದರೂ ಜಗತ್ತಿನ ಖ್ಯಾತ ಭಾಷಾ ಶಾಸ್ತ್ರಜ್ಞರು ಆರ್ಯ ವಲಸೆಯ ಕುರಿತು ಖಚಿತವಾದ ಪುರಾವೆಗಳನ್ನು ನೀಡುವುದು ಎಲ್ಲರಿಗೂ ತಿಳಿದ ವಿಷಯವೇ.

ಇತಿಹಾಸದ ನಿಖರ ದಾಖಲೆಗಳು ಲಭ್ಯವಿಲ್ಲದಾಗ ಡಿಎನ್ಎ ಮತ್ತು ಭಾಷೆಗಳ ಚುಂಗು ಹಿಡಿದು ಮಾನವಶಾಸ್ತ್ರಜ್ಞರು ಹುಡುಕುತ್ತಾರೆ. ಹಾಗೆ ಹುಡುಕಿ ಆರ್ಯ-ದ್ರಾವಿಡ ನಡಿಗೆಯ ಇತಿಹಾಸ ಬಿಡಿಸಿದ ಹಾಗೆಯೇ ಈ ಮಣ್ಣಿನ ಮತ್ತೊಂದು ಮಹಾ-ನಡಿಗೆಯ ಕುರಿತು ಜಗತ್ತಿನ ಇತಿಹಾಸಜ್ಞರು, ಮಾನವಶಾಸ್ತ್ರಜ್ಞರು ಬಿಡಿಸುತ್ತಿದ್ದಾರೆ. ಶತಮಾನಗಳ ಹಿಂದೆ ಇಲ್ಲಿಂದ ಹೊರ ನಡೆದ, ಲಕ್ಷಾಂತರ ಕಿಲೊಮೀಟರ್ ಕ್ರಮಿಸಿದ ಒಂದು ದೀರ್ಘ ನಡಿಗೆ ಅದು! ಇಂದಿನ ರಾಜಸ್ಥಾನದಿಂದ ಸಾವಿರ ವರ್ಷಗಳ ಹಿಂದೆ ಹೊರಟು ನಡೆನಡೆಯುತ್ತಾ ಪ್ರಪಂಚದೆಲ್ಲೆಡೆ ಅಲೆದು, ಜನಾಂಗೀಯ ದ್ವೇಷದಲ್ಲಿ ಸುಟ್ಟು ಕರಕಲಾಗಿ ಹೇಗೊ ಬದುಕುಳಿದು ಇಂದಿಗೂ ನೆಲೆ ಕಾಣದೆ ಬಸವಳಿಯುತ್ತಿರುವ “ಜಿಪ್ಸಿ” ಎಂಬ ಅಲೆಮಾರೀ ದುರಂತ ನಡಿಗೆಯ ಕಥನವೇ ಅದು! ಈ ಜಿಪ್ಸಿಗಳು ಎಲ್ಲಿಂದ ಹೊರಟು ಹೇಗೆ ಯೂರೋಪ್ ಮತ್ತು ಅಮೆರಿಕಾಗಳನ್ನು ತಲುಪಿದರು ಎನ್ನುವುದು ಶತಮಾನಗಳ ಕಾಲ ಬಿಡಿಸದ ಕಗ್ಗಂಟಾಗಿ ಉಳಿದಿತ್ತು. ಇಪ್ಪತ್ತನೆಯ ಶತಮಾನದಲ್ಲಿ ಅಕಡೆಮಿಕ್ ಸಂಶೋಧನೆಗೊಳಪಟ್ಟು ಕೊನೆಗೆ ಇಂದಿನ ಇಂಡಿಯಾಕ್ಕೆ ಬಂದು ಅದು ನಿಂತಿದೆ.

ADVERTISEMENT

ಭಾರತ ಎಂಬೊಂದು ರಾಷ್ಟ್ರ ನಿರ್ಮಾಣವಾಗುವ ಮುಂಚೆ ಇಂದಿನ ರಾಜಸ್ಥಾನ, ಪಂಜಾಬ್‌ಗಳಿಂದ ಹೊರಟ ಕೆಲ ಜನ ಸಮುದಾಯಗಳು ಪರ್ಶಿಯಾ, ಇರಾನ್ ಮೂಲಕ ಲಕ್ಷಾಂತರ ಕಿ.ಮೀ.ಗಳನ್ನು ನಡೆದೇ ಸಾಗಲು ಕಾರಣಗಳು ಏನಿದ್ದಿರಬಹುದು? ಖಂಡಿತ ಕಾರಣ ಇರಲೇಬೇಕು. ಕೊರೊನಾದಂತಹ ಯಾವುದೋ ಮಹಾರೋಗ ಅಂದು ಇವರನ್ನು ಒಕ್ಕಲೆಬ್ಬಿಸಿರಬಹುದೇ?

ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಫ್ಲೆಮಿಂಗೊ ಡ್ಯಾನ್ಸ್‌

ಮಾನವ ಶಾಸ್ತ್ರಜ್ಞರು ಮತ್ತು ಇತಿಹಾಸಜ್ಞರು ಈ ಕುರಿತು ನಿಖರವಾಗಿ ಏನನ್ನು ಹೇಳಲಾಗದಿದ್ದರೂ ಕೆಲವೊಂದು ವಿಷಯಗಳನ್ನು ಗುರುತಿಸುತ್ತಾರೆ. 2102ರ ಜೆನೆಟಿಕ್ ಶೋಧನೆಗಳಲ್ಲಿ ವ್ಯಕ್ತವಾದಂತೆ ಈ ಮಣ್ಣಿನ “ಅನನ್ಯ” ಗುರುತಾದ ಸಾಮಾಜಿಕ ತಾರತಮ್ಯ, ಜಾತಿ ಶೋಷಣೆಗಳ ಕಾರಣಕ್ಕೆ “ದೋಮಾ” ಎಂಬ ಪರಿಶಿಷ್ಟ ಜಾತಿಯ ಕೆಲ ಪಂಗಡಗಳು ವಲಸೆ ಶುರು ಮಾಡಿದವು ಎನ್ನಲಾಗುತ್ತದೆ. ಇನ್ನು ಕೆಲವು ವಾದಗಳು ಮಹಮದ್ ಘಜ್ನಿಯ ದಾಳಿಯತ್ತ ಬೊಟ್ಟು ಮಾಡುತ್ತವೆ. ಘಜ್ನಿಯ ಸೇನೆಗಳನ್ನು ಓಡಿಸುತ್ತಾ ಹೋಗಿ ದಿಕ್ಕು ತಪ್ಪಿದರು ಎನ್ನುವುದು ಆ ವಾದ. ಅದಕ್ಕೆ ಪ್ರತಿಯಾಗಿ ಇನ್ನೊಂದು ವಾದವಿದೆ. ಪರ್ಶಿಯಾದ ದೊರೆ ಹಿಂದೂಸ್ಥಾನದ ದೊರೆಗಳ ಸಹಾಯದಿಂದ ಇಲ್ಲಿಯ ಸೈನಿಕರನ್ನು ಕರೆಸಿಕೊಂಡಿದ್ದ; ಅಧಿಕಾರದ ಬದಲಾವಣೆಯಾದಾಗ ಸೈನಿಕರನ್ನು ಪರ್ಶಿಯಾದಿಂದ ಓಡಿಸಲಾಯಿತೆಂದೂ, ಅವರಿಗೆ ದಾರಿ ತೋಚದೆ ದಿಕ್ಕಾಪಾಲಾಗಿ ಟರ್ಕಿ ತಲುಪಿ ಯೂರೋಪ್‍ನೊಳಗೆ ಪ್ರವೇಶಿಸಿದರೆಂದೂ ಹೇಳಲಾಗುತ್ತದೆ.

ಗಾರ್ಸಿಯ ಲೋರ್ಕಾ

ಜಿಪ್ಸಿಗಳ ಬದುಕನ್ನು ಬರೆದದ್ದು ಮಾತ್ರವಲ್ಲದೆ, ಅವರನ್ನು ಅತಿಯಾಗಿ ಪ್ರೀತಿಸಿ ಗೌರವಿಸಿದ ಬರಹಗಾರರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವನು ಸ್ಪಾನಿಶ್ ಕವಿ ಗಾರ್ಸಿಯ ಲೋರ್ಕಾ! 1928ರಲ್ಲಿ ಲೋರ್ಕಾ ಬರೆದ ಕವನ ಸಂಕಲನ “ರೊಮಾನ್ಸಿರೊ ಗಿತಾನೊ” ಜಾಗತಿಕ ಸಾಹಿತ್ಯ ವಲಯದಲ್ಲಿ ಹೆಸರು ಪಡೆಯಿತು. ಗಾರ್ಸಿಯ ಲೋರ್ಕಾ ಮನುಜ ಪ್ರೀತಿಗಾಗಿ ಹಂಬಲಿಸಿ ಆ ಕಾರಣಕ್ಕಾಗಿಯೇ ಫ್ಯಾಸಿಸ್ಟರಿಂದ ಹತ್ಯೆಗೊಳಗಾದ.

ಮರೆತುಹೋದ ಮೂಲ

ಹೀಗೆ ಯಾವುದೊ ಒಂದು ವಾದದಂತೆ ಇವರು ಯೂರೋಪ್ ತಲುಪುವುದರೊಳಗೆ ತಮ್ಮ ಮೂಲವನ್ನೇ ಮರೆತುಹೋದರು; ಉಣ್ಣಲು ಅನ್ನವಿಲ್ಲದೆ, ಉಡಲು ಬಟ್ಟೆಯಿಲ್ಲದೆ ಭಿಕಾರಿಗಳಾಗಿ ತಿರುಗಾಡುತ್ತಾ ಯಾವ ದೇಶಗಳಿಗೆ ಹೋದರೂ ಇವರನ್ನು ತಿರಸ್ಕರಿಸಿ, ದಂಡಿಸಿ, ಹಿಂಸಿಸಿ ಓಡಿಸಲಾಯಿತು. ಗಲೀಜು -ಕೊಳಕರು, ಕಳ್ಳ- ಖದೀಮರು ಎಂದು ‘ನಾಮನಿರ್ದೇಶನ’ಗೊಂಡು ನಾಗರಿಕರು ಎನ್ನಿಸಿಕೊಂಡವರಿಂದ ಬಹಿಷ್ಕೃತರಾದರು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ, ಒಂದು ದೇಶದಿಂದ ಮತ್ತೊಂದಕ್ಕೆ ಎಂದು ಮಕ್ಕಳು ಮರಿಗಳ ಎತ್ತಿಕೊಂಡು ಹಿಮದ ದಾರಿಗಳಲ್ಲಿ ನಡುಗುತ್ತಾ, ರೈಲು-ಬಸ್ಸು ನಿಲ್ದಾಣಗಳಲ್ಲಿ ಭಿಕ್ಷೆ ಬೇಡುತ್ತಾ ಮರಗಳ ಮೇಲೆ, ಊರುಗಳ ಆಚೆಹಲವರು ಬದುಕಿದರೆ, ಕೆಲವರು ಸಣ್ಣಪುಟ್ಟ ಕಳ್ಳತನಗಳ ಮಾಡುತ್ತಾ ಬಚ್ಚಿಟ್ಟುಕೊಳ್ಳುತ್ತಿದ್ದರು.

ಜಿಪ್ಸಿ ಕುಟುಂಬ

ಆರಂಭದಲ್ಲಿ ಯೂರೋಪಿಯನ್ನರು ಇವರನ್ನು ಆಫ್ರಿಕಾದಿಂದ ಬಂದವರು ಎಂದೇ ಭಾವಿಸಿದ್ದರು. ಆ ಕಾರಣಕ್ಕೇ ಮೊದಲಿಗೆ ಇವರನ್ನು “ಇಜಿಪ್ಷಿಯನ್” ಎಂದು ಕರೆಯಲಾಗುತ್ತಿತ್ತು (ಇಜಿಪ್ಷಿಯನ್ ಪದದ ಅಪಭ್ರಂಶವೇ ಜಿಪ್ಸಿ). ಸುರಿವ ಹಿಮದೆದುರು, ಉರಿವ ಸೂರ್ಯನೆದುರು ಪತರುಗುಟ್ಟುತ್ತಾ ಊರಿಂದ ಊರಿಗೆ ಓಡುತ್ತಿದ್ದ ಈ ಜನಸಮೂಹವನ್ನು ಪಶ್ಚಿಮದಲ್ಲಿ ರೋಮಾ, ರೊಮಾನಿ, ಸಿಂತಿ, ಜಿಪ್ಸಿ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿತ್ತು. ಯಾವ ದೇಶದವರೆಂದು ಗೊತ್ತಿಲ್ಲದೆ ಉಟ್ಟ ಬಟ್ಟೆಯಲ್ಲೇ ವರ್ಷಾನುಗಟ್ಟಲೆ ತಿರುಗಾಡುತ್ತಾ ರೋಗ ರುಜಿನಗಳ ಜೊತೆ ವಾಸಿಸುತ್ತಿದ್ದ ಇವರನ್ನು, ‘ಮಾನವ ಕುಲದ ಗಟಾರ’ ಎಂದೇ ಬಣ್ಣಿಸುತ್ತಿದ್ದ ಯೂರೋಪಿನ ಬಹುತೇಕ ರಾಜಮನೆತನಗಳು, ಸರ್ಕಾರಗಳು ಶಿಕ್ಷೆಗೊಳಪಡಿಸಿವೆ; ಇಷ್ಟು ಸಾಲದೆಂಬಂತೆ ಯುದ್ಧಗಳ ಸಂದರ್ಭಗಳಲ್ಲಿ ಇವರನ್ನು ಕೊಂದು ಬಿಸಾಡಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವಂತಿಲ್ಲ, ಆಸ್ಪತ್ರೆ ರೆಸ್ಟೋರೆಂಟ್‍ಗಳಿಗೆ ಪ್ರವೇಶವಿಲ್ಲ, ನಾಗರಿಕರು ವಾಸಿಸುವ ಪ್ರದೇಶಗಳಲ್ಲಿ ಅಪ್ಪಿತಪ್ಪಿಯೂ ಕಾಣಿಸಿಕೊಳ್ಳುವಂತಿಲ್ಲ, ಅವರ ಹಾಡು ಕುಣಿತಗಳಿಗೆ ಜಾಗವೇ ಇಲ್ಲ..! ಹೀಗೆ ಹೋದ ಕಡೆಯೆಲ್ಲ ನಿರಂತರವಾಗಿ ತಿರಸ್ಕಾರಕ್ಕೆ ಒಳಗಾದ ಇವರ ಮೇಲಿನ ಹಿಂಸೆ ಹತ್ತೊಂಬತ್ತನೇ ಶತಮಾನದಲ್ಲಿ ಉತ್ತುಂಗಕ್ಕೇರಿ ವಿಕ್ಟೋರಿಯನ್ ಯುಗಧರ್ಮದ ಮೌಲ್ಯದನುಸಾರ ಇವರ ಅಸ್ತಿತ್ವವನ್ನೇ ಅಳಿಸಿ ಹಾಕಲು ಮುಂದಡಿಯಿಟ್ಟಿತು. ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಯಹೂದಿಗಳ ಜೊತೆ ರೋಮಾ/ ಜಿಪ್ಸಿಗಳ ತಲೆಗಳನ್ನೂ ಗಿಲೆಟಿನ್‍ಗಳಲ್ಲಿಟ್ಟು ಫ್ಯಾಸಿಸ್ಟರು ತುಂಡರಿಸಿದರು. ‘ಆರ್ಯ ಕುಲಕ್ಕೆ ಅಂಟಿದ ಶಾಪ’ ಎಂದು ಹಿಟ್ಲರ್ ಇವರನ್ನು ಹುಡುಕಿ ಹುಡುಕಿ ಕೊಂದು ಹಾಕಿಸಿದ. ಇಷ್ಟಕ್ಕೇ ನಿಲ್ಲದೆ ‘ಕಮ್ಯುನಿಸ್ಟ್ ದೊರೆ’ ಸ್ಟಾಲಿನ್ ಕೂಡ ಇವರಿಗೆ ಕಿರುಕುಳ ಕೊಟ್ಟು ಶಿಕ್ಷಿಸಿದ. ಯೂರೋಪಿನಲ್ಲಿ ಸಂಭವಿಸಿದ ಇಂತಹ ವಿಪ್ಲವಗಳಿಗೆ ಹೆದರದ ಕೆಲವರು ಹೃದಯ ಗಟ್ಟಿ ಮಾಡಿಕೊಂಡು ಯೂರೋಪಿಯನ್ ವ್ಯಾಪಾರಿಗಳ ದೊಡ್ಡ ದೊಡ್ಡ ಹಡಗುಗಳಲ್ಲಿ ಅವಿತು ಆಸ್ಟ್ರೇಲಿಯಾಕ್ಕೂ ಉತ್ತರ ಮತ್ತು ದಕ್ಷಿಣ ಅಮೆರಿಕಾಗಳಿಗೂ ಹೋಗಿ ಜೀವ ಉಳಿಸಿಕೊಂಡರು.

ಬದಲಾದ ಭಾಷೆ

ಕುದುರೆಗಳನ್ನು ತಮ್ಮ ಆತ್ಮಸಂಗಾತಿಯಂತೆ ಕಾಣುವ ಇವರು ತಮ್ಮ ಮೂಲಕ್ಕೆ ತಿರುಗಿ ಬಾರದಷ್ಟು ಅಥವಾ ಮೂಲದ ಬಗೆಗೆ ಕಲ್ಪನೆಯೇ ಇಲ್ಲದೆ ಕರಗಿ ಹೋಗಿದ್ದಾರೆ. ತಮ್ಮ ಮೂಲ ಭಾಷೆಯಿಂದ ಬೇರ್ಪಟ್ಟು ತಮ್ಮದೇ ಆದ ಮೂರು ಮುಖ್ಯ ಭಾಷೆಗಳಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿ ಗೊಳಿಸಿಕೊಳ್ಳುತ್ತಾರೆ. ತೊಮರಿ, ಲೊಮರಿನ್ ಮತ್ತು ರೋಮಾ ಎನ್ನುವ ಈ ಭಾಷೆಗಳು ಆಯಾ ಪ್ರದೇಶಗಳ ಪ್ರಭಾವಗಳಿಗೊಳಗಾಗಿ ಬದಲಾಗಿವೆ. ಇವರ ಬದುಕಿನ ಅವಿಭಾಜ್ಯ ಅಂಗವಾಗಿರುವ ಹಾಡು- ಸಂಗೀತಗಳು ಇವರೊಳಗೆ ಬದುಕುವ ಬನಿಯನ್ನು ಉಳಿಸುತ್ತಾ ಮುಂದಿನ ಜನಾಂಗಗಳಿಗೆ ತಮ್ಮ ನಡಿಗೆಯ ನೋವನ್ನು ದಾಟಿಸುತ್ತಿವೆ. ಇವರ “ಫ್ಲೆಮಿಂಗೊ” ನೃತ್ಯ ಪ್ರಕಾರ ಜಗತ್ತಿನ ಸಾಂಸ್ಕೃತಿಕ ರಂಗವನ್ನು ಪ್ರವೇಶಿಸಿ ಖ್ಯಾತಿ ಹೊಂದಿದೆ. ಯೂರೋಪ್ ಮತ್ತು ಅಮೆರಿಕಾಗಳ ಶಾಸ್ತ್ರೀಯ ಸಂಗೀತಗಳ ಎದುರು ಹುಟ್ಟಿಕೊಂಡ ‘ಜನಸಾಮಾನ್ಯರ ಸಂಗೀತ ಕ್ರಾಂತಿ’ಯಲ್ಲಿ ಜಿಪ್ಸಿ– ರೋಮಾ ಸಂಗೀತವೂ ಮುಖ್ಯ ಪಾತ್ರ ವಹಿಸಿದೆ.

ಯೂರೋಪ್, ಅಮೆರಿಕಾಗಳ ಹತ್ತಾರು ಬರಹಗಾರರು ಇವರ ಜೀವನವನ್ನು ಕುರಿತು ಕಥೆ- ಕವನ- ನಾಟಕಗಳನ್ನು ಬರೆದು ಸಿನಿಮಾಗಳನ್ನು ನಿರ್ದೇಶಿಸಿ ಆ ಮುಖೇನ ಹೊಸ ಜ್ಞಾನ ಪರಂಪರೆಯನ್ನು ಪರಿಚಯಿಸಿದರು. ನೊಬೆಲ್ ಪ್ರಶಸ್ತಿ ಪುರಸ್ಕೃತ ಬರಹಗಾರ ಜರ್ಮನಿಯ ಗುಂಥರ್ ಗ್ರಾಸ್‍ನಂತೂ ‘ಜಿಪ್ಸಿಗಳೇ ನಿಜವಾದ ಯುರೋಪಿಯನ್ನರು’ ಎನ್ನುತ್ತಾನೆ. ಜಿಪ್ಸಿ– ರೋಮಾಗಳ ಹಕ್ಕುಗಳ ಹೋರಾಟಕ್ಕೆ ಸಂಘಟಿತ ರೂಪವನ್ನು ನೀಡಿದವನೂ ಆತನೇ!

ಜಿಪ್ಸಿಗಳ ಬದುಕನ್ನು ಬರೆದದ್ದು ಮಾತ್ರವಲ್ಲದೆ, ಅವರನ್ನು ಅತಿಯಾಗಿ ಪ್ರೀತಿಸಿ ಗೌರವಿಸಿದ ಬರಹಗಾರರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವನು ಸ್ಪಾನಿಶ್ ಕವಿ ಗಾರ್ಸಿಯ ಲೋರ್ಕಾ! ಸ್ಪೈನ್‍ನ ಅಂದುಲೂಸಿಯಾ ಪ್ರಾಂತ್ಯದಲ್ಲಿದ್ದ ‘ರೊಮಾನಿ– ಜಿಪ್ಸಿ’ಗಳ ಬದುಕನ್ನು ಆಧರಿಸಿ 1928ರಲ್ಲಿ ಲೋರ್ಕಾ “ರೊಮಾನ್ಸಿರೊ ಗಿತಾನೊ” ಎಂಬ ಹೆಸರಿನಡಿ ಕವನ ಸಂಕಲನವನ್ನು ತಂದು ಜಾಗತಿಕ ಸಾಹಿತ್ಯ ವಲಯದಲ್ಲಿ ಅಳಿಸಲಾಗದಂತಹ ಸ್ಥಾನವನ್ನು ಪಡೆದ. ಜಿಪ್ಸಿಗಳ ಬಗ್ಗೆ ಅಗಾಧ ಪ್ರೀತಿಯನ್ನು ಇಟ್ಟುಕೊಂಡಿದ್ದ ಗಾರ್ಸಿಯ ಲೋರ್ಕಾ ಮನುಜ ಪ್ರೀತಿಗಾಗಿ ಹಂಬಲಿಸಿ ಆ ಕಾರಣಕ್ಕಾಗಿಯೇ ಫ್ಯಾಸಿಸ್ಟರಿಂದ ಹತ್ಯೆಗೊಳಗಾದುದು ದುರಂತ. ಲೋರ್ಕಾನಂತೆಯೇ ಹತ್ತು ಹಲವು ಬರಹಗಾರರು ಜಿಪ್ಸಿಗಳ ಅಲೆಮಾರಿತನವನ್ನು ಅಕ್ಷರಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಸಾಹಿತ್ಯ, ಸಂಗೀತಗಳಲ್ಲಿ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ಜಿಪ್ಸಿಗಳ ಅನನ್ಯ ಲೋಕವನ್ನು ಸೆರೆ ಹಿಡಿಯುವ ಯತ್ನಗಳು ನಡೆದಿವೆ.

ಜಿಪ್ಸಿ ಜೀವನಗಾಥವನ್ನು ಬೆಳ್ಳಿತೆರೆಗಳಲ್ಲಿ ತೋರಿಸಲು ಯತ್ನಿಸಿದ ನಿರ್ದೇಶಕರಲ್ಲಿ ಟೋನಿ ಗಾಟ್ಲಿಫ್, ಎಮಿರ್ ಕುಸ್ತುರಿಕ, ಅಲೆಕ್ಸಾಂಡರ್ ಪೆಟ್ರೊವಿಚ್, ಡೆನಿಸ್ ತನೊವಿಚ್ ಮುಖ್ಯರು. ಇವರಲ್ಲಿ ಟೋನಿ ಗಾಟ್ಲಿಫ್ ಮತ್ತು ಎಮಿರ್ ಕುಸ್ತುರಿಕಾ ‘ತಾವು ಹುಟ್ಟಿದ್ದೇ ಜಿಪ್ಸಿಗಳ ಬದುಕನ್ನು ಸಿನಿಮಾವಾಗಿಸಲು’ ಎಂಬಂತೆ ಬದುಕುತ್ತಿರುವವರು. ಎಮಿರ್ ಕುಸ್ತುರಿಕಾನ “ಟೈಮ್ ಆಫ್ ದಿ ಜಿಪ್ಸೀಸ್” ಜಗತ್ತಿನ ಪ್ರಮುಖ ಚಲನಚಿತ್ರಗಳಲ್ಲೊಂದು. ಜಿಪ್ಸಿ ಕುರಿತಾದ ಸಾಹಿತ್ಯ, ಸಿನಿಮಾಗಳು ಸಿದ್ಧ ಮಾದರೀ ಗ್ರಹಿಕೆಗಳನ್ನು ಒಡೆದು ಜಿಪ್ಸಿಗಳ ನೋವು ನಲಿವುಗಳಿಗೆ ದನಿಯಾದುದು ವೈಚಾರಿಕ ಪ್ರಗತಿಯ ಮುಂದುವರಿಕೆ.

ರೊಮಾನ್ಸಿರೊ ಗಿತಾನೊ ಪುಸ್ತಕದ ಮುಖಪುಟ

ಹೀಗೆ ಮಾನವ ಇತಿಹಾಸದಲ್ಲಿ ನೋವಿನ ಅಧ್ಯಾಯಗಳನ್ನು ಹೊಂದಿರುವ ರೋಮಾ– ಜಿಪ್ಸಿ ಜನಾಂಗಕ್ಕೆ ಜಗತ್ತಿನ ಯಾವುದೇ ಧರ್ಮ ಅಥವಾ ಸಾಮಾಜಿಕ ಹೋರಾಟಗಳಾಗಲೀ, ಕ್ರಾಂತಿಗಳಾಗಲೀ ಸಹಾಯ ಮಾಡಲಿಲ್ಲ; ಶೋಷಣೆಯ ವಿರುದ್ಧದ ಹೋರಾಟಗಳಾದ ಕಮ್ಯುನಿಸ್ಟ್ ಕ್ರಾಂತಿಗಳಾಗಲೀ, ಸ್ತ್ರೀವಾದೀ ಹೋರಾಟಗಳಾಗಲೀ ಅಥವಾ ಕಪ್ಪು ಜನಾಂಗದ ನಿರಂತರ ಹೋರಾಟಗಳಾಗಲೀ ಯಾವುದೂ ಇವರನ್ನು ಸಂಪೂರ್ಣವಾಗಿ ಒಳಗೊಳ್ಳಲಿಲ್ಲ. ಅವರ ನೋವಿನ ಇತಿಹಾಸವೂ ಸರಿಯಾಗಿ ದಾಖಲಾಗಲಿಲ್ಲ. ಆದರೆ ಆ ಸಾಮಾಜಿಕ ಹೋರಾಟಗಳು ಮೂಡಿಸಿದ ಪ್ರಜ್ಞೆಯಿಂದಾಗಿ ಕೆಲವು ಅಮೆರಿಕನ್ನರಲ್ಲಿ, ಯುರೋಪಿಯನ್ನರಲ್ಲಿ ‘ಜಿಪ್ಸಿ ಕಾಳಜಿ’ ಮೆಲ್ಲಗೆ ಚಿಗುರತೊಡಗಿತು. ಅಲ್ಲಿಯ ಮಾನವ ಹಕ್ಕು ಹೋರಾಟಗಾರ ಜೊತೆ ಸಂವೇದನಾಶೀಲ ಜನರು ಸೇರಿ ರೋಮಾ ಹಕ್ಕುಗಳಿಗಾಗಿ ಹೋರಾಡತೊಡಗಿದರು. ‘ನಾಗರಿಕ ಸಮಾಜ’ ಎಂಬ ಪದದ ಅರ್ಥವನ್ನು ಕಾಲಕಾಲಕ್ಕೆ ವಿಮರ್ಶೆಗೊಳಪಡಿಸಿ ಪರಿಷ್ಕರಿಸುವ ಯೂರೋಪ್ ಜಿಪ್ಸಿಗಳ ವಿರುದ್ಧದ ಕಾನೂನುಗಳನ್ನು ಪುನರ್ ಪರಿಶೀಲಿಸಿದವು; ತಮ್ಮ ನಿಲುವನ್ನು ಬದಲಿಸಿ ಹೊಸ ಕಾನೂನುಗಳನ್ನು ಜಾರಿಗೆ ತಂದವು. ಜಿಪ್ಸಿಗಳ ದಣಿವಿಲ್ಲದ ಪಾದಗಳು ಬೇರು ಬಿಟ್ಟು ಹೂವರಳಿಸತೊಡಗಿದವು. ಶಾಲಾ- ಕಾಲೇಜುಗಳನ್ನು ದಾಟಿ “ಮುಖ್ಯ ಧಾರೆ” ಎಂಬ ಸಮೂಹ ಸನ್ನಿಯ ಜೊತೆ ಕೆಲವರು ಒಂದಾದರು. ಇವರ ಬದುಕು- ಸಂಸ್ಕೃತಿಗಳ ಬಗ್ಗೆ ಅಮೆರಿಕಾ ಮತ್ತು ಯೂರೋಪ್‍ಗಳ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಶುರುವಾದವು. ಈ ಸಮೂಹವನ್ನು ಹೆಸರಿಸುವ “ಜಿಪ್ಸಿ” ಎನ್ನುವ ಪದ ಅಮಾನವೀಯವಾದುದರಿಂದ “ರೊಮಾನಿ” ಎಂದು ನಮೂದಿಸಬೇಕೆಂದು ಯೂರೋಪಿಯನ್ ಒಕ್ಕೂಟ ಒಕ್ಕೊರಲ ತೀರ್ಮಾನಕ್ಕೆ ಬಂದಿತು. ಗುಂಥರ್ ಗ್ರಾಸ್ ಹೇಳಿದಂತೆ ಇವರೇ ‘ನಿಜ ಅರ್ಥದ ಯುರೋಪಿಯನ್ನರು’ ಎಂದು ಹಲವು ದೇಶಗಳು ಇವರಿಗೆ ಪೌರತ್ವ ನೀಡಿದವು. ಆದರೂ ಬಹುತೇಕ ಜಿಪ್ಸಿಗಳ ಆರ್ಥಿಕ ಸ್ಥಿತಿಗತಿ ಇನ್ನೂ ಕೆಳ ಮಟ್ಟದಲ್ಲೇ ಇವೆ. ಕಳ್ಳತನ, ಸುಲಿಗೆಗಳ ಕೇಸ್‍ಗಳಲ್ಲಿ ಇವರು ನರಳುವುದು ಇಂದೂ ನಿಂತಿಲ್ಲ– ಎನ್ನುತ್ತವೆ ಇತ್ತೀಚಿನ ವರದಿಗಳು.

ಸಾವಿರ ವರ್ಷಗಳ ಹಿಂದೆ ಹತ್ತು ಹಲವು ಕಾರಣಗಳಿಗಾಗಿ ‘ಭವ್ಯ ಭಾರತದ ಈ ಮಣ್ಣನ್ನು’ ತೊರೆದ ತಳಜಾತಿ ಸಮುದಾಯಗಳು ನಡಿಗೆಯಲ್ಲೇ ಯೂರೋಪ್ ತಲುಪಿ ವ್ಯಗ್ರಗೊಂಡು ನಿಂತಿರುವುದು ಮಾನವ ಕುಲದ ಮಹಾನ್ ದುರಂತ. ಹಸಿದ ಹೊಟ್ಟೆಯ, ಜನಾಂಗೀಯ ಹಿಂಸೆಗೆ ನಲುಗಿದ ಈ ರೊಮಾನಿ ರಕ್ತಸಿಕ್ತ ಚರಿತ್ರೆಗೆ ಭಾರತವೂ ಸೇರಿದಂತೆ ಇಡೀ ವಿಶ್ವ ಜವಾಬ್ದಾರಿ ಹೊರಬೇಕಾಗುತ್ತದೆ! ಯೂರೋಪಿನ ಬೀದಿಗಳಲ್ಲಿ ದಿಕ್ಕಿಲ್ಲದೆ ಅಲೆದಾಡುವ ರೊಮಾನಿಗಳಿಗೂ ನಮ್ಮ ದೇಶದಲ್ಲಿ ಅನಾಥರಾಗಿ ನಿಲ್ಲುವ ಲಕ್ಷಾಂತರ ನಿರ್ಗತಿಕರಿಗೂ ಯಾವುದೇ ವ್ಯತ್ಯಾಸಗಳಿಲ್ಲ!

ಕೊರೊನಾದ ಈ ಕರಾಳ ಹೊತ್ತಲ್ಲಿ ತಮ್ಮ ತಮ್ಮ ಊರುಗಳಿಗೆ ನೂರಾರು ಕಿ.ಮೀ. ನಡೆದೇ ಹೋದ. ಹೋಗುತ್ತಿರುವ ಅಥವಾ ರೈಲು ಬಸ್ಸುಗಳಲ್ಲಿ ನೂಕು ನುಗ್ಗಲಾಗಿ ಹತ್ತುವ ವಲಸೆ ಕಾರ್ಮಿಕರನ್ನು- ದಿನಗೂಲಿ ನೌಕರರನ್ನು, ಅಸಹಾಯಕರಾಗಿ ನಿಂತ ನಿರ್ಗತಿಕರನ್ನು ನೋಡಿ ನಮ್ಮಲ್ಲಿ ಹಲವರು ‘ಇವರುಗಳಿಗೆಲ್ಲ ಬುದ್ಧಿನೇ ಇಲ್ಲ ಕಣ್ರೀ. ರೋಗ ಹಬ್ಬೋದೇ ಇಂತಹ ನೀಚರಿಂದ’ ಎಂದು ಟಿ.ವಿ ನಿರೂಪಕರ ಜೊತೆ ಸೇರಿ ತೀರ್ಪು ಕೊಡುತ್ತಿದ್ದೇವೆ. ಕೂತಲ್ಲೇ ಸರ್ಕಾರಗಳಿಗೆ ಬೇಕಾಬಿಟ್ಟಿ ಸಲಹೆ ನೀಡುತ್ತಿದ್ದೇವೆ. ಹೀಗೆ ದಿನ ನಿತ್ಯ ನಮ್ಮ ನಡುವಿನ ಜಿಪ್ಸಿಗಳಿಗೆ ಮಾತುಗಳಲ್ಲೂ ನಾವು ಹಿಂಸೆ ಕೊಡುತ್ತಿದ್ದೇವೆ. ರೊಮಾನಿಗಳ ಗೋಳು ಇಂದಿಗೂ ಕೊನೆಯಾಗಿಲ್ಲ. ಹಾಗೆ ನೋಡಿದರೆ ಈ ಪ್ರಪಂಚದಲ್ಲಿ ಯಾವ ಬಡವರ ಗೋಳು ತಾನೇ ಮುಗಿದಿದೆ, ಅಲ್ಲವೆ!?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.